Thursday, 26 December 2019

Yamunotri



  1.ಯಮುನೋತ್ರಿ
ನಮ್ಮ ಯಾತ್ರೆಯ ಮೊದಲ ಗಮ್ಯ ಸ್ಥಾನ ಯಮುನೋತ್ರಿ ಧಾಮ. ಋಷಿಕೇಶದಿಂದ ಸುಮಾರು 220 ಕಿ.ಮಿ. ದೂರ ಪಯಣಿಸಬೇಕು. ಇಲ್ಲೆಲ್ಲಾ ಘಂಟೆಗೆ 25 ಕಿ.ಮಿ.ಯಷ್ಟೆ ದೂರ ಸಾಗಬಹುದು. ರಸ್ತೆ ಬಹಳ ಚೆನ್ನಾಗಿತ್ತು. ವಾಹನಗಳೂ ವಿರಳವಾಗಿದ್ದವು. ದಟ್ಟ ಕಾಡಿನ ಮಧ್ಯೆ ಸಾಗುವ ದಾರಿ,


 ಒಂದು ಪಕ್ಕದಲ್ಲಿ ಹರಿಯುವ ನದಿ, ಛುಮು ಛುಮು ಚಳಿ, ಎಲ್ಲೆಡೆ ನೋಡುವಾಗಲೂ ಕಾಣುವ ಪೈನ್ ಮರಗಳು,ಓಕ್ ಮರಗಗಳು, ಬೀಸುವ ಗಾಳಿ, ಮಂಜು ಮುಸುಕಿದ ವಾತಾವರಣ ಮತ್ತು ಆಕಾಶವನ್ನು ಮುಟ್ಟಲೆತ್ನಿಸುವ ಪರ್ವತ ಮಾಲೆ ಎಲ್ಲವೂ ನಮಗೆ ಸ್ವಾಗತ ಕೋರುತ್ತಿದ್ದವು. ಕೆಲವೊಮ್ಮೆ ಆಳವಾದ ಕಡಿದಾದ ಕಣಿವೆ ದಾರಿಯಲ್ಲಿ ಸಾಗುವಾಗ ಜುಂ ಎನ್ನಿಸುತಿತ್ತು. ಅಲ್ಲಲ್ಲಿ ಕಾಣುವ ಜಲಪಾತಗಳು ನಮ್ಮನ್ನು ಮುದಗೊಳಿಸುತಿದ್ದವು. ಆಗ ಒಂದು ನರಿ ರಸ್ತೆ ದಾಟಿ ಕಾಡಿನಲ್ಲಿ ಮಾಯವಾಯಿತು. ಶುಭ ಶಕುನ ಎಂದುಕೊಂಡೆ. ಸಣ್ಣ ಸಣ್ಣ ಹಳ್ಳಿಗಳು ಊರುಗಳನ್ನು ದಾಟಿ ನಾವು ಡೆಹರಾಡೂನ್ ತಲುಪಿದವು.

 ಉತ್ತರಾಖಂಡದ ರಾಜಧಾನಿ ಆಗಿರುವ ಈ ಸೊಗಸಾದ ಸುಂದರ ಊರು ಒಂದು ಸುಖವಾಸ ಕೇಂದ್ರವಾಗಿದೆ. ಇಲ್ಲಿನ ಹಿತಕರ ವಾತಾವರಣ ಬ್ರಿಟಿಷರಿಗೆ ತುಂಬಾ ಹಿಡಿಸಿದ್ದರಿಂದ ಇಲ್ಲಿ ಅವರು ನೆಲಸಿ ಈ ಪ್ರದೇಶವನ್ನು ಅವರು ಬೆಳೆಸಿದರು. ಆಸ್ಪತ್ರೆ, ಶಾಲೆ, ಕಾಲೇಜುಗಳು ಆ ಕಾಲದಲ್ಲೇ ಇಲ್ಲಿ ಹೆಸರುವಾಸಿಯಾಗಿದ್ದವು. ಪ್ರಖ್ಯಾತಿ ಪಡೆದ ಡೂನ್ ಕಾಲೇಜು ಇರುವುದು ಇಲ್ಲೇ. ಅವರ ಕಾಲದಲ್ಲಿ ನಿರ್ಮಿತಿಗೊಂಡ ಮನೆಗಳೂ ಬಂಗ್ಲೆ, ಚರ್ಚು ಇತ್ಯಾದಿಗಳು ಈಗಲೂ ಇವೆ. ಇಲ್ಲಿನ ಡೂನ್ ವ್ಯಾಲಿ ಬಹಳ ಸುಂದರ. ಇಲ್ಲಿಂದ ಮಸ್ಸೂರಿ ಮತ್ತು ಔಲಿಗಳು ಸಮೀಪದಲ್ಲಿವೆ. ಇವೆರಡೂ ಹಿಲ್ ಸ್ಟೇಷನ್ ಆಗಿವೆ.



