Tuesday, 25 February 2014

MODHERA SUN TEMPLE GUJARAT



ಮೊಧೇರಾ ಸೂರ್ಯ ದೇವಾಲಯ
ನಮ್ಮ ಮೌಂಟ್ ಅಬು ಯಾತ್ರೆ ಮುಗಿಸಿ ಮುಂದಿನ ತಾಣವಾದ ಮೊಧೇರಾಕ್ಕೆ ಪಯಣ  ಬೆಳೆಸಿದೆವು. ಮುಂಜಾನೆ ಬೇಗ ಎದ್ದು ಮೌಂಟ್ ಅಬು ಬಸ್ ಸ್ಟ್ಯಾಂಡ್ ನಿಂದ ಬೆಳಗ್ಗೆ 6 ಘಂಟೆಗೆ ಅಹಮದಾಬಾದ್ ಗೆ ಹೋಗುವ ಬಸ್ ಏರಿದೆವು. ಮೊದಲು ನಮ್ಮ ಗಮ್ಯ ಸ್ಥಾನ ಮೆಹಸಾನ. ಇಲ್ಲಿಗೆ ಸುಮಾರು 180 ಕಿ.ಮಿ. ದೂರ. ರಸ್ತೆ ನೇರವಾಗಿ ಚೆನ್ನಾಗಿತ್ತು. 10.30 ಕ್ಕೆ ಮೆಹಸಾನ ತಲುಪಿದೆವು. ಈ ಊರು ತುಂಬಾ ದೊಡ್ಡದಿದ್ದು ಸುಂದರವಾಗಿದೆ. ಇಲ್ಲಿ ಬಸ್ ಇಳಿದು ರಸ್ತೆ ದಾಟಿ ಪಕ್ಕದಲ್ಲೇ ಇರುವ ಇನ್ನೊಂದು ಬಸ್ ನಿಲುಗಡೆಗೆ ಬಂದೆವು.ಇಲ್ಲೇ ನಮಗೆ ಮೊಧೇರಾಗೆ ಹೋಗುವ ಬಸ್ ಬರುವುದು. ಒಂದು 10 ನಿಮಿಷ ಕಾದ ಮೇಲೆ ನಮ್ಮ ಬಸ್ ಬಂತು. ಇಲ್ಲಿಂದ 25ಕಿ.ಮಿ. ಗಳ ಪ್ರಯಾಣ. 11.30 ಕ್ಕೆ ಮೊಧೇರಾ ತಲುಪಿದೆವು. ಬಸ್ ಇಳಿದು ಕೇವಲ 5-6 ನಿಮಿಷ ಕಾಲ್ನಡಿಗೆಯಲ್ಲಿ ಸಾಗಿದಾಗ ನಾವು ಮೊಧೇರಾ ಸೂರ್ಯಮಂದಿರದ ಗೇಟ್ ನ ಮುಂದಿದ್ದೆವು.




 ಇಲ್ಲಿ ಪ್ರವೇಶ ಧನ ಕೇವಲ 5 ರೂ. ಕೊಟ್ಟು ಒಳ ಪ್ರವೇಶಿಸಿದೆವು. ಆದರೆ ಇಲ್ಲೊಂದು ಅನಾನುಕೂಲತೆ ಎದುರಾಯಿತು. ಇಲ್ಲಿ ಉಪಹಾರ ಗೃಹ, ಬಾತ್ ರೂಂ ಮುಂತಾದ ಎಲ್ಲಾ ಸೌಕರ್ಯಗಳಿದ್ದರೂ ಲಗ್ಗೇಜ್ ಇರಿಸಲು ಯಾವುದೇ ವ್ಯವಸ್ಥೆ ಇಲ್ಲದಿರುವುದೇ ಒಂದು ದೊಡ್ಡ  ಕೊರತೆ. ಬೇರೆ ಗತ್ಯಂತರವಿಲ್ಲದೆ ನಮ್ಮ ಬ್ಯಾಗುಗಳೂ ಸೂರ್ಯಮಂದಿರ ವೀಕ್ಷಣೆಗೆ ಬಂದವು. ನಾವು ಸ್ವಲ್ಪ ಫ್ರೆಶ್ ಆಗಿಕೊಂಡು ಮುಂದೆ ಹೋದೆವು. ನಮ್ಮ ಕಬ್ಬನ್ ಪಾರ್ಕನ್ನು ನೆನಪಿಸುವ ವಿಶಾಲವಾದ ತೋಟ. ಅಲ್ಲಲ್ಲಿ ದೊಡ್ಡ ಮರಗಳು, ಹುಲ್ಲು ಹಾಸು, ಹೂ, ಗಿಡ ಮರಗಳು. ನಾವು ಹೋದಾಗ ಎಲ್ಲೆಲ್ಲೂ ಸ್ಪ್ರಿಂಕ್ಲರ್ ನಿಂದ ನೀರು ಸಿಂಪರಣೆ ಆಗುತಿತ್ತು. ಇದರಿಂದ ಪೂರ್ತಿ ವಾತಾವರಣವು ತಂಪಾಗಿ ಆಹ್ಲಾದವಾಗಿತ್ತು.








 ಸೂರ್ಯ ಮಂದಿರದ ಎದುರುಗಡೆ ಅತಿ ಸುಂದರವಾದ ಮತ್ತು ಆಳವಾದ ಸೂರ್ಯಕುಂಡವಿದೆ.  ಕೆಳಗಡೆ ಮರಕತ ಬಣ್ಣ ಹೊಂದಿದ ನೀರು ಮತ್ತು ಇಳಿಯಲು ನಾಲ್ಕೂ ಕಡೆ ಸೋಪಾನಗಳು. ಅಲ್ಲಲ್ಲಿ ಪುಟ್ಟ ಗುಡಿಗಳು. ಒಟ್ಟಾರೆ 108 ಚಿಕ್ಕ ದೊಡ್ಡ ಗುಡಿಗಳಿದ್ದು ಅವುಗಳಲ್ಲಿ ಕೆಲವಲ್ಲಿ ದೇವರ ವಿಗ್ರಹಗಳನ್ನು ಇರಿಸಿದ್ದಾರೆ.


Sun Temple & Holy Pond
 
soorya Kund

  ಸೂರ್ಯ ಮಂದಿರವು ಎಷ್ಟು ಭವ್ಯವಾಗಿದೆಯೋ ಅಷ್ಟೇ ಸುಂದರವಾಗಿದೆ ಈ ಸೂರ್ಯಕುಂಡ. ಇದರ ಹಿಂದೆಯೇ ಇದೆ ಮೊಧೇರಾ ಸೂರ್ಯ ಮಂದಿರ.
ಈ ಸುಂದರ ಮಂದಿರದ ನಿರ್ಮಾಣ ಕಾಲ 1026 ನೇ ಇಸವಿಯಲ್ಲಿ ಸೋಳಂಕಿ ಮಹಾರಾಜ ಒಂದನೆಯ ಭೀಮದೇವನಿಂದಾಯಿತು. ನಾನು ಕಂಡ ಎರಡನೇ ಸೂರ್ಯ ಮಂದಿರ ಇದಾಗಿದ್ದು ಮೊದಲನೆಯದು ಕೋಣಾರ್ಕದ ಸೂರ್ಯಮಂದಿರ. ಅದೊಂದು ಬೇರೆಯೇ ವಿನ್ಯಾಸದ ದೇಗುಲ. ಸೂರ್ಯನ ರಥದ ಆಕೃತಿಯಲ್ಲಿ ಅದನ್ನು ರಚಿಸಿದ್ದಾರೆ. ಆದರೆ ಶಿಲ್ಪಕಲಾ ಸೊಬಗು ಒಂದೇ ರೀತಿಯದ್ದಾಗಿದೆ. ಅದು ನಮ್ಮ ದೇಶದ ಪೂರ್ವದಲ್ಲಿದ್ದರೆ ಇದು ಪಶ್ಚಿಮದಲ್ಲಿದೆ. ಅಹಮದಾಬಾದ್ ನಿಂದ ಸುಮಾರು 100 ಕಿ.ಮಿ ಗಳ ದೂರದಲ್ಲಿರುವ ಈ ಜಾಗ ಪುಷ್ಪಾವತಿ ನದಿ ದಡದಲ್ಲಿದೆ. ಸೋಮನಾಥ ದೇವಾಲಯಕ್ಕಾದ ದುರ್ಗತಿಯೇ ಇಲ್ಲಿಯೂ ನಡೆದಿತ್ತು. ಇಲ್ಲಿನ ಗರ್ಭ ಗುಡಿಯಲ್ಲಿ ರಥದಲ್ಲಿ ಕುಳಿತ ಸೂರ್ಯ ಹಾಗೂ ಆತನ ಸಾರಥಿ ಅರುಣನ ಸ್ವರ್ಣ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದರಂತೆ. ಮೂರ್ತಿಯ ಅಡಿಭಾಗದಲ್ಲಿ ಅಪಾರ ಸ್ವರ್ಣ ನಾಣ್ಯಗಳನ್ನು ಮತ್ತು ಅಮೂಲ್ಯ ರತ್ನಗಳನ್ನು ಇರಿಸಿದ್ದರಂತೆ. ಇವೆಲ್ಲವನ್ನೂ ಘಜನಿ ಮಹಮ್ಮದ ಕೊಳ್ಳೆ ಹೊಡೆದು ತನ್ನ ಊರಿಗೆ ಸಾಗಿಸಿದನಂತೆ. ಮಗದೊಮ್ಮೆ ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣಕ್ಕೂ ಒಳಗಾಯಿತು. ದೇವಾಲಯವನ್ನೂ ಅಲ್ಪ ಸ್ವಲ್ಪ ಹಾಳುಗೆಡವಿದರು ವಿರೂಪಗೊಳಿಸಿದರು. ಆದರೂ ಈಗಲೂ ಬಹಳ ಸುಂದರವಾಗಿ ಕಂಗೊಳಿಸುತ್ತಿದೆ.
ಮರಳು ಶಿಲೆ (sand stone) ಯಲ್ಲಿ ಈ ದೇವಾಲವನ್ನು ಕಟ್ಟಿದ್ದಾರೆ. ನಾವು ಸೂರ್ಯ ಕುಂಡಕ್ಕೆ ಇಳಿದು ಕೈ ಕಾಲು ತೊಳೆದುಕೊಂಡು ಗಾಯತ್ರಿಮಂತ್ರ ಸಹಿತ ಸೂರ್ಯನಿಗೆ ಅರ್ಘ್ಯ ಕೊಟ್ಟು ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಪಾವಟಿಕೆಗಳನ್ನೇರಿ ದೇವಾಲಯದ ಮುಂಭಾಗಕ್ಕೆ ಬಂದೆವು. ಇಲ್ಲಿ ನಮ್ಮನ್ನು ಸ್ವಾಗತಿಸಲು 2 ಅತ್ಯಪೂರ್ವ ಸ್ಥಂಭಗಳು ಕಾದು ನಿಂತಿವೆ.




ಬೇರೆಲ್ಲೂ ಕಾಣಸಿಗದಂತಹ ಸುಂದರ ಭವ್ಯ ಕಂಭಗಳಿವು. ಇದರ ನಿರ್ಮಿತಿಯ ಉದ್ದೇಶವೂ ನಿಗೂಢ. ಯಾಕೆಂದರೆ ಇದು ಯಾವುದೇ ಭಾರವನ್ನು ಹೊತ್ತು ನಿಂತಿಲ್ಲ. ಎಂದರೆ ಮೇಲೆ ಯಾವುದೇ ಮೇಲ್ಚಾವಣಿ ಇಲ್ಲದೆ ಜಂಟಿಯಾಗಿ ನಿಂತಿವೆ. ಬಹುಶಃ ಇನ್ನೂ ವಿಸ್ತಾರವಾದ ಪ್ರಾಕಾರವನ್ನು ನಿರ್ಮಿಸುವ ಉದ್ದೆಶವಿತ್ತೇನೋ? ಅಪೂರ್ಣವಾಗಿ ಕೆಲಸ ನಿಂತಿರಬೇಕು ಎನಿಸುತ್ತದೆ. ಏನೇ ಇರಲಿ ಈ ಎರಡು ಕಂಭಗಳು ಇಡೀ ದೇವಾಲಯಕ್ಕೇನೇ ಒಂದು ಅಪೂರ್ವ ಸೊಬಗನ್ನು ಕೊಡುತ್ತದೆಂದರೆ ಅತಿಶಯೋಕ್ತಿ ಆಗಲಾರದು. ಇಲ್ಲಿಗೆ ಬಂದವರೆಲ್ಲಾ ಇದರ ಎದುರು ನಿಂತು ಫೋಟೋ ತೆಗೆಯುವುದು ಸಾಮಾನ್ಯ. ಒಂದು ಮಾತು- ಇಲ್ಲಿ ಫೋಟೋ. ವಿಡಿಯೋ ಎಲ್ಲಾ ಅನಿರ್ಭಂದಿತ. ಎಷ್ಟು ಫೋಟೋ ಬೇಕಾದರೂ ತೆಗೆಯಬಹುದಾಗಿದೆ. ಹೀಗಿರಬೇಕು ಪ್ರೇಕ್ಷಣೀಯ ಸ್ಥಳಗಳೆಂದರೆ! ನಮ್ಮ ಈ ಸಲದ ಯಾತ್ರೆಯಲ್ಲಿ ಎಲ್ಲಿಗೆ ಹೋದರೂ ಸರಿಯಾಗಿ  ಫೋಟೋ ತೆಗೆಯಲು ಆಗಲಿಲ್ಲವಲ್ಲಾ ಎಂಬ ಕೊರಗು ಇಲ್ಲಿ ಮಾಯವಾಯಿತು. ನಾವು ಇಲ್ಲಿ ಸುಮಾರು 3 ಘಂಟೆಗಳ ಕಾಲ ಇದ್ದು ಸುಮಾರು 600 ಫೋಟೋ ತೆಗೆದಿದ್ದೇವೆ. ಸಮಯಾಭಾವ ಇಲ್ಲದಿದ್ದರೆ ಇನ್ನೂ ಸೂಕ್ಷ್ಮ ಕೆತ್ತನೆಗಳ ಫೋಟೋ ತೆಗೆಯಬಹುದಿತ್ತು. ಸೂರ್ಯಮಂದಿರವನ್ನು ವರ್ಣಿಸುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಆಳವಾದ ಶಿಲ್ಪ ಕಲಾ ಜ್ಞಾನ ವಿವರಣಾ ಶಕ್ತಿ ಬೇಕು. ಇವೆರಡೂ ನನ್ನಲ್ಲಿಲ್ಲವಾದ್ದರಿಂದ  ಆದಷ್ಟೂ ಹೆಚ್ಚು ಫೋಟೋಗಳನ್ನೇ ಇಲ್ಲಿ ಕೊಟ್ಟಿದ್ದೇನೆ. ನೀರಸ ವರ್ಣನೆಗಿಂತ ಪ್ರತ್ಯಕ್ಷ ದರ್ಶನವೇ ನಿಮಗೆ ಇಲ್ಲಿನ ಸೌಂದರ್ಯವನ್ನು ಕಂಡು ಅರಿಯಬಹುದು ಎಂದು ನನ್ನ ಆಶಯ.


