- ಬಾತ್ ಎಂದರೆ ಸ್ನಾನ. ಆದರೆ ಅದೇ ಒಂದು ಹೆಸರನ್ನು ಹೊಂದಿದ ಊರೊಂದಿದೆ. ಈ ಹೆಸರು ಇಲ್ಲಿಗೆ ಅನ್ವರ್ಥವಾಗಿದೆ, ಯಾಕೆಂದರೆ ಇಲ್ಲಿ ಬಿಸಿನೀರಿನ ತೊರೆಯು ಭೂಗರ್ಭದಿಂದ ಉಕ್ಕಿ ಬರುತ್ತಿದೆ. ಇದನ್ನು ಕ್ರಿಸ್ತ ಪೂರ್ವ 43 ರಷ್ಟು ಹಿಂದೆಯೇ ರೋಮನ್ನರು ಕಂಡು ಹಿಡಿದು ಇಲ್ಲಿ ಸುಸಜ್ಜಿತ ಸ್ನಾನಗಾರವನ್ನು ಕಟ್ಟಿದ್ದರು. ರೋಮನ್ನರು ಬ್ರಿಟನ್ನಿನ ಮೇಲೆ ಆಕ್ರಮಿಸಿ ಇಲ್ಲಿ ಕೆಲ ಕಾಲ ತಮ್ಮ ರಾಜ್ಯಾಡಳಿತ ಮಾಡಿದ್ದರು. ಆಗ ಇಲ್ಲಿ ಒಂದು ಸುಂದರ ದೇವಾಲಯ ಮತ್ತು ಇತರ ಕಟ್ಟಡಗಳನ್ನು ಸಹಾ ಕಟ್ಟಿದ್ದರು. ಮಿನರ್ವಾ ದೇವತೆಯ ದೇವಾಲಯದ ಕುರುಹುಗಳು ಈವಾಗಲೂ ಕಾಣಬಹುದಾಗಿದೆ. ದೇವಾಲಯವು ಮಣ್ಣಿನಡಿಯಲ್ಲಿ ಹೂತು ಹೋಗಿದ್ದರೂ ಅದರ ಅವಶೇಷಗಳ ಉತ್ಖನನ ಮಾಡಿದ್ದರಿಂದ ಅದರ ಸ್ವರೂಪದ ಅಂದಾಜು ಮಾಡಬಹುದು. ಆದರೆ ಕಾಲಕ್ಕನುಗುಣವಾಗಿ ಸ್ನಾನಗೃಹ ಮಾತ್ರ ಪುನ್ಹರುತ್ಥಾನಗೊಂಡು ಇಂದಿಗೂ ಸಹಾ ಉಪಯೋಗಿಸುವ ಸ್ಥಿತಿಯಲ್ಲಿದೆ.
ಆಯತಾಕಾರದ ಕೊಳದಲ್ಲಿ, ಹಸಿರು ಬಣ್ಣದ ಹಿತಕರವಾದ ಬಿಸಿ ನೀರು ಇರುವ ಈ ಕೊಳದ ನೀರು ಔಷಧೀಯ ಗುಣಗಳನ್ನು ಹೊಂದಿದೆಯಂತೆ. ಇದರಲ್ಲಿ ತುಂಬಾ ಬಗೆಯ ಖನಿಜಾಂಶಗಳು ಇರುವುದರಿಂದ ಹಲವು ಬಗೆಯ ರೋಗಗಳಿಗೆ ಮುಖ್ಯವಾಗಿ ಚರ್ಮರೋಗಗಳಿಗೆ ಉಪಯುಕ್ತ ಎನ್ನುತ್ತಾರೆ. ಈ ಕೊಳದ ಸುತ್ತ ಕಂಭಗಳಿದ್ದು ಮೇಲ್ಚಾವಣಿಯನ್ನು ಹೊಂದಿದೆ.ಮೇಲ್ಗಡೆಯಲ್ಲಿ ರೋಮನ್ ಶೈಲಿಯ ಶಿಲ್ಪಗಳನ್ನು ಕಾಣಬಹುದು. ಇದೊಂದು ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಲಾಗಿದೆ.
