Friday, 27 December 2019

Chardham Yatra


ಚಾರ್ ಧಾಮ್ ಯಾತ್ರೆ
ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಕ್ಷೇತ್ರಗಳು ಎಂದರೆ ಬದರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ. ಇವುಗಳನ್ನೇ ಚಾರ್ ಧಾಮ್ ಎನ್ನುತ್ತಾರೆ. ಇನ್ನೊಂದು ಪಂಗಡದವರ ಪ್ರಕಾರ, ಬದರೀನಾಥ,
ದ್ವಾರಕಾ, ಪುರಿ ಹಾಗೂ ರಾಮೇಶ್ವರಗಳೇ ಚಾರ್ ಧಾಮ್ ಎಂದು ಪರಿಗಣಿಸುತ್ತಾರೆ. ಅದೇನೇ ಇರಲಿ ನಮಗೆ ದೇವರ ದರ್ಶನವಾದರೆ ಸಾಕು.
ನಾವು ಬದರಿ, ಕೇದಾರ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಹೋಗಬೇಕೆಂದು ತೀರ್ಮಾನ ಮಾಡಿದೆವು. ಆದರೆ ಇಲ್ಲಿಗೆ ಯಾವಾಗ ಬೇಕಾದರೂ ಹೋಗುವ ಹಾಗಿಲ್ಲ. ಎಪ್ರಿಲ್- ಮೇ ತಿಂಗಳಿಂದ ಪ್ರಾರಂಭವಾಗಿ ಅಕ್ಟೋಬರ್-ನವಂಬರ್ ತಿಂಗಳವರೆಗೆ ಮಾತ್ರ ಹೋಗಲು ಸಾಧ್ಯ. ಉಳಿದೆಲ್ಲಾ ಮಾಸಗಳಲ್ಲಿ ಈ ಧಾಮಗಳು ದಟ್ಟ ಹಿಮದಿಂದ ಮುಚ್ಚಿರುತ್ತದೆ. ಆ ಕಾಲದಲ್ಲಿ ಅಲ್ಲಿನ ದೇವರುಗಳನ್ನು ಕೆಳಗಿರುವ ದೇವಾಲಯಗಳಲ್ಲಿ ಇರಿಸುತ್ತಾರೆ. ಇಲ್ಲೇ ಅವರಿಗೆ ಪೂಜೆ.
ನಮ್ಮ ಯಾತ್ರೆಯ ಮೊದಲ ಅಂಗವಾಗಿ ಮಾಹಿತಿಗಳನ್ನು ಕಲೆ ಹಾಕಿದೆವು. ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಬೇಕಾದ ಎಲ್ಲಾ ವಿವರಗಳು, ಮುಂಜಾಗ್ರತೆಗಳು, ಮ್ಯಾಪ್ ಗಳು ಹವಾಮಾನ ಎಲ್ಲಾ ಸಂಗತಿಗಳನ್ನು ತಿಳಿದುಕೊಂಡು ಪರಸ್ಪರ ವಿನಿಮಯ ಮಾಡಿಕೊಂಡೆವು. ಇನ್ನು ಟ್ರಾವೆಲ್ ಏಜೆನ್ಸಿಗಳನ್ನು ಸಂಪರ್ಕಿಸಿದೆವು. ಇವರ ದರಗಳಲ್ಲಿ ಬಹಳ ವ್ಯತ್ಯಾಸವಿದೆ. ಕೊನೆಗೊಮ್ಮೆ ಕೆ.ಆರ್. ಮಾರ್ಕೆಟ್ ನಲ್ಲಿರುವ ಸರ್ವೋದಯ ಟ್ರಾವೆಲ್ಸ ನವರ ದರ ನಮಗೆ ಒಪ್ಪಿಗೆಯಾಯಿತು. ಇದರ ಮಾಲಿಕರಾದ ಕುಮಾರ್ ಶಂಕರ್ ಅವರು ನಮ್ಮ ಜೊತೆಯಲ್ಲೇ ಬರುತ್ತಾರೆ ಎಂದು ತಿಳಿದಾಗ ನಮ್ಮ ಎಲ್ಲಾ ಆತಂಕಗಳೂ ದೂರವಾಯಿತು.
ದೆಹಲಿಯವರೆಗೆ ವಿಮಾನ ಪ್ರಯಾಣ ನಂತರ ಎಸಿ ಬಸ್ಸಿನಲ್ಲಿ ಪ್ರಯಾಣ. ಊಟ ವಸತಿ ಎಲ್ಲಾ ಸೇರಿ ಒಟ್ಟು 29 ಸಾವಿರ. 14 ದಿನಗಳ ಯಾತ್ರೆ.ಸೆಪ್ಟೆಂಬರ್ 11 ರಿಂದ 24 ರ ವರೆಗೆ.
ಯಾತ್ರೆ ಹೋಗುವ ಸಂಭ್ರಮದಲ್ಲಿ ನಾವು 14 ಮಂದಿ ಎಲ್ಲಾ ತಯಾರಿ ನಡೆಸಿದ್ದೆವು. ಉಲ್ಲನ್ ಬಟ್ಟೆ, ಕಾಲು ಚೀಲ, ಹೊದಿಕೆ, ಟೋಪಿ ಇತ್ಯಾದಿಗಳು,ಔಷಧಿಗಳು ಮತ್ತು ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಇತರೇ ಅಗತ್ಯ ಸಾಮಾನುಗಳು ಎಲ್ಲಾ ಹೊಂದಿಸಿಕೊಂಡೆವು. ಅಂತೂ 11 ತಾರೀಖು ಬಂದೇಬಿಟ್ಟಿತು.ಸಂಜೆ 5 ಗಂಟೆಗೆ ಮನೆಯಿಂದ ಹೊರಟು ವಿಮಾನ ನಿಲ್ದಾಣ ತಲುಪಿದೆವು. ಒಟ್ಟು 54 ಜನ ಯಾತ್ರಿಕರು. ಅಡಿಗೆಯವರು ಎಲ್ಲಾ ಸೇರಿ ದೊಡ್ಡ ಗುಂಪು ಅಲ್ಲಿ ನೆರೆದಿದ್ದರು. ನಮಗೆಲ್ಲಾ ಮಾಹಿತಿಗಳನ್ನು ವಿವರಿಸಲಾಯಿತು. ರಾತ್ರಿಯ ಊಟಕ್ಕೆ ಪಲಾವು ವಿತರಿಸಿದರು. ನಾವು 14 ಜನರಿಗೆ ಸ್ಪೈಸ್ ಜೆಟ್ ವಿಮಾನ, ಉಳಿದವರಿಗೆ ಗೋ ಏರ್ ವಿಮಾನ. ರಾತ್ರಿ 9 ಘಂಟೆಗೆ ವಿಮಾನ ಹೊರಟು 11.30 ಕ್ಕೆ ದೆಹಲಿ ತಲುಪಿತು. ನಮ್ಮ ಬ್ಯಾಗು ಎಲ್ಲಾ ಪಡೆದುಕೊಂಡು ಹೊರ ಬಂದಾಗ ನಮಗಾಗಿ ಒಂದು ಟೆಂಪೊ ಟ್ರಾವೆಲ್ಲರ್ ಕಾದು ನಿಂತಿತ್ತು. ಅದನ್ನು ಏರಿ ರಾತ್ರಿಯಿಡೀ ಪ್ರಯಾಣ ಹರಿದ್ವಾರದೆಡೆಗೆ. 220 ಕಿ.ಮಿ.ಪ್ರಯಾಣ. ದೆಹಲಿಯಿಂದ ಮೀರತ್ ದಾರಿಯಾಗಿ ಮುಝಾಪುರ್ ನಗರ, ರೂರ್ಕಿಯಾಗಿ ಬೆಳಗ್ಗೆ 6 ಘಂಟೆಗೆ ಹರಿದ್ವಾರ ತಲುಪಿದೆವು. ರಾತ್ರಿ ಎಲ್ಲಾ ನಾನು ಚಾಲಕನೊಡನೆ ಹರಟುತ್ತಾ ಇದ್ದೆ. ಅವನ ಹೆಸರು ಯಹೀನ್ ಮಲಿಕ್, ಅನ್ಯ ಮತೀಯನಾದರೂ ನಮ್ಮ ಹಿಂದೂ ದೇವಾಲಯಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾನೆ.
ನಮಗಾಗಿ ಒಂದು ಉತ್ತಮವಾದ ಹೊಟೆಲ್ ಬುಕ್ ಆಗಿತ್ತು.