Entrence to the Dance Hall
 
decorated interior of dance hall

 ಈ ಸುಂದರ ಯಮಳ ಸ್ಥಂಭಗಳನ್ನು ನೋಡಿ ಆನಂದಿಸಿ ಮುಂದೆ ಕೆಲವು ಮೆಟ್ಟಿಲುಗಳನ್ನು ಏರಿದರೆ ನಾವು ಸಭಾ ಮಂಟಪದಲ್ಲಿರುತ್ತೇವೆ. ಇಲ್ಲಿ 52 ಸಾಲಂಕೃತ ಕಂಭಗಳಿವೆ. ಎಲ್ಲದರಲ್ಲಿಯೂ ಒಂದಿಂಚೂ ಜಾಗ ಬಿಡದೆ ರಚಿಸಿದ ಕಲೆಗಾರಿಕೆ. ಪ್ರತಿಯೊಂದು ಕಂಬವನ್ನೂ ಮಕರ ತೋರಣಗಳು ಪರಸ್ಪರ ಜೋಡಿಸಿಕೊಂಡಿವೆ. ಇವುಗಳ ವಿನ್ಯಾಸ ಸೊಬಗು ಅಪ್ರತಿಮ. 



Richly decorated pillers & arch



Ceiling










ಮೇಲ್ಗಡೆ ವೃತ್ತಾಕಾರದ ಮೇಲ್ಚಾವಣಿ. ಮದ್ಯದಲ್ಲಿ ಇಳಿಬಿಟ್ಟ ಹೂ ಗೊಂಚಲು. ಎಲ್ಲವೂ ಒಟ್ಟಿಗೆ ಮಿಳಿತವಾಗಿ ನಮಗೆ ಸ್ವರ್ಗ ಸಮಾನ ದೃಶ್ಯವನ್ನು ನೀಡುತ್ತದೆ. ಮೌಂಟ್ ಅಬು ನೋಡಿ ಬಂದ ನಮಗೆ ಇಲ್ಲಿಯೂ ಕಣ್ಣಿಗೆ ಅದೇ ಆನಂದ ದೊರೆಯಿತು. ಇಲ್ಲಿನ ಕೆಲಸ ಮುಗಿದ ಮೇಲೆ ಇದೇ ಶಿಲ್ಪಿಗಳು ಮೌಂಟ್ ಅಬುವಿನಲ್ಲಿ ದಿಲ್ವಾರ ಮಂದಿರ ರಚಿಸಿದ್ದಾರೋ ಎಂಬ ಭಾವನೆ ಉಂಟಾಗುತ್ತದೆ. ಇಲ್ಲಿನ ಪ್ರತಿಕೃತಿ ಅದು. ಇಲ್ಲಿ ಮರಳುಗಲ್ಲು ಅಲ್ಲಿ ಶುಭ್ರ ಅಮೃತ ಶಿಲೆ. ವಿನ್ಯಾಸ ಮತ್ತು ಹೆಚ್ಚಿನ ಶಿಲ್ಪಗಳು ಸಾಮ್ಯತೆ ಹೊಂದಿವೆ. ಅಲ್ಲಿ ಜೈನ ಸಂಸ್ಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಇಲ್ಲಿನ ರಾಜನ ಮಂತ್ರಿ ಕಟ್ಟಿಸಿದಲ್ಲವೇ? ಹಾಗಾಗಿ ಸಾಮ್ಯತೆ ಸಹಜ. ಈ ಸಭಾ ಮಂಟಪಕ್ಕೆ ನಾಲ್ಕೂ ಕಡೆಯಿಂದ ಒಳಬರಲು ಮೆಟ್ಟಿಲುಗಳಿವೆ. ಇಲ್ಲಿ ರಾಮಾಯಣ, ಮಹಾಭಾರತ ಮತ್ತು ಕೃಷ್ಣ ಲೀಲೆಗಳ ಶಿಲ್ಪಗಳಿವೆ.


ಸಭಾಮಂಟಪದ ಮುಂದುಗಡೆಯೇ ಅಂತರಾಳ ಮತ್ತು ಗರ್ಭಗೃಹವಿದೆ. ಇಲ್ಲಿಯೂ ಹಲವಾರು ಕಂಭಗಳಿವೆ. ಮೇಲೆ ಮೇಲ್ಚಾವಣಿ ಸುಂದರವಾಗಿದೆ. ಆದರೆ ಸಭಾ ಮಂಟಪದಷ್ಟು ಸೂಕ್ಷ್ಮ ಕೆತ್ತನೆಗಳಿಲ್ಲ.



 ನಾವು ಒಳಗಿರುವಾಗಲೇ ಯಾತ್ರಿಕರ ಒಂದು ದೊಡ್ಡ ಗುಂಪು ಆಗಮಿಸಿತು. ಜೊತೆಗೆ ಒಬ್ಬ ಗೈಡ್ ಇದ್ದು ಅವರಿಗೆಲ್ಲ ವಿವರಿಸುತಿದ್ದ. ಅವರ ಗುಂಪು ಕೇವಲ 15 ನಿಮಿಷದಲ್ಲೇ ಪೂರ್ತಿ ದೇವಾಲಯ ವೀಕ್ಷಣೆ ಮಾಡಿ ಹೊರಟು ಹೋಯಿತು. ಅವರಿಗೆ ಅದೇನು ಅರ್ಥ ಆಯಿತೋ, ನನಗೆ ತಿಳಿಯದು. ಬಹುಶಃ ಅವರು ಪೂರ್ತಿ ಗುಜರಾತನ್ನು ಒಂದೇ ದಿನದಲ್ಲಿ ನೋಡಿ ಮುಗಿಸುವ ಆತುರದಲ್ಲಿರಬೇಕು. ಅವರು ಗರ್ಭಗುಡಿಯೊಳಗೆ ಇಣುಕಿ ನೋಡಿ ಸೂರ್ಯ ಎಲ್ಲಿದ್ದಾನೆ ಎಂದು ಕೇಳಿದಾಗ – ಸೂರ್ಯ ಮೇಲೆ ಆಕಾಶದಲ್ಲಿದ್ದಾನೆ ಎಂದು ನಾನು ಹೇಳಿದಾಗ ಎಲ್ಲರೂ ಗೊಳ್ಳನೆ ನಕ್ಕರು.
ಆಮೇಲೆ ನಾವು ದೇವಾಲಯದ ಹೊರಗಣ ಸೌಂದರ್ಯವನ್ನು ಆಸ್ವಾದಿಸಲು ಹೊರ ಬಂದೆವು. ಇಲ್ಲಿನ ಹೊರ ಭಿತ್ತಿಯಲ್ಲಿ ಬಹಳ ಸುಂದರ ಕೆತ್ತನೆಗಳಿವೆ. ಒಟ್ಟಾರೆ 12 ಬೇರೆ ಬೇರೆ ಭಂಗಿಯ ಸೂರ್ಯ ವಿಗ್ರಹಗಳಿವೆ. ಮಾತ್ರವಲ್ಲ ಅಷ್ಟ ದಿಕ್ಪಾಲಕರನ್ನೂ ಕೆತ್ತಿದ್ದಾರೆ.





ಕೆಲ ವಿಗ್ರಹಗಳು ಭಿನ್ನವಾಗಿದ್ದರೂ ಈಗ ಉಳಿದುಕೊಂಡಿರುವುದು ಸುಂದರವಾಗಿದೆ. ಸುತ್ತಲಿರುವ ಉದ್ಯಾನವು ಈ ದೇವಾಲಯಕ್ಕೆ ಒಂದು ಸುಂದರ ಹಿನ್ನಲೆಯನ್ನು ಒದಗಿಸುತ್ತದೆ. ಇದರ ಪಕ್ಕದಲ್ಲೇ ಒಂದು ಪುಟ್ಟ ಗುಡಿ ಇದೆ, ಒಳಗಡೆ ಶಿವಲಿಂಗವಿದೆ.


 ಅಲ್ಲಿಂದ ಮುಂದೆ ಸ್ವಲ್ಪ ದೂರದಲ್ಲಿ ಇನ್ನೊಂದು ಜೊತೆ ಕಂಭಗಳಿವೆ. ಅದರಲ್ಲೂ ಪೂರ್ತಿ ಕೆತ್ತನೆ ಕೆಲಸ ಇದೆ. 

ನಮ್ಮ ನಿಗದಿತ ಸಮಯ ಮುಗಿಯಿತು. ನಮಗೆ ಅಲ್ಲಿಂದ ಹೊರಟು ಗುಜರಾತ್ ರಾಜಧಾನಿಯಾದ ಗಾಂಧಿನಗರಕ್ಕೆ ಹೋಗಬೇಕಾಗಿತ್ತು. ಬಸ್ ಹಿಡಿದು ಮೆಹಸಾನಕ್ಕೆ ಬಂದೆವು. ಊಟ ಮಾಡಿ ಗಾಂಧಿನಗರ ಬಸ್ ಹಿಡಿದೆವು. ಸುಮಾರು 50 ಕಿ.ಮಿ ದೂರ. ಅಲ್ಲಿ ನಾವು ಅಕ್ಷರಧಾಮಕ್ಕೆ ಹೋದೆವು. ಇಲ್ಲಿ ಸಹಾ ಫೋಟೋ ತೆಗೆಯಲು ಬಿಡುವುದಿಲ್ಲ. ಎಲ್ಲ ಸಾಮಾನುಗಳನ್ನು ಹೊರಗಡೆಯೇ ಜಮಾ ಮಾಡಿ ಒಳ ಪ್ರವೇಶಿಸಬೇಕು. ಕಟ್ಟು ನಿಟ್ಟಿನ ತಪಾಸಣೆ ಇದೆ. ಅಕ್ಷರಧಾಮವು ಬಹಳ ಸೊಗಸಾದ ಉದ್ಯಾನದ ಮಧ್ಯೆ ಎತ್ತರವಾಗಿ, ಭವ್ಯವಾಗಿ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಶಿಸ್ತು. ಮಧ್ಯದಲ್ಲಿ ಕಾರಂಜಿಗಳಿಂದ ನೀರು ಚಿಮ್ಮುತ್ತಿದೆ. ಒಳಗಡೆ ಸ್ವಾಮಿನಾರಾಯಣನ ಸ್ವರ್ಣ ಲೇಪಿತ ವಿಗ್ರಹ. ಅದಕ್ಕೆ ಸುತ್ತು ಬರಲು ವಿಶಾಲವಾದ ಜಾಗವಿದೆ. ಅದೆಲ್ಲ ನೋಡಿ ನಾವು ಅಲ್ಲಿನ ಲೇಸರ್ ಶೋ ನೋಡಲು ಹೋದೆವು. ಇದಕ್ಕೆ 75 ರೂ. ಕೊಟ್ಟು ಟಿಕೆಟ್ ಕೊಳ್ಳಬೇಕು. ವಿಶಾಲವಾದ ಗ್ಯಾಲರಿಯಲ್ಲಿ ಕುಳಿತೆವು. ಸ್ವಲ್ಪ ಹೊತ್ತಿನಲ್ಲೇ ಶೋ ಪ್ರಾರಂಭವಾಯಿತು. ಪುರಾಣದ ನಚಿಕೇತನ ಕಥೆ. ಅತ್ಯಾದುನಿಕ ತಂತ್ರಜ್ಞಾನದ ಸಹಾಯದಿಂದ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುವ ಈ ಪ್ರದರ್ಶನವು ಬಹಳ ಆಕರ್ಷಣೀಯವಾಗಿದೆ. ನಮ್ಮನ್ನು ನಿಜಕ್ಕೂ ಯಮಲೋಕಕ್ಕೇ ಒಯ್ದು ಸಾಕ್ಷಾತ್ ಯಮ ದರ್ಶನ ಮಾಡಿಸಿ ಬಿಡುತ್ತಾರೆ. ಅಂತಹ ಒಂದು ಭ್ರಮಾ ಲೋಕವನ್ನು ಸೃಷ್ಟಿಸಿ ನಡೆಸುವ ಈ ಶೋವನ್ನು ತಪ್ಪದೇ ನೋಡಲೇಬೇಕು.
ಶೋ ಮುಗಿದ ಮೇಲೆ ಅಲ್ಲೇ ಉತ್ತಮವಾದ ಉಪಹಾರ ಮಾಡಿಕೊಂಡು ಅಹಮದಾಬಾದ್ ಗೆ ಹೊರಟೆವು. ನಮಗೆ ಒಂದು ಟ್ಯಾಕ್ಸಿ ಸಿಕ್ಕಿತು. ಅದರಲ್ಲಿ 45 ಕಿ.ಮಿ. ಪ್ರಯಾಣಿಸಿ ಅಹಮದಾಬಾದ್ ರೈಲು ನಿಲ್ದಾಣಕ್ಕೆ ಬಂದೆವು. ನಮ್ಮ ದುರಾಂತೋ ಎಕ್ಸ್ಪ್ರೆಸ್ ರಾತ್ರಿ 11.30ಕ್ಕೆ. ಅದರಲ್ಲಿ ಆರಾಮವಾಗಿ ನಿದ್ರೆಮಾಡಿ ಬೆಳಗ್ಗೆ 6 ಘಂಟೆಗೆ ಮುಂಬಯಿ ಸೆಂಟ್ರಲ್ ತಲಪಿದೆವು. ಅಲ್ಲಿಂದ ಮತ್ತೆ ಟ್ಯಾಕ್ಸಿಯಲ್ಲಿ ಮುಂಬಯಿ ವಿಕ್ಟೋರಿಯಾ ಟೆರ್ಮಿನಸ್ ಗೆ ಬಂದು ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ಪ್ರೆಸ್ ಹತ್ತಿದೆವು. ಮರುದಿನ ಬೆಳಗ್ಗೆ 9 ಘಂಟೆಗೆ ಬೆಂಗಳೂರು. ನಮ್ಮ ಈ 11 ದಿವಸಗಳ ಪ್ರಯಾಣ ಯಾವುದೊಂದು ತೊಂದರೆಗಳಿಲ್ಲದೆ ನಡೆಸಿಕೊಟ್ಟ ದೇವರಿಗೆ ವಂದನೆಗಳನ್ನರ್ಪಿಸಿದೆವು.