ನಮ್ಮ ಪಯಣ ಮುಂದುವರೆದು ದರಾಸು ಎಂಬಲ್ಲಿಗೆ ಬಂತು. ಇಲ್ಲಿ ದಾರಿ ಕವಲೊಡೆಯುತ್ತದೆ. ಬಲಕ್ಕೆ ಹೋದರೆ ನೇರ ಗಂಗೋತ್ರಿ ತಲಪಬಹುದು. ಎಡಕ್ಕೆ ತಿರುಗಿದರೆ ಯಮುನೋತ್ರಿ. ನಾವು ಎಡಕ್ಕೆ ತಿರುಗಿದೆವು. ದಾರಿಯಲ್ಲಿ ಸಿಗುವ ಕೆಮ್ಟಿ
ಎಂಬಲ್ಲಿ ಮದ್ಯಾಹ್ನದ ಊಟ. ಒಳ್ಳೆಯ ಜಾಗ. ಒಂದು ಕಡೆ ಬೆಟ್ಟ ಇನ್ನೊಂದೆಡೆ ಪ್ರಪಾತ. ಅದರಲ್ಲಿ ಹರಿಯುವ ನದಿ. ಊಟ ಮುಗಿಸಿ ಹೊರಟೆವು. ಸ್ವಲ್ಪ ದೂರ ಕ್ರಮಿಸಿದಾಗ ನಮಗೆ ಕೆಮ್ಟಿ ಫಾಲ್ಸ್ ದೂರದಲ್ಲಿ ಕಾಣಿಸಿತು. ಹತ್ತಿರದಲ್ಲಿ ಅದನ್ನು ಕಾಣಲಾಗಲಿಲ್ಲ. ನಿರಾಸೆಆಯಿತು. ಆಗ ನಮ್ಮ ಚಾಲಕ ಹೇಳಿದ, ಮುಂದೆ ಇಂತಹ ನೂರು ಫಾಲ್ಸ್ ತೋರಿಸುತ್ತೇನೆ, ನೀವೇನೂ ಬೇಸರಿಸಬೇಡಿ ಎಂದು. ಅವನ ಮಾತು ನಿಜವಾಗಿತ್ತು. ಸುಮಾರು 4 ಘಂಟೆಗೆ ಭರ್ ಕೋಟ್ ಗೆ ತಲುಪಿದೆವು. ಇಂದಿಗೆ ಪ್ರಯಾಣ ನಿಲ್ಲಿಸಿದೆವು. ಕಾಫಿ ತಿಂಡಿ ಆಯಿತು. ಹೊರಗೆ ಅಡ್ಡಾಡಲು ಹೋದೆವು. ಇದೊಂದು ಪುಟ್ಟ ಊರು. 2-3 ಲೋಡ್ಜ್ ಗಳಿದ್ದವು. ಕೆಲ ಅಂಗಡಿಗಳು ಇದ್ದವು. ಮುಖ್ಯ ಊರು ಇನ್ನೂ ಸ್ವಲ್ಪ ದೂರದಲ್ಲಿದೆ. ನಮ್ಮ ಲಾಡ್ಜ್ ನ ಹಿಂಭಾಗದಲ್ಲಿ ಆಳವಾದ ಕಣಿವೆ, ಅದರಲ್ಲಿ ಯಮುನೆ ಹರಿಯುತಿದ್ದಳು, ಅದರಾಚೆ ಮತ್ತೆ ಬೆಟ್ಟ, ಮುಂದುಗಡೆಯೂ ಬೆಟ್ಟ. ಇದನ್ನೆಲ್ಲಾ ನೋಡುತ್ತಿರುವಾಗ ನಮ್ಮ ಚಾರಣ ಹವ್ಯಾಸ ಗರಿಗೆದರಿತು.
