Wednesday, 2 September 2015

KAANCHIPURAM


ಕಾಂಚೀಪುರ
ನಾವು ಇದೇ ಆಗಸ್ಟ್ ತಿಂಗಳಲ್ಲಿ ಕಾಂಚೀಪುರ ಯಾತ್ರೆ ಕೈಗೊಂಡಿದ್ದೆವು. ಬೆಂಗಳೂರು ಸಿಟಿ ರೈಲುನಿಲ್ದಾಣದಿಂದ ಕಾವೇರಿ ಎಕ್ಸ್ಪ್ರೆಸ್ಸ್ ರೈಲಿನಲ್ಲಿ ಬುಕ್ ಮಾಡಿದ್ದೆವು. ರಾತ್ರಿ 11.30 ಕ್ಕೆ  ನಮ್ಮ ಗಾಡಿ ಮೈಸೂರಿನಿಂದ ಬಂದು ತಲುಪಿತು. ನಾವು ಅದರಲ್ಲಿ ಹತ್ತಿ ಆರಾಮವಾಗಿ ನಿದ್ರೆ ಮಾಡಿ ಮುಂಜಾನೆ 6 ಘಂಟೆಗೆ ಆರ್ಕೋಣಂ ತಲುಪಿದೆವು. ಅಲ್ಲಿ ಇಳಿದು ಒಂದು ಆಟೋ ಮಾಡಿಕೊಂಡು ಅಲ್ಲಿನ ಬಸ್ ಸ್ಟ್ಯಾಂಡ್ ಗೆ ಬಂದು, ಆಗಲೇ ಹೊರಡಲು ತಯಾರಾಗಿದ್ದ ಖಾಸಗಿ ಬಸ್ಸು ಏರಿದೆವು. ರಶ್ ಏನೂ ಇರಲಿಲ್ಲ. ಬಸ್ಸು ಸರಿಯಾಗಿ 7.10ಕ್ಕೆ, 30 ಕಿ.ಮಿ ದೂರವಿರುವ ಕಾಂಚೀಪುರಂ ತಲುಪಿತು.
ಕಾಂಚೀಪುರಂ-ಕಂಚಿ-ಕಾಂಜೀವರಂ ಎಂದೆಲ್ಲಾ ಈ ಪಟ್ಟಣವನ್ನು ಹೆಸರಿಸುತ್ತಾರೆ. ದೇವಾಲಯಗಳ ಊರು, ರೇಶ್ಮೆಸೀರೆಗಳಿಗೆ ಪ್ರಸಿದ್ದವಾದ ನಾಡು, ಪಲ್ಲವ ರಾಜರ ರಾಜಧಾನಿ ಆಗಿತ್ತು. ಶಂಕರಾಚಾರ್ಯರು ಸ್ಥಾಪಿಸಿದ್ದ 4 ಆಮ್ನಾಯಗಳಲ್ಲಿ ಒಂದಾದ ಕಾಂಚಿ ಪೀಠ ಇಲ್ಲಿದೆ. ಅವರೇ ಇಲ್ಲಿ ಶ್ರೀಚಕ್ರವನ್ನು ಪ್ರತಿಷ್ಟೆ ಮಾಡಿ, ಪಾರ್ವತಿಯ ಇನ್ನೊಂದು ರೂಪವಾದ ಕಾಮಾಕ್ಷಿ ದೇವರನ್ನು ಪ್ರತಿಷ್ಟೆ ಮಾಡಿದರು. ಇಲ್ಲಿ ಕಾಮಾಕ್ಷಿ ಅಮ್ಮನ ದೊಡ್ಡದಾದ ದೇವಾಲಯವಲ್ಲದೆ ಏಕಾಂಬರನಾಥ, ಕೈಲಾಸನಾಥ, ಕರ್ಛಪೇಶ್ವರ, ಸುರಗೀಶ್ವರ, ಉಳಗಲನಾಥ, ಕುಮರಕೊಟ್ಟಂ, ಪಾಂಡವ ದೂತರ್ ಪೆರುಮಾಳ್ ಮತ್ತು ವರದರಾಜ ಪೆರುಮಾಳ್ ಮಂತಾದ ವಿಶಾಲವಾದ ದೇವಾಲಯಗಳಿವೆ. ಕಂಚಿ ಕಾಮಕೋಟಿ ಜಗದ್ಗುರು ಸಂಸ್ಥಾನ ಸಹಾ ಇಲ್ಲಿದೆ. ಕಾಂಚೀಪುರವನ್ನು 4 ರಿಂದ 9 ನೇ ಶತಮಾನದವರೆಗೆ ಪಲ್ಲವರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದರು. ನಂತರ ಚೋಳರು, ಪಾಂಡ್ಯರು, ವಿಜಯನಗರದ ಅರಸರು ಆಳಿದರು. ಕೆಲಕಾಲ ಮುಸ್ಲಿಮರು, ನಾಯಕರು ಮತ್ತು ಕೊನೆಗೆ ಆಂಗ್ಲರ ಆಳ್ವಿಕೆಗೆ ಒಳಪಟ್ಟಿತ್ತು. ಕಾಂಚಿ ಒಂದು ಟೂರಿಸ್ಟ್ ಕೇಂದ್ರವಾಗಿದ್ದುದರಿಂದ ಸಾಕಷ್ಟು ಹೊಟೆಲ್ ಮತ್ತು ಉಪಹಾರ ಮಂದಿರಗಳೂ ಇವೆ. ಪಟ್ಟಣವೂ ಚೆನ್ನಾಗಿದೆ. ಇಲ್ಲಿಂದ ಚೆನ್ನೈ ಗೆ 72 ಕಿ.ಮಿ ದೂರ.
ನಾವು ಬಸ್ ಇಳಿದು ಅನತಿ ದೂರ ನಡೆದು ಹೋಟೆಲ್ ಗೆ ಹೋಗಿ ಉಪಹಾರ ಮುಗಿಸಿ ಪಕ್ಕದಲ್ಲೆ ಇರುವ ಕಾಮಾಕ್ಷಿ ದೇವಾಲಯಕ್ಕೆ ಹೋದೆವು. ಮೊದಲು ನಮಗೆ ಅಲ್ಲಿನ ಕಲ್ಯಾಣಿ ಕಾಣುತ್ತದೆ.


