Friday, 5 March 2010

ಕುದುರೆಮುಖ ಚಾರಣ

ಸುಮಾರು 20 ವರ್ಷಗಳ ಹಿಂದಿನ ನಮ್ಮ ಸಾಹಸ ಯಾತ್ರೆಯ ಅನುಭವವನ್ನು ಈಗ ಮತ್ತೊಮ್ಮೆ ಹಂಚಿಕೊಳ್ಳೋಣ ಎಂದೆನಿಸಿತು.
ನಾವು ಅಣ್ಣ ತಮ್ಮಂದಿರು, ಭಾವಂದಿರು ಮತ್ತು 2-3 ಮಂದಿ ಗೆಳೆಯರು ಇಷ್ಟೇ ನಮ್ಮ ಚಾರಣ ತಂಡ. ಈ ತಂಡಕ್ಕೆ ನನ್ನ ಮಗಳು ಸೌಮ್ಯ ಕೂಡ ಸೇರ್ಪಡೆಯಾಗಿದ್ದಳು. ಊರಿಗೆ ಹೋಗಿದ್ದಾಗ, ಎಲ್ಲರೂ ಕೂಡಿದ್ದಾಗ ಒಂದು ಚಾರಣ ಮಾಡೋಣ ಎಂಬ ತೀರ್ಮಾನ ವಾಯಿತು. ಸರಿ ಈ ಸಲ ಕುದುರೆಮುಖವನ್ನೇರೋಣ ಎಂದು ತೀರ್ಮಾನಿಸಿದೆವು. ಮರುದಿನ ಹೇಗೂ ಶನಿವಾರ ಅನುಕೂಲವಾಗಿದೆ ಎಂದು ಲಗುಬಗನೆ ಎಲ್ಲಾ ತಯಾರಿ ನಡೆಸಿದೆವು. ಪೇಟೆಗೆ ಹೋಗಿ ಬೇಕಾದ ಎಲ್ಲಾ ಅವಶ್ಯ ವಸ್ತುಗಳು, ಅಗತ್ಯವಾದ ಕೆಲವು ಪ್ರಥಮ ಚಿಕಿತ್ಸಾ ಔಷಧಗಳು, ಕುರುಕಲು ತಿಂಡಿ, ಮ್ಯಾಗಿ ನೂಡಲ್ಸ್, ಹಣ್ಣುಗಳು ಎಲ್ಲಾ ಖರೀದಿಸಿ ತಂದದ್ದಾಯಿತು.  ಮರುದಿನ ಬೆಳಗ್ಗಿನ ಬಸ್ಸಿನಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ಹೋಗಿ ಆಲ್ಲಿಂದ ಮುಂದೆ ಹೋಗೋಣ ಎಂದುಕೊಂಡೆವು.
 ನಮಗೆ ಬೇಕಾದ ಚಪಾತಿಗಳನ್ನು ರಾತ್ರಿಯೇ ಮಾಡಿದರೆ ಅನುಕೂಲ  ಎಂದು ಎಲ್ಲರೂ ಸೇರಿ ಮನೆಯ ಹಿಂದಿನ ಅಂಗಳದಲ್ಲಿ, ದೊಡ್ಡ ಒಲೆಯಲ್ಲಿ ಚಪಾತಿ ಬೇಯಿಸುವ ಕಾರ್ಯದಲ್ಲಿ ತೊಡಗಿದ್ದೆವು. ಅಮ್ಮ, ಅಣ್ಣ (ಅಪ್ಪನನ್ನು ನಾವು ಅಣ್ಣ ಅನ್ನುತ್ತೇವೆ) ತಂಗಿಯರು ಎಲ್ಲಾ ಸೇರಿದ್ದರು. ಇದ್ದಕಿದ್ದ ಹಾಗೆ ಅಣ್ಣನಿಗೆ ಒಂದು ಹುರುಪು ಬಂತು. ನಾನು ಕೂಡ ನಿಮ್ಮ ಜೊತೆ ಬರಬಹುದಾ ಎಂದು ನನ್ನನ್ನು ಕೇಳಿದರು. ಅವರಿಗೆ ಆಗ 65 ರ ಪ್ರಾಯ! ಆದರೆ ನನಗಿಂತಲೂ ಆರೋಗ್ಯವಂತರಾಗಿದ್ದರು. ನನಗಂತೂ ಆಶ್ಚರ್ಯ! ಯಾಕೆಂದರೆ ಅವರು ಹಾಗೆಲ್ಲಾ ಹೊರಡುವವರೇ ಅಲ್ಲ ಮತ್ತು ಅವರಿಗೆ ಪುರುಸೊತ್ತೇ ಇರುತ್ತಿರಲಿಲ್ಲ. ಎಲ್ಲರೂ ಕೂಡಲೇ ಅವರನ್ನು ನಮ್ಮೊಂದಿಗೆ ಬರಲು ಸಂಭ್ರಮದಿಂದ ಆಹ್ವಾನಿಸಿದೆವು. ಆಗ ಅಲ್ಲೇ ಕುಳಿತಿದ್ದ ನನ್ನ ತಂಗಿಯ ಮಗಳು ಪೂಜಾ ಕೂಡ ನಾನೂ ಬರುತ್ತೇನೆ ಎಂದು ದುಂಬಾಲು ಬಿದ್ದಳು. ಸರಿ ಆದರೆ ತುಂಬಾ ನಡೆಯಲು ಇದೆ, ಅಲ್ಲಿ ಆಟೋ, ಬಸ್ಸು ಏನೂ ಸಿಗುವುದಿಲ್ಲ, ಅದನ್ನೆಲ್ಲಾ ಮರೆತು, ನಡೆಯುವಂತಿದ್ದರೆ ಬಾ ಎಂದೆವು. ಎಲ್ಲದಕ್ಕೂ ಒಪ್ಪಿಕೊಂಡು ನನ್ನ ಮಗಳು ಸೌಮ್ಯ ಮತ್ತು ಅವಳು ತಮ್ಮ ಬಟ್ಟೆ, ಶೂ, ಟೊಪ್ಪಿ, ಎಲ್ಲಾ ಜೋಡಿಸಲು ಒಳಗೆ ಓಡಿದರು. ಅಣ್ಣನಿಗೂ ಒಳ್ಳೆಯ ನಿದ್ರೆ ಮಾಡಲು ಕಳಿಸಿದೆವು. ಚಪಾತಿ, ಚಟ್ನಿ ಎಲ್ಲಾ ಮಾಡಿ ಜೋಡಿಸಿಟ್ಟು ನಾವೂ ಮಲಗಿದೆವು.
ಮುಂಜಾನೆ ಬೇಗ ಎದ್ದು ಸ್ನಾನ ಎಲ್ಲಾ ಮುಗಿಸಿ ಹೊಟ್ಟೆ ತುಂಬಾ ತಿಂಡಿ ತಿಂದು ಮೊದಲ ಬಸ್ಸಿಗೇ ಮಂಗಳೂರಿಗೆ ಹೊರಟೆವು. ನಮ್ಮ ತಂಡದಲ್ಲಿ ಅಣ್ಣ, ನಾನು, ರಾಜ, ಶ್ರೀಹರಿ, ರವಿ, ನಮ್ಮ ಭಾವ ಸುಬ್ರಹ್ಮಣ್ಯ ಮತ್ತು K.B, ಸೌಮ್ಯ ಮತ್ತು ಪೂಜಾ ಒಟ್ಟು ಒಂಬತ್ತು ಜನ. ಒಂದು ಗಂಟೆಯ ಪ್ರಯಾಣದಲ್ಲಿ ಮಂಗಳೂರಿಗೆ ತಲುಪಿದೆವು, ಆಲ್ಲಿಂದ ಮುಂದೆ B.C.ರೋಡ್ ವರೆಗೆ ಕಾರಿನಲ್ಲಿ ಪ್ರಯಾಣ. ಮುಂದೆ ಬೆಳ್ತಂಗಡಿ, ನಾವೂರು ಚಕ್ ಪೋಸ್ಟ್ ವರೆಗೆ ಜೀಪು  ಪ್ರಯಾಣ. ಅಂತೂ ಕಾಡಿನ ಸನಿಹಕ್ಕೆ ಬಂದೆವು. ಸ್ವಲ್ಪ ದೂರದವರೆಗೆ ಮಾರ್ಗವಿತ್ತು. ನಂತರ ಪಕ್ಕದಲ್ಲೇ ಮೇಲಕ್ಕೆ ಕಾಡಿಗೆ ಹೋಗುವ ಒಂದು ಕಾಲ್ದಾರಿ ಕಾಣಿಸಿತು, ಅದರಲ್ಲೇ ಏರಿ ಮೇಲೆ ಹತ್ತಿದೆವು. ನಿಜ ಹೇಳಬೇಕೆಂದರೆ ನಮಗೆ ಕುದುರೆಮುಖದ ಬಗ್ಗೆ ಏನೂ ಗೊತ್ತಿರಲಿಲ್ಲ, ದಾರಿಯೂ ತಿಳಿದಿರಲಿಲ್ಲ. ಏನೋ ಒಂದು ಹುಚ್ಚು ಧೈರ್ಯದಲ್ಲಿ   ಹೊರಟಿದ್ದೆವು. ಆ ಕಾಲದಲ್ಲಿ ಕಾಡಿಗೆ ಹೋಗಲು ಫಾರೆಸ್ಟ್ ನವರ ಅನುಮತಿ, ಎಂಟ್ರಿ ಫೀಸು  ಏನೂ ಬೇಕಾಗಿರಲಿಲ್ಲ. ನಿಧಾನಗತಿಯಲ್ಲಿ ಹೆಜ್ಜೆ ಹಾಕುತ್ತಾ ಮೆಲೇರುತಿದ್ದೆವು. ಕಾಡು ಕೂಡಾ ದಟ್ಟವಾಗತೊಡಗಿತ್ತು. ಏರು ದಾರಿ ಮುಗಿಯುತ್ತಲೇ ಇಲ್ಲ. ಅಲ್ಲಲ್ಲಿ ನಿಂತು, ಕೂತು ಮುಂದೆ ಸಾಗಿದೆವು. ಇಬ್ಬರು ಮಕ್ಕಳು ಮತ್ತು ಅಣ್ಣ, ಬಹಳ ಉತ್ಸಾಹಿಗಳಾಗಿ ಮುಂದೆ ನಡೆಯುತಿದ್ದರು. ಅವರನ್ನು ನೋಡಿ ನಾವು ಸಹಾ ಮುಂದೊತ್ತಿದೆವು. ಹಸಿವು ಜೋರಾಯಿತು, ಬುತ್ತಿ ಬಿಚ್ಚಿದೆವು, ಆಹಾ ಏನು ರುಚಿ! ತಿಂಡಿ  ತಿಂದು ಸ್ವಲ್ಪ ಹೊತ್ತು ವಿಶ್ರಾಂತಿ. ಸಣ್ಣ ನಿದ್ದೆಯೂ ಆಯಿತು. ಕೆಲವರಿಗೆ ಆಗಲೇ ಕಾಲು ಎಲ್ಲಾ ನೋವು, ಮುಳ್ಳು ತರಚಿದ ಗಾಯ, ಅದಕ್ಕೆಲ್ಲಾ ಸ್ವಲ್ಪ ಚಿಕಿತ್ಸೆ, -ಮತ್ತೆ ಮುಂದೆ ಏರಿದೆವು.
--