ಮೂವರಿಗೆ ಒಂದು ರೂಮ್. ಅಲ್ಲಿ ಸ್ವಲ್ಪ ವಿಶ್ರಮಿಸಿದಾಗ ನಮ್ಮ ಉಳಿದ ಸಹ ಯಾತ್ರಿಕರೂ ತಲುಪಿದರು. ಬೆಳಗಿನ ತಿಂಡಿ ಕಾಫಿ ಚೆನ್ನಾಗಿತ್ತು. ಆವಾಗ
ಆಕಾಶದಲ್ಲಿ ಕಾರ್ಮೊಡ ಕವಿಯಿತು. ಗುಡುಗು ಮಿಂಚು ಮತ್ತು ಧಾರಕಾರ ಜಡಿ ಮಳೆ ಸುರಿಯಿತು. ನಮಗೆಲ್ಲ ಆತಂಕ, ನಮ್ಮ ಮುಂದಿನ ಪ್ರಯಾಣ ಏನಾಗುವುದೋ ಎಂದು. ಪುಣ್ಯಕ್ಕೆ ಮುಂದೆ ನಮಗೆಲ್ಲೂ ಮಳೆ ಸಿಗಲೇ ಇಲ್ಲ.
ಆ ಮೇಲೆ ನಾವು ಆಟೋದಲ್ಲಿ ಮನ್ಸಾ ದೇವಿ ಮಂದಿರಕ್ಕೆ ಹೋದೆವು. ಇಲ್ಲಿಗೆ ಹೋಗಲು ರೋಪ್ ವೇ ಯಲ್ಲಿ ಹೋಗಬೇಕು.



 ಬಹಳ ರೋಮಾಂಚಕಾರಿ ಅನುಭವ. ಇಲ್ಲಿಂದ ನಮಗೆ ಹರಿದ್ವಾರದ ಪೂರ್ತಿ ನೋಟ ಕಾಣಸಿಗುತ್ತದೆ. ದೇವರ ದರ್ಶನ ಮಾಡಿ ಕೆಳಗೆ ಬಂದೆವು. ನಂತರ ಚಂಡೀದೇವಿ ಮಂದಿರಕ್ಕೆ ಹೊರಟೆವು. ಇಲ್ಲಿ ಸಹಾ ರೋಪ್ ವೇ ಯಲ್ಲಿ ಹೋಗಬೇಕು.


 ಬಹಳ ಖುಶಿ ಆಯಿತು. ನಂತರ ರೂಮ್ ಗೆ ಬಂದೆವು. ಊಟ ತಯಾರಾಗಿತ್ತು. ತುಸು ವಿಶ್ರಾಮ. ಸಂಜೆ ಎರಡು ಮಂದಿರಗಳನ್ನು ನೋಡಿದೆವು. ಪೂರ್ತಿ ಕನ್ನಡಿಯಿಂದ ಇದನ್ನು ರಚಿಸಿದ್ದಾರೆ.







 ಇಲ್ಲಿರುವ ಎಲ್ಲಾ ದೇವರುಗಳನ್ನು, ಮಂಟಪಗಳನ್ನು ಗಾಜಿನಿಂದ ಬಹಳ ಕಲಾತ್ಮಕವಾಗಿ ಮಾಡಿದ್ದಾರೆ. ಒಂದು ವಿಶೇಷ ಅನುಭವ ಪಡೆದೆವು. ನಂತರ ನಾವು ಗಂಗಾ ಆರತಿ ನೋಡಲು ನದೀ ತಟಕ್ಕೆ ಹೋದೆವು. ಅಲ್ಲಿ ವಿಪರೀತ ಜನ ಜಂಗುಳಿ. ರಾತ್ರಿ 7.20 ಕ್ಕೆ ಗಂಗಾ ಆರತಿ ಪ್ರಾರಂಭ. ಎಲ್ಲೆಲ್ಲೂ ದೀಪಗಳ ವೈಭವ. ಎಲ್ಲರೂ ಗಂಗೆಗೆ ವಂದಿಸಿ ದೀಪವನ್ನು ಹರಿ ಬಿಡುತ್ತಾರೆ. ನಾವು ಸಹಾ ದೀಪಾರ್ಚನೆ ಮಾಡಿದೆವು.



ನೀರಲ್ಲಿ ದೀಪಗಳು ತೇಲುತ್ತಾ ಹೋಗುವುದನ್ನು ನೋಡಲು,ಅದರ ಪ್ರತಿಬಿಂಬಗಳು ನೀರಲ್ಲಿ ಪ್ರತಿಫಲಿಸಿದಾಗ ಕಾಣುವ ಆ ನೋಟವು ಬಹಳ ಚೆನ್ನಾಗಿತ್ತು. ಅಲ್ಲಿನ ಆ ವಾತಾವರಣ ಮನಸ್ಸಲ್ಲಿ ನೆಲೆ ನಿಂತಿದೆ. ಆಟೋ ಹತ್ತಿ ರೂಮ್ ಗೆ ಬಂದೆವು. ರಾತ್ರಿಯೂಟ ಮುಗಿಸಿ ಮಲಗಿದೆವು.
ಮರುದಿನ ಬೆಳಗಿನ ತಿಂಡಿ ಕಾಫಿ ಮುಗಿಸಿ ಋಷಿಕೇಶಕ್ಕೆ ಪ್ರಯಾಣ. ಸುಮಾರು 24 ಕಿ.ಮಿ. ದೂರ. ಇಲ್ಲಿ ನಾವು ಬಯೋಮೆಟ್ರಿಕ್ ಕಾರ್ಡ್ ಮಾಡಿಸಬೇಕಾಗಿತ್ತು. ಅಲ್ಲಿ ಸ್ವಲ್ಪ ಹೊತ್ತು ಸರದಿಯಲ್ಲಿ ನಿಂತು ನಮ್ಮ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಎಲ್ಲಾ ಕೊಟ್ಟು ಫೊಟೋ ಹಿಡಿಸಿಕೊಂಡು ನಮ್ಮ ಕಾರ್ಡ್ ಪಡಕೊಂಡೆವು. ಇದು ಛಾರ್ ಧಾಮ್ ಗೆ ಹೋಗಲು ಬೇಕಾದ ರಹದಾರಿ. ಇದು ಇಲ್ಲದೆ ಯಾರೂ ಹೋಗುವ ಹಾಗಿಲ್ಲ. ಎಷ್ಟು ಜನ ಅಲ್ಲಿಗೆ ಹೋಗಿದ್ದಾರೆ, ಬಂದಿದ್ದಾರೆ ಅಲ್ಲಿ ಉಳಿದವರೆಷ್ಟು ಮಂದಿ ಎಂದೆಲ್ಲಾ ವಿವರಗಳು ಸರಕಾರಕ್ಕೆ ತಿಳಿಯುತ್ತದೆ. ಏನಾದರೂ ಅಫಘಾತ ಗಳು ವಿಕೋಪಗಳು ಸಂಭವಿಸಿದರೆ ರಕ್ಷಣಾ ಕಾರ್ಯಕ್ಕೆ ಇದು ಬಹಳ ಸಹಾಯಕ. ನಮ್ಮ ಮೊಮೈಲ್ ನಲ್ಲೂ ಅಗಾಗ ಇಂತಹಾ ಕಡೆ ಭೂ ಕುಸಿತ, ರಸ್ತೆ ತಡೆ ಆಗಿದೆ ಎಂದೆಲ್ಲಾ ಮೆಸ್ಸೇಜುಗಳು ಬರತೊಡಗಿದವು. ಈ ಅಡಚಣೆಗಳು ನಿವಾರಣೆ ಆದ ಕೂಡಲೇ ನಮಗೆ ತಿಳಿಸುತ್ತಲೂ ಇದ್ದರು.ಬಹಳ ಉಪಯುಕ್ತ ವ್ಯವಸ್ಥೆ ಇದು.


