Sunday, 23 May 2010

Bath & Chedder Caves

  • ಬಾತ್ ಎಂದರೆ ಸ್ನಾನ. ಆದರೆ ಅದೇ ಒಂದು ಹೆಸರನ್ನು ಹೊಂದಿದ ಊರೊಂದಿದೆ. ಈ ಹೆಸರು ಇಲ್ಲಿಗೆ ಅನ್ವರ್ಥವಾಗಿದೆ, ಯಾಕೆಂದರೆ ಇಲ್ಲಿ ಬಿಸಿನೀರಿನ ತೊರೆಯು ಭೂಗರ್ಭದಿಂದ ಉಕ್ಕಿ ಬರುತ್ತಿದೆ. ಇದನ್ನು ಕ್ರಿಸ್ತ ಪೂರ್ವ 43 ರಷ್ಟು ಹಿಂದೆಯೇ ರೋಮನ್ನರು ಕಂಡು ಹಿಡಿದು ಇಲ್ಲಿ ಸುಸಜ್ಜಿತ ಸ್ನಾನಗಾರವನ್ನು ಕಟ್ಟಿದ್ದರು. ರೋಮನ್ನರು ಬ್ರಿಟನ್ನಿನ ಮೇಲೆ ಆಕ್ರಮಿಸಿ ಇಲ್ಲಿ ಕೆಲ ಕಾಲ ತಮ್ಮ ರಾಜ್ಯಾಡಳಿತ ಮಾಡಿದ್ದರು. ಆಗ ಇಲ್ಲಿ ಒಂದು ಸುಂದರ ದೇವಾಲಯ ಮತ್ತು ಇತರ ಕಟ್ಟಡಗಳನ್ನು ಸಹಾ ಕಟ್ಟಿದ್ದರು. ಮಿನರ್ವಾ ದೇವತೆಯ ದೇವಾಲಯದ ಕುರುಹುಗಳು ಈವಾಗಲೂ ಕಾಣಬಹುದಾಗಿದೆ. ದೇವಾಲಯವು ಮಣ್ಣಿನಡಿಯಲ್ಲಿ ಹೂತು ಹೋಗಿದ್ದರೂ ಅದರ ಅವಶೇಷಗಳ ಉತ್ಖನನ ಮಾಡಿದ್ದರಿಂದ ಅದರ ಸ್ವರೂಪದ ಅಂದಾಜು ಮಾಡಬಹುದು. ಆದರೆ ಕಾಲಕ್ಕನುಗುಣವಾಗಿ ಸ್ನಾನಗೃಹ ಮಾತ್ರ ಪುನ್ಹರುತ್ಥಾನಗೊಂಡು ಇಂದಿಗೂ ಸಹಾ ಉಪಯೋಗಿಸುವ ಸ್ಥಿತಿಯಲ್ಲಿದೆ.




ಆಯತಾಕಾರದ ಕೊಳದಲ್ಲಿ, ಹಸಿರು ಬಣ್ಣದ ಹಿತಕರವಾದ ಬಿಸಿ ನೀರು ಇರುವ ಈ ಕೊಳದ ನೀರು   ಔಷಧೀಯ  ಗುಣಗಳನ್ನು ಹೊಂದಿದೆಯಂತೆ. ಇದರಲ್ಲಿ ತುಂಬಾ ಬಗೆಯ ಖನಿಜಾಂಶಗಳು ಇರುವುದರಿಂದ ಹಲವು ಬಗೆಯ ರೋಗಗಳಿಗೆ ಮುಖ್ಯವಾಗಿ ಚರ್ಮರೋಗಗಳಿಗೆ ಉಪಯುಕ್ತ ಎನ್ನುತ್ತಾರೆ. ಈ ಕೊಳದ ಸುತ್ತ ಕಂಭಗಳಿದ್ದು ಮೇಲ್ಚಾವಣಿಯನ್ನು ಹೊಂದಿದೆ.ಮೇಲ್ಗಡೆಯಲ್ಲಿ ರೋಮನ್ ಶೈಲಿಯ ಶಿಲ್ಪಗಳನ್ನು ಕಾಣಬಹುದು. ಇದೊಂದು ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಲಾಗಿದೆ.


--
ವಿಶಾಲವಾದ ಮುಖ್ಯ ಹಜಾರವನ್ನು ಪ್ರವೇಶಿಸಿದರೆ ನಮಗೆ ಟಿಕೆಟ್ ಕೌಂಟರ್ ಸಿಗುತ್ತದೆ. ಅಲ್ಲಿ ಟಿಕೆಟ್ ಪಡೆದುಕೊಂಡು ಒಳಗೆ ಹೋಗಬೇಕು. ಟಿಕೆಟ್ ಜೊತೆಯಲ್ಲೇ ಒಂದು ಉಚಿತ ಗೈಡ್ ಸಿಗುತ್ತದೆ. ಇದೂ ನಮ್ಮ ಟಿವಿ ರಿಮೋಟ್ ನಂತೆ ಇದ್ದು, ಅಲ್ಲಿ ಇರಿಸಲಾದ ಕೃತಿಗಳ ಎದುರು ಇರುವ ಸಂಖ್ಯೆಯನ್ನು ಇದರಲ್ಲಿ ಅದುಮಿದರೆ ನಮಗೆ ಸೊಗಸಾದ ಇಂಗ್ಲಿಷ್ ಬಾಷೆಯಲ್ಲಿ ವಿವರಣೆ ದೊರಕುತ್ತದೆ. ಇದಕ್ಕೆ ಹೆಸರು ಆಡಿಯೋ ಗೈಡ್ ಅಂತ. ಮುಖ್ಯ ಸ್ನಾನಗೃಹವಲ್ಲದೆ ಅದರ ಅಕ್ಕಪಕ್ಕದಲ್ಲೂ ಇನ್ನೆರಡು ಸ್ನಾನಗೃಹಗಳಿವೆ ಅದನ್ನು ನೋಡಿಕೊಂಡು ಮುಂದುವರೆದರೆ ನಮಗೆ ಮ್ಯೂಸಿಯಂ ಸಿಗುತ್ತದೆ ಅಲ್ಲಿ ಉತ್ಖನನ ಸಮಯದಲ್ಲಿ ಸಿಕ್ಕಿರುವ ವಸ್ತುಗಳನ್ನು ಪ್ರದರ್ಶಿಸಿರುತ್ತಾರೆ. ಒಂದೆಡೆಯಲ್ಲಿ ಸ್ವಲ್ಪ ಕೆಳಗಡೆ ಮಣ್ಣಿನಡಿಯಲ್ಲಿ ಹೂತು ಹೋಗಿರುವ ಮಿನರ್ವಾ ದೇವಿಯ ದೇವಾಲಯದ ಕಂಭಗಳೂ ಅಡಿಪಾಯ ಮತ್ತು ಬಲಿ ಪೀಟ ಕಾಣಿಸುತ್ತದೆ.



ಒಂದೆಡೆ ಭೂಮಿಯ ಒಳಗಿಂದ  ಉಕ್ಕಿ ಬರುವ ಬಿಸಿನೀರಿನ ಬುಗ್ಗೆ ಹರಿದು ಬರುವುದು ಕಾಣುತ್ತದೆ. ಈ ನೀರು ಸುಮಾರು 48 ಡಿಗ್ರಿ ಬಿಸಿ ಇರುತ್ತದಂತೆ. ಇದರಿಂದ ಹೊಗೆಯೇಳುವುದನ್ನು ಕಾಣಬಹುದು. ಇದು  ಸೀದಾ ಸ್ನಾನದ ಕೊಳಗಳಿಗೆ ಹೋಗಿ ಬೀಳುತ್ತದೆ. ಭೂಮಿಯ ಕೆಳಗಡೆ ಸುಪ್ತವಾಗಿರುವ ಅಗ್ನಿಪರ್ವತವಿರುವ ಕಾರಣ ಸುತ್ತಲಿನ ನೀರು ಬಿಸಿಯಾಗಿ ಹೊರ ಚಿಮ್ಮುತ್ತದೆ. ಇದರೊಂದಿಗೆ ಗಂಧಕ, ಸೋಡಿಯಂ ಮತ್ತಿತರ ಖನಿಜಗಳೂ ಬೆರೆತರೆ ಆಗ ಔಷದೀಯ ಗುಣ ಹೊಂದುತ್ತದೆ.
ಬಾತ್ ನಿಂದ ಹೊರಬಂದರೆ ಅದರ ಆವರಣದಲ್ಲೇ ಒಂದು ಸುಂದರ ಕೆಥೆಡ್ರಲ್ ಕಾಣಬಹುದು. ಇದಕ್ಕೆ ಬಾತ್ ಅಬ್ಬಿ ಎಂತ ಹೆಸರು. ಸೈಂಟ್ ಪೀಟರ್ ಮತ್ತು ಸೈಂಟ್ ಪೌಲ್ ರ ಮಂದಿರವಾಗಿದ್ದು ಸುಮಾರು ಕ್ರಿಸ್ತ ಶಕ 6 ನೆ ಶತಮಾನದಲ್ಲಿ ಕಟ್ಟಿದ್ದಂತೆ. ತರುವಾಯ ಕ್ರಮವಾಗಿ 12 ಮತ್ತು 16 ನೆ ಶತಮಾನಗಳಲ್ಲಿ  ಮಾರ್ಪಾಟು ಹೊಂದಿದೆಯಂತೆ.



