2. ಗಂಗೋತ್ರಿ.
ಯಮುನೋತ್ರಿಯಿಂದ ಹೊರಡುವಾಗಲೆ ಬಹಳ ತಡವಾಯಿತು. ನಮ್ಮ ಗಾಡಿ
ಗಂಗೋತ್ರಿಯ ದಾರಿ ಹಿಡಿಯಿತು. ಬಂದ ದಾರಿಯಲ್ಲೇ ಸುಮಾರು ದೂರ ಹೋದೆವು. ಭರ್ ಕೋಟ್ ದಾಟಿ ಮುಂದೆ ಹೋಗುತ್ತಿರುವಾಗ
ಗಾಡಿಯ ಟೈರು ಪಂಕ್ಚರ್ ಆಯಿತು. ಇದ್ದ ಒಂದು ಸ್ಟೆಪ್ನಿ ಸಹಾ ಉಪಯೋಗಕ್ಕೆ ಬರದ ಹಾಗಿತ್ತು.
ಮಲಿಕ್
ಟೈರ್ ಕಳಚಿ ಅಲ್ಲೇ ಸಿಕ್ಕಿದ ಒಂದು ಬಸ್ ಹಿಡಿದು ಭರ್ ಕೋಟ್ ಗೆ ಸಾಗಿದ. ನಮ್ಮ ತಂಡದ 2 ಬಸ್
ಹಿಂದಿನಿಂದ ಬರುತಿತ್ತು ಅದರಲ್ಲಿ ನಮ್ಮವರು 12 ಜನ ಹತ್ತಿ ಮುಂದೆ ಸಿಗುವ ಯಾವುದೋ ಒಂದು ಊರಿಗೆ
ಹೋದರು. ನಾನು ಮತ್ತು ಮುರಳಿ ಅಲ್ಲೇ ನಿಂತು ನಮ್ಮ ಗಾಡಿಯನ್ನು ಕಾಯುತ್ತಾ ನಿಂತೆವು. ಗಾಡಿಯ ಮೇಲೆ
ನಮ್ಮ ಬ್ಯಾಗ್ ಗಳು ಇದ್ದವು. ನಿರ್ಜನ ಜಾಗ ಅದು. ಮಲಿಕ್ ನ ಬರುವಿಕೆಯನ್ನು ಕಾದು ಕಾದು
ಸಾಕಾಯಿತು. ಬೆರೇನೂ ಕೆಲಸವಿಲ್ಲದೆ ಅಲ್ಲೇ ತಿರುಗಾಡಿದೆವು. ಬಹಳ ಫೋಟೋ ತೆಗೆದುಕೊಂಡೆವು.
ಜಾಗ
ಬಹಳ ಸುಂದರವಾಗಿತ್ತು. ಸುಮಾರು 3 ಘಂಟೆ ಕಳೆದಾಗ ಡ್ರೈವರ್ ಬಂದನು. ನಮ್ಮನ್ನು ಅಲ್ಲಿ ಕಂಡಾಗ
ಅವನಿಗೆ ಹೋದ ಜೀವ ಬಂದ ಹಾಗಾಯಿತು. ಗಾಡಿಯನ್ನು ಬಿಟ್ಟು ಎಲ್ಲರೂ ಹೋಗಿದ್ದರೆ ಬ್ಯಾಗುಗಳನ್ನು
ಯಾರಾದರೂ ಎತ್ತಿಕೊಂಡು ಹೋದರೆ ಎಂಬ ಚಿಂತೆ ಅವನದ್ದು. ನಾವು 3 ಜನ ಸೇರಿ ಟೈರ್ ಜೋಡಿಸಿದೆವು. ಬೇಗ
ಅಲ್ಲಿಂದ ಮುಂದೆ ಓಡಿಸಿದನು. ನಮ್ಮ ಮೇಲೆ ಅವನಿಗಿದ್ದ ಗೌರವ ಇನ್ನೂ ಜಾಸ್ತಿ ಆಯಿತು. ಮುಂದೆ ಹೋದ
