Monday, 16 December 2019

Badarinaatha



4. ಬದರೀನಾಥ

ಫಾಟಾದಿಂದ ಬೆಳಗ್ಗಿನ ಉಪಾಹಾರ ಮುಗಿಸಿ ಮುಂದಿನ ದಾರಿ ಹಿಡಿದೆವು. 14 ಕಿ.ಮಿ. ದೂರದ ಗುಪ್ತಕಾಶಿ ತಲುಪಿದೆವು. ಅಲ್ಲಿಂದ ಕುಂಡ ಕ್ಕೆ. ಅಲ್ಲಿ ಮುಂದೆ 2 ದಾರಿ ಇದೆ. ನಾವು ಚೋಪ್ಟಾ ಎಂಬ ಹಿಲ್ ಸ್ಟೇಷನ್ ಮಾರ್ಗವನ್ನು ಆಯ್ಕೆ ಮಾಡಿದೆವು. ಬಹಳ ಸುಂದರ ದಾರಿ. ತಿರುವುಗಳೂ ಬಹಳ. ದೃಶ್ಯಗಳೂ ಮನೊಹರ. ಹಿತವಾದ ವಾತಾವರಣ.





 ಸುಮಾರು 35 ಕಿ.ಮಿ ಸಾಗಿದಾಗ ದೊಡ್ಡದೊಂದು ಬೆಟ್ಟದ ತುದಿಯಲ್ಲಿದ್ದೆವು. ಅಲ್ಲಿ ಕೆಲ ಅಂಗಡಿಗಳು ಇದ್ದವು. ಅಲ್ಲಿ ಮೊದಲು ಚಹಾ, ಪಕೋಡಾ ತಿಂದೆವು. ನಂತರ ಅಲ್ಲೆಲ್ಲಾ ಸುತ್ತಾಡಿ ಫೋಟೊ ತೆಗೆದೆವು. ಮಂಜು ಮುಸುಕಿದ ವಾತಾವರಣ ನಮಗೆ ಊಟಿಯ ನೆನಪು ಕೊಟ್ಟಿತು. ಅಲ್ಲಿ ಸುಮಾರು ಅರ್ಧ ಘಂಟೆ ಕಾಲ ಕಳೆದು ಹೊರಟೆವು. ಮುಂದಿನ ದಾರಿ ಬಹಳ ದುರ್ಗಮ ರಸ್ತೆ, ತಲೆ ಎತ್ತಿ ನೋಡಿದರೂ ಕಾಣದಕಡಿದಾದ ಪರ್ವತದ ತುದಿ, ಬಲಕ್ಕೆ ಆಳ ಕಮರಿ. ಕಾಡು ದಟ್ಟವಾಗುತ್ತಾ ಬಂತು.
ಇಲ್ಲಿಂದ ಪಂಚ ಕೇದಾರಗಳಲ್ಲಿ ಒಂದಾದ ತುಂಗನಾಥಕ್ಕೆ ಚಾರಣ ಹೋಗಬಹುದು. ಕೇದಾರನಾಥ ವನ್ಯಜೀವಿ ಧಾಮ ಇಲ್ಲಿಂದ ಪ್ರಾರಂಭ. ಈ ವನ್ಯಧಾಮದ ಒಂದು ಗೇಟ್ ನಮಗೆ ಕಂಡಿತು. ಅಲ್ಲಿ ಗಾಡಿ ನಿಲ್ಲಿಸಿದೆವು. ಆ ಕೂಡಲೇ ಸುಮಾರು ವಿಶೇಷ ಜಾತಿಯ ವಾನರಗಳು ಹಾಜರಾದವು. ಬಿಳಿ ಮತ್ತು ಬೂದು ಬಣ್ಣದ ಮೈಬಣ್ಣ, ಉದ್ದವಾದ ಬಾಲ ಅವಕ್ಕೆ. ಆಕಾರವೂ ಸಾಕಷ್ಟು ದೊಡ್ಡದಿತ್ತು.



