Wednesday, 18 December 2019

Kedaarnaath






3.ಕೇದಾರನಾಥ

ಗಂಗೋತ್ರಿಯಿಂದ ಹೊರಟ ನಮ್ಮ ತಂಡ ವೇಗವಾಗಿ ಹಾರ್ಸಿಲ್ ತಲುಪಿತು. ಮುಂದೆ ಸಿಕ್ಕ ಒಂದು ಸುಂದರ ತಾಣದಲ್ಲಿ ಬೆಳಗ್ಗಿನ ನಾಷ್ಟಾ. ಬಿಸಿ ಬಿಸಿ ಪುಳಿಯೋಗರೆ ಕಾಫಿ, ಹೊಟ್ಟೆಗೆ ಇಳಿಸಿಕೊಂಡೆವು. ಹಾರ್ಸಿಲ್ ನಿಂದ ಉತ್ತರ ಕಾಶಿಗೆ.




 ಅಲ್ಲಿಂದ ತೆಹ್ರಿಗೆ ಪಯಣ. ಮಧ್ಯದಲ್ಲಿ ಗಂಗಾನಾನಿ ಎಂಬಲ್ಲಿ ನಿಲ್ಲಿಸಿದೆವು. ಇಲ್ಲಿ ಬಿಸಿನೀರ ಕುಂಡವಿದೆ. ಪರಾಶರ ಮುನಿಯ ದೇವಾಲಯವಿದೆ.
 ಪರಾಶರ ಮುನಿ ಒಮ್ಮೆ ಒಂದು ನದಿಯನ್ನು ದಾಟಬೇಕಾಗಿ ಬಂತು. ಅಲ್ಲಿ ದೋಣಿ ನಡೆಸಲು ಒಬ್ಬ ಮೀನುಗಾರ ಸ್ತ್ರೀ ಇದ್ದಳು. ಅವಳು ದೋಣಿಯಲ್ಲಿ ಮುನಿಯನ್ನು ಕುಳ್ಳಿರಿಸಿ ನದಿಯನ್ನು ದಾಟುವ ಸಮಯದಲ್ಲಿ ಅವಳಲ್ಲಿ ಮೋಹವುಂಟಾಗಿ ಅವರಿಬ್ಬರೂ ಒಂದು ಸೇರಿದರು. ಅವಳ ಹೆಸರು ಸತ್ಯವತಿ. ಮತ್ಸ್ಯಗಂಧಿ ಎಂತಲೂ ಅವಳನ್ನು ಕರೆಯುತಿದ್ದರು. ಅವಳ ಮೈಯಿಂದ ಮೀನಿನ ಕೆಟ್ಟ ವಾಸನೆ ಸೂಸುತಿತ್ತು. ಮುನಿ, ಅವಳ ಕೆಟ್ಟ ವಾಸನೆಯನ್ನು ನಿವಾರಿಸಿ ಅವಳ ದೇಹದಿಂದ ಸುವಾಸನೆ ಸೂಸುವಂತೆ ವರವಿತ್ತನು ಮಾತ್ರವಲ್ಲ ಅವಳಿಗೆ ಮೊದಲಿನ ಕನ್ಯತ್ವವನ್ನೂ ಉಳಿಸಿಕೊಳ್ಳುವಂತೆ ಮಾಡಿದನು ಮತ್ತು ಅಲ್ಲಿಂದ ಹೊರಟು ಹೋದನು. ಸತ್ಯವತಿ ಈಗ ಯೋಜನಗಂಧಿ ಎನಿಸಿಕೊಂಡಳು. ಅವರ ಮಿಲನದ ಫಲವಾಗಿ ಒಬ್ಬ ತೇಜಸ್ವಿಯಾದ ಮಗ ಹುಟ್ಟಿದ. ಅವನಿಗೆ ಕೃಷ್ಣ ದ್ವೆಪಾಯನ ಎಂದು ಹೆಸರಿಟ್ಟರು ಅವನೇ ಮುಂದೆ ಮಹಾಭಾರತ ಬರೆದ ವೇದ ವ್ಯಾಸ ಎಂದು ಹೆಸರುವಾಸಿಯಾದನು. ಸತ್ಯವತಿಯನ್ನು ಕುರುವಂಶದ ಮಹಾರಾಜ ಶಂತನು ವಿವಾಹವಾಗಿ ಇವರಿಗೆ ದೇವವೃತನೆಂಬ ಮಗನು ಜನಿಸಿ ಬೀಷ್ಮ ಎಂದು ಪ್ರಖ್ಯಾತನಾದನು.
 ಇಲ್ಲಿ ಬಿಸಿ ನೀರ ಕುಂಡದಲ್ಲಿ ಸ್ನಾನ ಮಾಡಿದೆವು. ಪಾಪ, ಮಹಿಳೆಯರಿಗೆ ಇದಕ್ಕೆ ಅವಕಾಶವಾಗಲಿಲ್ಲ. ಅವರ ಪ್ರತ್ಯೇಕ ಕುಂಡದಲ್ಲಿ ನೀರು ವಿಪರೀತ ಬಿಸಿಯಾಗಿತ್ತು. ಕಾಲಿಡುವಾಗಲೇ ಸುಡುತಿತ್ತು. ನಿರಾಸೆಯಿಂದ ವಾಪಾಸ್ ಬಂದರು. ನಾವು ಮನದಣಿಯೆ ಆ ಬಿಸಿ ನೀರ ಕೊಳದಲ್ಲಿ ಆನಂದಿಸಿದೆವು. ಬೇರೆ ಯಾರೂ ಅಲ್ಲಿ ಇರಲಿಲ್ಲ. ನಂತರ ಸ್ವಲ್ಪ ಮೇಲೆ ಹೋಗಿ ಪರಾಶರ ಧರ್ಶನ ಪಡೆದೆವು. ದೇಹಕ್ಕೆ ಒಳ್ಳೆಯ ಆರಾಮವಾಯಿತು. ಪ್ರಯಾಣ ಮುಂದುವರಿಸಿ ತೆಹ್ರಿ, ಅಲ್ಲಿಂದ ರುದ್ರಪ್ರಯಾಗ ಸುಮಾರು 88 ಕಿ.ಮಿ. ಸಾಗಿದೆವು. ರುದ್ರಪ್ರಯಾಗದ ರಸ್ತೆ ನಿಜಕ್ಕೂ ರುದ್ರ ರಮಣೀಯವೇ ಸರಿ. ಒಂದು ಬದಿಯಲ್ಲಿ ಮಂದಾಕಿನಿ ನದಿ ಹರಿಯುತ್ತದೆ. ಇನ್ನೊಂದು ಬದಿ ಎತ್ತರವಾದ ಬೆಟ್ಟ.




 ಅಲ್ಲಿ ಬಹಳ ಕಡೆ ಭೂಕುಸಿತ ಆಗುತ್ತಲೇ ಇರುತ್ತದೆ. ಬಂಡೆಗಳು ಉರುಳಿ ರಸ್ತೆಗೆ ಬೀಳುವುದು ಸಾಮಾನ್ಯ. ಹಾಗಾಗಿ ರಸ್ತೆ ಎಲ್ಲಾ ಹಾಳಾಗಿದೆ. ಅದನ್ನು ಸರಿಪಡಿಸಲು ಸದಾ ಅಲ್ಲಿ ಸನ್ನದ್ಧವಾಗಿರುವ ಜೆಸಿಬಿ ಮತ್ತು ಕ್ರೇನ್ ಗಳೂ ಕೆಲಸಗಾರರೂ ಇದ್ದಾರೆ.



ಇಂತಹಾ ಅಪಾಯಕಾರಿ ಜಾಗವನ್ನು ದಾಟಿ ಮುಂದೆ ಹೋದೆವು. ಅಲ್ಲಿ ಅಗಸ್ತ್ಯಮುನಿ ಎಂಬ ಊರು ದಾಟಿ ಕುಂಡ ಎಂಬ ಊರನ್ನು ತಲುಪಿದೆವು. ಕುಂಡದಿಂದ ಸುಮಾರು 100 ಕಿ.ಮಿ. ಪ್ರಯಾಣಿಸಿದರೆ ಗುಪ್ತಕಾಶಿ ಸಿಗುತ್ತದೆ. 





ಇಲ್ಲೆಲ್ಲೂ ನಿಲ್ಲದೆ ನಾವು ಫಾಟಾ ಎಂಬ ಪುಟ್ಟ ಊರಿಗೆ ಬಂದೆವು.
ನಮಗೆ ಬೆಂಗಳೂರಿನಲ್ಲಿ ಹೆಲಿಕೋಪ್ಟರ್ ಬುಕಿಂಗ್ ಅಗಲೇ ಇಲ್ಲ. ಇಲ್ಲಿರುವ ಉತ್ತರಾಖಂಡದ ಟೂರಿಸಂ ಇಲಾಖೆಯಲ್ಲಿ ವಿಚಾರಿಸಿದರೆ ಈಗ ಏನೂ ಹೇಳಲಾಗುವುದಿಲ್ಲ, 10 ದಿನ ಬಿಟ್ಟು ಫೋನ್ ಮಾಡಿ ಎಂದರು. ಹಾಗೆ ಮತ್ತೊಮ್ಮೆ ಕರೆದಾಗ, ನೀವು ನಮ್ಮ ಛಾರ್ ಧಾಮ್ ಯಾತ್ರೆಯಲ್ಲಿ ಬುಕ್ ಮಾಡಿದ್ದರೆ ಮಾತ್ರ ನಾವು ಹೆಲಿಕೋಪ್ಟರ್ ಬುಕ್ ಮಾಡುತ್ತೇವೆ ಎಂದಿದ್ದರು. ಮುಂದೆ ಹರಿದ್ವಾರದಲ್ಲೂ ನಮಗೆ ಅನುಕೂಲವಾಗಿರಲಿಲ್ಲ. ಹಾಗಾಗಿ ನಮಗೆ ಫಾಟಾದಲ್ಲಿ ಸುಮಾರು ಹೆಲಿಕೋಪ್ಟರ್ ಬುಕಿಂಗ್ ಆಪೀಸ್ ಗಳು ಕಂಡವು. ಅವುಗಳಲ್ಲಿ ಪ್ರಯತ್ನ ಮಾಡುವಾ ಎಂತ ಕೆಲವು ಸ್ಥಳಗಳಲ್ಲಿ ಕೇಳಿನೋಡಿದೆವು, ನಿರಾಸೆಯಿಂದ ವಾಪಾಸ್ ಬಂದೆವು. ಮುಂದೆ ಸಾಗುತ್ತಾ ನಮಗೆ ಹಿಮಾಲಯನ್ ಹೆಲಿಕೋಪ್ಟರ್ ಸಂಸ್ಥೆ ಕಂಡು ಅಲ್ಲಿ ನಮ್ಮ ಪ್ರಯತ್ನ ಮಾಡಿದೆವು. ನಮ್ಮ ಅದೃಷ್ಟ ಚೆನ್ನಾಗಿತ್ತು. ಅಲ್ಲಿ ನಮಗೆ ಸರಕಾರೀ ದರದಲ್ಲಿ, ಎಂದರೆ ರೂ. 4880 ಕ್ಕೆ ಟಿಕೆಟ್ ಸಿಕ್ಕಿಯೇಬಿಟ್ಟಿತು. ಉಳಿದೆಡೆಗಳಲ್ಲಿ ರೂ.7500-8000 ದರವಿದೆ. ಆಲ್ಲಿಂದ 4ಕಿ.ಮಿ. ಮುಂದೆ ಹೆಲಿಪ್ಯಾಡ್ ಇದೆ, ಅಲ್ಲಿಗೆ ಹೋಗಿ ಎಂದರು. ನಾವು ಬಹಳ ಸಂಭ್ರಮದಿಂದ ಅಲ್ಲಿಗೆ ತಲುಪಿದೆವು. ಅಲ್ಲಿ ಬಹಳ ಜನ ಸೇರಿದ್ದರು. ನಾವು ಸುಮಾರು ಹೊತ್ತು ಕಾಯಬೇಕಾಗಿತ್ತು. ಕೊನೆಗೂ ನಮ್ಮ ಸರದಿ ಬಂತು. ನಮ್ಮ ಬ್ಯಾಗು ಎಲ್ಲಾ ತೂಕ ಮಾಡಿ, ನಮ್ಮನ್ನೂ ತೂಗಿಸಿ ನೋಡಿದರು. ನಮ್ಮನ್ನು ಇನ್ನೊಂದು ರೂಮಿನಲ್ಲಿ ಕುಳ್ಳಿರಿಸಿದರು. ಅಲ್ಲಿಗೆ ಒಬ್ಬ ಮೇಲಾಫೀಸರ್ ಬಂದು ಎಲ್ಲಾ ಮಾಹಿತಿ, ನಾವು ಅನುಸರಿಸಬೇಕಾದ ನಿಯಮಗಳನ್ನು ಎಲ್ಲಾ ವಿವರಿಸಿದ. ಯಾರೂ ಹೆಲಿಕೋಪ್ಟರ್ ನ ಪೈಲಟ್ ನೊಡನೆ ಮಾತಾಡಬಾರದು, ಹೋಗುವಾಗ ಫೋಟೋ ತೆಗೆಯಬಾರದು, ಪರಸ್ಪರ ಮಾತಾಡಕೂಡದು ಮತ್ತು ಒಬ್ಬರಿಗೆ ನಿಗದಿಯಾದ ಸೀಟ್ ನಲ್ಲೇ ಕೂರಬೇಕು ಇತ್ಯಾದಿ ನಿಭಂದನೆಗಳನ್ನು ಹೇಳಿದರು. 20 ಕಿ.ಮಿ. ಪ್ರಯಾಣಕ್ಕೆ ಬರೇ 7 ನಿಮಿಷ ತೆಗೆದುಕೊಳ್ಳುತ್ತದೆ. ಒಂದು ಕೋಪ್ಟರ್ ನಲ್ಲಿ 6 ಜನ ಮಾತ್ರ ಹತ್ತಿಸುತ್ತಾರೆ.  ನಮ್ಮನ್ನು ಹೆಲಿಪ್ಯಾಡ್ ಗೆ ಕರಕೊಂಡು ಹೋದರು. ಅಲ್ಲಿ ಅಂಚಿನಲ್ಲಿರುವ ಬೆಂಚಿನಲ್ಲಿ ಕುಳ್ಳಿರಲು ಹೇಳಿದರು. ನಾನು ಬಂದು ಕರೆಯುವವರೆಗೆ ಯಾರೂ ಅತ್ತಿತ್ತ ಹೊಗಬಾರದು ಎಂದು ಕಟ್ಟಪ್ಪಣೆ ಮಾಡಿದ. ಆತನ ಹೆಸರು ಗೋಪಾಲ್ ಸಿಂಗ್. ನಮ್ಮ ಹೆಲಿಕೋಪ್ಟರ್ ಬಂತು. ವಿಪರೀತ ಸದ್ದು ಮತ್ತು ಗಾಳಿಯ ರಭಸ. ಅದರಲ್ಲಿ ಬಂದ ಪ್ರಯಾಣಿಕರನ್ನು ಇಳಿಸಿದ ಕೂಡಲೇ ನಮ್ಮನ್ನು ಕರಕೊಂಡು ಗೋಪಾಲ್ ಸಿಂಗ್ ಅದರ ಹತ್ತಿರ ಕೊಂಡು ಹೋದ. ನಮ್ಮ ಬ್ಯಾಗುಗಳನ್ನು ಅದರಲ್ಲಿ ನಿಗದಿತ ಜಾಗದಲ್ಲಿ ತುಂಬಿದರು. ಇನ್ನೇನು ಅದರಲ್ಲಿ ಹತ್ತಬೇಕು ಎಂದಿರುವಾಗ ಅಲ್ಲಿರುವ ಒಬ್ಬನ ಮೊಬೈಲ್ ಗುಣುಗುಣಿಸಿತು. ನಮ್ಮನ್ನು ಏರಲು ಬಿಡಲಿಲ್ಲ. ಮೇಲೆ ಕೇದಾರ್ ನಾಥದಲ್ಲಿ ಕೆಟ್ಟ ಹವೆ, ಮಳೆ ಬರುತ್ತಿದೆ ಎಂದನು. ನಮ್ಮನ್ನು ಅಲ್ಲಿನ ಆಫಿಸರ್ ಕಡೆ ಕಳಿಸಿದರು. ಬ್ಯಾಗ್ ಗಳನ್ನು ವಾಪಾಸು ಕೊಟ್ಟರು. ಪೆಚ್ಚು ಮೋರೆಯಲ್ಲಿ ಹಿಂದೆ ಬಂದೆವು. ನಮ್ಮ ತಂಡದ 6 ಜನ ನಮಗಿಂತ ಮೊದಲೇ ಮೇಲೆ ಹೋಗಿದ್ದರು. ನಾವು 8 ಮಂದಿ ಇಲ್ಲಿ ಬಾಕಿ. ನಿಮ್ಮ ಇವತ್ತಿನ ಟ್ರಿಪ್ ರದ್ದಾಗಿದೆ ಇನ್ನು ನಾಳೆ ಬೆಳಗ್ಗೆ 5.30 ಇಲ್ಲಿಗೆ ಬನ್ನಿ, ನಿಮಗೆ ಪ್ರಥಮ ಅವಕಾಶ ಎಂತ ಸಮಾಧಾನ ಹೇಳಿದ. ಇನ್ನೇನು ಮಾಡುವುದು ಬೇರೆ ದಾರಿಯಿಲ್ಲ. ನಮ್ಮ ವ್ಯವಸ್ಠಾಪಕ ಕುಮಾರ್ ಅವರನ್ನು ಕೇಳಿದೆವು. ನೀವು ಅಲ್ಲೇ ಹತ್ತಿರದಲ್ಲಿ ರೂಮ್ ಮಾಡಿ ಉಳಕೊಳ್ಳಿ, ಬೆಳಿಗ್ಗೆ ಹೋಗಲು ಅನುಕೂಲ ಅಂತ ಹೇಳಿದರು. ಅಂತೆಯೇ ಅಲ್ಲೇ ಸಮೀಪದ ಲಾಡ್ಜ್ ನಲ್ಲಿ ರೂಮ್ ಮಾಡಿದೆವು. ನಮ್ಮ ಗಾಡಿ ಸಹಾ ಅಲ್ಲೇ ನಿಲ್ಲಿಸಿಕೊಂಡೆವು. ರಾತ್ರಿ ಒಳ್ಳೆಯ ಊಟ ಮಾಡಿದೆವು. ಮೇಲೆ ಹೋಗಿದ್ದವರು ಅಲ್ಲಿ ಮಳೆಯಿಂದಾಗಿ ತುಂಬಾ ಚಳಿ ಅನುಭವಿಸಿದರಂತೆ. ನಾವು ಚೆನ್ನಾಗಿ ನಿದ್ರಿಸಿ ಬೆಳಗ್ಗೆ ಎದ್ದು ಬಿಸಿನೀರ ಸ್ನಾನ ಮಾಡಿ ಕ್ಲಪ್ತ ಸಮಯಕ್ಕೆ ಹೆಲಿಪ್ಯಾಡ್ ತಲುಪಿದೆವು. ಅಲ್ಲಿ ಯಾರೂ ಬಂದಿರಲಿಲ್ಲ. ಒಬ್ಬೊಬ್ಬರೇ ಬಂದ ಮೇಲೆ ನಮ್ಮನ್ನು ಕರೆದರು. ನಿನ್ನೆಯದೇ ಪ್ರಕ್ರಿಯೆಗಳು, ತಪಾಸಣೆಯ ಪುನರಾವರ್ತನೆ ನಡೆದು ನಮ್ಮನ್ನು ಹೆಲಿಕೋಪ್ಟರ್ ಹತ್ತಿಸಿದರು, ಸೀಟ್ ಬೆಲ್ಟ್ ಬಿಗಿದರು ಬಾಗಿಲು ಹಾಕಿ ಹೊರಗಿನಿಂದ ಬೀಗ ಜಡಿದರು. ಹಳದಿ ಬಣ್ಣದ ನಮ್ಮ ವಾಹನ ಮೇಲೇರಿತು ಮತ್ತು ಮುಂದಕ್ಕೆ ಹಾರಿತು. ನಾವು ಬಹಳ ಸಂತಸದಿಂದ ಹೊರಗಡೆ ಕಾಣುತ್ತಿರುವ ನೋಟವನ್ನು ಆನಂದಿಸುತಿದ್ದೆವು. ಪರ್ವತದಲ್ಲಿರುವ ದಟ್ಟ ಕಾಡಿನ ಮೇಲೆ ಹಾರುವಾಗ, ಕೆಳಗಿನ ರಸ್ತೆ, ಮನೆಗಳು ಮನುಷ್ಯರು ಎಲ್ಲಾ ಲಿಲಿಪುಟ್ ಗಳಂತೆ ಕಾಣುತಿದ್ದವು. ಅಷ್ಟರಲ್ಲೆ 7 ನಿಮಿಷ ಆಯಿತು, ನಾವು ಕೇದಾರದ ಹೆಲಿಪ್ಯಾಡ್ ನಲ್ಲಿ ಇಳಿದೆವು.