ಬಾತ್ ಒಂದು ಪ್ರಮುಖವಾದ ಪ್ರವಾಸಿ ಸ್ಥಳವಾದ್ದರಿಂದ ಇಲ್ಲಿ ಯಾವಾಗಲೂ ಪ್ರವಾಸಿಗರು ಗಿಜಿಗುಟ್ಟುತ್ತಾರೆ. ಎಲ್ಲಾ ದೇಶಗಳ ಜನರನ್ನು ಇಲ್ಲಿ ಕಾಣಬಹುದು. ಇಲ್ಲಿನ ಸುತ್ತು ಮುತ್ತು ಇರುವ ಎಲ್ಲಾ ಕಟ್ಟಡಗಳೂ ಕಲಾತ್ಮಕವಾಗಿದ್ದು 17 ನೆ  ಶತಮಾನದವುಗಳಾಗಿರುತ್ತವೆ. ಎಲ್ಲಾ  ಕಛೇರಿಗಳು ಮತ್ತು ಉಪಹಾರ ಮಂದಿರಗಳು ಎಲ್ಲವೂ ಹಳೆಯ ಕಾಲದವುಗಳೇ. ಹಾಗಾಗಿ ಇಲ್ಲಿಗೆ ಬಂದಾಗ, ಹಳೆಯ ಕಾಲಕ್ಕೇನೇ ಬಂದಹಾಗೆನಿಸುತ್ತದೆ.



ಇಲ್ಲಿನ ಮ್ಯೂಸಿಯಂ ಮತ್ತು ಸಿಟಿ ಕೌನ್ಸಿಲ್ ಗಳು ಇಲ್ಲಿ ಕ್ರಿಸೆಂಟ್ ಎಂಬ ಅರ್ಧ ಚಂದ್ರಾಕೃತಿಯ ಬೃಹತ್ ಕಟ್ಟಡದಲ್ಲಿ ಇದೆ. ಇದೂ ಸಹಾ ರೋಮನ್ ಶೈಲಿಯಲ್ಲೇ ಇದೆ. ಇದರ ಎದುರುಗಡೆ ದೊಡ್ಡ ಹುಲ್ಲು ಹಾಸು ಮತ್ತು ಹೂವಿನ ಮಡಿಗಳು ಇದ್ದು ಬಹಳ ಸುಂದರವಾಗಿದೆ.




ಈ ಬಾತ್ ಪ್ರದೇಶವೆಲ್ಲಾ ಸುಂದರವಾದ ಹೂ ದೋಟದಿಂದ ಸುತ್ತುವರೆದಿದ್ದು, ರಾಯಲ್ ವಿಕ್ಟೋರಿಯಾ ಪಾರ್ಕ್ ಎಂದು ಹೆಸರುವಾಸಿಯಾಗಿದೆ.



ಬಾತ್ ಗೆ ಸಿಟಿಯ ಸ್ಥಾನಮಾನ ಕೊಟ್ಟಿದ್ದಾರೆ. ಪಕ್ಕದಲ್ಲಿ ಸೊಮರ್ಸೆಟ್ ಕೌಂಟಿ ಇದ್ದು ಬ್ರಿಸ್ಟಲ್ ನಿಂದ  ಸುಮಾರು 13 ಮೈಲು ದೂರದಲ್ಲಿದೆ.ನಾವು ಇಲ್ಲೆಲ್ಲಾ ಸುತ್ತಾಡಿ ಊಟ ಮಾಡಿಕೊಂಡು ಮುಂದಕ್ಕೆ ಚೆಡ್ಡರ್ ಕೇವ್ಸ್ ಎಂಬಲ್ಲಿಗೆ ಬಂದೆವು. ಚೆಡ್ದರ್ ಚೀಸ್ ತುಂಬಾ ಪ್ರಸಿದ್ಧ. ಇದೂ ಸುಮಾರು 20  ಮೈಲು ದೂರದಲ್ಲಿದೆ.
ಇಲ್ಲಿನ ವೈಶಿಷ್ಟ್ಯವೇನೆಂದರೆ ಎರಡೂ ಕಡೆ ಲಂಭವಾಗಿರುವ ಶಿಲಾಮಯ ಕಣಿವೆ ಪ್ರದೇಶದಲ್ಲಿ ಅಲ್ಲಲ್ಲಿ ಹಲವಾರು  ಗುಹೆಗಳಿವೆ. ಅದರಲ್ಲಿ ಒಂದು ಗುಹೆಯಂತು ತುಂಬಾ ಉದ್ದವಾಗಿದ್ದು ಸುಮಾರು ಅರ್ಧ ಮೈಲು ದೂರ ಸಾಗಿದೆ. ಇದಕ್ಕೆ ಗಫ್ಫ್ ಕೇವ್ ಎಂದು ಹೆಸರು.



ಇಲ್ಲಿನ ಹವೆ ತುಂಬಾ ತಂಪಾಗಿದ್ದು ಬೆಟ್ಟದ ಮೇಲೆ ಕಾಡು ಬೆಳೆದಿದೆ, ಅಲ್ಲಲ್ಲಿ ಬೆಟ್ಟದ ಆಡುಗಳು ಮೇಯುತ್ತಿರುವುದನ್ನು ಕಾಣಬಹುದು. ಇದೊಂದು ರಕ್ಷಿತ  ಪ್ರದೇಶ ಮತ್ತು ಇಲ್ಲಿ ಚಾರಣ ಹಾಗೂ ಪರ್ವತಾರೋಹಣ ಶಿಕ್ಷಣಕ್ಕೆ ಅವಕಾಶವಿದೆ. ನಾವು ಗಫ್ಫ್ ಕೇವ್ ನ ಎದುರುಗಡೆ ಕಾರು ನಿಲ್ಲಿಸಿ ಟಿಕೆಟ್ ಪಡಕೊಳ್ಳಲು ಹೋದೆವು.



ಟಿಕೆಟ್ ಪಡಕೊಂಡು ಅಲ್ಲಿಂದಲೇ ಗುಹೆಯ ಒಳಗಡೆ ಹೋಗಬೇಕು. ಹೋಗುವಾಗ ಆಡಿಯೋ ಗೈಡು ಸಹಾ ಕೊಡುತ್ತಾರೆ. ಇದರಿಂದ ನಮಗೆ ಬೇಕಾದಲ್ಲಿ ನಿಂತು ವಿವರಣೆ ಕೇಳಬಹುದು. ಗುಹೆಯ ಒಳಗಡೆ ತಂಪಾಗಿದ್ದು ಯಾವಾಗಲೂ 11 ಡಿಗ್ರಿ ಇರುವಂತೆ ನೋಡಿಕೊಳ್ಳುತ್ತಾರೆ. ಹಿತಕರವಾದ ಮಂದ ಬೆಳಕು ಅಲ್ಲಲ್ಲಿ ಇರಿಸಿದ್ದರಿಂದ ಗುಹೆಯು ಇನ್ನೂ ಸುಂದರವಾಗಿ ಕಾಣುತ್ತದೆ.





ನೀರಿನಲ್ಲಿ ಕರಗಿರುವ ಖನಿಜಗಳು ಕಾಲಕ್ರಮೇಣ ಮೊಳೆಯುತ್ತಾ ಚಿತ್ರ ವಿಚಿತ್ರ ರೂಪವನ್ನು ತಾಳುತ್ತದೆ. ಇದಕ್ಕೆ ಸ್ಟಾಲಕಾಯ್ಟ್ ಮತ್ತು ಸ್ಟಾಲಗ್ಮಯ್ಟ್  ಎಂದು ಹೆಸರು. ಇದರಲ್ಲಿ ಬೆರೆತಿರುವ ಖನಿಜಗಳನ್ನು ಅವಲಂಬಿಸಿಕೊಂಡು ಇವುಗಳ ವರ್ಣವೂ ಬೇರೆ ಬೇರೆಯಾಗಿ ತೋರುತ್ತದೆ. ಇದರ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳಿಂದ ಪ್ರತಿಫಲಿತವಾಗುವ ಬೆಳಕಿನ ಲಾಸ್ಯವೇ ಬಹಳ ಸೊಗಸು.



ಇಲ್ಲಿನ ವಿಚಿತ್ರ  ರಚನೆಗಳು ನೋಡುಗನ ಕಲ್ಪನೆಗೆ ಅನುಗುಣವಾಗಿರುತ್ತದೆ. ಮಾನವನ ಮಿದುಳಿನ ಆಕೃತಿಯನ್ನು ಹೋಲುವ ರಚನೆಗಳಿವೆ.






ಹೀಗೇ ಮುಂದುವರಿಯುತ್ತಾ ಹೋದಂತೆ ಪಕ್ಕದಲ್ಲಿ ಮೇಲ್ಗಡೆ ಎಲ್ಲಾ ಬೇರೆ ಬೇರೆ ಆಕೃತಿಗಳನ್ನು ನೋಡಿದೆವು. ಕೊನೆಗೊಮ್ಮೆ ಗುಹೆಯ ಕೊನೆಯ ಭಾಗಕ್ಕೆ ಬಂದೆವು. ಇಲ್ಲಿ ಗುಹೆಯು ಮೇಲ್ಮುಖವಾಗಿ ಸಾಗಿದೆ. ಇದೇ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿ ಗುಹೆಯು ಸುಮಾರು 50 ಅಡಿಗಳಷ್ಟು ಮೇಲೆ ಸಾಗಿದೆ ಇಲ್ಲಿಂದ ಮೇಲೆ ನೋಡುವಾಗ ನಾವು ಬೇರೆಯೇ ಒಂದು ಲೋಕವನ್ನು ವೀಕ್ಷಿಸುತಿದ್ದೇವೆ ಎಂಬ ಅನುಭವವಾಗುತ್ತದೆ. ಇದನ್ನು ಡೈಮಂಡ್ ಅಂತ ಹೆಸರಿಸಿದ್ದಾರೆ. ಸೊಲೊಮನ್ ಟ್ರೆಶರ್ ಎಂತಲೂ ಕರೆಯುತ್ತಾರೆ. ನಿಜವಾಗಿಯೂ ಇದು ಸೊಲೊಮನ್ ದೊರೆಯ ಗುಪ್ತ ನಿಧಿ ಇರಿಸಿರುವ ಜಾಗವಾಗಿರಬೇಕು. ಅಷ್ಟು ವಿಚಿತ್ರ ಹಾಗೂ ನಿಗೂಢವಾಗಿದೆ.