 ಅದನ್ನು ಬಳಸಿಕೊಂಡು ಹೋದಾಗ ಒಂದು ಮಂಟಪ ಕಾಣುತ್ತದೆ. ಪಕ್ಕದಲ್ಲೇ ಗಜ ಶಾಲೆ. ಇಲ್ಲಿ 3 ಆನೆಗಳಿದ್ದವು.

 ಮುಂದೆ ದೇವಾಲಯದ ಪ್ರಾಕಾರ ಮತ್ತು ನಾಲ್ಕೂ ದಿಕ್ಕಿನಲ್ಲಿ ಗೋಪುರಗಳೂ ಮಧ್ಯದಲ್ಲಿರುವ ಗೋಪುರವೂ ಕಾಣುತ್ತದೆ. ಈ ನಾಲ್ಕೂ ಗೋಪುರಗಳಿಗೂ ದುರಸ್ಥಿಗಾಗಿ ಅಟ್ಟಳಿಗೆ ಕಟ್ಟಿರುವುದರಿಂದ ಅಷ್ಟು ಚೆನ್ನಾಗಿ ತೋರುವುದಿಲ್ಲ.



ನಾವು ಒಳಗಡೆ ಹೋಗಿ ದೇವರ ದರ್ಶನ ಮಾಡಿದೆವು. ಪದ್ಮಾಸನದಲ್ಲಿ ಕುಳಿತ ದೇವಿಯ ಮೂರ್ತಿ ಬಹಳ ಚೆನ್ನಾಗಿದೆ. ಆವತ್ತು ರಶ್ ಇಲ್ಲದಿದುದರಿಂದ ತುಂಬಾ ಹೊತ್ತು ಅಲ್ಲೇ ನಿಂತಿದ್ದೆವು. ಪ್ರಸಾದ ಸ್ವೀಕರಿಸಿ ಹೊರ ಬಂದೆವು.
ಅಲ್ಲೇ ವಿಚಾರಿಸಿದಾಗ ಪಕ್ಕದಲ್ಲೇ ಉಳಗಲಾನಂದ ದೇವಾಲಯವಿದೆ ಎಂದು ತಿಳಿಯಿತು.