 ಇಲ್ಲಿಂದ ಬರೇ 500 ಮೀಟರ್ ಕೇದಾರನಾಥನ ಸನ್ನಿಧಿಗೆ. ಅಲ್ಲಿ ಸ್ವಲ್ಪ ಉದ್ದವಾದ ಕ್ಯೂ ಇತ್ತು. ನಮ್ಮ ಬ್ಯಾಗುಗಳನ್ನು ಅಲ್ಲೇ ಒಂದು ಅಂಗಡಿಯಲ್ಲಿಟ್ಟು ಅವನಿಂದಲೇ ಪ್ರಸಾಧ ಸಾಮಗ್ರಿಗಳನ್ನು ಕೊಂಡು ಸರದಿಯಲ್ಲಿ ನಿಂತೆವು. ಸುತ್ತಲೂ ಪರ್ವತಗಳು, ಅವುಗಳ ತುದಿಯಲ್ಲಿ ಹಿಮರಾಶಿ. ಆಗತಾನೇ ಸೂರ್ಯೋದಯವಾಗಿದ್ದರಿಂದ ಪರ್ವತದ ಶಿಖರಗಳು ಚಿನ್ನದ ಬಣ್ಣ ತಳೆದಿದ್ದವು. ಸೂರ್ಯ ಮೇಲೇರುತಿದ್ದಂತೆ ಅದು ಬೆಳ್ಳಿಯ ಬಣ್ಣ ಪಡೆಯಿತು.



 ಕೇದಾರ ದೇವಾಲಯ ಮತ್ತು ಪರ್ವತಗಳ ಫೋಟೊ ತೆಗೆಯಲು ಬಹಳ ಅನುಕೂಲವಾಗಿತ್ತು.










 ಅಲ್ಲಿ ನಮಗೆ ಇಬ್ಬರು ಹೆಣ್ಣುಮಕ್ಕಳ ಪರಿಚಯವಾಯಿತು. ಅವರು ದೆಹಲಿಯವರು. ಐಟಿಯಲ್ಲಿ ಕೆಲಸ, ಐದನೇ ಸಲ ಅವರು ಇಲ್ಲಿಗೆ ಬರುತ್ತಿರುವುದಂತೆ.