ಇಲ್ಲಿಂದ  ಹಿಂತಿರುಗಿ ಬಂದೆವು. ಗುಹೆಯ ವೀಕ್ಷಣಾ ಸಮಯವೂ ಮುಗಿಯುತ್ತಾ ಬಂತು. ಸಂಜೆ 5 ಗಂಟೆಗೆ ಮುಚ್ಚುತ್ತಾರೆ. ಕಾವಲುಗಾರರು ಬಂದು ಎಲ್ಲಾ ಕಡೆ ಯಾರಾದರೂ ಇನ್ನೂ ಒಳಗಡೆ ಇದ್ದಾರೋ ಎಂದು ನೋಡಿ ಎಲ್ಲಾ ಲೈಟುಗಳನ್ನು ಆರಿಸಿ ಬಿಡುತ್ತಾರೆ. ನಾವು ಅವರೊಂದಿಗೆ ಮಾತಾಡುತ್ತಾ ಹಲವು ವಿವರಗಳನ್ನು ಕೇಳಿ ತಿಳಿದುಕೊಂಡೆವು. ನಾವು ಪಡಕೊಂಡ ಟಿಕೆಟ್ ನಲ್ಲಿ ಇನ್ನೂ ಕೆಲವು ಕಾರ್ಯಕ್ರಮಗಳು ಬಾಕಿ ಇದ್ದವು. ಅದೆಂದರೆ ಬೇರೆ ಕೆಲವು ಗುಹೆಗಳನ್ನು ನೋಡುವುದು, ಬೆಟ್ಟದಮೇಲೆ ಹತ್ತಿ, ನಡೆದಾಡುವುದು, ಕಣಿವೆಗಳಲ್ಲಿ, ಮಾಡು ಇಲ್ಲದ ಬಸ್ಸಿನಲ್ಲಿ ಒಂದು ಸುತ್ತು ವಿಹಾರ ಮಾಡುವುದು ಇತ್ಯಾದಿ. ಆದರೆ ಸಮಯದ ಅಭಾವದಿಂದ ನಮಗೆ ಹೋಗಲಾಗಲಿಲ್ಲ. ಆದರೂ ಚಿಂತೆಯಿಲ್ಲ ಈ ಟಿಕೇಟು ಇನ್ನೂ 10 ವರ್ಷದವರೆಗೆ ಊರ್ಜಿತದಲ್ಲಿರುತ್ತದೆ ಎಂದು ಟಿಕೆಟ್ ನಲ್ಲೆ ಬರೆದಿದ್ದಾರೆ. ಆದ್ದರಿಂದ ಇನ್ನೊಂದು ಸಲ ಅಲ್ಲಿಗೆ ಹೋದಾಗ ಈ ಟಿಕೇಟು ಉಪಯೋಗಕ್ಕೆ ಬರಬಹುದು!
ಇದೇ ತರಹದ ಗುಹೆಗಳನ್ನು ನಾವು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೇಲಂ ಎಂಬಲ್ಲಿ ನೋಡಿದ್ದೆವು. ಹೆಚ್ಚು ಕಮ್ಮಿ ಎರಡೂ ಗುಹೆಗಳು ಒಂದೇ ತೆರನಾಗಿವೆ.    


 

 
                  

Saturday, 22 May 2010

Bristol City

ನಾವು ಈಸಲ ಇಂಗ್ಲೆಂಡ್ ನ ಕೊರ್ನ್ ವಾಲ್ ನಲ್ಲಿರುವ ನಮ್ಮ ಮಗಳ ಮನೆಗೆ ಬಂದಿರುವ ಸಂದರ್ಭದಲ್ಲಿ ಬ್ರಿಸ್ಟಲ್ ಸಿಟಿ ಯನ್ನು ನೋಡುವ ಅವಕಾಶ ಸಿಕ್ಕಿತು. ನಾವು, ನಮ್ಮ ಮಗಳು,ಅಳಿಯಂದಿರು ಮತ್ತು ಅವರ ಪುಟ್ಟ ಮಗ ಇಷ್ಟು ಜನ ಕಾರಿನಲ್ಲಿ ಸ್ಟಿಥಿಯನ್ಸ್ ನಿಂದ ಹೊರಟೆವು. ಇಲ್ಲಿಂದ ಬ್ರಿಸ್ಟಲ್ ಗೆ180 ಮೈಲು ದೂರ. ಸುಮಾರು 4 ಗಂಟೆಗಳ  ಪ್ರಯಾಣ. ಇಲ್ಲಿಂದ ಟ್ರುರೋ-ಬೋಡ್ಮಿನ್ ಮಾರ್ಗವಾಗಿ ಲಾನ್ ಸ್ಟನ್, ಡೆವೊನ್, ಲಿಸ್ಕಾರ್ಡ್ ಮೊದಲಾದ ಊರುಗಳನ್ನು ದಾಟಿ ಬ್ರಿಸ್ಟಲ್ ತಲುಪಿದೆವು.




ನಮಗೆ ಉಳಕೊಳ್ಳಲು ಪ್ರೀಮಿಯರ್ ಇನ್ ಹೋಟೆಲ್ ನಲ್ಲಿ ರೂಮು ಬುಕ್ ಮಾಡಿದ್ದೆವು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಕಾಫಿ ಕುಡಿದು ತಿರುಗಾಡಲು ಹೊರಟೆವು. ಬ್ರಿಸ್ಟಲ್ ಎಂಬುದು ದೊಡ್ಡ ಊರು. ಹಳೆಯ ಕಾಲದ ಕಟ್ಟಡಗಳೂ ವರ್ತಮಾನ ಕಾಲದ ಗಗನ ಚುಂಬಿ ಕಟ್ಟಡಗಳೂ ಇಲ್ಲಿ ಹಿತ ಮಿತವಾಗಿ ಬೆರೆತಿವೆ.
ರಸ್ತೆಗಳು, ಅಂಗಡಿಗಳು ಎಲ್ಲಾ ಶುಚಿಯಾಗಿ ಒಪ್ಪವಾಗಿ ಕಾಣುತ್ತವೆ.




 
ಬ್ರಿಸ್ಟಲ್ ನಲ್ಲಿ ತುಂಬಾ ಕಾಲೇಜುಗಳು ಮತ್ತು ಯುನಿವರ್ಸಿಟಿ ಇರುವುದರಿಂದ ಇಲ್ಲಿ ಬಹಳ ಮಂದಿ ವಿದ್ಯಾರ್ಥಿಗಳನ್ನು ಕಾಣಬಹುದು. ಹೆಚ್ಚಾಗಿ ಭಾರತ, ಚೀನಾ, ಮತ್ತು ಆಫ್ರಿಕಾ ದೇಶಗಳ ವಿದ್ಯಾರ್ಥಿಗಳೇ ಎಲ್ಲಾ ಕಡೆ ಕಂಡು ಬರುತ್ತಾರೆ. ಅದಕ್ಕನುಗುಣವಾಗಿ ಅವರಿಗೆ ಆವಶ್ಯಕವಾದ ಹಾಸ್ಟೆಲ್ ಗಳು ಹೋಟೆಲ್ ಗಳು ದೊಡ್ಡ ದೊಡ್ಡ ಮಾಲ್ ಗಳು ಇಲ್ಲಿವೆ. ಇಲ್ಲಿನ ಅತಿ ದೊಡ್ಡ ಮಾಲ್ ಎಂದರೆ ಕೋಬಾಟ್ ಸರ್ಕಸ್. ಇದೊಂದು ದೊಡ್ಡ ಸಂಕೀರ್ಣ ಇದರಲ್ಲಿ ಅತ್ಯಾಧುನಿಕ ಫ್ಯಾಶನ್ನಿನ ಹಲವಾರು ದೊಡ್ಡ ಮಳಿಗೆಗಳಿವೆ. ಹೋಟೆಲ್ ಗಳು, ಸಿನೆಮಾ ಮಂದಿರಗಳು ಎಲ್ಲಾ ಇವೆ.




ಇಲ್ಲಿ  ನಾವು ತುಂಬಾ ಹೊತ್ತು ತಿರುಗಾಡಿದೆವು, ಹೆಚ್ಚಿನ ಎಲ್ಲಾ ಮಳಿಗೆಗಳ ಒಳಗಡೆಗೆ ಹೋಗಿ ಶಾಪಿಂಗ್ ಮಾಡಿದೆವು.