ನಮ್ಮವರು ಅಲ್ಲಿಂದ ಇನ್ನೂ ಮುಂದೆ ಒಂದು ಲೋಕಲ್ ಬಸ್ ಹಿಡಿದು ಪ್ರಕಟೇಶ್ವರ ಎಂಬ ಗುಹಾ ದೇವಾಲಯ
ನೋಡಲು ಹೋಗಿದ್ದಾರೆ ಎಂತ ತಿಳಿಯಿತು. ನಾವು ಅಲ್ಲಿಗೆ ಹೋಗುತ್ತಿರುವಾಗ ಮಧ್ಯದಲ್ಲಿ ಸುಮಾರು
ವಾಹನಗಳು ನಿಂತಿದ್ದವು. ವಿಚಾರಿಸಿದಾಗ ಭೂಕುಸಿತ ಆಗಿದೆ ಎಂತ ತಿಳಿಯಿತು. ಅದನ್ನು ಎತ್ತಿ ಹಾಕುವ
ಕೆಲಸವೂ ಜೋರಾಗಿ ನಡೆದಿತ್ತು. ಅಂತೂ 1 ಘಂಟೆ ಕಾದಾಗ ಎಲ್ಲಾ ಸರಿ ಆಯಿತು. ಮುಂದೆ ಸಾಗಿದೆವು.
ಪ್ರಕಟೇಶ್ವರದಲ್ಲಿ ನಮ್ಮವರನ್ನು ಕೂಡಿಕೊಂಡು ದರಾಸುನಲ್ಲಿ ಬಲಕ್ಕೆ ತಿರುಗಿ ಸುಮಾರು ದೂರ ಹೋದಾಗ
ಕತ್ತಲಾಯಿತು. ಅಲ್ಲೇ ಸಿಕ್ಕ ಒಂದು ಪುಟ್ಟ ಊರಲ್ಲಿ ನಮ್ಮ ಎರಡೂ ಬಸ್ ನಿಂತಿದ್ದವು. ಅಲ್ಲಿ
ರಾತ್ರಿ ತಂಗಿದೆವು.
ಊಟ ಮಾಡಿ ನಿದ್ರೆ. ಮರುದಿನ ಮುಂಜಾನೆ ಮತ್ತೆ ಪ್ರಯಾಣ, ದರಾಸುನಿಂದ 100
ಕಿ.ಮಿ. ದೂರ ವಿರುವ ಉತ್ತರಕಾಶಿಗೆ. ಅದು ದೊಡ್ಡ ಊರು. ಆದರೆ ಇನ್ನೂ ತುಂಬಾ ಬೆಳಕು ಇದ್ದುದರಿಂದ
ಅಲ್ಲಿ ನಿಲ್ಲದೆ ಮುಂದೆ ಹೋದೆವು. ದಾರಿಯಲ್ಲಿ ಪೈಲಟ್ ಬಾಬಾನ ಆಶ್ರಮಕ್ಕೆ ಹೋದೆವು. ದೊಡ್ಡ
ಆಶ್ರಮ. ಅಲ್ಲೇ ಮುಂದುಗಡೆ ಕಾಳೀ ಮಾತೆಯ ವಿಗ್ರಹ ಶಿವನು ಯೋಗ ನಿದ್ರೆಯಲ್ಲಿದ್ದಾನೆ, ಕಾಳಿಯು ಅವನ
ಎದೆಯ ಮೇಲೆ ಕಾಲಿಟ್ಟು ನಿಂತಿದ್ದಾಳೆ. ಸ್ವಲ್ಪ ದೂರದಲ್ಲಿ ಶಿವನ ಒಂದು ಎತ್ತರವಾದ ವಿಗ್ರಹವಿದೆ.
ಆದರೆ ಏನೂ ಲಕ್ಷಣವಿಲ್ಲ.