ಅವಕ್ಕೆ ನಾವು ಗಾಡಿಯ ಕಿಟಕಿಯಿಂದಲೇ ಸ್ವಲ್ಪ ಹಣ್ಣು, ಬಿಸ್ಕಿಟ್ ಹಾಕಿದೆವು. ಇದನ್ನು ಕಂಡು ಇನ್ನೂ ದೊಡ್ಡ ವಾನರ ಗುಂಪು ಅಲ್ಲಿಗೆ ಬಂದವು. ನಮ್ಮ ತಿಂಡಿ ಎಲ್ಲಾ ಮುಗಿದೇ ಹೋಯಿತು. ಮುಂದೆ ಹೋಗುತ್ತಾ ನರಿಯೊಂದು ಅಡ್ಡಲಾಯಿತು. ನಂತರ ಸಿಕ್ಕಿದ್ದು ಒಂದು ಕಾಡು ಕುರಿ. ಮಲಿಕ್ ನಿಗೆ ಬಾಯಲ್ಲಿ ನೀರೂರಿರಬೇಕು. ಅದರ ಬಗ್ಗೆ ಬಹಳ ವಿವರಿಸಿದ. ಅಲ್ಲಿ ಕರಡಿಗಳೂ ಬಹಳ ಇದೆಯಂತೆ. ನಮಗೆ ಕಾಣಸಿಗಲಿಲ್ಲ.
ಕಾಡಿನ ಮಧ್ಯೆ ಸಾಗುವ ಸುಂದರ ರಸ್ತೆಯಲ್ಲಿ ಹೋಗುತ್ತಾ ನೀರು ಹರಿಯುತ್ತಿರುವ ಝರಿಯ ಸಮೀಪ ಗಾಡಿ ನಿಲ್ಲಿಸಿ ಮಧ್ಯಾಹ್ನದ ಊಟ ಮಾಡಿದೆವು.



