Thursday, 28 May 2020

Trichinapalli


ತಿರುಚಿನಾಪಳ್ಳಿ

ತಂಜಾವೂರಿನಿಂದ ತಿರುಚಿನಾಪಳ್ಳಿಗೆ ಸುಮಾರು 57 ಕಿ.ಮಿ. ದೂರ ಅಂದರೆ 1 ½ ಘಂಟೆ ಪ್ರಯಾಣ. ರಸ್ತೆ ಚೆನ್ನಾಗಿತ್ತು. ತಂಜಾವೂರಿನ ಬಗ್ಗೆ ಮಾತಾಡುತ್ತಾ ಸಾಗಿದ್ದೆವು. ತ್ರಿಚ್ಚಿ ಬಂದೇಬಿಟ್ಟಿತು. ಪಟ್ಟಣ ಪ್ರವೇಶ ಮಾಡುವಷ್ಟರಲ್ಲೇ ಅಲ್ಲಿರುವ ರೋಕ್ ಫೋರ್ಟ್ ದೇವಾಲಯ ಕಾಣುತ್ತದೆ.

ಉನ್ನತವಾದ ಬಂಡೆಯ ಮೇಲೊಂದು ಗುಡಿ. ಅಲ್ಲಿ ವಿನಾಯಕ ದೇವಸ್ತಾನವಿದೆ. ಅದರ ಪ್ರವೇಶ ದ್ವಾರ ಅರಸುತ್ತಾ ಸ್ವಲ್ಪ ಸಂದು ಗೊಂದಿನಲ್ಲಿ ಅಲೆದಾಡಿದೆವು.

 ಕೊನೆಗೆ ಅಲ್ಲಿಗೆ ಹೋಗುವ ಬಾಗಿಲು ಸಿಕ್ಕಿತು. ಮೊದಲು ಒಂದು ಕಾಫಿ ಕುಡಿದು ಆಮೇಲೆ ಮೇಲೆ ಹತ್ತಲಾರಂಭಿಸಿದೆವು. ಕೆಲ ಕಟ್ಟಡಗಳ ಸಂದಿಯಲ್ಲಿ ನಿರ್ಮಿಸಿದ ಪಾವಟಿಗೆ ಹತ್ತಿ ಕೊನೆಗೆ ಆ ಬಂಡೆಯ ಬುಡಕ್ಕೆ ತಲುಪಿದೆವು. ಇನ್ನು ಬಂಡೆ ಹತ್ತಬೇಕು. ಇಲ್ಲಿ ಮೆಟ್ಟಲುಗಳನ್ನು ಕೆತ್ತಿದ್ದಾರೆ. ಎರಡೂ ಪಕ್ಕ ಕಬ್ಬಿಣದ ರೈಲಿಂಗ್ ಹಾಕಿದ್ದಾರೆ.

 ಮೆಲೆ ಏರಿದಂತೆಲ್ಲಾ ತ್ರಿಚ್ಚಿಯ ವಿಹಂಗಮ ನೋಟ ಕಾಣುತ್ತದೆ. ದೂರದಲ್ಲಿ ಕಾವೇರಿ ನದಿ, ಶ್ರೀರಂಗಂ ದೇವಾಲಯ ಅದರ ಸುತ್ತಲೂ ಇರುವ ಪ್ರಾಕಾರ ಮತ್ತು ಗೋಪುರಗಳು ಕಾಣುತ್ತವೆ.

ಇಡೀ ಪಟ್ಟಣ ಕಾಣುತ್ತದೆ. ನಾವು ಮೇಲೆ ಹೋಗಿ ವಿನಾಯಕ ದೇವರನ್ನು ನೋಡಿ ಅಲ್ಲಿ ಸ್ವಲ್ಪ ಹೊತ್ತು ಕುಳಿತೆವು. ನಂತರ ಇಳಿದು ಬಂದು ಶ್ರೀರಂಗಂ ಗೆ ತಲುಪಿದೆವು. 

ಇದೊಂದು ದ್ವೀಪ. ಕಾವೇರಿ ನದಿ ಮತ್ತು ಕೊಲ್ಲಿಡಾಂ ನದಿಗಳು ಶ್ರೀರಂಗಂ ಅನ್ನು ಒಂದು ದ್ವೀಪವನ್ನಾಗಿಸಿದೆ. ಇದೊಂದು ವೈಷ್ಣವ ಪ್ರಪಂಚ. ಬಹಳ ಪುರಾತನ ಎಂದರೆ ಕ್ರಿಸ್ತ ಪೂರ್ವ 2 ನೇ ಶತಮಾನದಿಂದಲೂ ಈ ದೇವಾಲಯವಿತ್ತು.