ನಾವು ಈಗ ಉತ್ತರಾಖಂಡದಲ್ಲಿದ್ದೇವೆ. ಈ ರಾಜ್ಯವನ್ನು ದೇವ ಭೂಮಿ ಅಂತ ಕರೆಯುತ್ತಾರೆ. ನಿಜಕ್ಕೂ ಇದು ದೇವ ಭೂಮಿಯೇ ಸರಿ ಅಷ್ಟೊಂದು ಧಾಮಗಳು ಪ್ರಯಾಗಗಳು ಮಂದಿರಗಳು ಇಲ್ಲಿವೆ. ಪುಣ್ಯ ಪಾವನ ನದಿಗಳು, ಪರ್ವತಗಳು ಎಲ್ಲಾ ಸೇರಿ ದೇವ ಭೂಮಿ ಎಂಬುದು ಅನ್ವರ್ಥ ನಾಮ. ಇಲ್ಲಿನ ಕಾಡುಗಳು ಕೊಳ್ಳಗಳು ಗಿರಿ ಕಂದರಗಳು ಮಂಜು ಮುಸುಕಿದ ವಾತವರಣ ಸ್ವರ್ಗದಿಂದಲೇ ನೇರ ಕೆಳಗಿಳಿಯುವಂತೆ ತೋರುವ ಜಲಪಾತಗಳು ಎಲ್ಲವೂ ಮನಸೂರೆಗೊಳ್ಳುತ್ತದೆ. ಋಷಿಕೇಶದಿಂದ ನಿಜವಾದ ಹಿಮಾಲಯ ಆರಂಭವಾಗುತ್ತದೆ. ಹಿಮಾಲಯ ಪರ್ವತದ ಪಾದ ಇದು.ಮುಂದೆಲ್ಲಾ ಏರು ದಾರಿ.


Thursday, 26 December 2019

Yamunotri



  1.ಯಮುನೋತ್ರಿ
ನಮ್ಮ ಯಾತ್ರೆಯ ಮೊದಲ ಗಮ್ಯ ಸ್ಥಾನ ಯಮುನೋತ್ರಿ ಧಾಮ. ಋಷಿಕೇಶದಿಂದ ಸುಮಾರು 220 ಕಿ.ಮಿ. ದೂರ ಪಯಣಿಸಬೇಕು. ಇಲ್ಲೆಲ್ಲಾ ಘಂಟೆಗೆ 25 ಕಿ.ಮಿ.ಯಷ್ಟೆ ದೂರ ಸಾಗಬಹುದು. ರಸ್ತೆ ಬಹಳ ಚೆನ್ನಾಗಿತ್ತು. ವಾಹನಗಳೂ ವಿರಳವಾಗಿದ್ದವು. ದಟ್ಟ ಕಾಡಿನ ಮಧ್ಯೆ ಸಾಗುವ ದಾರಿ,


 ಒಂದು ಪಕ್ಕದಲ್ಲಿ ಹರಿಯುವ ನದಿ, ಛುಮು ಛುಮು ಚಳಿ, ಎಲ್ಲೆಡೆ ನೋಡುವಾಗಲೂ ಕಾಣುವ ಪೈನ್ ಮರಗಳು,ಓಕ್ ಮರಗಗಳು, ಬೀಸುವ ಗಾಳಿ, ಮಂಜು ಮುಸುಕಿದ ವಾತಾವರಣ ಮತ್ತು ಆಕಾಶವನ್ನು ಮುಟ್ಟಲೆತ್ನಿಸುವ ಪರ್ವತ ಮಾಲೆ ಎಲ್ಲವೂ ನಮಗೆ ಸ್ವಾಗತ ಕೋರುತ್ತಿದ್ದವು. ಕೆಲವೊಮ್ಮೆ ಆಳವಾದ ಕಡಿದಾದ ಕಣಿವೆ ದಾರಿಯಲ್ಲಿ ಸಾಗುವಾಗ ಜುಂ ಎನ್ನಿಸುತಿತ್ತು. ಅಲ್ಲಲ್ಲಿ ಕಾಣುವ ಜಲಪಾತಗಳು ನಮ್ಮನ್ನು ಮುದಗೊಳಿಸುತಿದ್ದವು. ಆಗ ಒಂದು ನರಿ ರಸ್ತೆ ದಾಟಿ ಕಾಡಿನಲ್ಲಿ ಮಾಯವಾಯಿತು. ಶುಭ ಶಕುನ ಎಂದುಕೊಂಡೆ. ಸಣ್ಣ ಸಣ್ಣ ಹಳ್ಳಿಗಳು ಊರುಗಳನ್ನು ದಾಟಿ ನಾವು ಡೆಹರಾಡೂನ್ ತಲುಪಿದವು.

 ಉತ್ತರಾಖಂಡದ ರಾಜಧಾನಿ ಆಗಿರುವ ಈ ಸೊಗಸಾದ ಸುಂದರ ಊರು ಒಂದು ಸುಖವಾಸ ಕೇಂದ್ರವಾಗಿದೆ. ಇಲ್ಲಿನ ಹಿತಕರ ವಾತಾವರಣ ಬ್ರಿಟಿಷರಿಗೆ ತುಂಬಾ ಹಿಡಿಸಿದ್ದರಿಂದ ಇಲ್ಲಿ ಅವರು ನೆಲಸಿ ಈ ಪ್ರದೇಶವನ್ನು ಅವರು ಬೆಳೆಸಿದರು. ಆಸ್ಪತ್ರೆ, ಶಾಲೆ, ಕಾಲೇಜುಗಳು ಆ ಕಾಲದಲ್ಲೇ ಇಲ್ಲಿ ಹೆಸರುವಾಸಿಯಾಗಿದ್ದವು. ಪ್ರಖ್ಯಾತಿ ಪಡೆದ ಡೂನ್ ಕಾಲೇಜು ಇರುವುದು ಇಲ್ಲೇ. ಅವರ ಕಾಲದಲ್ಲಿ ನಿರ್ಮಿತಿಗೊಂಡ ಮನೆಗಳೂ ಬಂಗ್ಲೆ, ಚರ್ಚು ಇತ್ಯಾದಿಗಳು ಈಗಲೂ ಇವೆ. ಇಲ್ಲಿನ ಡೂನ್ ವ್ಯಾಲಿ ಬಹಳ ಸುಂದರ. ಇಲ್ಲಿಂದ ಮಸ್ಸೂರಿ ಮತ್ತು ಔಲಿಗಳು ಸಮೀಪದಲ್ಲಿವೆ. ಇವೆರಡೂ ಹಿಲ್ ಸ್ಟೇಷನ್ ಆಗಿವೆ.