--

ಸುಮಾರು ನಾಲ್ಕು ಗಂಟೆಗೆ ಸ್ವಲ್ಪ ಸಮತಲ ಜಾಗಕ್ಕೆ ಬಂದೆವು, ಸ್ಥಳ ಪರೀಕ್ಷಣೆ ನಡೆಸಿದಾಗ ಅಲ್ಲೇ, ಪಕ್ಕದಲ್ಲೇ ಕುಡಿಯಲು ಮತ್ತು ಸ್ನಾನಕ್ಕೆ ಬೇಕಾದಾಷ್ಟು ಶುದ್ಧ ನೀರಿನ ಹರಿವು ಕಾಣಿಸಿತು. ಇನ್ನು ಇವತ್ತಿಗೆ ನಡೆದದ್ದು ಸಾಕು ಇಲ್ಲೇ ರಾತ್ರಿಯ ಕ್ಯಾಂಪು ಮಾಡೋಣ ಎಂದದ್ದೆ ಸರಿ ಮಕ್ಕಳು ಅಲ್ಲಿ  ಕುಳಿತೇ ಬಿಟ್ಟರು. ಕೆಲವರು ಕಟ್ಟಿಗೆ ತರಲು ಹೋದರು, ಮಕ್ಕಳು ಮತ್ತು ಕೆಲವರು ಅಲ್ಲಿದ್ದ ಕಲ್ಲುಗಳನ್ನೆಲ್ಲ ದೂರ ಎಸೆದು ನೆಲಕ್ಕೆ ಹಸಿರು ಎಲೆ ಮತ್ತು ಹುಲ್ಲು ಕತ್ತರಿಸಿ ಹರವಿದರು ಮತ್ತು ಅದರ ಮೇಲೆ ಸುಮಾರು ದೊಡ್ಡದಾದ ಪ್ಲಾಸ್ಟಿಕ್ ಶೀಟನ್ನು ಹಾಸಿ ಅದರಮೇಲೆ ಎರಡು ಬೆಡ್ ಶೀಟ್ ಹರವಿದರು. ಅಷ್ಟರಲ್ಲಿ ಅಡಿಗೆ ಒಲೆಯೂ ತಯಾರಾಯಿತು, ಬಿಸಿ ಬಿಸಿ ಕಾಫಿಯೂ ಸಿಕ್ಕಿತು. ನೀರು ಹರಿಯುವಲ್ಲಿಗೆ ಹೋದೆವು, ಅಲ್ಲೇ  ಬಂಡೆಯಲ್ಲಿ ಒಂದು  ಬಕೀಟಿನಷ್ಟು  ದೊಡ್ಡ ಹಳ್ಳವಿತ್ತು, ಅದರಲ್ಲಿ ನೀರು ತುಂಬಿ ಮುಂದೆ ಹರಿಯುತಿತ್ತು. ಅಣ್ಣ ಸ್ನಾನಕ್ಕೆ ಇಳಿದೇ ಬಿಟ್ಟರು, ಮಗ್ ನಲ್ಲಿ ನೀರು ಮೊಗೆದು ಮಕ್ಕಳು ನಾವೆಲ್ಲಾ ಸ್ನಾನ ಮಾಡಿ ಆಯಾಸ ಪರಿಹಾರ ಮಾಡಿಕೊಂಡೆವು. ರಾತ್ರಿಯ ಅಡಿಗೆ ಆಗುತಿತ್ತು, ಅನ್ನ ಬೇಯುವಾಗಲೇ ಅದಕ್ಕೆ ಉಪ್ಪು, ಖಾರ, ಬೆಲ್ಲ, ಲಿಂಬೆ ಹಣ್ಣು, ಸಾಂಬಾರುಪುಡಿ, ಗರಂ ಮಸಾಲೆ ಎಲ್ಲಾ ಹಾಕಿ ಬೇಯಿಸುವುದು!(ಇದಕ್ಕೆ ನಾವು ಹುಗ್ಗಿ ಎನ್ನುತ್ತಿದ್ದೆವು) ರಾತ್ರಿ ಗೆ ಅದನ್ನು ತಿಂದು ಸ್ವಲ್ಪ ಮಲಗಿದೆವು.  ಒಂದೆಡೆ ಶಿಭಿರಾಗ್ನಿ ಉರಿಯುತ್ತಿತ್ತು. ರಾತ್ರಿ ಹತ್ತು ಗಂಟೆಯ ವೇಳೆಗೆ ಸರದಿ ಪ್ರಕಾರ ರಾತ್ರಿ ಪ್ರಹರೆ ಮಾಡಿದೆವು. ಕುದುರೆಮುಖ ಪ್ರದೇಶದಲ್ಲಿ ಕಾಡುಕೋಣಗಳೂ ಇತರ ಪ್ರಾಣಿಗಳು ಸಹಾ ಜಾಸ್ತಿ ಇವೆ ಎಂದು ಓದಿದ್ದೆವು. ರಾತ್ರಿ ಸ್ವಲ್ಪ ಮಳೆಯೂ ಹನಿಯಿತು. ಪ್ಲಾಸ್ಟಿಕ್ ಶೀಟ್ ಮೇಲೆ ಹೊದ್ದುಕೊಂಡೆವು. ಬೆಳಗಾಯಿತು ಬೇಗ ಬೇಗ ಎಲ್ಲಾ ಮುಗಿಸಿ ಮುಂದೆ ಹೊರಡಲು ತಯಾರು ಮಾಡಿದೆವು. ಬೆಳಗಿನ ತಿಂಡಿ, ಅವಲಕ್ಕಿ ಉಪ್ಪಿಟ್ಟು!
--

--

ಯಾವ ದಿಕ್ಕಿನಲ್ಲಿ  ಹೋಗಬೇಕು ಎಂಬುದರಲ್ಲಿ  ಸ್ವಲ್ಪ ಗಲಿಬಿಲಿ ಆಯಿತು. ಸ್ವಲ್ಪ ಮುಂದೆ  ಹೋಗಿ ನೋಡೋಣ ಎಂದು ಹೊರಟೆವು. ಪುಣ್ಯಕ್ಕೆ ನಮ್ಮ ಆಯ್ಕೆ ಸರಿಯಾಗಿತ್ತು. ಪರ್ವತಗಳ ಸಾಲು ಕಾಣಿಸಿತು ಹಾಗೆಯೇ ಸುಮಾರು ದೂರ ನಡೆದೆವು. ಬೆಳಗಿನ ತಂಗಾಳಿ, ಮಂಜು ಮುಸುಕಿದ ವಾತಾವರಣ, ಹುಲ್ಲಿನ ಮೇಲಿನ ಇಬ್ಬನಿ ಎಲ್ಲಾ ಮನಸ್ಸಿಗೆ ಮುದ ಕೊಡುತ್ತಿತ್ತು. ಮಕ್ಕಳು ಮತ್ತು ಅಣ್ಣ ಈ ಹೊಸ ಅನುಭವವನ್ನು ಬಹಳ ಮೆಚ್ಚಿದರು. ಮಕ್ಕಳಂತೂ ಜಿಂಕೆ ಮರಿಗಳ ಹಾಗೆ ಓಡಾಡುತಿದ್ದರು.
--

--
ದೂರದಲ್ಲಿ ಹಸಿರಾದ ಹೊಲಗಳು, ಒಂದು ಮನೆ, ಕೊಟ್ಟಿಗೆ ಎಲ್ಲಾ  ಕಾಣಿಸಿದವು. ಒಹ್! ಇದೇ ಸೈಮನ್ ಲೋಬೋ ಮನೆ ಇರಬೇಕು ಎಂದುಕೊಂಡೆವು.
ಇದರ ಬಗ್ಗೆ ಒಂದು ಲೇಖನ ಓದಿದ್ದೆವು. ಬ್ರಿಟಿಷರ ಅಡಿಗೆಯವನಾಗಿ ಅಲ್ಲಿಗೆ ಬಂದವನು ಅವರು ಹೋದ ಮೇಲೂ ಅಲ್ಲೇ ನೆಲಸಿ ಕೃಷಿ ಮಾಡಿಕೊಂಡು ತನ್ನದೇ ಆದ ಒಂದು ಲೋಕವನ್ನು ಸೃಷ್ಟಿಸಿದ್ದ! 
--

