ಬೇಲಂ ಗುಹೆಗಳಿಗೆ ನಾವು ಎರಡು ತಿಂಗಳ ಹಿಂದೆ ಭೇಟಿ ಕೊಟ್ಟಿದ್ದೆವು. ಈ ಪ್ರಕೃತಿ ನಿರ್ಮಿತ ವಿಸ್ಮಯಕಾರಿ ಗುಹೆಗಳಿರುವುದು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ. ನಾವು ಬೆಂಗಳೂರಿನಿಂದ ಧರ್ಮಾವರಂ ಮಾರ್ಗವಾಗಿ ತಾಡಪತ್ರಿಗೆ ಬಂದು ಅಲ್ಲಿ ನಮ್ಮ ಊರಿನವರಾದ ಕೆ. ಎಂ. ಭಟ್ ಅವರ ಮನೆಯಲ್ಲಿ ಉಳಿದುಕೊಂಡು ಮರು ದಿನ ಬೆಳಿಗ್ಗೆ ಅವರ ಶ್ರೀಮತಿ, ಜಯಂತಿ ಭಟ್ ಅವರ ಜೊತೆಯಲ್ಲಿ ಕಾರಿನಲ್ಲಿ ಪ್ರಯಾಣ ಹೊರಟೆವು. ಸುಮಾರು 25 km. ದೂರ ಸಾಗಿದಾಗ ನಮಗೆ ಈ ಬೇಲಂ ಗುಹೆಗಳು ಕಾಣ ಸಿಗುತ್ತವೆ. ಇಲ್ಲಿಗೆ ಬರಲು ಉತ್ತಮ ರಸ್ತೆ ಇದ್ದು,ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ 270 km. ಅನಂತಪುರಂನಿಂದ 85 km. ಮತ್ತು ಕರ್ನೂಲ್ ನಿಂದ 110 km. ದೂರದಲ್ಲಿದೆ.
ಇಲ್ಲಿನ ಆಫೀಸಿನಲ್ಲಿ ಟಿಕೆಟ್ ಪಡೆದುಕೊಂಡು ಗುಹೆಗಳ ಒಳಗೆ ಇಳಿದೆವು. ಪ್ರವೇಶ ಶುಲ್ಕ ತಲಾ 30 ರು. ಉಚಿತ ಮಾರ್ಗದರ್ಶಿಗಳೂ ಇಲ್ಲಿ ಲಬ್ಯ, ಇವರು ನಮ್ಮನ್ನು ಗುಹೆಗಳ ಎಲ್ಲಾ ಪ್ರಮುಖ ಜಾಗೆಗಳಿಗೆ ಕರೆದೊಯ್ಯುತ್ತಾರೆ ಮತ್ತು ಚೆನ್ನಾಗಿ ವಿವರಣೆ ಕೊಡುತ್ತಾರೆ. ಈ ಗುಹೆಗಳು ಸುಮಾರು 2 km. ವರೆಗೆ ಸಾಗಿದೆ. ಕೆಲವೆಡೆ ವಿಶಾಲವಾದ ಸ್ಥಳಗಳಿದ್ದರೆ ಇನ್ನು ಕೆಲವೆಡೆ ಇಕ್ಕಟ್ಟಾದ ಜಾಗೆಗಳಿವೆ. ಅದೊಂದು ಅದ್ಬುಥ ಲೋಕ! ಹಿಂದಿನ ಯಾವುದೋ ಒಂದು ಯುಗದಲ್ಲಿ ನದಿಯೊಂದು ಗುಪ್ತಗಾಮಿನಿಯಾಗಿ ಹರಿದಿದ್ದ ಪರಿಣಾಮವಾಗಿ ಈ ಗುಹೆಗಳು ನಿರ್ಮಾಣವಾದವಂತೆ. ಗುಹೆಯ ಮುಂಭಾಗದಲ್ಲೇ ಒಂದು ವಿಶಾಲವಾದ ವೃತ್ತಾಕಾರದ ಹಜಾರವೊಂದಿದ್ದು ಅಲ್ಲೇ ಇಲ್ಲಿನ ಇತಿಹಾಸ, ವರ್ಣನೆ, ಕಾಲಮಾನ ಎಲ್ಲಾ ಚೆನ್ನಾಗಿ ವಿವರಿಸುವ ಫಲಕಗಳನ್ನು ಇರಿಸಿದ್ದಾರೆ. ಈ ಗುಹೆಗಳ ಅಸ್ತಿತ್ವವನ್ನು 1884 ರಲ್ಲೇ ಕಂಡುಕೊಂಡಿದ್ದರು. ಆದರೆ ಇತ್ತೀಚಿಗೆ 1983 ರಲ್ಲಿ ಜರ್ಮನಿಯ ಹರ್ಬರ್ಟ್ ಡೇನಿಯಲ್ ಗೆಬುಎರ್ ರಿಂದ ಅನ್ವೇಷಣೆಯಾಗಿ, ಮುಂದೆ 2002 ನೆ ಇಸವಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಯಿತು. ಇಲ್ಲಿ ಬೌದ್ಧ ಸನ್ಯಾಸಿಗಳು ಇದ್ದರು ಎಂಬುದಕ್ಕೆ ಕುರುಹುಗಳು ಸಿಕ್ಕಿವೆಯಂತೆ.