--
ವಿಶಾಲವಾದ ಮುಖ್ಯ ಹಜಾರವನ್ನು ಪ್ರವೇಶಿಸಿದರೆ ನಮಗೆ ಟಿಕೆಟ್ ಕೌಂಟರ್ ಸಿಗುತ್ತದೆ. ಅಲ್ಲಿ ಟಿಕೆಟ್ ಪಡೆದುಕೊಂಡು ಒಳಗೆ ಹೋಗಬೇಕು. ಟಿಕೆಟ್ ಜೊತೆಯಲ್ಲೇ ಒಂದು ಉಚಿತ ಗೈಡ್ ಸಿಗುತ್ತದೆ. ಇದೂ ನಮ್ಮ ಟಿವಿ ರಿಮೋಟ್ ನಂತೆ ಇದ್ದು, ಅಲ್ಲಿ ಇರಿಸಲಾದ ಕೃತಿಗಳ ಎದುರು ಇರುವ ಸಂಖ್ಯೆಯನ್ನು ಇದರಲ್ಲಿ ಅದುಮಿದರೆ ನಮಗೆ ಸೊಗಸಾದ ಇಂಗ್ಲಿಷ್ ಬಾಷೆಯಲ್ಲಿ ವಿವರಣೆ ದೊರಕುತ್ತದೆ. ಇದಕ್ಕೆ ಹೆಸರು ಆಡಿಯೋ ಗೈಡ್ ಅಂತ. ಮುಖ್ಯ ಸ್ನಾನಗೃಹವಲ್ಲದೆ ಅದರ ಅಕ್ಕಪಕ್ಕದಲ್ಲೂ ಇನ್ನೆರಡು ಸ್ನಾನಗೃಹಗಳಿವೆ ಅದನ್ನು ನೋಡಿಕೊಂಡು ಮುಂದುವರೆದರೆ ನಮಗೆ ಮ್ಯೂಸಿಯಂ ಸಿಗುತ್ತದೆ ಅಲ್ಲಿ ಉತ್ಖನನ ಸಮಯದಲ್ಲಿ ಸಿಕ್ಕಿರುವ ವಸ್ತುಗಳನ್ನು ಪ್ರದರ್ಶಿಸಿರುತ್ತಾರೆ. ಒಂದೆಡೆಯಲ್ಲಿ ಸ್ವಲ್ಪ ಕೆಳಗಡೆ ಮಣ್ಣಿನಡಿಯಲ್ಲಿ ಹೂತು ಹೋಗಿರುವ ಮಿನರ್ವಾ ದೇವಿಯ ದೇವಾಲಯದ ಕಂಭಗಳೂ ಅಡಿಪಾಯ ಮತ್ತು ಬಲಿ ಪೀಟ ಕಾಣಿಸುತ್ತದೆ.
ಒಂದೆಡೆ ಭೂಮಿಯ ಒಳಗಿಂದ ಉಕ್ಕಿ ಬರುವ ಬಿಸಿನೀರಿನ ಬುಗ್ಗೆ ಹರಿದು ಬರುವುದು ಕಾಣುತ್ತದೆ. ಈ ನೀರು ಸುಮಾರು 48 ಡಿಗ್ರಿ ಬಿಸಿ ಇರುತ್ತದಂತೆ. ಇದರಿಂದ ಹೊಗೆಯೇಳುವುದನ್ನು ಕಾಣಬಹುದು. ಇದು ಸೀದಾ ಸ್ನಾನದ ಕೊಳಗಳಿಗೆ ಹೋಗಿ ಬೀಳುತ್ತದೆ. ಭೂಮಿಯ ಕೆಳಗಡೆ ಸುಪ್ತವಾಗಿರುವ ಅಗ್ನಿಪರ್ವತವಿರುವ ಕಾರಣ ಸುತ್ತಲಿನ ನೀರು ಬಿಸಿಯಾಗಿ ಹೊರ ಚಿಮ್ಮುತ್ತದೆ. ಇದರೊಂದಿಗೆ ಗಂಧಕ, ಸೋಡಿಯಂ ಮತ್ತಿತರ ಖನಿಜಗಳೂ ಬೆರೆತರೆ ಆಗ ಔಷದೀಯ ಗುಣ ಹೊಂದುತ್ತದೆ.