--

ಯಾರ ಹಂಗೂ ಇಲ್ಲದೆ ಒಬ್ಬಂಟಿಯಾಗಿ ಬದುಕಿ ಆಮೇಲೆ ಸಂಸಾರ ಬೆಳೆದು ಮಕ್ಕಳು ಮೊಮ್ಮಕ್ಕಳು ಎಲ್ಲಾ ಅಲ್ಲೇ ಬೆಳೆದರು. ಚಳಿ, ಗಾಳಿ, ಮಳೆ ಎಂತ ಯಾವುದನ್ನೂ ಲೆಕ್ಕಿಸದೆ ಬಾಳಿ ಬದುಕಿದ. ನಾವು ಮುಂದುವರಿದಂತೆ ಒಬ್ಬಾಕೆ ಹೆಂಗಸು ಕಾಣಸಿಕ್ಕಿದಳು. ಸೈಮನ್ ಲೋಬೋ ಎಲ್ಲಿದ್ದಾರೆ ಎಂದು ಕೇಳಿದೆವು. 'ಅಗೋ ಅಲ್ಲಿ ಮಲಗಿದ್ದಾರೆ' ಎಂತ ಅವನ ಸಮಾಧಿ ತೋರಿಸಿದಳು. ಆಕೆಯೊಂದಿಗೆ ಒಂದಿಷ್ಟು ಮಾತಾಡಿ ಕುದುರೆಮುಖದ ದಾರಿಯನ್ನು ಕೇಳಿಕೊಂಡು ಮುಂದೆ ನಡೆದೆವು. ದಾರಿಯುದ್ದಕ್ಕೂ ಪುಟ್ಟ ಕಾಲುವೆ ಮಾಡಿ ನೀರು ಒಸರುವ ಕಡೆಯಿಂದ ಎಲ್ಲಾ ತನ್ನ ಹೊಲದ ಕಡೆಗೆ ಹರಿದುಬರುವಂತೆ ಮಾಡಿದ್ದ ಲೋಬೋ. ಆದ್ದರಿಂದ ನಮಗೂ ನೀರು ತುಂಬಾ ದೂರದವರೆಗೂ ದೊರಕಿತ್ತು. ಎಷ್ಟು ದೂರ ನಡೆದರೂ ತಲುಪುತ್ತಿಲ್ಲ. ಬಿಸಿಲು ಸ್ವಲ್ಪ ಜೋರಾಗತೊಡಗಿತ್ತು. ಏರುತ್ತಾ ಹೋಗಬೇಕು ಆಮೇಲೆ ಸ್ವಲ್ಪ ಸಮತಟ್ಟು, ಮತ್ತೆ ಏರು ದಾರಿ, ಹೀಗೇ ಸಾಗಿತ್ತು ನಮ್ಮ ಪಯಣ. 
--
--
ದೂರದಲ್ಲಿ ಕುದುರೆಮುಖದ ತುದಿ ಕಾಣುತಿತ್ತು. ಅಲ್ಲಿಗೆ ಇನ್ನೂ ಎಷ್ಟು ನಡೆಯಬೇಕೆಂಬುದು ನಮಗೆ ತಿಳಿಯದು. ಅಲ್ಲಲ್ಲಿ ಇಳಿಜಾರು ಪ್ರದೇಶದಲ್ಲಿ ಶೋಲಾ ಅರಣ್ಯ ಸಿಗುತಿತ್ತು, ಅಲ್ಲಿ ನೀರು, ನೆರಳು ಎರಡೂ ದೊರಕಿ ನಮ್ಮ ಆಯಾಸವನ್ನು ಪರಿಹರಿಸುತಿತ್ತು. ಹಾಗೆ ಒಂದು ಶೋಲಾದಲ್ಲಿ ನಮಗೆ ಒಂದು ಬಾಳೆಯ ಹಿಂಡಲು ಕಾಣಿಸಿತು, ನೋಡುವಾಗ ಒಳ್ಳೆಯ ಹಣ್ಣಾದ ಬಾಳೆಯ ಗೊನೆ ತೂಗುತ್ತಿದೆ. ಇಬ್ಬರು ತಮ್ಮಂದಿರು ಅಲ್ಲಿಗೆ ಏರಿದರು, ಗೊನೆಯನ್ನು ಕಡಿದು ತಂದರು. ಹಳದಿ ಬಣ್ಣದ ಕದಳಿ ಬಾಳೆಹಣ್ಣು! ಆಹಾ! ಕೈ ಹಾಕಿ ಹಣ್ಣನ್ನು ಕಿತ್ತರು, ಸುಲಿದು ನೋಡಿದರೆ ಅದರೊಳಗೆ ಬಾಳೆಯ ಹಣ್ಣು ಇರಲಿಲ್ಲ ಬದಲಿಗೆ  ತುಂಬಾ ದೊಡ್ಡ ಬೀಜಗಳು ಮತ್ತು ಲೋಳೆಯಂತಹ ತಿರುಳು. ರುಚಿ ನೋಡಿದರೆ ಬರೇ ಸಪ್ಪೆ. ಅದಕ್ಕೇ  ಇರಬೇಕು ಅದನ್ನು ಮಂಗಗಳು ಸಹಾ ಮುಟ್ಟಿರಲಿಲ್ಲ. ಇಲ್ಲವಾದರೆ ಕಾಡಿನಲ್ಲಿ ಹಣ್ಣಾದ ಬಾಳೆಗೊನೆ ಉಳಿಯಲು ಶಕ್ಯವೇ?  ಅಷ್ಟೊಂದು ವಿಧದ ಕಾಡುಪ್ರಾಣಿಗಳ ಗಮನಕ್ಕೆ ಬಾರದೆ ಇರಲು ಸಾಧ್ಯವೇ? ನಾವದನ್ನು ಯೋಚಿಸಿರಲೇ ಇಲ್ಲ.  ನಮ್ಮ ಬೇಸ್ತುತನ ನೋಡಿ ಅವು ನಕ್ಕಿರಬಹುದು.
--
--
ಇನ್ನೂ ಸುಮಾರು 5-6 km. ಹೋಗಬೇಕು. ಎಲ್ಲರನ್ನು ಹುರಿದುಂಬಿಸುತ್ತಾ ಶ್ರೀಹರಿ ಮತ್ತು ರವಿ ನಮ್ಮನ್ನು  ಮುಂದಕ್ಕೆ  ಕರೆದೊಯ್ಯುತಿದ್ದರು. ಪೂಜಾ ತುಂಬಾ ಸುಸ್ತಾಗಿದ್ದಳು. ಅವಳನ್ನು ಪುಸಲಾಯಿಸಿ ಮುಂದೆ ಕೊಂಡುಹೋಗುತಿದ್ದರು. ಅಣ್ಣನಿಗೂ ಸ್ವಲ್ಪ ಆಯಾಸ ಕಂಡು ಬರುತಿತ್ತು.
--
--
ಸ್ವಲ್ಪ ವಿಶ್ರಮಿಸಿ ಮುಂದೆ ಹೋಗೋಣ ಎಂತ ಎಲ್ಲರೂ ಕುಳಿತೇಬಿಟ್ಟರು. ಬಿಸ್ಕತ್ತು ಲಿಂಬೆ ಶರಬತ್ತು ಕುಡಿದು ಹೊಸ ಉತ್ಸಾಹದಿಂದ ಮುಂದೆ ನಡೆದೆದೆವು.
--
--
ಕಣ್ಣಿಗೆ ಕಾಣುತಿದ್ದರು ಸಹಾ ನಡೆದಷ್ಟೂ ತಲುಪುತ್ತಿಲ್ಲ. ಪರ್ವತಗಳೇ ಹಾಗೆ, ಎಲ್ಲವೂ ಪ್ರಕೃತಿ ನಿರ್ಮಿತ ದಾರಿಗಳು. ಅದರಲ್ಲಿ  ಹೋದರೆ ಮಾತ್ರ ತುದಿ ಮುಟ್ಟಬಹುದು. ಇಲ್ಲವಾದರೆ ಏರಲು ಅಸಾಧ್ಯವಾದ ಶಿಖರ ಎದುರಾಗಬಹುದು. ಸರಿ  ಇಲ್ಲಿ ವರೆಗೆ  ಬಂದಾದ ಮೇಲೆ ವಾಪಾಸು ಹೋಗುವುದೆಂದರೆ ಹೇಗೆ ಅಲ್ಲವೇ?
--
--
ಕುದುರೆಮುಖ ಶಿಖರ ಹತ್ತಿರ ಬರುತಿದ್ದಂತೆ ಎಲ್ಲರ ಉತ್ಸಾಹವೂ ಇಮ್ಮಡಿಸಿತು. ಚಾರಣಿಗರು, ದನಗಾಹಿಗಳು ನಡೆದು ಒಂದು ದಾರಿ ಚೆನ್ನಾಗಿ ಮೂಡಿತ್ತು. ಅದರಲ್ಲೇ ಸಾಗಿದೆವು,ದಾರಿ ತಪ್ಪುವ ಭಯ ಈಗಿಲ್ಲ.