Saturday, 15 February 2014

MOUNT ABU







ಮುಂಜಾನೆ 5 ಘಂಟೆಗೆ ಎದ್ದು ಲಗುಬಗೆಯಿಂದ ರೂಂ ಖಾಲಿ ಮಾಡಿ ರಿಕ್ಷಾದಲ್ಲಿ ಸೋಮನಾಥ ರೈಲು ನಿಲ್ದಾಣ ತಲುಪಿದೆವು.  ಇಲ್ಲಿಂದ ಬೆಳಗ್ಗೆ 6 ಘಂಟೆಗೆ ಹೊರಡುವ ಅಹ್ಮದಾಬಾದ್ ಎಕ್ಷಪ್ರೆಸ್ಸ ನಲ್ಲಿ ಹೊರಟೆವು. ರಶ್ ಇರದಿದ್ದುದರಿಂದ ಗಡದ್ದಾಗಿ ನಿದ್ದೆಯೂ ಬಂತು. ಮಧ್ಯಾಹ್ನ 3.30ಕ್ಕೆ ಅಹಮದಾಬಾದ್ ತಲುಪಿದೆವು. ಅಲ್ಲಿ ಕ್ಲೊಕ್ ರೂಂನಲ್ಲಿ ನಮ್ಮ ಲಗ್ಗೇಜ್ ಇರಿಸಿ ಪೇಟೆ ಸುತ್ತಾಡಲು ಹೊರಟೆವು. ಒಂದು ರಿಕ್ಷಾ ಹಿಡಿದು ಲಕ್ಷ್ಮೀನಾರಾಯಣ ಮಂದಿರಕ್ಕೆ ಹೋದೆವು.


 ಪೇಟೆಯ ಮಧ್ಯದಲ್ಲಿರುವ ಈ ದೇವಾಲಯವು ವಿಶಾಲ ಒಳಾಂಗಣ ಹೊಂದಿದ್ದು ಸುಂದರವಾಗಿದೆ. ಗೋಪುರ, ಮುಖಮಂಟಪ ಎಲ್ಲ ಚೆನ್ನಾಗಿದೆ. ಅಲ್ಲೇ ಸ್ವಲ್ಪ ಹೊತ್ತು ಕುಳಿತು ದೇವರ ದರ್ಶನ ಮಾಡಿ ನಂತರ ಅಲ್ಲಿಂದ ಹೊರಟೆವು.





 ಅಹ್ಮದಾಬಾದ್ ನ ಕಂಕಾರಿಯ ಸರೋವರ ನೋಡಲೆಂದು ರಿಕ್ಷಾ ಮಾಡಿ ಹೊರಟೆವು. ಆದರೆ ಆ ದಿನ ರಜಾಇದ್ದುದರಿಂದ ಕಂಕಾರಿಯಾದ ಗೇಟ್ ನ್ನು ಮಾತ್ರ ನೋಡಲು ಸಾದ್ಯವಾಯಿತಷ್ಟೇ.ಇಲ್ಲಿ ರಾತ್ರಿ ಹೊತ್ತು ಲೈಟ್ ಶೋ  ಇರುತ್ತದಂತೆ. ಹಾಗಾಗಿ ಅಲ್ಲೇ ಆರಾಮವಾಗಿ ಕುಳಿತು ಕಾಲಕಳೆಯಬೇಕೆಂಬ ನಮ್ಮ ಉದ್ದೇಶ ವಿಫಲವಾಯಿತು.ಅದೇ ರಿಕ್ಷಾದಲ್ಲಿ ನಾವು ಪೇಟೆಗೆ ಬಂದೆವು. ಇಲ್ಲಿಗೆ ಬಂದಾಗ ನಾವು ಬೆಂಗಳೂರಿನಲ್ಲಿಯೇಇದ್ದೇವೇನೋ ಎಂಬ ಅನುಭವ. ಬೆಂಗಳೂರಿನ ಅವೆನ್ಯೂ ರಸ್ತೆ, ಚಿಕ್ಕಪೇಟೆ  ಬಿ ವಿ ಕೆ ಅಯ್ಯಂಗಾರ್  ರಸ್ತೆಗಳಲ್ಲಿರುವ ಅದೇ ಅಂಗಡಿಗಳು, ಎಲ್ಲೆಲ್ಲೂ ಎಲೆಕ್ಟ್ರಿಕ್, ಎಲೆಕ್ಟ್ರೋನಿಕ್ ಮತ್ತು ಬಟ್ಟೆ ಅಂಗಡಿಗಳು. ನಾವು ಕೆಲ ಅಂಗಡಿಗಳಿಗೆ ನುಗ್ಗಿದೆವು. ಸ್ವಲ್ಪ ಬಟ್ಟೆ ಖರೀದಿಸಿದೆವು. ಅಲ್ಲೇ ಚಾಟ್ ಅಂಗಡಿಗಳು ರಸ್ತೆಯ ಪಕ್ಕದಲ್ಲಿದ್ದು ಬನ್ನಿ ಬನ್ನಿ ಎಂದು ಕೂಗುತಿದ್ದರು.ನಾವೂ ಅಲ್ಲೇ ಉಪಹಾರ ಮಾಡಿದೆವು. ಒಳ್ಳೆಯ ರುಚಿಕಟ್ಟಾದ ಚಾಟ್ ಗಳನ್ನೂ ತಿಂದೆವು. ಮತ್ತೆ ಸ್ವಲ್ಪ ಕಾಲ ಕಳೆದು ನಿಧಾನವಾಗಿ ರೈಲ್ವೆ ನಿಲ್ದಾಣದೆಡೆಗೆ ನಡೆದೆವು. ಈಗ ಸಮಯ ರಾತ್ರಿ  9 ಘಂಟೆ. ನಮ್ಮ ಅಜ್ಮೀರ್ ಪ್ಯಾಸೆಂಜರ್ ಹೊರಡುವುದು ರಾತ್ರಿ11.15ಕ್ಕೆ. ಅಲ್ಲೇ ಪ್ಲಾಟ್ ಫಾರಂನಲ್ಲಿ ಕಾದೆವು. ರಾಜಸ್ತಾನಿ ಲಂಬಾಣಿಗಳ ಒಂದು ದೊಡ್ಡ ತಂಡ ಅಲ್ಲಿಗೆ ಬಂತು. ಎಲ್ಲ ಕರಿ ಬಟ್ಟೆ ಮತ್ತು ಕೈ ತೋಳುಗಳಿಗೆ ಬಿಳಿಯ ಬಳೆ ಧರಿಸಿದ್ದ ಹೆಂಗಳೆಯರು, ತಲೆಗೆ ದೊಡ್ಡ ಬಣ್ಣದ ರುಮಾಲು ಧರಿಸಿದ ಗಂಡಸರು ಎಲ್ಲವೂ ನೋಡಲು ಆಕರ್ಷಣೀಯವಾಗಿತ್ತು. ರೈಲು ಹತ್ತಿದೆವು. ನಮ್ಮ ಅದೃಷ್ಟದಿಂದ ಪಕ್ಕದ ಸೀಟ್ ನಲ್ಲಿದ್ದ ಒಬ್ಬರು ರಾಜಸ್ಥಾನಿ ದಂಪತಿಗಳು ನಮ್ಮನ್ನು ಮಾತಾಡಿಸಿದರು. ಅವರು ಬೆಂಗಳೂರು, ಚೆನ್ನೈನಲ್ಲಿ ಇದ್ದವರು. ಹಾಗಾಗಿ ಸ್ವಲ್ಪ ಕನ್ನಡ ಬರುತಿತ್ತು. ಅವರೂ ನಮ್ಮ ಹಾಗೆ ಅಬು ರೋಡ್ ಸ್ಟೇಷನ್ ನಲ್ಲಿ ಇಳಿಯುವವರು. ನಮಗೆ ಒಳ್ಳೆಯ ಜೊತೆ ಆಯಿತು. ಬೆಳಗ್ಗೆ 6.15 ಕ್ಕೆ ಅಬುರೋಡ್ ತಲುಪಿದೆವು. ಅಲ್ಲಿಂದ ಬಸ್ ನಿಲ್ದಾಣ ಹತ್ತಿರದಲ್ಲೇ ಇತ್ತು. ಅಲ್ಲಿಗೆ ಹೋದಾಗ ಮೌಂಟ್ ಅಬುಗೆ ಹೋಗುವ ಬಸ್ ತಯಾರಾಗಿ ನಿಂತಿತ್ತು. ಬಸ್ ನಲ್ಲಿ ಒಟ್ಟು10 ಜನ ಇದ್ದೆವಷ್ಟೇ. ನಿಧಾನವಾಗಿ ಏರು ದಾರಿಯಲ್ಲಿ ಬಸ್ ಸುಮಾರು 22 ಕಿ.ಮಿ.ಸಾಗಬೇಕಿತ್ತು. ಎರಡೂ ಪಕ್ಕದಲ್ಲಿ ಬೆಟ್ಟ ಗುಡ್ಡ ಮತ್ತು ಕಾಡು.ಮಂಜು ಆವರಿಸಿ ಸೂರ್ಯನ ಬೆಳಕು ಮಸುಕು ಮಸುಕಾಗಿ ರಮ್ಯವಾದ ಒಂದು ಪರಿಸರ ನಮಗಾಗಿ ಕಾದಿತ್ತು.



 ಮೌಂಟ್ ಅಬು ಬಸ್ ಸ್ಟಾಂಡ್ ನಲ್ಲಿ ಇಳಿದು ಪಕ್ಕದಲ್ಲೇ ಇರುವ ಒಂದು ಹೋಟಲಿಗೆ ಚಹಾ ಕುಡಿಯಲು ಹೋದೆವು. ಅಲ್ಲೇ ನಮ್ಮ ಬೆಳಗ್ಗಿನ ಉಪಹಾರವೂ ಆಯಿತು. ನಾವು ಕಾದಿರಿಸಿದ್ದ ಹೋಟೆಲ್ SRP INN ಸಮೀಪದಲ್ಲೇ ಇದೆ ಎಂದು ತಿಳಿಯಿತು. ನಿಧಾನವಾಗಿ ನಡೆದುಕೊಂಡು ಹೋಟೆಲ್ ತಲುಪಿದೆವು.



 ನಮ್ಮ ಚೆಕ್ ಇನ್ ಸಮಯ ಬೆಳಗ್ಗೆ 10 ಘಂಟೆಗೆ. ಆದ್ದರಿಂದ ಅಲ್ಲೇ ಲಾಂಜ್ ನಲ್ಲಿ ಕುಳಿತೆವು. ಸುಮಾರು 9 ಘಂಟೆಗೆ ನಮಗೆ ರೂಂ ಒದಗಿಸಿದರು. ಚೆನ್ನಾಗಿರುವ ಡಬಲ್ ರೂಂ. ಬಾಡಿಗೆ ದಿನವೊಂದರ 600 ರೂ. ಮೂವರಿಗೆ. ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿದಾಗ ನಮ್ಮ ಆಯಾಸವೆಲ್ಲಾ ಪರಿಹಾರ. ಬೇಗನೇ ಅಲ್ಲಿಂದ ಹೊರಟು ದಿಲ್ ವಾರಾ ಟೆಂಪಲ್ ನೋಡಲು ಹೊರಟೆವು. ಬಾಡಿಗೆ ಜೀಪ್ ನಲ್ಲಿ ತಲಾ 10 ರೂ. ಕೊಟ್ಟು ಅಲ್ಲಿಗೆ ತಲುಪಿದೆವು. ಇದೇನಿದು ದಿಲ್ವಾರ ಎಂದರೆ ಇಷ್ಟೇನೇ ಎಂಬ ನಿರಾಸೆ ಆಯಿತು ನಮಗೆ. ಸುತ್ತಲೂ ಎತ್ತರವಾದ ಪೌಳಿ ಇದ್ದು ಗೋಪುರದ ಸ್ವಲ್ಪ ಭಾಗ ಮಾತ್ರ ಕಾಣುತಿತ್ತು. 