 ಅಲ್ಲಿ ನಾವಲ್ಲದೆ ಬೇರೆ ಯಾರೂ ಭಕ್ತರಿರಲಿಲ್ಲ. ಇಲ್ಲಿನ ದೇವರು ತ್ರಿವಿಕ್ರಮ. ಮಹಾವಿಷ್ಣುವಿನ ವಾಮನಾವತಾರಕ್ಕೆ ಸಂಬಂಧಿಸಿದ ದೇವಾಲಯ. ಚಿಕ್ಕ, ಚೊಕ್ಕದಾದ ದೇವಸ್ಥಾನ. ಇಲ್ಲಿನ ಪ್ರಶಾಂತತೆ ನಮಗೆ ಬಹಳ ಇಷ್ಟವಾಯಿತು.
ಇಲ್ಲಿಂದ ಮುಂದಿನ ರಸ್ತೆಯಲ್ಲಿ ಸಾಗಿದರೆ ಇನ್ನೊಂದು ಆಲಯ ಸಿಗುತ್ತದೆ. ಇದು ಪಾಂಡವ ದೂತರ್ ಪೆರುಮಾಳ್ ದೇವಾಲಯ. ಪಾಂಡವ ದೂತನಾಗಿ ಶ್ರೀಕೄಷ್ಣ ಕೌರವರಲ್ಲಿಗೆ ಹೊಗಿದ್ದ. ಅಂತೆಯೇ ಇದು ಶ್ರೀಹರಿಯ ದೇವಾಲಯ.


 ಇಲ್ಲೂ ಅಷ್ಟೆ, ಜನಗಳೇ ಇರಲಿಲ್ಲ. ಇದರ ಶಿಖರ ಬೇರೆಯೇ ರೀತಿಯಾಗಿದ್ದು ನೋಡಲು ಸುಂದರ ವಾಗಿದೆ. ನಮ್ಮ ಪುಣ್ಯಕ್ಕೆ ಮೋಡ ಕವಿದ ವಾತಾವರಣವಿದ್ದು ಸೆಕೆ ಅನ್ನಿಸಲೇ ಇಲ್ಲ.
ಸ್ವಲ್ಪ ಮುಂದೆ ಹೋದಾಗ ಕಂಚಿ ಕಾಮಕೋಟಿ ಮಠ ಸಿಗುತ್ತದೆ.


 ಅದರ ಪಕ್ಕದಲ್ಲೇ ಕುಮರಕೊಟ್ಟಂ ಮುರುಗನ್ ದೇವಾಲಯವಿದೆ. ಇವುಗಳನ್ನು ಆಮೇಲೆ ನೊಡಬಹುದು ಎಂದು ನಾವು ಮುಂದೆ ಸಾಗಿದಾಗ ಒಂದು ಪುಟ್ಟ ದೇಗುಲ ಕಾಣಿಸಿತು.





 ಇದು ಬಹಳ ಹಳೆಯ ಕಾಲದ 6ನೇ ಶತಮಾನದ ಪಲ್ಲವರ ಕಾಲದ ಆಲಯ. ಇಲ್ಲಿನ ದೇವರು ಸುರಗೀಶ್ವರ.  ಚಿಕ್ಕದಾದರೂ ಸುಂದರವಾಗಿದೆ. ತುಂಬಾ ಕೆತ್ತನೆಗಳಿವೆ. ಇದರ ಶಿಖರ ಮಾತ್ರ ಕೆಲವೆಡೆ  ಹಾಳಾಗಿದೆ. ಪ್ರಾಕ್ತನ ಇಲಾಖೆಗೆ ಸೇರಿದ್ದಾಗಿದೆ. ಒಳಗಡೆ ಹೋಗಿ ಶಿವನನ್ನು ಕಂಡು ನಮಿಸಿ ಹೊರಬಂದೆವು. ಇಲ್ಲಿಂದ ಸ್ವಲ್ಪವೇ ಮುಂದೆ ಇರುವ  ಏಕಾಂಬರನಾಥ ದೇವಾಲಯಕ್ಕೆ ಹೋದೆವು. ದೂರದಿಂದಲೇ ಬೄಹತ್ತಾದ ಭವ್ಯ ಗೋಪುರ ಕಾಣುತ್ತದೆ. ಅಲ್ಲೆಲ್ಲಾ ವಿವಿಧ ವಾಹನಗಳೂ ಟೂರಿಸ್ಟ್ ಬಸ್ಸುಗಳೂ ನೆರೆದಿದ್ದವು. ಎರಡೂ ಪಕ್ಕದಲ್ಲಿ ಬಟ್ಟೆ ಅಂಗಡಿಗಳ ಸಾಲು, ಹೂ ಹಣ್ಣು ಮತ್ತು ರೆಡಿ ಮೇಡ್ ಉಡುಪು ಮಾರುವ ತಳ್ಳು ಗಾಡಿಗಳು ತುಂಬಿದ್ದವು.


 ನಾವು ಗೋಪುರದ ಎದುರಿಗೇ ಬಂದೆವು. ಇದರ ಎತ್ತರ ಸುಮಾರು 200 ಅಡಿ ಇರಬಹುದು. ಒಟ್ಟು 9 ಅಂತಸ್ತು ಇದೆ. ಮೇಲೆ ಕಳಶಗಳ ಸಾಲು. ಚಂದನ ವರ್ಣದಲ್ಲಿ ಬಹಳ ಸುಂದರವಾಗಿ ಕಾಣುತ್ತದೆ. ಇದರಲ್ಲಿ ಮೂರ್ತಿಗಳಾಗಲೀ ಇನ್ನಿತರ ಅಲಂಕಾರಿಕ ಗೊಂಬೆಗಳಿಲ್ಲ. ಮದುರೈನಲ್ಲಿರುವಂತೆ ನಮ್ಮನ್ನು ಗಲಿಬಿಲಿಗೊಳಿಸುವಂತಹಾ ನೋಟ ಇದರಲ್ಲಿಲ್ಲ.




 ಇಂತಹ 4 ಗೋಪುರ ಇಲ್ಲಿವೆ. ಈ ಗೋಪುರಕ್ಕೆ ಹೊಂದಿಕೆಯಾಗುವಂತಹ ದೊಡ್ಡ ಮಹಾ ದ್ವಾರ.

 ಇದನ್ನು ಹೊಕ್ಕು ಆ ಕಡೆ ಬಂದಾಗ ವಿಶಾಲವಾದ ಅಂಗಣ, ಅದರಲ್ಲಿ ಒಂದು ರಥ ಕೊಟ್ಟಿಗೆ ಎದುರಿಗಿದೆ.




 ಅಲ್ಲಿಂದ ಮುಂದೆ ಒಂದು ಗೇಟ್, ಇದರಲ್ಲಿ ಮುಂದೆ ಹೋದರೆ ಮತ್ತೂ ವಿಶಾಲವಾದ ಜಾಗವಿದೆ. ಮಧ್ಯದಲ್ಲಿ ಏಕಾಂಬರನಾಥ ದೇವಾಲಯ. ಎತ್ತರವಾದ ಶಿಖರ, ಮುಖ ಮಂಟಪ, ಒಳಾಂಗಣ ಮತ್ತು ಗರ್ಭಗುಡಿ ಇದೆ.



ಮುಖ ಮಂಟಪದಲ್ಲಿ ತುಂಬಾ ಸ್ಥಂಭಗಳಿದ್ದು ನಾನಾ ಮೂರ್ತಿಗಳನ್ನು ಕೆತ್ತಿದ್ದಾರೆ. ಇದರಲ್ಲಿ ಎದುರುಗಡೆ ನಂದಿ ವಿಗ್ರಹವಿದೆ. ಬಲಿಕಲ್ಲು ಮತ್ತು ದ್ವಜಸ್ತಂಭವಿದೆ.


 ಇದರ ಒಂದು ಪಕ್ಕದಲ್ಲಿ ದೊಡ್ಡದಾದ ಕಲ್ಯಾಣಿ ಇದೆ. ಇದರ ಮಧ್ಯದಲ್ಲಿ ಒಂದು ಸುಂದರ ಮಂಟಪವಿದೆ.


 ಸ್ವಲ್ಪ ದೂರದಲ್ಲಿ ಒಂದು ಗಣಪನ ವಿಗ್ರಹ ಇರಿಸಿದ್ದಾರೆ. ಅದು ಭಿನ್ನಗೊಂಡಿರುವ ವಿಗ್ರಹವಾದ್ದರಿಂದ ಹೊರಗಡೆ ಇರಿಸಿದ್ದಾರೆ.


 ಮುಂದಿನ ದ್ವಾರದಲ್ಲಿ ಹೋದರೆ ಒಳಾಂಗಣ ಸಿಗುತ್ತದೆ. ಇಲ್ಲಿನ ಕಂಭಗಳಲ್ಲಿನ ಕೆತ್ತನೆ ಕೆಲಸ ಬಹಳ ಸುಂದರವಾಗಿದೆ. ಇದರ ಎಡ ಪಕ್ಕದಲ್ಲಿ ಶಿವಲಿಂಗಗಳ ಸಾಲು.




 ಇನ್ನೊಂದು ಪಕ್ಕದಲ್ಲಿ ದೇವರ ಉತ್ಸವಕ್ಕೆ ಬಳಸುವ ವಿವಿಧ ವಾಹನಗಳು ಇವೆ. ಇಲ್ಲಿ ಒಂದು ಕಡೆ 3500 ವರ್ಷ ಹಳೆಯದಾದ ಮಾವಿನ ಮರ ಇದೆ. ಆದರೆ ಈಗ ಕಾಣುವುದು ಒಂದು ಚಿಕ್ಕ ಮರ. ಇದರಡಿಯಲ್ಲಿ ಕಾಮಾಕ್ಷಿ ದೇವಿ ಶಿವನಿಗಾಗಿ ತಪಸ್ಸು ಮಾಡಿದ್ದಳೆಂದು ಪ್ರತೀತಿ.