ಬಾತ್ ನಿಂದ ಹೊರಬಂದರೆ ಅದರ ಆವರಣದಲ್ಲೇ ಒಂದು ಸುಂದರ ಕೆಥೆಡ್ರಲ್ ಕಾಣಬಹುದು. ಇದಕ್ಕೆ ಬಾತ್ ಅಬ್ಬಿ ಎಂತ ಹೆಸರು. ಸೈಂಟ್ ಪೀಟರ್ ಮತ್ತು ಸೈಂಟ್ ಪೌಲ್ ರ ಮಂದಿರವಾಗಿದ್ದು ಸುಮಾರು ಕ್ರಿಸ್ತ ಶಕ 6 ನೆ ಶತಮಾನದಲ್ಲಿ ಕಟ್ಟಿದ್ದಂತೆ. ತರುವಾಯ ಕ್ರಮವಾಗಿ 12 ಮತ್ತು 16 ನೆ ಶತಮಾನಗಳಲ್ಲಿ ಮಾರ್ಪಾಟು ಹೊಂದಿದೆಯಂತೆ.
ಬಾತ್ ಒಂದು ಪ್ರಮುಖವಾದ ಪ್ರವಾಸಿ ಸ್ಥಳವಾದ್ದರಿಂದ ಇಲ್ಲಿ ಯಾವಾಗಲೂ ಪ್ರವಾಸಿಗರು ಗಿಜಿಗುಟ್ಟುತ್ತಾರೆ. ಎಲ್ಲಾ ದೇಶಗಳ ಜನರನ್ನು ಇಲ್ಲಿ ಕಾಣಬಹುದು. ಇಲ್ಲಿನ ಸುತ್ತು ಮುತ್ತು ಇರುವ ಎಲ್ಲಾ ಕಟ್ಟಡಗಳೂ ಕಲಾತ್ಮಕವಾಗಿದ್ದು 17 ನೆ ಶತಮಾನದವುಗಳಾಗಿರುತ್ತವೆ. ಎಲ್ಲಾ ಕಛೇರಿಗಳು ಮತ್ತು ಉಪಹಾರ ಮಂದಿರಗಳು ಎಲ್ಲವೂ ಹಳೆಯ ಕಾಲದವುಗಳೇ. ಹಾಗಾಗಿ ಇಲ್ಲಿಗೆ ಬಂದಾಗ, ಹಳೆಯ ಕಾಲಕ್ಕೇನೇ ಬಂದಹಾಗೆನಿಸುತ್ತದೆ.
ಇಲ್ಲಿನ ಮ್ಯೂಸಿಯಂ ಮತ್ತು ಸಿಟಿ ಕೌನ್ಸಿಲ್ ಗಳು ಇಲ್ಲಿ ಕ್ರಿಸೆಂಟ್ ಎಂಬ ಅರ್ಧ ಚಂದ್ರಾಕೃತಿಯ ಬೃಹತ್ ಕಟ್ಟಡದಲ್ಲಿ ಇದೆ. ಇದೂ ಸಹಾ ರೋಮನ್ ಶೈಲಿಯಲ್ಲೇ ಇದೆ. ಇದರ ಎದುರುಗಡೆ ದೊಡ್ಡ ಹುಲ್ಲು ಹಾಸು ಮತ್ತು ಹೂವಿನ ಮಡಿಗಳು ಇದ್ದು ಬಹಳ ಸುಂದರವಾಗಿದೆ.
ಈ ಬಾತ್ ಪ್ರದೇಶವೆಲ್ಲಾ ಸುಂದರವಾದ ಹೂ ದೋಟದಿಂದ ಸುತ್ತುವರೆದಿದ್ದು, ರಾಯಲ್ ವಿಕ್ಟೋರಿಯಾ ಪಾರ್ಕ್ ಎಂದು ಹೆಸರುವಾಸಿಯಾಗಿದೆ.
