Friday, 5 March 2010

ಕುದುರೆಮುಖ ಚಾರಣ

ಸುಮಾರು 20 ವರ್ಷಗಳ ಹಿಂದಿನ ನಮ್ಮ ಸಾಹಸ ಯಾತ್ರೆಯ ಅನುಭವವನ್ನು ಈಗ ಮತ್ತೊಮ್ಮೆ ಹಂಚಿಕೊಳ್ಳೋಣ ಎಂದೆನಿಸಿತು.
ನಾವು ಅಣ್ಣ ತಮ್ಮಂದಿರು, ಭಾವಂದಿರು ಮತ್ತು 2-3 ಮಂದಿ ಗೆಳೆಯರು ಇಷ್ಟೇ ನಮ್ಮ ಚಾರಣ ತಂಡ. ಈ ತಂಡಕ್ಕೆ ನನ್ನ ಮಗಳು ಸೌಮ್ಯ ಕೂಡ ಸೇರ್ಪಡೆಯಾಗಿದ್ದಳು. ಊರಿಗೆ ಹೋಗಿದ್ದಾಗ, ಎಲ್ಲರೂ ಕೂಡಿದ್ದಾಗ ಒಂದು ಚಾರಣ ಮಾಡೋಣ ಎಂಬ ತೀರ್ಮಾನ ವಾಯಿತು. ಸರಿ ಈ ಸಲ ಕುದುರೆಮುಖವನ್ನೇರೋಣ ಎಂದು ತೀರ್ಮಾನಿಸಿದೆವು. ಮರುದಿನ ಹೇಗೂ ಶನಿವಾರ ಅನುಕೂಲವಾಗಿದೆ ಎಂದು ಲಗುಬಗನೆ ಎಲ್ಲಾ ತಯಾರಿ ನಡೆಸಿದೆವು. ಪೇಟೆಗೆ ಹೋಗಿ ಬೇಕಾದ ಎಲ್ಲಾ ಅವಶ್ಯ ವಸ್ತುಗಳು, ಅಗತ್ಯವಾದ ಕೆಲವು ಪ್ರಥಮ ಚಿಕಿತ್ಸಾ ಔಷಧಗಳು, ಕುರುಕಲು ತಿಂಡಿ, ಮ್ಯಾಗಿ ನೂಡಲ್ಸ್, ಹಣ್ಣುಗಳು ಎಲ್ಲಾ ಖರೀದಿಸಿ ತಂದದ್ದಾಯಿತು.  ಮರುದಿನ ಬೆಳಗ್ಗಿನ ಬಸ್ಸಿನಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ಹೋಗಿ ಆಲ್ಲಿಂದ ಮುಂದೆ ಹೋಗೋಣ ಎಂದುಕೊಂಡೆವು.
 ನಮಗೆ ಬೇಕಾದ ಚಪಾತಿಗಳನ್ನು ರಾತ್ರಿಯೇ ಮಾಡಿದರೆ ಅನುಕೂಲ  ಎಂದು ಎಲ್ಲರೂ ಸೇರಿ ಮನೆಯ ಹಿಂದಿನ ಅಂಗಳದಲ್ಲಿ, ದೊಡ್ಡ ಒಲೆಯಲ್ಲಿ ಚಪಾತಿ ಬೇಯಿಸುವ ಕಾರ್ಯದಲ್ಲಿ ತೊಡಗಿದ್ದೆವು. ಅಮ್ಮ, ಅಣ್ಣ (ಅಪ್ಪನನ್ನು ನಾವು ಅಣ್ಣ ಅನ್ನುತ್ತೇವೆ) ತಂಗಿಯರು ಎಲ್ಲಾ ಸೇರಿದ್ದರು. ಇದ್ದಕಿದ್ದ ಹಾಗೆ ಅಣ್ಣನಿಗೆ ಒಂದು ಹುರುಪು ಬಂತು. ನಾನು ಕೂಡ ನಿಮ್ಮ ಜೊತೆ ಬರಬಹುದಾ ಎಂದು ನನ್ನನ್ನು ಕೇಳಿದರು. ಅವರಿಗೆ ಆಗ 65 ರ ಪ್ರಾಯ! ಆದರೆ ನನಗಿಂತಲೂ ಆರೋಗ್ಯವಂತರಾಗಿದ್ದರು. ನನಗಂತೂ ಆಶ್ಚರ್ಯ! ಯಾಕೆಂದರೆ ಅವರು ಹಾಗೆಲ್ಲಾ ಹೊರಡುವವರೇ ಅಲ್ಲ ಮತ್ತು ಅವರಿಗೆ ಪುರುಸೊತ್ತೇ ಇರುತ್ತಿರಲಿಲ್ಲ. ಎಲ್ಲರೂ ಕೂಡಲೇ ಅವರನ್ನು ನಮ್ಮೊಂದಿಗೆ ಬರಲು ಸಂಭ್ರಮದಿಂದ ಆಹ್ವಾನಿಸಿದೆವು. ಆಗ ಅಲ್ಲೇ ಕುಳಿತಿದ್ದ ನನ್ನ ತಂಗಿಯ ಮಗಳು ಪೂಜಾ ಕೂಡ ನಾನೂ ಬರುತ್ತೇನೆ ಎಂದು ದುಂಬಾಲು ಬಿದ್ದಳು. ಸರಿ ಆದರೆ ತುಂಬಾ ನಡೆಯಲು ಇದೆ, ಅಲ್ಲಿ ಆಟೋ, ಬಸ್ಸು ಏನೂ ಸಿಗುವುದಿಲ್ಲ, ಅದನ್ನೆಲ್ಲಾ ಮರೆತು, ನಡೆಯುವಂತಿದ್ದರೆ ಬಾ ಎಂದೆವು. ಎಲ್ಲದಕ್ಕೂ ಒಪ್ಪಿಕೊಂಡು ನನ್ನ ಮಗಳು ಸೌಮ್ಯ ಮತ್ತು ಅವಳು ತಮ್ಮ ಬಟ್ಟೆ, ಶೂ, ಟೊಪ್ಪಿ, ಎಲ್ಲಾ ಜೋಡಿಸಲು ಒಳಗೆ ಓಡಿದರು. ಅಣ್ಣನಿಗೂ ಒಳ್ಳೆಯ ನಿದ್ರೆ ಮಾಡಲು ಕಳಿಸಿದೆವು. ಚಪಾತಿ, ಚಟ್ನಿ ಎಲ್ಲಾ ಮಾಡಿ ಜೋಡಿಸಿಟ್ಟು ನಾವೂ ಮಲಗಿದೆವು.
ಮುಂಜಾನೆ ಬೇಗ ಎದ್ದು ಸ್ನಾನ ಎಲ್ಲಾ ಮುಗಿಸಿ ಹೊಟ್ಟೆ ತುಂಬಾ ತಿಂಡಿ ತಿಂದು ಮೊದಲ ಬಸ್ಸಿಗೇ ಮಂಗಳೂರಿಗೆ ಹೊರಟೆವು. ನಮ್ಮ ತಂಡದಲ್ಲಿ ಅಣ್ಣ, ನಾನು, ರಾಜ, ಶ್ರೀಹರಿ, ರವಿ, ನಮ್ಮ ಭಾವ ಸುಬ್ರಹ್ಮಣ್ಯ ಮತ್ತು K.B, ಸೌಮ್ಯ ಮತ್ತು ಪೂಜಾ ಒಟ್ಟು ಒಂಬತ್ತು ಜನ. ಒಂದು ಗಂಟೆಯ ಪ್ರಯಾಣದಲ್ಲಿ ಮಂಗಳೂರಿಗೆ ತಲುಪಿದೆವು, ಆಲ್ಲಿಂದ ಮುಂದೆ B.C.ರೋಡ್ ವರೆಗೆ ಕಾರಿನಲ್ಲಿ ಪ್ರಯಾಣ. ಮುಂದೆ ಬೆಳ್ತಂಗಡಿ, ನಾವೂರು ಚಕ್ ಪೋಸ್ಟ್ ವರೆಗೆ ಜೀಪು  ಪ್ರಯಾಣ. ಅಂತೂ ಕಾಡಿನ ಸನಿಹಕ್ಕೆ ಬಂದೆವು. ಸ್ವಲ್ಪ ದೂರದವರೆಗೆ ಮಾರ್ಗವಿತ್ತು. ನಂತರ ಪಕ್ಕದಲ್ಲೇ ಮೇಲಕ್ಕೆ ಕಾಡಿಗೆ ಹೋಗುವ ಒಂದು ಕಾಲ್ದಾರಿ ಕಾಣಿಸಿತು, ಅದರಲ್ಲೇ ಏರಿ ಮೇಲೆ ಹತ್ತಿದೆವು. ನಿಜ ಹೇಳಬೇಕೆಂದರೆ ನಮಗೆ ಕುದುರೆಮುಖದ ಬಗ್ಗೆ ಏನೂ ಗೊತ್ತಿರಲಿಲ್ಲ, ದಾರಿಯೂ ತಿಳಿದಿರಲಿಲ್ಲ. ಏನೋ ಒಂದು ಹುಚ್ಚು ಧೈರ್ಯದಲ್ಲಿ   ಹೊರಟಿದ್ದೆವು. ಆ ಕಾಲದಲ್ಲಿ ಕಾಡಿಗೆ ಹೋಗಲು ಫಾರೆಸ್ಟ್ ನವರ ಅನುಮತಿ, ಎಂಟ್ರಿ ಫೀಸು  ಏನೂ ಬೇಕಾಗಿರಲಿಲ್ಲ. ನಿಧಾನಗತಿಯಲ್ಲಿ ಹೆಜ್ಜೆ ಹಾಕುತ್ತಾ ಮೆಲೇರುತಿದ್ದೆವು. ಕಾಡು ಕೂಡಾ ದಟ್ಟವಾಗತೊಡಗಿತ್ತು. ಏರು ದಾರಿ ಮುಗಿಯುತ್ತಲೇ ಇಲ್ಲ. ಅಲ್ಲಲ್ಲಿ ನಿಂತು, ಕೂತು ಮುಂದೆ ಸಾಗಿದೆವು. ಇಬ್ಬರು ಮಕ್ಕಳು ಮತ್ತು ಅಣ್ಣ, ಬಹಳ ಉತ್ಸಾಹಿಗಳಾಗಿ ಮುಂದೆ ನಡೆಯುತಿದ್ದರು. ಅವರನ್ನು ನೋಡಿ ನಾವು ಸಹಾ ಮುಂದೊತ್ತಿದೆವು. ಹಸಿವು ಜೋರಾಯಿತು, ಬುತ್ತಿ ಬಿಚ್ಚಿದೆವು, ಆಹಾ ಏನು ರುಚಿ! ತಿಂಡಿ  ತಿಂದು ಸ್ವಲ್ಪ ಹೊತ್ತು ವಿಶ್ರಾಂತಿ. ಸಣ್ಣ ನಿದ್ದೆಯೂ ಆಯಿತು. ಕೆಲವರಿಗೆ ಆಗಲೇ ಕಾಲು ಎಲ್ಲಾ ನೋವು, ಮುಳ್ಳು ತರಚಿದ ಗಾಯ, ಅದಕ್ಕೆಲ್ಲಾ ಸ್ವಲ್ಪ ಚಿಕಿತ್ಸೆ, -ಮತ್ತೆ ಮುಂದೆ ಏರಿದೆವು.
--


--

ಸುಮಾರು ನಾಲ್ಕು ಗಂಟೆಗೆ ಸ್ವಲ್ಪ ಸಮತಲ ಜಾಗಕ್ಕೆ ಬಂದೆವು, ಸ್ಥಳ ಪರೀಕ್ಷಣೆ ನಡೆಸಿದಾಗ ಅಲ್ಲೇ, ಪಕ್ಕದಲ್ಲೇ ಕುಡಿಯಲು ಮತ್ತು ಸ್ನಾನಕ್ಕೆ ಬೇಕಾದಾಷ್ಟು ಶುದ್ಧ ನೀರಿನ ಹರಿವು ಕಾಣಿಸಿತು. ಇನ್ನು ಇವತ್ತಿಗೆ ನಡೆದದ್ದು ಸಾಕು ಇಲ್ಲೇ ರಾತ್ರಿಯ ಕ್ಯಾಂಪು ಮಾಡೋಣ ಎಂದದ್ದೆ ಸರಿ ಮಕ್ಕಳು ಅಲ್ಲಿ  ಕುಳಿತೇ ಬಿಟ್ಟರು. ಕೆಲವರು ಕಟ್ಟಿಗೆ ತರಲು ಹೋದರು, ಮಕ್ಕಳು ಮತ್ತು ಕೆಲವರು ಅಲ್ಲಿದ್ದ ಕಲ್ಲುಗಳನ್ನೆಲ್ಲ ದೂರ ಎಸೆದು ನೆಲಕ್ಕೆ ಹಸಿರು ಎಲೆ ಮತ್ತು ಹುಲ್ಲು ಕತ್ತರಿಸಿ ಹರವಿದರು ಮತ್ತು ಅದರ ಮೇಲೆ ಸುಮಾರು ದೊಡ್ಡದಾದ ಪ್ಲಾಸ್ಟಿಕ್ ಶೀಟನ್ನು ಹಾಸಿ ಅದರಮೇಲೆ ಎರಡು ಬೆಡ್ ಶೀಟ್ ಹರವಿದರು. ಅಷ್ಟರಲ್ಲಿ ಅಡಿಗೆ ಒಲೆಯೂ ತಯಾರಾಯಿತು, ಬಿಸಿ ಬಿಸಿ ಕಾಫಿಯೂ ಸಿಕ್ಕಿತು. ನೀರು ಹರಿಯುವಲ್ಲಿಗೆ ಹೋದೆವು, ಅಲ್ಲೇ  ಬಂಡೆಯಲ್ಲಿ ಒಂದು  ಬಕೀಟಿನಷ್ಟು  ದೊಡ್ಡ ಹಳ್ಳವಿತ್ತು, ಅದರಲ್ಲಿ ನೀರು ತುಂಬಿ ಮುಂದೆ ಹರಿಯುತಿತ್ತು. ಅಣ್ಣ ಸ್ನಾನಕ್ಕೆ ಇಳಿದೇ ಬಿಟ್ಟರು, ಮಗ್ ನಲ್ಲಿ ನೀರು ಮೊಗೆದು ಮಕ್ಕಳು ನಾವೆಲ್ಲಾ ಸ್ನಾನ ಮಾಡಿ ಆಯಾಸ ಪರಿಹಾರ ಮಾಡಿಕೊಂಡೆವು. ರಾತ್ರಿಯ ಅಡಿಗೆ ಆಗುತಿತ್ತು, ಅನ್ನ ಬೇಯುವಾಗಲೇ ಅದಕ್ಕೆ ಉಪ್ಪು, ಖಾರ, ಬೆಲ್ಲ, ಲಿಂಬೆ ಹಣ್ಣು, ಸಾಂಬಾರುಪುಡಿ, ಗರಂ ಮಸಾಲೆ ಎಲ್ಲಾ ಹಾಕಿ ಬೇಯಿಸುವುದು!(ಇದಕ್ಕೆ ನಾವು ಹುಗ್ಗಿ ಎನ್ನುತ್ತಿದ್ದೆವು) ರಾತ್ರಿ ಗೆ ಅದನ್ನು ತಿಂದು ಸ್ವಲ್ಪ ಮಲಗಿದೆವು.  ಒಂದೆಡೆ ಶಿಭಿರಾಗ್ನಿ ಉರಿಯುತ್ತಿತ್ತು. ರಾತ್ರಿ ಹತ್ತು ಗಂಟೆಯ ವೇಳೆಗೆ ಸರದಿ ಪ್ರಕಾರ ರಾತ್ರಿ ಪ್ರಹರೆ ಮಾಡಿದೆವು. ಕುದುರೆಮುಖ ಪ್ರದೇಶದಲ್ಲಿ ಕಾಡುಕೋಣಗಳೂ ಇತರ ಪ್ರಾಣಿಗಳು ಸಹಾ ಜಾಸ್ತಿ ಇವೆ ಎಂದು ಓದಿದ್ದೆವು. ರಾತ್ರಿ ಸ್ವಲ್ಪ ಮಳೆಯೂ ಹನಿಯಿತು. ಪ್ಲಾಸ್ಟಿಕ್ ಶೀಟ್ ಮೇಲೆ ಹೊದ್ದುಕೊಂಡೆವು. ಬೆಳಗಾಯಿತು ಬೇಗ ಬೇಗ ಎಲ್ಲಾ ಮುಗಿಸಿ ಮುಂದೆ ಹೊರಡಲು ತಯಾರು ಮಾಡಿದೆವು. ಬೆಳಗಿನ ತಿಂಡಿ, ಅವಲಕ್ಕಿ ಉಪ್ಪಿಟ್ಟು!
--

--

ಯಾವ ದಿಕ್ಕಿನಲ್ಲಿ  ಹೋಗಬೇಕು ಎಂಬುದರಲ್ಲಿ  ಸ್ವಲ್ಪ ಗಲಿಬಿಲಿ ಆಯಿತು. ಸ್ವಲ್ಪ ಮುಂದೆ  ಹೋಗಿ ನೋಡೋಣ ಎಂದು ಹೊರಟೆವು. ಪುಣ್ಯಕ್ಕೆ ನಮ್ಮ ಆಯ್ಕೆ ಸರಿಯಾಗಿತ್ತು. ಪರ್ವತಗಳ ಸಾಲು ಕಾಣಿಸಿತು ಹಾಗೆಯೇ ಸುಮಾರು ದೂರ ನಡೆದೆವು. ಬೆಳಗಿನ ತಂಗಾಳಿ, ಮಂಜು ಮುಸುಕಿದ ವಾತಾವರಣ, ಹುಲ್ಲಿನ ಮೇಲಿನ ಇಬ್ಬನಿ ಎಲ್ಲಾ ಮನಸ್ಸಿಗೆ ಮುದ ಕೊಡುತ್ತಿತ್ತು. ಮಕ್ಕಳು ಮತ್ತು ಅಣ್ಣ ಈ ಹೊಸ ಅನುಭವವನ್ನು ಬಹಳ ಮೆಚ್ಚಿದರು. ಮಕ್ಕಳಂತೂ ಜಿಂಕೆ ಮರಿಗಳ ಹಾಗೆ ಓಡಾಡುತಿದ್ದರು.
--

--
ದೂರದಲ್ಲಿ ಹಸಿರಾದ ಹೊಲಗಳು, ಒಂದು ಮನೆ, ಕೊಟ್ಟಿಗೆ ಎಲ್ಲಾ  ಕಾಣಿಸಿದವು. ಒಹ್! ಇದೇ ಸೈಮನ್ ಲೋಬೋ ಮನೆ ಇರಬೇಕು ಎಂದುಕೊಂಡೆವು.