ನಾವು ಒಂದು ಸುತ್ತು ಬಂದು, ಒಳಗೆ ಹೋದೆವು. ಎಲ್ಲೆಡೆಗಳಿಗಿಂತ ಬೇರೆಯೇ ತೆರನಾದ ಶಿವಲಿಂಗ ಇಲ್ಲಿದೆ. ಸುಮಾರು 3 ಅಡಿ ಎತ್ತರವಾಗಿದ್ದು ಸಪೂರವಾಗಿ ಮೇಲೆ ಹೋದಂತೆ ಚೂಪಾಗಿದೆ. ಇಲ್ಲಿ ಸ್ವಲ್ಪ ರಶ್ ಇತ್ತು. ಆದರೂ ಹೆಚ್ಚು ಕಾಯದೆ ದೇವರನ್ನು ನೋಡಿ ಪ್ರಸಾದ ಪಡೆದು ಹೊರಬಂದೆವು. ಘಂಟೆ 11.30. ಕಾಫಿ ಕುಡಿದು ರೀಚಾರ್ಜ್ ಮಾಡಿಕೊಂಡೆವು. ಹೊಸ ಹುರುಪಿನಿಂದ ನಾವು ಆಟೋ ಮಾಡಿಕೊಂಡು ಕೈಲಾಸನಾಥ ದೇವಾಲಯ ನೊಡಲು ಹೋದೆವು. ಸುಮಾರು 2 ಕಿ.ಮಿ ದೂರ ಅಷ್ಟೆ.
6 ನೇ ಶತಮಾನದ ಈ ದೇವಾಲಯವು ಪಲ್ಲವ ರಾಜ ನರಸಿಂಹವರ್ಮನ್ ನಿರ್ಮಿಸಿದ್ದನಂತೆ. ಈತನ ಹೆಸರಿಗನುಗುಣವಾಗಿ ಇಲ್ಲಿ ಎಲ್ಲಿ ನೋಡಿದರೂ ಸಿಂಹ ಮೂರ್ತಿಗಳೇ ಕಾಣುತ್ತವೆ.



 ಇದು ಈಗ ಪ್ರಾಕ್ತನ ಇಲಾಖೆಗೆ ಒಳಪಟ್ಟಿದೆ. ಸುತ್ತಲೂ ಸುಂದರ ಉದ್ಯಾನ ಬೆಳೆಸಿದ್ದಾರೆ. ನಾವು ದೇವಾಲಯಕ್ಕೆ ಒಂದು ಸುತ್ತು ಬಂದೆವು. ಅಲ್ಲಲ್ಲಿ ದೊಡ್ಡ ದೊಡ್ಡ ಸಿಂಹಗಳು ಬಾಯ್ದೆರೆದು ನಮ್ಮನ್ನು ನೋಡುತ್ತಿವೆ. ಕಾಲನ ಹೊಡೆತದಿಂದ ಬಹಳಷ್ಟು ಹಾನಿಗೀಡಾಗಿದೆ. ಅಲ್ಲಲ್ಲಿ ದುರಸ್ತಿ ಮಾಡಿದ್ದರೂ ವಿರೂಪಗೊಂಡಿವೆ.


 ಎದುರುಗಡೆ ವಿಸ್ತಾರವಾದ ಹುಲ್ಲುಹಾಸು, ಒಂದು ಪಕ್ಕದಲ್ಲಿ ನಂದಿ ಮಂಟಪವಿದೆ.

 ದೇವಾಲಯದ ಮುಂಭಾಗದಲ್ಲಿ ಹಲವಾರು ಪುಟ್ಟ ಗುಡಿಗಳಿವೆ ಮತ್ತು ಕೋಷ್ಟಕಗಳಿದ್ದು ಅದರಲ್ಲಿ ಶಿವಲಿಂಗಗಳಿವೆ.


 ಅಲ್ಲಿರುವ ಒಂದು ಬಾಗಿಲಿನಿಂದ ಒಳ ಹೋದರೆ ಒಂದು ಗುಡಿ ಎದುರಾಗುತ್ತದೆ. ಇದರ ಬಾಗಿಲು ಮುಚ್ಚಿದ್ದರು. ಒಳಗಡೆ ಯಾವ ದೇವರು ಎಂದು ತಿಳಿಯಲಿಲ್ಲ. ಬಹುಶಃ ಪಾರ್ವತಿಯ ದೇಗುಲವಿರಬೇಕು. ಅಲ್ಲಿ 2 ದ್ವಾರಪಾಲಕರ ಮೂರ್ತಿಗಳಿದ್ದವು. ಇವುಗಳನ್ನು ನವೀಕರಿಸಿದ್ದಾರೆ.