ಒಳಗೆ ಕೂಡಾ ತುಂಬಾ ಮೂರ್ತಿಗಳು ಇವೆ. ಈ ಬಾಬಾನ ಆಶ್ರಮಗಳು ಹಲವಾರು
ಕಡೆ ಇವೆ. ಇಲ್ಲಿ ಯೋಗ ಕಲಿಸುತ್ತಾರೆ. ಇಲ್ಲಿ ಊಟ ಮಾಡಿ ಮುಂದೆ ಸಾಗಿದೆವು. ಪರ್ವತಗಳು ಇನ್ನೂ
ಚೆನ್ನಾಗಿ ಹತ್ತಿರ ಕಾಣುತಿತ್ತು. ಈಗ ಹಾರ್ಸಿಲ್ ಎಂಬ ಊರು ಬಂತು. ಅಲ್ಲೇ ತಂಗಲು
ನಿರ್ಧಾರವಾಯಿತು. ಇಲ್ಲಿಂದ ಬರೇ 32 ಕಿ.ಮಿ. ಗಂಗೊತ್ರಿಗೆ. ಎಲ್ಲರೂ ಸುಸ್ತು ಆಗಿದ್ದರು. ಊಟ
ಮಾಡಿ ಗಡದ್ದು ನಿದ್ದೆ ಹೊಡೆದೆವು. ಮರುದಿನ ಬೆಳಗೆದ್ದು ಬೇಗ ಹೊರಟೆವು ಗಂಗಾ ಮಾಯಿಯ ಧರ್ಶನಕ್ಕೆ.
ಬಹಳ ಚೆನ್ನಾಗಿರುವ ರಸ್ತೆ, ಸುಂದರ ಪರಿಸರ ಪರ್ವತಮಾಲೆಗಳಿಂದ ಸುತ್ತುವರಿದ ಪ್ರದೇಶ. ಸೂರ್ಯೋದಯವಾಗಿ
ಸ್ವಲ್ಪ ಹೊತ್ತಲ್ಲೇ ನಾವು ಗಂಗೋತ್ರಿ ತಲುಪಿದೆವು.
ವಿಪರೀತ ಜನಜಂಗುಳಿ ಇರಲಿಲ್ಲ. ಗಂಗಾ ಮಾತೆಯ
ಸುಂದರ ಮಂದಿರದ ಒಳಗಡೆ ಹೋಗಿ ದರ್ಶನ ಪಡೆದೆವು.
ಅದೇನು ರಭಸ! ನೀರಂತೂ ಕೊರೆಯುವಷ್ಟು ತಣ್ಣಗೆ. ಸ್ನಾನ ಮಾಡುವ ಸಾಹಸವನ್ನು ಯಾರೂ ಮಾಡಲಿಲ್ಲ. ಅಲ್ಲಿ ಪ್ರಾರ್ಥನೆ ಮಾಡಿ ಸೂರ್ಯನಿಗೆ ಅರ್ಘ್ಯ ಕೊಟ್ಟು ತಲೆಗೆ ಪ್ರೊಕ್ಷಣೆ ಮಾಡಿ ಕೊಂಡೆವು. ಅಲ್ಲೇ ಸಿಗುವ ಬಾಟಲಿಗಳಲ್ಲಿ ಪವಿತ್ರ ಗಂಗೆಯ ನೀರನ್ನು ತುಂಬಿಸಿಕೊಂಡು ಮತ್ತೊಮ್ಮೆ ದೇವರ ದರ್ಶನ ಪಡೆದು ಹೊರಟೆವು.