ಇದರ ಬಗ್ಗೆ ಒಂದು ಲೇಖನ ಓದಿದ್ದೆವು. ಬ್ರಿಟಿಷರ ಅಡಿಗೆಯವನಾಗಿ ಅಲ್ಲಿಗೆ ಬಂದವನು ಅವರು ಹೋದ ಮೇಲೂ ಅಲ್ಲೇ ನೆಲಸಿ ಕೃಷಿ ಮಾಡಿಕೊಂಡು ತನ್ನದೇ ಆದ ಒಂದು ಲೋಕವನ್ನು ಸೃಷ್ಟಿಸಿದ್ದ! 
--

--

ಯಾರ ಹಂಗೂ ಇಲ್ಲದೆ ಒಬ್ಬಂಟಿಯಾಗಿ ಬದುಕಿ ಆಮೇಲೆ ಸಂಸಾರ ಬೆಳೆದು ಮಕ್ಕಳು ಮೊಮ್ಮಕ್ಕಳು ಎಲ್ಲಾ ಅಲ್ಲೇ ಬೆಳೆದರು. ಚಳಿ, ಗಾಳಿ, ಮಳೆ ಎಂತ ಯಾವುದನ್ನೂ ಲೆಕ್ಕಿಸದೆ ಬಾಳಿ ಬದುಕಿದ. ನಾವು ಮುಂದುವರಿದಂತೆ ಒಬ್ಬಾಕೆ ಹೆಂಗಸು ಕಾಣಸಿಕ್ಕಿದಳು. ಸೈಮನ್ ಲೋಬೋ ಎಲ್ಲಿದ್ದಾರೆ ಎಂದು ಕೇಳಿದೆವು. 'ಅಗೋ ಅಲ್ಲಿ ಮಲಗಿದ್ದಾರೆ' ಎಂತ ಅವನ ಸಮಾಧಿ ತೋರಿಸಿದಳು. ಆಕೆಯೊಂದಿಗೆ ಒಂದಿಷ್ಟು ಮಾತಾಡಿ ಕುದುರೆಮುಖದ ದಾರಿಯನ್ನು ಕೇಳಿಕೊಂಡು ಮುಂದೆ ನಡೆದೆವು. ದಾರಿಯುದ್ದಕ್ಕೂ ಪುಟ್ಟ ಕಾಲುವೆ ಮಾಡಿ ನೀರು ಒಸರುವ ಕಡೆಯಿಂದ ಎಲ್ಲಾ ತನ್ನ ಹೊಲದ ಕಡೆಗೆ ಹರಿದುಬರುವಂತೆ ಮಾಡಿದ್ದ ಲೋಬೋ. ಆದ್ದರಿಂದ ನಮಗೂ ನೀರು ತುಂಬಾ ದೂರದವರೆಗೂ ದೊರಕಿತ್ತು. ಎಷ್ಟು ದೂರ ನಡೆದರೂ ತಲುಪುತ್ತಿಲ್ಲ. ಬಿಸಿಲು ಸ್ವಲ್ಪ ಜೋರಾಗತೊಡಗಿತ್ತು. ಏರುತ್ತಾ ಹೋಗಬೇಕು ಆಮೇಲೆ ಸ್ವಲ್ಪ ಸಮತಟ್ಟು, ಮತ್ತೆ ಏರು ದಾರಿ, ಹೀಗೇ ಸಾಗಿತ್ತು ನಮ್ಮ ಪಯಣ. 
--
--
ದೂರದಲ್ಲಿ ಕುದುರೆಮುಖದ ತುದಿ ಕಾಣುತಿತ್ತು. ಅಲ್ಲಿಗೆ ಇನ್ನೂ ಎಷ್ಟು ನಡೆಯಬೇಕೆಂಬುದು ನಮಗೆ ತಿಳಿಯದು. ಅಲ್ಲಲ್ಲಿ ಇಳಿಜಾರು ಪ್ರದೇಶದಲ್ಲಿ ಶೋಲಾ ಅರಣ್ಯ ಸಿಗುತಿತ್ತು, ಅಲ್ಲಿ ನೀರು, ನೆರಳು ಎರಡೂ ದೊರಕಿ ನಮ್ಮ ಆಯಾಸವನ್ನು ಪರಿಹರಿಸುತಿತ್ತು. ಹಾಗೆ ಒಂದು ಶೋಲಾದಲ್ಲಿ ನಮಗೆ ಒಂದು ಬಾಳೆಯ ಹಿಂಡಲು ಕಾಣಿಸಿತು, ನೋಡುವಾಗ ಒಳ್ಳೆಯ ಹಣ್ಣಾದ ಬಾಳೆಯ ಗೊನೆ ತೂಗುತ್ತಿದೆ. ಇಬ್ಬರು ತಮ್ಮಂದಿರು ಅಲ್ಲಿಗೆ ಏರಿದರು, ಗೊನೆಯನ್ನು ಕಡಿದು