Wednesday, 26 August 2015

Makali Durga

ಮಾಕಳಿ ದುರ್ಗ
ಬೆಂಗಳೂರಿಗೆ ಬಹಳ ಸಮೀಪದಲ್ಲಿರುವ ಸುಂದರ ಚಾರಣ ತಾಣ ಈ ಮಾಕಳಿ ದುರ್ಗ. ಬೆಂಗಳೂರಿಂದ ಸುಮಾರು 65-70 ಕಿ.ಮಿ. ದೂರ ಅಷ್ಟೆ. ಬೆಂಗಳೂರು-ಯಲಹಂಕ-ದೊಡ್ಡಬಳ್ಳಾಪುರ ಸಾಗಿ ಮುಂದೆ ಗೌರಿಬಿದನೂರು ರಸ್ತೆಯಲ್ಲಿ ಮಾಕಳಿ ದುರ್ಗ ರೈಲು ನಿಲ್ದಾಣ ತಲುಪಿದರೆ ಅಲ್ಲಿಂದ ರೈಲು ಹಳಿಗಳ ಪಕ್ಕದಲ್ಲೇ ಸಾಗಬಹುದು. ಇಲ್ಲವಾದರೆ ಮುಖ್ಯ ರಸ್ತೆಯಲ್ಲೇ ಸ್ವಲ್ಪ
 ದೂರ ಹೋದರೆ ರಸ್ತೆಯ ಎಡಗಡೆ ಒಂದು ಮಣ್ಣಿನ ಮಾರ್ಗ ಸಿಗುತ್ತದೆ. ಇದರಲ್ಲಿ ಸಾಗಿದರೆ ರೈಲು ಹಳಿಗಳ ಪಕ್ಕದವರೆಗೆ ಹೋಗಬಹುದು.

ನಾವು ಅಲ್ಲೇ ನಮ್ಮ ಕಾರುಗಳನ್ನು ನಿಲ್ಲಿಸಿ, ರೈಲು ಹಳಿ ದಾಟಿ ಮುಂದೆ ಹೋದೆವು. ಇಲ್ಲಿ 54/400 ಎಂಬ ರೈಲ್ವೆಯವರ ಬೋರ್ಡ್ ಇದೆ. ಇದು ಬಹಳ ಮುಖ್ಯ ಗುರುತು.ಸ್ವಲ್ಪ ದೂರ ಹೋದರೆ ಒಂದು ಪುಟ್ಟ ದೇವಾಲಯ ಕಾಣುತ್ತದೆ.

ಪಕ್ಕದಲ್ಲೇ ಒಂದು ಚಿಕ್ಕ ಕೊಳ, ಇದರ ಪಕ್ಕದಿಂದ ಮುಂದಕ್ಕೆ ಹೊದರೆ ಒಂದು ಕಚ್ಛಾ ರಸ್ತೆ. ಇದರಲ್ಲಿ ಸುಮಾರು ½ ಕಿ.ಮಿ. ನಡೆಯಬೇಕು. ಬಲ ಬದಿಯಲ್ಲಿ ಮಾಕಳಿ ಬೆಟ್ಟ ಚಾಚಿಕೊಂಡಿದೆ. ಹಾಗೆಂದುಕೊಂಡು ಎಲ್ಲಿಂದ ಬೇಕಾದರೂ ಬೆಟ್ಟ ಹತ್ತುವ ಹಾಗಿಲ್ಲ.ಹಾಗೆ ಹೊದರೆ ಮುಂದೆ ಕಡಿದಾದ ಬಂಡೆ ಎದುರಾಗುತ್ತದೆ. ಇಲ್ಲಿಂದ ಏರಲು ಬಹಳ ಪ್ರಯಾಸ ಪಡಬೇಕು.

ಸ್ವಲ್ಪ ಮುಂದೆ ಹೊದಾಗ ಬಿಳಿ ಬಣ್ಣದ ಬಾಣ ಗುರುತು ಕಾಣುತ್ತದೆ,ಇದನ್ನು ಹಿಂಬಾಲಿಸಿಕೊಂಡು ನಾವು ಬೆಟ್ಟ ಏರಲು ಆರಂಭ ಮಾಡಿದೆವು.ಮೊದಲಿಗೆ ಕುರುಚಲು ಕಾಡು ಆಮೇಲೆ ನಟ್ಟು ಬೆಳೆಸಿದ ಕಾಡು, ದಟ್ಟವಾಗೇನೂ ಇಲ್ಲ. ಹಚ್ಚ ಹಸಿರಿನಿಂದ ಕೂಡಿ ತಂಪಾದ ವಾತಾವರಣ ನಿರ್ಮಿಸಿದೆ