 ಸಾಲು ಮುಂದುವರಿದಂತೆ ನಾವು ಹತ್ತಿರ ಬಂದೆವು. ನಮ್ಮ ಪಾದರಕ್ಷೆಗಳನ್ನು ಅಲ್ಲೇ ಬಿಟ್ಟು ಒಳಗಡೆ ಹೋದೆವು. ಕೇದಾರನಾಥನ ದರ್ಶನವಾಯಿತು. ಇಲ್ಲಿ ನಾವು ತಂದ ಪ್ರಸಾಧ ಸಾಮಗ್ರಿಗಳನ್ನು ಶಿವನಿಗೆ ಮುಟ್ಟಿಸಿ ವಾಪಾಸು ತರಬೇಕು. ಇಲ್ಲಿ ನಾವು ಬಗ್ಗಿ ಶಿವನಿಗೆ ನಮ್ಮ ಹಣೆಯನ್ನು ಮುಟ್ಟಿಸಿ ನಮಸ್ಕರಿಸಬೇಕು. ಹಾಗೆ ಮಾಡಿದವರಿಗೆ ಮಾತ್ರ ಮುಕ್ತಿ ಪ್ರಾಪ್ತಿಯಂತೆ. ನನಗೆ 3 ಕಡೆಯಿಂದಲೂ ಹಣೆ ಮುಟ್ಟಿಸಲು ಅವಕಾಶ ಸಿಕ್ಕಿತು. ಆದ್ದರಿಂದ ನನಗೆ ಮುಕ್ತಿ ಗ್ಯಾರಂಟಿಯೆಂದು ತೃಪ್ತಿ ಪಟ್ಟುಕೊಂಡೆ. ಇಲ್ಲಿ ಪ್ರತ್ಯೇಕ ಶಿವಲಿಂಗವಿಲ್ಲ. ಇಲ್ಲಿರುವುದು ದ್ವಾದಶ ಜ್ಯೋತಿರ್ ಲಿಂಗ ಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಕರಿಯ ಬಂಡೆ ಶಿವನ ಆಕೃತಿ. ಇದಕ್ಕೊಂದು ಸಮಜಾಯಿಶಿ ಇದೆ.
ಮಹಾಭಾರತ ಯುದ್ಧ ಮುಗಿದ ಮೇಲೆ ಪಾಂಡವರಿಗೆ ಬಹಳ ಮನೋವ್ಯಥೆ ಉಂಟಾಯಿತು. ಪಾಪ ಪರಿಹಾರಕ್ಕಾಗಿ ತೀರ್ಥಯಾತ್ರೆ ಕೈಗೊಂಡರು. ಕೊನೆಗೆ ಕೇದಾರಕ್ಕೆ ಬಂದು ಪರಮೇಶ್ವರನ ದರ್ಶನಕ್ಕಾಗಿ ಹೋದರು. ಇವರಿಗೆ ಅಷ್ಟು ಸುಲಭವಾಗಿ ತಾನು ಕಾಣಿಸಿಕೊಳ್ಳಬಾರದು ಎಂದು ಶಿವನು ಅಲ್ಲಿಂದ ಓಡಿಹೋದನು. ಆದರೆ ಭೀಮನು ಶಿವನನ್ನು ನೋಡಿ ಬಿಟ್ಟಿದ್ದನು. ಅವನು ಶಿವನನ್ನು ಹಿಂಭಾಲಿಸಿದನು. ಆಗ ಶಿವನು ನಂದಿಯ ರೂಪ ತಾಳಿ ಅಲ್ಲೇ ಮೇಯುತಿದ್ದ ಹಸುಗಳ ಮಂದೆಯಲ್ಲಿ ಸೇರಿಕೊಂಡನು. ಇದನ್ನು ನೋಡಿದ ಭೀಮನು ಅದರ ಹಿಂದೆಯೇ ಓಡಿದನು. ಆಗ ಶಿವನು ಭೂಮಿಯೊಳಗೆ ಅಡಗಿಕೊಳ್ಳಲು ನೋಡಿದನು. ಅಲ್ಲಿಗೂ ಭೀಮನು ಬಿಡದೆ ಅದರ ಬಾಲವನ್ನು ಬಲವಾಗಿ ಎಳೆದು ಶಿವನನ್ನು ಮಾಯವಾಗಲು ಬಿಡಲಿಲ್ಲ. ಶಿವನು ಸುಪ್ರೀತನಾಗಿ ಇವರೆದುರು ಪ್ರಕಟಗೊಂಡನು. ಈಗಲೂ ಎತ್ತಿನ ಬೆನ್ನಿನ ಆಕಾರದಲ್ಲಿ ಕೇದಾರನಾಥನು ನಮಗೆ ಕಾಣಿಸುತ್ತಾನೆ. ಒಳಗಡೆ ಪಾಂಡವರ ಮೂರ್ತಿಗಳಿವೆ.



ಹೊರಗಡೆ ಬಂದು ಒಂದು ಸುತ್ತು ಹಾಕಿದೆವು. ಅಲ್ಲೇ ಹಿಂದುಗಡೆ ದೊಡ್ಡದೊಂದು ಬಂಡೆ ಇದೆ. ಇದಕ್ಕೆ ಭೀಮನ ಬಂಡೆ ಎಂದು ಕರೆಯುತ್ತಾರೆ. 2013 ನೇ ಇಸವಿಯಲ್ಲಿ ಇಲ್ಲಿ ನಡೆದ ರುದ್ರ ದುರಂತದಲ್ಲಿ ಮೇಘಸ್ಪೋಟಗೊಂಡು ಭೀಕರ ಮಳೆಯ ಕಾರಣ ಗಾಂಧಿ ಸರೊವರವು ತುಂಬಿ ಅಲ್ಲಿಂದ ಪ್ರಳಯೋಪಾದಿಯಲ್ಲಿ ನೀರು ಕೆಳಗೆ ಹರಿದು ಬಂದು ಅಲ್ಲಿದ್ದ ಎಲ್ಲಾ ಕಟ್ಟಡಗಳನ್ನೂ, ಜನರನ್ನೂ ಕೊಚ್ಚಿಕೊಂಡು ಕೆಳಗೆ ಗೌರೀಕುಂಡ ಮಾತ್ರವಲ್ಲ ಬದರೀಯವರೆಗೆ ರಸ್ತೆಯನ್ನೂ, ಮನೆಗಳನ್ನೂ ನಾಶ ಮಾಡಿತ್ತು. ಆದರೆ ಕೇದಾರ ದೇವಾಲಯ ಮಾತ್ರ ಅಛಲವಾಗಿ ನಿಂತಿತ್ತು. ಇದೊಂದು ಪವಾಡವೇ ಸರಿ. ಇದಕ್ಕೆ ಕಾರಣ ಭೀಮ ಬಂಡೆಯಂತೆ.







 ಅದು ಪ್ರವಾಹಕ್ಕೆ ಅಡ್ಡಲಾಗಿ ಇದ್ದುದರಿಂದ ಪ್ರವಾಹವು ಎರಡು ಭಾಗವಾಗಿ ಹರಿಯಿತು, ದೇವಾಲಯಕ್ಕೆ ಯಾವುದೇ ಅಪಾಯ ಆಗಲಿಲ್ಲ. ದೇವಾಲಯದ ಒಳಗಡೆ ಆಶ್ರಯ ಪಡೆದಿದ್ದ ಬಹಳ ಜನ ಜಲಸಮಾಧಿ ಆಗಿ ಶಿವನ ಪಾದ ಸೇರಿದ್ದರು.



ಕೇದಾರವು ಸಮುದ್ರ ಮಟ್ಟದಿಂದ 11800 ಅಡಿ ಎತ್ತರದಲ್ಲಿದೆ. ದೇವಾಲಯವನ್ನು ಪಾಂಡವರು ಕಟ್ಟಿಸಿದ್ದರೆಂದು ಹೇಳುತ್ತಾರೆ. ಆದರೆ ಶಂಕರಾಚಾರ್ಯರು ಕಟ್ಟಿಸಿದ್ದು ಎಂತಲೂ ಹೇಳುತ್ತಾರೆ. ಇಲ್ಲಿ ಶಂಕರಾಚಾರ್ಯರ ಸಮಾಧಿಯೂ ಇದೆ. ಮಿಲಿಟರಿಯ ದೊಡ್ಡ ಅಧಿಕಾರಿಯೊಬ್ಬರು ಬರುವುದಿದ್ದುರಿಂದ ನಮ್ಮನ್ನೆಲ್ಲಾ ಬೇಗ ಬೇಗ ಸಾಗಹಾಕಿದರು.
ನಮ್ಮ ಬೆಳಗ್ಗಿನ ನಾಷ್ಟಾವನ್ನು ಕುಮಾರ್ ಮೇಲಕ್ಕೇ ಕಳಿಸಿದ್ದರಿಂದ ಅದನ್ನು ತಿಂದು ಬೇಗನೇ ಹೆಲಿಪ್ಯಾಡ್ ಗೆ ಹೋದೆವು. ಅಲ್ಲಿ ಸ್ವಲ್ಪ ಹೊತ್ತು ಕಾಯಬೇಕಾಯಿತು. 