ತಂದರು. ಹಳದಿ ಬಣ್ಣದ ಕದಳಿ ಬಾಳೆಹಣ್ಣು! ಆಹಾ! ಕೈ ಹಾಕಿ ಹಣ್ಣನ್ನು ಕಿತ್ತರು, ಸುಲಿದು ನೋಡಿದರೆ ಅದರೊಳಗೆ ಬಾಳೆಯ ಹಣ್ಣು ಇರಲಿಲ್ಲ ಬದಲಿಗೆ  ತುಂಬಾ ದೊಡ್ಡ ಬೀಜಗಳು ಮತ್ತು ಲೋಳೆಯಂತಹ ತಿರುಳು. ರುಚಿ ನೋಡಿದರೆ ಬರೇ ಸಪ್ಪೆ. ಅದಕ್ಕೇ  ಇರಬೇಕು ಅದನ್ನು ಮಂಗಗಳು ಸಹಾ ಮುಟ್ಟಿರಲಿಲ್ಲ. ಇಲ್ಲವಾದರೆ ಕಾಡಿನಲ್ಲಿ ಹಣ್ಣಾದ ಬಾಳೆಗೊನೆ ಉಳಿಯಲು ಶಕ್ಯವೇ?  ಅಷ್ಟೊಂದು ವಿಧದ ಕಾಡುಪ್ರಾಣಿಗಳ ಗಮನಕ್ಕೆ ಬಾರದೆ ಇರಲು ಸಾಧ್ಯವೇ? ನಾವದನ್ನು ಯೋಚಿಸಿರಲೇ ಇಲ್ಲ.  ನಮ್ಮ ಬೇಸ್ತುತನ ನೋಡಿ ಅವು ನಕ್ಕಿರಬಹುದು.
--
--
ಇನ್ನೂ ಸುಮಾರು 5-6 km. ಹೋಗಬೇಕು. ಎಲ್ಲರನ್ನು ಹುರಿದುಂಬಿಸುತ್ತಾ ಶ್ರೀಹರಿ ಮತ್ತು ರವಿ ನಮ್ಮನ್ನು  ಮುಂದಕ್ಕೆ  ಕರೆದೊಯ್ಯುತಿದ್ದರು. ಪೂಜಾ ತುಂಬಾ ಸುಸ್ತಾಗಿದ್ದಳು. ಅವಳನ್ನು ಪುಸಲಾಯಿಸಿ ಮುಂದೆ ಕೊಂಡುಹೋಗುತಿದ್ದರು. ಅಣ್ಣನಿಗೂ ಸ್ವಲ್ಪ ಆಯಾಸ ಕಂಡು ಬರುತಿತ್ತು.
--
--
ಸ್ವಲ್ಪ ವಿಶ್ರಮಿಸಿ ಮುಂದೆ ಹೋಗೋಣ ಎಂತ ಎಲ್ಲರೂ ಕುಳಿತೇಬಿಟ್ಟರು. ಬಿಸ್ಕತ್ತು ಲಿಂಬೆ ಶರಬತ್ತು ಕುಡಿದು ಹೊಸ ಉತ್ಸಾಹದಿಂದ ಮುಂದೆ ನಡೆದೆದೆವು.
--
--
ಕಣ್ಣಿಗೆ ಕಾಣುತಿದ್ದರು ಸಹಾ ನಡೆದಷ್ಟೂ ತಲುಪುತ್ತಿಲ್ಲ. ಪರ್ವತಗಳೇ ಹಾಗೆ, ಎಲ್ಲವೂ ಪ್ರಕೃತಿ ನಿರ್ಮಿತ ದಾರಿಗಳು. ಅದರಲ್ಲಿ  ಹೋದರೆ ಮಾತ್ರ ತುದಿ ಮುಟ್ಟಬಹುದು. ಇಲ್ಲವಾದರೆ ಏರಲು ಅಸಾಧ್ಯವಾದ ಶಿಖರ ಎದುರಾಗಬಹುದು. ಸರಿ  ಇಲ್ಲಿ ವರೆಗೆ  ಬಂದಾದ ಮೇಲೆ ವಾಪಾಸು ಹೋಗುವುದೆಂದರೆ ಹೇಗೆ ಅಲ್ಲವೇ?
--
--
ಕುದುರೆಮುಖ ಶಿಖರ ಹತ್ತಿರ ಬರುತಿದ್ದಂತೆ ಎಲ್ಲರ ಉತ್ಸಾಹವೂ ಇಮ್ಮಡಿಸಿತು. ಚಾರಣಿಗರು, ದನಗಾಹಿಗಳು ನಡೆದು ಒಂದು ದಾರಿ ಚೆನ್ನಾಗಿ ಮೂಡಿತ್ತು. ಅದರಲ್ಲೇ ಸಾಗಿದೆವು,ದಾರಿ ತಪ್ಪುವ ಭಯ ಈಗಿಲ್ಲ.