ಮತ್ತೆ ಇಲ್ಲಿ ಒಳಗಡೆ ಮೊಬೈಲ್ ಕೆಮರಾ ಏನನ್ನೂ ಒಯ್ಯುವಂತಿಲ್ಲ. ಆದ್ದರಿಂದ ಹೊರಗಿನಿಂದಲೇ ನಮಗೆ ಎಷ್ಟು ಕಾಣುತ್ತದೋ ಅಷ್ಟನ್ನೇ ಫೋಟೋ ತೆಗೆದೆವು. ಈ ಜೈನ ಮಂದಿರಕ್ಕೆ ಮಧ್ಯಾಹ್ನ 12 ಘಂಟೆಗೆ ಪ್ರವೇಶ ಲಭ್ಯ. ಅಲ್ಲಿಯವರೆಗೆ ಅಲ್ಲೇ ಹೊರಗಡೆ ಸ್ವಲ್ಪ ಸುತ್ತಾಡಿದೆವು.




 ಒಬ್ಬ ಸರ್ಧಾರ್ಜಿಯ ಅಂಗಡಿಗೆ ಹೋದೆವು. ಆತನು ಚಂಡೀಘರ್ ನವನು. ನಾನು ಸಹಾ ಉದ್ಯೋಗದಲ್ಲಿರುವಾಗ 2 ವರ್ಷ ಚಂಡೀಘರ್ ನಲ್ಲಿದ್ದೆ. ಹಾಗಾಗಿ ಅಲ್ಪ ಸ್ವಲ್ಪ ಪಂಜಾಬಿ ಭಾಷೆ ಬರುತಿತ್ತು. ಅವನಿಗೂ ನಮ್ಮಲ್ಲಿ ಆತ್ಮೀಯತೆ ಹುಟ್ಟಿತು. ಅವನಲ್ಲಿ ಸ್ವಲ್ಪ ವ್ಯಾಪಾರ ಮಾಡಿದೆವು. ಮಂದಿರದ ಒಳಗಡೆ ಹೋಗುವ ಸಮಯವಾಯಿತು. ಹೆಚ್ಚು ಜನಸಂದಣಿಯಿರಲಿಲ್ಲ. ಬಹಳ ಕಟ್ಟುನಿಟ್ಟಿನ ತಪಾಸಣೆಯ ನಂತರ ನಮ್ಮನ್ನು ಒಳಗೆ ಬಿಟ್ಟರು.ಒಳಗಡೆ ಸಾಗುತಿದ್ದಂತೆಯೇ ನಮ್ಮ ಮನದಲ್ಲಿ ಮೂಡಿದ್ದ ಅಭಿಪ್ರಾಯವೇ ಬದಲಾಯಿತು. ಸ್ವರ್ಗ ಸದೃಶ ಕಲಾಲೋಕ ನಮ್ಮೆದುರು ಅನಾವರಣಗೊಂಡಿತ್ತು.
ಮೊದಲ 2 ಮಂದಿರಗಳು ಸುಂದರವಾಗಿದ್ದವು. ಇಲ್ಲಿ ಅಮೃತಶಿಲೆಯಲ್ಲಿ ಕಟೆದ ಮೂರ್ತಿಗಳು, ಕಂಭಗಳು ಮತ್ತು ಮಧ್ಯದಲ್ಲಿ ಗರ್ಭ ಗೃಹಗಳಿದ್ದು ಒಳಗಡೆ ಜಿನ ಮೂರ್ತಿ ಇದ್ದವು. ಚಿಕ್ಕ ಚೊಕ್ಕ ಮಂದಿರಗಳನ್ನು ನೋಡಿ ನಾವು ಹೊರ ಬಂದೆವು.ಅಲ್ಲೇ ಸ್ವಲ್ಪ ಎತ್ತರವಾದ ಜಾಗದಲ್ಲಿ ಒಂದು ಪುಟ್ಟ ಮಂದಿರವಿತ್ತು.ಇದು ದಿಗಂಬರ ಜೈನ ಪಂಥಕ್ಕೆ ಸೇರಿದ್ದಾಗಿದೆ. ಇಲ್ಲೇನೂ ವಿಶೇಷ ಕಾಣಲಿಲ್ಲ. ಮುಂದೆ ಹೋದಾಗ ವಿಶಾಲವಾದ ಮಂದಿರ ಸಿಗುತ್ತದೆ. ಇದೇ ಇಲ್ಲಿನ ಪ್ರಮುಖ ಆಕರ್ಷಣೆ. ಇದನ್ನು ಹೇಗೆ ವರ್ಣಿಸುವುದು ಎಂಬುದೇ ನನ್ನ ಸಮಸ್ಯೆ.
ಈ ದೇವಾಲಯವನ್ನು ಸೋಲಂಕಿ ಮಹಾರಾಜ ಭೀಮದೇವನ ಮಂತ್ರಿಯಾದ ವಿಮಲ್ ಷಾ ಎಂಬವನು 1031ರಲ್ಲಿ ನಿರ್ಮಿಸಿದನಂತೆ. ಇದಕ್ಕೆ ವಿಮಲ್ ವಾಶೀ  ಎಂದು ಹೆಸರು. ಮೊದಲು ನಾವು ಮಂದಿರದ ಒಳ ಪರಿಕ್ರಮದಲ್ಲಿ ಸಾಗಿದೆವು. ಇಲ್ಲಿ ಒಟ್ಟು 54 ಕೋಷ್ಟಕಗಳಿದ್ದು ಅವುಗಳಲ್ಲಿ ಜೈನ ತೀರ್ಥಂಕರರ ಮತ್ತು ಇತರ ದೇವತೆಗಳ ಮೂರ್ತಿಗಳನ್ನು ಇರಿಸಿದ್ದಾರೆ. ದಿಗಂಬರ ಮೂರ್ತಿಗಳಿಗೆ ಶ್ವೇತವಸ್ತ್ರ ಉಡಿಸಿದ್ದಾರೆ. ಆ ಮೂರ್ತಿಗಳ ಮಂದಸ್ಮಿತ ಧರ್ಶನ ಬಹಳ ಆಕರ್ಷಣೀಯವಾಗಿದೆ. ಪ್ರತಿಯೊಂದು ಕೊಷ್ಟಕವೂ ಅತಿಶಯವಾದ ಶಿಲ್ಪ ಸೌಂದರ್ಯದಿಂದ ಅಲಂಕರಿಸಲ್ಪಟ್ಟಿದೆ.ಅವುಗಳ ದ್ವಾರ ಮತ್ತು ಬಾಗಿಲುವಾಡಗಳೂ ಮೇಲ್ಚಾವಣಿಗಳೂ ಹಾಲುಗಲ್ಲಿನಿಂದ ಕೆತ್ತಲ್ಪಟ್ಟ ಅಸಂಖ್ಯಾತ ದೇವಾನುದೇವತೆಗಳೂ ಪ್ರಾಣಿ ಪಕ್ಷಿ, ಹೂವು ಬಳ್ಳಿಗಳಿಂದ ಅಲಂಕರಿಸಿದ್ದಾರೆ. ಆದರೆ ಒಂದರ ಹಾಗೆ ಇನ್ನೊಂದಿಲ್ಲ.ಅಷ್ಟೊಂದು ವ್ಯೆವಿಧ್ಯಮಯವಾಗಿ ನಮ್ಮನ್ನು ಬೇರೆಯೇ ಒಂದು ಕಲಾಲೋಕಕ್ಕೆ ಒಯ್ಯುತ್ತದೆ. ಯಾವುದನ್ನು ನೋಡಲಿ ಯಾವುದನ್ನು ಬಿಡಲಿ ಎಂಬ ಗೊಂದಲಕ್ಕೆ ಒಳಗಾಗುತ್ತೇವೆ. ಆದರೆ ಇನ್ನೂ ಬಹಳ ನೋಡುವುದಿದೆ ಎಂಬ ಯೋಚನೆಯಿಂದ ಬೇಗ ಬೇಗ ಮುಂದೆ ಸಾಗಿದೆವು. ಇಷ್ಟನ್ನು ನೋಡುವಾಗಲೇ ಸುಮಾರು1 ½ ಘಂಟೆ ಕಳೆಯಿತು. ಮುಂದೆ ರಂಗಮಂಟಪ ಇದೆ. ಇಷ್ಟು ಸುಂದರವಾದ, ಅದ್ಬುತವಾದ ರಂಗಮಂಟಪ ಇನ್ನೊಂದಿಲ್ಲ. ಇದು 12 ಕಂಭಗಳಿಂದ ಕೂಡಿದ್ದು ಅಷ್ಟಭುಜಾಕೃತಿಯ ಮೇಲ್ಚಾವಣಿಯನ್ನು ಹೊಂದಿದೆ. ಒಂದೊದು ಕಂಬವೂ ಬೇರೆ ಬೇರೆ ಶಿಲ್ಪಗಳಿಂದ ಅಲಂಕೃತಗೊಂಡಿದ್ದರೆ ಅವುಗಳನ್ನು ಜೋಡಿಸುವ ಮಕರ ತೋರಣದ ಸೊಬಗೇ ಬೇರೆ. ಕಂಭಗಳಲ್ಲಿ ಸಂಗೀತ ನುಡಿಸುತ್ತಿರುವ ಅಪ್ಸರೆಯರು, 16 ವಿದ್ಯಾದೇವಿಯರನ್ನು ಕೆತ್ತಿದ್ದಾರೆ. ಮೇಲ್ಗಡೆ ನೋಡಿದರೆ ನಮಗೆ ಭ್ರಮೆ ಹುಟ್ಟಿಸುವ ಕಲಾ ಭಂಡಾರವಿದೆ. ವೃತ್ತಾಕಾರದ ಇದರಲ್ಲಿ ದೇವತೆಗಳೂ ಪ್ರಾಣಿ ಪಕ್ಷಿಗಳೂ ಹೂವು ಬಳ್ಳಿಗಳೂ ಇನ್ನೂ ಅನೇಕ ಸೂಕ್ಷ್ಮ ಕೆತ್ತನೆಗಳೂ ಇವೆ, ಮದ್ಯದಲ್ಲಿ ತೂಗುದೀಪದಂತೆ ಇಳಿಬಿಟ್ಟ ಅತಿ ಸುಂದರ ಹೂ ಗೊಂಚಲಿದೆ. ಇಲ್ಲಿ ಕೆಲವು ಹಿಂದೂ ದೇವರುಗಳ ಶಿಲ್ಪಗಳನ್ನೂ  ಕಾಣ ಬಹುದು. ಇಲ್ಲಿನ ಶಿಲ್ಪಗಳು ಒಂದಿನಿತೂ ಹಾಳಾಗದೆ ನೋಡುಗರ ಮನಸ್ಸಿಗೆ ಆನಂದ ನೀಡುತ್ತವೆ.
ರಂಗ ಮಂಟಪದ ಎದುರಲ್ಲಿ ಗರ್ಭ ಗೃಹವಿದೆ. ಇದರ ಅಲಂಕೃತ ಬಾಗಿಲು ಹಾಗೂ ಚೌಕಟ್ಟು ಸಹಾ ಬಹಳ ಸುಂದರವಾಗಿದೆ. ಒಳಗಡೆ ಶಾಂತಮೂರ್ತಿಯಾದ ಆದಿನಾಥನ ವಿಗ್ರಹವಿದೆ. ಇದನ್ನೆಲ್ಲಾ ನೋಡುವಾಗಲೇ ಬಹಳ ಸಮಯ ಕಳೆದು ಹೋಯಿತು. ಲಗುಬಗೆಯಿಂದ ಇನ್ನೊಂದು  ದೇವಾಲಯಕ್ಕೆ ಹೋದೆವು.
ಇಲ್ಲಿ ಸಹಾ ಹಿಂದಿನ ದೇವಾಲಯದ ಸೋಬಗೇ ಪುನರಾವರ್ತನೆಯಾಗುತ್ತದೆ. ಅಷ್ಟೇ ಸುಂದರ ಅದ್ಬುತ ಕಲೆಯ ಭಂಡಾರ, ಹಿಂದಿನ ದೇವಾಲಯದ ಪ್ರತಿ ಕೃತಿ ಎನ್ನಬಹುದು. ಈ ದೇವಾಲಯವನ್ನು ಲೂನಾ ವಾಶೀ ಎನ್ನುತ್ತಾರೆ. ಇದು ನೇಮಿನಾಥನಿಗೆ ಸಮರ್ಪಿತವಾಗಿದೆ, ಅದನ್ನು ನೋಡಿ ಕೊನೆಯ ದೇವಾಲಯಕ್ಕೆ ಬಂದೆವು. ಇದರ ಗೋಪುರವು ಬೇರೆಯೇ ರೀತಿಯದ್ದು. ಇಲ್ಲಿ ಅಷ್ಟು ಸೊಬಗಿನ ಶಿಲ್ಪ ವೈಭವವಿಲ್ಲ. ಸ್ವಲ್ಪ ಮಟ್ಟಿಗೆ ಅಪೂರ್ಣ ಶಿಲ್ಪಗಳು ಇದ್ದವು. ಅಷ್ಟರಲ್ಲಿ 6 ಘಂಟೆ ಆಯಿತು. ನಾವು ಹೊರಡಲೇಬೇಕಾದ ಸಮಯ ಅದು. ಮನಸ್ಸಿಲ್ಲದ ಮನಸಿನಿಂದ ಹೊರ ಬಂದೆವು. ಒಂದು ಅದ್ಬುತ ಕಲಾ ಜಗತ್ತಿನಿಂದ ಹೊರಬೀಳುವಾಗ ನನ್ನ ಮನಸ್ಸಿನಲ್ಲಿಉಳಿದುಕೊಂಡ ಒಂದೇ ಒಂದು ಕೊರಗು ಎಂದರೆ ಛೆ! ಈ ಸೌಂದರ್ಯವನ್ನು ಫೋಟೋದಲ್ಲಿ ಸೆರೆ ಹಿಡಿಯಲಾಗಲಿಲ್ಲವಲ್ಲಾ ಎಂದು.
ಪಕ್ಕದಲ್ಲೇ ಇದ್ದ ಹೋಟೆಲ್ ನಲ್ಲಿ ಉಪಹಾರ ಮುಗಿಸಿ ಜೀಪ್ ಹಿಡಿದು ಮೌಂಟ್ ಅಬುವಿನ ಇನ್ನೊಂದು ಆಕರ್ಷಣೆಯಾದ ನಕ್ಕಿ ಸರೋವರ (ಲೇಕ್) ಗೆ ಬಂದೆವು.ನಕ್ಕಿ ಲೇಕ್ ಅಬು ಬೆಟ್ಟದ ಹೃದಯ ಭಾಗದಲ್ಲಿದೆ. ಇಲ್ಲಿನ ಪೇಟೆಗಳೆಲ್ಲಾ ಇದರ ಸಮೀಪದಲ್ಲೇ ಇದೆ. ಈ ಸರೋವರವನ್ನು ದೇವತೆಯೊಬ್ಬನು ತನ್ನ ನಖಗಳಿಂದಲೇ ಬಗೆದು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿದನೆಂದು ದಂತ ಕಥೆಯಿದೆ.