ನಮ್ಮ ಸರದಿ ಬಂದಾಗ ಅದರಲ್ಲಿ ಹತ್ತಿ ಫಾಟಾ ತಲುಪಿದೆವು. ನಮ್ಮ ವಾಹನ ಹತ್ತಿ ಉಳಿದವರನ್ನು ಕೂಡಿಕೊಂಡೆವು. ನಮಗೆ ರೂಮ್ ಗಳು ಬುಕ್ ಆಗಿದ್ದವು. ಈದಿನವಿಡೀ ಅಲ್ಲೇ ಉಳಿಯುವುದು ಎಂದು ಕುಮಾರ್ ಹೇಳಿದರು. ಆದ್ದರಿಂದ ನಮ್ಮ ಕೆಲವರು ಹತ್ತಿರದ ದೇವಾಲಯಗಳನ್ನು ನೋಡಲು ಹೋದರು. ನಾನು, ಕಸ್ತೂರಿ, ಮತ್ತು ಮುರಳಿ ಒಂದು ಚಿಕ್ಕ ಹೈಕಿಂಗ್ ಮಾಡಿದೆವು. 3ಕಿ.ಮಿ. ದೂರದ ಜಲಪಾತ ನೋಡಲು ಹೋದೆವು. ಜಲಪಾತವು ಬಹಳ ಸುಂದರವಾಗಿತ್ತು.











 ಅಲ್ಲಿಂದ ವಾಪಾಸು ಬರೋಣವೆಂದರೆ ಬಹಳ ಏರು ದಾರಿ, ನಾನು ದಾರಿಯಲ್ಲಿ ಬರುತಿದ್ದ ಒಂದು ಬೈಕ್ ನಿಲ್ಲಿಸಿದೆ, ಅದರಲ್ಲಿ ಏರಿ ರೂಮ್ ತಲುಪಿದೆ. ಕಸ್ತೂರಿ ಮತ್ತು ಮುರಳಿ ಬೇರೊಂದು ಕಾರ್ ನಲ್ಲಿ ಬಂದರು. ಊಟ ಮಾಡಿ ನಿದ್ರೆ, ಮರುದಿನ ಕಾಫಿ ತಿಂಡಿ ಮುಗಿಸಿ ಅಲ್ಲಿಂದ ಬದರೀನಾಥದ ಕಡೆಗೆ ಸಾಗಿದೆವು. ನಮ್ಮ 3 ಧಾಮಗಳ ಯಾತ್ರೆ ಮುಗಿಯಿತು. ನಾಲ್ಕನೆಯ ಬದರಿಯನ್ನೂ ಮುಗಿಸಿಯೇ ಬಿಡುತ್ತೇವೆ ಎಂಬ ನಂಬಿಕೆ ನಮ್ಮದು.

Monday, 16 December 2019

Badarinaatha



4. ಬದರೀನಾಥ

ಫಾಟಾದಿಂದ ಬೆಳಗ್ಗಿನ ಉಪಾಹಾರ ಮುಗಿಸಿ ಮುಂದಿನ ದಾರಿ ಹಿಡಿದೆವು. 14 ಕಿ.ಮಿ. ದೂರದ ಗುಪ್ತಕಾಶಿ ತಲುಪಿದೆವು. ಅಲ್ಲಿಂದ ಕುಂಡ ಕ್ಕೆ. ಅಲ್ಲಿ ಮುಂದೆ 2 ದಾರಿ ಇದೆ. ನಾವು ಚೋಪ್ಟಾ ಎಂಬ ಹಿಲ್ ಸ್ಟೇಷನ್ ಮಾರ್ಗವನ್ನು ಆಯ್ಕೆ ಮಾಡಿದೆವು. ಬಹಳ ಸುಂದರ ದಾರಿ. ತಿರುವುಗಳೂ ಬಹಳ. ದೃಶ್ಯಗಳೂ ಮನೊಹರ. ಹಿತವಾದ ವಾತಾವರಣ.





 ಸುಮಾರು 35 ಕಿ.ಮಿ ಸಾಗಿದಾಗ ದೊಡ್ಡದೊಂದು ಬೆಟ್ಟದ ತುದಿಯಲ್ಲಿದ್ದೆವು. ಅಲ್ಲಿ ಕೆಲ ಅಂಗಡಿಗಳು ಇದ್ದವು. ಅಲ್ಲಿ ಮೊದಲು ಚಹಾ, ಪಕೋಡಾ ತಿಂದೆವು. ನಂತರ ಅಲ್ಲೆಲ್ಲಾ ಸುತ್ತಾಡಿ ಫೋಟೊ ತೆಗೆದೆವು. ಮಂಜು ಮುಸುಕಿದ ವಾತಾವರಣ ನಮಗೆ ಊಟಿಯ ನೆನಪು ಕೊಟ್ಟಿತು. ಅಲ್ಲಿ ಸುಮಾರು ಅರ್ಧ ಘಂಟೆ ಕಾಲ ಕಳೆದು ಹೊರಟೆವು. ಮುಂದಿನ ದಾರಿ ಬಹಳ ದುರ್ಗಮ ರಸ್ತೆ, ತಲೆ ಎತ್ತಿ ನೋಡಿದರೂ ಕಾಣದಕಡಿದಾದ ಪರ್ವತದ ತುದಿ, ಬಲಕ್ಕೆ ಆಳ ಕಮರಿ. ಕಾಡು ದಟ್ಟವಾಗುತ್ತಾ ಬಂತು.
ಇಲ್ಲಿಂದ ಪಂಚ ಕೇದಾರಗಳಲ್ಲಿ ಒಂದಾದ ತುಂಗನಾಥಕ್ಕೆ ಚಾರಣ ಹೋಗಬಹುದು. ಕೇದಾರನಾಥ ವನ್ಯಜೀವಿ ಧಾಮ ಇಲ್ಲಿಂದ ಪ್ರಾರಂಭ. ಈ ವನ್ಯಧಾಮದ ಒಂದು ಗೇಟ್ ನಮಗೆ ಕಂಡಿತು. ಅಲ್ಲಿ ಗಾಡಿ ನಿಲ್ಲಿಸಿದೆವು. ಆ ಕೂಡಲೇ ಸುಮಾರು ವಿಶೇಷ ಜಾತಿಯ ವಾನರಗಳು ಹಾಜರಾದವು. ಬಿಳಿ ಮತ್ತು ಬೂದು ಬಣ್ಣದ ಮೈಬಣ್ಣ, ಉದ್ದವಾದ ಬಾಲ ಅವಕ್ಕೆ. ಆಕಾರವೂ ಸಾಕಷ್ಟು ದೊಡ್ಡದಿತ್ತು.



ಅವಕ್ಕೆ ನಾವು ಗಾಡಿಯ ಕಿಟಕಿಯಿಂದಲೇ ಸ್ವಲ್ಪ ಹಣ್ಣು, ಬಿಸ್ಕಿಟ್ ಹಾಕಿದೆವು. ಇದನ್ನು ಕಂಡು ಇನ್ನೂ ದೊಡ್ಡ ವಾನರ ಗುಂಪು ಅಲ್ಲಿಗೆ ಬಂದವು. ನಮ್ಮ ತಿಂಡಿ ಎಲ್ಲಾ ಮುಗಿದೇ ಹೋಯಿತು. ಮುಂದೆ ಹೋಗುತ್ತಾ ನರಿಯೊಂದು ಅಡ್ಡಲಾಯಿತು. ನಂತರ ಸಿಕ್ಕಿದ್ದು ಒಂದು ಕಾಡು ಕುರಿ. ಮಲಿಕ್ ನಿಗೆ ಬಾಯಲ್ಲಿ ನೀರೂರಿರಬೇಕು. ಅದರ ಬಗ್ಗೆ ಬಹಳ ವಿವರಿಸಿದ. ಅಲ್ಲಿ ಕರಡಿಗಳೂ ಬಹಳ ಇದೆಯಂತೆ. ನಮಗೆ ಕಾಣಸಿಗಲಿಲ್ಲ.
ಕಾಡಿನ ಮಧ್ಯೆ ಸಾಗುವ ಸುಂದರ ರಸ್ತೆಯಲ್ಲಿ ಹೋಗುತ್ತಾ ನೀರು ಹರಿಯುತ್ತಿರುವ ಝರಿಯ ಸಮೀಪ ಗಾಡಿ ನಿಲ್ಲಿಸಿ ಮಧ್ಯಾಹ್ನದ ಊಟ ಮಾಡಿದೆವು.