--
-- 
ಈಗ ಸುಮಾರು ನಡು ಮದ್ಯಾಹ್ನ, ಬಿಸಿಲು ಹೆಚ್ಚಿದ್ದರೂ ಪರ್ವತದ ಮೇಲಿನ ಬೀಸುಗಾಳಿ ನಮ್ಮನ್ನು ಕುದುರೆಮುಖದ ನೆತ್ತಿಗೆ ಆಹ್ವಾನಿಸುತಿತ್ತು. ಶಿಖರ ಹತ್ತಿರವಾಗುತಿದ್ದಂತೆ ಕಡಿದಾದ ಏರುದಾರಿ--ಅದನ್ನೇರಿದರೆ ಮುಗಿಯಿತು, ಅದನ್ನು ಜಯಿಸಿ ಕುದುರೆಯ ಬೆನ್ನಮೇಲೆ ಏರಿದೆವು. ನನ್ನ ಮಗಳು ಎಲ್ಲರಿಗಿಂತ ಮುಂದೆ ಇದ್ದವಳು ಒಮ್ಮೆಲೇ ಓಡಲು ಸುರುಮಾಡಿದಳು. ನಾವೆಲ್ಲಾ ನೋಡುತಿದ್ದಂತೆ ಅವಳು ಮೊದಲು ಶಿಖರ ತಲುಪಿ ಅಲ್ಲಿ ಹಿಂದೆ ಯಾರೋ ನೆಟ್ಟಿದ್ದ ದ್ವಜಸ್ಥಂಭವನ್ನು ಹಿಡಿದು ಗುರಿ ತಲುಪಿದ್ದಳು.
--
--
ನಾವೆಲ್ಲರೂ ಅಲ್ಲಿಗೆ ತಲುಪಿದೆವು. ಆಹಾ ಎಷ್ಟು ಮನೋಹರ ದೃಶ್ಯಗಳು! ಸುತ್ತಲೂ ಚಲಿಸುವ ಮೋಡಗಳು, ರೊಯ್ಯನೆ ಬೀಸುವ ಚಳಿಗಾಳಿ, ಮೈಯೆಲ್ಲಾ ಕಚಗುಳಿ ಇಡುತಿತ್ತು. ದೂರದಲ್ಲಿ ನಾವು ಏರಿ ಬಂದ ಬೆಟ್ಟಗಳ ಸಾಲು, ಕಾಲುದಾರಿ ಎಲ್ಲಾ ಚಿತ್ರ ಬರೆದಂತೆ ಕಾಣುತಿತ್ತು. ಎಲ್ಲರೂ ಕುಳಿತು, ಮೌನವಾಗಿ ಎಲ್ಲವನ್ನೂ ವೀಕ್ಷಿಸುತಿದ್ದೆವು.
--
--
ಅಲ್ಲೇ ಕೆಳಗಡೆ ಒಂದು ಕಾಡು ಇತ್ತು ಅದರಲ್ಲಿ ಎಲ್ಲಾ ಕುಬ್ಜವಾಗಿ ಬೆಳೆದ ಮರಗಳು, ಗಾಳಿಯ ಹೊಡೆತದಿಂದ ವಿಚಿತ್ರವಾಗಿ ತಿರುಚಿಕೊಂಡಿರುವ ಟೊಂಗೆಗಳು, ಅದರ ತುಂಬಾ ಜರಿ ಗಿಡ ಮತ್ತು ಹಾವಸೆ ಬೆಳೆದು ಪೂರ್ತಿ ಕಾಡು, ಒಂದು ನಿಗೂಢಮಯ ಜಗತ್ತಿನಂತೆ ತೋರುತಿತ್ತು. ಅಲ್ಲೇ ನೀರಿನ ಒಂದು ಪುಟ್ಟ ಝರಿ ಇತ್ತು, ಅಲ್ಲೇ ನಾವು ಮಧ್ಯಾಹ್ನದ ಅಡಿಗೆ ಮಾಡಿದೆವು. ಮ್ಯಾಗಿ ನೂಡಲ್ಸ್ ಮಾಡಿ ತಿಂದು ಹಸಿವನ್ನು ತಣಿಸಿದೆವು.