ಇದು ಸುಮಾರು 1ಕಿ.ಮಿ. ಉದ್ದ ಹಾಗೂ 1/2 ಕಿ.ಮಿ. ಅಗಲವಿದೆ. ಅಲ್ಲದೆ ಬಹಳ ಆಳವಾಗಿದೆ. ಸುತ್ತಲೂ ಹಸಿರಿನ ಬೆಟ್ಟಗಳಿದ್ದು ಅವುಗಳ ಪ್ರತಿಬಿಂಬವು ನೀರಲ್ಲಿ ಪ್ರತಿಫಲಿಸುತ್ತಿದೆ. ಇಲ್ಲಿ ಬಗೆ ಬಗೆಯ ಬೋಟ್ ಗಳು ಯಾತ್ರಿಕರಿಗೆ ಜಲಸವಾರಿ ಮಾಡಿಸಲು ಕಾದು ನಿಂತಿವೆ.



 ಇಲ್ಲಿಂದ ಮೇಲೆ ನೋಡಿದರೆ ದೊಡ್ಡದೊಂದು ಕೊಡುಗಲ್ಲು ಕಾಣಿಸುತ್ತದೆ. ಇದರ ಆಕೃತಿಯು ದೊಡ್ಡ ಕಪ್ಪೆಯಂತಿದ್ದು ಇದಕ್ಕೆ ಟೋಡ್ ರಾಕ್ ಎನ್ನುತ್ತಾರೆ.







 ಸಂತೆಗಳೂ ಉಪಹಾರ ಮಂದಿರಗಳೂ ಬಹಳಷ್ಟಿವೆ. ರಾತ್ರಿ ಹೊತ್ತು ವಿದ್ಯುತ್ ದೀಪಗಳು ನೀರಲ್ಲಿ ಪ್ರತಿಫಲಿಸಿ ಸುಂದರ ನೋಟ ಸಿಗುತ್ತದೆ. ಇಲ್ಲಿ ತುಂಬಾ ಹೊತ್ತು ಕುಳಿತು ಕಾಲ ಕಳೆದೆವು.ಮೌಂಟ್ ಅಬುವಿನಲ್ಲಿ ತುಂಬಾ ಖರ್ಜೂರದ ಮರಗಳು ಕಾಣಸಿಗುತ್ತವೆ. ಆದರೆ ಇವುಗಳ ಹಣ್ಣು ಅಷ್ಟು ಶ್ರೇಷ್ಠ ಮಟ್ಟದಲ್ಲವಂತೆ.




 ನಂತರ ರಾಜಸ್ಥಾನಿ ಊಟ ಮಾಡಿ ರೂಂಗೆ ಬಂದೆವು. 
ಮರುದಿನ ನಾವು ಮೌಂಟ್ ಅಬು ಬಸ್ ಸ್ಟ್ಯಾಂಡ್ ಗೆ ಬಂದು ಬೆಳಗ್ಗೆ 8 ಘಂಟೆಗೆ ಹೊರಡುವ ಸೈಟ್ ಸೀಯಿಂಗ್ ಬಸ್ ನಲ್ಲಿ ಹೊರಟೆವು. ಇದಕ್ಕೆ ತಲಾ 70 ರೂ.ದರ.ಮೌಂಟ್ ಅಬು ನಲ್ಲಿರುವ ಎಲ್ಲ ಪ್ರೇಕ್ಷಣೀಯ ಜಾಗಗಳನ್ನು ತೋರಿಸುತ್ತಾರೆ. ಮೊದಲಿಗೆ ನಾವು ಶಂಕರ ಮಠಕ್ಕೆ ಹೋದೆವು. 




ನಂತರ ನಕ್ಕಿ ಲೇಕ್ ನ ಇನ್ನೊಂದು ಬದಿಯನ್ನು ನೋಡಿದೆವು. ಅಲ್ಲಿಂದ ಬ್ರಹ್ಮ ಕುಮಾರಿ ಸೆಂಟರ್ ಗೆ. ಇಲ್ಲಿ ಬಹಳ ಪ್ರಶಾಂತವಾದ ಜಾಗದಲ್ಲಿ  ಆಶ್ರಮವಿದೆ. 



 ಇಲ್ಲಿ ಸುಮಾರು 3000 ಮಂದಿ ಕುಳಿತು ಕೊಳ್ಳುವಷ್ಟು ವಿಶಾಲವಾದ ಸಭಾ ಮಂದಿರವಿದೆ. ಬಂದವರನ್ನು ಸ್ವಾಗತಿಸಿ ಬ್ರಹ್ಮ ಕುಮಾರಿ ಭಗಿನಿಯರೊಬ್ಬರು ಒಳಗೆ ಕರೆದುಕೊಂಡುಹೋಗಿ ಎಲ್ಲವನ್ನೂ ವಿವರಿಸಿದರು. ಜೊತೆಗೆ ಅವರ ಆದ್ಯಾತ್ಮಿಕ ತತ್ವ ಬೋಧನೆಯೂ ನಡೆಯಿತು. ನಂತರ ನಮ್ಮ ಬಸ್ಸು ಅಬುದಾ ದೇವಿ ಮಂದಿರದೆಡೆಗೆ ಸಾಗಿತು. ಅಬುದಾ ದೇವಿಯಿಂದಾಗಿ ಅಬು ಬೆಟ್ಟ ಎಂದು ಹೆಸರು ಬಂತು. ಈ ದೇವಾಲಯವು ಬೆಟ್ಟದ ತುದಿಯಲ್ಲಿದ್ದು ಸುಮಾರು 350 ಮೆಟ್ಟಲುಗಳನ್ನೆರಬೇಕು.



 ತಂಪಾದ ವಾತಾವರಣ ಹಸಿರು ಕಾಡು, ಬೆಟ್ಟ ಎಲ್ಲ ಚಾರಣದ ನೆನಪು ಹುಟ್ಟಿಸುತ್ತಿತ್ತು. ಮೇಲೆ ಹೋದಾಗ ಒಂದು ಸಣ್ಣ ದೇವಾಲಯ. 





ಒಳಗಡೆ ಪುಟ್ಟದೊಂದು ಗವಿ. ಇಲ್ಲಿ ಅಬುದಾ ದೇವಿಯ ದರ್ಶನ ಪಡೆದು ಕೆಳಗೆ ಇಳಿದೆವು. ನಮ್ಮ ಬಸ್ಸು ಮತ್ತೆ ಬಸ್ ಸ್ಟ್ಯಾಂಡ್ ಗೇ ಬಂದು ಎಲ್ಲರೂ ಊಟ ಮುಗಿಸಿ ಬರಲು ಹೇಳಿದರು. ಊಟ ಆದ ಮೇಲೆ ಮತ್ತೆ ಬಸ್ಸು ಹೊರಟಿದ್ದು  ದಿಲ್ವಾರ ಮಂದಿರಕ್ಕೆ. ಇಲ್ಲಿ ನಮಗೆ ವೀಕ್ಷಣೆಗೆ ಬರೇ 45 ನಿಮಿಷದ ಸಮಯ ಕೊಡುತ್ತಾರೆ. ಇದೆಲ್ಲಿಗೆ ಸಾಕು? ನಾವು ಹಿಂದಿನ ದಿನವೇ ನೋಡಿದ್ದರಿಂದ ಬೇರೆ ಯಾವುದನ್ನೂ ನೋಡದೆ ಆದಿನಾಥ ಮಂದಿರವನ್ನೇ ಇನ್ನೊಮ್ಮೆ ನೋಡಿ ಕಣ್ತುಂಬಿಸಿಕೊಂಡೆವು. ನಂತರ ನಮ್ಮ ಪಯಣ ಗುರುಶಿಖರ್ ಗೆ. ಇಲ್ಲಿ ಒಂದು ದತ್ತಾತ್ರೇಯನ ಮಂದಿರವಿದೆ. ಗುರುಶಿಖರವು ಅರಾವಳಿ ಪರ್ವತ ಶ್ರೇಣಿಯಲ್ಲೇ ಅತಿ ಎತ್ತರದ ಜಾಗ.




 ನಂತರ ನಮ್ಮನ್ನು ಅಚಲೇಶ್ವರ ಮಂದಿರಕ್ಕೆ ಕೊಂಡೊಯ್ದರು.







  
ಇಲ್ಲೇ ಒಂದುಪುಟ್ಟ ಲೇಕ್ ಸಹಾ ಇದೆ. ನಿಸರ್ಗ ಸೌಂದರ್ಯವನ್ನು ಚೆನ್ನಾಗಿ ಆನಂದಿಸಿದೆವು. ಮುಂದೆ ನಮ್ಮನ್ನು ಸನ್ ಸೆಟ್ ಪಾಯಿಂಟ್ ನಲ್ಲಿ ತಂದು ಬಿಟ್ಟರು.




 ಸೂರ್ಯಾಸ್ತ ಬೇಡ ಎಂದಿದ್ದವರು ಇದೆ ಬಸ್ ನಲ್ಲಿ ಬಸ್ ಸ್ಟ್ಯಾಂಡ್ ಗೆ ಬರಬಹುದು. ಅಲ್ಲೇ ನಿಂತು ಸೂರ್ಯಾಸ್ತ ನೋಡುವವರು ಆಮೇಲೆ ನಡೆದುಕೊಂಡೋ ಅಟೋ ದಲ್ಲೋ ವಾಪಸು ಬರಬೇಕು. ಆದಿನ ಸೂರ್ಯಾಸ್ತವು ಮೋಡ ಮುಸುಕಿದ್ದರಿಂದ ಸರಿಯಾಗಿ ಕಾಣಿಸಲೇ ಇಲ್ಲ. ನಡೆದುಕೊಂಡೆ ನಾವು ಹಿಂತಿರುಗಿದೆವು.



 ಮತ್ತೊಮ್ಮೆ ಅಬು ಪೇಟೆ ಸುತ್ತಾಡಿ ಊಟ ಮುಗಿಸಿ ರೂಮಿಗೆ  ಬಂದು ಬಿದ್ದುಕೊಂಡೆವು. ಮರುದಿನ ಬೆಳಿಗ್ಗೆ 6 ಘಂಟೆಯ ಬಸ್ ಗೆ ನಮಗೆ ಮೊಧೆರಾಗೆ ಹೋಗಬೇಕಿತ್ತು. ಇಲ್ಲಿಂದ ಸುಮಾರು 225 ಕಿ.ಮಿ. ಪ್ರಯಾಣ.
 ಅಂತೂ ನಮ್ಮ ಕನಸಿನ ಜಾಗವಾದ ಮೌಂಟ್ ಅಬು ದಿಲ್ವಾರ ಗಳನ್ನು ನೋಡಿದೆವೆಂಬತೃಪ್ತಿ ಯಿಂದ ಚೆನ್ನಾಗಿ ನಿದ್ರೆ ಬಂತು.
ಮುಂದೆ ಮೊಧೆರಾ ಸೂರ್ಯ ದೇವಾಲಯ  ನಮ್ಮನ್ನು ಕಾದಿತ್ತು.
                                                                                                                                                                                               