 ಒಳಾಂಗಣದ ಭಿತ್ತಿಯಲ್ಲಿ ಸಾಲು ಸಾಲು ಕಂಭಗಳು, ಎಲ್ಲೆಲ್ಲು ನೋಡಿದರೂ ಸಿಂಹಗಳು! ಬೇರಾವ ದೇವಾಲಯಗಳಲ್ಲಿ ಕಂಡುಬರದ ವಿಶಿಷ್ಟ ಶೈಲಿ.




ಮಧ್ಯದಲ್ಲಿ ಕೈಲಾಸನಾಥನ ಆಲಯ. ಶಿಖರವು ಸಾಧಾರಣ ಉನ್ನತಿ ಹೊಂದಿದೆ. ಒಳಗಡೆ ಕರಿಶಿಲೆಯಲ್ಲಿ ಕೆತ್ತಿದ ದೊಡ್ಡ ಶಿವಲಿಂಗ. ಬಹಳ ಸುಂದರವಾಗಿದೆ. ಇಲ್ಲೇ ಪಕ್ಕದ ಗೋಡೆಗೆ ಒರಗಿಸಿರುವ ಭಿನ್ನವಾಗಿರುವ ಬಹಳ ದೊಡ್ಡ ಪಾಣಿ ಪೀಠ ಒಂದನ್ನು ಇರಿಸಿದ್ದಾರೆ. ಇದು ಮುರುಕಲು ಆದ್ದರಿಂದ ಪೂಜೆಗೆ ಯೋಗ್ಯವಲ್ಲ. ಅದರ ಗಾತ್ರ ನೋಡಿಯೇ ಅಚ್ಚರಿಪಡಬೇಕು. 1500 ವರ್ಷಗಳಿಂದ ಮಳೆ, ಗಾಳಿ ಮತ್ತು ಬಿಸಿಲಿನ ಹೊಡೆತದಿಂದ ಹಾನಿಯಾಗಿದ್ದರೂ ಸ್ವಲ್ಪ ದೂರ ನಿಂತು ವೀಕ್ಷಿಸಿದರೆ, ವಾಹ್! ಎಷ್ಟು ಸುಂದರ! ಎನಿಸುತ್ತದೆ.


 ಇಲ್ಲಿಗೆ ಬಹಳ ಜನ ವಿದೇಶೀ ಯಾತ್ರಿಕರು ಬರುತ್ತಾರೆ. ನಾವಿರುವಾಗ ಜರ್ಮನಿಯಂದ ಬಂದಿರುವ ಹಲವರಿದ್ದರು.
ಈವಾಗ ಘಂಟೆ 12-45. ಊಟಕ್ಕೆ ಮೊದಲು ಇನ್ನೂ ಒಂದು ದೇವಸ್ಠಾನ ನೋಡಿಬಿಡೋಣ ಎಂದು ಕರ್ಛಪೇಶ್ವರ ದೇವಾಲಯದ ಕಡೆಗೆ ಹೋದೆವು. ಇದು ಸಹಾ ಶಿವ ಕ್ಷೇತ್ರ. ಇಲ್ಲಿ ಮಹಾವಿಷ್ಣು ಕೂರ್ಮಾವತಾರದಲ್ಲಿ ಶಿವನನ್ನು ಪೂಜಿಸಿದ್ದನಂತೆ.


 ಕರ್ಛಪ ಎಂದರೆ ಕೂರ್ಮ ಅಥವಾ ಆಮೆ. ಹಾಗಾಗಿ ಇದಕ್ಕೆ ಈ ಹೆಸರು. ಸಾಕಷ್ಟು ವಿಶಾಲವಾಗಿದೆ. ಒಂದು ದೊಡ್ಡ ಕಲ್ಯಾಣಿ ಇದೆ.