 ನಾನು, ಕಸ್ತೂರಿ, ಮುರಳಿ ಮತ್ತು ಶ್ರುತಿ ಚಾರಣಕ್ಕೆ ಹೊರಟೇಬಿಟ್ಟೆವು. ಕೆಳಗೆ ಹರಿಯುತ್ತಿರುವ ನದಿಗೆ ಹೋಗಿ ಸ್ನಾನ ಮಾಡಿ ಬರುವಾ ಎಂದು ಕೆಳಗೆ ಇಳಿದೆವು. ಕೆಲವು ಮನೆಯ ಅಂಗಳ ದಾಟಿ ಮುಂದೆ ಹೋಗುವಾಗ ಕೆಲ ಹುಡುಗರು ಸಿಕ್ಕಿದರು, ಅವರೊಡನೆ ಮಾತಾಡಿದಾಗ, ನೀವು ಅಲ್ಲಿಗೆ ಹೊಗುವುದೇ ಬೇಡ, ಅಲ್ಲಿ ತುಂಬಾ ಹಾವುಗಳಿವೆ, ಅಪಾಯ ಜಾಗ ಎಂದು ನಮ್ಮನ್ನು ಎಚ್ಚರಿಸಿದರು. ಆದರೂ ನಾವು ಅವರ ಮಾತಿಗೆ ಕಿವಿಗೊಡದೆ ಮುಂದುವರಿದೆವು. ಹೊಲಗಳ ಬದುವಿನಲ್ಲಿ ಸಾಗಿ ಹೋಗುತ್ತಿರುವಾಗ, ಹಾಲಿನ ಡಬ್ಬಾ ಹಿಡಿದುಕೊಂಡು ಒಬ್ಬಾಕೆ ಬರುತಿದ್ದಳು. ನಮ್ಮನ್ನು ನಿಲ್ಲಿಸಿ, ಅಣ್ಣಾ ಎಲ್ಲಿಗೆ ಹೋಗುವಿರಿ? ಯಾಕೆ? ಅಲ್ಲೆಲ್ಲಾ ಬಹಳ ಹಾವುಗಳಿವೆ, ನೀವು ಅಲ್ಲಿಗೆ ಹೋಗಲೇ ಬೇಡಿ ಎಂದು ನಮ್ಮನ್ನು ತಡೆದಳು. ಈವಾಗ ನಮಗೂ ಭಯ ಆಯಿತು. ನಿಜಕ್ಕೂ ಇಲ್ಲಿ ಹಾವುಗಳಿರಬೇಕು, ಇವುಗಳಿಂದ ಕಡಿಸಿಕೊಳ್ಳುವುದು ಬೇಡ ಎಂದು ವಾಪಾಸಾದೆವು. ಹಿಂದೆ ದ್ವಾಪರಾ ಯುಗದಲ್ಲಿ ಶ್ರೀಕೄಷ್ಣನು ಕಾಳಿಂಗ ಮರ್ಧನ ಮಾಡಿದ್ದು ಇದೇ ನದಿಯಲ್ಲಿ ಅಲ್ಲವೇ? ಆ ಕಾಳೀಯನ ವಂಶದವರೆಲ್ಲಾ ನದಿಯಲ್ಲಿ ಹರಿದಾಡುತ್ತಾ ಇಲ್ಲಿ ಬಂದು ಬೀಡು ಬಿಟ್ಟಿರಬೇಕು ಎಂದುಕೊಂಡೆವು. ಮರಳಿ ರೂಮ್ ಗೆ ಬಂದು ಬಿದ್ದುಕೊಂಡೆವು. ರಾತ್ರಿ ಊಟ ಆಯಿತು. ನಾಳೆ ಬೆಳಗ್ಗೆ ಬೇಗನೆ ಹೋಗಲಿಕ್ಕಿದೆ ಬೇಗ ನಿದ್ದೆ ಮಾಡಿ ಎಂತ ಕುಮಾರ್ ಅವರ ಸಲಹೆ.
ಬೆಳಗ್ಗೆ ಬೇಗ ಎದ್ದು ಬೆಡ್ ಕಾಫಿ ಕುಡಿದು ಹೊರಟೆವು. ಈಗ ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಬಹಳ ಏರು ದಾರಿ ತಿರುವುಗಳೂ, ಕಣಿವೆ-ಕಂದರಗಳೂ ಒಡಗೂಡಿದ ಪರ್ವತ ಪ್ರದೇಶ.