 

ತಿರುಗಾಡಿ ಸುಸ್ತಾದಾಗ  ಒಂದು ರೆಸ್ಟುರಾ ಗೆ ಹೋಗಿ ತಿಂಡಿ, ಐಸ್ ಕ್ರೀಂ ತಿಂದೆವು.  ಮರುದಿನ ಇನ್ನೊಂದು ದಿಕ್ಕಿನಲ್ಲಿ ಊರು ನೋಡಲು ಹೋದೆವು. ಇಲ್ಲಿನ ಸಿಟಿ ಕೌನ್ಸಿಲ್ ಕಟ್ಟಡ ಮತ್ತು ಅದರ ಸುತ್ತಲ ಪರಿಸರ ಬಹಳ ಸೊಗಸಾಗಿದೆ.




ಅರ್ಧ ಚಂದ್ರಾಕೃತಿಯಲ್ಲಿ  ಇದನ್ನು ಕಟ್ಟಿದ್ದಾರೆ ಎದುರುಗಡೆ ನೀರಿನ ಕೊಳವಿದೆ, ಎದುರುಗಡೆ ದೊಡ್ಡ ಹುಲ್ಲುಗಾವಲು, ಹೂವಿನ ಮಡಿಗಳು ಎಲ್ಲಾ ಬಹಳ ಸುಂದರವಾಗಿದೆ. ಅಲ್ಲಲ್ಲಿ ಕುಳಿತುಕೊಳ್ಳಲು ಆಕರ್ಷಕ ಬೆಂಚುಗಳಿವೆ. ಅಲ್ಲೆಲ್ಲ ಸುತ್ತಾಡಿ ದೆವು. ದೂರದಲ್ಲಿ ಒಂದು ಎತ್ತರದ ಪುತ್ತಳಿ ಕಾಣಿಸಿತು, ಯಾರದ್ದಿರಬಹುದು ಎಂಬ ಕುತೂಹಲದಿಂದ ಹೋಗಿ ನೋಡಿದರೆ ನಮಗೆ ಆಶ್ಚರ್ಯವಾಯಿತು. ಭಾರತದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರ ಆಕರ್ಷಕ ಪುತ್ತಳಿ ಅದು! ಇದೇ  ರೀತಿ ಇಲ್ಲಿನ ದೊಡ್ಡ ವಸ್ತು ಸಂಗ್ರಹಾಲಯದಲ್ಲಿ ಸಹಾ ಇವರ ಬಹಳ ದೊಡ್ಡ ಪೆಯಿಂಟಿಂಗ್ ಇರಿಸಿದ್ದಾರೆ.




ಇಲ್ಲೇ ಪಕ್ಕದಲ್ಲಿ ಒಂದು ದೊಡ್ಡ ಕೆಥೆಡ್ರಲ್ ಇದೆ. ಒಳಗಡೆ ಯಾರೂ ಇರಲಿಲ್ಲ. ಬಹಳ ಸುಂದರವಾದ ಕಟ್ಟಡ, ಒಳಗಡೆಯ ವಿನ್ಯಾಸ, ಕಂಬಗಳು, ಬಣ್ಣ ಬಣ್ಣದ ಗಾಜಿನಿಂದ ರಚಿಸಿದ ಕಿಡಕಿಗಳು, ಆಸನಗಳು, ಕಟಾಂಜನ ಎಲ್ಲಾ ಸುದರವಾಗಿತ್ತು.




ಆಲ್ಲಿಂದ ಸ್ವಲ್ಪ ದೂರ ನಡೆದರೆ ಬ್ರಿಸ್ಟಲ್ ಯುನಿವರ್ಸಿಟಿ ಕಟ್ಟಡ ಸಿಗುತ್ತದೆ. ಇದರ ವೈಶಿಷ್ಟ್ಯವೇನೆಂದರೆ ಇದು ದೊಡ್ಡ ಕೆಥೆಡ್ರಲ್ (Cathedral)  ನಂತೆ ಕಾಣುತ್ತದೆ. ಹತ್ತಿರ ಹೋದಾಗಲೇ ತಿಳಿಯುವುದು ಇದು ಯುನಿವರ್ಸಿಟಿ ಅಂತ.




ಇದರ ಪಕ್ಕದಲ್ಲೇ ಬ್ರಿಸ್ಟಲ್ ಸಿಟಿ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಈಜಿಪ್ಟ್ ನ ಮಮ್ಮಿಗಳು ಅಲ್ಲಿನ ಸಂಸ್ಕೃತಿ ಯನ್ನು ಬಿಂಬಿಸುವ ಹಲವು ವಸ್ತುಗಳು ಇವೆ. ಚೀನಾ ದೇಶದ ಪಿಂಗಾಣಿ ವಸ್ತುಗಳು, ಹಲವಾರು ಪೆಯಿಂಟಿಂಗ್ ಗಳು, ಡೈನೋಸಾರ್ ಪಳೆಯುಳಿಕೆಗಳು, ಪ್ರಾಣಿ ಪಕ್ಷಿಗಳನ್ನು ಸ್ಟಫ್ ಮಾಡಿ ಇರಿಸಿದ ಕೃತಿಗಳು, ಮಿನರಲ್ ಗಳು, ಒಂದು ಹಳೆಯ ಕಾಲದ ವಿಮಾನದ ಮಾಡೆಲ್ ಎಲ್ಲಾ ಇರಿಸಿದ್ದಾರೆ. ನೋಡಲು ಚೆನ್ನಾಗಿತ್ತು.
ಮುಂದೆ ನಾವು ಒಂದು ದೊಡ್ಡ ಕಾರಂಜಿಗಳಿಂದ ಅಲಂಕೃತಗೊಂಡ ಕಟ್ಟಡದ ಬಳಿಗೆ ಬಂದೆವು.




ಇದೂ ಒಂದು ಕಾಲೇಜು! ಬ್ರಿಟನ್ನಿನ ದೊರೆ 7 ನೆ ಎಡ್ವರ್ಡ್ ನ ಹೆಸರಲ್ಲಿರುವ ಈ ಆರ್ಟ್ ಕಾಲೇಜು ಮತ್ತು ಇಲ್ಲಿ ನೀರನ್ನು ಬಹಳ ದೂರ ಚಿಮ್ಮಿಸುವ ಕಾರಂಜಿಗಳು, ಎಡ್ವರ್ಡ್ ದೊರೆಯ ಗಂಭೀರ ನಿಲುವಿನ ಮೂರ್ತಿ ನೋಡಲು  ಬಹಳ ಚೆನ್ನಾಗಿದೆ. ಬಳಪದ ಕಲ್ಲಿನಲ್ಲಿ ಕೆತ್ತಿದ ಈ ಕಲಾಕೃತಿಗಳು ಸುಂದರವಾಗಿವೆ.
ಬ್ರಿಸ್ಟಲ್ ಪಟ್ಟಣದ ಮಧ್ಯದಲ್ಲೇ ಹರಿಯುವ ಎವೊನ್ ನದಿಯಲ್ಲಿ ತುಂಬಾ ಸಣ್ಣ ಪುಟ್ಟ ನಾವೆಗಳು  ಚಲಿಸುತ್ತಿರುತ್ತವೆ. ಎವೊನ್ ನದಿಯು ಇಲ್ಲಿಂದ ಹರಿದು ಪಕ್ಕದಲ್ಲೇ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಈ ನದಿಯ ಮೇಲೆ ಅತಿ ಎತ್ತರದಲ್ಲಿ ತೂಗು ಸೇತುವೆ ನಿರ್ಮಿಸಿದ್ದಾರೆ. ಬ್ರಿಸ್ಟಲ್ ತೀರವು ಕೊಲ್ಲಿಯಂತಿದ್ದು, ಇಲ್ಲಿಂದ ನೇರ ಕಾರ್ಡಿಫ್ ಎಂಬ ಬೃಹತ್ ಪಟ್ಟಣಕ್ಕೆ ಸಮುದ್ರದ ಮೇಲೆ ಸೇತುವೆ ನಿರ್ಮಿಸಿದ್ದಾರೆ.
ಬ್ರಿಸ್ಟಲ್ ನಲ್ಲಿ ತುಂಬಾ ಭಾರತೀಯ, ನೇಪಾಳಿ ಹಾಗೂ ಬಾಂಗ್ಲಾದೇಶದ ಹೋಟೆಲ್ ಗಳಿವೆ. ಚೈನೀಸ್ ಹೋಟೆಲ್ ಗಳೂ ಇವೆ. ನಾವು, @ ಬ್ರಿಸ್ಟಲ್ ಎಂಬ ಜಾಗದಲ್ಲಿರುವ ಭಾರತೀಯ ಹೋಟೆಲ್ ನಲ್ಲಿ ರಾತ್ರಿ ಊಟ ಮಾಡಿದೆವು. ಇನ್ನೊಂದು ದಿನ ಚೈನೀಸ್ ಹೋಟೆಲ್ ಗೂ ಹೋಗಿದ್ದೆವು. ಇಲ್ಲಿನ ಆಹಾರವು ರುಚಿಕರವಾಗಿದ್ದು ನಮ್ಮ ನಾಲಗೆಗೆ ಸರಿಹೊಂದುವಷ್ಟು ಖಾರ ಇರುತ್ತದೆ. 
ಎರಡೂ ದಿನ ಬ್ರಿಸ್ಟಲ್ ನಲ್ಲಿದ್ದು  ನಾವು ಆಲ್ಲಿಂದ ಹೊರಟು ಬಾತ್ ಮತ್ತು ಚೆಡ್ದರ್
ಕೇವ್ ನೋಡಿಕೊಂಡು ಸ್ಟಿಥಿಯನ್ಸ್ ಬಂದು ಸೇರಿದೆವು.  
 

