Sunday, 16 May 2010

ಹಿಮವದ್ ಗೋಪಾಲಸ್ವಾಮಿ ಬೆಟ್ಟ

 ನಿಮಗೆ ಕಡು ಬೇಸಿಗೆಯಲ್ಲೂ ಮಂಜಿನ ಸ್ಪರ್ಶವಾಗಬೇಕೆ? ಚುಮು ಚುಮು ಚಳಿಯಲ್ಲಿ ಪ್ರಕೃತಿಯೊಂದಿಗೆ ಲೀನವಾಗಬೇಕೆ? ಪ್ರಶಾಂತತೆಯಲ್ಲಿ ಭಗವಂತನ ಧ್ಯಾನದಲ್ಲಿ ನಿರತವಾಗಬೇಕೆ? ಎಲ್ಲಾ ಜಂಜಾಟಗಳನ್ನು ಮರೆತು ಒಂದಿಷ್ಟು ಹೊತ್ತು ಆರಾಮವಾಗಿರಬೇಕೆ? 
ಇವೆಲ್ಲಾ ಒಟ್ಟಾಗಿ ಒಂದೆಡೆಯಲ್ಲೇ  ದೊರೆಯುವುದು ಅಷ್ಟು ಸುಲಭವಲ್ಲ, ಆದರೆ ನೀವು ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದರೆ ಇವೆಲ್ಲವೂ ನಿಮಗೆ ಲಭ್ಯ! 
ಗೋಪಾಲಸ್ವಾಮಿ ಬೆಟ್ಟವಿರುವುದು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ. ಬೆಂಗಳೂರಿನಿಂದ 220 Km. ಹಾಗೂ ಮೈಸೂರಿನಿಂದ 80 Km. ಮತ್ತು ಗುಂಡ್ಲುಪೇಟೆಯಿಂದ 12 Km. ದೂರದಲ್ಲಿದೆ. ಮೈಸೂರು ಊಟಿ ರಸ್ತೆಯಲ್ಲಿ ಗುಂಡ್ಲುಪೇಟೆಯಿಂದ ಮುಂದೆ  ಹಂಗಳ ಎಂಬ ಹಳ್ಳಿಯಲ್ಲಿ ಬಲಕ್ಕೆ ತಿರುಗಿ ಸುಮಾರು 10 Km. ಪಯಣಿಸಿದರೆ ಗೋಪಾಲಸ್ವಾಮಿ ಬೆಟ್ಟದ ಮೇಲೆ ಇರುತ್ತೀರಿ. ಬೆಟ್ಟವನ್ನು ಏರಲು ಕಡಿದಾದ ತಿರುವುಗಳ ಉತ್ತಮ ರಸ್ತೆ ಇದ್ದು ಎರಡೂ ಪಕ್ಕಗಳಲ್ಲಿ ಬಂಡೀಪುರದ ಕಾಡು ಹಬ್ಬಿಕೊಂಡಿದೆ. ಇದು ಬಂಡೀಪುರ ವನ್ಯಧಾಮದ ಅತ್ಯುನ್ನತ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1454 ಮೀಟರು ಎತ್ತರದಲ್ಲಿದೆ. ಸುತ್ತಲೂ ಕಾಣುವ ಹಸಿರು ಕಾಡಿನಲ್ಲಿ ವನ್ಯ ಮೃಗಗಳು ತುಂಬಾ ಇವೆ. ಆನೆಗಳ ಹಿಂಡು ಸಾಮನ್ಯವಾಗಿ ಕಾಣಸಿಗುತ್ತವೆ. ಜಿಂಕೆಗಳ, ಕಾಡು ಕುರಿಗಳ ಗುಂಪು ಸಹಾ ಕಾಣಬಹುದು. ಇನ್ನು ಚಿರತೆ, ಕರಡಿಗಳು ಸಹಾ ಇವೆ ಎಂದು ಫಾರೆಸ್ಟ್ ಗಾರ್ಡುಗಳು ಹೇಳುತ್ತಾರೆ.