ಬಾತ್ ಗೆ ಸಿಟಿಯ ಸ್ಥಾನಮಾನ ಕೊಟ್ಟಿದ್ದಾರೆ. ಪಕ್ಕದಲ್ಲಿ ಸೊಮರ್ಸೆಟ್ ಕೌಂಟಿ ಇದ್ದು ಬ್ರಿಸ್ಟಲ್ ನಿಂದ ಸುಮಾರು 13 ಮೈಲು ದೂರದಲ್ಲಿದೆ.ನಾವು ಇಲ್ಲೆಲ್ಲಾ ಸುತ್ತಾಡಿ ಊಟ ಮಾಡಿಕೊಂಡು ಮುಂದಕ್ಕೆ ಚೆಡ್ಡರ್ ಕೇವ್ಸ್ ಎಂಬಲ್ಲಿಗೆ ಬಂದೆವು. ಚೆಡ್ದರ್ ಚೀಸ್ ತುಂಬಾ ಪ್ರಸಿದ್ಧ. ಇದೂ ಸುಮಾರು 20 ಮೈಲು ದೂರದಲ್ಲಿದೆ.
ಇಲ್ಲಿನ ವೈಶಿಷ್ಟ್ಯವೇನೆಂದರೆ ಎರಡೂ ಕಡೆ ಲಂಭವಾಗಿರುವ ಶಿಲಾಮಯ ಕಣಿವೆ ಪ್ರದೇಶದಲ್ಲಿ ಅಲ್ಲಲ್ಲಿ ಹಲವಾರು ಗುಹೆಗಳಿವೆ. ಅದರಲ್ಲಿ ಒಂದು ಗುಹೆಯಂತು ತುಂಬಾ ಉದ್ದವಾಗಿದ್ದು ಸುಮಾರು ಅರ್ಧ ಮೈಲು ದೂರ ಸಾಗಿದೆ. ಇದಕ್ಕೆ ಗಫ್ಫ್ ಕೇವ್ ಎಂದು ಹೆಸರು.
![](https://blogger.googleusercontent.com/img/b/R29vZ2xl/AVvXsEhuTGXb0j3dzOotPWkQirkNutwXE9IGHLHBN0xPRY5HtuV5pxBmyQm6rIIWZkwGrlUkkl89OPexUdhnkKd4CwrcreJVCHg9aBa1_7GwYDe1ZQisfhiFi8gfN3ZLPk-c8UQLe-eaEcWmt_aK/s400/140520101991.jpg)
ಇಲ್ಲಿನ ಹವೆ ತುಂಬಾ ತಂಪಾಗಿದ್ದು ಬೆಟ್ಟದ ಮೇಲೆ ಕಾಡು ಬೆಳೆದಿದೆ, ಅಲ್ಲಲ್ಲಿ ಬೆಟ್ಟದ ಆಡುಗಳು ಮೇಯುತ್ತಿರುವುದನ್ನು ಕಾಣಬಹುದು. ಇದೊಂದು ರಕ್ಷಿತ ಪ್ರದೇಶ ಮತ್ತು ಇಲ್ಲಿ ಚಾರಣ ಹಾಗೂ ಪರ್ವತಾರೋಹಣ ಶಿಕ್ಷಣಕ್ಕೆ ಅವಕಾಶವಿದೆ. ನಾವು ಗಫ್ಫ್ ಕೇವ್ ನ ಎದುರುಗಡೆ ಕಾರು ನಿಲ್ಲಿಸಿ ಟಿಕೆಟ್ ಪಡಕೊಳ್ಳಲು ಹೋದೆವು.
![](https://blogger.googleusercontent.com/img/b/R29vZ2xl/AVvXsEgMDCsAIXYAQov8XOiO4uokjvoVmxvasepF7X3jSuQdsqIQwwtY5wnmyPR1UhsCnTlF-YjV5cMPJqw_XT4xpXHLxij7wOErl-4sZWYbDpga2sH6kPoSdsGaW51qBEbr_iHhFKdZhQvvfgtd/s400/140520101997.jpg)
ಟಿಕೆಟ್ ಪಡಕೊಂಡು ಅಲ್ಲಿಂದಲೇ ಗುಹೆಯ ಒಳಗಡೆ ಹೋಗಬೇಕು. ಹೋಗುವಾಗ ಆಡಿಯೋ ಗೈಡು ಸಹಾ ಕೊಡುತ್ತಾರೆ. ಇದರಿಂದ ನಮಗೆ ಬೇಕಾದಲ್ಲಿ ನಿಂತು ವಿವರಣೆ ಕೇಳಬಹುದು. ಗುಹೆಯ ಒಳಗಡೆ ತಂಪಾಗಿದ್ದು ಯಾವಾಗಲೂ 11 ಡಿಗ್ರಿ ಇರುವಂತೆ ನೋಡಿಕೊಳ್ಳುತ್ತಾರೆ. ಹಿತಕರವಾದ ಮಂದ ಬೆಳಕು ಅಲ್ಲಲ್ಲಿ ಇರಿಸಿದ್ದರಿಂದ ಗುಹೆಯು ಇನ್ನೂ ಸುಂದರವಾಗಿ ಕಾಣುತ್ತದೆ.