       



Thursday, 20 May 2010

Shivana Samudra

ಶಿವನಸಮುದ್ರ ನೋಡಲು ನಾನು ಮತ್ತು ಕಸ್ತೂರಿ ಆಗಸ್ಟ್ 26 ರಂದು KSRTC ಬಸ್ಸಿನಲ್ಲಿಹೊರಟೆವು. ಬೆಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ ಹೊರಟ ಬಸ್ಸು ಮೈಸೂರು ರಸ್ತೆ ಯಲ್ಲಿ  ಮದ್ದೂರಿಗೆ ಬಂದು ಸ್ವಲ್ಪ ಮುಂದೆ ಎಡಕ್ಕೆ ತಿರುಗಿ ಮಳವಳ್ಳಿ ಮಾರ್ಗವಾಗಿ ನೇರ ಶಿವನಸಮುದ್ರಕ್ಕೆ ಬಂದು ತಲುಪಿತು. ನಾವು ಬಸ್ಸಿಳಿದು ಅಲ್ಲೇ ಪಕ್ಕದ ಅಂಗಡಿಯಲ್ಲಿ ಮುಂದೆ ಯಾವಾಗ ಬಸ್ಸು ಬರುವುದು ಎಂದು ವಿಚಾರಿಸಿದೆವು. 'ಇಲ್ಲ ಸಾರ್ ಈ ಬಸ್ಸು ಈವಾಗ ಹೊರಟುಬಿಡುತ್ತದೆ, ಆಮೇಲೆ ಇಲ್ಲಿಗೆ ಬಸ್ಸು ಬರುವುದಿಲ್ಲ ಎಂದರು' ಹಾಗಾದರೆ ನಾವೇನು ಮಾಡುವುದು? ಎಂದು ಯೋಚಿಸುತ್ತಿರುವಾಗಲೇ ಅವರು ಹೇಳಿದರು 'ಇಲ್ಲಿಂದ ಬೇಕಾದಷ್ಟು ಅಟೋಗಳು, ಜೀಪು ಮುಂದೆ ಕ್ರಾಸ್ ನವರೆಗೆ ಹೋಗುತ್ತವೆ,ಆಲ್ಲಿಂದ ನಿಮಗೆ ಬೆಂಗಳೂರಿಗೆ ಬಸ್ಸು ಸಿಗುತ್ತವೆ'' ಎಂದು  ಹೇಳಿದಾಗ  ನಮ್ಮ ಆತಂಕ ಕಡಿಮೆ ಆಯಿತು. ನಾವು ಬಸ್ಸು ಇಳಿದದ್ದು ಒಂದು ದರ್ಗಾದ ಹತ್ತಿರ. ಅಲ್ಲಿ ವಿಶಾಲವಾದ ಕಾರ್ ಪಾರ್ಕ್ ಇದೆ, ಕೆಲವು ಅಂಗಡಿಗಳು ಸಹಾ  ಇವೆ . ಆದರೆ ಉತ್ತಮವಾದ ಹೋಟೆಲ್ ಇಲ್ಲ. ನಮ್ಮ ಎದುರಿಗೇನೆ  ಶಿವನಸಮುದ್ರ ಕಾಣಿಸುತ್ತಿದೆ. ಇದಕ್ಕೆ ಗಗನ ಚುಕ್ಕಿ ಜಲಪಾತ  ಎಂತಲೂ ಕರೆಯುತ್ತಾರೆ. ಬಹಳ ಸುಂದರ ಜಲಪಾತವಿದು.




ಬೆಂಗಳೂರಿನಿಂದ 139 Km.ದೂರದಲ್ಲಿ  ಮಂಡ್ಯ ಜಿಲ್ಲೆಯಲ್ಲಿರುವ ಈ ಜಲಪಾತವು ಸುಮಾರು 322 ಅಡಿ ಕೆಳಕ್ಕೆ ದುಮುಕುತ್ತದೆ. ಕರ್ನಾಟಕದ ಜೀವನದಿ ಕಾವೇರಿಯು ಇಲ್ಲಿ ತನ್ನ ಇನ್ನೊಂದು ರೂಪವನ್ನು ತೋರುತಿದ್ದಾಳೆ. ಸಕಲ ಒನಪು ವಯ್ಯಾರಗಳನ್ನು ಬಿಂಬಿಸುತಿದ್ದಾಳೆ. ಗಗನಚುಕ್ಕಿಗೆ ಸಂಗಾತಿಯಾಗಿ ಭರಚುಕ್ಕಿ ಎಂಬ ಜಲಪಾತವೂ ಇಲ್ಲಿಂದ 2 Km. ದೂರದಲ್ಲಿದೆ. ಗಗನಚುಕ್ಕಿಗೆ ಅಡ್ಡಲಾಗಿ ಎಡಗಡೆಯಿಂದ ಇನ್ನೊದು ಜಲಪಾತವೂ ಬಂದು ಅದೇ ಗುಂಡಿಗೆ ಬೀಳುತ್ತದೆ. ಆದರೆ ಅದರ ಪೂರ್ಣ ಸ್ವರೂಪವನ್ನು ನೋಡಲು ಜಲಪಾತದ ತಳಕ್ಕೆನೆ ಹೋಗಬೇಕು. ಮೇಲಿಂದ ಬರೇ ಮಂಜಿನ ರೂಪ ಮಾತ್ರ ಕಾಣಿಸುತ್ತದೆ.



ಇಲ್ಲೇ ಶಿಂಶಾ ಎಂಬಲ್ಲಿ ಜಲವಿದ್ಯುತ್ ಯೋಜನೆ ಯು 1902 ರಿಂದಲೇ ಆರಂಭವಾಗಿದೆ. ಮೈಸೂರು ಅರಸರ ಕಾಲದಿಂದಲೇ ಇಲ್ಲಿ ವಿದ್ಯುತ್ ಉತ್ಪಾದಿಸುತಿದ್ದಾರೆ! ಇಲ್ಲಿನ ವೀಕ್ಷಣಾ ಗೋಪುರದ ಮೇಲಿಂದ ಈ ಎರಡೂ ಜಲಪಾತ ನೋಡಲು ಸಾಧ್ಯ. ಸ್ವಂತ ವಾಹನದಲ್ಲಿ ಬಂದರೆ ಇಲ್ಲೆಲ್ಲಾ ನೋಡಿಬರಲು ಅನುಕೂಲವಾಗುತ್ತದೆ.
ಮನದಣಿಯೆ ಜಲಪಾತದ ಸೊಬಗನ್ನು ನೋಡಿ ಸಂತಸಪಟ್ಟು ಪಕ್ಕದಲ್ಲಿ ನೋಡಿದರೆ ಆಳವಾದ ಕಣಿವೆಯಲ್ಲಿ ಕಾವೇರಿ ಹರಿಯುವುದು ಕಾಣಿಸುತ್ತದೆ.




ಆದರೆ ಇಲ್ಲಿ ಬಹಳ ಹೊತ್ತು ನಿಲ್ಲಲಾಗುವುದಿಲ್ಲ, ಬಿಸಿಲು ಮತ್ತು ಕೆಳಗೆ ಎಸೆದಿರುವ ಕಸ ಕಡ್ಡಿಗಳ ದುರ್ವಾಸನೆ. ಆಲ್ಲಿಂದ ನಾವು ದರ್ಗಾದ ಪಕ್ಕದಲ್ಲಿರುವ ಕಾಲ್ದಾರಿಯಲ್ಲಿ ಇಳಿದೆವು. ಇಲ್ಲಿ ಬಹಳ ನಿಧಾನವಾಗಿ ಇಳಿಯಬೇಕು.ಕೆಳಗೆ ತಲಪುವಷ್ಟರಲ್ಲಿ ನಮಗೆ ಒಂದು ಸಮಾಧಿ ಎದುರಾಗುತ್ತದೆ. ಆಲ್ಲಿಂದ ಬಂಡೆಗಳನ್ನು ದಾಟಿ ನದಿ ಪಾತ್ರಕ್ಕೆ ಬಂದಾಗ ನಿಜವಾಗಲೂ ಸಾರ್ಥಕ ಎನಿಸುತ್ತದೆ. ಎಲ್ಲಿ ನೋಡಿದರೂ ನೀರು, ಜಲಪಾತಗಳು! ಚಿಕ್ಕದು, ಸ್ವಲ್ಪ ದೊಡ್ಡದು, ಪುಟ್ಟದು ಇತ್ಯಾದಿ.





ಜಾಗರೂಕತೆಯಿಂದ ಹೆಜ್ಜೆಯಿಟ್ಟು ಮುಂದೆ ಹೋಗಬೇಕು. ಬಂಡೆಗಳು ತುಂಬಾ ನುಣುಪು, ಜಾರುತ್ತದೆಮತ್ತು ನೀರಿನ ಸೆಳವು ಸಹಾ ತುಂಬಾ ಜಾಸ್ತಿ. ಆದರೂ ಇಲ್ಲಿ ತುಂಬಾ ಜನ ಪ್ರವಾಸಿಗರು ನೀರಿಗೆ ಇಳಿದು ಸ್ನಾನ ಮಾಡುತಿದ್ದರು.ಅಪಾಯದ ಅರಿವಿದ್ದು ಎಚ್ಚರಿಕೆಯಿಂದ ಇದ್ದರೆ ಸರಿ, ಇಲ್ಲವಾದರೆ ಶಿವನಸಮುದ್ರದಲ್ಲಿ ನೇರ ಶಿವನ ಪಾದ ಸೇರಬಹುದು. ಅಷ್ಟೊಂದು ನೀರಿನ ಸೆಳವು ಇದೆ.