 ನಮಗಾಗಿ ಕುಮಾರ್ ಊಟ ಕಟ್ಟಿಕೊಟ್ಟಿದ್ದರು. ಖಾರ ಖಾರ ವಾಗಿರುವ ಪುಲಾವ್ ಮತ್ತು ರಾಯಿತ. ಕ್ಷಣದಲ್ಲಿ ಎಲ್ಲಾ ಮುಗಿಸಿದೆವು. ಅಲ್ಲಿ ಸ್ವಲ್ಪ ವಿರಮಿಸಿ ಮುಂದೆ ಚಮೋಲಿ ಎಂಬ ಊರಿಗೆ ತಲುಪಿದೆವು. ಕುಮಾರ್ ಅವರಿಗೆ ಫೋನ್ ಮಾಡಿ ಮುಂದೆ ಏನು ಮಾದಬೇಕು ಎಂದು ಕೇಳಿದಾಗ ಅಲ್ಲೇ ಶಂಭೋ ಆಶ್ರಮ ಇದೆ. ಅಲ್ಲಿ ಉಳಕೊಳ್ಳಿರಿ, ನಾವು ಸುಮಾರು ದೂರದಲ್ಲಿ ಇದ್ದೇವೆ, ನಾಳೆ ಬೆಳಿಗ್ಗೆ ಅಲ್ಲಿ ನಿಮ್ಮನ್ನು ಸೇರಿಕೊಳ್ಳುತ್ತೇವೆ ಎಂದರು. ಸರಿ ಅವರು ಹೇಳಿದ ಆಶ್ರಮ ನಮಗೆ ಸಿಗದೆ ನಾವು ಸುಮಾರು 10 ಕಿ.ಮಿ ದೂರ ಮುಂದೆ ಬಂದಿದ್ದೆವು. ಅಲ್ಲಿ ಕೆಲವರಲ್ಲಿ ವಿಚಾರಿಸಿದಾಗ ಅಂಥಾ ಆಶ್ರಮ ಇಲ್ಲ, ಕೆಳಗಡೆ ಸಮ್ ಭಾವ ಆಶ್ರಮ ಇದೆ ಎಂತ ತಿಳಿಯಿತು. ಅದೇ ನಮ್ಮ ತಾಣ ಇರಬೇಕು ಎಂದೆಣಿಸಿದೆವು. ನಮ್ಮ ಗಾಡಿಯ ಒಂದು ಟೈರ್ ಅನ್ನು ರಿಪೇರಿ ಮಾಡಿಸಿಕೊಂಡು ವಾಪಾಸು ಬರುವಾಗ ಸಮ್ ಭಾವ ಅಥವಾ ಸಂಭಾವ ಆಶ್ರಮ ಸಿಕ್ಕಿತು. ಅಲ್ಲಿ ನಾವು ತಂಗಿದೆವು. ಒಬ್ಬರಿಗೆ 120 ರೂ.ನಂತೆ ನಮಗೆ ರೂಮ್ ಸಿಕ್ಕಿತು. ಅಲ್ಲಿ ತುಂಬಾ ರೂಮ್ ಗಳಿದ್ದವು. ರಾತ್ರಿ ಊಟವೂ ಇದರಲ್ಲಿ ಸೇರಿ ಕೊಂಡಿದೆ. ನಮ್ಮ ರೂಮ್ 18 ಹಾಸಿಗೆ ಇರುವ ಒಂದು ಡಾರ್ ಮೆಟರಿ, ಚೆನ್ನಾಗಿತ್ತು. ಸ್ನಾನದ ಮನೆಗಳೂ ತುಂಬಾ ಇದ್ದವು. ಎಲ್ಲ ಬಹಳ ಶುಚಿಯಾಗಿದ್ದವು. ಈ ಆಶ್ರಮವನ್ನು ಸ್ವಾಮೀ ಪ್ರೇಮಾಂನಂದಜೀಯವರು ನಡೆಸುತಿದ್ದಾರೆ. ಆಶ್ರಮದ ವತಿಯಿಂದ, ಸುಮಾರು 500 ಮಕ್ಕಳಿರುವ ಶಾಲೆಯೊಂದು ನಡೆಸಲ್ಪಡುತಿದ್ದು, ಅವರ ಊಟ ಪುಸ್ತಕ, ಸಮವಸ್ತ್ರ ಎಲ್ಲಾ ಇವರೇ ಒದಗಿಸುತ್ತಾರೆ.
ರಾತ್ರಿ ದಿನಾಲೂ ಸ್ವಾಮೀಜಿಯಿಂದ ಪ್ರವಚನ ನಡೆಯುತ್ತದೆ. ನಂತರ ಊಟ, ಚಪಾತಿ, ಪಲ್ಯ, ಕರಿ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ, ಚೆನ್ನಾಗಿತ್ತು. ಹೊಟ್ಟೆ ತುಂಬುವಷ್ಟು ಊಟ ಮಾಡಿ ರೂಮ್ ನಲ್ಲಿ ಮಲಗಿಕೊಂಡೆವು. ಇಲ್ಲಿ ಸೊಳ್ಳೆ ತಗಣೆ ಇನ್ನಿತರ ಕೀಟಗಳು ಇರಲೇ ಇಲ್ಲ. ನಾವು ಹೋದೆಡೆಯೆಲ್ಲಾ ಇದ್ಯಾವುದರ ಭಾಧೆ ಇರಲೇ ಇಲ್ಲ. ಆದರೆ ಕೆಲವರ ಗೊರಕೆ ಮಾತ್ರ ದೂರದಿಂದ ಕೇಳಿಸುತಿತ್ತು. ಮರುದಿನ ಬೆಳಗ್ಗೆ ಕುಮಾರ್ ಮತ್ತು ಒಂದು ಬಸ್ ಜನ ಬಂದಿದ್ದರು. ನಾವು ಉಪಾಹಾರ ಮಾಡಿ ಮುಂದುವರಿದೆವು. ನಮ್ಮ ಇನ್ನೊಂದು ಬಸ್ ಇನ್ನೂ ಬರ ಬೇಕಷ್ಟೆ. ಅವರಿನ್ನೂ ಬಹಳ ಹಿಂದೆ ಇದ್ದರು. ಕಾರಣ ಅವರಲ್ಲಿ ಒಬ್ಬರು ಅಜ್ಜಿ, ಕೇದಾರ್ ನಿಂದ ಬರುವಾಗ, ಕುದುರೆಯಿಂದ ಬಿದ್ದು ಸ್ವಲ್ಪ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ ಬರುವಾಗ ಇಷ್ಟು ತಡವಾಯಿತು.
ನಾವು ಪಿಪಾಲ್ ಕೋಠಿ ದಾಟಿ ಮುಂದೆ 50 ಕಿ.ಮಿ ದೂರದ ಜೋಶಿಮಠ ತಲುಪಿದೆವು.




ಅಲ್ಲಿಂದ ಗೋವಿಂದ ಘಾಟ್, ಸುಮಾರು 25 ಕಿ.ಮಿ. ಸಾಗಿ ಬದರೀನಾಥ ತಲುಪಿದೆವು. ಈ ಘಾಟ್ ನ್ ಮಧ್ಯದಲ್ಲಿ ಪ್ರಸಿದ್ಧ ಹೂವಿನ ಕಣಿವೆ ಮತ್ತು ಹೇಮಕುಂಡ್ ಸಾಹಿಬ್ ಎಂಬ ಸಿಕ್ಖರ ಪವಿತ್ರ ಮಂದಿರಕ್ಕೆ ಹೋಗುವ ಅಡ್ಡದಾರಿ ಸಿಗುತ್ತದೆ, ಈ ದಾರಿಯಲ್ಲಿ 25 ಕಿ.ಮಿ. ಹೋದರೆ ಅಲ್ಲಿಗೆ ತಲುಪಬಹುದು. ಆದರೆ ಈಗ ಹೂವುಗಳ ಸೀಸನ್ ಅಲ್ಲವೆಂದು ಗೊತ್ತಾಯಿತು.
ನಾವೆಲ್ಲಾ ಗಾಡಿಯಿಂದ ಇಳಿದು ದೇವಾಲಯದ ಕಡೆ ನಡೆದೆವು. ಎತ್ತರವಾದ ಎರಡು ಪರ್ವತದ ಬುಡದಲ್ಲಿದೆ ಬದರೀಧಾಮ. ಈ ಪರ್ವತಗಳಿಗೆ ನರ-ನಾರಾಯಣ ಪರ್ವತ ಎಂಬ ಹೆಸರು.

 ಮಂದಿರದ ಕೆಳಗಡೆ ಅಲಕನಂದಾ ನದಿ ಹರಿಯುತ್ತಿದೆ. ಆದಿ ಶಂಕರಾಚಾರ್ಯರು ಇಲ್ಲಿನ  ಬದರೀ ನಾರಾಯಣನ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದಂತೆ. ನಾವು ಸ್ವಲ್ಪ ದೂರ ಅಂಗಡಿಸಾಲುಗಳನ್ನು ದಾಟಿ ಮುಂದೆ ಹೋದಾಗ, ಸೇತುವೆಯೊಂದು ಸಿಗುತ್ತದೆ. ಅದನ್ನು ದಾಟಿ ಮುಂದೆ ಹೋದರೆ ಬದರೀ ಮಂದಿರ ಸೇರುತ್ತೇವೆ.