--
--
ಸ್ವಲ್ಪ ವಿಶ್ರಾಂತಿ ಪಡೆದ ಮೇಲೆ ವಾಪಸು ಪ್ರಯಾಣ. ಈ ಸಲ ನಾವು ಬೇರೆಯೇ ದಾರಿಯಲ್ಲಿ ಸಾಗಿದೆವು, ಸ್ವಲ್ಪ ದೂರ ಬಂದಾಗ ಒಂದು ಇಗರ್ಜಿಯ ಅವಶೇಷ ಕಾಣಸಿಕ್ಕಿತು. ಇದು ಬ್ರಿಟಿಷರು ನಿರ್ಮಿಸಿದ್ದಂತೆ. ಸ್ವಲ್ಪ ಸ್ವಲ್ಪವಾಗಿ ಇಳಿಜಾರು ದಾರಿಯಲ್ಲಿ ನಡೆದೆವು. ಆದರೆ ನಮ್ಮಲ್ಲಿ ಯಾರಿಗೂ ಈ ದಾರಿ ಎಲ್ಲಿಗೆ ಹೋಗಿ ಸೇರುತ್ತದೆ ಎಂಬ ಖಚಿತ ಮಾಹಿತಿ ಇರಲಿಲ್ಲ. ಒಂದು ಕಡೆಯಲ್ಲಂತೂ ನಾವು ದಾರಿ ಕಾಣದೆ ತಬ್ಬಿಬ್ಬಾದೆವು. ರವಿ ಒಬ್ಬನೇ ಸ್ವಲ್ಪ ಮುಂದೆ ಹೋಗಿ ದಾರಿ ಇದೆಯಾ ಎಂತ ನೋಡಲು ಹೋದ. ಸ್ವಲ್ಪ ಹೊತ್ತಿನಲ್ಲಿ ದೂರದಿಂದ ಶಿಳ್ಳು ಕೇಳಿಸಿತು. ಅದು ರವಿ ನಮ್ಮನ್ನು ಮುಂದೆ ಬರಲು ಹೇಳಿದ್ದು. ಎಲ್ಲರೂ ಭಾರವಾದ ಕಾಲುಗಳನ್ನು ಎಳೆಯುತ್ತ ನಡೆದೆವು. ಅಂತೂ ಸುಮಾರು ಇಳಿದ ಮೇಲೆ ನಮಗೆ ಒಂದು ಪುಟ್ಟ ಹೊಳೆ ಅಡ್ಡ ಬಂತು. ನಡೆದೇ ಅದನ್ನು ದಾಟಿ ಎದುರು ದಡಕ್ಕೆ ಬಂದೆವು. ಸ್ವಲ್ಪ ದೂರ ಹೋದಮೇಲೆ ನಮಗೆ ಮಾರ್ಗ ಸಿಕ್ಕಿತು. ಅಲ್ಲೇ ಒಂದು ಸಣ್ಣ ಗೂಡಂಗಡಿಯಲ್ಲಿ ವಿಚಾರಿಸಿದಾಗ ಅದು ಬಸರಿಕಟ್ಟೆ ಎಂತ ಗೊತ್ತಾಯಿತು. ಒಂದರ್ಧ ಗಂಟೆಯಲ್ಲಿ ಮಲ್ಲೇಶ್ವರಕ್ಕೆ ಹೋಗುವ ಬಸ್ಸು ಸಿಕ್ಕಿತು. ಅಲ್ಲಿಗೆ ಹೋಗಿ ನಮ್ಮ ಪರಿಚಯದವರ ಮನೆ ಹುಡುಕಿ ಅವರ ಮೂಲಕ ಗೆಸ್ಟ್ ಹೌಸ್ ನಲ್ಲಿ ಒಂದು ಕೋಣೆ ಪಡಕೊಂಡು ಎಲ್ಲರೂ ಬಿದ್ದು ಕೊಂಡೆವು, ಯಾರಿಗೂ ಮೈ ಮೇಲೆ ಪರಿವೆಯೇ ಇರಲಿಲ್ಲ. ಮರುದಿನ ನಮ್ಮ ಪರಿಚಯಸ್ಥರು ಬಂದು ನಮ್ಮನ್ನು ಕುದುರೆಮುಖ ಪ್ರಾಜೆಕ್ಟ್ ಗೆ ಕರಕೊಂಡು ಹೋದರು. ಅಲ್ಲೆಲ್ಲ ನೋಡಿ ಆಮೇಲೆ ಮಂಗಳೂರಿಗೆ ಬಂದು ಕಾಸರಗೋಡಿಗೆ ತಲುಪಿದೆವು.
ನಾವು ಆಮೇಲೆ ಹಲವು ಸಲ ಚಾರಣ ಮಾಡಿದ್ದರು ಸಹಾ ಈ ಕುದುರೆಮುಖ ಚಾರಣದಷ್ಟು ಖುಷಿ ಪಟ್ಟಿರಲಿಲ್ಲ. 

1 comment:

  1. ಸೂಪರ್! ಇಪ್ಪತ್ತು ವರ್ಷದ ಹಿಂದಿನ ಈ ನಿಮ್ಮ ಚಾರಣದ ಅನುಭವ ತುಂಬಾ ಸೊಗಸಾಗಿದೆ.
    ಆದರೆ ಶೀರ್ಷಿಕೆ ಕಾಣ್ತಾ ಇಲ್ಲ, ಬಹುಶಃ ಅಕ್ಷರದ ಬಣ್ಣ ಮತ್ತು ಬ್ಯಾಕ್ ಗ್ರೌಂಡ್ ಬಣ್ಣ ಒಂದೇ ಆಗಿರಬಹುದು.

    ReplyDelete