ಬೆಟ್ಟದ ಮೇಲೆ ವರ್ಷದ ಎಲ್ಲಾ ದಿನಗಳಲ್ಲಿ ಮಂಜು ಹಬ್ಬಿರುವ ಕಾರಣ ಇದನ್ನು ಹಿಮವದ್ ಗೋಪಾಲಸ್ವಾಮಿ ಎಂದು ಕರೆಯುತ್ತಾರೆ. ಇಲ್ಲಿಂದ ಮೈಲುಗಳ ದೂರ ವಿಸ್ತಾರವಾಗಿ ಹಬ್ಬಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ವನ್ನು ಕಾಣಬಹುದು. ಅಂತೆಯೇ ಇದು ವನ್ಯಧಾಮದ ವ್ಯಾಪ್ತಿ ಯಲ್ಲಿ ಬರುವ ಕಾರಣ ಇಲ್ಲಿ ಸಂಜೆ 6 ರ ನಂತರ ಯಾರನ್ನೂ ಇರಲು ಬಿಡುವುದಿಲ್ಲ. ಬೆಟ್ಟದ ಕೆಳಗಿನಿಂದಲೇ ಪ್ರವೇಶ ಧನ ಕೊಟ್ಟು ಮೇಲೇರಬೇಕು. ದೇವಾಲಯದ ತನಕ ಉತ್ತಮ ರಸ್ತೆ ಇದೆ. ಇದರಲ್ಲಿ ಮೇಲೇರುವುದೇ ಒಂದು ರೋಚಕ ಅನುಭವ.
ಮೇಲೆ ಹೋಗುತ್ತಿದಂತೆ ಸುತ್ತಲಿನ ಹಳ್ಳಿಗಳು ಹೊಲ ಗದ್ದೆಗಳು ಚಿತ್ತಾರದಂತೆ ಕಾಣುತ್ತವೆ. ವಾಹನದಿಂದ ಇಳಿದಾಕ್ಷಣ ದೇವಾಲಯದ ಮೆಟ್ಟಿಲುಗಳು ಸಿಗುತ್ತವೆ. ಇದರಲ್ಲಿ ಮೇಲೆ ಹತ್ತಿದಾಗ ಗೋಪಾಲಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಇರುತ್ತೀರಿ.
ಆಗಲೇ ನಮಗೆ ಮಂಜಿನ ಅನುಭವವಾಗುತ್ತದೆ. ಛಳಿಯ ಅನುಭವ ಬಹಳ ಹಿತಕರವಾಗಿರುತ್ತದೆ. ಮೋಡ ಮುಸುಕಿದ್ದರೆ ಸುತ್ತಲೂ ಏನೇನೂ ಕಾಣಿಸದು, ಬರೇ ಮಸುಕು. ಬಿಸಿಲಿದ್ದರೆ ಸುತ್ತಲಿನ ದೃಶ್ಯಗಳನ್ನು ನೋಡಬಹುದು. ಎಲ್ಲೆಲ್ಲಿ ನೋಡಿದರೂ ಹಸಿರು ಬೆಟ್ಟ, ಕಾಡುಗಳು.
ಪ್ರಕೃತಿಯ ಮಧ್ಯದಲ್ಲಿ ನೆಲೆಗೊಂಡಿರುವ ವೇಣುಗೋಪಾಲಸ್ವಾಮಿ ದೇವಾಲಯವು ಬಹಳ ಪುರಾತನವಾಗಿದ್ದು ಸುಮಾರು 1315 ನೆ ಇಸವಿಯಲ್ಲಿ ಚೋಳ, ಬಲ್ಲಾಳನು ಕಟ್ಟಿಸಿದ್ದೆನ್ನಲಾಗಿದೆ. ನಂತರ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟು ದತ್ತಿ, ಜೀರ್ಣೋದ್ಧಾರಗಳನ್ನು ಪಡೆದು ಈಗಿರುವ ಸ್ಥಿತಿಯನ್ನು ಹೊಂದಿದೆ.
ಸುತ್ತಲೂ ಪ್ರಾಕಾರವಿದ್ದು ದ್ವಜಸ್ಥಂಭ ಮತ್ತು ಗೋಪುರಗಳನ್ನು ಹೊಂದಿದೆ. ಗರ್ಭಗೃಹ ದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಮತ್ತು ರುಕ್ಮಿಣಿ, ಸತ್ಯಭಾಮೆಯರ ವಿಗ್ರಹಗಳಿವೆ. ಮೇಲಿನಿಂದ ನೀರು ಹನಿ ಹನಿಯಾಗಿ ದೇವರ ಮೇಲೆ ತೊಟ್ಟಿಕ್ಕುತ್ತದೆ. ಈ ನೀರು ಹೇಗೆ, ಎಲ್ಲಿಂದ  ಬರುತ್ತದೆ ಎಂದು ತಿಳಿಯುವುದಿಲ್ಲ. ಬಹಳ ಪ್ರಶಾಂತವಾದ ಈ ದೇವಾಲಯ ಮತ್ತು ಇದರ ಪರಿಸರ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ದೇವರ ದರ್ಶನ ಮಾಡಿ ಸ್ವಲ್ಪ ಹೊತ್ತು ಧ್ಯಾನ ಮಾಡಿ ಹೊರಬಂದರೆ ಪ್ರಕೃತಿಯು ನಮ್ಮನ್ನು ಕೈ ಚಾಚಿ ಕರೆಯುತ್ತಿರುತ್ತಾಳೆ.
ಪಕ್ಕದಲ್ಲೇ ಇರುವ ಕಾಲು ದಾರಿಯಲ್ಲಿ ಹೆಜ್ಜೆ ಹಾಕಿದರೆ ಅನತಿ ದೂರದಲ್ಲಿ ಕಾಣುವ ಬೆಟ್ಟದ ಕಡೆಗೆ ಚಾರಣ ಮಾಡಬಹುದು. ಇಲ್ಲಿಂದ ಕಾಡಿನ ಕಣಿವೆ ಮತ್ತು ಆಲ್ಲಿಂದ ಮೇಲೆ ಏರಿಬರುವ ಮಂಜಿನ ದರ್ಶನವಾಗುತ್ತದೆ. ಮೈ ಎಲ್ಲಾ ಮಂಜಿನಿಂದ ಆವರಿಸಿದಾಗ  ಪುಳಕಿತಗೊಳ್ಳುತ್ತದೆ.
ಇಲ್ಲಿ ಸ್ವಲ್ಪ ದೂರದವರೆಗೆ ಮಾತ್ರ ಮುಂದೆ ಹೋಗಲು ಅವಕಾಶ. ಮತ್ತೆ ಹೋಗಬೇಕಾದರೆ ಫಾರೆಸ್ಟ್ ನವರ ಅನುಮತಿ ಬೇಕು. ಇಲ್ಲಿ ಫಾರೆಸ್ಟ್ ಗೆಸ್ಟ್ ಹೌಸ್ ಸಹಾ ಇದೆ ಆದರೆ ಇದರಲ್ಲಿ ಉಳಕೊಳ್ಳಲು ಗುಂಡ್ಲುಪೇಟೆಯಲ್ಲಿರುವ ಫಾರೆಸ್ಟ್ ಇಲಾಖೆಯಿಂದ ಮುಂಚಿತ ಅನುಮತಿ ಪಡ ಕೊಳ್ಳಬೇಕು.
ಇಲ್ಲಿ ಬೆಟ್ಟದಮೇಲೆ ಯಾವುದೇ ಹೋಟೆಲುಗಳು ಇಲ್ಲವಾದ್ದರಿಂದ ಪ್ರವಾಸಿಗರು ಬರುವಾಗ ಸಾಕಷ್ಟು ತಿಂಡಿ ಊಟಗಳನ್ನು ತರುವುದು ಒಳ್ಳೆಯದು. ತಿಂಡಿ ತಿಂದು ಸಂಜೆಯವರೆಗೆ ಇಲ್ಲಿದ್ದು ವಾಪಸು ಹೋಗಬಹುದು.
ಗೋಪಾಲಸ್ವಾಮಿ ಬೆಟ್ಟಕ್ಕೆ ಇತ್ತೀಚೆಗೆ ಬೆಂಗಳೂರಿನಿಂದ ಪ್ರತಿದಿನ ಹೊರಡುವ KSRTC ಬಸ್ಸು ಸೌಕರ್ಯವಿದೆ. ಇಲ್ಲಿಗೆ ವಯಸ್ಸಿನ ಮಿತಿಯಿಲ್ಲದೆ ಯಾರು ಬೇಕಾದರೂ ಬರಬಹುದು.ಯಾವುದೇ ತರದ ಅಪಾಯವಿಲ್ಲ.
ಇಲ್ಲಿಂದ ಮುಂದೆ ಪಯಣಿಸಿದರೆ ಬಂಡೀಪುರ ವನ್ಯಧಾಮ, ಮದುಮಲೈ ವನ್ಯಧಾಮ ಮತ್ತು ಊಟಿ ಗೆ ಸಹಾ ಹೋಗಬಹುದು. ಅಂತೆಯೇ ಇನ್ನೊದು ಮಾರ್ಗವಾಗಿ ವಯನಾಡು ವನ್ಯಧಾಮ, ಸುಲ್ತಾನ್ ಬತ್ತೇರಿಗೆ ಸಹಾ ಹೋಗಬಹುದು.
ಆದರೆ ಇತ್ತೀಚೆಗೆ ಈ ರಸ್ತೆಗಳಲ್ಲಿ   ರಾತ್ರಿ ಪ್ರಯಾಣ ನಿಷೇದಿಸಲಾಗಿದೆ.

 

No comments:

Post a Comment