ನಮ್ಮ ಪಯಣ ಮುಂದುವರೆದು ದರಾಸು ಎಂಬಲ್ಲಿಗೆ ಬಂತು. ಇಲ್ಲಿ ದಾರಿ ಕವಲೊಡೆಯುತ್ತದೆ. ಬಲಕ್ಕೆ ಹೋದರೆ ನೇರ ಗಂಗೋತ್ರಿ ತಲಪಬಹುದು. ಎಡಕ್ಕೆ ತಿರುಗಿದರೆ ಯಮುನೋತ್ರಿ. ನಾವು ಎಡಕ್ಕೆ ತಿರುಗಿದೆವು. ದಾರಿಯಲ್ಲಿ ಸಿಗುವ ಕೆಮ್ಟಿ
ಎಂಬಲ್ಲಿ ಮದ್ಯಾಹ್ನದ ಊಟ. ಒಳ್ಳೆಯ ಜಾಗ. ಒಂದು ಕಡೆ ಬೆಟ್ಟ ಇನ್ನೊಂದೆಡೆ ಪ್ರಪಾತ. ಅದರಲ್ಲಿ ಹರಿಯುವ ನದಿ. ಊಟ ಮುಗಿಸಿ ಹೊರಟೆವು. ಸ್ವಲ್ಪ ದೂರ ಕ್ರಮಿಸಿದಾಗ ನಮಗೆ ಕೆಮ್ಟಿ ಫಾಲ್ಸ್ ದೂರದಲ್ಲಿ ಕಾಣಿಸಿತು. ಹತ್ತಿರದಲ್ಲಿ ಅದನ್ನು ಕಾಣಲಾಗಲಿಲ್ಲ. ನಿರಾಸೆಆಯಿತು. ಆಗ ನಮ್ಮ ಚಾಲಕ ಹೇಳಿದ, ಮುಂದೆ ಇಂತಹ ನೂರು ಫಾಲ್ಸ್ ತೋರಿಸುತ್ತೇನೆ, ನೀವೇನೂ ಬೇಸರಿಸಬೇಡಿ ಎಂದು. ಅವನ ಮಾತು ನಿಜವಾಗಿತ್ತು. ಸುಮಾರು 4 ಘಂಟೆಗೆ ಭರ್ ಕೋಟ್ ಗೆ ತಲುಪಿದೆವು. ಇಂದಿಗೆ ಪ್ರಯಾಣ ನಿಲ್ಲಿಸಿದೆವು. ಕಾಫಿ ತಿಂಡಿ ಆಯಿತು. ಹೊರಗೆ ಅಡ್ಡಾಡಲು ಹೋದೆವು. ಇದೊಂದು ಪುಟ್ಟ ಊರು. 2-3 ಲೋಡ್ಜ್ ಗಳಿದ್ದವು. ಕೆಲ ಅಂಗಡಿಗಳು ಇದ್ದವು. ಮುಖ್ಯ ಊರು ಇನ್ನೂ ಸ್ವಲ್ಪ ದೂರದಲ್ಲಿದೆ. ನಮ್ಮ ಲಾಡ್ಜ್ ನ ಹಿಂಭಾಗದಲ್ಲಿ ಆಳವಾದ ಕಣಿವೆ, ಅದರಲ್ಲಿ ಯಮುನೆ ಹರಿಯುತಿದ್ದಳು, ಅದರಾಚೆ ಮತ್ತೆ ಬೆಟ್ಟ, ಮುಂದುಗಡೆಯೂ ಬೆಟ್ಟ. ಇದನ್ನೆಲ್ಲಾ ನೋಡುತ್ತಿರುವಾಗ ನಮ್ಮ ಚಾರಣ ಹವ್ಯಾಸ ಗರಿಗೆದರಿತು.
 ನಾನು, ಕಸ್ತೂರಿ, ಮುರಳಿ ಮತ್ತು ಶ್ರುತಿ ಚಾರಣಕ್ಕೆ ಹೊರಟೇಬಿಟ್ಟೆವು. ಕೆಳಗೆ ಹರಿಯುತ್ತಿರುವ ನದಿಗೆ ಹೋಗಿ ಸ್ನಾನ ಮಾಡಿ ಬರುವಾ ಎಂದು ಕೆಳಗೆ ಇಳಿದೆವು. ಕೆಲವು ಮನೆಯ ಅಂಗಳ ದಾಟಿ ಮುಂದೆ ಹೋಗುವಾಗ ಕೆಲ ಹುಡುಗರು ಸಿಕ್ಕಿದರು, ಅವರೊಡನೆ ಮಾತಾಡಿದಾಗ, ನೀವು ಅಲ್ಲಿಗೆ ಹೊಗುವುದೇ ಬೇಡ, ಅಲ್ಲಿ ತುಂಬಾ ಹಾವುಗಳಿವೆ, ಅಪಾಯ ಜಾಗ ಎಂದು ನಮ್ಮನ್ನು ಎಚ್ಚರಿಸಿದರು. ಆದರೂ ನಾವು ಅವರ ಮಾತಿಗೆ ಕಿವಿಗೊಡದೆ ಮುಂದುವರಿದೆವು. ಹೊಲಗಳ ಬದುವಿನಲ್ಲಿ ಸಾಗಿ ಹೋಗುತ್ತಿರುವಾಗ, ಹಾಲಿನ ಡಬ್ಬಾ ಹಿಡಿದುಕೊಂಡು ಒಬ್ಬಾಕೆ ಬರುತಿದ್ದಳು. ನಮ್ಮನ್ನು ನಿಲ್ಲಿಸಿ, ಅಣ್ಣಾ ಎಲ್ಲಿಗೆ ಹೋಗುವಿರಿ? ಯಾಕೆ? ಅಲ್ಲೆಲ್ಲಾ ಬಹಳ ಹಾವುಗಳಿವೆ, ನೀವು ಅಲ್ಲಿಗೆ ಹೋಗಲೇ ಬೇಡಿ ಎಂದು ನಮ್ಮನ್ನು ತಡೆದಳು. ಈವಾಗ ನಮಗೂ ಭಯ ಆಯಿತು. ನಿಜಕ್ಕೂ ಇಲ್ಲಿ ಹಾವುಗಳಿರಬೇಕು, ಇವುಗಳಿಂದ ಕಡಿಸಿಕೊಳ್ಳುವುದು ಬೇಡ ಎಂದು ವಾಪಾಸಾದೆವು. ಹಿಂದೆ ದ್ವಾಪರಾ ಯುಗದಲ್ಲಿ ಶ್ರೀಕೄಷ್ಣನು ಕಾಳಿಂಗ ಮರ್ಧನ ಮಾಡಿದ್ದು ಇದೇ ನದಿಯಲ್ಲಿ ಅಲ್ಲವೇ? ಆ ಕಾಳೀಯನ ವಂಶದವರೆಲ್ಲಾ ನದಿಯಲ್ಲಿ ಹರಿದಾಡುತ್ತಾ ಇಲ್ಲಿ ಬಂದು ಬೀಡು ಬಿಟ್ಟಿರಬೇಕು ಎಂದುಕೊಂಡೆವು. ಮರಳಿ ರೂಮ್ ಗೆ ಬಂದು ಬಿದ್ದುಕೊಂಡೆವು. ರಾತ್ರಿ ಊಟ ಆಯಿತು. ನಾಳೆ ಬೆಳಗ್ಗೆ ಬೇಗನೆ ಹೋಗಲಿಕ್ಕಿದೆ ಬೇಗ ನಿದ್ದೆ ಮಾಡಿ ಎಂತ ಕುಮಾರ್ ಅವರ ಸಲಹೆ.
ಬೆಳಗ್ಗೆ ಬೇಗ ಎದ್ದು ಬೆಡ್ ಕಾಫಿ ಕುಡಿದು ಹೊರಟೆವು. ಈಗ ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಬಹಳ ಏರು ದಾರಿ ತಿರುವುಗಳೂ, ಕಣಿವೆ-ಕಂದರಗಳೂ ಒಡಗೂಡಿದ ಪರ್ವತ ಪ್ರದೇಶ.