 ಕ್ರಿಸ್ತ ಶಕ 2 ನೇ ಶತಮಾನದಲ್ಲಿ ಚೋಳ ರಾಜ ಕರಿಕಾಲ ಚೋಳನು ಇದನ್ನು ಬಹಳ ಅಭಿವೃದ್ದಿಪಡಿಸಿದನು. ಗೋಪುರಗಳನ್ನು ಮತ್ತು ಸುತ್ತಲಿನ ಪ್ರಾಕಾರಗಳನ್ನು ನಿರ್ಮಿಸಿದನು.ನಂತರ ಬಂದ ಪಲ್ಲವರು,ಪಾಂಡ್ಯರು ವಿಜಯನಗರದರಸರು ಮರಾಠ ನಾಯಕರು ಎಲ್ಲರೂ ಇಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇಲ್ಲಿ 7 ಪ್ರಾಕಾರಗಳೂ 21 ಗೋಪುರಗಳೂ ಇವೆ. ಒಟ್ಟು 156 ಎಕರೆ ಜಾಗದಲ್ಲಿ ದೇವಾಲಯ ಸಮುಚ್ಚಯವಿದೆ. ಇದು ರಾಮಾನುಜಾಚಾರ್ಯರ ಕಾರ್ಯ ಕ್ಷೇತ್ರ ವಾಗಿತ್ತು. ನಾವು ಅಲ್ಲೇ ಸ್ವಲ್ಪ ದೂರದಲ್ಲಿ ಕಾರ್ ಪಾರ್ಕ್ ಮಾಡಿ ಮುಖ್ಯ ದ್ವಾರದಲ್ಲಿ ಒಳ ಹೋದೆವು. ಮುಖ್ಯ ಗೋಪುರ ಬಿಳಿ ಬಣ್ಣ ಹಚ್ಚಿದ್ದಾಗಿದೆ. ಆದರೆ ಅದರ ಎದುರುಗಡೆ ಗೋಜಲು ಗೋಜಲಾಗಿರುವ ವಿದ್ಯುತ್ ವೈರ್ ಗಳು ಬಹಳ ಅಸಹ್ಯ ನೋಟ ಬೀರುತಿದ್ದವು. ಇದು ವಿದ್ಯುತ್ ಇಲಾಖೆಯ ಕೊಡುಗೆ.ಗೋಪುರವು ಭವ್ಯವಾಗಿದ್ದು 240 ಅಡಿ ಎತ್ತರವಾಗಿದೆ.
 ಇನ್ನೂ ಬಾಗಿಲು ತೆರೆದಿರಲಿಲ್ಲ. ಒಳಗಡೆ ಬಹಳ ರಶ್ ಇತ್ತು. ನಮ್ಮವರನ್ನು ಅಲ್ಲೇ ಕುಳಿತಿರಲು ಹೇಳಿ ನಾನು ಮತ್ತು ಮುರಳಿ ರೂಮ್ ಹುಡುಕಲು ಹೋದೆವು. ಅಲ್ಲಿ ಒಂದು ಅಂಗಡಿಯಲ್ಲಿ ವಿಚಾರಿಸಲಾಗಿ ಇಲ್ಲೇ ಪಕ್ಕದಲ್ಲಿ ಯಾವುದೋ ಒಂದು ಮಠದ ಗೆಸ್ಟ್ ಹೌಸ್ ಇದೆ ಅಲ್ಲಿ ವಿಚಾರಿಸಿ ಎಂದ. ಪಕ್ಕದಲ್ಲೇ ಇತ್ತು. ಅಲ್ಲಿ ನಾನು ತಮಿಳಿನಲ್ಲಿ ಮಾತಾಡಿ ವಿನಂತಿಸಿದೆ. ನಾಳೆ ಸಂಜೆಯವರೆಗೆ ಬೇಕಾದರೆ ರೂಮ್ ಕೊಡುವಾ ಎಂದ. ಮತ್ತೆ ಅದು ಬೇರೆಯವರಿಗೆ ರಿಜರ್ವ್ ಆಗಿದೆ ಎಂದ. ನಮಗೆ ನಾಳೆ ಬೆಳಗ್ಗಿನವರೆಗೆ ಮಾತ್ರ ಮತ್ತೆ ನಾವು ಹೊರಟುಹೋಗುತ್ತೇವೆ ಎಂದೆ. ಅಂತೂ ನನ್ನ ತಮಿಳು ಒಳ್ಳೆಯ ಫಲಕಾರಿಯಾಯಿತು. ಇಲ್ಲಿ ತಮಿಳುನಾಡಿನಲ್ಲಿ ಅವರ ಭಾಷೆ ಮಾತಾಡಿದರೆ ಯಾವ ಕೆಲಸವೂ ಸುಲಭ ಆಗುತ್ತದೆ ಅಂತ ನನ್ನ ಅನುಭವ. ಬೇಗ ಹೋಗಿ ಕಾರ್ ಅನ್ನು