 ನಮಗಾಗಿ ಕುಮಾರ್ ಊಟ ಕಟ್ಟಿಕೊಟ್ಟಿದ್ದರು. ಖಾರ ಖಾರ ವಾಗಿರುವ ಪುಲಾವ್ ಮತ್ತು ರಾಯಿತ. ಕ್ಷಣದಲ್ಲಿ ಎಲ್ಲಾ ಮುಗಿಸಿದೆವು. ಅಲ್ಲಿ ಸ್ವಲ್ಪ ವಿರಮಿಸಿ ಮುಂದೆ ಚಮೋಲಿ ಎಂಬ ಊರಿಗೆ ತಲುಪಿದೆವು. ಕುಮಾರ್ ಅವರಿಗೆ ಫೋನ್ ಮಾಡಿ ಮುಂದೆ ಏನು ಮಾದಬೇಕು ಎಂದು ಕೇಳಿದಾಗ ಅಲ್ಲೇ ಶಂಭೋ ಆಶ್ರಮ ಇದೆ. ಅಲ್ಲಿ ಉಳಕೊಳ್ಳಿರಿ, ನಾವು ಸುಮಾರು ದೂರದಲ್ಲಿ ಇದ್ದೇವೆ, ನಾಳೆ ಬೆಳಿಗ್ಗೆ ಅಲ್ಲಿ ನಿಮ್ಮನ್ನು ಸೇರಿಕೊಳ್ಳುತ್ತೇವೆ ಎಂದರು. ಸರಿ ಅವರು ಹೇಳಿದ ಆಶ್ರಮ ನಮಗೆ ಸಿಗದೆ ನಾವು ಸುಮಾರು 10 ಕಿ.ಮಿ ದೂರ ಮುಂದೆ ಬಂದಿದ್ದೆವು. ಅಲ್ಲಿ ಕೆಲವರಲ್ಲಿ ವಿಚಾರಿಸಿದಾಗ ಅಂಥಾ ಆಶ್ರಮ ಇಲ್ಲ, ಕೆಳಗಡೆ ಸಮ್ ಭಾವ ಆಶ್ರಮ ಇದೆ ಎಂತ ತಿಳಿಯಿತು. ಅದೇ ನಮ್ಮ ತಾಣ ಇರಬೇಕು ಎಂದೆಣಿಸಿದೆವು. ನಮ್ಮ ಗಾಡಿಯ ಒಂದು ಟೈರ್ ಅನ್ನು ರಿಪೇರಿ ಮಾಡಿಸಿಕೊಂಡು ವಾಪಾಸು ಬರುವಾಗ ಸಮ್ ಭಾವ ಅಥವಾ ಸಂಭಾವ ಆಶ್ರಮ ಸಿಕ್ಕಿತು. ಅಲ್ಲಿ ನಾವು ತಂಗಿದೆವು. ಒಬ್ಬರಿಗೆ 120 ರೂ.ನಂತೆ ನಮಗೆ ರೂಮ್ ಸಿಕ್ಕಿತು. ಅಲ್ಲಿ ತುಂಬಾ ರೂಮ್ ಗಳಿದ್ದವು. ರಾತ್ರಿ ಊಟವೂ ಇದರಲ್ಲಿ ಸೇರಿ ಕೊಂಡಿದೆ. ನಮ್ಮ ರೂಮ್ 18 ಹಾಸಿಗೆ ಇರುವ ಒಂದು ಡಾರ್ ಮೆಟರಿ, ಚೆನ್ನಾಗಿತ್ತು. ಸ್ನಾನದ ಮನೆಗಳೂ ತುಂಬಾ ಇದ್ದವು. ಎಲ್ಲ ಬಹಳ ಶುಚಿಯಾಗಿದ್ದವು. ಈ ಆಶ್ರಮವನ್ನು ಸ್ವಾಮೀ ಪ್ರೇಮಾಂನಂದಜೀಯವರು ನಡೆಸುತಿದ್ದಾರೆ. ಆಶ್ರಮದ ವತಿಯಿಂದ, ಸುಮಾರು 500 ಮಕ್ಕಳಿರುವ ಶಾಲೆಯೊಂದು ನಡೆಸಲ್ಪಡುತಿದ್ದು, ಅವರ ಊಟ ಪುಸ್ತಕ, ಸಮವಸ್ತ್ರ ಎಲ್ಲಾ ಇವರೇ ಒದಗಿಸುತ್ತಾರೆ.
ರಾತ್ರಿ ದಿನಾಲೂ ಸ್ವಾಮೀಜಿಯಿಂದ ಪ್ರವಚನ ನಡೆಯುತ್ತದೆ. ನಂತರ ಊಟ, ಚಪಾತಿ, ಪಲ್ಯ, ಕರಿ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ, ಚೆನ್ನಾಗಿತ್ತು. ಹೊಟ್ಟೆ ತುಂಬುವಷ್ಟು ಊಟ ಮಾಡಿ ರೂಮ್ ನಲ್ಲಿ ಮಲಗಿಕೊಂಡೆವು. ಇಲ್ಲಿ ಸೊಳ್ಳೆ ತಗಣೆ ಇನ್ನಿತರ ಕೀಟಗಳು ಇರಲೇ ಇಲ್ಲ. ನಾವು ಹೋದೆಡೆಯೆಲ್ಲಾ ಇದ್ಯಾವುದರ ಭಾಧೆ ಇರಲೇ ಇಲ್ಲ. ಆದರೆ ಕೆಲವರ ಗೊರಕೆ ಮಾತ್ರ ದೂರದಿಂದ ಕೇಳಿಸುತಿತ್ತು. ಮರುದಿನ ಬೆಳಗ್ಗೆ ಕುಮಾರ್ ಮತ್ತು ಒಂದು ಬಸ್ ಜನ ಬಂದಿದ್ದರು. ನಾವು ಉಪಾಹಾರ ಮಾಡಿ ಮುಂದುವರಿದೆವು. ನಮ್ಮ ಇನ್ನೊಂದು ಬಸ್ ಇನ್ನೂ ಬರ ಬೇಕಷ್ಟೆ. ಅವರಿನ್ನೂ ಬಹಳ ಹಿಂದೆ ಇದ್ದರು. ಕಾರಣ ಅವರಲ್ಲಿ ಒಬ್ಬರು ಅಜ್ಜಿ, ಕೇದಾರ್ ನಿಂದ ಬರುವಾಗ, ಕುದುರೆಯಿಂದ ಬಿದ್ದು ಸ್ವಲ್ಪ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ ಬರುವಾಗ ಇಷ್ಟು ತಡವಾಯಿತು.
ನಾವು ಪಿಪಾಲ್ ಕೋಠಿ ದಾಟಿ ಮುಂದೆ 50 ಕಿ.ಮಿ ದೂರದ ಜೋಶಿಮಠ ತಲುಪಿದೆವು.




ಅಲ್ಲಿಂದ ಗೋವಿಂದ ಘಾಟ್, ಸುಮಾರು 25 ಕಿ.ಮಿ. ಸಾಗಿ ಬದರೀನಾಥ ತಲುಪಿದೆವು. ಈ ಘಾಟ್ ನ್ ಮಧ್ಯದಲ್ಲಿ ಪ್ರಸಿದ್ಧ ಹೂವಿನ ಕಣಿವೆ ಮತ್ತು ಹೇಮಕುಂಡ್ ಸಾಹಿಬ್ ಎಂಬ ಸಿಕ್ಖರ ಪವಿತ್ರ ಮಂದಿರಕ್ಕೆ ಹೋಗುವ ಅಡ್ಡದಾರಿ ಸಿಗುತ್ತದೆ, ಈ ದಾರಿಯಲ್ಲಿ 25 ಕಿ.ಮಿ. ಹೋದರೆ ಅಲ್ಲಿಗೆ ತಲುಪಬಹುದು. ಆದರೆ ಈಗ ಹೂವುಗಳ ಸೀಸನ್ ಅಲ್ಲವೆಂದು ಗೊತ್ತಾಯಿತು.
ನಾವೆಲ್ಲಾ ಗಾಡಿಯಿಂದ ಇಳಿದು ದೇವಾಲಯದ ಕಡೆ ನಡೆದೆವು. ಎತ್ತರವಾದ ಎರಡು ಪರ್ವತದ ಬುಡದಲ್ಲಿದೆ ಬದರೀಧಾಮ. ಈ ಪರ್ವತಗಳಿಗೆ ನರ-ನಾರಾಯಣ ಪರ್ವತ ಎಂಬ ಹೆಸರು.