 ಈ ದೇವಾಲಯವನ್ನು ರಾಜ ರಾಜ ಚೋಳ ನಿರ್ಮಿಸಿದ್ದನಂತೆ. ಶಿವಲಿಂಗವು ಏಕಾಂಬರನಾಥ ಲಿಂಗದಂತೆಯೇ ಇದೆ. ಅಲ್ಲಿ ನಮಿಸಿ ಹೊರಬಂದೆವು. ಕಲ್ಯಾಣಿಗೆ ಒಂದು ಸುತ್ತು ಬಂದೆವು. ಒಂದೆಡೆ ದೊಡ್ಡ ಅಶ್ವತ್ಥ ಮರವಿದೆ. ಅದರ ಕೆಳಗಡೆ ನೂರಾರು ನಾಗ ಕಲ್ಲುಗಳು. ಪ್ರಶಾಂತ ಜಾಗ.
ಬೇಗನೇ ಹೊಟೆಲ್ ಗೆ ಹೋಗಿ ಊಟ ಮುಗಿಸಿದೆವು. ಅಲ್ಲಿಂದ ಒಂದು ಸೀರೆ ಮಳಿಗೆಗೆ ಬಂದೆವು. ನಮಗೆ ಬೇಕಾದ 4-5 ರೇಶ್ಮೆ ಸೀರೆ ಮತ್ತು ಇತರ ಸಾದಾ ಸೀರೆಗಳನ್ನು ಕೊಂಡೆವು. ಇಲ್ಲಿ ರೇಷ್ಮೆ ಸೀರೆ ಬಹಳ ಅಗ್ಗ. ಬೆಂಗಳೂರಿಗಿಂತ 1/3 ಕಡಿಮೆ ಬೆಲೆ.
 ಇನ್ನೊಂದು ಮುಖ್ಯ ದೇವಾಲಯ ಬಾಕಿ ಇದೆ. ಅದುವೇ ವರದರಾಜ ಪೆರುಮಾಳ್ ದೇವಾಲಯ. ಒಂದು ಆಟೋದಲ್ಲಿ ಅಲ್ಲಿಗೆ ತಲುಪಿದಾಗ 4 ಘಂಟೆ. ಎದುರಿಗೆ ಉನ್ನತವಾದ ಭವ್ಯ ರಾಜಗೋಪುರ,


 ಅದನ್ನು ದಾಟಿ ಒಳಗಡೆ ಹೋದರೆ ವ್ಯತ್ಯಸ್ಠವಾದ ಒಂದು ಮಂಟಪ ಕಾಣುತ್ತದೆ. ಎತ್ತರವಾದ 4 ಕಂಭಗಳು ಅದರ ಮೇಲೊಂದು ಶಿಖರ. ಇಂತಹದೊಂದು ಬೇರೆಲ್ಲೂ ನೊಡಿಲ್ಲ ನಾವು. 


ಇದೇ ತರಹದ್ದು ಇನ್ನೊಂದು ಮಂಟಪ ಇದರ ಸ್ವಲ್ಪ ಮುಂದೆ ಇದೆ. ಒಂದು ಪಕ್ಕದಲ್ಲಿ ಶಿಲ್ಪಕಲೆಗಳಿಂದ ಅಲಂಕಾರಗೊಂಡ ಶತ ಕಂಭಗಳಿಂದ ಕೂಡಿದ ಮಂಟಪವಿದೆ. ಇದರಲ್ಲಿನ ಕೆತ್ತನೆಗಳು ಬಹಳ ಸುಂದರವಾಗಿದೆ. ಇದು ವಿಜಯನಗರ ಕಾಲದ್ದು. ಆದರೆ ಇದರ ಸುತ್ತಲೂ ಕಬ್ಬಿಣದ ಬೇಲಿ ರಚಿಸಿ ಅಂದಗೆಡಿಸಿದ್ದಾರೆ.



 ನಾವು ಅದರ ಪಾವಟಿಗೆಯಲ್ಲಿ ಕುಳಿತು ವಿಶ್ರಮಿಸಿದೆವು. ಚೋಳರ ಕಾಲದ ಈ ದೇವಾಲಯವು ವಿಜಯನಗರ ಅರಸರಿಂದ ಇನ್ನೂ ಹೆಚ್ಚಿನ ಉನ್ನತಿಗೊಂಡಿತು. ನಾವು ದೇವಳದ ಒಳಗಡೆ ಹೋದೆವು. ಇಲ್ಲಿ ವರದರಾಜ ಸ್ವಾಮಿಯ ದಿವ್ಯ ದರ್ಶನವಾಯಿತು. ಅಲ್ಲಿಂದ ಹಿಂಭಾಗಕ್ಕೆ ತೆರಳಿ ಮೆಟ್ಟಲುಗಳನ್ನು ಏರಿ ಇಲ್ಲಿನ ವಿಶೇಷತೆಯಾದ ಹಲ್ಲಿಗಳನ್ನು ನೋಡಲು ಹೋದೆವು. ಒಂದೆಡೆ ಮೇಲೆ ಛಾವಣಿಯಲ್ಲಿ ದೊಡ್ಡದಾದ 2 ಹಲ್ಲಿಗಳನ್ನು ಕೆತ್ತಿದ್ದಾರೆ. ಇದಕ್ಕೆ ಚಿನ್ನ ಹಾಗೂ ಬೆಳ್ಳಿಯ ಲೇಪನ ಮಾಡಿದ್ದಾರೆ. ಇವುಗಳನ್ನು ಸ್ಪರ್ಶಿಸಿದರೆ ಹಲ್ಲಿ ದೋಷ ಪರಿಹಾರವಾಗುತ್ತದಂತೆ. ನಾವು ಈವರೆಗೆ ಹಲ್ಲಿಗಳಿಗೆ ಯಾವ ತೊಂದರೆಯೂ ಮಾಡಿಲ್ಲವಾದರೂ ಅವುಗಳನ್ನು ಮುಟ್ಟಿ ಬಂದೆವು. ಇಲ್ಲಿನ ಪಾವಟಿಕೆಗಳಲ್ಲಿ ವಿಜಯನಗರ ಅರಸರ ಹೆಸರುಗಳನ್ನು ಕನ್ನಡ ಅಕ್ಷರದಲ್ಲಿ ಕೊರೆದಿದ್ದಾರೆ. ಹೊರಗಡೆ ಬಹಳ ರುಚಿಕರವಾದ ಪ್ರಸಾದ ಮಾರುತಿದ್ದರು. ಒಂದು ಪಕ್ಕದಲ್ಲಿ ವಿಸ್ತಾರವಾದ ಕಲ್ಯಾಣಿ ಇದೆ.