ಒಳಗಡೆ ಪಾರ್ಕ್ ಮಾಡಿ ಲಗ್ಗೇಜ್ ಗಳನ್ನು ರೂಂನಲ್ಲಿ ಇರಿಸಿ ನಾವಿಬ್ಬರೂ ದೇವಸ್ತಾನಕ್ಕೆ ಹೋಗಿ ನಮ್ಮವರನ್ನು ಕೂಡಿಕೊಂಡೆವು. ಉದ್ದದ ಸರದಿಯಲ್ಲಿ ನಿಂತು ರಂಗನಾಥನನ್ನು ದರ್ಶಿಸಿದೆವು. ಇದನ್ನು ಅಂತ್ಯರಂಗ ಎನ್ನುತ್ತಾರೆ. ಆದಿರಂಗ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿ ಮತ್ತು ಮಧ್ಯರಂಗವು ಶಿವನಸಮುದ್ರ ದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನವಾಗಿದೆ. ಕೆಲವರು ಈ ಮೂರೂ ದೇವಸ್ಥಾನಗಳನ್ನು ಒಂದೇದಿನದಲ್ಲಿ ದರ್ಶಿಸಿದರೆ ಬಹಳ ಶ್ರೇಷ್ಟ ಎಂತ ನಂಬುತ್ತಾರೆ. ಈ ಮೂರೂ ರಂಗಗಳು ಕಾವೇರಿ ನದಿಯ ಹರಿವಿನಿಂದಾದ ದ್ವೀಪಗಳಲ್ಲಿರುವುದು ವಿಶೇಷ.
ಪಲ್ಲಕಿ ಉತ್ಸವ ರಾತ್ರಿಯ ಪೂಜೆ ನೋಡಿಕೊಂಡು ಸ್ವಲ್ಪ ಹೊಟ್ಟೆ ತುಂಬಿಸಿದೆವು. ತಮಿಳುನಾಡಿನಲ್ಲಿ ರಾತ್ರಿ ಅನ್ನದ ಊಟ ಎಲ್ಲೂ ಸಿಗಲಾರದು. ಹಾಗಾಗಿ ದೋಸೆ ತಿಂದೆವು. ರೂಮಿನಲ್ಲಿದ್ದ ಮಾವಿನ ಹಣ್ಣು ನಮಗಾಗಿ ಕಾದಿತ್ತು. ಮಲಗಿ ನಿದ್ರಿಸಿದೆವು. ಮರುದಿನ ಬೆಳಗ್ಗೆ ಬೇಗನೇ ಎದ್ದು ಮತ್ತೆ ದೇವರ ದರ್ಷನಕ್ಕೆ ಹೋದೆವು, ಅಲ್ಲಿ ಅಭಿಶೇಕ ನಡೆಯುತಿತ್ತು. ಈಗ ಏನೂ ರಶ್ ಇರಲಿಲ್ಲ. ಆ ಮೇಲೆ ಓಳಗಡೆಗೆ ಹಸು ಕರು, ಕುದುರೆ ಮತ್ತು ಆನೆ ಬಂದವು. ಎಲ್ಲವೂ ಅಲ್ಲಿನ ಬೆಳಗ್ಗಿನ ಸಂಪ್ರದಾಯ. ಪೂಜೆ ನಡೆಯಿತು. ನಮಗೆ ಇದನ್ನೆಲ್ಲಾ ನೋಡುವ ಭಾಗ್ಯ ದೊರೆಯಿತು. ವಿಶೇಷವಾದ ಪ್ರಸಾಧವೂ ದೊರೆಯಿತು. ನಂತರ ಬೆಳಗ್ಗಿನ ತಿಂಡಿ ತಿಂದು ಅಲ್ಲಿಂದ ಹೊರಟೆವು
ಇಲ್ಲಿ ಇನ್ನೂ ಜಂಬುಕೇಶ್ವರ ಮತ್ತು ಅಖಿಲಾಂಡೇಶ್ವರಿ ದೇವಾಲಯಗಳಿವೆಯಂತೆ. ಅಲ್ಲಿಗೆ ಹೋಗಲಿಲ್ಲ. ನಮಗೆ ಊರಿಗೆ ತಲುಪುವ ಆತುರ. ಮೊದಲಿಗೆ ಸೇಲಂ ನಂತರ ಬೆಂಗಳೂರಿಗೆ ತಲುಪಬೇಕು.
ಇಲ್ಲಿಂದ ಸೇಲಂಗೆ 133 ಕಿ.ಮಿ. ಸಾಗಬೇಕು. ನೇರ ರಸ್ತೆ. ಸೇಲಮ್ಮಿನ ಬೈ ಪಾಸ್ ಸಿಕ್ಕಿತು.