--
-- 
ಈಗ ಸುಮಾರು ನಡು ಮದ್ಯಾಹ್ನ, ಬಿಸಿಲು ಹೆಚ್ಚಿದ್ದರೂ ಪರ್ವತದ ಮೇಲಿನ ಬೀಸುಗಾಳಿ ನಮ್ಮನ್ನು ಕುದುರೆಮುಖದ ನೆತ್ತಿಗೆ ಆಹ್ವಾನಿಸುತಿತ್ತು. ಶಿಖರ ಹತ್ತಿರವಾಗುತಿದ್ದಂತೆ ಕಡಿದಾದ ಏರುದಾರಿ--ಅದನ್ನೇರಿದರೆ ಮುಗಿಯಿತು, ಅದನ್ನು ಜಯಿಸಿ ಕುದುರೆಯ ಬೆನ್ನಮೇಲೆ ಏರಿದೆವು. ನನ್ನ ಮಗಳು ಎಲ್ಲರಿಗಿಂತ ಮುಂದೆ ಇದ್ದವಳು ಒಮ್ಮೆಲೇ ಓಡಲು ಸುರುಮಾಡಿದಳು. ನಾವೆಲ್ಲಾ ನೋಡುತಿದ್ದಂತೆ ಅವಳು ಮೊದಲು ಶಿಖರ ತಲುಪಿ ಅಲ್ಲಿ ಹಿಂದೆ ಯಾರೋ ನೆಟ್ಟಿದ್ದ ದ್ವಜಸ್ಥಂಭವನ್ನು ಹಿಡಿದು ಗುರಿ ತಲುಪಿದ್ದಳು.
--
--
ನಾವೆಲ್ಲರೂ ಅಲ್ಲಿಗೆ ತಲುಪಿದೆವು. ಆಹಾ ಎಷ್ಟು ಮನೋಹರ ದೃಶ್ಯಗಳು! ಸುತ್ತಲೂ ಚಲಿಸುವ ಮೋಡಗಳು, ರೊಯ್ಯನೆ ಬೀಸುವ ಚಳಿಗಾಳಿ, ಮೈಯೆಲ್ಲಾ ಕಚಗುಳಿ ಇಡುತಿತ್ತು. ದೂರದಲ್ಲಿ ನಾವು ಏರಿ ಬಂದ ಬೆಟ್ಟಗಳ ಸಾಲು, ಕಾಲುದಾರಿ ಎಲ್ಲಾ ಚಿತ್ರ ಬರೆದಂತೆ ಕಾಣುತಿತ್ತು. ಎಲ್ಲರೂ ಕುಳಿತು, ಮೌನವಾಗಿ ಎಲ್ಲವನ್ನೂ ವೀಕ್ಷಿಸುತಿದ್ದೆವು.
--
--
ಅಲ್ಲೇ ಕೆಳಗಡೆ ಒಂದು ಕಾಡು ಇತ್ತು ಅದರಲ್ಲಿ ಎಲ್ಲಾ ಕುಬ್ಜವಾಗಿ ಬೆಳೆದ ಮರಗಳು, ಗಾಳಿಯ ಹೊಡೆತದಿಂದ ವಿಚಿತ್ರವಾಗಿ ತಿರುಚಿಕೊಂಡಿರುವ ಟೊಂಗೆಗಳು, ಅದರ ತುಂಬಾ ಜರಿ ಗಿಡ ಮತ್ತು ಹಾವಸೆ ಬೆಳೆದು ಪೂರ್ತಿ ಕಾಡು, ಒಂದು ನಿಗೂಢಮಯ ಜಗತ್ತಿನಂತೆ ತೋರುತಿತ್ತು. ಅಲ್ಲೇ ನೀರಿನ ಒಂದು ಪುಟ್ಟ ಝರಿ ಇತ್ತು, ಅಲ್ಲೇ ನಾವು ಮಧ್ಯಾಹ್ನದ ಅಡಿಗೆ ಮಾಡಿದೆವು. ಮ್ಯಾಗಿ ನೂಡಲ್ಸ್ ಮಾಡಿ ತಿಂದು ಹಸಿವನ್ನು ತಣಿಸಿದೆವು.
--
--
ಸ್ವಲ್ಪ ವಿಶ್ರಾಂತಿ ಪಡೆದ ಮೇಲೆ ವಾಪಸು ಪ್ರಯಾಣ. ಈ ಸಲ ನಾವು ಬೇರೆಯೇ ದಾರಿಯಲ್ಲಿ ಸಾಗಿದೆವು, ಸ್ವಲ್ಪ ದೂರ ಬಂದಾಗ ಒಂದು ಇಗರ್ಜಿಯ ಅವಶೇಷ ಕಾಣಸಿಕ್ಕಿತು. ಇದು ಬ್ರಿಟಿಷರು ನಿರ್ಮಿಸಿದ್ದಂತೆ. ಸ್ವಲ್ಪ ಸ್ವಲ್ಪವಾಗಿ ಇಳಿಜಾರು ದಾರಿಯಲ್ಲಿ ನಡೆದೆವು. ಆದರೆ ನಮ್ಮಲ್ಲಿ ಯಾರಿಗೂ ಈ ದಾರಿ ಎಲ್ಲಿಗೆ ಹೋಗಿ ಸೇರುತ್ತದೆ ಎಂಬ ಖಚಿತ ಮಾಹಿತಿ ಇರಲಿಲ್ಲ. ಒಂದು ಕಡೆಯಲ್ಲಂತೂ ನಾವು ದಾರಿ ಕಾಣದೆ ತಬ್ಬಿಬ್ಬಾದೆವು. ರವಿ ಒಬ್ಬನೇ ಸ್ವಲ್ಪ ಮುಂದೆ ಹೋಗಿ ದಾರಿ ಇದೆಯಾ ಎಂತ ನೋಡಲು ಹೋದ. ಸ್ವಲ್ಪ ಹೊತ್ತಿನಲ್ಲಿ ದೂರದಿಂದ ಶಿಳ್ಳು ಕೇಳಿಸಿತು. ಅದು ರವಿ ನಮ್ಮನ್ನು ಮುಂದೆ ಬರಲು ಹೇಳಿದ್ದು. ಎಲ್ಲರೂ ಭಾರವಾದ ಕಾಲುಗಳನ್ನು ಎಳೆಯುತ್ತ ನಡೆದೆವು. ಅಂತೂ ಸುಮಾರು ಇಳಿದ ಮೇಲೆ ನಮಗೆ ಒಂದು ಪುಟ್ಟ ಹೊಳೆ ಅಡ್ಡ ಬಂತು. ನಡೆದೇ ಅದನ್ನು ದಾಟಿ ಎದುರು ದಡಕ್ಕೆ ಬಂದೆವು. ಸ್ವಲ್ಪ ದೂರ ಹೋದಮೇಲೆ ನಮಗೆ ಮಾರ್ಗ ಸಿಕ್ಕಿತು. ಅಲ್ಲೇ ಒಂದು ಸಣ್ಣ ಗೂಡಂಗಡಿಯಲ್ಲಿ ವಿಚಾರಿಸಿದಾಗ ಅದು ಬಸರಿಕಟ್ಟೆ ಎಂತ ಗೊತ್ತಾಯಿತು. ಒಂದರ್ಧ ಗಂಟೆಯಲ್ಲಿ ಮಲ್ಲೇಶ್ವರಕ್ಕೆ ಹೋಗುವ ಬಸ್ಸು ಸಿಕ್ಕಿತು. ಅಲ್ಲಿಗೆ ಹೋಗಿ ನಮ್ಮ ಪರಿಚಯದವರ ಮನೆ ಹುಡುಕಿ ಅವರ ಮೂಲಕ ಗೆಸ್ಟ್ ಹೌಸ್ ನಲ್ಲಿ ಒಂದು ಕೋಣೆ ಪಡಕೊಂಡು ಎಲ್ಲರೂ ಬಿದ್ದು ಕೊಂಡೆವು, ಯಾರಿಗೂ ಮೈ ಮೇಲೆ ಪರಿವೆಯೇ ಇರಲಿಲ್ಲ. ಮರುದಿನ ನಮ್ಮ ಪರಿಚಯಸ್ಥರು ಬಂದು ನಮ್ಮನ್ನು ಕುದುರೆಮುಖ ಪ್ರಾಜೆಕ್ಟ್ ಗೆ ಕರಕೊಂಡು ಹೋದರು. ಅಲ್ಲೆಲ್ಲ ನೋಡಿ ಆಮೇಲೆ ಮಂಗಳೂರಿಗೆ ಬಂದು ಕಾಸರಗೋಡಿಗೆ ತಲುಪಿದೆವು.
ನಾವು ಆಮೇಲೆ ಹಲವು ಸಲ ಚಾರಣ ಮಾಡಿದ್ದರು ಸಹಾ ಈ ಕುದುರೆಮುಖ ಚಾರಣದಷ್ಟು ಖುಷಿ ಪಟ್ಟಿರಲಿಲ್ಲ. 