 ಜಾನಕಿ ಚಟ್ಟಿ ದಾಟಿ ಮುಂದೆ ಹನುಮಾನ್ ಚಟ್ಟಿ ತಲುಪಿದಾಗ ಅಲ್ಲಿ ನಮ್ಮ ಗಾಡಿ ನಿಂತಿತು. ಎಲ್ಲರೂ ಇಳಿದೆವು.

 ಇಲ್ಲಿಂದ ಮುಂದೆ ಯಮುನೋತ್ರಿ, ಪರ್ವತ ಏರಬೇಕು. ಕುದುರೆ, ಡೋಲಿ ಅಥವಾ ನಡೆದುಕೊಂಡು ಹೋಗಬಹುದು. ಕೆಲವರು ಕುದುರೆ ಏರಿದರು. ಡೋಲಿಯಲ್ಲಿ ಸಾಗಿದರು. ನಾವು ಸ್ವಲ್ಪ ಮಂದಿ ನಡೆದೇ ಹೋಗೋಣ ಎಂಬ ಹುಮ್ಮಸ್ಸಿನಿಂದ ನಾವು 6 ಜನ ನಡೆಯಲು ಪ್ರಾರಂಭಿಸಿದೆವು.



 ಒಟ್ಟು 6 ಕಿ.ಮಿ. ಸಾಗಬೇಕು. ಸರಿ ಸುಮಾರು  45 ರಿಂದ 50 ಡಿಗ್ರಿಯ ಕೋನದ ಏರು. ನಾನು 1 ಕಿ.ಮಿ. ಹತ್ತಿದೆ. ಏದುಸಿರು ಬಂತು. ನನ್ನಿಂದಾಗದು ಎಂದು ಕುದುರೆಯ ಮೊರೆ ಹೋದೆ. ಹತ್ತಲು ಮಾತ್ರ ಸಾಕು ಅಂತ ಚೌಕಾಶಿ ಮಾಡಿ 600 ರೂಗೆ ಒಪ್ಪಿಸಿದೆ. ಜೀವನದಲ್ಲಿ ಪ್ರಥಮ ಬಾರಿಗೆ ಅಶ್ವಾರೂಢನಾದೆ. ನನ್ನ ಕುದುರೆಯ ಪಾಲಕ ಅದನ್ನು ಎಳೆದುಕೊಂಡು ಮುಂದೆ ನಡೆಸುತಿದ್ದ. ಅವನಿಗೆ ನಾನು ಎರಡನೆಯ ಸವಾರಿ. ಹಾಗಾಗಿ ಅವನಿಗೆ ಖುಶಿಯೊ ಖುಶಿ. ಅವನ ಗೆಳೆಯರೆಲ್ಲಾ ಅವನನ್ನು ಅಸೂಯೆಯಿಂದ ನೋಡುತಿದ್ದರು. ಕುದುರೆ ಒಮ್ಮೆ ಬೆಟ್ಟಕ್ಕೆ ತಾಗಿಕೊಂಡು ಹೋದರೆ ಮಗದೊಮ್ಮೆ ಪ್ರಪಾತದ ಅಂಚಿನಲ್ಲಿ ಹೋಗುತಿತ್ತು. ಕೆಳಗಿನಿಂದ ಹತ್ತುವವರೂ ಮೇಲಿಂದ ಇಳಿಯುವವರೂ ಡೋಲಿಯಲ್ಲಿ ಸಾಗುವವರೂ ಕುದುರೆ ಪ್ರಯಾಣದವರೂ ಕಾಲ್ನಡೆಯವರೂ ಎಲ್ಲಾ ಸೇರಿ ಗಜಿ ಬಿಜಿ. ಕೆಲವೆಡೆ ಬಂಡೆಗಳು ಹೊರ ಚಾಚಿ ತಲೆಗೆ ಬಡಿಯುವಂತಿದ್ದವು. ಕುದುರೆಯವನು ನನ್ನನ್ನು ಎಚ್ಚರಿಸುತಿದ್ದ. ಅಲ್ಲಲ್ಲಿ ಮೇಲಿಂದ ಜಿನುಗುವ ಶುದ್ಧ ನೀರ ದಾರೆ. ಬಲಗಡೆಯ ಪ್ರಪಾತದಲ್ಲಿ ಹರಿಯುವ ಯಮುನಾ ನದಿ, ಅದಕ್ಕೆ ಧುಮ್ಮಿಕ್ಕುವ ಜಲಪಾತಗಳು, ಎಲ್ಲಾ ಮೇಳೈಸಿ ಮರೆಯಲಾಗದ ಅನುಭವ ಪಡೆದೆ.