 ಅಲ್ಲಿ ಮೊದಲಿಗೆ ನಾರದ ಕುಂಡವೆಂಬ ಬಿಸಿ ನೀರಿನ ಕೊಳ ಸಿಗುತ್ತದೆ. ಈ ಪವಿತ್ರ ಕುಂಡದಲ್ಲಿ ಮಿಂದು ಮನೆಯವರೆಲ್ಲರ ಹೆಸರು ನೆನಸಿಕೊಂಡು ಮುಳುಗು ಹಾಕಬೇಕು. ತರುವಾಯ ಪಿತೃ ಗಳಿಗೆ ಪಿಂಡಪ್ರಧಾನ ಮಾಡುವ ಕಾರ್ಯ. ಇದಕ್ಕಾಗಿ ಪುರೋಹಿತರನ್ನು ಗೊತ್ತುಮಾಡಿ, ಅಲಕಾನಂದೆಯ ತಟದಲ್ಲಿ ಕ್ರಿಯಾದಿಗಳನ್ನು ಮಾಡಿದೆವು. ನಂತರ ಪಿಂಡಾದಿ ಸಾಮಗ್ರಿಗಳನ್ನು ಅಲ್ಲಿರುವ ಬ್ರಹ್ಮ ಕಪಾಲಕ್ಕೆ ಪ್ರಾರ್ಥನೆ ಮಾಡಿ ಅವುಗಳಿಗೆ ಮುಟ್ಟಿಸಿ ನದಿಯಲ್ಲಿ ಅರ್ಪಿಸಬೇಕು. ಪಿತೃ ಗಳಿಗೆ ಮೋಕ್ಷ ಪ್ರಾಪ್ತಿ ಆಗುತ್ತದೆ. ಅಷ್ಟರಲ್ಲಿ ನಾಲ್ಕು ಹನಿ ಮಳೆನೀರಸಿಂಚನವಾಯಿತು. ನಮ್ಮ ಎಲ್ಲಾ ಪಿತೃ ಗಳಿಗೆ ತೃಪ್ತಿ ಆಯಿತು ಎಂತ ಸಂತಸಪಟ್ಟೆವು.