 ಮಂದಿರದ ಕೆಳಗಡೆ ಅಲಕನಂದಾ ನದಿ ಹರಿಯುತ್ತಿದೆ. ಆದಿ ಶಂಕರಾಚಾರ್ಯರು ಇಲ್ಲಿನ  ಬದರೀ ನಾರಾಯಣನ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದಂತೆ. ನಾವು ಸ್ವಲ್ಪ ದೂರ ಅಂಗಡಿಸಾಲುಗಳನ್ನು ದಾಟಿ ಮುಂದೆ ಹೋದಾಗ, ಸೇತುವೆಯೊಂದು ಸಿಗುತ್ತದೆ. ಅದನ್ನು ದಾಟಿ ಮುಂದೆ ಹೋದರೆ ಬದರೀ ಮಂದಿರ ಸೇರುತ್ತೇವೆ.




 ಅಲ್ಲಿ ಮೊದಲಿಗೆ ನಾರದ ಕುಂಡವೆಂಬ ಬಿಸಿ ನೀರಿನ ಕೊಳ ಸಿಗುತ್ತದೆ. ಈ ಪವಿತ್ರ ಕುಂಡದಲ್ಲಿ ಮಿಂದು ಮನೆಯವರೆಲ್ಲರ ಹೆಸರು ನೆನಸಿಕೊಂಡು ಮುಳುಗು ಹಾಕಬೇಕು. ತರುವಾಯ ಪಿತೃ ಗಳಿಗೆ ಪಿಂಡಪ್ರಧಾನ ಮಾಡುವ ಕಾರ್ಯ. ಇದಕ್ಕಾಗಿ ಪುರೋಹಿತರನ್ನು ಗೊತ್ತುಮಾಡಿ, ಅಲಕಾನಂದೆಯ ತಟದಲ್ಲಿ ಕ್ರಿಯಾದಿಗಳನ್ನು ಮಾಡಿದೆವು. ನಂತರ ಪಿಂಡಾದಿ ಸಾಮಗ್ರಿಗಳನ್ನು ಅಲ್ಲಿರುವ ಬ್ರಹ್ಮ ಕಪಾಲಕ್ಕೆ ಪ್ರಾರ್ಥನೆ ಮಾಡಿ ಅವುಗಳಿಗೆ ಮುಟ್ಟಿಸಿ ನದಿಯಲ್ಲಿ ಅರ್ಪಿಸಬೇಕು. ಪಿತೃ ಗಳಿಗೆ ಮೋಕ್ಷ ಪ್ರಾಪ್ತಿ ಆಗುತ್ತದೆ. ಅಷ್ಟರಲ್ಲಿ ನಾಲ್ಕು ಹನಿ ಮಳೆನೀರಸಿಂಚನವಾಯಿತು. ನಮ್ಮ ಎಲ್ಲಾ ಪಿತೃ ಗಳಿಗೆ ತೃಪ್ತಿ ಆಯಿತು ಎಂತ ಸಂತಸಪಟ್ಟೆವು.


ಬ್ರಹ್ಮ ಕಪಾಲದ ಕುರಿತು ಹೇಳದಿದ್ದರೆ ವಿವರಣೆ ಅಪೂರ್ಣ. ಹಿಂದೆ ಬ್ರಹ್ಮನು ತನ್ನ ಪುತ್ರಿಯ ಸಮಾನಳಾದ  ಸರಸ್ವತಿಯನ್ನು ವರಿಸಿದ್ದಕ್ಕೆ ದೇವಾನುದೇವತೆಗಳೆಲ್ಲಾ ಕುಪಿತರಾಗಿದ್ದರು. ಶಿವನಿಗೆ ಮಾತ್ರ ಅತ್ಯುಗ್ರ ಕೋಪ ಬಂದು ಬ್ರಹ್ಮನ ಐದನೇ ಶಿರವನ್ನು ಚಿವುಟಿ ಕಿತ್ತನು. ಆಶಿರವು ಶಿವನ ಬೆರಳುಗಳನ್ನೇ ಬಲವಾಗಿ ಕಚ್ಚಿಕೊಂಡಿತು. ಎನೇ ಮಾಡಿದರೂ ಬಿಡಲೇ ಇಲ್ಲ. ಅದರ ನಿವಾರಣೆಗಾಗಿ ಪರಶಿವನು ಎಲ್ಲಾ ದೇವಾಲಯಗಳ ದರ್ಶನ ಮಾಡಿದರೂ ಕಪಾಲವು ಬಿಡಲೇ ಇಲ್ಲ. ಕೊನೆಗೆ ಬದರಿಗೆ ಬಂದು ಪ್ರಾರ್ಥಿಸಲು ಕಪಾಲವು ಬಿದ್ದು ಹೋಗಿ ಆತನಿಗೆ ಮೋಕ್ಷವಾಯಿತು. ಅಂದಿನಿಂದ ಆ ಕಪಾಲ ಬಿದ್ದ ಜಾಗವನ್ನು ಬ್ರಹ್ಮ ಕಪಾಲ ಕುಂಡ ಎನ್ನುತ್ತಾರೆ. ಇಲ್ಲಿ ಪಿಂಡದಾನ ಮಾಡಿದರೆ ಪಿತೃಗಳಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.
ನಾವು ಬದರೀನಾರಾಯಣನ ಮಂದಿರದೊಳಗೆ ಹೋದೆವು. ಅಲ್ಲಿ ದೇವರ ದರ್ಶನ ಪಡೆದು ಕೃತಾರ್ಥರಾದೆವು. ಅಲ್ಲಿ ಬೇರೇನೂ ವಿಶೇಷ ಕಾಣಲಿಲ್ಲ. ಧನಾಧಿಪತಿ ಕುಬೇರನ ಮೂರ್ತಿ ಅಲ್ಲಿತ್ತು ಅವನಿಗೆ ವಂದಿಸಿ ಹೊರ ಬಂದೆವು. ಬಹಳ ಹೊತ್ತು ನಿಲ್ಲಲು ಬಿಡುವುದಿಲ್ಲ. ಹೊರಗಡೆ ಲಕ್ಷ್ಮಿಯ ದೇವಾಲಯವಿದೆ.ಅಲ್ಲಿಯೂ  ಕೈಮುಗಿದು ಕೆಳಗೆ ಬಂದು ನಮ್ಮ ಮೊಬೈಲ್ ಮತ್ತಿತರ ವಸ್ತುಗಳನ್ನು ಪಡೆದೆವು. ಪ್ರಸಾಧಗಳನ್ನೂ ತೆಗೆದುಕೊಂಡು ಬಂದೆವು. ತುಂಬಾ ಫೋಟೋ ತೆಗೆದುಕೊಂಡೆವು.










 ಅಲ್ಲೇ ಒಂದು ಹೊಟೆಲಲ್ಲಿ ಊಟ ಮಾಡಿ ಗಾಡಿ ಹತ್ತಿದೆವು.
ಇಲ್ಲಿಂದ ಬರೇ 3 ಕಿ.ಮಿ. ದೂರದಲ್ಲಿದೆ ಮಾನಾ ಎಂಬ ಭಾರತದ ಕೊಟ್ಟ ಕೊನೆಯ ಹಳ್ಳಿ. ಅದರಿಂದಾಚೆ ಚೀನಾದೇಶ. ಮೊದಲು ಟಿಬೇಟ್ ಆಗಿ ಇದ್ದು ಚೀನಾ ಅದನ್ನು ತನ್ನದಾಗಿಸಿಕೊಂಡಿದೆ. ಸಣ್ಣ ಸಣ್ಣ ಮನೆಗಳು ಸುತ್ತಲೂ ಪರ್ವತಗಳು ಒಂದು ದೊಡ್ಡ ನೀರ ಝರಿ ಕೆಳಗೆ ಹರಿಯುತ್ತಿದೆ.