Wednesday, 15 January 2014

SOMANAATH - GUJARAT



ಜೈಸೋಮನಾಥ

ನಮ್ಮ ದ್ವಾರಕಾ ಯಾತ್ರೆ ಮುಗಿಸಿಕೊಂಡು ನವಂಬರ್ 23 ರ ಬೆಳಗ್ಗೆ 6ಘಂಟೆಗೆ ಹೊರಡುವ ಸರಕಾರೀ ಸಾರಿಗೆ ಬಸ್ ನಲ್ಲಿ ನಾವು ಸೋಮನಾಥಕ್ಕೆ ಹೊರಟೆವು. ಇಲ್ಲಿಂದ ಸುಮಾರು 250 ಕಿ.ಮಿ. ದೂರ ಪ್ರಯಾಣಿಸಬೇಕು. ಬಸ್ಸು ಸ್ವಲ್ಪ ನಿಧಾನವಾಗಿಯೇ ಮುಂದುವರಿಯುತ್ತಿತ್ತು. ಅಲ್ಲಿನ ರಸ್ತೆಗಳು ಚೆನ್ನಾಗಿದ್ದರೂ ಬಸ್ ಗಳು ವೇಗದಲ್ಲಿ ಹೋಗುವಂತಿಲ್ಲ. ಮಧ್ಯದಲ್ಲಿ ಯಾವುದೊ ಒಂದು ಊರಲ್ಲಿ ಬೆಳಗ್ಗಿನ ತಿಂಡಿಗೆ ನಿಲ್ಲಿಸಿದರು. ಅಲ್ಲಿ ನಮಗೆ ಇಷ್ಟವಾದದ್ದೇನೂ ಸಿಗಲಿಲ್ಲ. ಚಾಯ್ ಮತ್ತು ಬಿಸ್ಕೆಟ್ ತಿಂದೆವು. ಗುಜರಾತ್ ನ ಕರಾವಳಿಯಲ್ಲೇ ಬಸ್ ಸಂಚರಿಸುತ್ತಿದ್ದರಿಂದ ಆಗಾಗ ಸಮುದ್ರ ಧರ್ಶನವೂ ಆಗುತಿತ್ತು. ಮೀನಿನ ಗಂಧವೂ ಮೂಗಿಗೆ ಬಡಿಯುತ್ತಿತ್ತು. ನಮ್ಮ ಬಸ್ ನೇರ ದಾರಿಯಲ್ಲಿ ಹೋಗದೆ ಸ್ವಲ್ಪ ಸುತ್ತು ಬಳಸಿ ಹೋಗಬೇಕಾಗಿತ್ತು. ಅಲ್ಲಿ ಸೇತುವೆಯೊಂದರ ದುರಸ್ತಿ ನಡೆಯುತ್ತಿತ್ತು. ಗಾಂಧಿಜಿಯವರ ಹುಟ್ಟೂರು ಪೋರ್ಬಂದರ್ ತಲುಪಿದೆವು. ತಕ್ಕ ಮಟ್ಟಿಗೆ ದೊಡ್ಡ ಊರು ಮಾತ್ರವಲ್ಲ ಪ್ರಮುಖ ಬಂದರು ಇಲ್ಲಿದೆ. ಮುಂದೆ ಕೆಲ ಊರುಗಳನ್ನು ಹಾಯ್ದು ವೆರಾವಲ್ ತಲುಪಿದೆವು ಅಲ್ಲಿಂದ ನಮ್ಮ ಗಮ್ಯ ಸ್ಥಾನವಾದ ಸೋಮನಾಥ್ ಗೆ 6 ಕಿ.ಮಿ. ಪ್ರಭಾಸ ಪಟ್ಟಣದಲ್ಲಿರುವ ಸೋಮನಾಥ್ ಗೆ ಮಧ್ಯಾಹ್ನ 1 ಘಂಟೆಗೆ ತಲುಪಿದೆವು. ಬಸ್ ನಿಲ್ದಾಣದ ಪಕ್ಕದಲ್ಲೇ ಸೋಮನಾಥ್ ಟ್ರಸ್ಟ್ ನ ಆಪೀಸು ಇದ್ದು ಅಲ್ಲಿಗೆ ಹೋಗಿ ನಾವು ಮೊದಲೇ ರಿಸರ್ವ್ ಮಾಡಿದ್ದ ರೂಮಿನ ಕೀಲಿ ಪಡೆದೆವು. ನಾನು ಊರಿನಿಂದಲೇ ದೂರವಾಣಿ ಮೂಲಕ ಇವರನ್ನು ಸಂಪರ್ಕಿಸಿದ್ದೆ. ರೂಮು ರಿಸರ್ವ್ ಮಾಡಲು 1500 ರೂ. DD ಕಳುಹಿಸಲು ಹೇಳಿದ್ದರು. 3 ಜನರಿಗೆ ದಿನವೊಂದರ 400 ರೂ. ಬಾಡಿಗೆ. ರೂಮು ಚೆನ್ನಾಗಿತ್ತು. ಬೇಗನೇಸ್ನಾನ ಮುಗಿಸಿ ಪಕ್ಕದಲ್ಲೇ ಇರುವ ಟ್ರಸ್ಟ್ ನ ಭೋಜನಾಲಯಕ್ಕೆ ಹೋಗಿ ಊಟ ಮುಗಿಸಿದೆವು. ಊಟ ಚೆನ್ನಾಗಿತ್ತು. ಸ್ವಸಹಾಯ ಪದ್ಧತಿ. ಫುಲ್ ಮೀಲ್ಸ್ ಒಬ್ಬರಿಗೆ 35 ರೂ.ಸ್ವಲ್ಪ ಹೊತ್ತು ವಿಶ್ರಮಿಸಿ ಸೋಮನಾಥ ದೇವಾಲಯ ನೋಡಲು ಹೊರಟೆವು.



ಸೋಮ ಎಂದರೆ ಚಂದ್ರ. ( Moon ) ಸೋಮ ಪ್ರತಿಷ್ಟಾಪಿಸಿದ ಶಿವಲಿಂಗವು ಸೋಮನಾಥ ಎಂದಾಯಿತು. ಧಕ್ಷನಿಂದ ಶಾಪಕ್ಕೊಳಗಾಗಿ ಚಂದ್ರನು ಪರಿತಪಿಸುತ್ತಿರುವಾಗ ಬ್ರಹ್ಮನ ಆದೇಶದಂತೆ ಭೂಮಿಗೆ ಬಂದು ಕಡಲತೀರದಲ್ಲಿ ಒಂದು ಚಿನ್ನದ ದೇವಾಲಯ ಕಟ್ಟಿಸಿ ಅಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ತಪಸ್ಸು ಮಾಡಿದಾಗ ಶಿವನು ಒಲಿದು ಆತನ ಶಾಪ ಮೋಕ್ಷ ಮಾಡುತ್ತಾನೆ. ಮಾತ್ರವಲ್ಲ ಜ್ಯೋತಿರ್ಲಿಂಗದ ರೂಪದಲ್ಲಿ ಅಲ್ಲಿಯೇ ನೆಲೆಸುತ್ತಾನೆ. ಈ ಸುವರ್ಣ ದೇಗುಲವು ನಾಶವಾದ ಮೇಲೆ ಸೂರ್ಯ ದೇವನೂ ಇಲ್ಲಿ ರಜತ ದೇವಾಲಯ ನಿರ್ಮಿಸುತ್ತಾನೆ. ಅದೂ ಅಳಿದು ಹೋದಮೇಲೆ ಶ್ರೀಕೃಷ್ಣನು ಶ್ರೀಗಂಧದ ಕಟ್ಟಿಗೆಯಿಂದ ದೇವಾಲ ನಿರ್ಮಿಸುತ್ತಾನೆ. ಅದೂ ಸಹಾ ಅಳಿದು ನಾಶವಾಗಿ ಕಲಿಯುಗದಲ್ಲಿ ಕ್ರಿಸ್ತ ಶಕ 649ರಲ್ಲಿ ವಲ್ಲಭಿ ಎಂಬ ರಾಜನು ಅದನ್ನು ಮತ್ತೆ ಕಟ್ಟಿಸುತ್ತಾನೆ, ಆದರೆ ಅದು ಅರಬರ ಧಾಳಿಗೆ ತುತ್ತಾಗಿ ನಿರ್ನಾಮವಾಯಿತು. ದ್ವಿತೀಯ ನಾಗಭಟ ಎಂಬ ರಾಜನು 815 ನೇ ಇಸವಿಯಲ್ಲಿ ಪುನ್ಹರಚಿಸುತ್ತಾನೆ. ಆಗ ಬಹಳ ವೈಭವದಿಂದ, ಅಗಣಿತ ಮೌಲ್ಯದ ಚಿನ್ನಾಭರಣ, ಮುತ್ತು ರತ್ನಾದಿಗಳಿಂದ ಸೋಮನಾಥವು ಪ್ರಖ್ಯಾತಿ ಹೊಂದಿತ್ತು. ಆದರೆ ಆ ಐಶ್ವರ್ಯವೇ ಅದಕ್ಕೆ ಮುಳುವಾಯಿತು. 1024 ರಲ್ಲಿ ಮಹಮ್ಮದ್ ಘಜನಿ ಹಲವು ಬಾರಿ ಆಕ್ರಮಣ ನಡೆಸಿ ಕೊಳ್ಳೆಹೊಡೆದು ತನ್ನ ಊರಿಗೆ ಸಾಗಿಸಿದ ಎಂದು ನಾವು ಚರಿತ್ರೆಯ ಪಾಠದಲ್ಲಿ ಓದಿರುತ್ತೇವೆ. ಆದರೂ ಸೋಮನಾಥನ ಮೇಲಿರುವ ಅಚಲ ಭಕ್ತಿಯಿಂದ ದೇವಾಲಯ ಮತ್ತೆ ತಲೆ ಎತ್ತುತ್ತದೆ. ಈ ಬಾರಿ ಗುರ್ಜರ ಅರಸು ಭೋಜ, ನಂತರ ಸೋಲಂಕಿಯ ರಾಜ ಭೀಮದೇವ 1026- 1042ರಲ್ಲಿ ಇದನ್ನು ಕಟ್ಟಿದರು. ಸುಮಾರು 250 ವರ್ಷಗಳವರೆಗೆ ಸೋಮನಾಥಾನ ಕೀರ್ತಿ ಮೆರೆಯಿತು. ಆದರೆ 1296 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಇದನ್ನು ಕೊಳ್ಳೆ ಹೊಡೆದು ನಾಶ ಮಾಡಿದ. ಮತ್ತೆ ಮತ್ತೆ ಇದನ್ನು ಕಟ್ಟಿದರು. 1451ರಲ್ಲಿ ಮಹಮ್ಮದ್ ಬೇಗಡನಿಂದ 1665 ರಲ್ಲಿ ಔರಂಗಜೇಬ ನಿಂದ ದ್ವಂಸಗೊಂಡಿತು.ಆತನು ದೇವಾಲಯ ಕೆಡವಿ ಅಲ್ಲೇ ಒಂದು ಮಸೀದಿಯನ್ನೂ ನಿರ್ಮಿಸಿದನು. ಪಾಳುಬಿದ್ದ ದೇವಾಲಯದ ಅವಶೇಷಗಳು ತಮ್ಮ ಕಣ್ಣೀರ ಕಥೆಯನ್ನು ಹೇಳುತ್ತಾ ಬಿದ್ದಿದ್ದವು. ಅಹಲ್ಯಾಭಾಯಿ ಹೋಳ್ಕರ್ ಎಂಬ ಪೇಶವೇ ವಂಶದ ಮಹಾರಾಣಿ ಅಲ್ಲಿಗೆ ಬಂದು ಇದನ್ನು ನೋಡಿ ಬಹಳ ದುಃಖಪಟ್ಟು, ಹಿಂದಿನ ದೇವಾಲಯದ ಸಮೀಪದಲ್ಲೇ ಸೋಮನಾಥ ಲಿಂಗ ಪ್ರತಿಷ್ಟಾಪಿಸಿಪೂಜೆ ಅರ್ಚನೆಗಳನ್ನು ಪ್ರಾರಂಭಿಸಿದಳು. ಈ ದೇವಾಲಯವು ಈವಾಗಲೂ ಇದ್ದು ನಾವು ನೋಡಬಹುದು.



 ಆದರೆ ಇದು ಚಿಕ್ಕ ದೇವಾಲಯ ಬಹಳ ಭವ್ಯತೆ ಇದಕ್ಕಿಲ್ಲ. 1947ರಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಮತ್ತು ಕೆ.ಎಂ. ಮುನ್ಶಿ ಯವರು ಇಲ್ಲಿಗೆ ಬಂದು “ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೆ ನಾವು ಸೋಮನಾಥನ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ” ಎಂದು ಅರಬೀ ಸಮುದ್ರದ ನೀರು ಮುಟ್ಟಿ ಪ್ರತಿಜ್ಞೆ ಮಾಡಿದರು. ಸ್ವಾತಂತ್ರ್ಯ ಬಂತು. ಸೋಮನಾಥದ ಕೆಲಸವೂ ಬಹಳ ತ್ವರಿತವಾಗಿ ನಡೆದು 1951 ರಲ್ಲಿ ಪೂರ್ಣಗೊಂಡು, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಂದ ಪ್ರಾಣಪ್ರತಿಷ್ಠೆಗೊಂಡು ಅತ್ಯಪೂರ್ವ ಪರಿಪೂರ್ಣ ದೇವಾಲಯ ಮತ್ತು ಜ್ಯೋತಿರ್ಲಿಂಗ ಮತ್ತೊಮ್ಮೆ ನಮ್ಮವರ ಹೆಮ್ಮೆಯ, ಭಕ್ತಿ ಮತ್ತು ಛಲದ ಪ್ರತೀಕವಾಗಿ ತನ್ನ ಮೊದಲಿದ್ದ ಸ್ಥಾನದಲ್ಲೇ ರಾರಾಜಿಸುತ್ತಿದೆ.



 ( ಮೇಲೆ ಕೊಟ್ಟಿರುವ ವಿವರಗಳು ಮತ್ತು ಅಂಕಿ ಅಂಶಗಳನ್ನು ವಿಕಿಪೀಡಿಯಾದಿಂದ ಪಡೆದಿದ್ದೇನೆ— ಇಷ್ಟು ವಿವರಣೆ ಇಲ್ಲದಿದ್ದರೆ ಸೋಮನಾಥದ ವಿವರಣೆ ಅಸಾಧ್ಯ) ಇದರ ವೆಚ್ಚಕ್ಕಾಗಿ ಸರಕಾರದಿಂದ ಒಂದು ಕಾಸೂ ಪಡೆಯಬಾರದೆಂದು ಬಾಪೂಜಿಯವರು ಹೇಳಿದ್ದರಂತೆ. ಆದಕಾರಣ ಸಂಪೂರ್ಣ ವೆಚ್ಚವನ್ನು ಭಾರತದ ಭಕ್ತ ಜನರಿಂದಲೇ ಸಂಗ್ರಹಿಸಿ ನಿರ್ಮಿಸಿದ್ದಾರೆ. ಆಗ ಇದಕ್ಕಾಗಿ ರಚಿಸಿದ ಟ್ರಸ್ಟ್ ಈವಾಗಲೂ ಬಹಳ ಶಿಸ್ತು ಬದ್ದವಾಗಿ ನಡೆಯುತ್ತಿದೆ. ಯಾತ್ರಿಗಳಿಗಾಗಿ ಅತಿಥಿ ಗೃಹಗಳು ಭೋಜನಾಲಯಗಳು ಸೈಟ್ ಸೀಯಿಂಗ್ ಬಸ್ ಗಳು ಎಲ್ಲವನ್ನೂ ಟ್ರಸ್ಟ್ ನೋಡಿಕೊಳ್ಳುತ್ತದೆ.