ಬ್ರಹ್ಮ ಕಪಾಲದ ಕುರಿತು ಹೇಳದಿದ್ದರೆ ವಿವರಣೆ ಅಪೂರ್ಣ. ಹಿಂದೆ ಬ್ರಹ್ಮನು ತನ್ನ ಪುತ್ರಿಯ ಸಮಾನಳಾದ  ಸರಸ್ವತಿಯನ್ನು ವರಿಸಿದ್ದಕ್ಕೆ ದೇವಾನುದೇವತೆಗಳೆಲ್ಲಾ ಕುಪಿತರಾಗಿದ್ದರು. ಶಿವನಿಗೆ ಮಾತ್ರ ಅತ್ಯುಗ್ರ ಕೋಪ ಬಂದು ಬ್ರಹ್ಮನ ಐದನೇ ಶಿರವನ್ನು ಚಿವುಟಿ ಕಿತ್ತನು. ಆಶಿರವು ಶಿವನ ಬೆರಳುಗಳನ್ನೇ ಬಲವಾಗಿ ಕಚ್ಚಿಕೊಂಡಿತು. ಎನೇ ಮಾಡಿದರೂ ಬಿಡಲೇ ಇಲ್ಲ. ಅದರ ನಿವಾರಣೆಗಾಗಿ ಪರಶಿವನು ಎಲ್ಲಾ ದೇವಾಲಯಗಳ ದರ್ಶನ ಮಾಡಿದರೂ ಕಪಾಲವು ಬಿಡಲೇ ಇಲ್ಲ. ಕೊನೆಗೆ ಬದರಿಗೆ ಬಂದು ಪ್ರಾರ್ಥಿಸಲು ಕಪಾಲವು ಬಿದ್ದು ಹೋಗಿ ಆತನಿಗೆ ಮೋಕ್ಷವಾಯಿತು. ಅಂದಿನಿಂದ ಆ ಕಪಾಲ ಬಿದ್ದ ಜಾಗವನ್ನು ಬ್ರಹ್ಮ ಕಪಾಲ ಕುಂಡ ಎನ್ನುತ್ತಾರೆ. ಇಲ್ಲಿ ಪಿಂಡದಾನ ಮಾಡಿದರೆ ಪಿತೃಗಳಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.
ನಾವು ಬದರೀನಾರಾಯಣನ ಮಂದಿರದೊಳಗೆ ಹೋದೆವು. ಅಲ್ಲಿ ದೇವರ ದರ್ಶನ ಪಡೆದು ಕೃತಾರ್ಥರಾದೆವು. ಅಲ್ಲಿ ಬೇರೇನೂ ವಿಶೇಷ ಕಾಣಲಿಲ್ಲ. ಧನಾಧಿಪತಿ ಕುಬೇರನ ಮೂರ್ತಿ ಅಲ್ಲಿತ್ತು ಅವನಿಗೆ ವಂದಿಸಿ ಹೊರ ಬಂದೆವು. ಬಹಳ ಹೊತ್ತು ನಿಲ್ಲಲು ಬಿಡುವುದಿಲ್ಲ. ಹೊರಗಡೆ ಲಕ್ಷ್ಮಿಯ ದೇವಾಲಯವಿದೆ.ಅಲ್ಲಿಯೂ  ಕೈಮುಗಿದು ಕೆಳಗೆ ಬಂದು ನಮ್ಮ ಮೊಬೈಲ್ ಮತ್ತಿತರ ವಸ್ತುಗಳನ್ನು ಪಡೆದೆವು. ಪ್ರಸಾಧಗಳನ್ನೂ ತೆಗೆದುಕೊಂಡು ಬಂದೆವು. ತುಂಬಾ ಫೋಟೋ ತೆಗೆದುಕೊಂಡೆವು.










 ಅಲ್ಲೇ ಒಂದು ಹೊಟೆಲಲ್ಲಿ ಊಟ ಮಾಡಿ ಗಾಡಿ ಹತ್ತಿದೆವು.
ಇಲ್ಲಿಂದ ಬರೇ 3 ಕಿ.ಮಿ. ದೂರದಲ್ಲಿದೆ ಮಾನಾ ಎಂಬ ಭಾರತದ ಕೊಟ್ಟ ಕೊನೆಯ ಹಳ್ಳಿ. ಅದರಿಂದಾಚೆ ಚೀನಾದೇಶ. ಮೊದಲು ಟಿಬೇಟ್ ಆಗಿ ಇದ್ದು ಚೀನಾ ಅದನ್ನು ತನ್ನದಾಗಿಸಿಕೊಂಡಿದೆ. ಸಣ್ಣ ಸಣ್ಣ ಮನೆಗಳು ಸುತ್ತಲೂ ಪರ್ವತಗಳು ಒಂದು ದೊಡ್ಡ ನೀರ ಝರಿ ಕೆಳಗೆ ಹರಿಯುತ್ತಿದೆ.



 ಅಲ್ಲೆಲ್ಲಾ ಟಿಬೇಟಿಯನ್ನರು ವಾಸವಿದ್ದಾರೆ. ಅವರು ತಾವೇ ಹೆಣೆದ ಉಣ್ಣೆಯ ಬಟ್ಟೆಗಳನ್ನು ಮಾರುತ್ತಾರೆ. ಸ್ವಲ್ಪ ಮುಂದೆ ಹೋದರೆ ಸರಸ್ವತಿ ನದಿ ಕಾಣುತ್ತದೆ.