ಮಾಕಳಿ ಬೆಟ್ಟವು ಸಮುದ್ರ ಮಟ್ಟದಿಂದ 4500 ಅಡಿ ಎತ್ತರ ಹೊಂದಿದೆ. ಬೆಟ್ಟದ ತುದಿ ತಲುಪಲು ಸುಮಾರು 2ಕಿ.ಮಿ ಏರಬೇಕು. ನಿಧಾನವಾಗಿ ಹತ್ತಿದರೆ ಏನೂ ಆಯಾಸವಾಗುವುದಿಲ್ಲ.
ನಾವೀಗ ಕಾಡು ದಾಟಿ, ಮತ್ತೆ ಕುರುಚಲು ಕಾಡಿರುವ ಪ್ರದೇಶಕ್ಕೆ ತಲುಪಿದೆವು. ಇಲ್ಲಿ ಬಂಡೆಗಳಿಂದ ಕೂಡಿದ ಕೊರಕಲು ಜಾಗ ಎದುರಾಗುತ್ತದೆ. ಇಲ್ಲಿ ಸ್ವಲ್ಪ ಜಾಗರೂಕತೆಯಿಂದ ಏರಬೇಕು. ಕಾಲು ಜಾರುತ್ತದೆ. ಕೆಲವೆಡೆ ಇಕ್ಕಟ್ಟಾದ ದಾರಿ.

ಎದುರು ನೋಡಿದರೆ ಸುಂದರ ನೋಟ. ಕೆಳಗಿನ ಹಳ್ಳಿಗಳು.ರಸ್ತೆ.ರೈಲು ಹಳಿ ಎಲ್ಲಾ ಚಿತ್ರ ಬರೆದಂತೆ ಕಾಣುತ್ತದೆ.ಇವೆಲ್ಲಕ್ಕಿಂತಲೂ ಮಿಗಿಲಾಗಿ ಒಂದು ವಿಸ್ತಾರವಾದ ಕೆರೆ ಕಂಗೊಳಿಸುತ್ತಿದೆ. ವಿಚಿತ್ರವೆಂದರೆ ಇದು ದಕ್ಷಿಣ ಅಮೇರಿಕಾ ಭೂ ಖಂಡದ ಆಕಾರವನ್ನು ಹೋಲುತ್ತದೆ.

ದೂರದ ದಿಗಂತದವರೆಗಿನ ನೋಟ ಬಹಳ ಸುಂದರವಾಗಿದೆ. ಇಲ್ಲಿಂದ ನಮಗೆ ಬೆಟ್ಟದ ಮೇಲಿನ ಕೋಟೆಯ ಒಂದು ಭಾಗ ಕಾಣುತ್ತದೆ. ಆದರೆ ಅಲ್ಲಿಗೆ ತಲುಪಲು ಇನ್ನೂ ಏರಬೇಕು. ನಾವು ಸ್ವಲ್ಪ ವಿಶ್ರಮಿಸಿ, ಮುಂದುವರಿದೆವು. 
                         
ಈವಾಗ ನಾವೆಲ್ಲರೂ ಮಾಕಳಿ ದುರ್ಗದ ಕೋಟೆಯ ಮೇಲೆ ಏರಿದ್ದೆವು. ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಕಟ್ಟಡವಿದೆ.ಇದು ಮದ್ದಿನ ಮನೆ.ಹಿಂದಿನ ಕಾಲದಲ್ಲಿ ಇದರೊಳಗೆ ತೋಪುಗಳಿಗೆ ಬೇಕಾದ ಮದ್ದು ಗುಂಡುಗಳನ್ನು ಶೇಖರಿಸಿಡುತ್ತಿದ್ದರು.

ಕೋಟೆಯ ಗೋಡೆಯನ್ನು ಬಂಡೆಕಲ್ಲಿನಿಂದ ಕಟ್ಟಿದ್ದಾರೆ. ಆದರೆ ಈವಾಗ ಅಲ್ಲಲ್ಲಿ ಜರಿದು ಬಿದ್ದು ಹೋಗಿದೆ. 5-6 ಕಡೆ ಬುರುಜುಗಳೂ ಇವೆ. ಕೋಟೆಯ ಒಳಸುತ್ತನ್ನು ಪ್ರವೇಶಿಸಲು ಒಂದು ಪುಟ್ಟ ದ್ವಾರವಿದೆ.

ಇದರಲ್ಲಿ ಒಳಗಡೆ ಹೋದರೆ ಒಂದು ಚಿಕ್ಕ ಶಿವಾಲಯ ಕಾಣುತ್ತದೆ. ಮಾಕಳಿ ದುರ್ಗ ಮಲ್ಲೇಶನ ಗುಡಿ ಇದು. ಒಳಗಡೆ ದ್ವಾರಪಾಲಕರು, ನಂದಿ ಹಾಗೂ ಶಿವಲಿಂಗವಿದೆ.