 ಜಾನಕಿ ಚಟ್ಟಿ ದಾಟಿ ಮುಂದೆ ಹನುಮಾನ್ ಚಟ್ಟಿ ತಲುಪಿದಾಗ ಅಲ್ಲಿ ನಮ್ಮ ಗಾಡಿ ನಿಂತಿತು. ಎಲ್ಲರೂ ಇಳಿದೆವು.

 ಇಲ್ಲಿಂದ ಮುಂದೆ ಯಮುನೋತ್ರಿ, ಪರ್ವತ ಏರಬೇಕು. ಕುದುರೆ, ಡೋಲಿ ಅಥವಾ ನಡೆದುಕೊಂಡು ಹೋಗಬಹುದು. ಕೆಲವರು ಕುದುರೆ ಏರಿದರು. ಡೋಲಿಯಲ್ಲಿ ಸಾಗಿದರು. ನಾವು ಸ್ವಲ್ಪ ಮಂದಿ ನಡೆದೇ ಹೋಗೋಣ ಎಂಬ ಹುಮ್ಮಸ್ಸಿನಿಂದ ನಾವು 6 ಜನ ನಡೆಯಲು ಪ್ರಾರಂಭಿಸಿದೆವು.



 ಒಟ್ಟು 6 ಕಿ.ಮಿ. ಸಾಗಬೇಕು. ಸರಿ ಸುಮಾರು  45 ರಿಂದ 50 ಡಿಗ್ರಿಯ ಕೋನದ ಏರು. ನಾನು 1 ಕಿ.ಮಿ. ಹತ್ತಿದೆ. ಏದುಸಿರು ಬಂತು. ನನ್ನಿಂದಾಗದು ಎಂದು ಕುದುರೆಯ ಮೊರೆ ಹೋದೆ. ಹತ್ತಲು ಮಾತ್ರ ಸಾಕು ಅಂತ ಚೌಕಾಶಿ ಮಾಡಿ 600 ರೂಗೆ ಒಪ್ಪಿಸಿದೆ. ಜೀವನದಲ್ಲಿ ಪ್ರಥಮ ಬಾರಿಗೆ ಅಶ್ವಾರೂಢನಾದೆ. ನನ್ನ ಕುದುರೆಯ ಪಾಲಕ ಅದನ್ನು ಎಳೆದುಕೊಂಡು ಮುಂದೆ ನಡೆಸುತಿದ್ದ. ಅವನಿಗೆ ನಾನು ಎರಡನೆಯ ಸವಾರಿ. ಹಾಗಾಗಿ ಅವನಿಗೆ ಖುಶಿಯೊ ಖುಶಿ. ಅವನ ಗೆಳೆಯರೆಲ್ಲಾ ಅವನನ್ನು ಅಸೂಯೆಯಿಂದ ನೋಡುತಿದ್ದರು. ಕುದುರೆ ಒಮ್ಮೆ ಬೆಟ್ಟಕ್ಕೆ ತಾಗಿಕೊಂಡು ಹೋದರೆ ಮಗದೊಮ್ಮೆ ಪ್ರಪಾತದ ಅಂಚಿನಲ್ಲಿ ಹೋಗುತಿತ್ತು. ಕೆಳಗಿನಿಂದ ಹತ್ತುವವರೂ ಮೇಲಿಂದ ಇಳಿಯುವವರೂ ಡೋಲಿಯಲ್ಲಿ ಸಾಗುವವರೂ ಕುದುರೆ ಪ್ರಯಾಣದವರೂ ಕಾಲ್ನಡೆಯವರೂ ಎಲ್ಲಾ ಸೇರಿ ಗಜಿ ಬಿಜಿ. ಕೆಲವೆಡೆ ಬಂಡೆಗಳು ಹೊರ ಚಾಚಿ ತಲೆಗೆ ಬಡಿಯುವಂತಿದ್ದವು. ಕುದುರೆಯವನು ನನ್ನನ್ನು ಎಚ್ಚರಿಸುತಿದ್ದ. ಅಲ್ಲಲ್ಲಿ ಮೇಲಿಂದ ಜಿನುಗುವ ಶುದ್ಧ ನೀರ ದಾರೆ. ಬಲಗಡೆಯ ಪ್ರಪಾತದಲ್ಲಿ ಹರಿಯುವ ಯಮುನಾ ನದಿ, ಅದಕ್ಕೆ ಧುಮ್ಮಿಕ್ಕುವ ಜಲಪಾತಗಳು, ಎಲ್ಲಾ ಮೇಳೈಸಿ ಮರೆಯಲಾಗದ ಅನುಭವ ಪಡೆದೆ.