 ಎಲ್ಲವೂ ಅಗ್ಗದಲ್ಲಿ. ಎಲ್ಲೆಡೆ ಶುಚಿತ್ವ ಭದ್ರತೆ ಇದೆ, ಭದ್ರತಾದಳದ ಕಣ್ಣು ತಪ್ಪಿಸಿ ಯಾರೂ ದೇವಾಲಯದ ಆವರಣವನ್ನೇ ಪ್ರವೇಶಿಸುವಂತಿಲ್ಲ. ಇಲ್ಲಿ ಸಹಾ ಕೆಮರಾ ಮೊಬೈಲ್ ಎಲ್ಲಾ ನಿಷೇಧಿಸಲಾಗಿದೆ.



 ಆವರಣದ ಹೊರಗಿನಿಂದಲೇ ಫೋಟೋ ತೆಗೆಯಬೇಕಷ್ಟೇ. ಅಲ್ಲೇ ಒಂದು ಸುಂದರ ಪಾರ್ಕ್ ನಿರ್ಮಿಸಿದ್ದಾರೆ. ದೂರದಲ್ಲಿ ಸೋಮನಾಥ ಕಂಡರೆ, ಎದುರುಗಡೆ ವಿಶಾಲ ಕಡಲು. ಅಲ್ಲಿಂದಲೇ ಹಲವಾರು ಫೋಟೋ ತೆಗೆದೆವು.



 ನಂತರ ಪಕ್ಕದ ದಾರಿಯಲ್ಲಿ ಸಾಗಿ ಸಮುದ್ರ ಕಿನಾರೆಗೆ ಬಂದೆವು. ಅಲ್ಲೆಲ್ಲ ಸಂತೆ ನೆರೆದಿತ್ತು. ಎಳನೀರು ಕುಡಿದು ಮುಂದೆ ಹೋದೆವು. ಮಕ್ಕಳಿಗಾಗಿ ಆಟದ ಹಲವಾರು ಆಕರ್ಷಣೆ, ಕುದುರೆ ಒಂಟೆ ಸವಾರಿಯೂ ಇತ್ತು. ಶಂಖ, ಕಪ್ಪೆಚಿಪ್ಪುಗಳು, ಮುತ್ತು ಹವಳ ಕೆಲವು ಬಗೆಯ ರತ್ನಗಳನ್ನೂ ಅಲ್ಲಿ ಮಾರುತಿದ್ದರು. ಬಹಳ ಅಗ್ಗವಾಗಿ. ಇವುಗಳ ಕ್ವಾಲಿಟಿ ಬಗ್ಗೆ ಏನೂ ಹೇಳುವಂತಿಲ್ಲ. ನಾವು ನೀರಿಗಿಳಿದು ಸುಮಾರು ಹೊತ್ತು ಆಟವಾಡಿದೆವು.



ಅಲ್ಲಿಂದ ಹೊರಟು ನಾವು ದೇವರ ದರ್ಶನಕ್ಕೆ ಹೋದೆವು. ಮೊದಲಿಗೆ ಸುರಕ್ಷಾ ತಪಾಸಣೆ ನಡೆಯಿತು. ಇದಕ್ಕೂ ಮೊದಲು ಕೆಮರಾ ಮೊಬೈಲ್ ಎಲ್ಲ ಅಲ್ಲಿ ಜಮಾ ಮಾಡಿದೆವು. ಮುಂದೆ ವಿಶಾಲವಾದ ಜಾಗ, ಎಲ್ಲೆಡೆ ಅಲಂಕಾರಿಕ ಟೈಲ್ ಹಾಕಿದ್ದಾರೆ. ಇಲ್ಲಿ ಸೋಮನಾಥನಿಗೆ ಅಭಿಮುಖವಾಗಿ ನಿಂತಿರುವ ಸರ್ದಾರ್ ಪಟೇಲ್ ಅವರ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ.



 ಮತ್ತೆ ಸರದಿಯಲ್ಲಿ ಸಾಗಲು ಕಟಾಂಜನವಿದೆ. ಅದರಲ್ಲಿ ಹೋದರೆ ದೇವಾಲಯದ ಮುಖ್ಯ ದ್ವಾರ. ಇಲ್ಲಿ ಮತ್ತೊಮ್ಮೆ ಸುರಕ್ಷಾ ತಪಾಸಣೆ, ಅಲ್ಲಿಂದ ಒಳಗಡೆ ಹೋದರೆ ಬಹಳ ವಿಶಾಲವಾದ ಪ್ರಾಂಗಣ, ಎಲ್ಲೆಲ್ಲೂ ಹುಲ್ಲು ಹಾಸು, ಅಲಂಕಾರಿಕ ಸಸ್ಯಗಳು. ಅಲ್ಲಲ್ಲಿ ಕುಳಿತು ದೇವಾಲಯ ನೋಡಬಹುದು. ಮಧ್ಯದಲ್ಲಿ ದಾರಿಯಿದೆ. ಸಮುದ್ರದಿಂದ ಎತ್ತರದಲ್ಲಿದೆ. ಅಲ್ಲಿಂದ ಸಮುದ್ರ ಧರ್ಶನ ಸೊಗಸಾಗಿದೆ. ನಮಗೆ ಸೂರ್ಯಾಸ್ತವೂ ಅಲ್ಲೇ ನೋಡಲು ಸಾಧ್ಯವಾಯಿತು. ಹೊರಗಿನಿಂದಲೇ ದೇವಾಲಯದ ಸೊಬಗನ್ನು ವೀಕ್ಷಿಸಿದೆವು. ದೇವಾಲಯವು ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಶಿಖರವು 52 ಮೀಟರ್ ಎತ್ತರವಿದ್ದು ತುತ್ತ ತುದಿಯಲ್ಲಿ ದ್ವಜವಿದೆ. ಇಲ್ಲಿ ಶಿಲ್ಪ ಕಲಾಕೃತಿಗಳು ಜಾಸ್ತಿ ಇಲ್ಲ. ಆದರೆ ಇದ್ದ ಶಿಲ್ಪಗಳು ಸುಂದರವಾಗಿದ್ದವು.



 ಮತ್ತೆ ನಾಟ್ಯ ಮಂಟಪ, ಇಲ್ಲಿನ ಕಂಭಗಳು ಎತ್ತರವಾಗಿದ್ದು ಸುಂದರವಾಗಿವೆ. ಹೊರಗಿನ ಸಾಲಿನ ಕಂಭಗಳಿಗೆ ಚಿನ್ನದ ಬಣ್ಣದ ಪೇಯಿಂಟ್ ಮಾಡಿದ್ದಾರೆ. ಅಲ್ಲಿಂದ ಮುಂದೆ ಮತ್ತೊಂದು ದ್ವಾರ, ಅದರ ಮೆಟ್ಟಲಲ್ಲಿ ನಿಂತಾಗಲೇ ಸೋಮನಾಥ ಜ್ಯೋತಿರ್ಲಿಂಗ ದರ್ಶನ ವಾಯಿತು. ದೇವರ ದರ್ಶನ ಎಲ್ಲರಿಗೂ ಸುಲಭವಾಗಲೆಂದು ಎರಡೂ ಪಕ್ಕದಲ್ಲಿ ರೈಲಿಂಗ್ ಹಾಕಿದ್ದರೆ. ಒಂದು ಬದಿ ಮಹಿಳೆಯರಿಗೆ ಮತ್ತು ಇನ್ನೊಂದು ಬದಿ ಪುರುಷರಿಗೆ. ಅದರಲ್ಲಿ ಹೋಗಿ ದೇವರ ದರ್ಶನ ಮತ್ತು ಪ್ರಾರ್ಥನೆ ಮಾಡಿ ಮುಂದೆ ಹೋದೆವು. ಎಷ್ಟು ಸಲ ಬೇಕಾದರೂ ಈ ರೀತಿ ದರ್ಶನ ಮಾಡಬಹುದು. ಈ ಒಳಾಂಗಣವು ಬಹಳ ದೊಡ್ಡದಾಗಿದ್ದು 250 ಜನರಿದ್ದರೂ ರಶ್ ಅನ್ನಿಸುವುದಿಲ್ಲ. ಗರ್ಭ ಗುಡಿ ದೊಡ್ಡದಾಗಿದೆ. ಮಧ್ಯದಲ್ಲಿ ದೊಡ್ಡ ಶಿವ ಲಿಂಗ, ಪೂಜೆ ನಡೆಯುವಾಗ ಅರ್ಚಕರು ನಮಗೆ ಅಡ್ಡಲಾಗಿ ನಿಲ್ಲುವುದಿಲ್ಲ. ಪಂಡಾಗಳ ಹಾವಳಿಯೂ ಇಲ್ಲಿಲ್ಲ.

ಸಂಜೆ 7.15 ಕ್ಕೆ ಆರತಿ. ಜನರೆಲ್ಲ ಭಕ್ತಿಯಿಂದ ಸೋಮನಾಥನ ಘೋಷ ಮಾಡುತಿದ್ದರು. ಮೊದಲಿಗೆ ಧೂಪಾರತಿ, ಮತ್ತೆ ಮುಖ್ಯ ಆರತಿ ನಡೆಯುತ್ತದೆ. ಅದಾದ ಮೇಲೆ ಜನರೆಲ್ಲಾ ಆರತಿ ಸ್ವೀಕರಿಸಿ ಹೊರ ಹೋದರು. ಈವಾಗ ದೇವರನ್ನು ಹತ್ತಿರದಲ್ಲೇ ನೋಡಬಹುದು. ಅಲಂಕಾರವನ್ನೆಲ್ಲಾ ತೆಗೆದು ಅಭಿಷೇಕ ಮಾಡುತ್ತಾರೆ. ನಾವು ಇದಕ್ಕಾಗಿಯೇ ಅಲ್ಲಿಯೇ ನಿಂತಿದ್ದೆವು. ಪರಿ ಪೂರ್ಣ ಜ್ಯೋತಿರ್ಲಿಂಗ ದರ್ಶನವಾಯಿತು. ದೇವರಿಗೆ ಅರ್ಚಿಸಿದ ಬಿಲ್ವ ಪತ್ರೆ ಹೂವುಗಳು ನಮಗೆ ದೊರಕಿದವು. ಮತ್ತೊಮ್ಮೆ ನಮಿಸಿ ಹೊರ ಬಂದೆವು. ಇಲ್ಲಿ ಹೊರ ಭಾಗದಲ್ಲಿ ಎತ್ತರವಾದ ಜಾಗದಲ್ಲಿ ಒಂದು ದೊಡ್ಡ ಟಿವಿ ಇರಿಸಿದ್ದಾರೆ.



 ಇದರಲ್ಲಿ ದೇವರಿಗೆ ನಡೆಯುವ ಎಲ್ಲಾ ಸೇವೆಗಳನ್ನೂ ಲೈವ್ ಆಗಿ ನೋಡಬಹುದು. ಇಲ್ಲಿ ರಾತ್ರಿ 8 ಘಂಟೆಗೆ ಲೈಟ್ ಶೋ ಇದೆ. ಇದನ್ನು ನೋಡಲು 50 ರೂ. ಟಿಕೆಟ್ ಕೊಂಡು ಅಲ್ಲಿಗೆ ಹೋದೆವು. ಒಳ ಪ್ರಾಂಗಣದ ಒಂದು ಪಕ್ಕದಲ್ಲಿ ಗ್ಯಾಲರಿ ನಿರ್ಮಿಸಿದ್ದಾರೆ. ಅಲ್ಲಿ ಕುಳಿತು ನಾವು ಇದನ್ನು ನೋಡಿದೆವು. ಬಹಳ ವಿಶೇಷವಾದ ಅನುಭವವನ್ನು ನೀಡುತ್ತದೆ, ಸಮುದ್ರದ ತಂಪಾದ ಗಾಳಿ, ಕತ್ತಲಲ್ಲಿ ಮಿನುಗುವ ನಕ್ಷತ್ರಗಳು ಎಲ್ಲವೂ ಈ ಶೋ ಗೆ ಒಳ್ಳೆಯ ಆಯಾಮವನ್ನು ಒದಗಿಸುತ್ತದೆ. ಇದ್ದಕ್ಕಿದ್ದಂತೆ ಸಿಡಿಲು ಮಿಂಚು ಬಿರುಗಾಳಿ, ಸಮುದ್ರದ ಭೋರ್ಗರೆತ ಎಲ್ಲಾ ಬಂತು. ಇದೇನಪ್ಪಾ ಮಳೆ ಬರುತ್ತದೋ ಎಂದುಕೊಂಡೆವು. ಅಷ್ಟರಲ್ಲಿ ಗಂಭೀರ ದ್ವನಿ ಕಡಲ ಕಡೆಯಿಂದ ಕೇಳಿಬಂತು. ‘ ನಾನು ಸಮುದ್ರ ರಾಜ ‘ ಎಂದು ಹೇಳಿ ಚಂದ್ರನಿಂದ ಸ್ಥಾಪನೆಗೊಂಡು ಈವರೆಗಿನ ಏಳು-ಬೀಳುಗಳನ್ನೆಲ್ಲಾ ಬಹಳ ಪರಿಣಾಮಕಾರಿಯಾಗಿ ವಿವರಿಸುತ್ತಾನೆ. ಹಿಂದೆ ಇದ್ದ ವೈಭವ, ನಂತರ ಆಕ್ರಮಣಗಳು, ಆಕ್ರಮಣಕಾರರ ಅಟ್ಟಹಾಸ, ಕುದುರೆಗಳ ಕೆನೆತ, ಖಡ್ಗಗಳ ಖಣಿ ಖಣಿತ, ಜನರ ಆಕ್ರಂದನ ಚೀತ್ಕಾರ ಎಲ್ಲವೂ ಬೆಳಕು ದ್ವನಿಯ ಚಮತ್ಕಾರದಲ್ಲಿ ಬಹಳ ಪರಿಣಾಮಕಾರಿಯಾಗಿ ತೋರಿಸುತ್ತಾರೆ. ಇದನ್ನು ನೋಡದಿದ್ದರೆ ನಮಗೆ ಸೋಮನಾಥದ ಇತಿಹಾಸ ಮಹತ್ವ ತಿಳಿಯುವುದಿಲ್ಲ. ದೇವಾಲಯದ ಹೊರಮಂಟಪದಲ್ಲಿ ಒಂದುಕಡೆ ಹಳೆಯ ಸೋಮನಾಥದ ಅವಶೇಷಗಳ ಫೋಟೋ ಗ್ಯಾಲರಿ ಇದೆ. ಇವುಗಳನ್ನು ನೋಡುವಾಗ ಎಷ್ಟೊಂದು ಭರ್ಬರವಾಗಿ ಅದನ್ನು ದ್ವಂಸ ಮಾಡಿದ್ದರು ಎಂದು ತಿಳಿಯುತ್ತದೆ. ರಾತ್ರಿ ಒಳ್ಳೆಯ ಊಟ ಮಾಡಿ ರೂಮಿಗೆ ಬಂದು ಮಲಗಿದೆವು.