 ಅಷ್ಟರಲ್ಲಿ ನನ್ನ ನಾದಿನಿ ವೀಣಾ ಡೋಲಿಯಲ್ಲಿ ಮುಂದೆ ಹೋದಳು. ಒಬ್ಬನೇ ಹೊರುವ ಬುಟ್ಟಿಯಾಕರದ ಡೋಲಿ. ನನ್ನ ಭಾವ ಮುರಳಿಯ ಕುದುರೆ ನನ್ನನ್ನು ದಾಟಿ ಹೋಯಿತು. ನಾವು ಕಾಫಿ ಕುಡಿಯಲು ಒಂದೆಡೆ ನಿಂತೆವು. ಕುದುರೆಗೆ ರೆಸ್ಟ್. ಅಲ್ಲಿಂದ ಹೊರಡುವಾಗ ಶೋಭ ಅಲ್ಲಿಗೆ ತಲುಪಿದ್ದಳು. ಅವಳೂ ಕುದುರೆ ಏರಿ ಬಂದಿದ್ದಳು. ನಾನು ಮತ್ತೆ ಮುಂದುವರೆದೆ. ಇನ್ನೂ 2 ಕಿ.ಮಿ. ಹೋಗಬೇಕು. ಅಲ್ಲಿ ಒಂದು ಸೇತುವೆ ಎದುರಾಯಿತು. ಅದರ ಆಕಡೆಯಿಂದ ಬರುತ್ತಿರುವ ಕುದುರೆಯಿಂದ ಒಬ್ಬರು ಹಿರಿಯ ಮಹಿಳೆ ಆಯ ತಪ್ಪಿ ಕೆಳಕ್ಕೆ ಬಿದ್ದರು. ಪುಣ್ಯಕ್ಕೆ ಅಲ್ಲೇ ಇದ್ದ ಪೊಲೀಸ್ ಒಬ್ಬ ಛಕ್ಕನೆ ಅವರನ್ನು ಸಂಭಾಳಿಸಿ ನಿಲ್ಲಿಸಿದನು. ಕುದುರೆಯ ಪಾಲಕನಿಗೆ ಎರಡೇಟೂ ಬಿಗಿದ. ಕೊನೆಗೂ ನಾನು ಯಮುನೋತ್ರಿ ತಲುಪಿದೆ. ಅಲ್ಲಿ ಸ್ವಲ್ಪ ವಿಶ್ರಾಂತಿ. ನಡೆದು ಬರುವವರೂ ತಲುಪಿದರು. ಎಲ್ಲರೂ ಒಟ್ಟಿಗೆ ಮುಂದೆ ಸಾಗಿ ಇನ್ನೊಂದು ಸೇತುವೆ ದಾಟಿ ಯಮುನೋತ್ರಿ ಧಾಮಕ್ಕೆ ತಲುಪಿದೆವು.