ನೀರಿನಲ್ಲಿ ಕರಗಿರುವ ಖನಿಜಗಳು ಕಾಲಕ್ರಮೇಣ ಮೊಳೆಯುತ್ತಾ ಚಿತ್ರ ವಿಚಿತ್ರ ರೂಪವನ್ನು ತಾಳುತ್ತದೆ. ಇದಕ್ಕೆ ಸ್ಟಾಲಕಾಯ್ಟ್ ಮತ್ತು ಸ್ಟಾಲಗ್ಮಯ್ಟ್ ಎಂದು ಹೆಸರು. ಇದರಲ್ಲಿ ಬೆರೆತಿರುವ ಖನಿಜಗಳನ್ನು ಅವಲಂಬಿಸಿಕೊಂಡು ಇವುಗಳ ವರ್ಣವೂ ಬೇರೆ ಬೇರೆಯಾಗಿ ತೋರುತ್ತದೆ. ಇದರ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳಿಂದ ಪ್ರತಿಫಲಿತವಾಗುವ ಬೆಳಕಿನ ಲಾಸ್ಯವೇ ಬಹಳ ಸೊಗಸು.
ಇಲ್ಲಿನ ವಿಚಿತ್ರ ರಚನೆಗಳು ನೋಡುಗನ ಕಲ್ಪನೆಗೆ ಅನುಗುಣವಾಗಿರುತ್ತದೆ. ಮಾನವನ ಮಿದುಳಿನ ಆಕೃತಿಯನ್ನು ಹೋಲುವ ರಚನೆಗಳಿವೆ.
![](https://blogger.googleusercontent.com/img/b/R29vZ2xl/AVvXsEhcRRyogFpFXJaf88d_mIHU5AK02x8YcnlLtUBGjAn9RIoKjDLxvqXq5YZrxegSnmBqlxVlpBeURVkczpOMsChPHEONnx6iwMiUrag0PBJjMXk10dUELX77k3214_tgSO3DrTve_U8Roif3/s400/140520102005.jpg)
ಹೀಗೇ ಮುಂದುವರಿಯುತ್ತಾ ಹೋದಂತೆ ಪಕ್ಕದಲ್ಲಿ ಮೇಲ್ಗಡೆ ಎಲ್ಲಾ ಬೇರೆ ಬೇರೆ ಆಕೃತಿಗಳನ್ನು ನೋಡಿದೆವು. ಕೊನೆಗೊಮ್ಮೆ ಗುಹೆಯ ಕೊನೆಯ ಭಾಗಕ್ಕೆ ಬಂದೆವು. ಇಲ್ಲಿ ಗುಹೆಯು ಮೇಲ್ಮುಖವಾಗಿ ಸಾಗಿದೆ. ಇದೇ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿ ಗುಹೆಯು ಸುಮಾರು 50 ಅಡಿಗಳಷ್ಟು ಮೇಲೆ ಸಾಗಿದೆ ಇಲ್ಲಿಂದ ಮೇಲೆ ನೋಡುವಾಗ ನಾವು ಬೇರೆಯೇ ಒಂದು ಲೋಕವನ್ನು ವೀಕ್ಷಿಸುತಿದ್ದೇವೆ ಎಂಬ ಅನುಭವವಾಗುತ್ತದೆ. ಇದನ್ನು ಡೈಮಂಡ್ ಅಂತ ಹೆಸರಿಸಿದ್ದಾರೆ. ಸೊಲೊಮನ್ ಟ್ರೆಶರ್ ಎಂತಲೂ ಕರೆಯುತ್ತಾರೆ. ನಿಜವಾಗಿಯೂ ಇದು ಸೊಲೊಮನ್ ದೊರೆಯ ಗುಪ್ತ ನಿಧಿ ಇರಿಸಿರುವ ಜಾಗವಾಗಿರಬೇಕು. ಅಷ್ಟು ವಿಚಿತ್ರ ಹಾಗೂ ನಿಗೂಢವಾಗಿದೆ.