ಮರುದಿನ ಬೆಳಗ್ಗೆ 8 ಘಂಟೆಗೆ ಹೊರಡುವ ಸೋಮನಾಥ-ಪ್ರಭಾಸ ಧರ್ಶನ, ಮಿನಿ ಬಸ್ ನಲ್ಲಿ ಹೊರಟೆವು. ಈ ಬಸ್ ಸೋಮನಾಥ್ ಟ್ರಸ್ಟ್ ನ ವತಿಯಿಂದಲೇ ನಡೆಸಲ್ಪಡು ತ್ತಿದೆ. ನಮ್ಮ ಗೆಸ್ಟ್ ಹೌಸ್ ಗೆ 2 ಬಸ್ ನಿಗದಿಯಾಗಿದೆ. ಪೂರ್ತಿ ಯಾತ್ರೆಗೆ ತಲಾ 20ರೂ. ಮೊದಲು ನಮ್ಮನ್ನು ಶಾರದಾಪೀಠ, ಸೂರ್ಯ ಮಂದಿರ ನೋಡಲು ಇಳಿಸಿದರು.



 ಸೂರ್ಯ ಮಂದಿರವು ಹಳೆಯದಾದ ದೇವಾಲಯ, ಎತ್ತರವಾದ ಜಾಗದಲ್ಲಿತ್ತು. ಆದರೆ ಅದರ ಸುತ್ತೆಲ್ಲ ಮನೆಗಳು ಒತ್ತೊತ್ತಾಗಿ ಇದ್ದುದರಿಂದ ಅಷ್ಟು ಆಕರ್ಷಣೀಯವಾಗಿ ಕಾಣಲಿಲ್ಲ. ಶಾರದಾಪೀಠ ವು ಚೆನ್ನಾಗಿದೆ. ಮತ್ತೆ ಕೆಲವಾರು ಪುಟ್ಟ ದೇವಾಲಯಗಳನ್ನು ನೋಡಿದೆವು. ಆಮೇಲೆ ತ್ರಿವೇಣಿ ಘಾಟ್ ಗೆ ಬಂದೆವು.



ಇಲ್ಲಿ ಕಪಿಲಾ, ಹಿರಣ್ ಮತ್ತು ಸರಸ್ವತಿ ನದಿಗಳ ಸಂಗಮ. ಇಲ್ಲಿ ಸ್ನಾನ ಮಾಡಬಹುದು.ಇದು ಚೆನ್ನಾಗಿದೆ. ನಂತರ ನಾವು ಪರಶುರಾಮ ಮಂದಿರಕ್ಕೆ ಹೋದೆವು. ಇಲ್ಲಿ ಒಂದು ಪುಟ್ಟ ಮಂದಿರ, ಕೊಳ ಇದೆ. ಪ್ರಶಾಂತ ಜಾಗ.



 ನಮ್ಮನ್ನು ಇಲ್ಲಿಂದ ಕಾಮನಾಥ ಮಹಾದೇವ ದೇವಾಲಯಕ್ಕೆ ತಂದು ನಿಲ್ಲಿಸಿದರು.



 ಅದನ್ನು ನೋಡಿ, ನಾವು ಸಮುದ್ರ ಕಿನಾರೆಗೆ ಬಂದೆವು. ಅಲ್ಲಿ ಸಮುದ್ರದಲ್ಲೇ ಇರುವ 2 ಶಿವಲಿಂಗ ಕಾಣುತ್ತದೆ. ಇದರ ಮಹತ್ವ ಏನು ಎಂತ ಗೊತ್ತಾಗುವುದಿಲ್ಲ. ಆದರೆ ನಮ್ಮ ಗೈಡ್ ಹೇಳಿದಂತೆ ಬೇಡನೋಬ್ಬನು ಇಲ್ಲಿ ನಿಂತು ಬಾಣ ಬಿಡುವಾಗ ಅದು ಆಕಸ್ಮಿಕವಾಗಿ ಅಶ್ವತ್ಥ ಮರದಡಿಯಲ್ಲಿ ಯೋಗ ನಿದ್ರೆಯಲ್ಲಿರುವ ಶ್ರೀಕೃಷ್ಣನ ಕಾಲಿನ ಹೆಬ್ಬೆರಳಿಗೆ ತಾಗುತ್ತದೆ. ನಾವೂ ಅಲ್ಲಿರುವ ಲಿಂಗಗಳಿಗೆ ಬೊಗಸೆ ಬೊಗಸೆ ಸಮುದ್ರದ ನೀರಿನ ಅಭಿಷೇಕ ಮಾಡಿದೆವು. ಮತ್ತೆ ಮೇಲೆ ಬರುವಾಗ ಅಲ್ಲೂ ಒಂದು ಲಿಂಗ ಕಂಡಿತು. ನಂತರ ನಾವು ಬಾಲ್ಕಾ ತೀರ್ಥಕ್ಕೆ ಹೋದೆವು. ಇಲ್ಲಿ ಅಶ್ವತ್ಥ ವೃಕ್ಷದ ಕೆಳಗಡೆ ಯೋಗಾರೂಢನಾಗಿ ಮಲಗಿದ್ದ ಶ್ರಿಕೃಷ್ಣನ ಮರ್ಮಸ್ಥಾನವಾದ ಕಾಲಿನ ಹೆಬ್ಬೆರಳಿಗೆ ಬೇಡ ಹೂಡಿದ ಬಾಣ ತಗುಲಿತು. ಇಲ್ಲಿ ಶ್ರೀಕೃಷ್ಣನು ಮರಕ್ಕೆ ಒರಗಿಕೊಂಡು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ಅತೀ ಸುಂದರ ಮೂರ್ತಿ ಇದೆ. ಎದುರುಗಡೆ ಬೇಡನು ತಾನು ತಿಳಿಯದೇ ಮಾಡಿದ ತಪ್ಪಿಗಾಗಿ ಕ್ಷಮೆ ಯಾಚಿಸುತ್ತಿದ್ದಾನೆ. ಈ ನಿಮಿತ್ತಕ್ಕೂ ಒಂದು ಕಾರಣವಿದೆಯಂತೆ. ಹಿಂದೆ ಕೃಷ್ಣನ ಪ್ರೇರಣೆಯಿಂದ ಏಕಲವ್ಯನ ಕೈಯ ಹೆಬ್ಬೆರಳನ್ನು ದ್ರೋಣಾಚಾರ್ಯರು ಗುರುದಕ್ಷಿಣೆಯಾಗಿ ಪಡೆದು ಆತನನ್ನು ಮುಂದೆ ಬಾಣ ಬಿಡದ ಹಾಗೆ ಮಾಡಿದ್ದರು. ಮತ್ತೆ ಮುಂದಿನ ಜನ್ಮದಲ್ಲಿ ಎಕಲವ್ಯನೇ ಈ ಬೇಡನಾಗಿ ಸೇಡು ತೀರಿಸಿಕೊಂಡನು. ಹಾಗೆ ಬೆರಳಿಗೆ ಬೆರಳು ಎನ್ನುತ್ತಾರೆ. ಮುಂದಿನ ತಾಣ ದೇಹೋತ್ಸರ್ಗ. ಹೆಸರೇ ಹೇಳುವಂತೆ ಇಲ್ಲಿಯೇ ಬಲರಾಮ ತನ್ನ ಅವತಾರವನ್ನು ಮುಗಿಸಿ ನಾಗಲೋಕಕ್ಕೆ ಹಿಂತಿರುಗಿದನಂತೆ. ಇಲ್ಲಿ ಒಂದು ಪುಟ್ಟ ದೇವಾಲಯವಿದೆ ಅಲ್ಲಿ ಕೆಲವಾರು ಮೆಟ್ಟಿಲುಗಳನ್ನಿಳಿದು ಹೋದರೆ ಗುಹೆಯ ಒಂದು ಜಾಗವಿದೆ. ಅದರ ಭಿತ್ತಿಯಲ್ಲಿ ಆದಿಶೇಷನ ಮೂರ್ತಿ ರಚಿಸಿದ್ದಾರೆ.



 ಇಲ್ಲಿಂದಲೇ ಕೆಳಗೆ ಪಾತಾಳಕ್ಕೆ ದಾರಿಯೋ ಏನೋ? ಇಲ್ಲಿ ಗೀತಾ ಮಂದಿರವಿದೆ. ಶ್ರೀಕೃಷ್ಣನು ಅಲ್ಲಿಯೇ ಅವತಾರ ಸಮಾಪ್ತಿಗೊಳಿಸಿದನು ಎಂಬುದಕ್ಕೆ ಸೂಚಕವಾಗಿ ಆತನ ಅಮೃತ ಶಿಲೆಯ ಪಾದಗಳನ್ನು ಕಾಣಬಹುದು.






 ಎದುರುಗಡೆ ತ್ರಿವೇಣಿ ತೀರ್ಥವಿದೆ. ಇದನ್ನೆಲ್ಲಾ ನೋಡಿ ನನಗನ್ನಿಸಿದ್ದೇನೆಂದರೆ ಪ್ರಭಾಸ ಎಂಬುದೊಂದು ದುರಂತಮಯ ಜಾಗ. ಸಮಸ್ತ ಯಾದವರು ಹೊಡೆದಾಡಿ ಇಲ್ಲಿಯೇ ಸತ್ತರು ಬಲರಾಮನೂ ಕೃಷ್ಣನೂ ಇಲ್ಲಿಯೇ ನಮ್ಮ ಭೂಮಿ ಬಿಟ್ಟು ಹೋದರು. ತರುವಾಯ ಸೋಮನಾಥದ ಮೇಲೆ ಆಕ್ರಮಣಗಳ ಸರಮಾಲೆ. ಭಾವುಕ ಮನಸ್ಸಿಗೆ ಒಂಥರಾ ನೋವಾಗುತ್ತದೆ.

ನಮ್ಮನ್ನು ಮತ್ತೆ ಸೋಮನಾಥಕ್ಕೆ ತಂದು ಬಿಟ್ಟರು. ಊಟ ಮುಗಿಸಿ ವಿಶ್ರಾಂತಿ ಪಡೆದು ಮಗದೊಮ್ಮೆ ಸೋಮನಾಥ ದರ್ಶನಕ್ಕೆ ಹೋದೆವು. ಒಳಗಡೆ ಉದ್ಯಾನದಲ್ಲೇ ಕುಳಿತು ಮನತುಂಬ ದೇವಾಲಯದ ಸೊಬಗು, ಭವ್ಯತೆ ತುಂಬಿಕೊಂಡೆವು. ಇಲ್ಲಿ ನಮ್ಮ ಭೂಮಿಯ ಪ್ರತಿಕೃತಿ ಮಾಡಿ ಅದರಲ್ಲಿ ಒಂದು ಬಾಣವನ್ನು ರಚಿಸಿದ್ದಾರೆ. ಈ ಬಾಣವು ನೇರ ದಕ್ಷಿಣ ದ್ರುವವನ್ನು ತೋರಿಸುತ್ತದೆ. ನಮ್ಮ ಭಾರತ ದೇಶದಲ್ಲಿ ಈ ರೀತಿ ಯಾವುದೇ ಭೂಭಾಗವನ್ನು ಸ್ಪರ್ಶಿಸದೇ ನೇರ ದಕ್ಷಿಣ ದ್ರುವವನ್ನು ತಲುಪಬಹುದಾದ ಜಾಗ ಇದು. ದೇವರ ದರ್ಶನಕ್ಕೆ ಹೋದೆವು, ಇವತ್ತು ಸಹಾ ರಶ್ ಇರಲಿಲ್ಲ. ನಮ್ಮ ಅದೃಷ್ಟ. ನವಂಬರ್ ತಿಂಗಲ್ಲಿ ಮಾತ್ರ ರಶ್ ಕಡಿಮೆಯೆಂದು ಇಲ್ಲಿನ ಅರ್ಚಕರೊಬ್ಬರು ಹೇಳಿದರು. ಆರತಿ ಆಯಿತು.




ಆಮೇಲೆ ಪ್ರಸಾದಗಳನ್ನೂ ಪಡೆದುಕೊಂಡು ಮರಳಿದೆವು. ಬೆಳಗ್ಗೆ 6 ಘಂಟೆಗೆ ಹೊರಡುವ ಸೋಮನಾಥ-ಅಹಮದಾಬಾದ್ ರೈಲ್ ನಲ್ಲಿ ಅಹ್ಮದಾಬಾದ್ ಪ್ರಯಾಣ.