ನಾವು ಅಲ್ಲೇ ಕುಳಿತುಕೊಂಡು ನೀರಿನ ಚೆಲ್ಲಾಟವನ್ನು ನೋಡುತ್ತಾ ಆನ್ದಿಒಸುತಿದ್ದೆವು.ಇಲ್ಲಿ ಬಿಸಿಲು ಜೋರಾಗಿದ್ದರು ಸಹಾ ನೀರಿನ ಹನಿಗಳ ತಂಪು ಮೈ ಎಲ್ಲಾ ಆವರಿಸಿರುತ್ತದೆ. ಹಾಗಾಗಿ ಏನು ಕಷ್ಟವಾಗುವುದಿಲ್ಲ. ಎಷ್ಟು ನೋಡಿದರೂ ಸಾಕೆನಿಸುವುದೇ ಇಲ್ಲ. ಬೇಕಾದಷ್ಟು ಫೋಟೋ ತೆಗೆದೆವು. ನೀರಿಗೆ ಕಾಲಿಳಿಸಿ ಹಾಯಾಗಿ ಕುಳಿತೆವು. ಅಲ್ಲೇ ನಾವು ತಂದ ತಿಂಡಿ ತಿಂದೆವು. ಬಂಡೆಗೆ ಒರಗಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು.
ಬೇರೆ ಬೇರೆ ಕೋನಗಳಿಂದ ಕಾವೇರಿಯ ಸೊಬಗನ್ನು ಸೆರೆ ಹಿಡಿದೆವು. ಮನೆಗೆ ಬಂದಮೇಲೆನೋಡಲು ವಿಡಿಯೋ ಸಹಾ ಮಾಡಿದೆವು.
ಇಲ್ಲಿದೆ ನೋಡಿ ಶಿವನಸಮುದ್ರದ ಕೆಲ ದೃಶ್ಯಗಳು!














ಸರಿ ಇನ್ನು ಹೊರಡೋಣ ಎಂದುಕೊಂಡು ಮೇಲೇರಿ ಬಂದೆವು. ನಮ್ಮ ಅದೃಷ್ಟಕ್ಕೆ ಒಂದು ಆಟೋರಿಕ್ಷಾ ರೆಡಿ ಆಗಿತ್ತು ಅದರಲ್ಲಿ ಹತ್ತಿ ಬಸ್ಸು ಬರುವ ಕ್ರಾಸ್ ಗೆ ಬಂದೆವು. ಸ್ವಲ್ಪಹೊತ್ತಲ್ಲೇ ಬಸ್ಸು ಬಂತು ನಾವು ಬೆಂಗಳೂರು ತಲುಪಿದೆವು. 



Wednesday, 19 May 2010

Kemmannu Gundi & Hebbe Falls

ಕೆಮ್ಮಣ್ಣುಗುಂಡಿ ನೋಡಬೇಕೆಂದು  ಆಸೆ ಪಟ್ಟು ವರ್ಷಗಳೇ ಕಳೆದವು, ಯಾಕೋ ಕೂಡಿ ಬರಲಿಲ್ಲ. ನಮ್ಮ ಪುಟ್ಟ ತಂಡ ನಮ್ಮ ಮನೆಯಲ್ಲಿ ಸೇರಿದಾಗ ಕೆಮ್ಮಣ್ಣುಗುಂಡಿಗೆ  ಹೋಗೋಣ ಎಂತ ನಿಶ್ಚಯ ಮಾಡಿದೆವು. ಅಂತೆಯೇ ಮುಂದಿನ ಶನಿವಾರ ಹೋಗೋಣ ಎಂದುಕೊಂಡೆವು. ತೋಟಗಾರಿಕಾ ಇಲಾಖೆಯಲ್ಲಿ ವಿಚಾರಿಸಿದಾಗ ನಮಗೆ ಕೆಮ್ಮಣ್ಣುಗುಂಡಿ ಗೆಸ್ಟ್ ಹೌಸ್ ನ ಫೋನ್ ನಂಬರ್ ಸಿಕ್ಕಿತು. ಅದೃಷ್ಟದಿಂದ ಅಲ್ಲಿ ಕಾಟೇಜು ಸಹಾ ಬುಕ್ ಆಯಿತು.
ನಾನು, ಕಸ್ತೂರಿ, ವೀಣಾ, ವಿಷು, ಅರು ಮತ್ತು ಶ್ರುತಿ, ಮಾರುತಿ ಸ್ವಿಫ್ಟ್ ನಲ್ಲಿ ಬೆಂಗಳೂರಿನಿಂದ  ಪ್ರಯಾಣ ಹೊರಟೆವು. ಬೆಳಗ್ಗೆ ಸುಮಾರು 8 ಗಂಟೆಗೆ ಒಂದೆಡೆ  ಕಾರು ನಿಲ್ಲಿಸಿ ಬೆಳಗ್ಗಿನ ಉಪಹಾರ ಮುಗಿಸಿದೆವು. ಮತ್ತೆ ಮುಂದುವರೆದು ಹಾಸನ ತಲುಪಿ ನಂತರ  ಚಿಕ್ಕಮಗಳೂರು ತಲಪುವಾಗ ಮಧ್ಯಾಹ್ನವಾಗಿತ್ತು. ಅಲ್ಲೇ ಊಟ ಎಲ್ಲಾ ಮುಗಿಸಿ ಪಕ್ಕದ ಮಾರ್ಕೆಟ್ ನಿಂದ ನಮಗೆ ಬೇಕಾದ ಹಣ್ಣು, ಸೌತೆಕಾಯಿ, ತರಕಾರಿ, ಬಿಸ್ಕೆಟ್, ಹಾಲು ಎಲ್ಲಾ ತೆಗೆದುಕೊಂಡೆವು. ನಮ್ಮಲ್ಲಿ ಪೋರ್ಟೆಬಲ್ ಗ್ಯಾಸ್ ಸ್ಟೋವ್ ಇದ್ದುದರಿಂದ ನಮಗೆ ಬೇಕಾದಾಗ ಕಾಫಿ ಊಟ ಎಲ್ಲಾ ನಾವೇ ಮಾಡಿಕೊಳ್ಳುತ್ತಿದ್ದೆವು.  
ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಮಾರ್ಗವಾಗಿ ನಾವು ಮುಂದುವರೆದೆವು. ಸುಮಾರು 28 Km  ದೂರ. ಆಗಲೇ ನಮಗೆ ಮಲೆನಾಡಿನ ಸೌಂದರ್ಯ ಗೋಚರವಾದದ್ದು. ಏರುದಾರಿಯ ಎರಡೂ ಪಕ್ಕದಲ್ಲೂ ಕಾಡಿನ ಸೊಬಗು, ಅಲ್ಲಲ್ಲಿ ಸಿಗುವ ಪುಟ್ಟ ಜಲಪಾತಗಳು, ನಿರ್ಜನ ದಾರಿ ಎಲ್ಲಾ ಒಂದು ಬಗೆಯ ಬೇರೆಯೇ ಅನುಭವ ಕೊಡುತ್ತಿತ್ತು.



 ರಸ್ತೆಯ ಎಡಕ್ಕೆ ಮುಳ್ಳಯ್ಯನ ಗಿರಿಗೆ ದಾರಿ, ಎಂಬ ಕೈ ಫಲಕ ಕಾಣಿಸಿತು. ಆಲ್ಲಿಂದ ಮುಂದೆ ತುಂಬಾ ಏರು ದಾರಿ. ರಸ್ತೆಯು ತುಂಬಾ ಕೆಟ್ಟು ಹೋಗಿತ್ತು, ಅದಕ್ಕೆ ಡಾಮರು ಸೋಕಿಸದೆ ಯಾವ ಕಾಲವಾಗಿತ್ತೋ ಏನೋ? ಅಲ್ಲಿ ಯಾವ ವಾಹನಗಳೂ   ಸಂಚರಿಸುತ್ತಿರಲಿಲ್ಲ.



ಸ್ವಲ್ಪ ದೂರದಲ್ಲಿ ದಾರಿ ಕವಲೊಡೆಯುತ್ತದೆ, ಒಂದುದಾರಿ ಕೆಮ್ಮಣ್ಣುಗುಂಡಿಗೆ, ಇನ್ನೊಂದು ಬಾಬಾ ಬುಡನ್ ಗಿರಿಗೆ. ನಾವು ಬಾಬಾ ಬುಡನ್ ಗಿರಿ ನೋಡಲು ಮುಂದುವರೆದೆವು. ಅಲ್ಲಿಗೆ ತಲುಪಿದಾಗ ನಮಗೆ ಪೋಲಿಸರಿಂದ ಸ್ವಾಗತ! ಎಲ್ಲಿಂದ ಬಂದದ್ದು? ಯಾಕೆ ಬಂದಿರಿ? ಎಂದೆಲ್ಲ ಕುಶಲ ವಿಚಾರಿಸಿದರು. ಆಲ್ಲಿಂದ ಮುಂದೆ ಬೆಟ್ಟದ ತುದಿ ತಲಪಿದೆವು. ಆಹಾ ಎಷ್ಟು ಸುಂದರ ಸ್ಥಳ. ಬಾಬಾಬುಡನ್ ಗಿರಿ ಶ್ರೇಣಿಯು ಪಶ್ಚಿಮ ಘಟ್ಟಗಳ ಚಂದ್ರ ಧ್ರೋಣ ಪರ್ವತ ಮಾಲೆಯಲ್ಲಿ ಇದೆ. ಸಮುದ್ರ ಪಾತಳಿಯಿಂದ ಸುಮಾರು 1434 ಮೀಟರು ಎತ್ತರದಲ್ಲಿದ್ದು ಕೆಮ್ಮಣ್ಣುಗುಂಡಿ ಗಿರಿಧಾಮವು ಕರ್ನಾಟಕದ ಊಟಿ ಎಂದು ಕರೆಸಿಕೊಳ್ಳುತ್ತದೆ. ಹಿಂದೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಿಯವಾದ ಬೇಸಿಗೆ ತಾಣವಾಗಿತ್ತು.