![](https://blogger.googleusercontent.com/img/b/R29vZ2xl/AVvXsEhF7xb7Ym-11d0GnGtc8QeqWd683GI8ZsuoEcWztcMEJLvJVABnH6aeQEKHtg0jnfNZC9gE4dapiOfGagcfeSam6Id0DVRAcqwqwXQHC9_8X0E5OxjEmP9zePatJxBorWpBVITYJl3JSAjx/s400/140520102008.jpg)
ಇಲ್ಲಿಂದ ಹಿಂತಿರುಗಿ ಬಂದೆವು. ಗುಹೆಯ ವೀಕ್ಷಣಾ ಸಮಯವೂ ಮುಗಿಯುತ್ತಾ ಬಂತು. ಸಂಜೆ 5 ಗಂಟೆಗೆ ಮುಚ್ಚುತ್ತಾರೆ. ಕಾವಲುಗಾರರು ಬಂದು ಎಲ್ಲಾ ಕಡೆ ಯಾರಾದರೂ ಇನ್ನೂ ಒಳಗಡೆ ಇದ್ದಾರೋ ಎಂದು ನೋಡಿ ಎಲ್ಲಾ ಲೈಟುಗಳನ್ನು ಆರಿಸಿ ಬಿಡುತ್ತಾರೆ. ನಾವು ಅವರೊಂದಿಗೆ ಮಾತಾಡುತ್ತಾ ಹಲವು ವಿವರಗಳನ್ನು ಕೇಳಿ ತಿಳಿದುಕೊಂಡೆವು. ನಾವು ಪಡಕೊಂಡ ಟಿಕೆಟ್ ನಲ್ಲಿ ಇನ್ನೂ ಕೆಲವು ಕಾರ್ಯಕ್ರಮಗಳು ಬಾಕಿ ಇದ್ದವು. ಅದೆಂದರೆ ಬೇರೆ ಕೆಲವು ಗುಹೆಗಳನ್ನು ನೋಡುವುದು, ಬೆಟ್ಟದಮೇಲೆ ಹತ್ತಿ, ನಡೆದಾಡುವುದು, ಕಣಿವೆಗಳಲ್ಲಿ, ಮಾಡು ಇಲ್ಲದ ಬಸ್ಸಿನಲ್ಲಿ ಒಂದು ಸುತ್ತು ವಿಹಾರ ಮಾಡುವುದು ಇತ್ಯಾದಿ. ಆದರೆ ಸಮಯದ ಅಭಾವದಿಂದ ನಮಗೆ ಹೋಗಲಾಗಲಿಲ್ಲ. ಆದರೂ ಚಿಂತೆಯಿಲ್ಲ ಈ ಟಿಕೇಟು ಇನ್ನೂ 10 ವರ್ಷದವರೆಗೆ ಊರ್ಜಿತದಲ್ಲಿರುತ್ತದೆ ಎಂದು ಟಿಕೆಟ್ ನಲ್ಲೆ ಬರೆದಿದ್ದಾರೆ. ಆದ್ದರಿಂದ ಇನ್ನೊಂದು ಸಲ ಅಲ್ಲಿಗೆ ಹೋದಾಗ ಈ ಟಿಕೇಟು ಉಪಯೋಗಕ್ಕೆ ಬರಬಹುದು!
ಇದೇ ತರಹದ ಗುಹೆಗಳನ್ನು ನಾವು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೇಲಂ ಎಂಬಲ್ಲಿ ನೋಡಿದ್ದೆವು. ಹೆಚ್ಚು ಕಮ್ಮಿ ಎರಡೂ ಗುಹೆಗಳು ಒಂದೇ ತೆರನಾಗಿವೆ.