ಆಲ್ಲಿಂದ ಮುಂದೆ ಗುಹೆ ತೆರೆದುಕೊಳ್ಳುತ್ತದೆ. ಬಂಗಾರವರ್ಣದ ವಿದ್ಯುತ್ ದೀಪಗಳನ್ನು ಕಣ್ಣಿಗೆ ರಾಚದ ರೀತಿಯಲ್ಲಿ ಅಳವಡಿಸಿದ್ದಾರೆ. ಹಾಗಾಗಿ ಆ ಬೆಳಕಿನಲ್ಲಿ ಯಾವುದೋ ಒಂದು ರಮ್ಯ ನಿಘೂಡ ಲೋಕಕ್ಕೆ ಕಾಲಿರಿಸಿದಂತಾಗುತ್ತದೆ. ಮೇಲ್ಭಾಗದಲ್ಲಿ, ಅಕ್ಕಪಕ್ಕ ಎಲ್ಲಾ ವಿಚಿತ್ರವಾದ ಬಣ್ಣ ಬಣ್ಣದ ಶಿಲಾಕೃತಿಗಳು, ಎಲ್ಲವೂ ಪ್ರಕೃತಿ ನಿರ್ಮಿತ!ಭೂಮಿಯ ಮೇಲ್ಭಾಗದಿಂದ ನೀರು ಮಣ್ಣಿನೊಳಗೆ ಇಂಗಿ ಕೆಳಕ್ಕೆ ಹೋಗುತ್ತದೆ. ಕೆಳಗಡೆ ಗುಹೆಗಳು ಇದ್ದರೆ ಆಗ ನೀರು ತೊಟ್ಟಿಕ್ಕುತ್ತದೆ ಮತ್ತು ನೀರಿನಲ್ಲಿ ಕರಗಿರುವ ಖನಿಜಗಳು ಅಲ್ಲೇ ಪದರಗೊಳ್ಳುತ್ತವೆ ಮತ್ತು ಕ್ರಮೇಣ ಕೆಳಮುಖವಾಗಿ ಬೆಳೆಯಲಾರಂಭಿಸುತ್ತದೆ. ಅದೇ ತರಹ ನೀರು ಬಿಂದು ಬಿಂದಾಗಿ ಕೆಳಗೆ ಬಿದ್ದಾಗ ಅಲ್ಲಿಯೂ ಶಿವಲಿಂಗ ಆಕೃತಿಗಳೂ, ಇನ್ನಿತರ ವಿಚಿತ್ರ ಶಿಲ್ಪಾಕಾರಗಳು ಮೊಳೆಯುತ್ತವೆ.ಹೀಗೆ ಕಲ್ಲಿನ ಆಕೃತಿಗಳು ಒಂದಿಂಚು ಬೆಳೆಯಲು 100 ವರ್ಷಗಳು ಬೇಕಂತೆ. ಇದಕ್ಕೆ Stalachite ಮತ್ತು Stalagmite formation ಎನ್ನುತ್ತಾರೆ. ಇವುಗಳೇ ಈ ಗುಹೆಗಳ ಮುಖ್ಯ ಆಕರ್ಷಣೆ. ಇವುಗಳ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲಿತವಾಗಿ ಬಣ್ಣದ ದೀಪಗಳು ಮಿನುಗಿದಂತಾಗುತ್ತದೆ. ಸ್ವಲ್ಪ ಮುಂದೆ ಹೋದಾಗ ಒಂದು ಪ್ರತ್ಯೇಕ ಗುಹೆ ಇದೆ ಅದು ಧ್ಯಾನ ಮಂದಿರ! ಮತ್ತೂ ಮುಂದೆ ಒಂದು ಏಕಶಿಲಾ ಮಂಚ! ಅಕ್ಕ ಪಕ್ಕದಲೆಲ್ಲಾ ಇನ್ನೂ ಯಾರೂ ಪ್ರವೇಶಿಸದೇ ಇರುವ ಕೆಲ ಗುಹೆಗಳು. ಇವುಗಳಲ್ಲಿ ದೊಡ್ಡ ದೊಡ್ಡ ಬಂಡೆಗಳು ಅಲ್ಲಲ್ಲಿ ಬಿದ್ದುಕೊಂಡು, ಒಳಗೆ ಹೋಗಲು ಸಾಧ್ಯವಿಲ್ಲ. ಆ ಬಂಡೆಗಳನ್ನು ಹೊರ ತೆಗೆದರೆ ಗುಹೆಗಳ ವಿಸ್ತಾರ ಇನ್ನೂ ಹೆಚ್ಚಬಹುದು. ಮುಂದೆ ಸಪ್ತಸ್ವರ ಗುಹೆ ಮತ್ತು ಆಲದ ಮರ ಸಿಗುತ್ತದೆ. ಪ್ರಕೃತಿ ನಿರ್ಮಿತ ಬಂಡೆಯ ಸ್ಥಂಭಗಳನ್ನು ಬಡಿದಾಗ ಸಪ್ತಸ್ವರ ಹೊರಡುತ್ತದೆ. ಮುಂದೆ ನಡೆದಾಗ ಆಲದ ಮರವನ್ನು ಕಂಡು ಬೆರಗಾಗುತ್ತೇವೆ. ಇದು ಸಾವಿರ ಹೆಡೆಯ ನಾಗನ ಹಾಗೆಯೂ ಕಾಣುತ್ತದೆ. ಈಗ ನಾವು ಭೂಗರ್ಭದಲ್ಲಿ ಸುಮಾರು 100 ಅಡಿಗಳಷ್ಟು ಕೆಳಗಡೆ ಬಂದಿರುತ್ತೇವೆ. ಈಗ ಸೆಕೆಯ ಅನುಭವವಾಗುತ್ತದೆ. ಉಸಿರಾಡಲೂ ಕೆಲವರಿಗೆ ಕಷ್ಟವೆನಿಸಬಹುದು. ಆದರೆ ಗಾಬರಿಯಾಗುವುದು ಬೇಡ, ಅಲ್ಲಿ ಒಳಗಡೆಗೆ ಮೇಲಿಂದ ತಂಪಾದ ಗಾಳಿಯನ್ನು ಸರಬರಾಜು ಮಾಡುವ ವ್ಯವಸ್ಥೆ ಇದೆ. ಹಾಗಾಗಿ ಯಾವ ಅಪಾಯವೂ ಇಲ್ಲ. ಅಲ್ಲಿ ಸ್ವಲ್ಪ ಹೊತ್ತು ನಿಂತರೆ ತಂಗಾಳಿಯನ್ನು ಸೇವಿಸಿ ಸುದಾರಿಸಿಕೊಳ್ಳಬಹುದು. ಒಂದು ವೇಳೆ ವಿದ್ಯುತ್ ಕೈ ಕೊಟ್ಟರೆ ಜನರೇಟರಿನ ಸೌಲಭ್ಯವು ಕೂಡಲೇ ದೊರೆಯುತ್ತದಂತೆ.
ಆಲ್ಲಿಂದ ಇನ್ನೂ ಕೆಳಗೆ ಹೋಗಲು ಒಂದು ಪುಟ್ಟ ಸೇತುವೆ ಮತ್ತು ಇಳಿಯಲು ಮೆಟ್ಟಿಲುಗಳು ಸಿಗುತ್ತವೆ. ಎಲ್ಲಾ ಗಟ್ಟಿ ಮುಟ್ಟಾದ ಕಬ್ಬಿಣ ದಿಂದ ಮಾಡಿರುವುದು. ಅದರಲ್ಲಿ ನಾವು ಕೆಳಗೆ ಇಳಿದು ಹೋದರೆ ಇನ್ನೊಂದು ಅಚ್ಚರಿ ಕಾಣಸಿಗುತ್ತದೆ. ಇಲ್ಲಿ ಕಿರಿದಾದ ಒಂದು ಗುಹೆಯಿಂದ ನೀರು ಹರಿದು ಬಂದು ಸುಮಾರು 5 ಅಡಿಗಳಷ್ಟು ಕೆಳಗೆ ಬೀಳುತ್ತದೆ, ಒಂದು ಪುಟ್ಟ ಜಲಪಾತ! ಆದರೆ ಇನ್ನೂ ಒಂದು ವಿಸ್ಮಯವೆಂದರೆ ನೀರು ಕೆಳಗೆ ಬೀಳುವ ಜಾಗದಲ್ಲೇ ಒಂದು ಶಿವಲಿಂಗವನ್ನು ಪ್ರಕೃತಿಯೇ ನಿರ್ಮಿಸಿದೆ. ಈ ಶಿವಲಿಂಗವನ್ನು ಸುತ್ತುವರಿದು ನೀರು ಕೆಳಗೆ ಬೀಳುತ್ತದೆ ಮತ್ತು ಪಾತಾಳ ಗಂಗೆ ಅಂತ ಕರೆಸಿಕೊಳ್ಳುತ್ತದೆ. ಆ ನೀರು ನಿಜಕ್ಕೂ ಗಂಗೆಯೇ ಸರಿ! ಅಷ್ಟು ಸಿಹಿಯಾಗಿದೆ, ತಂಪಾಗಿದೆ. ಶಿವನಿಗೆ ನಮಿಸಿ ಬೊಗಸೆ ತುಂಬಾ ತೀರ್ಥ ಕುಡಿದು ಅಲ್ಲಿ ಸ್ವಲ್ಪ ಹೊತ್ತು ನಿಂತಾಗ ನಮ್ಮ ಪಯಣ ಸಾರ್ಥಕ ವೆನಿಸುತ್ತದೆ. ಈಗ ನಾವು 185 ಅಡಿಗಳಷ್ಟು ಕೆಳಗೆ ಇಳಿದಿರುತ್ತೇವೆ. ಇಲ್ಲಿಂದ ಹರಿಯುವ ನೀರು ಇಕ್ಕಟ್ಟಾದ ಗುಹೆಯಲ್ಲಿ ಹರಿದು ಮುಂದೆ ಸುಮಾರು ದೂರದಲ್ಲಿರುವ ಬೇಲಂ ಸರೋವರವನ್ನು ಸೇರುತ್ತದಂತೆ. ಇಷ್ಟೆಲ್ಲವನ್ನೂ ಸುಮಾರು 2-3 ತಾಸುಗಳಲ್ಲಿ ನೋಡಬಹುದು. ಹೆಚ್ಚೇನೂ ಕಷ್ಟವಿಲ್ಲದೆ ಮೇಲಕ್ಕೆ ಏರಿ ಬರಬಹುದು. ದಣಿದು ಬಂದ ಯಾತ್ರಿಕರಿಗಾಗಿ ಒಂದು ಉಪಹಾರ ಗೃಹ ಮತ್ತು ಒಂದು ವಿಶ್ರಾಂತಿ ಗೃಹವೂ ಇದೆ. ಇಲ್ಲೇ ಪಕ್ಕದಲ್ಲಿ ಬುದ್ಧನ ಒಂದು ದೊಡ್ಡ ಪ್ರತಿಮೆ ರಚಿಸಿದ್ದಾರೆ. ಅದರ ಅಕ್ಕ ಪಕ್ಕ ಮತ್ತು ಹಿಂದುಗಡೆಯಲ್ಲಿ ದೊಡ್ಡ ಬೆಟ್ಟಗಳು ಇದ್ದು ಈ ಪ್ರತಿಮೆ ಎದ್ದು ಕಾಣುತ್ತಿದೆ. ನಮಗೆ ಹತ್ತಿರದಲ್ಲೇ ಇರುವ ಈ ಬೇಲಂ ಗುಹೆಗಳಿಗೆ ಬಂದು ಆನಂದಿಸಲೇ ಬೇಕು. ಇಲ್ಲಿನ ಸೌಕರ್ಯ ಮತ್ತು ಶುಚಿತ್ವವನ್ನು ನಿಜಕ್ಕೂ ಮೆಚ್ಚಲೇ ಬೇಕು.
ವಾಪಸು ಹೋಗುವಾಗ ತಾಡಪತ್ರಿಯಲ್ಲಿ ಪೆನ್ನಾ ನದಿ ದಂಡೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ಮತ್ತು ವೆಂಕಟೇಶ್ವರ ದೇವಾಲಯ ಗಳಿಗೆ ಬೇಟಿ ಕೊಡಬಹುದು. ವಿಜಯನಗರದ ಅರಸರ ಕಾಲದ ಈ ದೇವಾಲಯಗಳ ಶಿಲ್ಪಕಲೆಗಳನ್ನು ನೋಡಿ ಆನಂದಿಸಬಹುದು. ಹಾಗೆಯೇ ಪುಟ್ಟಪರ್ತಿ, ಲೇಪಾಕ್ಷಿಗಳನ್ನು ಕೂಡಾ ಸಂದರ್ಶಿಸಬಹುದು.
No comments:
Post a Comment