 ಅಲ್ಲೆಲ್ಲಾ ಟಿಬೇಟಿಯನ್ನರು ವಾಸವಿದ್ದಾರೆ. ಅವರು ತಾವೇ ಹೆಣೆದ ಉಣ್ಣೆಯ ಬಟ್ಟೆಗಳನ್ನು ಮಾರುತ್ತಾರೆ. ಸ್ವಲ್ಪ ಮುಂದೆ ಹೋದರೆ ಸರಸ್ವತಿ ನದಿ ಕಾಣುತ್ತದೆ.

 ಅಲ್ಲಿ ಅವಳು ಭೂಮಿಯ ಒಳಗೆ ಹೋಗಿ ಗುಪ್ತಗಾಮಿನಿಯಾಗಿ ಹರಿದು ಅಲಹಾಬಾದ್ ನಲ್ಲಿ ಗಂಗಾ ಯಮುನಾರೊಂದಿಗೆ ಸಂಗಮವಾಗಿ ತ್ರಿವೇಣಿ ಸಂಗಮ ಎನಿಸುತ್ತದೆ. ಇಲ್ಲಿಯೇ ಭೀಮನ ಬಂಡೆ ಇದೆ. ದ್ರೌಪತಿಗೆ ನದಿ ದಾಟಲು ಭೀಮನು ಹಾಕಿದ ಸೇತುವೆ. ಇಲ್ಲಿ ವೇದವ್ಯಾಸರು ಮಹಾಭಾರತ ಹೇಳಿದರಂತೆ. ಗಣಪತಿ ಅದನ್ನು ಬರೆದನಂತೆ. ಅವರಿಬ್ಬರ ಗುಹೆಗಳು ಅಲ್ಲಿವೆ.
ಇಲ್ಲಿಂದ ಹೊರಟ ನಾವು ಸೀದಾ ಸಂಭಾವ ಆಶ್ರಮಕ್ಕೇ ಬಂದು ಅಲ್ಲಿ ರಾತ್ರಿ ಕಳೆದೆವು. ಮರುದಿನ ಕಾಫಿ ತಿಂಡಿಯಾಗಿ ಹೊರಟದ್ದು ನೇರ ಋಷಿಕೇಶಕ್ಕೆ. ದಾರಿಯಲ್ಲಿ ನಮಗೆ ವಿಷ್ಣುಪ್ರಯಾಗ,ರುದ್ರಪ್ರಯಾಗ ಸಿಗುತ್ತದೆ. ಅಲ್ಲಿ ನಮಗೆ ಪ್ರಕೃತಿಯ ವಿಕೋಪ ಎದುರಾಯಿತು. ರಸ್ತೆಯ ಬಲಬದಿಯ ಬೆಟ್ಟದಿಂದ ಕಲ್ಲು ಮಣ್ಣು ಉದುರಲು ಪ್ರಾರಂಭ. ಮಾರುತಿ ಕಾರ್ ನಷ್ಟು ದೊಡ್ಡ ಒಂದು ಬಂಡೆ ಮೇಲಿಂದ ಜಾರಲು ಪ್ರಾರಂಭಿಸಿತು, ಅಲ್ಲಿದ್ದ ಅಧಿಕಾರಿಗಳು ನಮ್ಮನ್ನು ತಡೆದು ನಿಲ್ಲಿಸಿದ್ದರು. ಜಾರುತ್ತಿರುವ ಬಂಡೆ ಯಾಕೋ ತನ್ನ ಕ್ರಿಯೆಯನ್ನು ನಿಲ್ಲಿಸಿತು. ಆದರೂ ಅದನ್ನೇ ಸುಮಾರು ಹೊತ್ತು ನಿರೀಕ್ಷೆ ಮಾಡಿ, ಇನ್ನೇನೂ ಅಪಾಯವಿಲ್ಲ ಎಂದು ಖಾತ್ರಿ ಮಾಡಿ ನಮ್ಮನ್ನು ಹೋಗಲು ಬಿಟ್ಟರು. ನಾವು ಅಲ್ಲಿನ ಘಡ್ವಾಲ್ ಶ್ರೀನಗರ ದಾಟಿ ದೇವಪ್ರಯಾಗ ತಲುಪಿದೆವು. ಅದಾಗಲೇ ಕತ್ತಲಾಗಿತ್ತು. ಕೆಳಗೆ ಹೋಗಲಿಲ್ಲ. ಮೇಲಿಂದಲೇ ನಾವು ಭಾಗೀರಥಿ ಮತ್ತು ಅಲಕನಂದಾ ಸಂಗಮವನ್ನು ನೋಡಿದೆವು.

 ಮುಂದೆ ರಾತ್ರಿ ಋಶಿಕೇಶ ತಲುಪಿ ಅಲ್ಲಿನ ಗಂಗಾ ಘಾಟ್ ನಲ್ಲಿ ಇಳಿದು ವಂದಿಸಿ ವಾಪಾಸು ಹೊರಟೆವು. ಇಲ್ಲಿಂದ ನೇರ ದೆಹಲಿಗೆ, ಸುಮಾರು 230 ಕಿ.ಮಿ. ಪ್ರಯಾಣ.

 ಬೆಳಗ್ಗೆ 7ಘಂಟೆಗೆ ದೆಹಲಿಯ ಒಂದು ಹೋಟೆಲ್ ನಲ್ಲಿ ನಮಗೆ ರೂಮ್ ಬುಕ್ ಆಗಿತ್ತು. ಆ ದಿನ ಮತ್ತು ಮರುದಿನ ಮಧ್ಯಾಹ್ನದ ವರೆಗೆ ದೆಹಲಿ ವೀಕ್ಷಣೆ.


 ನಾವು ಇಲ್ಲಿ ಬಿರ್ಲಾ ಮಂದಿರ ಮತ್ತು ಅಕ್ಷರಧಾಮ ನೋಡಿದೆವು. ಮರುದಿನ ಕರೋಲ್ ಭಾಗ್ ನಲ್ಲಿ ಶೋಪಿಂಗ್ ಮಾಡಿದೆವು. ಮಧ್ಯಾಹ್ನದ ಊಟ ಮಾಡಿ ನಮ್ಮ ಎಲ್ಲಾ ಬ್ಯಾಗ್ ಗಾಡಿಯಲ್ಲಿ ಇರಿಸಿ   ದೆಹಲಿಗೆ ಗುಡ್ ಬೈ ಹೇಳಿದೆವು. ಕುಮಾರ್ ಮತ್ತು ಹೆಚ್ಚಿನವರು ದೆಹಲಿಯಲ್ಲೇ ಉಳಿದು ಮರುದಿನ ಆಗ್ರಾ, ಮಥುರಾ ಕಾಶಿ ಅಲಹಾಬಾದ್ ನೋಡಿ ಅಲ್ಲಿಂದಲೇ ವಿಮಾನದಲ್ಲಿ ಬರುವವರಿದ್ದರು

 ನಾವು ಸೀದಾ ಇಂದಿರಾ ಗಾಂಧಿ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಗೆ ಬಂದೆವು.

 ನಮ್ಮ ಏರ್ ಇಂಡಿಯಾ ವಿಮಾನವು 8 ಘಂಟೆಗೆ ಹೊರಡುವ ಬದಲಿಗೆ 10 ಕ್ಕೆ ಹೊರಟು ರಾತ್ರಿ 12.30ಕ್ಕೆ ಬೆಂಗಳೂರಿಗೆ ತಲುಪಿತು. ಟ್ಯಾಕ್ಸಿ ಮಾಡಿ ಮನೆಗೆ ತಲುಪಿದೆವು. ಏನೊಂದು ತೊಂದರೆ, ಅನಾರೋಗ್ಯಗಳಿಲ್ಲದೆ ಕ್ಷೇಮವಾಗಿ ತಲುಪಿಸಿದ್ದಕ್ಕೆ ದೇವರಿಗೆ ವಂದಿಸಿದೆವು.
                
ಈ ಲೇಖನ ಮಾಲೆಯನ್ನು, ನಮ್ಮ ಚಾರಣ ಮತ್ತು ಪ್ರವಾಸಗಳಲ್ಲಿ ಒಡನಾಡಿಯಾಗಿದ್ದು ಅಕಾಲದಲ್ಲಿ ನಮ್ಮನ್ನು ಅಗಲಿದ ಶ್ರುತಿಯ ನೆನಪಿಗಾಗಿ ಅರ್ಪಿಸಿದ್ದೇನೆ.