Friday, 26 February 2010

Kutyala Kudlu Temples

ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ



ಕೂಡ್ಲು ಎಂಬ ಈ ಪುಟ್ಟ ಗ್ರಾಮವಿರುವುದು ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಕಾಸರಗೋಡಿನಲ್ಲಿ. ಕಾಸರಗೋಡಿನಿಂದ ಮಧೂರು ಸಿದ್ದಿವಿನಾಯಕ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 3km. ಪ್ರಯಾಣಿಸಿ, ರಾಮದಾಸ ನಗರದಿಂದ ಎಡಕ್ಕೆ ತಿರುಗಿ 1/2 km. ದೂರ ಸಾಗಿದರೆ ನೀವು ಸರಿಯಾಗಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಇರುತ್ತೀರಿ. ಪಟ್ಟಣದ ಗಜಿ ಬಿಜಿಯಿಂದ ದೂರವಾಗಿ ಪ್ರಶಾಂತಮಯ ಪರಿಸರದಲ್ಲಿ ತನ್ನದೇ ಆದ ವಿಶಿಷ್ಟವಾದ ಗೋಪುರವನ್ನು ಹೊಂದಿರುವ ಈ ದೇವಾಲಯವು ಸುಮಾರು 350 ವರ್ಷಗಳ ಇತಿಹಾಸವನ್ನು ಹೊಂದಿದೆ. ಕೂಡ್ಲು ಶ್ಯಾನುಭಾಗರ ಮನೆಯ ಹಿರಿಯರಿಂದ ಪ್ರತಿಷ್ಟಾಪನೆಗೊಂಡ ಈ ದೇವಾಲಯವು ಕಾಲಾನಂತರ ಈಗಿರುವ ಭವ್ಯ ಗೋಪುರವನ್ನು ಹೊಂದಿಕೊಂಡು ನವೀಕರಿಸಲ್ಪಟ್ಟಿದೆ.
-----
-----
ಸುಮಾರು 3ಅಡಿಗಳಷ್ಟು ಎತ್ತರವಿರುವ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹವು ನೋಡಲು ಸುಂದರವಾಗಿದ್ದು ಕೈಗಳಲ್ಲಿ ಪುಟ್ಟ ಮಗುವನ್ನು ಕಾಣಬಹುದು. ಭಕ್ತಿಯಿಂದ ಬೇಡಿದ ಭಕ್ತರಿಗೆ ಸಂತಾನ ಭಾಗ್ಯವನ್ನು ಕರುಣಿಸಿರುವ ಹಲವಾರು ನಿದರ್ಶನಗಳು ಇವೆ, ಮತ್ತು ಈ ದೇವರನ್ನು ಸಂತಾನ ಗೋಪಾಲಕೃಷ್ಣನೆಂದೇ ಕರೆಯುತ್ತಾರೆ. ಇದಲ್ಲದೆ ಶ್ರೀ ಅನ್ನಪೂರ್ಣೇಶ್ವರಿ ಮತ್ತು ಶ್ರೀ ಧರ್ಮ ಶಾಸ್ಥಾರ ಪ್ರತಿಷ್ಠೆಗಳೂ ಇಲ್ಲಿವೆ. ದೇವಾಲಯವನ್ನು ಪ್ರವೆಶಿಸುತಿದ್ದಂತೆ ನಿಮಗೆ ತಂಪಾದ ಗಾಳಿಯು ಸ್ವಾಗತ ಕೋರುತ್ತದೆ. ಗೋಪುರದ ಒಳ ಭಾಗದಲ್ಲಿ ಎತ್ತರವಾದ ಕಂಚಿನ ದ್ವಜಸ್ಥಂಭ, ಬಲಿಕಲ್ಲುಗಳನ್ನು ಕಾಣಬಹುದು. ವಿಶಾಲವಾದ ರಾಜಾಂಗಣ, ಮತ್ತು ಪ್ರದಕ್ಷಿಣಾಪಥವನ್ನು ಹೊಂದಿದೆ. ಅಂಗಣದ ಸುತ್ತಲೂ ಜಾತ್ರೆಯ ಸಮಯದಲ್ಲಿ ಕುಳಿತುಕೊಳ್ಳಲು ಗೋಪುರಗಳಿದ್ದು, ಪ್ರತ್ಯೇಕ ಅಗ್ರಶಾಲೆ, ದಾಸ್ತಾನು ಉಗ್ರಾಣ ಇವೆ.
ಎಡನಾಳಿಗೆಯಿಂದ ಸುತ್ತುವರೆದ ದೇವಸ್ಥಾನದ ಒಳಗೆ ಪ್ರವೇಶಿಸಿದರೆ, ಪಶ್ಚಿಮಾಭಿಮುಖನಾಗಿ ನಿಂತಿರುವ ಶ್ರೀ ಗೋಪಾಲಕೃಷ್ಣ ದೇವರ ದರ್ಶನವಾಗುವುದು. ಅಲ್ಲೇ ಇನ್ನೊಂದು ಗರ್ಭಗೃಹದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ ಕೂಡಾ ಆಗುತ್ತದೆ.
ದೇವರಿಗೆ ಒಂದು ಪ್ರದಕ್ಷಿಣೆ ಹಾಕಿ ಬರುವಾಗ ಅಲ್ಲಿಯೇ ಇರುವ ರಾಜರಾಜೇಶ್ವರಿ ದೈವದ ಸ್ಥಾನವನ್ನು ನೋಡಿ ಕೈ ಮುಗಿದು ಬರಬಹುದು. ಇಲ್ಲಿ ನಿತ್ಯ ಮೂರೂ ಹೊತ್ತು ಪೂಜೆ ನಡೆಯುತ್ತದೆ.
-----
-----
ಪ್ರತೀ ವರ್ಷ ಕುಂಭ ಮಾಸದ ನವಮಿಯಂದು ದ್ವಜಾರೋಹಣಗೊಂಡು ಶ್ರೀ ಗೋಪಾಲಕೃಷ್ಣ ದೇವರ ಜಾತ್ರೆ ಪ್ರಾರಂಭವಾಗಿ ಪೌರ್ಣಮಿಯಂದು ರಥೋತ್ಸವ, ಮರುದಿನ ಅವಭೃತ  ಸ್ನಾನ, ದ್ವಜಾವರೋಹಣದ ನಂತರ ಜಾತ್ರೆ ಮುಕ್ತಾಯಗೊಳ್ಳುತ್ತದೆ. ಮಾರನೆ ದಿವಸ ರಾಜ ರಾಜೇಶ್ವರಿ ದೈವದ ನೇಮ ಕೂಡಾ ನಡೆಯುತ್ತದೆ. ಅದೇ ರೀತಿ ಪ್ರತೀ ವರ್ಷ ಅನ್ನಪೂರ್ಣೆಶ್ವರಿ ದೇವರ ನವರಾತ್ರಿ ಉತ್ಸವ ಮತ್ತು ವಿಜಯ ದಶಮಿಯಂದು ಹೊಸಾರೋಗಣೆ ಕೂಡ ನಡೆಯುತ್ತದೆ. ಈ ಎರಡೂ ಜಾತ್ರೆಗಳು ಬಹಳ ಪ್ರಸಿದ್ಧವಾಗಿದ್ದು, ಊರ, ಪರಊರ ಭಕ್ತ ಜನರೆಲ್ಲರೂ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ತುಂಬಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಬಯಲಾಟವು ಸಹಾ ನಡೆಯುತ್ತದೆ.
ಕುತ್ಯಾಳ ಗೋಪಾಲಕೃಷ್ಣ ದೇವರು ಯಕ್ಷಗಾನಪ್ರಿಯ! ಅಂತೆಯೇ ಶ್ರೀ ದೇವರ ಹೆಸರಿನಲ್ಲಿ ನಡೆಯುವ ಒಂದು ಯಕ್ಷಗಾನ ಮೇಳ ಕೂಡ ಇದೆ. ಕುತ್ಯಾಳ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಎಂಬ ಈ ಮೇಳವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮೇಳಗಳಿಗೆ ಸರಿಸಾಟಿಯಾಗಿದ್ದು, ಬಹಳ ಜನ ಹೆಸರಾಂತ ಯಕ್ಷಗಾನ ಕಲಾವಿದರು ಇಲ್ಲಿಂದಲೇ ತಮ್ಮ ಕಲಾ ಜೀವನವನ್ನು ಆರಂಬಿಸಿದ್ದಾರೆ. ಈಗಲೂ ಸಹಾ ಸೇವೆಯ ಆಟ, ಸಣ್ಣ ಮಟ್ಟಿನ ತಿರುಗಾಟದ ಆಟಗಳು ನಡೆಯುತ್ತಿರುತ್ತವೆ.

ಶ್ರೀ ಕ್ಷೇತ್ರದಲ್ಲಿ ವಿವಾಹ ಮತ್ತಿತರ ಶುಭ ಕಾರ್ಯಗಳು ಜರಗುತ್ತಿರುತ್ತವೆ ಮತ್ತು ಅದಕ್ಕೆ ಬೇಕಾದ ಉತ್ತಮ ಸೌಲಭ್ಯಗಳೂ ಇಲ್ಲಿವೆ.