ದಾರಿ ಬಹಳ ಇಕ್ಕಟ್ಟಾಗಿದ್ದು ಎರಡೂ ಬದಿ ಅಂಗಡಿ ಸಾಲು. ಪ್ರಸಾದ, ಪೂಜಾ ಸಾಮಗ್ರಿಗಳು, ಉಲ್ಲನ್ ಟೋಪಿ, ಮಫ್ಲರ್ ಮತ್ತು ಸ್ವೆಟ್ಟರ್, ಚಹಾ ತಿಂಡಿಗಳ ಹೋಟೆಲ್ ಗಳು ಬಹಳವಿದ್ದವು. ಎಲ್ಲರೂ ತುಂಬಾ ವ್ಯಾಪಾರ ಮಾಡಿದೆವು. ಇಲ್ಲಿಗೆ ಎರಡು ಧಾಮ ನೋಡಿದ್ದಾಯಿತು.ಇನ್ನೂ ಎರಡು ಧಾಮ ಬಾಕಿ ಇದೆ. ಅದನ್ನು ಮುಗಿಸುವ ಮನೋಧೈರ್ಯ ಹುಮ್ಮಸ್ಸು ಬಂದಿತ್ತು. ಇಲ್ಲಿಂದ ಗಂಗೆಯ ಉಗಮ ಸ್ಥಾನವಾದ ಗೋಮುಖಕ್ಕೆ 19 ಕಿ.ಮಿ. ಚಾರಣ ಮಾಡಬೇಕು. ಬಹಳ ಕಷ್ಟಕರವಾದ ಹಾದಿ. ಅಲ್ಲಿ ಗಂಗೊತ್ರಿ ಗ್ಲೇಶಿಯರ್ ನಿಂದ ಗೋವಿನ ಮುಖದಂತಿರುವ ಒಂದು ಗುಹೆಯಿಂದ ಗಂಗೆ ಉಗಮವಾಗುವುದು ಕಾಣುತ್ತದೆ. ನಿಜವಾಗಿ ಗಂಗೆಯು ಮಾನಸ ಸರೋವರದಿಂದ ಹುಟ್ಟಿ ಹಿಮರಾಶಿಯಡಿಯಲ್ಲಿ ಮಾಯವಾಗಿ ಗೋಮುಖದಲ್ಲಿ ಕಾಣಿಸಿಕೊಳ್ಳುತ್ತಾಳೆಂದು ಹೇಳುತ್ತಾರೆ. ಭಗೀರಥನ ತಪಸ್ಸಿನ ಫಲವಾಗಿ ದೇವಲೊಕದಿಂದ ಭೂಮಿಗೆ ಧುಮುಕುವ ದೇವಗಂಗೆಯನ್ನು ಪರಮೇಶ್ವರನು ತನ್ನ ಜಟೆಯಲ್ಲಿ ಬಂಧಿಸುತ್ತಾನೆ. ಭಗೀರಥನ ಕೋರಿಕೆ ಮೇರೆಗೆ ಆತನು ತನ್ನ ಜಟೆಯನ್ನು ಸ್ವಲ್ಪ ಸಡಿಲಿಸಿದ್ದರಿಂದ ಗಂಗೆಯು ಹೊರ ಬಂದು ಭೂಮಿಗೆ ಬರುತ್ತಾಳೆ. ಆದ್ದರಿಂದ ಅವಳಿಗೆ ಭಾಗೀರತಿ ಎಂಬ ಹೆಸರು ಬಂತು. ಮುಂದೆ ಹಲವಾರು ನದಿಗಳ ಸಂಗಮಗೊಂಡು ಋಷಿಕೇಶದಲ್ಲಿ ಗಂಗೆ ಎಂತ ಕರೆಸಿಕೊಳ್ಳುತ್ತಾಳೆ. ತನ್ನ ಧೀರ್ಘ ಪಯಣದಲ್ಲಿ ಅಲಹಾಬಾದ್ ನಲ್ಲಿ ಯಮುನಾ ನದಿ ಹಾಗೂ ಗುಪ್ತಗಾಮಿನಿಯಾಗಿ ಹರಿದು ಬಂದ ಸರಸ್ವತಿ ನದಿಗಳ ಸಂಗಮಗೊಂಡು ಹರಿಯುತ್ತಾ ಬಂಗಾಳ ಕೊಲ್ಲಿಯಲ್ಲಿ ಸಮುದ್ರ ಸೇರುತ್ತಾಳೆ.
ಅಲ್ಲಿಂದ ಹೊರಟೆವು ಕೇದಾರದೆಡೆಗೆ.
No comments:
Post a Comment