 ಅಲ್ಲಿ ಬಿಸಿ ನೀರ ಕುಂಡವಿದೆ. ಸುಮಾರು 15ಅಡಿಗಳ ಚಚ್ಚೌಕದ ಕೊಳ.ಎದೆಮಟ್ಟದ ಬಿಸಿ ನೀರು, ಮಹಿಳೆಯರಿಗೆ ಬೇರೆ ಕೊಳವಿದೆ. ಇದರಲ್ಲಿ ಬಹಳ ಹೊತ್ತು ಮಿಂದೆವು. ಆಯಾಸ ಎಲ್ಲಾ ಮಾಯ. ಅಲ್ಲಿ ನಾವು ಪೂಜೆ ಮಾಡಿಸಿದೆವು. ಇನ್ನೂ ಮೇಲೆ ಇನ್ನೊಂದು ಕುಂಡವಿದೆ. ಇದು ಸೂರ್ಯ ಕುಂಡ. ಇದರ ನೀರು ಎಷ್ಟು ಬಿಸಿಯೆಂದರೆ ಇದರಲ್ಲಿ ಬಟ್ಟೆಯಲ್ಲಿ ಕಟ್ಟಿದ ಅಕ್ಕಿಯನ್ನು ಮುಳುಗಿಸಿದರೆ ಅನ್ನವಾಗುತ್ತದೆ. ಇದನ್ನು ಅಲ್ಲಿ ಯಮುನಾದೇವಿಗೆ ಅರ್ಚನೆ ಮಾಡಿ ನಮಗೆ ವಾಪಾಸ್ ಕೊಡುತ್ತಾರೆ. ಇದು ಪ್ರಸಾದ. ಅಲ್ಲೆಲ್ಲಾ ಫೊಟೋ ಹಿಡಿದುಕೊಂಡೆವು.




ಯಮುನಾದೇವಿಯ ಮಂದಿರವು 18ನೇ ಶತಮಾನದಲ್ಲಿ ರಾಜಾ ಅಮರ್ ಸಿಂಗ್ ಥಾಪಾ ಕಟ್ಟಿಸಿದನೆಂದು ಹೇಳುತ್ತಾರೆ. ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಯಮುನಾ, ಸೂರ್ಯನ ಪುತ್ರಿ, ಯಮಧರ್ಮನ ಸಹೋದರಿ. ಈ ಮಂದಿರದ ಎದುರುಗಡೆಯೇ ಯಯುನೆ ಹರಿಯುತಿದ್ದಾಳೆ. ಇವಳ ಉಗಮ ಸ್ಠಾನ ಇಲ್ಲಿಂದ ಸುಮಾರು 14 ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಹೋಗಲು ಬಹಳ ದುರ್ಗಮವಾದ ಕಾಡಿನ ದಾರಿ. ಚಾರಣಿಗರಿಗೆ ಮಾತ್ರ ಹೋಗಲು ಸಾಧ್ಯ.
ಇನ್ನು ಇಲ್ಲಿಂದ ಹೊರಡುವ ವೇಳೆಯಾಯಿತು. ನಮ್ಮನ್ನು ಕರೆತಂದ ಕುದುರೆಯವರೂ ಡೋಲಿಯವರೂ ನಮಗಾಗಿ ಕಾದಿದ್ದರು. ಅಷ್ಟೆಲ್ಲಾ ಜನ ಜಂಗುಳಿ ಇದ್ದರೂ ಅವರು ನಮ್ಮನ್ನು ತಪ್ಪದೇ ಗುರುತಿಟ್ಟುಕೊಂಡು ಬರುತ್ತಾರೆ. ಬಹಳ ನಿಯತ್ತಿನವರು. ಕಷ್ಟಜೀವಿಗಳು. ದಿನಕ್ಕೆ 12 ರಿಂದ 24 ಕಿ.ಮಿ ಹತ್ತಿ ಇಳಿದು ಬರುವುದೆಂದರೆ ಸಾಮಾನ್ಯವೇ? ನಾನು ಕೆಳಗೆ ತಲುಪಿದೆ. ಕುದುರೆಯ ಪಾಲಕ ರಾಜು ಗೆ ಮತ್ತು ಅವನ ಕುದುರೆಗೆ ಕೂಲಿ ಮತ್ತು ಭಕ್ಷೀಸು ಕೊಟ್ಟು ಬಂದೆ. ಕೆಳಗೆ ನಮ್ಮ ಅಡಿಗೆಯವರು ಊಟ ಬಡಿಸಿದರು. ಉಳಿದವರಿಗಾಗಿ ಕಾದೆವು. ಮುಂದೆ ನಮ್ಮ ಪ್ರಯಾಣ ಗಂಗೋತ್ರಿ ಧಾಮಕ್ಕೆ.                  


No comments:

Post a Comment