 ಅಷ್ಟರಲ್ಲಿ ನನ್ನ ನಾದಿನಿ ವೀಣಾ ಡೋಲಿಯಲ್ಲಿ ಮುಂದೆ ಹೋದಳು. ಒಬ್ಬನೇ ಹೊರುವ ಬುಟ್ಟಿಯಾಕರದ ಡೋಲಿ. ನನ್ನ ಭಾವ ಮುರಳಿಯ ಕುದುರೆ ನನ್ನನ್ನು ದಾಟಿ ಹೋಯಿತು. ನಾವು ಕಾಫಿ ಕುಡಿಯಲು ಒಂದೆಡೆ ನಿಂತೆವು. ಕುದುರೆಗೆ ರೆಸ್ಟ್. ಅಲ್ಲಿಂದ ಹೊರಡುವಾಗ ಶೋಭ ಅಲ್ಲಿಗೆ ತಲುಪಿದ್ದಳು. ಅವಳೂ ಕುದುರೆ ಏರಿ ಬಂದಿದ್ದಳು. ನಾನು ಮತ್ತೆ ಮುಂದುವರೆದೆ. ಇನ್ನೂ 2 ಕಿ.ಮಿ. ಹೋಗಬೇಕು. ಅಲ್ಲಿ ಒಂದು ಸೇತುವೆ ಎದುರಾಯಿತು. ಅದರ ಆಕಡೆಯಿಂದ ಬರುತ್ತಿರುವ ಕುದುರೆಯಿಂದ ಒಬ್ಬರು ಹಿರಿಯ ಮಹಿಳೆ ಆಯ ತಪ್ಪಿ ಕೆಳಕ್ಕೆ ಬಿದ್ದರು. ಪುಣ್ಯಕ್ಕೆ ಅಲ್ಲೇ ಇದ್ದ ಪೊಲೀಸ್ ಒಬ್ಬ ಛಕ್ಕನೆ ಅವರನ್ನು ಸಂಭಾಳಿಸಿ ನಿಲ್ಲಿಸಿದನು. ಕುದುರೆಯ ಪಾಲಕನಿಗೆ ಎರಡೇಟೂ ಬಿಗಿದ. ಕೊನೆಗೂ ನಾನು ಯಮುನೋತ್ರಿ ತಲುಪಿದೆ. ಅಲ್ಲಿ ಸ್ವಲ್ಪ ವಿಶ್ರಾಂತಿ. ನಡೆದು ಬರುವವರೂ ತಲುಪಿದರು. ಎಲ್ಲರೂ ಒಟ್ಟಿಗೆ ಮುಂದೆ ಸಾಗಿ ಇನ್ನೊಂದು ಸೇತುವೆ ದಾಟಿ ಯಮುನೋತ್ರಿ ಧಾಮಕ್ಕೆ ತಲುಪಿದೆವು.



 ಅಲ್ಲಿ ಬಿಸಿ ನೀರ ಕುಂಡವಿದೆ. ಸುಮಾರು 15ಅಡಿಗಳ ಚಚ್ಚೌಕದ ಕೊಳ.ಎದೆಮಟ್ಟದ ಬಿಸಿ ನೀರು, ಮಹಿಳೆಯರಿಗೆ ಬೇರೆ ಕೊಳವಿದೆ. ಇದರಲ್ಲಿ ಬಹಳ ಹೊತ್ತು ಮಿಂದೆವು. ಆಯಾಸ ಎಲ್ಲಾ ಮಾಯ. ಅಲ್ಲಿ ನಾವು ಪೂಜೆ ಮಾಡಿಸಿದೆವು. ಇನ್ನೂ ಮೇಲೆ ಇನ್ನೊಂದು ಕುಂಡವಿದೆ. ಇದು ಸೂರ್ಯ ಕುಂಡ. ಇದರ ನೀರು ಎಷ್ಟು ಬಿಸಿಯೆಂದರೆ ಇದರಲ್ಲಿ ಬಟ್ಟೆಯಲ್ಲಿ ಕಟ್ಟಿದ ಅಕ್ಕಿಯನ್ನು ಮುಳುಗಿಸಿದರೆ ಅನ್ನವಾಗುತ್ತದೆ. ಇದನ್ನು ಅಲ್ಲಿ ಯಮುನಾದೇವಿಗೆ ಅರ್ಚನೆ ಮಾಡಿ ನಮಗೆ ವಾಪಾಸ್ ಕೊಡುತ್ತಾರೆ. ಇದು ಪ್ರಸಾದ. ಅಲ್ಲೆಲ್ಲಾ ಫೊಟೋ ಹಿಡಿದುಕೊಂಡೆವು.




ಯಮುನಾದೇವಿಯ ಮಂದಿರವು 18ನೇ ಶತಮಾನದಲ್ಲಿ ರಾಜಾ ಅಮರ್ ಸಿಂಗ್ ಥಾಪಾ ಕಟ್ಟಿಸಿದನೆಂದು ಹೇಳುತ್ತಾರೆ. ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಯಮುನಾ, ಸೂರ್ಯನ ಪುತ್ರಿ, ಯಮಧರ್ಮನ ಸಹೋದರಿ. ಈ ಮಂದಿರದ ಎದುರುಗಡೆಯೇ ಯಯುನೆ ಹರಿಯುತಿದ್ದಾಳೆ. ಇವಳ ಉಗಮ ಸ್ಠಾನ ಇಲ್ಲಿಂದ ಸುಮಾರು 14 ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಹೋಗಲು ಬಹಳ ದುರ್ಗಮವಾದ ಕಾಡಿನ ದಾರಿ. ಚಾರಣಿಗರಿಗೆ ಮಾತ್ರ ಹೋಗಲು ಸಾಧ್ಯ.
ಇನ್ನು ಇಲ್ಲಿಂದ ಹೊರಡುವ ವೇಳೆಯಾಯಿತು. ನಮ್ಮನ್ನು ಕರೆತಂದ ಕುದುರೆಯವರೂ ಡೋಲಿಯವರೂ ನಮಗಾಗಿ ಕಾದಿದ್ದರು. ಅಷ್ಟೆಲ್ಲಾ ಜನ ಜಂಗುಳಿ ಇದ್ದರೂ ಅವರು ನಮ್ಮನ್ನು ತಪ್ಪದೇ ಗುರುತಿಟ್ಟುಕೊಂಡು ಬರುತ್ತಾರೆ. ಬಹಳ ನಿಯತ್ತಿನವರು. ಕಷ್ಟಜೀವಿಗಳು. ದಿನಕ್ಕೆ 12 ರಿಂದ 24 ಕಿ.ಮಿ ಹತ್ತಿ ಇಳಿದು ಬರುವುದೆಂದರೆ ಸಾಮಾನ್ಯವೇ? ನಾನು ಕೆಳಗೆ ತಲುಪಿದೆ. ಕುದುರೆಯ ಪಾಲಕ ರಾಜು ಗೆ ಮತ್ತು ಅವನ ಕುದುರೆಗೆ ಕೂಲಿ ಮತ್ತು ಭಕ್ಷೀಸು ಕೊಟ್ಟು ಬಂದೆ. ಕೆಳಗೆ ನಮ್ಮ ಅಡಿಗೆಯವರು ಊಟ ಬಡಿಸಿದರು. ಉಳಿದವರಿಗಾಗಿ ಕಾದೆವು. ಮುಂದೆ ನಮ್ಮ ಪ್ರಯಾಣ ಗಂಗೋತ್ರಿ ಧಾಮಕ್ಕೆ.                  


Sunday, 22 December 2019

Gangotri


2. ಗಂಗೋತ್ರಿ.

ಯಮುನೋತ್ರಿಯಿಂದ ಹೊರಡುವಾಗಲೆ ಬಹಳ ತಡವಾಯಿತು. ನಮ್ಮ ಗಾಡಿ ಗಂಗೋತ್ರಿಯ ದಾರಿ ಹಿಡಿಯಿತು. ಬಂದ ದಾರಿಯಲ್ಲೇ ಸುಮಾರು ದೂರ ಹೋದೆವು. ಭರ್ ಕೋಟ್ ದಾಟಿ ಮುಂದೆ ಹೋಗುತ್ತಿರುವಾಗ ಗಾಡಿಯ ಟೈರು ಪಂಕ್ಚರ್ ಆಯಿತು. ಇದ್ದ ಒಂದು ಸ್ಟೆಪ್ನಿ ಸಹಾ ಉಪಯೋಗಕ್ಕೆ ಬರದ ಹಾಗಿತ್ತು.