 ನಾವು ಅದರಲ್ಲಿ ನೇರ ಹೋದೆವು. ಆಗ ಯೆರ್ಕ್ಕಾಡ್ ಗೆ ಹೋಗುವ ತಿರುವು ಬಂತು. ಅದನ್ನು ನೋಡಿಬಿಡುವಾ ಎಂಬ ಆಸೆ ಆಯಿತು. ಇದು ಒಂದು ಸುಖವಾಸ ಸ್ಥಳ. ಸುಮಾರು ಏರು ದಾರಿ. 2 ಪಕ್ಕದಲ್ಲಿ ದಟ್ಟ ಕಾಡು. ಬದಿಯಲ್ಲಿ ತುಂಬಾ ಕೋತಿಗಳು ಕಾಣ ಸಿಕ್ಕಿದವು.

 ಸಚಿನ್ ಗೆ ಅಲ್ಲಿ ಇಳಿಯುವ ಆಸೆ. ಸುಮಾರು ಮೇಲೆ ಹೋದಂತೆಲ್ಲಾ ಮಂಜು ಮುಸುಕಲು ಆರಂಭ. ಮುಂದೆ ಏನೇನೂ ಕಾಣದ ಹಾಗೆ ಮಂಜು ಮುಸುಕಿತು.




 ಇನ್ನೂ ಮೇಲೆ ಹೊಗಬೇಕು. ಏನು ಮಾಡೋಣ ಎಂತ ಗಾಡಿ ನಿಲ್ಲಿಸಿ ಚರ್ಚೆ ಮಾಡಿದೆವು. ಅಷ್ಟರಲ್ಲಿ ಒಬ್ಬ ಡ್ರೈವರ್ ನಮ್ಮಲ್ಲಿಗೆ ಬಂದು ನಿಮ್ಮಿಂದ ಗಾಡಿ ಮೇಲೆ ಕೊಂಡೊಯ್ಯಲಾರಿರಿ, ಬೇಕಾದರೆ ಆತನೇ ಬಂದು ಡ್ರೈವ್ ಮಾಡುತ್ತೇನೆ ಎಂದ. ಮೊದಲೇ ಕಾರ್ ನಲ್ಲಿ ಜಾಗವಿಲ್ಲ ನಮಗೆ ಇಷ್ಟವೂ ಇರಲಿಲ್ಲ. ನಾವೇ ನಿಧಾನವಾಗಿ ಹೋಗೋಣ ಎಂತ ಮುಂದುವರಿದೆವು. ಕಾರ್ ನ ಎಲ್ಲಾ ಲೈಟ್ ಗಳನ್ನು ಹಾಕಿದೆವು. ಹೋರ್ನ್ ಬಾರಿಸುತ್ತಾ ನಿಧಾನವಾಗಿ ಮೇಲೆ ಹೋದೆವು. ನಾನು ಎಡಗಡೆ ರಸ್ತೆಯನ್ನು ನೋಡುತಿದ್ದೆ. ಕಾರ್ ದಾಮಾರು ರಸ್ತೆ ಬಿಟ್ಟು ಕೆಳಗೆ ಇಳಿಯದಂತೆ ಮುರಳಿಗೆ ಎಚ್ಚರಿಸುತಿದ್ದೆ. ಅಂತೂ ಮೇಲೆ ಬಂದೇಬಿಟ್ಟೆವು. ಅಲ್ಲಿ ನೋಡುವುದೇನು ! ಎಲ್ಲಾ ಮಂಜುಮಯ ಏನೇನೂ ಕಾಣುತಿಲ್ಲ. ಹೂದೋಟ, ಲೇಕ್ ಮತ್ತು ಕಣಿವೆಗಳೆಲ್ಲಾ ಮಂಗ ಮಾಯ. ಬರೀ ಬಿಳಿಯ ಮೋಡ ಮಾತ್ರ ನಮಗೆ ಕಂಡದ್ದು.