ಶ್ರೀ ಶಿವಮಂಗಿಲ ಸದಾಶಿವ ದೇವಸ್ಥಾನ


ಕೂಡ್ಲು ಶಿವಮಂಗಿಲ ಸದಾಶಿವ ದೇವಸ್ತಾನವು, ಬಹಳ ಪ್ರಶಾಂತವಾದ ಸ್ಥಳದಲ್ಲಿದೆ. ಗೋಪಾಲಕೃಷ್ಣ ದೇವಳದಿಂದ ಬರೇ 250 ಮೀಟರ್ ದೂರದಲ್ಲಿದೆ. ಈ ದೇವಸ್ತಾನದ ಸ್ಥಾಪನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರೂ ಬಹಳ ವರ್ಷಗಳಿಂದ ಕೂಡ್ಲು ಶ್ಯಾನುಭಾಗ ಮನೆತನದವರು ಇದನ್ನು ನಡೆಸಿಕೊಂಡು ಬರುತಿದ್ದಾರೆ. ಇದಕ್ಕಾಗಿ ಇವರಿಗೆ ಸರಕಾರದಿಂದ ಸನದನ್ನು ಸಹಾ ಕೊಡಲಾಗಿದೆ. ಕೂಡ್ಲು ಮನೆಯ ಮನೆ ದೇವರು ಅಂತ ನಂಬಿಕೊಂಡು ಬಂದಿದ್ದಾರೆ. ಮೊದಲು ಜೀರ್ಣಾವಸ್ಥೆಯಲ್ಲಿದ್ದ ದೇವಸ್ತಾನವನ್ನು ಜೀರ್ಣೋದ್ಧಾರ ಮಾಡಿಸಿ, ನಿತ್ಯ ಮೂರೂ ಹೊತ್ತು ಪೂಜೆಯ ಏರ್ಪಾಡು ಮಾಡಿದ್ದಾರೆ.
-----
-----
ಇಲ್ಲಿಗೆ ಬರಲು ಮಾರ್ಗ ಸೌಕರ್ಯವಿದ್ದು ದೇವಸ್ಥಾನದ ಮುಂಭಾಗದ ವರೆಗೆ ವಾಹನಗಳಲ್ಲಿ ಬರಬಹುದಾಗಿದೆ. ಇಲ್ಲಿಂದಲೇ ಪಕ್ಕದಲ್ಲಿರುವ ಸಣ್ಣ ಸೇತುವೆ ದಾಟಿ ಮುಂದೆ ಹೋದರೆ ಮಧೂರು ರಸ್ತೆಗೆ ಸೇರುತ್ತದೆ. ಈ ದೇವಸ್ಥಾನವು ಚಿಕ್ಕದಾದರೂ ಚೊಕ್ಕವಾಗಿ,ಸುಂದರವಾಗಿದೆ. ಒಳ ಹೊಕ್ಕೊಡನೆ ಕೊಡಿಮರ, ಬಲಿಕಲ್ಲು ಮತ್ತು ಕಟ್ಟೆಗಳನ್ನು ಕಾಣಬಹುದು. ರಾಜಾಂಗಣ ಮತ್ತು ಸುತ್ತಲಿನ ಅಂಗಣಗಳು ಚೆನ್ನಾಗಿವೆ. ಸುತ್ತಲೂ ಇರುವ ಹಸಿರಾದ ಅಡಿಕೆ ತೋಟ ದೇವಾಲಯಕ್ಕೆ ಒಂದು ಪ್ರಶಾಂತ ಪರಿಸರವನ್ನು ನೀಡುತ್ತದೆ. ಇಲ್ಲಿಗೆ ಬಂದ ಭಕ್ತಾದಿಗಳು ಈ ಪ್ರಶಾಂತತೆಯನ್ನು ಅನುಭವಿಸಿ ದೇವಸ್ಥಾನವನ್ನು ಪ್ರವೇಶಿಸಿದಾಗ ಎದುರಿಗೆ ಇರುವ ಗರ್ಭಗೃಹದಲ್ಲಿರುವ ಸದಾಶಿವ ದೇವರ ದರ್ಶನವಾಗುತ್ತದೆ. ಗರ್ಭಗೃಹದ ಎದುರಿಗೆ ನಮಸ್ಕಾರ ಮಂಟಪವಿದೆ. ದೇವಾಲಯದ ವಾಸ್ತುವು ಕೇರಳ ಮತ್ತು ದಕ್ಷಿಣ ಕನ್ನಡದ ಶೈಲಿಯಲ್ಲಿದೆ.
-----
-----
ಇಲ್ಲಿ ವರ್ಷಂಪ್ರತಿ ಜಾತ್ರಾ ಮಹೋತ್ಸವವು, ಮಹಾ ಶಿವರಾತ್ರಿಯಂದು ಪ್ರಾರಂಭವಾಗಿ ಐದು ದಿನಗಳ ಕಾಲ ನಡೆಯುತ್ತದೆ. ಊರಿನ ಎಲ್ಲಾ ಭಕ್ತಾದಿಗಳು ಶ್ರೀ ದೇವರ ಜಾತ್ರೆಯಲ್ಲಿ ಭಾಗವಹಿಸಿ ಕೃತಾರ್ಥರಾಗುತ್ತಾರೆ. ಜಾತ್ರೆಯ ಮೂರನೆ ದಿವಸ ದೇವರನ್ನು ರಾಮದಾಸನಗರದ     ಗೋಪಾಲಕೃಷ್ಣ ಹೈಸ್ಕೂಲ್ ನ ಎದುರು ಇರುವ ಕಟ್ಟೆಗೆ ಘೋಷ ಯಾತ್ರೆಯಲ್ಲಿ ಕೊಂಡೊಯ್ಯುವುದು, ಐದನೇ ದಿವಸ ಅವಭೃತ ಸ್ನಾನಕ್ಕಾಗಿ, ಶ್ರೀ ವಿಷ್ಣುಮಂಗಿಲ ದೇವಸ್ತಾನದ ಚಕ್ರ ತೀರ್ಥದಲ್ಲಿ ಮಿಂದು ಶ್ರೀ ಮಹಾ ವಿಷ್ಣು ದೇವರ ದರ್ಶನ ಮಾಡುವುದು ವಾಡಿಕೆ. ಜಾತ್ರೆಯ ಮಾರಣೆ ದಿವಸ, ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯುತ್ತದೆ.
------
------
ಇಲ್ಲಿ ಎರಡು ವರ್ಷಗಳಿಗೊಮ್ಮೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು (ಕೆಂಡ ಸೇವೆ) ಸಹಾ ಜರಗುತ್ತದೆ. ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ನರಸಿಂಹಾವತಾರದ ಪ್ರತೀಕವಾಗಿರುವ ವಿಷ್ಣುಮೂರ್ತಿಯ ಈ ಒತ್ತೆಕೋಲ ಮಹೋತ್ಸವವು ಊರಿನ ಮತ್ತು ಪರ ಊರಿನ ಬಹಳ ಭಕ್ತರನ್ನು ಬರಮಾಡಿಸುತ್ತದೆ.
-----


-----
ಭಯ ಮತ್ತು ಭಕ್ತಿಗಳನ್ನು ಏಕ ಕಾಲಕ್ಕೆ ಮೂಡಿಸುವ ಈ ಒತ್ತೆಕೋಲ ಮಹೋತ್ಸವವು ಕಾಸರಗೋಡು ಮತ್ತು ಕುಂಬಳೆ ಮತ್ತು ಸುತ್ತು ಮುತ್ತಲ ಪ್ರದೇಶಗಳಲ್ಲಿ ಮಾತ್ರ ಜರಗುತ್ತದೆ. ಒಮ್ಮೆಯಾದರೂ ಇದನ್ನು ನೋಡಲೇ ಬೇಕು.


ವಿಷ್ಣುಮಂಗಿಲ ಶ್ರೀ ಮಹಾವಿಷ್ಣು ದೇವಸ್ಥಾನ

ಕೂಡ್ಲು ದೇವಸ್ಥಾನಗಳಲ್ಲಿ ಒಂದಾದ ವಿಷ್ಣುಮಂಗಿಲ ಮಹಾವಿಷ್ಣು ದೇವಾಲಯವು ಮೇಲೆ ಹೇಳಿದ ಎರಡೂ ದೇವಾಲಯಗಳಿಂದ ಸುಮಾರು 1 km. ದೂರದಲ್ಲಿದೆ. ಸುತ್ತಲೂ ಬತ್ತದ ಗದ್ದೆಗಳಿಂದ ಆವೃತವಾಗಿ ಬಹಳ ಶಾಂತ ಪರಿಸರದಲ್ಲಿದೆ. ಹಸಿರಾದ ಬತ್ತದ ಬೆಳೆ ಈ ದೇವಸ್ಥಾನಕ್ಕೆ ಒಂದು ವಿಶೇಷ ಸೌಂದರ್ಯವನ್ನಿಯುತ್ತದೆ.
------
-----
ಬಹಳ ಪುರಾತನ ದೇವಾಲಯವಿದು. ಇಲ್ಲಿಗೆ ಮದ್ವಾಚಾರ್ಯರು ಬಂದು ಇಲ್ಲಿನ ಚಕ್ರ ತೀರ್ಥದಲ್ಲಿ ಮಿಂದು ಶ್ರೀ ಮಹಾವಿಷ್ಣು ದೇವರನ್ನು ಪೂಜಿಸಿದ್ದರೆಂದು, ವಿಷ್ಣುಮಂಗಿಲದ  ತ್ರಿವಿಕ್ರಮ ಪಂಡಿತಾಚಾರ್ಯರೊಡನೆ ಹದಿನೈದು ದಿನಗಳ ಕಾಲ ದ್ವೈತ -ಅದ್ವೈತ ತತ್ವಗಳ ವಾದವನ್ನು ಮಾಡಿ ಅವರನ್ನು ವಾದದಲ್ಲಿ ಪರಾಭವಗೊಳಿಸಿದ್ದರು  ಮತ್ತು ಅವರನ್ನು ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಿದರು ಎಂದು ಮದ್ವ ವಿಜಯ ಎಂಬ ಗ್ರಂಥದಲ್ಲಿ ಉಲ್ಲೇಖವಾಗಿದೆ ಎಂದು ಹೇಳುತ್ತಾರೆ.

ಶ್ರೀ ಮದ್ವಾಚಾರ್ಯರ ಕಾಲ 1238-1317 ರ ವರೆಗೆ.ಈ ಮಾಹಿತಿಯನ್ನು ಪರಿಗಣಿಸಿದರೆ ಈ ದೇವಾಲಯ ಮತ್ತು ಚಕ್ರತೀರ್ಥ ಎಂಬ ಕೆರೆ ಸುಮಾರು 800 ವರ್ಷಗಳಷ್ಟು ಹಳೆಯದಿರಬಹುದು ಎಂದು ಊಹಿಸಬಹುದು. ಈ ದೇವಸ್ಥಾನವನ್ನು ಯಾರು ಸ್ಥಾಪಿಸಿರಬಹುದು ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಉಡುಪಿಯ ಅಷ್ಟ ಮಠದ ಯತಿಗಳಿಗೆ ಮತ್ತು ಮಾಧ್ವ ಸಂಪ್ರದಾಯಸ್ಥರಿಗೆ ಈ ದೇವಸ್ಥಾನವು ತುಂಬಾ ಪ್ರಾಮುಖ್ಯವಾದದ್ದು. ಈಗಲೂ ಸಹಾ ಉಡುಪಿಯ ಸ್ವಾಮೀಜಿಗಳು ಬಂದರೆ ಅವರು ಮೊದಲು ಚಕ್ರತೀರ್ಥದಲ್ಲಿ ಮಿಂದು ಶ್ರೀ ಮಹಾವಿಷ್ಣು ದೇವರ ಪೂಜೆ ಮಾಡಿ ಹೋಗುವುದು ಸಂಪ್ರದಾಯವಾಗಿದೆ.
------
-----
ಈ ದೇವಸ್ಥಾನದ ಗೋಪುರ ಮತ್ತು ಮುಖ್ಯ ದೇವಾಲಯದ ಸಂಪೂರ್ಣ ನವೀಕರಣವನ್ನು ದಿವಂಗತ ಕೂಡ್ಲು ಸದಾಶಿವ ಶಾನುಭಾಗರು ಮಾಡಿಸಿದ್ದರು. ನಿತ್ಯವೂ ಮೂರೂ ಹೊತ್ತು ಪೂಜೆ ಇಲ್ಲಿ ನಡೆಯುತ್ತಿದೆ.ಇಲ್ಲಿಗೆ ಬಂದ ಭಕ್ತರಿಗೆ ಇಲ್ಲಿನ ಪರಿಸರ ಪ್ರಶಾಂತ ವಾತಾವರಣ, ಇಲ್ಲಿನ ಪಾವಿತ್ರ್ಯತೆ ಎಲ್ಲವೂ ಮೆಚ್ಚಿಗೆಯಾಗುವಂತಹದು.
-----
-----
ಮಕರ ಸಂಕ್ರಮಣದ ಪುಣ್ಯ ದಿನದಂದು ಇಲ್ಲಿ ಒಂದು ದಿವಸದ ಉತ್ಸವ ಬಹಳ ವಿಜೃಂಭಣೆಯಿಂದ ಜರಗುತ್ತದೆ.ಊರಿನ ಎಲ್ಲಾ ಭಕ್ತ ಜನರು ಬಂದು ಶ್ರೀ ಮಹಾವಿಷ್ಣು ದೇವರ ಜಾತ್ರೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ.
-----
-----
ಜಾತ್ರೆ ಕಳೆದ ಮರುದಿನ ಬೆಳಿಗ್ಗೆ ಪಕ್ಕದಲ್ಲಿರುವ ಧೂಮಾವತಿ ದೈವಕ್ಕೆ ಕೋಲ ಕೊಡುತ್ತಾರೆ. ಇದರ ಮಾರಣೆ ದಿನ ಕೂಡ ಭೂತ ಕೋಲ ನಡೆಯುತ್ತದೆ. ಬಹಳ ಕಾರಣಿಕದ ಭೂತ ಇದಾಗಿದ್ದು, ಇಲ್ಲಿ ಬಂದು ಬೇಡಿಕೊಂಡರೆ ಅವರ ಕೋರಿಕೆ ನೆರವೇರುತ್ತದೆ ಎಂತ ನಂಬಿಕೆಯಿದೆ.