ಇಲ್ಲಿಂದ ತುಂಬಾ ದೊರದವರೆಗೆ ಹಲವು ಹಳ್ಳಿಗಳು ಹೊಲ ಗದ್ದೆಗಳು ಕಾಣುತ್ತವೆ. ಇಲ್ಲಿ ಆರಾಮವಾಗಿ ನೋಡಲು ವ್ಯೂ ಪಾಯಿಂಟ್ ನಿರ್ಮಿಸಿದ್ದಾರೆ, ಅನತಿ ದೊರದಲ್ಲಿ ಕಡಿದಾದ ಒಂದು ಪರ್ವತವಿದೆ ಮತ್ತು ಸ್ವಲ್ಪ ಕೆಳಗೆ ಇಳಿದರೆ ಮಾಣಿಕ್ಯಧಾರಾ ಜಲಪಾತ ಕಾಣಿಸುತ್ತದೆ.



ಆದರೆ ನಮಗೆ ಅಲ್ಲಿಗೆ ಹೋಗಲಾಗಲಿಲ್ಲ. ಅಲ್ಲಿ ತುಂಬಾ ಜನ ಸ್ನಾನ ಮಾಡುತಿದ್ದರು, ದೂರದಿಂದಲೇ ನೋಡಿ ಹಿಂತಿರುಗಿದೆವು. ಮತ್ತೆ ಬಂದ ದಾರಿಯಲ್ಲೇ ವಾಪಸು ಬಾಬಾ ಬುಡನ್ ಗುಹೆ ನೋಡಲು ಹೋದೆವು. ಫೋಟೋ ತೆಗೆಯಲು  ಅವಕಾಶ ಇರಲಿಲ್ಲ. ಒಳಗೆ ಹೋಗಿ ದತ್ತ ಗುರು ಮತ್ತು ಬಾಬಾ ನ ತೀರ್ಥ ಪಡೆದು ಹೊರ ಬಂದೆವು. ತುಂಬಾ ಚಳಿ, ತುಂತುರು ಮಳೆ. ಈಗ ಕೆಮ್ಮಣ್ಣು ಗುಂಡಿಗೆ ಪ್ರಯಾಣ. ಅದೇ ಕೆಟ್ಟ ದಾರಿ, ಆದರೆ ಹೋಗಲೇ ಬೇಕಲ್ಲ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದೆ ಹೋದೆವು.




ಕೆಮ್ಮಣ್ಣು ಗುಂಡಿ ಬಂದೇ ಬಿಟ್ಟಿತು. ನಮಗೆ ಕಾದಿರಿಸಲಾದ  ತುಂಗಭದ್ರಾ ಕಾಟೇಜ್ ನಲ್ಲಿ  ಇಳಿದುಕೊಂಡೆವು. ಕಾಟೇಜ್ ಹಳೆಯ ಕಟ್ಟಡ, ಮೇಲೆ ಟಿನ್ ಹಾಕಿದ ಮಾಡು, ಗೋಡೆಯ ತುಂಬಾ ಮಳೆ ನೀರು ಇಳಿದು, ರಚಿಸಿದ ಭೂಪಟಗಳು!  ಹೊರಗಡೆ ನಟ್ಟು  ಬೆಳೆಸಿದ ಹೂಗಿಡಗಳು, ಪಕ್ಕದಲ್ಲೇ ಒಂದು ಅನುಪಯುಕ್ತ,  ಮುರಿದ ಕಾಟೇಜು! ಅಂತೂ ಅದರಲ್ಲಿ ಸ್ವಲ್ಪ ವಿಶ್ರಮಿಸಿ, ಬೆಟ್ಟದ ಮೇಲೆ ಇದ್ದ  ರಾಜಭವನ ಗೆಸ್ಟ್ ಹೌಸ್ ನೋಡಲು ಹೋದೆವು. ಅಲ್ಲಿ ಒಳ್ಳೆಯ ಹೂ ತೋಟ ಬೆಳೆಸಿದ್ದಾರೆ. ರಾತ್ರಿ ಸ್ವಲ್ಪ ಮಳೆ ಬಂತು, ಅದು ಟಿನ್ ಮಾಡಿನ ಮೇಲೆ ಬೀಳುವಾಗ ನಾವು ಹೆಬ್ಬೆ ಜಲಪಾತದ ಹತ್ತಿರವೇ ಇದ್ದೇವೆ ಎನ್ನುವ ಅನುಭವ. ಒಂದೆರಡು ತೊಟ್ಟು ನೀರು ಮೈ ಮೇಲೆ ಬಿತ್ತು. ಅಷ್ಟಕ್ಕೇ ಮಳೆ ನಿಂತಿತು, ಬೆಳಿಗ್ಗೆ ಧಭ ಧಭ ಶಬ್ದ! ಕೋತಿಗಳು ನಮ್ಮನ್ನು ಎಬ್ಬಿಸಲು ಪ್ರಯತ್ನಿಸುತ್ತಿವೆ. 'ಸಾಕು ಮಲಗಿದ್ದು, ಇನ್ನು ಹೊರಡಿ ಹೆಬ್ಬೆ ನೋಡಲು' ಎಂದು ಹೇಳುತ್ತಿವೆ.
ಅಂತೂ ಬೆಳಗಿನ ಉಪಹಾರ ಮುಗಿಸಿ ಬುತ್ತಿ ಕಟ್ಟಿಕೊಂಡು ಬೆನ್ನ ಮೇಲೆ ಹೊರೆ ಏರಿಸಿ ಚಾರಣ  ಹೊರಟೆವು. ಇಲ್ಲಿಂದ ಹೆಬ್ಬೆ ಜಲಪಾತ ಸುಮಾರು 8 Km ದೂರದಲ್ಲಿ ಇದೆ. ಅಲ್ಲಿಗೆ ಹೋಗಲು ಜೀಪುಗಳು ಕಾದಿರುತ್ತವೆ. ಹೋಗಿಬರಲು 750 - 1250  ರು. ಕೇಳುತ್ತಾರೆ. ನಾವು ಚಾರಣ ಮಾಡಲು ಬಂದವರು, ನಮಗೆ ಅದೇ ಇಷ್ಟ, ಹಾಗಾಗಿ ನಡೆಯಲು ಆರಂಭಿಸಿದೆವು. ಅಷ್ಟೇನೂ ಕಷ್ಟಕರ ದಾರಿಯಲ್ಲ. ಸುಮಾರು ದೂರದ ವರೆಗೆ ಮಣ್ಣಿನ ರಸ್ತೆ ಇದೆ. ಪಕ್ಕದಲ್ಲೇ ಹಿಂದಿನ ಕಾಲದ ಕಬ್ಬಿಣ ಗಣಿಗಾರಿಕೆ ಮಾಡಿದ ಜಾಗಗಳು ನೋಡ ಸಿಗುತ್ತವೆ.







ಬೆಳಗಿನ ಎಳೆ ಬಿಸಿಲು, ಹಿತವಾದ ತಂಗಾಳಿ ಆಯಾಸವಿಲ್ಲದೆ ಮುಂದೆ ಹೋಗಲು ಸಹಾಯ ಮಾಡುತಿತ್ತು. ನಾವು ಕಂಡ ಕಂಡ ಕಾಡು ಹೂವುಗಳ ಫೋಟೋ ತೆಗೆಯುತಿದ್ದೆವು, ದೂರ ದೂರದ ದೃಶ್ಯಗಳನ್ನು ನಮ್ಮ ಕೆಮರಾದಲ್ಲಿ ಸೆರೆ ಹಿಡಿಯುತಿದ್ದೆವು. ಅರು ಮತ್ತು ಶ್ರುತಿ ಪರಸ್ಪರ ಕೀಟಲೆ ಮಾಡುತ್ತಾ ನಮಗೆ ಮನರಂಜನೆ ಮಾಡುತಿದ್ದರು.









ಅಲ್ಲೊಂದು ಕಡೆ ರಸ್ತೆ ತಿರುವು ಪಡೆಯುತ್ತದೆ. ಅಲ್ಲಿ ಒಬ್ಬ ಹುಡುಗ ನಿಂತಿದ್ದ, ಅವನು ಬಂದು, ಸಾರ್ ಇಲ್ಲೇ ಕೆಳಗಿಳಿದು ಹೋದರೆ ನಿಮಗೆ ತುಂಬಾ ಶಾರ್ಟ್ ಕಟ್ ಆಗುತ್ತದೆ ಎಂದನು, ಅವನಿಗೆ ಥ್ಯಾಂಕ್ಸ್ ಹೇಳಿ ನಮ್ಮಲ್ಲಿದ್ದ ಕೆಲವು ಚಾಕ್ಲೆಟ್ ಕೊಟ್ಟು ಮುಂದೆ ಹೋದೆವು, ಹೌದು ಅವನು ಹೇಳಿದ್ದು ನಿಜ, ಸುಮಾರು 1Km. ಕಡಿಮೆ ಆಗುತ್ತದೆ. ಹಾಗೆಯೇ ಮುಂದುವರೆದಾಗ ನಮಗೆ ಹೆಬ್ಬೆ ಜಲಪಾತದ ದೂರ ನೋಟ ಕಾಣುತ್ತದೆ.