 ಮಲಿಕ್ ಟೈರ್ ಕಳಚಿ ಅಲ್ಲೇ ಸಿಕ್ಕಿದ ಒಂದು ಬಸ್ ಹಿಡಿದು ಭರ್ ಕೋಟ್ ಗೆ ಸಾಗಿದ. ನಮ್ಮ ತಂಡದ 2 ಬಸ್ ಹಿಂದಿನಿಂದ ಬರುತಿತ್ತು ಅದರಲ್ಲಿ ನಮ್ಮವರು 12 ಜನ ಹತ್ತಿ ಮುಂದೆ ಸಿಗುವ ಯಾವುದೋ ಒಂದು ಊರಿಗೆ ಹೋದರು. ನಾನು ಮತ್ತು ಮುರಳಿ ಅಲ್ಲೇ ನಿಂತು ನಮ್ಮ ಗಾಡಿಯನ್ನು ಕಾಯುತ್ತಾ ನಿಂತೆವು. ಗಾಡಿಯ ಮೇಲೆ ನಮ್ಮ ಬ್ಯಾಗ್ ಗಳು ಇದ್ದವು. ನಿರ್ಜನ ಜಾಗ ಅದು. ಮಲಿಕ್ ನ ಬರುವಿಕೆಯನ್ನು ಕಾದು ಕಾದು ಸಾಕಾಯಿತು. ಬೆರೇನೂ ಕೆಲಸವಿಲ್ಲದೆ ಅಲ್ಲೇ ತಿರುಗಾಡಿದೆವು. ಬಹಳ ಫೋಟೋ ತೆಗೆದುಕೊಂಡೆವು.



ಜಾಗ ಬಹಳ ಸುಂದರವಾಗಿತ್ತು. ಸುಮಾರು 3 ಘಂಟೆ ಕಳೆದಾಗ ಡ್ರೈವರ್ ಬಂದನು. ನಮ್ಮನ್ನು ಅಲ್ಲಿ ಕಂಡಾಗ ಅವನಿಗೆ ಹೋದ ಜೀವ ಬಂದ ಹಾಗಾಯಿತು. ಗಾಡಿಯನ್ನು ಬಿಟ್ಟು ಎಲ್ಲರೂ ಹೋಗಿದ್ದರೆ ಬ್ಯಾಗುಗಳನ್ನು ಯಾರಾದರೂ ಎತ್ತಿಕೊಂಡು ಹೋದರೆ ಎಂಬ ಚಿಂತೆ ಅವನದ್ದು. ನಾವು 3 ಜನ ಸೇರಿ ಟೈರ್ ಜೋಡಿಸಿದೆವು. ಬೇಗ ಅಲ್ಲಿಂದ ಮುಂದೆ ಓಡಿಸಿದನು. ನಮ್ಮ ಮೇಲೆ ಅವನಿಗಿದ್ದ ಗೌರವ ಇನ್ನೂ ಜಾಸ್ತಿ ಆಯಿತು. ಮುಂದೆ ಹೋದ ನಮ್ಮವರು ಅಲ್ಲಿಂದ ಇನ್ನೂ ಮುಂದೆ ಒಂದು ಲೋಕಲ್ ಬಸ್ ಹಿಡಿದು ಪ್ರಕಟೇಶ್ವರ ಎಂಬ ಗುಹಾ ದೇವಾಲಯ ನೋಡಲು ಹೋಗಿದ್ದಾರೆ ಎಂತ ತಿಳಿಯಿತು. ನಾವು ಅಲ್ಲಿಗೆ ಹೋಗುತ್ತಿರುವಾಗ ಮಧ್ಯದಲ್ಲಿ ಸುಮಾರು ವಾಹನಗಳು ನಿಂತಿದ್ದವು. ವಿಚಾರಿಸಿದಾಗ ಭೂಕುಸಿತ ಆಗಿದೆ ಎಂತ ತಿಳಿಯಿತು. ಅದನ್ನು ಎತ್ತಿ ಹಾಕುವ ಕೆಲಸವೂ ಜೋರಾಗಿ ನಡೆದಿತ್ತು. ಅಂತೂ 1 ಘಂಟೆ ಕಾದಾಗ ಎಲ್ಲಾ ಸರಿ ಆಯಿತು. ಮುಂದೆ ಸಾಗಿದೆವು. ಪ್ರಕಟೇಶ್ವರದಲ್ಲಿ ನಮ್ಮವರನ್ನು ಕೂಡಿಕೊಂಡು ದರಾಸುನಲ್ಲಿ ಬಲಕ್ಕೆ ತಿರುಗಿ ಸುಮಾರು ದೂರ ಹೋದಾಗ ಕತ್ತಲಾಯಿತು. ಅಲ್ಲೇ ಸಿಕ್ಕ ಒಂದು ಪುಟ್ಟ ಊರಲ್ಲಿ ನಮ್ಮ ಎರಡೂ ಬಸ್ ನಿಂತಿದ್ದವು. ಅಲ್ಲಿ ರಾತ್ರಿ ತಂಗಿದೆವು.


 ಊಟ ಮಾಡಿ ನಿದ್ರೆ. ಮರುದಿನ ಮುಂಜಾನೆ ಮತ್ತೆ ಪ್ರಯಾಣ, ದರಾಸುನಿಂದ 100 ಕಿ.ಮಿ. ದೂರ ವಿರುವ ಉತ್ತರಕಾಶಿಗೆ. ಅದು ದೊಡ್ಡ ಊರು. ಆದರೆ ಇನ್ನೂ ತುಂಬಾ ಬೆಳಕು ಇದ್ದುದರಿಂದ ಅಲ್ಲಿ ನಿಲ್ಲದೆ ಮುಂದೆ ಹೋದೆವು. ದಾರಿಯಲ್ಲಿ ಪೈಲಟ್ ಬಾಬಾನ ಆಶ್ರಮಕ್ಕೆ ಹೋದೆವು. ದೊಡ್ಡ ಆಶ್ರಮ. ಅಲ್ಲೇ ಮುಂದುಗಡೆ ಕಾಳೀ ಮಾತೆಯ ವಿಗ್ರಹ ಶಿವನು ಯೋಗ ನಿದ್ರೆಯಲ್ಲಿದ್ದಾನೆ, ಕಾಳಿಯು ಅವನ ಎದೆಯ ಮೇಲೆ ಕಾಲಿಟ್ಟು ನಿಂತಿದ್ದಾಳೆ. ಸ್ವಲ್ಪ ದೂರದಲ್ಲಿ ಶಿವನ ಒಂದು ಎತ್ತರವಾದ ವಿಗ್ರಹವಿದೆ. ಆದರೆ ಏನೂ ಲಕ್ಷಣವಿಲ್ಲ.





ಒಳಗೆ ಕೂಡಾ ತುಂಬಾ ಮೂರ್ತಿಗಳು ಇವೆ. ಈ ಬಾಬಾನ ಆಶ್ರಮಗಳು ಹಲವಾರು ಕಡೆ ಇವೆ. ಇಲ್ಲಿ ಯೋಗ ಕಲಿಸುತ್ತಾರೆ. ಇಲ್ಲಿ ಊಟ ಮಾಡಿ ಮುಂದೆ ಸಾಗಿದೆವು. ಪರ್ವತಗಳು ಇನ್ನೂ ಚೆನ್ನಾಗಿ ಹತ್ತಿರ ಕಾಣುತಿತ್ತು. ಈಗ ಹಾರ್ಸಿಲ್ ಎಂಬ ಊರು ಬಂತು. ಅಲ್ಲೇ ತಂಗಲು ನಿರ್ಧಾರವಾಯಿತು. ಇಲ್ಲಿಂದ ಬರೇ 32 ಕಿ.ಮಿ. ಗಂಗೊತ್ರಿಗೆ. ಎಲ್ಲರೂ ಸುಸ್ತು ಆಗಿದ್ದರು. ಊಟ ಮಾಡಿ ಗಡದ್ದು ನಿದ್ದೆ ಹೊಡೆದೆವು. ಮರುದಿನ ಬೆಳಗೆದ್ದು ಬೇಗ ಹೊರಟೆವು ಗಂಗಾ ಮಾಯಿಯ ಧರ್ಶನಕ್ಕೆ. 