Tuesday, 2 February 2010

Belam Caves

ಬೇಲಂ ಗುಹೆಗಳಿಗೆ ನಾವು ಎರಡು ತಿಂಗಳ ಹಿಂದೆ ಭೇಟಿ ಕೊಟ್ಟಿದ್ದೆವು. ಈ ಪ್ರಕೃತಿ ನಿರ್ಮಿತ ವಿಸ್ಮಯಕಾರಿ ಗುಹೆಗಳಿರುವುದು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ. ನಾವು ಬೆಂಗಳೂರಿನಿಂದ ಧರ್ಮಾವರಂ ಮಾರ್ಗವಾಗಿ ತಾಡಪತ್ರಿಗೆ ಬಂದು ಅಲ್ಲಿ ನಮ್ಮ ಊರಿನವರಾದ ಕೆ. ಎಂ. ಭಟ್ ಅವರ ಮನೆಯಲ್ಲಿ ಉಳಿದುಕೊಂಡು ಮರು ದಿನ ಬೆಳಿಗ್ಗೆ ಅವರ ಶ್ರೀಮತಿ, ಜಯಂತಿ ಭಟ್ ಅವರ ಜೊತೆಯಲ್ಲಿ  ಕಾರಿನಲ್ಲಿ ಪ್ರಯಾಣ ಹೊರಟೆವು. ಸುಮಾರು 25 km. ದೂರ ಸಾಗಿದಾಗ ನಮಗೆ ಈ ಬೇಲಂ ಗುಹೆಗಳು ಕಾಣ ಸಿಗುತ್ತವೆ. ಇಲ್ಲಿಗೆ ಬರಲು ಉತ್ತಮ ರಸ್ತೆ ಇದ್ದು,ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ 270 km. ಅನಂತಪುರಂನಿಂದ 85 km. ಮತ್ತು ಕರ್ನೂಲ್ ನಿಂದ 110 km. ದೂರದಲ್ಲಿದೆ.



ಇಲ್ಲಿನ ಆಫೀಸಿನಲ್ಲಿ ಟಿಕೆಟ್ ಪಡೆದುಕೊಂಡು ಗುಹೆಗಳ ಒಳಗೆ ಇಳಿದೆವು. ಪ್ರವೇಶ ಶುಲ್ಕ ತಲಾ 30 ರು. ಉಚಿತ ಮಾರ್ಗದರ್ಶಿಗಳೂ ಇಲ್ಲಿ ಲಬ್ಯ, ಇವರು ನಮ್ಮನ್ನು ಗುಹೆಗಳ ಎಲ್ಲಾ ಪ್ರಮುಖ ಜಾಗೆಗಳಿಗೆ ಕರೆದೊಯ್ಯುತ್ತಾರೆ ಮತ್ತು ಚೆನ್ನಾಗಿ ವಿವರಣೆ ಕೊಡುತ್ತಾರೆ. ಈ ಗುಹೆಗಳು ಸುಮಾರು 2 km. ವರೆಗೆ ಸಾಗಿದೆ. ಕೆಲವೆಡೆ ವಿಶಾಲವಾದ ಸ್ಥಳಗಳಿದ್ದರೆ ಇನ್ನು ಕೆಲವೆಡೆ ಇಕ್ಕಟ್ಟಾದ ಜಾಗೆಗಳಿವೆ. ಅದೊಂದು ಅದ್ಬುಥ ಲೋಕ! ಹಿಂದಿನ ಯಾವುದೋ ಒಂದು ಯುಗದಲ್ಲಿ ನದಿಯೊಂದು ಗುಪ್ತಗಾಮಿನಿಯಾಗಿ ಹರಿದಿದ್ದ ಪರಿಣಾಮವಾಗಿ ಈ ಗುಹೆಗಳು ನಿರ್ಮಾಣವಾದವಂತೆ. ಗುಹೆಯ ಮುಂಭಾಗದಲ್ಲೇ ಒಂದು ವಿಶಾಲವಾದ ವೃತ್ತಾಕಾರದ ಹಜಾರವೊಂದಿದ್ದು ಅಲ್ಲೇ ಇಲ್ಲಿನ ಇತಿಹಾಸ, ವರ್ಣನೆ, ಕಾಲಮಾನ ಎಲ್ಲಾ ಚೆನ್ನಾಗಿ ವಿವರಿಸುವ ಫಲಕಗಳನ್ನು ಇರಿಸಿದ್ದಾರೆ. ಈ ಗುಹೆಗಳ ಅಸ್ತಿತ್ವವನ್ನು 1884 ರಲ್ಲೇ ಕಂಡುಕೊಂಡಿದ್ದರು. ಆದರೆ ಇತ್ತೀಚಿಗೆ 1983 ರಲ್ಲಿ ಜರ್ಮನಿಯ ಹರ್ಬರ್ಟ್ ಡೇನಿಯಲ್ ಗೆಬುಎರ್ ರಿಂದ ಅನ್ವೇಷಣೆಯಾಗಿ, ಮುಂದೆ 2002 ನೆ ಇಸವಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಯಿತು. ಇಲ್ಲಿ ಬೌದ್ಧ ಸನ್ಯಾಸಿಗಳು ಇದ್ದರು ಎಂಬುದಕ್ಕೆ ಕುರುಹುಗಳು ಸಿಕ್ಕಿವೆಯಂತೆ.