 ಅಲ್ಲೇ ಒಂದು ಹಳೆಯ ಗುಡಿ ಇತ್ತು ಅಲ್ಲಿ ನಿಂತೆವು. ಸ್ವಲ್ಪ ಬೆಂಕಿ ಮಾಡಿ ಚಳಿ ಕಾಯಿಸಿದೆವು.

 ವಾಪಾಸು ಹೊರಟೆವು. ಸ್ವಲ್ಪ ಮುಂದೆ ಹೋಗುವಾಗ ರಸ್ತೆಯ ಬದಿಯಲ್ಲಿ ಒಂದು ಗೂಡಂಗಡಿ! ಅಲ್ಲಿ ಒಬ್ಬ ಮಹಿಳೆ ಚಹಾ ಮಾಡುತಿದ್ದಳು. ಅವಳು ಮೆಣಸಿನಕಾಯಿಯ ಬೋಂಡಾ ಮಾಡುವ ಸಿದ್ದತೆ ನಡೆಸಿದ್ದಳು. ಅವಳೊಡನೆ ಹೇಳಿ ಬೋಂಡಾ ಮಾಡಲು ಹೇಳಿದೆವು. ಬಿಸಿ ಬಿಸಿ ಬೋಂಡಾ ತಯಾರಾಯಿತು. ಅವಳಿಗೆ ಸಹಾಯಕನಾಗಿ ಮುರಳಿ ಕೂಡಾ ಬೋಂಡಾ ಕರಿಯಲು ಸಹಾಯ ಮಾಡಿದ.


 ಒಟ್ಟು 150 ರುಪಾಯಿಯ ವ್ಯಾಪಾರ ಮಾಡಿದೆವು. ಚಹಾ ಕುಡಿದು ಹೊಸ ಹುಮ್ಮಸ್ಸಿನಿಂದ ಕೆಳಗೆ ಇಳಿದೆವು.  ಮುಖ್ಯ ರಸ್ತೆಯಲ್ಲಿ ಸಾಗಿದೆವು. ಇನ್ನು ಬೆಂಗಳೂರಿಗೆ 230 ಕಿ.ಮಿ. ಹೋಗಬೇಕು. ನಮ್ಮ ಗಾಡಿ ಗ್ಯಾಸ್ ನಲ್ಲಿ ಓಡುತಿತ್ತು. ಅದರಲ್ಲಿರುವ ಗ್ಯಾಸ್ ಸಿಲಿಂಡರ್ ಖಾಲಿ ಆಯಿತು. ಈಗ ಪೆಟ್ರೋಲ್ ನಲ್ಲಿ ಓಡಿಸಬೇಕಾಯ್ತು.

 ಮುಂದೆ ಸಿಕ್ಕಿದ ಒಂದು ಊರಲ್ಲಿ ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡುವ ಅಂಗಡಿ ಕಂಡಿತು. ಅಲ್ಲಿಗೆ ಹೋಗಿ ನನ್ನ ತಮಿಳು ಭಾಷಾ ಪ್ರಯೋಗ ಮಾಡಿದೆ. ಅಂತೂ ಇಲ್ಲಿಯೂ ಗೆದ್ದೆವು. ಒಂದು ಫುಲ್ ಸಿಲಿಂಡರ್ ಸಿಕ್ಕಿತು. ಅದನ್ನು ಜೋಡಿಸಿ ಬೆಂಗಳೂರಿಗೆ ತಲುಪಿದೆವು. ರಾತ್ರಿ 8 ಘಂಟೆಗೆ ಮನೆಗೆ ಬಂದೆವು. ರಾತ್ರಿ ಊಟಕ್ಕೆ ಗಂಜಿ ತುಪ್ಪ  ಮತ್ತು ಉಪ್ಪಿನಕಾಯಿ, ಚಟ್ನಿಪುಡಿ. ಗಡದ್ದಾಗಿ ಊಟ ಮಾಡಿ ಬಿದ್ದುಕೊಂಡೆವು. ನಿದ್ದೆಯಲ್ಲಿ ನಮ್ಮ ಪ್ರಯಾಣದ ತುಣುಕುಗಳು ಆಗಾಗ ಕನಸಾಗಿ ಬರುತಿತ್ತು. ಒಂದು ಮರೆಯಲಾರದ ಅನುಭವ.

No comments:

Post a Comment