ಗುಡಿಯ ಹೊರಗಡೆ ಒಂದು ನಾಗಸಂಪಿಗೆಯ ಮರವಿದ್ದು ಅದರಿಂದ ಹೂವುಗಳನ್ನು ಕಿತ್ತು ನಾವೂ ದೇವರಿಗೆ ಅರ್ಚನೆ ಮಾಡಿದೆವು.ಎದುರಿನಲ್ಲಿ ಒಂದು ಮುರುಕಲು ಶಿವಲಿಂಗವಿದೆ.

 ಈ ಗುಡಿಯ ಪಕ್ಕದಲ್ಲೇ ನಾವು ತಂದಿರುವ ಬುತ್ತಿ ಬಿಚ್ಚಿದೆವು. ಚಪಾತಿ, ಪುಳಿಯೊಗರೆ, ಮೊಸರನ್ನ ಎಲ್ಲಾ ನಮ್ಮ ಹಸಿವನ್ನು ತಣಿಸಿದವು. ಅಲ್ಲೇ ಸ್ವಲ್ಪ ವಿಶ್ರಮಿಸಿದೆವು. ತಂಪಾದ ಗಾಳಿ ನಮ್ಮ ಆಯಾಸವನ್ನು ಪರಿಹರಿಸಿತು.

ನಂತರ ನಾವೆಲ್ಲಾ ಕೋಟೆಯ ಒಳಗಡೆ ಸುತ್ತಾಡಲು ಹೊರಟೆವು. ನೊಡಲು ಅಂತಹ ಗಮನಾರ್ಹವಾದದ್ದೇನೂ ಅಲ್ಲಿಲ್ಲ. ಆದರೆ ಕೋಟೆಯ ಮೇಲಿಂದ ಸುತ್ತಣ ನೋಟ ಬಹಳ ಸುಂದರವಾಗಿದೆ. ಇಲ್ಲಿಂದ ನಮಗೆ 360 ಡಿಗ್ರಿಯ ಸಂಪೂರ್ಣ ನೋಟ ಲಭ್ಯ. ಹಿತವಾದ ಗಾಳಿ, ಮೋಡ ಮುಸುಕಿದ ವಾತಾವರಣ ನಮ್ಮನ್ನು ಮುದಗೊಳಿಸುತ್ತದೆ.



ಇಲ್ಲೇ ಪಕ್ಕದಲ್ಲಿ ನೀರು ತುಂಬಿದ ಒಂದು ಕೊಳವಿದೆ. ಮಳೆ ನೀರು ಸಂಗ್ರಹಗೊಂಡು ಕೊಳ ತುಂಬಿದೆ. ಆದರೆ ಇದು ಕುಡಿಯಲು ಯೋಗ್ಯವಾಗಿಲ್ಲ.







 ನಾವು ಸುಮಾರು ಹೊತ್ತು ಕೋಟೆಯಲ್ಲಿ ವಿಹರಿಸಿದೆವು. ಮಳೆ ಬರುವ ಲಕ್ಷಣ ತೋರಿತು. ಇನ್ನು ಹೊರಡುವ ಸಮಯವಾಯಿತು ಎಂದು ನಾವೆಲ್ಲಾ ಅಲ್ಲಿಂದ ಹೊರಟೆವು. ಬಂದ ದಾರಿಯಲ್ಲೇ ಇಳಿಯತೊಡಗಿದೆವು. ಸುಮಾರು ಅರ್ಧ ದಾರಿ ಇಳಿಯುವಶ್ಟರಲ್ಲೇ ಮಳೆ ಬಂದೇಬಿಟ್ಟಿತು. ಎಲ್ಲರೂ ಸ್ವಲ್ಪ ಒದ್ದೆಯಾದರು. ಬಂಡೆಕಲ್ಲುಗಳ ಮೇಲೆ ಕಾಲಿರಿಸಿದಾಗ ಜಾರುವಿಕೆಯಿಂದ ಸ್ವಲ್ಪ ತೊಂದರೆ ಅನುಭವಿಸಿದೆವು. ಅಲ್ಲೇ ನಾವು ಭೇಲ್ ಪುರಿ ಮಾಡಿಕೊಂಡು ತಿಂದೆವು. ನಂತರ ಇಳಿಯಲು ಆರಂಭ. ಬೇಗನೆ ಬೆಟ್ಟದ ಬುಡ ತಲುಪಿದೆವು. ಇನ್ನೆಲ್ಲಾ ಸುಲಭ. ಬೇಗನೆ ನಾವು ಕಾರು ನಿಲ್ಲಿಸಿರುವ ಜಾಗಕ್ಕೆ ಬಂದೇಬಿಟ್ಟೆವು.


ಹಿಂತಿರುಗಿ ಬರುವ ದಾರಿಯಲ್ಲಿ ಘಾಟಿ ಸುಭ್ರಮಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ರಾತ್ರಿ 8 ಘಂಟೆಗೆ ಬೆಂಗಳೂರು ತಲುಪಿದೆವು.

No comments:

Post a Comment