ಆಲ್ಲಿಂದ ಮುಂದೆ ಗುಹೆ ತೆರೆದುಕೊಳ್ಳುತ್ತದೆ. ಬಂಗಾರವರ್ಣದ ವಿದ್ಯುತ್ ದೀಪಗಳನ್ನು ಕಣ್ಣಿಗೆ ರಾಚದ ರೀತಿಯಲ್ಲಿ ಅಳವಡಿಸಿದ್ದಾರೆ. ಹಾಗಾಗಿ ಆ ಬೆಳಕಿನಲ್ಲಿ ಯಾವುದೋ ಒಂದು ರಮ್ಯ ನಿಘೂಡ ಲೋಕಕ್ಕೆ ಕಾಲಿರಿಸಿದಂತಾಗುತ್ತದೆ. ಮೇಲ್ಭಾಗದಲ್ಲಿ, ಅಕ್ಕಪಕ್ಕ ಎಲ್ಲಾ ವಿಚಿತ್ರವಾದ  ಬಣ್ಣ ಬಣ್ಣದ ಶಿಲಾಕೃತಿಗಳು, ಎಲ್ಲವೂ ಪ್ರಕೃತಿ ನಿರ್ಮಿತ!ಭೂಮಿಯ ಮೇಲ್ಭಾಗದಿಂದ ನೀರು ಮಣ್ಣಿನೊಳಗೆ ಇಂಗಿ ಕೆಳಕ್ಕೆ ಹೋಗುತ್ತದೆ. ಕೆಳಗಡೆ ಗುಹೆಗಳು ಇದ್ದರೆ ಆಗ ನೀರು ತೊಟ್ಟಿಕ್ಕುತ್ತದೆ ಮತ್ತು ನೀರಿನಲ್ಲಿ ಕರಗಿರುವ ಖನಿಜಗಳು ಅಲ್ಲೇ ಪದರಗೊಳ್ಳುತ್ತವೆ ಮತ್ತು ಕ್ರಮೇಣ ಕೆಳಮುಖವಾಗಿ ಬೆಳೆಯಲಾರಂಭಿಸುತ್ತದೆ. ಅದೇ ತರಹ ನೀರು ಬಿಂದು ಬಿಂದಾಗಿ ಕೆಳಗೆ ಬಿದ್ದಾಗ ಅಲ್ಲಿಯೂ ಶಿವಲಿಂಗ ಆಕೃತಿಗಳೂ, ಇನ್ನಿತರ ವಿಚಿತ್ರ ಶಿಲ್ಪಾಕಾರಗಳು ಮೊಳೆಯುತ್ತವೆ.ಹೀಗೆ ಕಲ್ಲಿನ ಆಕೃತಿಗಳು ಒಂದಿಂಚು ಬೆಳೆಯಲು 100 ವರ್ಷಗಳು ಬೇಕಂತೆ. ಇದಕ್ಕೆ Stalachite ಮತ್ತು Stalagmite formation ಎನ್ನುತ್ತಾರೆ. ಇವುಗಳೇ ಈ ಗುಹೆಗಳ ಮುಖ್ಯ ಆಕರ್ಷಣೆ. ಇವುಗಳ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲಿತವಾಗಿ ಬಣ್ಣದ ದೀಪಗಳು ಮಿನುಗಿದಂತಾಗುತ್ತದೆ. ಸ್ವಲ್ಪ ಮುಂದೆ ಹೋದಾಗ ಒಂದು ಪ್ರತ್ಯೇಕ ಗುಹೆ ಇದೆ ಅದು ಧ್ಯಾನ ಮಂದಿರ! ಮತ್ತೂ ಮುಂದೆ ಒಂದು ಏಕಶಿಲಾ ಮಂಚ! ಅಕ್ಕ ಪಕ್ಕದಲೆಲ್ಲಾ ಇನ್ನೂ ಯಾರೂ ಪ್ರವೇಶಿಸದೇ ಇರುವ ಕೆಲ ಗುಹೆಗಳು. ಇವುಗಳಲ್ಲಿ ದೊಡ್ಡ ದೊಡ್ಡ ಬಂಡೆಗಳು ಅಲ್ಲಲ್ಲಿ ಬಿದ್ದುಕೊಂಡು, ಒಳಗೆ ಹೋಗಲು ಸಾಧ್ಯವಿಲ್ಲ. ಆ ಬಂಡೆಗಳನ್ನು ಹೊರ ತೆಗೆದರೆ ಗುಹೆಗಳ ವಿಸ್ತಾರ ಇನ್ನೂ ಹೆಚ್ಚಬಹುದು. ಮುಂದೆ ಸಪ್ತಸ್ವರ ಗುಹೆ ಮತ್ತು ಆಲದ ಮರ ಸಿಗುತ್ತದೆ. ಪ್ರಕೃತಿ ನಿರ್ಮಿತ ಬಂಡೆಯ ಸ್ಥಂಭಗಳನ್ನು ಬಡಿದಾಗ ಸಪ್ತಸ್ವರ ಹೊರಡುತ್ತದೆ. ಮುಂದೆ ನಡೆದಾಗ ಆಲದ ಮರವನ್ನು ಕಂಡು ಬೆರಗಾಗುತ್ತೇವೆ. ಇದು ಸಾವಿರ ಹೆಡೆಯ ನಾಗನ ಹಾಗೆಯೂ ಕಾಣುತ್ತದೆ. ಈಗ ನಾವು ಭೂಗರ್ಭದಲ್ಲಿ ಸುಮಾರು 100 ಅಡಿಗಳಷ್ಟು ಕೆಳಗಡೆ ಬಂದಿರುತ್ತೇವೆ. ಈಗ ಸೆಕೆಯ ಅನುಭವವಾಗುತ್ತದೆ. ಉಸಿರಾಡಲೂ ಕೆಲವರಿಗೆ ಕಷ್ಟವೆನಿಸಬಹುದು. ಆದರೆ ಗಾಬರಿಯಾಗುವುದು ಬೇಡ, ಅಲ್ಲಿ ಒಳಗಡೆಗೆ ಮೇಲಿಂದ ತಂಪಾದ ಗಾಳಿಯನ್ನು ಸರಬರಾಜು ಮಾಡುವ ವ್ಯವಸ್ಥೆ ಇದೆ. ಹಾಗಾಗಿ ಯಾವ ಅಪಾಯವೂ ಇಲ್ಲ. ಅಲ್ಲಿ ಸ್ವಲ್ಪ ಹೊತ್ತು ನಿಂತರೆ ತಂಗಾಳಿಯನ್ನು ಸೇವಿಸಿ ಸುದಾರಿಸಿಕೊಳ್ಳಬಹುದು. ಒಂದು ವೇಳೆ ವಿದ್ಯುತ್ ಕೈ ಕೊಟ್ಟರೆ ಜನರೇಟರಿನ ಸೌಲಭ್ಯವು ಕೂಡಲೇ ದೊರೆಯುತ್ತದಂತೆ. 

ಆಲ್ಲಿಂದ ಇನ್ನೂ ಕೆಳಗೆ ಹೋಗಲು ಒಂದು ಪುಟ್ಟ ಸೇತುವೆ ಮತ್ತು ಇಳಿಯಲು ಮೆಟ್ಟಿಲುಗಳು ಸಿಗುತ್ತವೆ. ಎಲ್ಲಾ ಗಟ್ಟಿ ಮುಟ್ಟಾದ ಕಬ್ಬಿಣ ದಿಂದ ಮಾಡಿರುವುದು. ಅದರಲ್ಲಿ ನಾವು ಕೆಳಗೆ ಇಳಿದು ಹೋದರೆ ಇನ್ನೊಂದು ಅಚ್ಚರಿ ಕಾಣಸಿಗುತ್ತದೆ. ಇಲ್ಲಿ ಕಿರಿದಾದ ಒಂದು ಗುಹೆಯಿಂದ ನೀರು ಹರಿದು ಬಂದು ಸುಮಾರು 5 ಅಡಿಗಳಷ್ಟು ಕೆಳಗೆ ಬೀಳುತ್ತದೆ, ಒಂದು ಪುಟ್ಟ ಜಲಪಾತ! ಆದರೆ ಇನ್ನೂ ಒಂದು ವಿಸ್ಮಯವೆಂದರೆ ನೀರು ಕೆಳಗೆ ಬೀಳುವ ಜಾಗದಲ್ಲೇ ಒಂದು ಶಿವಲಿಂಗವನ್ನು ಪ್ರಕೃತಿಯೇ ನಿರ್ಮಿಸಿದೆ. ಈ ಶಿವಲಿಂಗವನ್ನು ಸುತ್ತುವರಿದು ನೀರು ಕೆಳಗೆ ಬೀಳುತ್ತದೆ ಮತ್ತು ಪಾತಾಳ ಗಂಗೆ ಅಂತ ಕರೆಸಿಕೊಳ್ಳುತ್ತದೆ. ಆ ನೀರು ನಿಜಕ್ಕೂ ಗಂಗೆಯೇ ಸರಿ! ಅಷ್ಟು ಸಿಹಿಯಾಗಿದೆ, ತಂಪಾಗಿದೆ. ಶಿವನಿಗೆ ನಮಿಸಿ ಬೊಗಸೆ ತುಂಬಾ ತೀರ್ಥ ಕುಡಿದು ಅಲ್ಲಿ ಸ್ವಲ್ಪ ಹೊತ್ತು ನಿಂತಾಗ ನಮ್ಮ ಪಯಣ ಸಾರ್ಥಕ ವೆನಿಸುತ್ತದೆ. ಈಗ ನಾವು 185 ಅಡಿಗಳಷ್ಟು ಕೆಳಗೆ ಇಳಿದಿರುತ್ತೇವೆ. ಇಲ್ಲಿಂದ ಹರಿಯುವ ನೀರು ಇಕ್ಕಟ್ಟಾದ ಗುಹೆಯಲ್ಲಿ ಹರಿದು ಮುಂದೆ ಸುಮಾರು ದೂರದಲ್ಲಿರುವ ಬೇಲಂ ಸರೋವರವನ್ನು ಸೇರುತ್ತದಂತೆ. ಇಷ್ಟೆಲ್ಲವನ್ನೂ ಸುಮಾರು 2-3 ತಾಸುಗಳಲ್ಲಿ ನೋಡಬಹುದು. ಹೆಚ್ಚೇನೂ ಕಷ್ಟವಿಲ್ಲದೆ ಮೇಲಕ್ಕೆ ಏರಿ ಬರಬಹುದು. ದಣಿದು ಬಂದ ಯಾತ್ರಿಕರಿಗಾಗಿ ಒಂದು ಉಪಹಾರ ಗೃಹ ಮತ್ತು ಒಂದು ವಿಶ್ರಾಂತಿ ಗೃಹವೂ ಇದೆ. ಇಲ್ಲೇ ಪಕ್ಕದಲ್ಲಿ ಬುದ್ಧನ ಒಂದು ದೊಡ್ಡ ಪ್ರತಿಮೆ ರಚಿಸಿದ್ದಾರೆ. ಅದರ ಅಕ್ಕ ಪಕ್ಕ ಮತ್ತು ಹಿಂದುಗಡೆಯಲ್ಲಿ ದೊಡ್ಡ ಬೆಟ್ಟಗಳು ಇದ್ದು ಈ ಪ್ರತಿಮೆ ಎದ್ದು ಕಾಣುತ್ತಿದೆ. ನಮಗೆ ಹತ್ತಿರದಲ್ಲೇ ಇರುವ ಈ ಬೇಲಂ ಗುಹೆಗಳಿಗೆ ಬಂದು ಆನಂದಿಸಲೇ ಬೇಕು. ಇಲ್ಲಿನ ಸೌಕರ್ಯ ಮತ್ತು ಶುಚಿತ್ವವನ್ನು ನಿಜಕ್ಕೂ ಮೆಚ್ಚಲೇ ಬೇಕು.

ವಾಪಸು ಹೋಗುವಾಗ ತಾಡಪತ್ರಿಯಲ್ಲಿ ಪೆನ್ನಾ ನದಿ ದಂಡೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ಮತ್ತು ವೆಂಕಟೇಶ್ವರ ದೇವಾಲಯ ಗಳಿಗೆ ಬೇಟಿ ಕೊಡಬಹುದು. ವಿಜಯನಗರದ ಅರಸರ ಕಾಲದ ಈ ದೇವಾಲಯಗಳ ಶಿಲ್ಪಕಲೆಗಳನ್ನು ನೋಡಿ ಆನಂದಿಸಬಹುದು. ಹಾಗೆಯೇ ಪುಟ್ಟಪರ್ತಿ, ಲೇಪಾಕ್ಷಿಗಳನ್ನು ಕೂಡಾ ಸಂದರ್ಶಿಸಬಹುದು.