ಬಹಳ ಚೆನ್ನಾಗಿರುವ ರಸ್ತೆ, ಸುಂದರ ಪರಿಸರ ಪರ್ವತಮಾಲೆಗಳಿಂದ ಸುತ್ತುವರಿದ ಪ್ರದೇಶ. ಸೂರ್ಯೋದಯವಾಗಿ ಸ್ವಲ್ಪ ಹೊತ್ತಲ್ಲೇ ನಾವು ಗಂಗೋತ್ರಿ ತಲುಪಿದೆವು.

 ವಿಪರೀತ ಜನಜಂಗುಳಿ ಇರಲಿಲ್ಲ. ಗಂಗಾ ಮಾತೆಯ ಸುಂದರ ಮಂದಿರದ ಒಳಗಡೆ ಹೋಗಿ ದರ್ಶನ ಪಡೆದೆವು.








ಹೊರಗಡೆ ಬಂದು ಫೋಟೋ ತೆಗೆದುಕಂಡೆವು. ಅಲ್ಲೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಕೆಳಗೆ ಹರಿಯುತ್ತಿರುವ ಗಂಗಾ ನದಿಯ ಘಾಟ್ ಗೆ ಹೋದೆವು.









 ಅದೇನು ರಭಸ! ನೀರಂತೂ ಕೊರೆಯುವಷ್ಟು ತಣ್ಣಗೆ. ಸ್ನಾನ ಮಾಡುವ ಸಾಹಸವನ್ನು ಯಾರೂ ಮಾಡಲಿಲ್ಲ. ಅಲ್ಲಿ ಪ್ರಾರ್ಥನೆ ಮಾಡಿ ಸೂರ್ಯನಿಗೆ ಅರ್ಘ್ಯ ಕೊಟ್ಟು ತಲೆಗೆ ಪ್ರೊಕ್ಷಣೆ ಮಾಡಿ ಕೊಂಡೆವು. ಅಲ್ಲೇ ಸಿಗುವ ಬಾಟಲಿಗಳಲ್ಲಿ ಪವಿತ್ರ ಗಂಗೆಯ ನೀರನ್ನು ತುಂಬಿಸಿಕೊಂಡು ಮತ್ತೊಮ್ಮೆ ದೇವರ ದರ್ಶನ ಪಡೆದು ಹೊರಟೆವು.



ದಾರಿ ಬಹಳ ಇಕ್ಕಟ್ಟಾಗಿದ್ದು ಎರಡೂ ಬದಿ ಅಂಗಡಿ ಸಾಲು. ಪ್ರಸಾದ, ಪೂಜಾ ಸಾಮಗ್ರಿಗಳು, ಉಲ್ಲನ್ ಟೋಪಿ, ಮಫ್ಲರ್ ಮತ್ತು ಸ್ವೆಟ್ಟರ್, ಚಹಾ ತಿಂಡಿಗಳ ಹೋಟೆಲ್ ಗಳು ಬಹಳವಿದ್ದವು. ಎಲ್ಲರೂ ತುಂಬಾ ವ್ಯಾಪಾರ ಮಾಡಿದೆವು. ಇಲ್ಲಿಗೆ ಎರಡು ಧಾಮ ನೋಡಿದ್ದಾಯಿತು.ಇನ್ನೂ ಎರಡು ಧಾಮ ಬಾಕಿ ಇದೆ. ಅದನ್ನು ಮುಗಿಸುವ ಮನೋಧೈರ್ಯ ಹುಮ್ಮಸ್ಸು ಬಂದಿತ್ತು. ಇಲ್ಲಿಂದ ಗಂಗೆಯ ಉಗಮ ಸ್ಥಾನವಾದ ಗೋಮುಖಕ್ಕೆ 19 ಕಿ.ಮಿ. ಚಾರಣ ಮಾಡಬೇಕು. ಬಹಳ ಕಷ್ಟಕರವಾದ ಹಾದಿ. ಅಲ್ಲಿ ಗಂಗೊತ್ರಿ ಗ್ಲೇಶಿಯರ್ ನಿಂದ ಗೋವಿನ ಮುಖದಂತಿರುವ ಒಂದು ಗುಹೆಯಿಂದ ಗಂಗೆ ಉಗಮವಾಗುವುದು ಕಾಣುತ್ತದೆ. ನಿಜವಾಗಿ ಗಂಗೆಯು ಮಾನಸ ಸರೋವರದಿಂದ ಹುಟ್ಟಿ ಹಿಮರಾಶಿಯಡಿಯಲ್ಲಿ ಮಾಯವಾಗಿ ಗೋಮುಖದಲ್ಲಿ ಕಾಣಿಸಿಕೊಳ್ಳುತ್ತಾಳೆಂದು ಹೇಳುತ್ತಾರೆ. ಭಗೀರಥನ ತಪಸ್ಸಿನ ಫಲವಾಗಿ ದೇವಲೊಕದಿಂದ ಭೂಮಿಗೆ ಧುಮುಕುವ ದೇವಗಂಗೆಯನ್ನು ಪರಮೇಶ್ವರನು ತನ್ನ ಜಟೆಯಲ್ಲಿ ಬಂಧಿಸುತ್ತಾನೆ. ಭಗೀರಥನ ಕೋರಿಕೆ ಮೇರೆಗೆ ಆತನು ತನ್ನ ಜಟೆಯನ್ನು ಸ್ವಲ್ಪ ಸಡಿಲಿಸಿದ್ದರಿಂದ ಗಂಗೆಯು ಹೊರ ಬಂದು ಭೂಮಿಗೆ ಬರುತ್ತಾಳೆ. ಆದ್ದರಿಂದ ಅವಳಿಗೆ ಭಾಗೀರತಿ ಎಂಬ ಹೆಸರು ಬಂತು. ಮುಂದೆ ಹಲವಾರು ನದಿಗಳ ಸಂಗಮಗೊಂಡು ಋಷಿಕೇಶದಲ್ಲಿ ಗಂಗೆ ಎಂತ ಕರೆಸಿಕೊಳ್ಳುತ್ತಾಳೆ. ತನ್ನ ಧೀರ್ಘ ಪಯಣದಲ್ಲಿ ಅಲಹಾಬಾದ್ ನಲ್ಲಿ ಯಮುನಾ ನದಿ ಹಾಗೂ ಗುಪ್ತಗಾಮಿನಿಯಾಗಿ ಹರಿದು ಬಂದ ಸರಸ್ವತಿ ನದಿಗಳ ಸಂಗಮಗೊಂಡು ಹರಿಯುತ್ತಾ ಬಂಗಾಳ ಕೊಲ್ಲಿಯಲ್ಲಿ ಸಮುದ್ರ ಸೇರುತ್ತಾಳೆ.
 ಅಲ್ಲಿಂದ ಹೊರಟೆವು ಕೇದಾರದೆಡೆಗೆ.