ಅಲ್ಲಿ ಸ್ವಲ್ಪ ಹೊತ್ತು ನಿಂತು ಸುದಾರಿಸಿಕೊಂಡೆವು. ಫೋಟೋ, ವಿಡಿಯೋ ಎಲ್ಲಾ ಆಯಿತು. ಅಷ್ಟರಲ್ಲಿ ಅಲ್ಲಿಗೆ ನಮ್ಮ ಹಾಗೆ ಚಾರಣ  ಮಾಡುವ ಹುಡುಗರ ಗುಂಪು ಒಂದು ಬಂದಿತು. ಅವರು  ಅಲ್ಲೇ ಪಕ್ಕದಲ್ಲಿದ್ದ ತುಂಬಾ ಇಳಿಜಾರಾಗಿರುವ ಕಾಡು ದಾರಿಯಲ್ಲಿ ಇಳಿದರು. ನಮಗೂ  ಅದರಲ್ಲಿ ಹೋಗುವ ಆಸೆ, ಆದರೆ ಶ್ರುತಿಗೆ ಭಯ, ಕಡೆಗೆ ಆ ಹುಡುಗರಲ್ಲಿ ರಿಕ್ವೆಸ್ಟ್ ಮಾಡಿದೆವು-- ದಾರಿ ಸರಿ ಇದ್ದರೆ ಆಲ್ಲಿಂದ ಒಂದು ಶಿಳ್ಳು ಹಾಕಿರಿ ಆಗ ನಾವು ಸಹಾ ಇಳಿದು ಬರುತ್ತೇವೆ ಎಂತ. ಹಾಗೆ ಸ್ವಲ್ಪ ಹೊತ್ತಲ್ಲಿ ಶಿಳ್ಳು ಕೇಳಿಸಿತು, ನಾವೂ ಅದರಲ್ಲಿ ಇಳಿದೆವು.  ತುಂಬಾ ಇಳಿಜಾರು,  ಅಲ್ಲಲ್ಲಿ ಸಿಗುವ ಮರ, ಬಳ್ಳಿ ಹಿಡಿದುಕೊಂಡು ಇಳಿದೆವು. ಶ್ರುತಿ 2-3  ಬಾರಿ ಜಾರಿದಳು, ಆದರೆ ಅರವಿಂದನ ರಕ್ಷಣೆಯಲ್ಲಿ ಅವಳಿಗೇನೂ ತೊಂದರೆ ಆಗಲಿಲ್ಲ. ಈ ಸಾಹಸದಿಂದ ನಮಗೆ ಸುಮಾರು 1/2 Km. ಲಾಭವಾಯಿತು. ಮತ್ತೆ ಸ್ವಲ್ಪ ರೆಸ್ಟು.



ಮುಂದೆ ಹೋದಂತೆಲ್ಲ ಕಾಫಿ ತೋಟಗಳು, ಯಾಲಕ್ಕಿ ತೋಟ, ವೆನಿಲ್ಲಾ ಬಳ್ಳಿಗಳು, ಕಿತ್ತಳೆ ಮರಗಳು, ಅಲ್ಲಲ್ಲಿ ಸಣ್ಣ ಮನೆಗಳು ಎಲ್ಲಾ ಸಿಗುತ್ತವೆ. ಕೊನೆಗೆ ದೊಡ್ಡದೊಂದು ಎಸ್ಟೇಟ್ ನ ಎದುರಿನಿಂದ ಕೆಳಗಿಳಿದರೆ ನೀರಿನ ಪುಟ್ಟ ಹೊಳೆ ಎದುರಾಗುತ್ತದೆ. ಅದನ್ನು ನಡೆದೇ ದಾಟಬೇಕು, ಮತ್ತೊಮ್ಮೆ ಅದೇ ಹೊಳೆ ದಾಟಬೇಕಾಗುತ್ತದೆ. ಆಮೇಲೆ ಅದರ ದಂಡೆಯಲ್ಲೇ ನಡೆದರೆ ನಮಗೆ ನೆಟ್ಟಗೆ ಹೆಬ್ಬೆ ಜಲಪಾತದ ತಳಕ್ಕೆತಲುಪಬಹುದು.







ಅಲ್ಲಿಗೆ ಹೋಗುವಾಗಲೇ ನೀರ ಹನಿಗಳ ಸಿಂಚನವಾಗುತ್ತದೆ. ಮೈ ಎಲ್ಲಾ ನವಿರೇಳುತ್ತದೆ. ಅಲ್ಲಿ ತುಂಬಾ ಜನ ಸ್ನಾನ ಮಾಡುತ್ತಿದ್ದರು. ನಾನು ಮತ್ತು ವಿಷು ಇಬ್ಬರೂ ನೀರಿಗೆ ಇಳಿದೇಬಿಟ್ಟೆವು. ನನಗಂತೂ ಜಲಪಾತದ ನೇರ ಕೆಳಗಡೆ ಮೀಯುವ ಪ್ರಥಮ ಅನುಭವ! ಆಹಾ ಏನು ಖುಷಿ, ಆ ಥಂಡಿ, ಆ ಭೋರ್ಗರೆಯುವ ಶಬ್ದ ನಿಜವಾಗಿಯೂ ಅದನ್ನು ಅನುಭವಿಸಿಯೇ ತಿಳಿಯಬೇಕು. ನೀರಾಟ ಆದ ಮೇಲೆ ಸ್ವಲ್ಪ ಈಕಡೆ ಬಂದು ಹೊಳೆಯ ಮಧ್ಯದಲ್ಲಿರುವ ಬಂಡೆಯಲ್ಲಿ ಕುಳಿತು ವಿಶ್ರಮಿಸಿ ತಿಂಡಿ ತಿಂದೆವು. ನಿಂಬೆ ಪಾನಕ ಮಾಡಿ ದಾಹ ನೀಗಿಸಿಕೊಂಡೆವು. ಆಯಾಸ ಎಲ್ಲಾ ಹೋಯಿತು.



ಇಲ್ಲಿಂದ ಹೆಬ್ಬೆ ಜಲಪಾತದ ಮೇಲಿನ ಭಾಗ ಸಹಾ ಕಾಣುತ್ತದೆ. ಇಡೀ ಜಲಪಾತವು ಸುಮಾರು 168 ಮೀಟರು ಎತ್ತರವಿದ್ದು 2 ಮಜಲುಗಳಾಗಿ ಧುಮುಕುತ್ತಿದೆ.



ಇನ್ನೇನು ಹೊರಡುವ ಹೊತ್ತಾಯಿತು, ನಿಧಾನವಾಗಿ ಹೊರಟೆವು. ಈಗ ಏರು ದಾರಿ ಅಲ್ಲಲ್ಲಿ ನಿಂತು ಸಾಗುತ್ತ ಹೋದಂತೆ ಕಟ್ಟಲಾಗುತ್ತ ಬಂತು. ನಮ್ಮಲ್ಲಿ ಟಾರ್ಚು ಲೈಟು ಇರಲಿಲ್ಲ. ಸುಮಾರು 2 Km. ದೂರವನ್ನು ನಾವು ಮೊಬೈಲ್ ನಲ್ಲಿರುವ ಪುಟ್ಟ ಟಾರ್ಚ್ ಬೆಳಕಿನಲ್ಲಿ ನಡೆದು ನಮ್ಮ ಕಾಟೇಜ್ ತಲುಪಿದೆವು. ಎಲ್ಲರಿಗೂ ತುಂಬಾ ಸುಸ್ತು. ರಾತ್ರಿ ಊಟ ಮಾಡಿ ಮಲಗಿದವರಿಗೆ ಒಳ್ಳೆಯ ನಿದ್ರೆ. ಬೆಳಗ್ಗೆ ಎದ್ದು ಕಾಫಿ ತಿಂಡಿ ತಿಂದು ವಾಪಸು ಹೊರಟೆವು. ಈ ಸಲ ಬೇರೆಯೇ ದಾರಿಯಲ್ಲಿ ಹೊರಟೆವು.  ಕೆಮ್ಮಣ್ಣುಗುಂಡಿ ಲಿಂಗದ ಹಳ್ಳಿ ಮಾರ್ಗವಾಗಿ ಚಿಕ್ಕಮಗಳೂರು ತಲುಪಿದೆವು. ಈ ದಾರಿ ಸ್ವಲ್ಪ ದೂರ, 54 Km. ಆಗುತ್ತದೆ. ಆದರೆ ರಸ್ತೆ ಚೆನ್ನಾಗಿದೆ. ಬರುವಾಗ ದೂರದಲ್ಲಿ ಕಲ್ಹತ್ತಿ ಜಲಪಾತ ನೋಡಿದೆವು. ಮುಂದೆ  ಬೇಲೂರು ಚನ್ನಕೇಶವ ದೇವಾಲಯ ನೋಡಿಕೊಂಡು ಆಮೇಲೆ ಶ್ರವಣಬೆಳುಗೊಳ ಸಹಾ ನೋಡಿಕೊಂಡು ಬೆಂಗಳೂರಿಗೆ ಬಂದೆವು.