 ಅಲ್ಲಿ ಅವಳು ಭೂಮಿಯ ಒಳಗೆ ಹೋಗಿ ಗುಪ್ತಗಾಮಿನಿಯಾಗಿ ಹರಿದು ಅಲಹಾಬಾದ್ ನಲ್ಲಿ ಗಂಗಾ ಯಮುನಾರೊಂದಿಗೆ ಸಂಗಮವಾಗಿ ತ್ರಿವೇಣಿ ಸಂಗಮ ಎನಿಸುತ್ತದೆ. ಇಲ್ಲಿಯೇ ಭೀಮನ ಬಂಡೆ ಇದೆ. ದ್ರೌಪತಿಗೆ ನದಿ ದಾಟಲು ಭೀಮನು ಹಾಕಿದ ಸೇತುವೆ. ಇಲ್ಲಿ ವೇದವ್ಯಾಸರು ಮಹಾಭಾರತ ಹೇಳಿದರಂತೆ. ಗಣಪತಿ ಅದನ್ನು ಬರೆದನಂತೆ. ಅವರಿಬ್ಬರ ಗುಹೆಗಳು ಅಲ್ಲಿವೆ.
ಇಲ್ಲಿಂದ ಹೊರಟ ನಾವು ಸೀದಾ ಸಂಭಾವ ಆಶ್ರಮಕ್ಕೇ ಬಂದು ಅಲ್ಲಿ ರಾತ್ರಿ ಕಳೆದೆವು. ಮರುದಿನ ಕಾಫಿ ತಿಂಡಿಯಾಗಿ ಹೊರಟದ್ದು ನೇರ ಋಷಿಕೇಶಕ್ಕೆ. ದಾರಿಯಲ್ಲಿ ನಮಗೆ ವಿಷ್ಣುಪ್ರಯಾಗ,ರುದ್ರಪ್ರಯಾಗ ಸಿಗುತ್ತದೆ. ಅಲ್ಲಿ ನಮಗೆ ಪ್ರಕೃತಿಯ ವಿಕೋಪ ಎದುರಾಯಿತು. ರಸ್ತೆಯ ಬಲಬದಿಯ ಬೆಟ್ಟದಿಂದ ಕಲ್ಲು ಮಣ್ಣು ಉದುರಲು ಪ್ರಾರಂಭ. ಮಾರುತಿ ಕಾರ್ ನಷ್ಟು ದೊಡ್ಡ ಒಂದು ಬಂಡೆ ಮೇಲಿಂದ ಜಾರಲು ಪ್ರಾರಂಭಿಸಿತು, ಅಲ್ಲಿದ್ದ ಅಧಿಕಾರಿಗಳು ನಮ್ಮನ್ನು ತಡೆದು ನಿಲ್ಲಿಸಿದ್ದರು. ಜಾರುತ್ತಿರುವ ಬಂಡೆ ಯಾಕೋ ತನ್ನ ಕ್ರಿಯೆಯನ್ನು ನಿಲ್ಲಿಸಿತು. ಆದರೂ ಅದನ್ನೇ ಸುಮಾರು ಹೊತ್ತು ನಿರೀಕ್ಷೆ ಮಾಡಿ, ಇನ್ನೇನೂ ಅಪಾಯವಿಲ್ಲ ಎಂದು ಖಾತ್ರಿ ಮಾಡಿ ನಮ್ಮನ್ನು ಹೋಗಲು ಬಿಟ್ಟರು. ನಾವು ಅಲ್ಲಿನ ಘಡ್ವಾಲ್ ಶ್ರೀನಗರ ದಾಟಿ ದೇವಪ್ರಯಾಗ ತಲುಪಿದೆವು. ಅದಾಗಲೇ ಕತ್ತಲಾಗಿತ್ತು. ಕೆಳಗೆ ಹೋಗಲಿಲ್ಲ. ಮೇಲಿಂದಲೇ ನಾವು ಭಾಗೀರಥಿ ಮತ್ತು ಅಲಕನಂದಾ ಸಂಗಮವನ್ನು ನೋಡಿದೆವು.