 ಈ ದೇವಾಲಯ ಸಂಕೀರ್ಣವು ಸುಮಾರು 23 ಎಕ್ರೆ ವಿಶಾಲವಾಗಿದೆಯಂತೆ. ಈ ಪ್ರದೇಶವನ್ನು ವಿಷ್ಣು ಕಂಚಿ ಎಂದರೆ, ಏಕಾಂಬರನಾಥ ಪ್ರದೇಶವನ್ನು ಶಿವ ಕಂಚಿ ಎಂದು ಕರೆಯುತ್ತಾರೆ.
ಇಲ್ಲಿಂದ ಹೊರಟು ನಾವು ಮತ್ತೆ ಏಕಾಂಬರನಾಥ ಅಥವಾ ಪೆರಿಯ ಕೊಯಿಲ್ ಗೆ ಹೋದೆವು. ತುಂಬಾ ಸುಸ್ತು. ಅಲ್ಲೇ ಮುಖ ಮಂಟಪದಲ್ಲಿ ವಿರಮಿಸಿದೆವು. ಮಗದೊಮ್ಮೆ ದೇವರನ್ನು ನೋಡಿ ಬಂದೆವು. ಪಲ್ಲಕಿ ಉತ್ಸವ ನಡೆಯುತಿತ್ತು. ವಿತರಣೆಯಾಗುತಿದ್ದ ಪುಳಿಯೋಗರೆ ಪ್ರಸಾದ ಪಡೆದು ಹೊರಟೆವು. ಈ ಊರಲ್ಲಿ ಇನ್ನೂ ಹಲವಾರು ದೇವಾಲಯಗಳಿವೆಯಂತೆ. ಅವುಗಳನ್ನೆಲ್ಲಾ ನೋಡಲು ಇನ್ನೊಂದು ದಿನ ಬೇಕು. ಕಾಂಚಿ ಮಠ ಮತ್ತು ಕುಮರಕೋಟ್ಟಂ ನೋಡಲು ಸಮಯವಿರಲಿಲ್ಲ.

ಹೋಟೆಲ್ ನಲ್ಲಿ ದೋಸೆ ತಿಂದು ಬಸ್ ನಿಲ್ದಾಣಕ್ಕೆ ಬಂದು ಆರ್ಕೋಣಂ ಬಸ್ ಹತ್ತಿದೆವು. ರಾತ್ರಿ 10 ಘಂಟೆಗೆ ಆರ್ಕೋಣಂ ರೈಲ್ ನಿಲ್ದಾಣ ಸೇರಿದೆವು. ನಮ್ಮ ರೈಲು ಚೆನ್ನೈ ಬೆಂಗಳೂರು ಮೈಲ್ ರಾತ್ರಿ 12-15 ಕ್ಕೆ ಬಂತು. ಬೆಳಗ್ಗೆ 6 ಘಂಟೆಗೆ ಬೆಂಗಳೂರು, 7ಕ್ಕೆ ಮನೆಗೆ ತಲುಪಿದೆವು. ಮನಸ್ಸಿಗೆ ಬಹಳ ಆನಂದವಾದ ಒಂದು ಯಾತ್ರೆಯಾಗಿತ್ತು.       

No comments:

Post a Comment