 ಮುಂದೆ ರಾತ್ರಿ ಋಶಿಕೇಶ ತಲುಪಿ ಅಲ್ಲಿನ ಗಂಗಾ ಘಾಟ್ ನಲ್ಲಿ ಇಳಿದು ವಂದಿಸಿ ವಾಪಾಸು ಹೊರಟೆವು. ಇಲ್ಲಿಂದ ನೇರ ದೆಹಲಿಗೆ, ಸುಮಾರು 230 ಕಿ.ಮಿ. ಪ್ರಯಾಣ.

 ಬೆಳಗ್ಗೆ 7ಘಂಟೆಗೆ ದೆಹಲಿಯ ಒಂದು ಹೋಟೆಲ್ ನಲ್ಲಿ ನಮಗೆ ರೂಮ್ ಬುಕ್ ಆಗಿತ್ತು. ಆ ದಿನ ಮತ್ತು ಮರುದಿನ ಮಧ್ಯಾಹ್ನದ ವರೆಗೆ ದೆಹಲಿ ವೀಕ್ಷಣೆ.


 ನಾವು ಇಲ್ಲಿ ಬಿರ್ಲಾ ಮಂದಿರ ಮತ್ತು ಅಕ್ಷರಧಾಮ ನೋಡಿದೆವು. ಮರುದಿನ ಕರೋಲ್ ಭಾಗ್ ನಲ್ಲಿ ಶೋಪಿಂಗ್ ಮಾಡಿದೆವು. ಮಧ್ಯಾಹ್ನದ ಊಟ ಮಾಡಿ ನಮ್ಮ ಎಲ್ಲಾ ಬ್ಯಾಗ್ ಗಾಡಿಯಲ್ಲಿ ಇರಿಸಿ   ದೆಹಲಿಗೆ ಗುಡ್ ಬೈ ಹೇಳಿದೆವು. ಕುಮಾರ್ ಮತ್ತು ಹೆಚ್ಚಿನವರು ದೆಹಲಿಯಲ್ಲೇ ಉಳಿದು ಮರುದಿನ ಆಗ್ರಾ, ಮಥುರಾ ಕಾಶಿ ಅಲಹಾಬಾದ್ ನೋಡಿ ಅಲ್ಲಿಂದಲೇ ವಿಮಾನದಲ್ಲಿ ಬರುವವರಿದ್ದರು

 ನಾವು ಸೀದಾ ಇಂದಿರಾ ಗಾಂಧಿ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಗೆ ಬಂದೆವು.

 ನಮ್ಮ ಏರ್ ಇಂಡಿಯಾ ವಿಮಾನವು 8 ಘಂಟೆಗೆ ಹೊರಡುವ ಬದಲಿಗೆ 10 ಕ್ಕೆ ಹೊರಟು ರಾತ್ರಿ 12.30ಕ್ಕೆ ಬೆಂಗಳೂರಿಗೆ ತಲುಪಿತು. ಟ್ಯಾಕ್ಸಿ ಮಾಡಿ ಮನೆಗೆ ತಲುಪಿದೆವು. ಏನೊಂದು ತೊಂದರೆ, ಅನಾರೋಗ್ಯಗಳಿಲ್ಲದೆ ಕ್ಷೇಮವಾಗಿ ತಲುಪಿಸಿದ್ದಕ್ಕೆ ದೇವರಿಗೆ ವಂದಿಸಿದೆವು.
                
ಈ ಲೇಖನ ಮಾಲೆಯನ್ನು, ನಮ್ಮ ಚಾರಣ ಮತ್ತು ಪ್ರವಾಸಗಳಲ್ಲಿ ಒಡನಾಡಿಯಾಗಿದ್ದು ಅಕಾಲದಲ್ಲಿ ನಮ್ಮನ್ನು ಅಗಲಿದ ಶ್ರುತಿಯ ನೆನಪಿಗಾಗಿ ಅರ್ಪಿಸಿದ್ದೇನೆ.

1 comment: