Sunday, 17 July 2011

Rameshwaram



 ಮದುರೈಯಲ್ಲಿ ರಾತ್ರಿ ಕಳೆದು ಮುಂಜಾನೆ 5 ಘಂಟೆಗೆಲ್ಲಾ ಎದ್ದು ರೈಲ್ವೆ ಸ್ಟೇಷನ್ ಗೆ ಹೊರಟೆವು. ಒಂದು ಆಟೋ ಸಿಕ್ಕಿದ್ದರಿಂದ ಬೇಗನೇ ತಲುಪಿ ಟಿಕೆಟ್ ಕೊಂಡು ಮದುರೈ- ರಾಮೇಶ್ವರಮ್ ಪ್ಯಾಸೆಂಜರ್ ಗಾಡಿ ಹತ್ತಿದೆವು. ಬೆಳಗ್ಗೆ 6.15 ಕ್ಕೆ ರೈಲು ಹೊರಟಿತು. ಸುಮಾರು 173 ಕಿ.ಮೀ. ಪ್ರಯಾಣ. ಹಾಗೇ ತೂಕಡಿಕೆ- ಅರ್ಧ ನಿದ್ರೆಯಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಮುಂದೆ ಮಾನಾ ಮದುರೈ ಯಲ್ಲಿ ರೈಲು ನಿಂತಾಗ ಎಚ್ಚರವಾಯಿತು. ಬೆಳಗ್ಗಿನ ಉಪಾಹಾರದ ಗಡಿಬಿಡಿ ಗೌಜು. ಅದನ್ನು ಮಾರುವವರ ಪೈಪೋಟಿಯ ಗಲಾಟೆ. ಆದರೆ ಎಲ್ಲರೂ ಮಾರುತಿದ್ದುದು ಉದ್ದಿನ ವಡೆ, ಮಸಾಲವಡೆ. ತಮಿಳುನಾಡಿನಲ್ಲಿ ಒಳ್ಳೆಯ ಇಡ್ಲಿ ಸಿಗಬೇಕಿತ್ತು. ಆದರೆ ಅದರ ಸುಳಿವೇ ಇಲ್ಲ. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಲು ಮನಸ್ಸಾಗಲಿಲ್ಲ. ಕಾಫಿ ಬಿಸ್ಕತ್ತಿನಲ್ಲಿ ಸುಧಾರಿಸಿದೆವು. ಪ್ಯಾಸೆಂಜರ್ ಗಾಡಿಯಾದ್ದರಿಂದ ಎಲ್ಲಾ ಸ್ಟೇಷನ್ ಗಳಲ್ಲೂ ರೈಲು ನಿಂತು ಸಾಗುತಿತ್ತು. ಆದರೂ ಇಡ್ಲಿ ಮಾತ್ರ ಸಿಗಲೇ ಇಲ್ಲ. ಕಿಟಕಿಯಿಂದ ಹೊರಗಿನ ಸುಂದರ ದೃಶ್ಯಗಳನ್ನು ಆಸ್ವಾದಿಸುತ್ತಾ ಮನ ತುಂಬಿದೆವು.


ಹಲವಾರು ಕೇಳರಿಯದ ಊರುಗಳನ್ನು ಹಾದು ಪಾಂಬನ್ ಸ್ಟೇಷನ್ ಬಂದಿತು. ಇಲ್ಲಿಂದ ಮುಂದೆ ಸಮುದ್ರ.


ಅದರ ಮೇಲೆ ರೈಲಿಗಾಗಿ 90 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಒಂದು ಸೇತುವೆ ಇದ್ದರೆ, ಮೋಟಾರು ವಾಹನಕ್ಕಾಗಿ ಪ್ರತ್ಯೇಕವಾದ ಒಂದು ಸೇತುವೆಯಿದೆ. 1988 ರಲ್ಲಿ ನಿರ್ಮಿಸಲಾದ  ಇದನ್ನು ಪಾಂಬನ್ ಸೇತುವೆ ಎಂದು ಕರೆಯುತ್ತಾರೆ.   ನಾವು ಸಮುದ್ರದ ಮೇಲೆ ಕಟ್ಟಿರುವ ಎರಡನೇ ಅತೀ ಉದ್ದದ ಸೇತುವೆ ಇದು.


ಈ ಸೇತುವೆಯು ಸುಮಾರು 2.3 ಕಿ.ಮೀ.ಉದ್ದವಿದೆ. ಪಾಕ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ ಇದನ್ನು ನೋಡುವುದು, ಹಾಗೂ ಅದರ ಮೇಲೆ ಪ್ರಯಾಣಿಸುವುದೇ ಒಂದು ರೋಚಕ ಅನುಭವ.

 ಕೆಳಗಡೆ ಹಸಿರು ನೀಲಿ ವರ್ಣದ ಸಮುದ್ರ, ಅದರಲ್ಲಿ ಸಂಚರಿಸುವ ಬೋಟುಗಳು. ಬಿರುಸಾಗಿ ಬೀಸುವ ಗಾಳಿ, ಎಲ್ಲಾ ತುಂಬಾ ಆಕರ್ಷಣೀಯ.


ದೊಡ್ಡ ಬೋಟು ಮತ್ತು ಹಡಗುಗಳು ರೈಲು ಸೇತುವೆಯ ಅಡಿಯಿಂದ ಸಾಗಬೇಕಾದರೆ ಮಧ್ಯದಲ್ಲಿ ಅದನ್ನು ಇಬ್ಭಾಗವಾಗಿ ಮೇಲಕ್ಕೆ ಎತ್ತುವ ವ್ಯವಸ್ಥೆ ಇದೆ. ನಮ್ಮ ರೈಲು ಇದರ ಮೇಲೆ ನಿಧಾನವಾಗಿ ಚಲಿಸಿ ಮುಂದೆ ರಾಮೇಶ್ವರಮ್ ಸ್ಟೇಷನ್ ತಲುಪಿತು.
ರಾಮೇಶ್ವರಮ್ ಒಂದು ದ್ವೀಪ, ಶಂಕುವಿನ ಆಕೃತಿಯಲ್ಲಿದೆ. ತಮಿಳುನಾಡಿನ ರಾಮನಾಥಪುರಮ್ ಜಿಲ್ಲೆಯಲ್ಲಿದೆ. ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣಕ್ಕೆ ಹಿಂದೂ ಮಹಾಸಾಗರ. ಈ  ಜಾಗವನ್ನು ಮನ್ನಾರ್ ಕೊಲ್ಲಿ ಎನ್ನುತ್ತಾರೆ.  ಕೊಂಚ ಹೆಚ್ಚೇ ಎನ್ನಿಸಬಹುದಾದ ಉಷ್ಣ ವಾತಾವರಣ, ಗಾಳಿಯಲ್ಲಿನ ತೇವಾಂಶದಿಂದ ಬೆವರು ಸುರಿಯುತ್ತದೆ.
ರೈಲು ಇಳಿದಾಕ್ಷಣ ಅಲ್ಲೇ ಬಂದಿದ್ದ ಬಸ್ ಏರಿದೆವು. ಬರೇ 2 ರೂ. ಟಿಕೆಟ್ ಗೆ. ನಾವು ರಾಮೇಶ್ವರಮ್ ದೇಗುಲದ ಎದುರುಗಡೆಯೇ ಇಳಿದೆವು.


ಮೊದಲಿಗೆ ಹೊಟ್ಟೆ ತುಂಬಿಸ ಬೇಕಾಗಿತ್ತು. ಅಲ್ಲೇ ಇರುವ ಹೋಟೆಲ್ ಗೆ ಹೋಗಿ ಹಸಿವು ಇಂಗಿಸಿಕೊಂಡೆವು. ನಾವು ಮೊದಲೇ ಬುಕ್ ಮಾಡಿರುವ ಉಡುಪಿ ಛತ್ರ, ಪಕ್ಕದಲ್ಲೇ ಇದ್ದುದರಿಂದ ಅಲ್ಲಿಗೆ ಹೋಗಿ ರೂಮ್ ಪಡ ಕೊಂಡೆವು. ಉಡುಪಿಯ ಪೇಜಾವರ ಮಠದವರ ಈ ಛತ್ರ ವು ಬಹಳ ಚೆನ್ನಾಗಿದೆ. ಇವರದ್ದೇ ಇನ್ನೊಂದು ಛತ್ರವು ಪಕ್ಕದಲ್ಲೇ ಇದೆ. ಅಲ್ಲಿದ್ದ ಹೆಚ್ಚಿನವರು ನಮ್ಮೂರಿನವರೇ ಆದ್ದರಿಂದ, ನಿರಾಳವಾಗಿ ಇರುವಂತಾಯಿತು. ಸ್ನಾನ ಎಲ್ಲಾ ಮುಗಿಸಿ ದೇವರ ಧರ್ಶನಕ್ಕೆ ಹೊರಟೆವು. ಎತ್ತರವಾದ ಶ್ವೇತ ಬಣ್ಣ ಬಳಿದ ಗೋಪುರ.

 

ಇಲ್ಲಿ ಬಣ್ಣಗಳ ತಾಕಲಾಟ ಇಲ್ಲ. ಒಳಗಡೆ ಹೋದರೆ ಎತ್ತರವಾದ ಸ್ಥಂಭಗಳುಳ್ಳ ಪ್ರಾಂಗಣ.ಮದುರೈ ನಲ್ಲಿದ್ದಂತೆಯೇ, ಆದರೆ ಅಲ್ಲಿರುವಷ್ಟು ಕೆತ್ತನೆಗಳಿಲ್ಲ.


ಆದರೂ ಭವ್ಯವಾಗಿದೆ. ಅದರಲ್ಲಿ ಒಂದು ಸುತ್ತು ಬಂದೆವು. ಒಂದು ಪಕ್ಕದಲ್ಲಿ ಸಾಲಾಗಿ ಶಿವಲಿಂಗಗಳನ್ನು ಇರಿಸಿದ್ದಾರೆ. ರಾಮೇಶ್ವರಮ್ ವೈಷ್ಣವ ಹಾಗೂ ಶೈವರಿಗೆ ಬಹಳ ಪ್ರಾಮುಖ್ಯ ಕ್ಷೇತ್ರವಾಗಿದೆ. ಇದನ್ನು ' ಚಾರ್ ಧಾಮ್ ' ಎಂದು ಪರಿಗಣಿಸಲಾಗಿದೆ. ರಾಮೇಶ್ವರಮ್ ಗೆ ಬಂದವರು ಕಾಶಿಗೆ ಹೋಗಬೇಕೆಂದೂ, ಕಾಶಿಗೆ ಹೋದವರು ರಾಮೇಶ್ವರಮ್ ಗೆ ಬರಬೇಕೆಂಬ ಪ್ರತೀತಿ. ಇಲ್ಲಿಗೇ ಬಂದವರು ಸಮುದ್ರದ ಮರಳನ್ನು ಒಯ್ದು ಗಂಗೆಯಲ್ಲಿ ಸಮರ್ಪಿಸಿದರೆ, ಅಲ್ಲಿಂದ ಗಂಗಾಜಲವನ್ನು ತಂದು ಇಲ್ಲಿ ದೇವರಿಗೆ ಅಭಿಷೇಕ ಮಾಡಿಸುತ್ತಾರೆ. ಕಾಶೀ ಯಾತ್ರೆಯ ಫಲ ಪೂರ್ತಿಯಾಗಬೇಕಾದರೆ ಈ ಆಚರಣೆ ಮಾಡಬೇಕಂತೆ. ಹಾಗಾಗಿ ಇಲ್ಲಿ ದಕ್ಷಿಣ ಮತ್ತು ಉತ್ತರ ಭಾರತೀಯರು ಎಲ್ಲರೂ ಬರುತ್ತಾರೆ. ಎಲ್ಲಾ ಪ್ರದೇಶದ ಜನಗಳಿಗೂ ಅನುಕೂಲವಾಗುವಂತೆ ಅವರವರ ಮಠಗಳ ಛತ್ರಗಳೂ, ಹೋಟೆಲ್ ಗಳೂ ಇಲ್ಲಿವೆ. ಅಂತೆಯೇ ಆಯಾ ಪ್ರದೇಶದ ರೀತಿ ರಿವಾಜಿಗನುಸಾರವಾಗಿ ಪೂಜೆ, ಕ್ರಿಯೆಗಳನ್ನು ನಡೆಸಿಕೊಡುವ ಅರ್ಚಕ ಸಮೂಹವೂ ಇದೆ.
ಇಲ್ಲಿ ಕೋಟಿ ತೀರ್ಥಗಳೆಂಬ 22 ಬಾವಿಗಳಿವೆ. ಸಮುದ್ರ ಸ್ನಾನ ಮಾಡಿಕೊಂಡು, ಸೂರ್ಯೋದಯ ನೋಡಿಕೊಂಡು ಸೀದಾ ಇಲ್ಲಿಗೇ ಬಂದು ಎಲ್ಲಾ ತೀರ್ಥಗಳ ನೀರಿನಲ್ಲಿ ಮಿಂದು ರಾಮೇಶ್ವರನ ಧರ್ಶನ ಮಾಡುವುದು ಪುಣ್ಯಕರ ಎಂದು ನಂಬುತ್ತಾರೆ. ಈ ಸ್ನಾನದ ನಂತರ ಒಳಗಡೆ ಬರುವ ಭಕ್ತಾದಿಗಳಿಂದ ಸುರಿದ ನೀರಿನಿಂದಾಗಿ ಒಳಗಿನ ನೆಲವೆಲ್ಲಾ ಜಾರುತ್ತದೆ. ನಡೆಯುವಾಗ ಜಾಗ್ರತೆ ವಹಿಸಬೇಕು.
ಈಗಿರುವ ದೇವಾಲಯವು 12 ನೆ ಶತಮಾನದ್ದು ಎಂದು ತಿಳಿಯಲಾಗಿದೆ. ಆದರೆ ರಾಮೆಶ್ಹ್ವರವು ರಾಮಾಯಣ ಕಾಲದಲ್ಲೇ ಇತ್ತು ಎಂದು ಪುರಾಣಗಳ ಉಲ್ಲೇಖವಿದೆ. ಸೀತಾ ಮಾತೆಯನ್ನು ಅರಸುತ್ತಾ  ಶ್ರೀರಾಮಚಂದ್ರನು ಇಲ್ಲಿಗ ಬಂದು ಸಮುದ್ರ ಸೇತುವನ್ನು ಕಟ್ಟಿ, ಲಂಕೆಗೆ ಕಪಿ ಸೈನ್ಯ ಸಮೇತನಾಗಿ ಹೋಗಿ ರಾವಣವಧೆ ಮಾಡಿ ಸೀತಾದೇವಿಯನ್ನು ಬಿಡಿಸಿಕೊಂಡು ಹಿಂತಿರುಗಿ ಬಂದು, ಬ್ರಹ್ಮಹತ್ಯಾ ಧೋಷ ಪರಿಹಾರಕ್ಕಾಗಿ ಶಿವ ಪೂಜೆಗಾಗಿ ಶಿವಲಿಂಗ ಪ್ರತಿಷ್ಠೆ ಮಾಡುವ ಸಲುವಾಗಿ, ಕಾಶಿಯಿಂದ ಶಿವಲಿಂಗವನ್ನು ತರಲು ಆಂಜನೇಯನನ್ನು ಕಳುಹಿಸುತ್ತಾನೆ. ನಿಶ್ಚಯಿಸಿದ ಸುಮುಹೂರ್ಥಕ್ಕೆ ಸರಿಯಾಗಿ ಆಂಜನೇಯನು ಬರದ ಕಾರಣ ಸೀತಾದೇವಿಯೇ ಮರಳಿನಿಂದ ಶಿವಲಿಂಗ ರಚಿಸಿ ಪ್ರತಿಷ್ಠಾಪಿಸಿದಳಂತೆ. ಆಂಜನೇಯನು ತಡವಾಗಿ ಬಂದುದಕ್ಕೆ ನೊಂದುಕೊಂಡಾಗ ಅವನು ತಂದ ಶಿವಲಿಂಗವನ್ನೂ ಅಲ್ಲೇ ಸ್ಥಾಪಿಸಿದರಂತೆ. ಹಾಗಾಗಿ ಇದು ಶ್ರೀರಾಮ, ಸೀತಾ ಮಾತೆಯಿಂದ ಪೂಜಿಸಲ್ಪಟ್ಟ ಶಿವಲಿಂಗವೆಂದು ನಂಬುತ್ತಾರೆ. ಭಾರತ ದೇಶದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ರಾಮನಾಥೇಶ್ವರ ಲಿಂಗವೂ ಸೇರಿದೆ. ರಾಮೇಶ್ವರವನ್ನು ದಕ್ಷಿಣ ಕಾಶಿ ಎನ್ನುತ್ತಾರೆ. ಅಂತೆಯೇ ಇದು ಅತೀ ಪವಿತ್ರ ಸ್ಥಳವೆಂದು ನಂಬಿಕೆ. ದೇವರ ಗರ್ಭಗುಡಿಯಲ್ಲಿ ಇನ್ನೂ ಒಂದು ಶಿವಲಿಂಗವಿದ್ದು ಇದು ಸ್ಪಟಿಕಲಿಂಗವಾಗಿದೆ. ಪ್ರತೀದಿನ ಬೆಳಗ್ಗೆ 5.10ಕ್ಕೆ ಸ್ಪಟಿಕಲಿಂಗ ದರ್ಶನವಿದೆ. ಇದಕ್ಕಾಗಿ 50 ರೂ. ಟಿಕೆಟ್ ಪಡಕೊಳ್ಳಬೇಕು.
ನಾವು ದೇವರ ದರ್ಶನಕ್ಕಾಗಿ ಒಳ ಹೋದೆವು. ಅಂದು ಗುರುವಾರ ಹೆಚ್ಚು ಸಂದಣಿ ಇರಲಿಲ್ಲ. ದೇವರನ್ನು ಸರಿಯಾಗಿ ನೋಡಲು ಸಾಧ್ಯವಾಯಿತು. ಸರಿಯಿರಿ, ಮುಂದೆ ಹೋಗಿ ಎಂದು ನೂಕುವವರಿಲ್ಲ. ಮನಸಾರೆ ದೇವರಿಗೆ ವಂದಿಸಿದೆವು. ಅದೆಷ್ಟೋ ದೂರದಿಂದ ಗಂಗಾಜಲವನ್ನು ಭಕ್ತಿಯಿಂದ ತಂದು ಶಿವನಿಗೆ ಅಭಿಷೇಕ ಮಾಡುವವರ ಶ್ರದ್ಧಾ ಭಕ್ತಿ ನೋಡುವಂತಾಗಿದೆ. ಬೇಕಾದರೆ ಇಲ್ಲೇ ಗಂಗಾಜಲದ ಪುಟ್ಟ ಕುಡಿಕೆ ಸಿಗುತ್ತದೆ. ಅದನ್ನೇ ಕೊಂಡು ನಾವೂ ಗಂಗಾಭಿಷೇಕ ಸೇವೆಯನ್ನು ಮಾಡಿಸಿದೆವು. ಮಧ್ಯಾಹ್ನದ ಪೂಜೆಯನ್ನೂ ನೋಡಿದೆವು. ಅಲ್ಲಿಂದ ಹೊರಬಂದು ಪಕ್ಕದಲ್ಲೇ ಇರುವ ದೇವಿಯ ಆಲಯಕ್ಕೆ ಹೋಗಿ ದರ್ಶನ ಪಡೆದೆವು.
ಹೊರಗೆ ಬಂದು ಮಾರ್ಗದಲ್ಲೇ ದೇವಸ್ಥಾನಕ್ಕೆ ಒಂದು ಸುತ್ತು ಬಂದೆವು. ಅಲ್ಲೆಲ್ಲಾ ಅಂಗಡಿಗಳು. ಪೂಜಾ ಸಾಮಗ್ರಿ, ಶಂಖ ಚಿಪ್ಪುಗಳನ್ನು ಸುಂದರವಾಗಿ ಜೋಡಿಸಿ ಮಾಡಿದ ಬಗೆ ಬಗೆಯ ಕಲಾಕೃತಿಗಳು, ಊದುವ ಶಂಖ ಇತ್ಯಾದಿಗಳ ಮಳಿಗೆಗಳು ತುಂಬಿವೆ.ಅಂತೆಯೇ ಹೋಟೆಲ್ ಗಳೂ ಛತ್ರ ಗಳೂ ಇವೆ. ನಾವು  ಊಟ ಮಾಡಿ ಸ್ವಲ್ಪ ಹೊತ್ತು ರೂಮಿನಲ್ಲಿ ವಿಶ್ರಮಿಸಿದೆವು. ಚೆನ್ನಾಗಿ ನಿದ್ರೆ ಬಂದಿತ್ತು. ಎಚ್ಚರವಾಗುವಾಗ 3.30. ಲಗುಬಗೆಯಿಂದ ಎದ್ದು ಹೊರಟೆವು. ನಮಗೆ ಧನುಷ್ಕೋಡಿಗೆ ಹೋಗಬೇಕು. ದೇವಸ್ಥಾನದ ಎದುರುಗಡೆಯೇ ಬಸ್ ಬರುತ್ತದೆ. ಅಲ್ಲಿ ಕಾದೆವು. 4.45ಕ್ಕೆ ಬಸ್ ಬಂದಿತು. ಸುಮಾರು 12 ಕಿ.ಮೀ. ದೂರ. ಅರ್ಧ ಘಂಟೆಯಲ್ಲಿ ಅಲ್ಲಿಗೆ ತಲುಪಿದೆವು. ಅಲ್ಲಿಯವರೆಗೆ ಮಾತ್ರ ರಸ್ತೆಯಿದೆ . ಮುಂದೆ ಮರಳದಾರಿ, ಜೀಪ್ ಮಾತ್ರ ಸಾಗಬಲ್ಲುದು.ಮುಂದೆ 7 ಕಿ.ಮೀ.ಸಾಗಬೇಕು.


ಆದರೆ ಅಲ್ಲಿ ಜೀಪುಗಳು ಇರಲಿಲ್ಲ. ಮತ್ತು ಸಂಜೆ 6 ಘಂಟೆಯ ನಂತರ ಅಲ್ಲಿ ಯಾರೂ ಇರಕೂಡದು ಎಂಬ ಭಾರತೀಯ ನೌಕಾಸೇನೆ, ಕೋಸ್ಟ್ ಗಾರ್ಡ್ಸ್ ನ  ಆಜ್ಞಾಪಣೆ ಇದೆ. ಹಾಗಾಗಿ ನಾವು. ಧನುಷ್ಕೋಡಿಯ ತುದಿ ಮುಟ್ಟಲಿಕ್ಕಾಗಲಿಲ್ಲ. ಸ್ವಲ್ಪ ನಿರಾಶೆಯಾಯಿತು. ನಮ್ಮ ಮದ್ಯಾಹ್ನದ ನಿದ್ರೆ ಈ ಒಳ್ಳೆಯ ಅವಕಾಶವನ್ನು ಕಸಿದಿತ್ತು. ಅಲ್ಲಿಯೂ ಇದೇ ರೀತಿ ಸಮುದ್ರ, ಮರಳು ಅಷ್ಟೇ. ಮತ್ತು ಹಿಂದೆ 1964 ರಲ್ಲಿ ಬಂದ ಸುನಾಮಿಯ ರೌದ್ರಾವತಾರದ ಸಾಕ್ಷಿ ಯಾಗಿ ನೆಲಸಮವಾಗಿರುವ ಮನೆ,ಕಟ್ಟಡಗಳು, ರೈಲುಮಾರ್ಗ, ಒಂದು ಹಳೆಯ ಚರ್ಚ್ ನ ಅವಶೇಷಗಳಿವೆಯಂತೆ. ಒಂದು ದೇವಸ್ಥಾನವಿದ್ದದ್ದು ಸಹಾ ನೀರಲ್ಲಿ ಮುಳುಗಿಹೋಗಿದೆ.
ಶ್ರೀರಾಮಪಾದ ಎಂಬ ಸ್ಥಳವಿದೆ. ಅಲ್ಲಿ ಪೂಜೆ ಮಾಡಬಹುದು. ಅಲ್ಲಿಂದ ಲಂಕೆಗೆ ಬರೇ 30 ಕಿ.ಮೀ. ಅಷ್ಟೇ.


ಹೇಗೂ ಇಲ್ಲಿಯವರೆಗೆ ಬಂದಿದ್ದೆವಲ್ಲಾ ಕಡಲ ತೀರದಲ್ಲೇ ಚಾರಣ ಮಾಡೋಣ ಎಂತ ಚಾರಣಪ್ರಿಯರಾದ ನಾವಿಬ್ಬರೂ ಒಮ್ಮತದಿಂದ ತೀರ್ಮಾನಿಸಿದೆವು.
ಇಲ್ಲಿ ಕಡಲು ಎರಡೂ ಕಡೆ ಇದೆ. ಮಧ್ಯದಲ್ಲಿ ಸುಮಾರು ಅರ್ಧ ಕಿ.ಮೀ ನಷ್ಟು ಭೂಮಿಯಿದೆ ಅಷ್ಟೇ. ಬರೇ ಮರಳು, ಮರಗಳೇ ಇಲ್ಲದಅಗಲ ಕಿರಿದಾದ ಜಾಗ! ಕೆಲವೆಡೆ ಮರಳ ದಿಬ್ಬಗಳು, ಕೆಲವೆಡೆ ಜವುಗು ಮರಳು.


 ಅದರಲ್ಲಿ ಕಾಲಿಡಲು ಧೈರ್ಯವಿರಲಿಲ್ಲ. ಒಂದುವೇಳೆ ಹೂತು ಹೋದರೆ? ಭರ್ರನೆ ಬೀಸುವ ಗಾಳಿ, ದಡಕ್ಕಪ್ಪಳಿಸುವ ತೆರೆಗಳು, ವ್ಯಗ್ರವಾದ ಸಾಗರ, ಅಲ್ಲಿ ನಾವಿಬ್ಬರೇ ನಡೆಯುತ್ತಾ ಸಾಗಿದೆವು. ಒಂದುವೇಳೆ ಸುನಾಮಿ ಬಂದರೆ? ಎಂಬ ಆತಂಕವೂ ಮನದಲ್ಲಿ ಮೂಡಿತು. ಅಲ್ಲೆಲ್ಲಾ ಚದುರಿರುವ ಚಿಪ್ಪು, ಶಂಖುಗಳನ್ನು ಆರಿಸುತ್ತಾ, ಕಸ್ತೂರಿ ಒಂದು ಕ್ಯಾರಿ ಬ್ಯಾಗ್ ನಲ್ಲಿ ತುಂಬಿಸುತಿದ್ದಳು. ಇದರಿಂದ ನಮ್ಮ ನಡೆ ನಿಧಾನಗತಿಯಲ್ಲಿ ಸಾಗುತಿತ್ತು. ಹೀಗೇ ಸುಮಾರು 3 ಕಿ.ಮೀ. ಮುಂದೆ ಹೋದೆವು.


ಇದೇ ದಾರಿಯಲ್ಲಿ ಅಲ್ಲವೇ? ಶ್ರೀರಾಮಚಂದ್ರನು, ಲಕ್ಷ್ಮಣ, ಸುಗ್ರೀವ, ಆಂಜನೇಯ, ಜಾಂಭವ ಮತ್ತು ಕಪಿ ಸೈನ್ಯದೊಂದಿಗೆ ಸಾಗಿದ್ದು! ಇದರ ನೆನಪಾಗಿ ಮೈ ಪುಳಕಿತವಾಯಿತು. ಅವರು ಹೋದ ದಾರಿಯಲ್ಲೇ ನಾವಿಂದು ಹೋಗುತಿದ್ದೇವೆ! ಮುಂದೆ ಧನುಷ್ಕೋಡಿಯಲ್ಲಿ ಸಮುದ್ರಕ್ಕೆ ಸೇತುವೆ ರಚಿಸಿ ಲಂಕೆಯನ್ನು ಮುತ್ತಿದರಂತೆ. ಆ ರಾಮಸೇತುವಿನ ಅವಶೇಷಗಳು ಈಗಲೂ ನೀರಿನ ಕೆಳಗೆ ಇದೆಯಂತೆ. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಯು ನಿಜವಾಗಿ ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದಿರಬಹುದೋ ಏನೋ? ಅಷ್ಟು ನೈಜವಾಗಿದೆ.
ಹೊತ್ತು ಕಂತಿತು, ಅಷ್ಟರಲ್ಲೇ ಧನುಷ್ಕೋಡಿಯಿಂದ ವಾಪಾಸು ಬರುತಿದ್ದ ಜೀಪು ಬಂದು ನಿಂತಿತು. ನಾವೂ ಕೂಡಲೇ ಅಲ್ಲಿಂದ ಹಿಂತಿರುಗಬೇಕೆಂದೂ, ಇಲ್ಲವಾದರೆ ಕೋಸ್ಟ್ ಗಾರ್ಡ್ ಗಳು ಬಂದು ಗದರಿಸುತ್ತಾರೆ ಎಂದು ತಿಳಿಸಿದರು. ನಾವೂ ಆದಷ್ಟು ಬೇಗನೇ ಹಿಂತಿರುಗಿದೆವು. ಬಸ್ ಬಂದಿತ್ತು. ಅದರಲ್ಲಿ ರಾಮೇಶ್ವರಮ್ ಗೆ ವಾಪಸಾದೆವು. ದಾರಿಯಲ್ಲಿ ಕೋದಂಡರಾಮ ದೇವಸ್ಥಾನ ಕಾಣಿಸುತಿತ್ತು. ಭಾರತದ ರಾಷ್ಟ್ರಪತಿಯಾಗಿದ್ದ ಶ್ರೀಯುತ  ಎ.ಪಿ.ಜೆ.ಅಬ್ದುಲ್ ಕಲಾಂ  ಅವರ ಹುಟ್ಟೂರು ಧನುಷ್ಕೋಡಿ. ಇಲ್ಲಿ ಅವರ ಮನೆ ಇದೆಯಂತೆ.
ಕಾಫಿ ತಿಂಡಿ ಆದಾಗ ಆಯಾಸವೆಲ್ಲ ಕಡಿಮೆಯಾಯಿತು. ನಮಗೆ ಬೇರೇನೂ ಕೆಲಸವಿರಲಿಲ್ಲ.


 ನೆಟ್ಟಗೆ ದೇವಸ್ಥಾನದ ಒಳಗೆ ಹೋದೆವು, ದೇವರ ದರ್ಶನ ಮಾಡಿದೆವು. ಮತ್ತೆ ಅಲ್ಲೇ ಇರುವ ಸಮುದ್ರದ ಕಿನಾರೆಯಲ್ಲಿ ಕುಳಿತೆವು. ಈಗ ಯಾರೂ ಸ್ನಾನ ಮಾಡುತ್ತಿರಲಿಲ್ಲ. ಹೆಚ್ಚು ರಶ್ ಇರಲಿಲ್ಲ. ಸಮುದ್ರದ ನೀರು ಈಗ ಕಪ್ಪಾಗಿ ತೋರುತಿತ್ತು. ಅದರ ಮೇಲೆ ಪಕ್ಕದ ಕಟ್ಟಡಗಳ ಲೈಟ್, ಬೋಟ್ ಗಳ ಬೆಳಕು ಎಲ್ಲಾ ಸೊಗಸಾಗಿ ಪ್ರತಿಫಲಿಸುತ್ತಿತ್ತು. ಸುಮಾರು ಹೊತ್ತು ಅಲ್ಲಿದ್ದೆವು. ನಂತರ ರಾತ್ರಿಯೂಟ ಮಾಡಿಕೊಂಡು ರೂಮಿಗೆ ಹೋದೆವು. ರಾತ್ರಿ ಬಾತ್ ರೂಮಿಗೆ ಹೋದಾಗ ಏನೋ ಗಬ್ಬು ವಾಸನೆ, ಏನೆಂದು ನೋಡುವಾಗ ನಾವು  ಅಲ್ಲಿಂದ ಆರಿಸಿ ತಂದ ಚಿಪ್ಪುಗಳ ಕರಾಮತ್ತು. ತಕ್ಷಣ ಪೂರ್ತಿ ಚೀಲವನ್ನೇ ಹೊರಗೆ ಎಸೆದೆವು.
 ಮರುದಿನ ಬೆಳಗ್ಗೆ 5 ಘಂಟೆಗೇ ಎದ್ದು ಸಮುದ್ರ ಸ್ನಾನಕ್ಕೆ ಹೋದೆವು. ಅಲ್ಲೆಲ್ಲ ಆಗಲೇ ಬಹಳ ಜನ ಸೇರಿದ್ದರು. ಸಮುದ್ರವು ಇಲ್ಲಿ ಶಾಂತವಾಗಿತ್ತು. ನೀರಿನಲ್ಲಿ ಬಹಳ ದೂರದವರೆಗೆ ಹೋಗಿ ಸ್ನಾನ ಮಾಡಿದೆವು. ಇಬ್ಬರಿಗೂ ಈಜು ಬರುವುದರಿಂದ ಏನೇನೂ ಭಯವಿಲ್ಲದೆ, ಬಹಳ ಹೊತ್ತು ನೀರಲ್ಲಿದ್ದೆವು. ಸೂರ್ಯೋದಯದ ಸೊಬಗನ್ನೂ ಸವಿದೆವು. ಬಹಳ ಕುಶಿ ಪಟ್ಟೆವು.
ಮುಂದೆ ಕೋಟಿ ತೀರ್ಥ ಸ್ನಾನ. ಇದಕ್ಕಾಗಿ ಟಿಕೆಟ್ ಪಡಕೊಂಡು, ಮತ್ತೆ ಒಬ್ಬ ಏಜೆಂಟ್ ನೊಂದಿಗೆ ಸಾಲಿನಲ್ಲಿ ಹೋಗಿ ನಿಂತೆವು. ಇಲ್ಲಿ ತುಂಬಾ ರಶ್ ಇರುತ್ತದೆ. ಆತನೊಂದಿಗೆ ಇನ್ನೂ ಹಲವಾರು ಮಂದಿ ಇದ್ದರು. ಎಲ್ಲರನ್ನೂ ಒಟ್ಟಿಗೇ ಕೊಂಡೊಯ್ದು ಒಂದೊಂದು ತೀರ್ಥಭಾವಿಯಿಂದಲೂ ಪುಟ್ಟ ಬಕೆಟ್ ನಲ್ಲಿ ನೀರು ಮೊಗೆದು ಒಬ್ಬೊಬ್ಬರ ತಲೆಗೆ ಸುರಿಯುತ್ತಾನೆ. ನಂತರ ಮುಂದಿನ ಭಾವಿಯೆಡೆಗೆ ದೌಡಾಯಿಸಬೇಕು. ಯಾರೂ ತಪ್ಪಿಸಿಕೊಳ್ಳಬಾರದು. ಇಲ್ಲಿನ ಹೆಚ್ಚಿನ ಎಲ್ಲಾ ಭಾವಿಗಳು ಹತ್ತಿರ ಹತ್ತಿರದಲ್ಲೇ ಇವೆ. ಆದರೆ ವಿಚಿತ್ರವೆಂದರೆ ಒಂದರ ನೀರು ಇನ್ನೊಂದರಂತಿಲ್ಲ. ಒಂದು ಸಿಹಿ ನೀರಾದರೆ ಇನ್ನೊಂದು ಸವಳು. ಒಂದು ಅತೀ ತಂಪು ಆದರೆ ಇನ್ನೊಂದು ಉಗುರುಬಿಸಿ ನೀರು.ಅವನು ನೀರು ಸುರಿಯುತ್ತಿರುವಾಗಲೇ ಕೆಲವರು ಅದನ್ನು ಬಾಟಲಿಯಲ್ಲಿ ತುಂಬಿಕೊಳ್ಳುತ್ತಿದ್ದರು. ಅಂತೂ ಎಲ್ಲಾ ತೀರ್ಥಗಳನ್ನು ಮಿಂದಾಯಿತು. ಇಲ್ಲೆಲ್ಲಾ ಫೋಟೋ ತೆಗೆಯಲು ಅವಕಾಶವಿಲ್ಲ. ಅದು ಸೌಜನ್ಯವೂ ಅಲ್ಲವೆನ್ನಿ. ನಾವು ಒಣಬಟ್ಟೆ ಧರಿಸಿ ಶ್ರೀದೇವರ ಧರ್ಶನ ಮಾಡಿದೆವು. ಅಂತೂ ಮನದಣಿಯೆ 3 ಸಲ ದೇವರನ್ನು ನೋಡಿದ ಹಾಗಾಯಿತು.
ಮದ್ಯಾಹ್ನದ ಊಟ ಮುಗಿಸಿ ನಾವು ಬಸ್ಸಿನಲ್ಲಿ ಮದುರೈಗೆ ಬಂದೆವು. ಅಲ್ಲಿನ ನೂತನ ಬಸ್ ಸ್ಟ್ಯಾಂಡ್ ಬಹಳ ಚೆನ್ನಾಗಿತ್ತು. ಸ್ವಲ್ಪ ಹೊತ್ತು ಅಲ್ಲಿ ಶಾಪಿಂಗ್ ಮಾಡಿ ಸಿಟಿ ಬಸ್ ನಲ್ಲಿ ಮದುರೈ ರೈಲ್ವೆ ಸ್ಟೇಷನ್ ಗೆ ಬಂದು ರಾತ್ರಿ 8 ಘಂಟೆಗೆ ಹೊರಡುವ ಟ್ಯುಟಿಕೊರಿನ್ - ಬೆಂಗಳೂರು ರೈಲು ಹತ್ತಿ ಬೆಳಗ್ಗೆ 6.40 ಕ್ಕೆ ಊರು ಸೇರಿದೆವು. ಬಹಳ ಕಾಲ ಸವಿ ನೆನಪಿನಲ್ಲಿರುವಂತಹಾ ಒಂದು ಯಾತ್ರೆಯಾಗಿತ್ತು.  
    

Tuesday, 28 June 2011

Madurai

ಈಸಲ ನಾವು ತಮಿಳುನಾಡಿನ ಮದುರೈಗೆ ಹೋಗಿದ್ದೆವು. ಬಹಳ ದಿನಗಳಿಂದ ಮದುರೈ ನೋಡಬೇಕೆಂಬುದು ನನ್ನಾಕೆಯ ಆಶಯವಾಗಿತ್ತು. ನಾನಾದರೋ ಹಲವಾರು ಸಲ ಅಲ್ಲಿಗೆ ಹೋಗಿದ್ದೆ. ರೈಲ್ವೆ ರಿಸರ್ವೇಶನ್ ಮಾಡಿಸಿದೆ. ಮಾರ್ಚ್ ತಿಂಗಳ 8ನೇ ತಾರೀಕು ರಾತ್ರಿ 9.20ಕ್ಕೆ ಹೊರಡುವ ಟ್ಯೂಟಿಕೊರಿನ್ ಎಕ್ಸ್ ಪ್ರೆಸ್ ನಲ್ಲಿ ನಮ್ಮ ಯಾತ್ರೆ ಪ್ರಾರಂಭವಾಯಿತು.
ಹೋಗುವಾಗಲೇ ರೈಲಿನಲ್ಲಿ ನಮ್ಮೂರವರೇ ಆದ ಮಹನೀಯರ ಪರಿಚಯವಾಯಿತು. ಅವರು ತ್ರಿಚೆಂದೂರ್ ದೇವಾಲಯದ ಅರ್ಚಕರು. ನಮ್ಮನ್ನು ಅಲ್ಲಿಗೂ ಬರಲು ಆಮಂತ್ರಿಸಿದರು.
ಸ್ವಲ್ಪ ಹೊತ್ತಿನಲ್ಲೇ ತೂಕಡಿಕೆ ಶುರುವಾಯಿತು. ಬೇಗನೇ ಒಳ್ಳೆಯ ನಿದ್ರೆ ಬಂತು.  ಮುಂಜಾನೆ 6 ಘಂಟೆಗೇ ಎಚ್ಚರವಾಯಿತು. ರೈಲಿನ ಕಿಟಕಿಯಿಂದ ಹೊರಗಿನ ದೃಶ್ಯಗಳನ್ನು  ನೋಡುತ್ತಾ ಇದ್ದಂತೆ ಸೂರ್ಯೊದಯದ ಸೊಬಗನ್ನು ಸವಿದೆವು.
 7.20ಕ್ಕೆ ಸರಿಯಾಗಿ ಮದುರೈಗೆ ತಲುಪಿದೆವು. ಒಂದು ಆಟೋ ಹಿಡಿದು ಮೀನಾಕ್ಷಿ ದೇವಾಲಯದ ಸಮೀಪವೇ ಇರುವ ಹೋಟೆಲ್ ನಲ್ಲಿ ಉಳಕೊಂಡೆವು. ಸ್ನಾನಾದಿಗಳನ್ನು ಪೂರೈಸಿಕೊಂಡು ಉಪಹಾರ ಮುಗಿಸಿ ದೇವಾಲಯ ನೋಡಲು ಹೊರಟೆವು.
ಮದುರೈ ಪಟ್ಟಣವು ವೈಗೈ ನದಿಯ ದಂಡೆಯಲ್ಲಿದೆ. ಬಹಳ ಪುರಾತನ ನಗರವಾಗಿದ್ದು ದೇವಾಲಯಗಳ ನಗರ ಎಂದೇ ಪ್ರಸಿದ್ಧವಾಗಿದೆ. ಪಾಂಡ್ಯ ರಾಜರ ರಾಜಧಾನಿಯಾಗಿದ್ದು ನಂತರ ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು. ನಂತರ ವಿಜಯನಗರ ಅರಸರ ಅಧೀನದಲ್ಲಿದ್ದು ಮತ್ತೆ ಬಂದ ನಾಯಕರ ಆಡಳಿತದಲ್ಲಿತ್ತು. ತರುವಾಯ ಬ್ರಿಟಿಷರು ಬಂದರು. ಹೀಗಾಗಿ ಇಲ್ಲಿ ತುಂಬಾ ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳು ಇವೆ. ಮದುರೈ ಪಟ್ಟಣವು ಸುಮಾರು 50 ಚದರ ಕಿ.ಮಿ. ವಿಸ್ತಾರವಾಗಿದ್ದು ತಮಿಳುನಾಡಿನ ಮೂರನೆಯ ದೊಡ್ಡ ನಗರವಾಗಿದೆ.
ಮದುರೈ ಮೀನಾಕ್ಷಿ ದೇವಾಲಯ ಸಂಕೀರ್ಣವು ಸುಮಾರು 45 ಎಕರೆಯಷ್ಟು ವಿಸ್ತಾರವಾಗಿದೆ. ಇಲ್ಲಿನ ಮುಖ್ಯ ದೇವಾಲಯವು ಶಿವನಿಗೆ ಮೀಸಲು. ಇಲ್ಲಿ ಪರಮೇಶ್ವರನನ್ನು ಸುಂದರೇಶ್ವರ ಎಂದು ಹೆಸರಿಸಿದ್ದಾರೆ. ಅದರ ಪಕ್ಕದಲ್ಲೇ ಪಾರ್ವತಿ ದೇವಾಲಯವಿದೆ. ಇಲ್ಲಿ ಪಾರ್ವತಿಯನ್ನು ಮೀನಾಕ್ಷಿ ಎಂದು ಕರೆಯುತ್ತಾರೆ. ದೇವಸ್ಥಾನಕ್ಕೆ ಓಟ್ಟು 12 ಬೃಹತ್ತಾದ ಗೋಪುರಗಳಿದ್ದು, ಮದುರೈ ಶೈಲಿಯ ಗೋಪುರಗಳು ಎಂದೇ ಪ್ರಖ್ಯಾತಿ ಹೊಂದಿದೆ. ಬಹಳ ದೂರದಿಂದಲೇ ಈ ಗೋಪುರಗಳನ್ನು ಕಾಣಬಹುದು. ಇವುಗಳಲ್ಲಿ ಅತೀ ಎತ್ತರದ ಗೋಪುರವೆಂದರೆ ದಕ್ಷಿಣಕ್ಕಿರುವ ಗೋಪುರ.
 ಇದರ ಎತ್ತರ ಸುಮಾರು 170 ಅಡಿಗಳು! ಅತೀ ಎತ್ತರದ ಗೋಪುರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಇವುಗಳ ಮೇಲೆಲ್ಲಾ ಅಸಂಖ್ಯಾತ ಮೂರ್ತಿಗಳು. ಎಲ್ಲಕ್ಕೂ ಬೇರೆ ಬೇರೆ ಬಣ್ಣ ಹಚ್ಚಿದ್ದಾರೆ. ಪುರಾಣ ಕಥೆಗಳನ್ನು ಆಧರಿಸಿದ ಈ ಮೂರ್ತಿಗಳು ಆಕರ್ಷಕವಾಗಿವೆ. ಎಲ್ಲಾ ದೇವಾನುದೇವತೆಗಳು, ಋಷಿ ಮುನಿಗಳು, ದೇವಗಣಗಳು, ಅವರ ವಾಹನಗಳಾದ ಪ್ರಾಣಿಗಳು, ಪಕ್ಷಿಗಳು, ರಾಕ್ಷಸರು, ಭಕ್ತ ಮಾನವರು ಎಲ್ಲಾ ಕಾಣಬಹುದು.
 ಯಾವುದನ್ನು ನೋಡುವುದು ಯಾವುದನ್ನು  ಬಿಡುವುದು ಎಂಬ ಗೊಂದಲಕ್ಕೊಳಗಾಗುತ್ತೇವೆ. ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಮೇಲ್ಗಡೆ ನೋಡಿದ ಪರಿಣಾಮವಾಗಿ ಕತ್ತು ನೋಯುತ್ತದೆ. ಹೊರಗಿನ 6 ಗೋಪುರವನ್ನು ಒಳಗೊಂಡು ಬಹಳ ಎತ್ತರವಾದ ಪ್ರಾಕಾರವಿದೆ. ಅದನ್ನು ಏರಿ ಬರಲು ಸುಲಭ ಸಾಧ್ಯವಿಲ್ಲ. ಗೋಪುರದ ಮೂಲಕ ಪ್ರವೇಶಿಸಿದರೆ ದೊಡ್ಡ ರಾಜಾಂಗಣ ಸಿಗುತ್ತದೆ. ಇದರಲ್ಲಿ ಒಂದು ಸುತ್ತು ಬರಬೇಕಾದರೆ ನಾವು ತುಂಬಾ ನಡೆಯಬೇಕಾಗುತ್ತದೆ. ರಾಜಾಂಗಣದ ಒಳ ಪ್ರಾಕರವೂ ಬಹಳ ಎತ್ತರವಾಗಿದ್ದು ಇಲ್ಲಿಯೂ 6 ಗೋಪುರಗಳಿವೆ. ನಾವು ಒಳಗೆ ಪ್ರವೇಶ ಮಾಡುವಾಗ ಯಾವ ದಿಕ್ಕಿನ ಗೋಪುರವೆಂದು ನೆನಪಿಟ್ಟುಕೊಳ್ಳಬೇಕು. ಇಲ್ಲವಾದರೆ ನಮಗೆ ದಾರಿ ತಪ್ಪಿ ಇನ್ನ್ಯಾವುದೋ ಗೋಪುರದಿಂದ ಹೊರ ಬಂದರೆ ನಮ್ಮ ಚಪ್ಪಲಿ ಇಟ್ಟಿರುವ ಜಾಗಕ್ಕೆ ಬರಲು ಪರದಾಡಬೇಕಾಗುತ್ತದೆ. ಎಲ್ಲಾ ಗೋಪುರಗಳೂ ಒಂದೇ ತೆರನಾಗಿದ್ದು 6 ಗೋಪುರಗಳನ್ನು ಹೊಂದಿರುವ ಕಾರಣ ದಿಕ್ಕು ತಪ್ಪಿ ಹೋಗುವ ಸಂಭವ ಹೆಚ್ಚು.
 ಒಳ ಪ್ರಾಕಾರದ ಗೋಡೆಯಲ್ಲಿ ಒಂದು ಕಡೆ ಪುಟ್ಟದಾದ ಒಂದು ಕಿಂಡಿಯಿದ್ದು ರಾಜಾಂಗಣದಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ನಿಂತು ಆ ಕಂಡಿಯಿಂದ ನೋಡಿದರೆ ಮಾತ್ರ ನಮಗೆ ಮೀನಾಕ್ಷಿ ಅಮ್ಮನವರ ದೇವಾಲಯದ ಸುವರ್ಣ ಗೋಪುರವನ್ನು ನೋಡಲು ಸಾಧ್ಯ! ಬೇರೆ ಎಲ್ಲಿಂದಲೂ ಇದನ್ನು ನೋಡಲು ಸಾಧ್ಯವಿಲ್ಲ!
ರಾಜಾಂಗಣದಿಂದ ಒಳ ಹೊಕ್ಕರೆ ಒಂದು ಪಕ್ಕದಲ್ಲಿ ವಿಶಾಲವಾದ ಕಲ್ಯಾಣಿ ಇದೆ.
 ಆದರೆ ನಾವು ಹೋದಾಗ ಅದರಲ್ಲಿ ನೀರೇ ಇರಲಿಲ್ಲ. ( ಹಿಂದೊಮ್ಮೆ ನಾನು ನೋಡಿದ್ದಾಗ ತುಂಬಾ ನೀರಿತ್ತು) ಬದಲಾಗಿ ಅದರಲ್ಲಿ ಅಲ್ಲಲ್ಲಿ ಹುಲ್ಲು ಹಾಗೂ ಹೂ ಗಿಡಗಳನ್ನು ಬೆಳೆಸಿದ್ದರು. ಮದ್ಯದಲ್ಲಿ ಒಂದು ಸುವರ್ಣ ಕಮಲವನ್ನೂ ಇರಿಸಿದ್ದಾರೆ. ಬಹುಷಃ ಮಳೆ ಬಂದಾಗ ನೀರು ತುಂಬಿಕೊಳ್ಳಬಹುದು. ಕಲ್ಯಾಣಿಯ ಪಕ್ಕದಲ್ಲಿ ಮುಂದೆ ಸಾಗಿದರೆ ಸುಂದರೇಶ್ವರನ ಆಲಯ ಸಿಗುತ್ತದೆ. ಇಲ್ಲೆಲ್ಲಾ ಸುಂದರ ಕೆತ್ತನೆಗಳಿರುವ ಸ್ಥಂಭಗಳಿವೆ.
 ಎದುರುಗಡೆಯಲ್ಲಿ ಭದ್ರಕಾಳಿ ಮತ್ತು ಊರ್ಧ್ವ ತಾಂಡವ ಮೂರ್ತಿಗಳಿವೆ. ಮಧ್ಯದಲ್ಲಿ ನಂದಿ ಮಂಟಪವಂತೂ ಬಹಳ ಕೆತ್ತನೆ ಕೆಲಸದಿಂದ ಕೂಡಿದ ಸ್ಥಂಭಗಳಿಂದ ಆಕರ್ಷಣೀಯವಾಗಿದೆ. ಮಧ್ಯೆ ನಂದಿಯಿದೆ. ಮಹಾದ್ವಾರದ ಎರಡೂ ಪಕ್ಕದಲ್ಲಿ ದ್ವಾರಪಾಲಕರ ಮೂರ್ತಿಗಳಿವೆ. ಮತ್ತೊಂದೆಡೆ ನವಗ್ರಹಗಳಿವೆ. ಸ್ವರ್ಣ ದ್ವಜ ಸ್ಥಂಭವಿದೆ. ಮೇಲ್ಗಡೆ ಆಕರ್ಷಕವಾಗಿ ರಂಗೋಲಿ ಹಾಕಿದಂತೆ ಪೇಯಿಂಟ್ ಮಾಡಿದ್ದಾರೆ.
 ಮದುರೈಗೆ ಬಹಳಷ್ಟು ವಿದೇಶೀಯರು ಬರುತ್ತಾರೆ. ಹೆಚ್ಚಿನ ವಿದೇಶೀ ಮಹಿಳೆಯರು ನಮ್ಮ ಭಾರತೀಯ ಉಡುಗೆ ತೊಟ್ಟು ಹಣೆಗೆ ತಿಲಕವಿಟ್ಟು ಹೂ ಮುಡಿದು ಅಪ್ಪಟ ಭಾರತೀಯರಂತೆ ಬರುತ್ತಾರೆ. ಕೈಯಲ್ಲಿ ಬೆಲೆಬಾಳುವ ಅತ್ಯಾಧುನಿಕ ಕ್ಯಾಮರಾ ಹಿಡಿದುಕೊಂಡು ಎಲ್ಲವನ್ನೂ ಬಹಳ ಕುತೂಹಲದಿಂದ ಫೋಟೋ ಹಿಡಿಯುತ್ತಾರೆ. ಇವರಿಗೆಲ್ಲಾ ಇಲ್ಲಿಯವರೆಗೆ ಮಾತ್ರ ಪ್ರವೇಶ, ಮುಂದೆ ಒಳಗಡೆ ಹೋಗುವಂತಿಲ್ಲ. ಒಳಗಡೆ ಯಾರಿಗೂ ಫೋಟೋ ತೆಗೆಯಲು ಅವಕಾಶವಿಲ್ಲ. ನಮ್ಮ ಕ್ಯಾಮರಾ ಬ್ಯಾಗು ಸೇರಿತು. ನಾವು ಆಲಯದ ಹೊರ ಸುತ್ತಿನಲ್ಲಿ ಒಂದು ಪ್ರದಕ್ಷಿಣೆ ಹಾಕಿ, ಒಳಗಡೆ ಹೋದೆವು. ಒಳಹೊಗುತಿದ್ದಂತೆ ಬಲ ಪಕ್ಕಕ್ಕೆ ನಟರಾಜನ ರಜತ ಮೂರ್ತಿಯಿದೆ, ಬಹಳ ಸುಂದರವಾಗಿದೆ. ಎದುರುಗಡೆ ಸುಂದರೆಶ್ವರನ ಲಿಂಗವಿದೆ. ಅಲ್ಲಿ ನಾವು ಶಿವಲಿಂಗಕ್ಕೆ ನಮಿಸಿ ದರ್ಶನ ಪಡೆದೆವು. ಜನಜಂಗುಳಿಯಿಲ್ಲವಾದ್ದರಿಂದ ಬಹಳ ಆರಾಮವಾಗಿ ದೇವರನ್ನು ಕಾಣುವಂತಾಯಿತು. ಪ್ರಸಾದ ಸ್ವೀಕರಿಸಿಕೊಂಡು ಹೊರಬಂದೆವು.
ಪಕ್ಕದಲ್ಲಿ ಮೀನಾಕ್ಷಿ ಅಮ್ಮನವರ ಆಲಯ. ಒಳಗಡೆ ಹೋಗುತಿದ್ದಂತೆ ಎದುರುಗಡೆ ಎತ್ತರದಲ್ಲಿ ಮೀನಾಕ್ಷಿ ದೇವಾಲಯ. ಸುತ್ತಲೂ ಸ್ಥಂಭಗಳಿಂದ ಅಲಂಕೃತವಾದ ಸುತ್ತಂಬಲವಿದೆ. ಇದರಲ್ಲಿ ಪ್ರದಕ್ಷಿಣೆ ಮಾಡಿ ಒಳಗೆ ಹೋದೆವು. ದೇವಿಯ ದರ್ಶನಕ್ಕಾಗಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ವಾತಾನುಕೂಲಿಯೂ ಇದೆ. ಇಲ್ಲಿಯೂ ನಾವು ಸರದಿಯಲ್ಲಿ ನಿಂತುಕೊಂಡು ಮೀನಾಕ್ಷಿ ಅಮ್ಮನವರ ದರ್ಶನ ಮಾಡಿದೆವು. ಬಹಳ ಸುಂದರ ವಿಗ್ರಹ. ಕೈಯಲ್ಲಿ ಹಸಿರು ಗಿಣಿಯನ್ನು ಹಿಡಿದಿರುವುದು ಇಲ್ಲಿಯ ವೈಶಿಷ್ಟ್ಯ. ದೇವಿಯ ಅರ್ಚನೆಯ ಸುಗಂಧಭರಿತ ಕುಂಕುಮ ಪ್ರಸಾದ ಪಡೆದುಕೊಂಡು ಸ್ವಲ್ಪಹೊತ್ತು ಕುಳಿತುಕೊಂಡು ಪ್ರಾರ್ಥಿಸಿಕೊಂಡೆವು. ಸುತ್ತಲೂ ಆಳ್ವಾರ್ ಗಳ ಮೂರ್ತಿಗಳಿವೆ. ಪರಿವಾರ ದೇವರ ಗುಡಿಗಳಿವೆ. ಇಲ್ಲಿ ಒಂದು ಬಹಳ ಸುಂದರವಾದ ಬೃಹತ್ ವಿನಾಯಕನ ಮೂರ್ತಿಯಿದೆ. ಇದರ ಕೆತ್ತನೆಯಂತೂ ಕಣ್ಮನ ಸೆಳೆಯುತ್ತದೆ.

ಹಾಗೇನೆ ಸುತ್ತಾಡಿಕೊಂಡು ಹೊರಬಂದಾಗ ನಮಗೆ ಟೆಂಪಲ್ ಮ್ಯೂಸಿಯಂ ಕಂಡಿತು. ಟಿಕೆಟ್ ಪಡಕೊಂಡು ಒಳ ಹೊಕ್ಕೆವು. ಬಹಳ ವಿಶಾಲವಾಗಿ, ತುಂಬಾ ಸ್ಥಂಭಗಳುಳ್ಳ ದೊಡ್ಡ ಮ್ಯೂಸಿಯಂ.
 ಎಲ್ಲಿ ನೋಡಿದರೂ ಸುಂದರವಾದ ಕಲ್ಲಿನ ಮೂರ್ತಿಗಳು, ಅದಕ್ಕೆ ಸರಿಯಾಗಿ ಫೋಕಸ್ ಮಾಡಿರುವ ಲೈಟ್ ಗಳ ಮಂದ ಪ್ರಾಕಾಶದಲ್ಲಿ ಇನ್ನೂ ಆಕರ್ಷಕವಾಗಿ ಕಾಣುತ್ತವೆ.
 ಮಧ್ಯೆ ನಟರಾಜನ ಸುಂದರ ಮೂರ್ತಿ. ಒಂದೆಡೆಯಲ್ಲಿ ವರ್ಣ ಚಿತ್ರಗಳ ಸಂಗ್ರಹ.
 ಭಿತ್ತಿ ಚಿತ್ರಗಳು ನೋಡಲು ಸುಂದರವಾಗಿವೆ. ಇನ್ನೊಂದೆಡೆ ಕಂಚಿನ ಪುರಾತನ ಮೂರ್ತಿಗಳನ್ನು ಗಾಜಿನ ಪೆಟ್ಟಿಗೆಯೊಳಗೆ ಇರಿಸಿದ್ದಾರೆ.
 ಎಲ್ಲವನ್ನೂ ಸರಿಯಾಗಿ ನೋಡಲು 2 ಘಂಟೆಗಳಾದರೂ ಬೇಕು. ಬಹಳ ಆಕರ್ಷಕವಾಗಿ ನೀಟಾಗಿ ಇರಿಸಿದ್ದಾರೆ.
ಇದನ್ನೆಲ್ಲಾ ನೋಡಿಕೊಂಡು ಹೊರ ಬಂದೆವು. ಘಂಟೆ 12. ಕಾಫಿ ಕುಡಿದು ಬಸ್ ಸ್ಟ್ಯಾಂಡಿಗೆ ಬಂದೆವು. ಅಲ್ಲಿ ಸ್ವಲ್ಪ ದ್ರಾಕ್ಷಿ, ಸೌತೆಕಾಯಿ ಕೊಂಡು, ಮಾರಿಯಮ್ಮನ್ ತೆಪ್ಪ ಕೊಳಕ್ಕೆ ಹೋಗುವ ಬಸ್ ಏರಿದೆವು. ಸುಮಾರು 3 ಕಿ.ಮಿ. ಅಷ್ಟೇ. ಅಲ್ಲಿ ಇಳಿದು ತೆಪ್ಪ ಕೊಳದ ಬಳಿಗೆ ಬಂದೆವು. ಬಹಳ ವಿಸ್ತಾರವಾದ ಕೊಳ.
 
ತುಂಬಾ ನೀರಿತ್ತು. ಮಧ್ಯೆ ಒಂದು ಕೃತಕ ದ್ವೀಪ. ಅದರಲ್ಲಿ ಒಂದು ದೇವಾಲಯದ ಮಾದರಿ ಕಟ್ಟಡ. ಕೆಲವು ಮರಗಳೂ ಇದ್ದು ಸುಂದರವಾಗಿತ್ತು. ಆದರೆ ಅಲ್ಲಿಗೆ ಹೋಗಲು ಯಾವ ಸೌಕರ್ಯವೂ ಇರಲಿಲ್ಲ. ಸುತ್ತಲೂ ಕೊಳಕ್ಕೆ  ಇಳಿಯಲು ಸೋಪಾನಗಳಿದ್ದವು. ಅಲ್ಲೇ ಕುಳಿತು ಸೌತೆಕಾಯಿ ತಿಂದೆವು. ದ್ರಾಕ್ಷಿ ಬಹಳ ಸಿಹಿಯಾಗಿತ್ತು. ಬಿಸಿಲಿನ ಬೇಗೆಗೆ ತುಂಬಾ ಹಿತವೆನಿಸಿತು. ನಂತರ ಅಲ್ಲೇ ಪಕ್ಕದಲ್ಲಿದ್ದ ಮಾರಿಯಮ್ಮನ್ ದೇವಸ್ಥಾನಕ್ಕೆ ಹೋದೆವು. ಪುಟ್ಟ ಗುಡಿ, ಅದಕ್ಕೆ ಇಷ್ಟು ದೊಡ್ಡ ಕೊಳ! ಆಶ್ಚರ್ಯವೆನಿಸಿತು. ಮಾರಿಯಮ್ಮನ ಜಾತ್ರೆಗೆ ಈ ಕೊಳದಲ್ಲಿ ತೆಪ್ಪೋತ್ಸವ ಮಾಡುತ್ತಾರಂತೆ.
ಮುಂದೆ ನಾವು ಅಲ್ಲಿಂದಲೇ ಬಸ್ ಹತ್ತಿಕೊಂಡು ಸುಮಾರು 7 ಕಿ.ಮಿ. ದೂರವಿರುವ ತಿರುಪುರಕುಂಡ್ರಂಗೆ ಬಂದೆವು. ಇಲ್ಲಿಯೂ ಒಂದು ದೊಡ್ಡ ದೇವಾಲಯವಿದೆ. ಹಿಂದುಗಡೆ ಎತ್ತರವಾದ ಬೆಟ್ಟ. ನಾವು ಅಲ್ಲಿ ತಲುಪಿದಾಗ ಬಾಗಿಲು ಮುಚ್ಚಿತ್ತು. ಸಂಜೆ 4 ಘಂಟೆಗೆ ದರ್ಶನ. ಹೊಟ್ಟೆ ಹಸಿದಿತ್ತು. ಒಂದು ಉಡುಪಿ ಹೋಟೆಲ್ ಸಿಕ್ಕಿತು. ಅಲ್ಲಿ ಊಟ ಮಾಡಿ ದೇವಾಲಯದ ಎದುರುಗಡೆ ಗೋಪುರದಲ್ಲಿ ಸ್ವಲ್ಪ ವಿಶ್ರಮಿಸಿದೆವು. ಸಮಯಕ್ಕೆ ಸರಿಯಾಗಿ ಬಾಗಿಲು ತೆರೆದರು, ಒಳಗೆ ಸಾಲಿನಲ್ಲಿ ಹೋದೆವು. ಮೊದಲಿಗೆ ಒಂದು ದೊಡ್ಡ ಕೊಳ, ಅಲ್ಲಿ ಕೈ ಕಾಲು ತೊಳೆದು ಒಳಗೆ ಹೋದೆವು. ಎತ್ತರದಲ್ಲಿ ಇರುವ ಕಾರಣ ಸ್ವಲ್ಪ ಮೆಟ್ಟಿಲು ಏರಬೇಕು. ಒಳಗಡೆ ಮುರುಗನ್ ದೇವರಲ್ಲದೆ ಇನ್ನೂ ಕೆಲವು ದೇವರ ವಿಗ್ರಹಗಳಿವೆ. ಎಲ್ಲಾ ದೇವರನ್ನು ಪ್ರಾರ್ಥಿಸಿಕೊಂಡು ಹೊರ ಬಂದಾಗ ನಮ್ಮ ಬಸ್ ಬಂದಿತು. ಅದನ್ನೇರಿ ಮದುರೈಗೆ ವಾಪಸು ಬಂದೆವು. ಮದುರೈ ಪೇಟೆ ಸುತ್ತಾಡಿದೆವು. ಸಣ್ಣ ಪುಟ್ಟ ಶಾಪಿಂಗ್ ಮಾಡಿದೆವು. ನಂತರ ಮಗದೊಮ್ಮೆ ಮೀನಾಕ್ಷಿ ಧರ್ಶನಕ್ಕೆ ಒಳಗೆ ಹೋದೆವು.
ನಮ್ಮ ಅದೃಷ್ಟಕ್ಕೆ ಈಗಲೂ ರಶ್ ಇರಲಿಲ್ಲ. ಸಾವಕಾಶವಾಗಿ ದೇವರನ್ನು ನೋಡಿಕೊಂಡು ಹೊರ ಬಂದು ಅಲ್ಲೇ ಕೊಳದ ಹತ್ತಿರ ಕುಳಿತು ಗೋಪುರಗಳನ್ನು ನೋಡುತ್ತಾ ಕುಳಿತೆವು.
ರಾತ್ರಿಯಾಯಿತು. ರೂಮಿಗೆ ಬರುವಾಗ ಹೊಟ್ಟೆ ತುಂಬಿಸಿಕೊಂಡು ಬಂದು ಸ್ನಾನ ಮಾಡಿ ಮಲಗಿಕೊಂಡೆವು. ಮರುದಿನ ಬೆಳಿಗ್ಗೆ 6 ಘಂಟೆಗೆ ರಾಮೇಶ್ವರಕ್ಕೆ ರೈಲಿನಲ್ಲಿ ನಮ್ಮ ಪ್ರಯಾಣ. ಈ ಯಾತ್ರೆಯನ್ನು ಮುಂದೆ ಬರೆಯುತ್ತೇನೆ.



  

Friday, 20 May 2011

Dubai


 ನಮ್ಮ ಇಂಗ್ಲೆಂಡ್ ಯಾತ್ರೆಯನ್ನು ಮುಗಿಸಿಕೊಂಡು ಹಿಂತಿರುಗಿ ಬರುವಾಗ ದುಬೈಗೆ ಬರಬೇಕೆಂದು ನನ್ನ ತಮ್ಮಂದಿರ ಆಹ್ವಾನ ಮೇರೆಗೆ ನಾವು ಲಂಡನ್ನಿನಿಂದ ನೇರ ಎಮಿರೇಟ್ಸ್ ವಿಮಾನದಲ್ಲಿ ದುಬೈಗೆ ಬಂದಿಳಿದೆವು. ನಾವು ಬೆಂಗಳೂರಿನಿಂದ ಇಂಗ್ಲೆಂಡ್ ಗೆ ಹೋಗುವಾಗಲೂ ಎಮಿರೇಟ್ಸ್ ವಿಮಾನದಲ್ಲೇ ಪ್ರಯಾಣಿಸಿ ಸ್ವಲ್ಪ ಹೊತ್ತು ದುಬೈ ವಿಮಾನ ನಿಲ್ದಾಣದಲ್ಲಿ ತಂಗಿದ್ದು ಮುಂದೆ ಲಂಡನ್ನಿಗೆ ಪ್ರಯಾಣ ಬೆಳೆಸಿದ್ದೆವು. ಹಾಗಾಗಿ ನಮಗೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಚಯ ಚೆನ್ನಾಗಿತ್ತು.ರಾತ್ರಿ 10 ಗಂಟೆಗೆ ಲಂಡನ್ ಹೀಥ್ರೂ ವಿಮಾನ ನಿಲ್ದಾಣ ಬಿಟ್ಟು ನಮ್ಮ ವಿಮಾನ ಮುಂಜಾನೆ 6ಕ್ಕೆ ದುಬೈನಲ್ಲಿ ಇಳಿದಿತ್ತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ಅದ್ಬುತ ಲೋಕ. ಅಲ್ಲಿನ ಲಾಂಜ್ ನಲ್ಲಿ ತುಂಬಾ ಆಧುನಿಕ ಮಳಿಗೆಗಳಿದ್ದು ಅಲಂಕಾರಕ್ಕಾಗಿ ಚಿನ್ನದ ಬಣ್ಣ ಹೊಂದಿದ ಕೆಲವು ಬೃಹತ್ ಖರ್ಜೂರದ ಮರದ ಮಾದರಿಯನ್ನು ಇರಿಸಿದ್ದಾರೆ. 3-4 ಮಹಡಿಗಳಿಂದ ಒಳಗೊಂಡ ಈ ನಿಲ್ದಾಣವು ಜಗತ್ತಿನಲ್ಲೇ ಅತ್ಯಾಧುನಿಕವಾಗಿದೆ. ಅಲ್ಲಿ ಇಳಿದಾಕ್ಷಣ ನಮ್ಮ ವೀಸಾ ಪರಿಶೀಲನೆ, ಚೆಕ್ ಅಪ್ ಎಲ್ಲಾ ಮುಗಿಸಿಕೊಂಡು ಹೊರಬಂದೆವು.ನನ್ನ ತಮ್ಮಂದಿರಿಬ್ಬರೂ ನಮ್ಮನ್ನು ಎದುರುಗೊಂಡು ಸಂಭ್ರಮದಿಂದ ಅವರ ಮನೆಗೆ ಕೊಂಡೊಯ್ದರು. ಅಲ್ಲಿ ಅವರ ಪತ್ನಿ, ಮಕ್ಕಳು ಎಲ್ಲರೂ ಬಹಳ ಸಡಗರದಿಂದ ನಮ್ಮನ್ನು ಸ್ವಾಗತಿಸಿದರು.
ಹಲವಾರು ವರ್ಷಗಳಿಂದ ನನ್ನ ಸಹೋದರರಾದ ಶ್ರೀಹರಿ ಮತ್ತು ರವಿಚಂದ್ರ ಅಲ್ಲಿ ತಮ್ಮ ಸಂಸಾರ ಹೂಡಿದ್ದಾರೆ. ಮಕ್ಕಳೊಂದಿಗೆ ಸರಸವಾಡುತ್ತಾ ನಾವೂ ನಮ್ಮ ಇಂಗ್ಲೆಂಡ್ - ಲಂಡನ್ ಅನುಭವಗಳನ್ನು ಹಂಚಿಕೊಂಡೆವು. ಮೊದಲು ನಾವು ರವಿಯ ಮನೆಯಲ್ಲಿ 8 ದಿನ ಇದ್ದೆವು. ರವಿ, ಅವನ ಪತ್ನಿ ರೂಪಾ, ಮಕ್ಕಳು ನಿರೇನ್ ಮತ್ತು ನಂದನ್  ದಿನಾಲು ನಮ್ಮನ್ನು  ಹೊರಗಡೆ ತಿರುಗಾಡಲು ಕೊಂಡೊಯ್ಯುತಿದ್ದರು.
ದುಬೈ ಒಂದು ಮಾಯಾನಗರಿ! ಲಂಡನ್ ಗಿಂತ ಬಹಳ ಭಿನ್ನ. ಲಂಡನ್, ಗತಕಾಲದ ಕನ್ನಡಿಯಾದರೆ ದುಬೈ ಆಧುನಿಕ ಜಗತ್ತಿನ ಅತ್ಯುತ್ತಮ ಮಾದರಿ.
 ಇಲ್ಲೆಲ್ಲಾ ಎತ್ತ ನೋಡಿದರೂ ಆಕಾಶದೆತ್ತರಕೆ ಚಾಚಿ ನಿಂತ ಗಗನಚುಂಬಿ ಕಟ್ಟಡಗಳು ಎಣಿಸಲಾರದಷ್ಟು. ಒಂದೊಂದೂ ಬೇರೆ ಬೇರೆ ವಿನ್ಯಾಸದ್ದು.
 ಇಷ್ಟೆಲ್ಲಾ ಸಾಲದು ಎಂಬಂತೆ ಸಮುದ್ರವನ್ನೂ ಬಿಟ್ಟಿಲ್ಲ. ಅಲ್ಲೆಲ್ಲ ಮಣ್ಣು, ಕಲ್ಲು ತುಂಬಿಸಿ ಹೊಸದಾಗಿ ಭೂಮಿಯನ್ನು ಸೃಷ್ಟಿಸಿ  ಅಲ್ಲಿ ವಿನೂತನವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಕೇವಲ ಕೆಲ ವರ್ಷಗಳ ಪರಿಶ್ರಮ. ಕೇವಲ ಕೆಲ ವರ್ಷಗಳಿಂದ ಎಂದರೆ 1971 ರಿಂದ ಬ್ರಿಟಿಷರಿಂದ ಸ್ವತಂತ್ರ ಗೊಂಡ, ಹಿಂದೆಲ್ಲ ಮರಳುಗಾಡು ಆಗಿದ್ದ ದುಬೈ ಈಗ ಸ್ವರ್ಗ ಸಮಾನವಾಗಿದೆ.


ಇದೆಲ್ಲಾ ಪೆಟ್ರೋಲ್ ಮಹಿಮೆ. ಹಿಂದೆ ಇಲ್ಲಿ ಹೊರಗಿನ ನಾಗರಿಕರಿಗೆ ಜಮೀನು ಕೊಳ್ಳುವ ಹಕ್ಕು ಇರಲಿಲ್ಲ. ಆದರೆ ಈಗಿನ ಶೇಕ್, ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಮತ್ತು ಅವರ ಪುತ್ರನ ಮುಂದಾಲೋಚನೆಯಿಂದಾಗಿ ಈಗ ಇಲ್ಲಿ ಯಾರಿಗೆ ಬೇಕಾದರೂ ಜಮೀನು ಕೊಳ್ಳಬಹುದು ಮತ್ತು ಕಟ್ಟಡಗಳನ್ನು ಕಟ್ಟಬಹುದಾಗಿದೆ. ಜಗತ್ತಿನ ಎಲ್ಲಾ ಶ್ರೀಮಂತರೂ ಇಲ್ಲಿ ತಮ್ಮ ಹೆಚ್ಚಿನ ಹಣವನ್ನು ಹೂಡಿದ್ದಾರೆ. ದುಬೈ, ಅಬುಧಾಬಿ, ರಾಸ್ ಅಲ್ ಖೈಮಾ, ಶಾರ್ಜಾ, ಅಜ್ಮಾನ್ ,ಫುಜೈರಾ ಮತ್ತು ಉಮ್ಮ್ ಅಲ್ ಕ್ವೈನ್ ಎಂಬ ಪುಟ್ಟ ರಾಷ್ಟ್ರಗಳು ಒಂದುಗೂಡಿ ಯುನೈಟೆಡ್ ಅರಬ್ ಎಮಿರೇಟ್ಸ ಎಂಬ ಒಕ್ಕೂಟವನ್ನು ಸ್ಥಾಪಿಸಿಕೊಂಡಿವೆ. ಅವುಗಲ್ಲಿ ಪ್ರಮುಖವಾದದ್ದು ಅಬುಧಾಬಿ ಮತ್ತು ದುಬೈ. ದುಬೈಯನ್ನುಳಿದು ಇನ್ನೆಲ್ಲಾ ರಾಜ್ಯಗಳು ಪೆಟ್ರೋಲಿಯಂ ಉತ್ಪಾದಿಸಿದರೆ, ದುಬೈ ವ್ಯಾಪಾರ ವಹಿವಾಟುಗಳಿಂದ ಬಹಳ ಮುಂದುವರೆದಿದೆ. ಇಲ್ಲಿ ನೌಕರಿಯನ್ನು ಮಾಡುವವರಲ್ಲಿ ಹೆಚ್ಚಿನಂಶ ಭಾರತೀಯರು. ಇಲ್ಲಿನ ಜನಸಂಖ್ಯೆಯಲ್ಲಿ ನಮ್ಮವರು ಶೇಖಡಾ 42% ಇದ್ದಾರೆ. ಹಾಗಾಗಿ ಭಾರತೀಯ ಮುಖಗಳೇ ಹೆಚ್ಚಾಗಿ ಕಾಣಸಿಗುವುದು. ಉನ್ನತ ಹುದ್ದೆಯಿಂದ ಹಿಡಿದು ಕೆಳಸ್ತರದ ಉದ್ಯೋಗ ಮತ್ತು ವ್ಯಾಪಾರಗಳನ್ನು ನಡೆಸುವ ನಮ್ಮವರನ್ನು ಇಲ್ಲಿ ಕಾಣಬಹುದು. ಇಲ್ಲಿ ಬಾಂಗ್ಲಾ, ಶ್ರೀಲಂಕಾ ಮತ್ತು ಪಾಕಿಸ್ಥಾನದ ಪ್ರಜೆಗಳು ಸಹಾ ಇದ್ದಾರೆ. ಬಹುಮಟ್ಟಿಗೆ ಎಲ್ಲರೂ ಸಹಬಾಳ್ವೆ ಮಾಡುತಿದ್ದಾರೆ.
ದುಬೈ ಎಂದರೆ ಬರೇ ಮರುಭೂಮಿ ಎಲ್ಲೆಲೂ ಮರಳು, ಒಣ ಪ್ರದೇಶ, ರಣ ಬಿಸಿಲು ಇರಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದರೆ ಅದೆಲ್ಲ ತಪ್ಪು ಕಲ್ಪನೆ ಎಂದು ಅಲ್ಲಿ ಕಾಲಿಟ್ಟಾಗಲೇ ತಿಳಿಯಿತು. ನಾವು ಅಲ್ಲಿಗೆ ಹೋದದ್ದು ಜೂನ್ ತಿಂಗಳಲ್ಲಿ. ನನ್ನ ಸಹೋದರರು ತಿಳಿಸಿದ ಪ್ರಕಾರ ಜೂನ್ ನಲ್ಲಿ ಸಾಮಾನ್ಯವಾಗಿ ಅಲ್ಲಿನ ಉಷ್ಣಾಂಶ 50 ಡಿಗ್ರಿಯವರೆಗೂ ಏರುತ್ತದಂತೆ
ನಮಗೆ ತುಂಬಾ ಕಷ್ಟ ಆಗಬಹುದು ಎಂದಿದ್ದರು. ಸಾಲದಕ್ಕೆ ನಾವು 6 ತಿಂಗಳ ಕಾಲ ಇಂಗ್ಲೆಂಡಿನ ತಂಪು ಹವೆಯಲ್ಲಿ ಇದ್ದು ಬಂದವರು! ಆದರೆ ನಮ್ಮ ಅದೃಷ್ಟದಿಂದ ಅಲ್ಲಿ ಸ್ವಲ್ಪ ಮಳೆ ಹಾಗೂ ಮೋಡ ತುಂಬಿದ ವಾತಾವರಣ ಇದ್ದುದರಿಂದ 30-32 ಡಿಗ್ರಿ ಉಷ್ಣಾಂಶವಿತ್ತು. ಇತ್ತೀಚಿಗೆ ಅಲ್ಲಿ ತುಂಬಾ ಮರ ಗಿಡಗಳನ್ನೂ ಹುಲ್ಲುಗಾವಲನ್ನೂ ಬೆಳೆಸುತಿದ್ದಾರೆ. ಇದರಿಂದ ಸಾಕಷ್ಟು ಮಳೆಯೂ ಬರುತ್ತಿದೆ. ಮಾರ್ಗದ ಮಧ್ಯಭಾಗದಲ್ಲಿ ಹಸಿರು ಹುಲ್ಲು, ಹೂವಿನ ಗಿಡಗಳು ಮತ್ತು ಖರ್ಜೂರದ ಮರಗಳನ್ನೂ ಎಲ್ಲೆಡೆಯಲ್ಲೂ ನೆಟ್ಟಿದ್ದಾರೆ.
 ಇದಕ್ಕೆ ಸರಿಯಾಗಿ ನೀರನ್ನೂ ಉಣಿಸುತ್ತಾರೆ. ಬಳಕೆ ಮಾಡಿ ವ್ಯರ್ಥ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಮರಗಳಿಗೆ ಹಾಕುತ್ತಾರೆ. ಅಲ್ಲಲ್ಲಿ ಉದ್ಯಾನಗಳು ಮತ್ತು ಅದ್ಬುತವಾದ ಕಾರಂಜಿಗಳು ಮನಸೆಳೆಯುತ್ತವೆ. ಇದಕ್ಕೆಲ್ಲಾ ಪೂರಕವಾಗಿ ನಗರದ ಶುಚಿತ್ವ ಇನ್ನಷ್ಟು ಶೋಭೆಯನ್ನು ತರುತ್ತದೆ. ಎಲ್ಲೂ ಕಸ ಕಡ್ಡಿ ಕಲ್ಲು,ಮಣ್ಣು ರಾಶಿ ಇಲ್ಲ. ನಿತ್ಯವೂ ಎಲ್ಲೆಡೆಗಳಲ್ಲೂ ಶುಚಿ ಮಾಡುವ ಕಾರ್ಯ ನಡೆದಿರುತ್ತದೆ. ಆ ಕೆಲಸವನ್ನು ಒಂದಿಷ್ಟೂ ಕುಂದಿಲ್ಲದೆ ಮಾಡುತ್ತಾರೆ. ಇಲ್ಲಿನ ಕಾನೂನು ಬಹಳ ಜೋರಾಗಿದೆ. ಇಲ್ಲಿ ಲಂಚ, ಮೋಸ, ಕಳ್ಳತನ ಮತ್ತು ವಂಚನೆಗೆ ಅವಕಾಶವಿಲ್ಲ. ಸಿಕ್ಕಿಬಿದ್ದರೆ ಕಠಿಣ ಶಿಕ್ಷೆ ಕಾದಿರುತ್ತದೆ. ಮಾತ್ರವಲ್ಲ ದುಬೈ ನಿಂದಲೇ ಹೊರ ಕಳಿಸುತ್ತಾರೆ. ಹಾಗಾಗಿ ಕೆಲಸ ಮಾಡುವವರು, ಮಾಡಿಸುವವರು ಎಲ್ಲಾ ದಕ್ಷತೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ನಿಜಕ್ಕೂ ರಾಮ ರಾಜ್ಯ -ಅಲ್ಲಲ್ಲ, ರಹೀಮ ರಾಜ್ಯ! ಇಲ್ಲಿ ಹೆಚ್ಚಿನವರು ಫ್ಲಾಟ್ ಗಳಲ್ಲಿ ವಾಸಿಸುತ್ತಾರೆ. ಶ್ರೀಮಂತರು ವಿಲ್ಲಾಗಳಲ್ಲಿ ವಾಸಿಸುತ್ತಾರೆ. ಇಲ್ಲಿ ವಿಲ್ಲಾಗಳು ಬಹಳ ದುಬಾರಿಯಂತೆ. ದುಬೈನಲ್ಲಿ ಹೆಚ್ಚಾಗಿ ಎಲ್ಲಾ ವ್ಯಾಪಾರ ನಡೆಯುವುದು ಮಾಲ್ ಗಳಲ್ಲಿ. ಇದನ್ನು ನೋಡುವುದೇ ಒಂದು ಅನುಭವ.
 ಇತ್ತೀಚಿಗೆ ಬೆಂಗಳೂರಿನಲ್ಲಿಯೇ ಕೆಲವು ಬೃಹತ್ ಮಾಲ್ ಗಳು ಬಂದಿವೆ. ಉದಾಹರಣೆಗೆ ಮಂತ್ರಿ ಮಾಲ್, ಫೋರಮ್, ಗರುಡಾ ಮಾಲ್ ಇತ್ಯಾದಿ. ಮಾಲ್ ಗಳಲ್ಲಿ ತಿರುಗಾಡುತ್ತಾ ಬೇಕಾದವುಗಳನ್ನು ಕೊಳ್ಳಬಹುದು,ಅಲ್ಲಿಯೇ ಬಗೆ ಬಗೆಯ ತಿನಸುಗಳನ್ನು ತಿನ್ನಬಹುದು. ಎಲ್ಲಾ ಮಾಲ್ ಗಳೂ ಹವಾನಿಯಂತ್ರಿತ. ಅಲ್ಲಿನ ಇಂಟೀರಿಯರ್ ಡೆಕೋರೇಶನ್ ಎಷ್ಟು ನೋಡಿದರೂ ಸಾಲದೆನಿಸುತ್ತದೆ.
 ದೇಶ ವಿದೇಶಗಳ ಜನರು ಅಲ್ಲಿ ತುಂಬಿರುತ್ತಾರೆ. ನಾವೂ ದಿನಾಲೂ ಒಂದೊಂದು ಮಾಲ್ ಗೆ ಹೋಗಿದ್ದೆವು. ಮೊದಲ ದಿನ ಸಂಜೆ ಹೋದದ್ದು ಒಂದು ದೊಡ್ಡ ಗೃಹ ಬಳಕೆಯ ವಸ್ತುಗಳ ಮಾಲ್ ಗೆ. ಇಲ್ಲಿ ಬಗೆ ಬಗೆಯ ಪೀಟೋಪಕರಣಗಳೂ, ಕರ್ಟನ್ ಗಳೂ, ಎಲ್ಲಾ ಬಗೆಯ ಪಾತ್ರೆ, ಲೈಟಿಂಗ್, ಕಾರ್ಪೆಟ್, ಇನ್ನೂ ಏನೇನೋ ಹೊಸ ವಸ್ತುಗಳನ್ನು ಇರಿಸಿದ್ದರು. ಕುಂಡಗಳಲ್ಲಿ ಬೆಳೆಸಿದ ಹೂಗಿಡಗಳೂ ಇಲ್ಲಿ ಲಭ್ಯ.
ಆ ಮೇಲೆ ನಾವು ಹೋದದ್ದು ದುಬೈ ಕ್ರೀಕ್ ಗೆ. ಇದೊಂದು ಉಪ್ಪು ನೀರಿನ ಕಾಲುವೆ. ಸುಮಾರು 14 ಕಿ.ಮಿ. ಉದ್ದವಿದೆ.ಇದರ ಒಂದು ದಂಡೆ ಬರ್ ದುಬೈ ಆದರೆ ಇನ್ನೊಂದು ದಂಡೆ ಡೈರಾ. ಇದರಲ್ಲಿ ಸಂಚರಿಸುವ ಬಹಳ ಸಣ್ಣ ದೊಡ್ಡ ನಾವೆಗಳಿವೆ. ಇಲ್ಲಿಂದ ಸರಕುಗಳನ್ನು ಹೇರಿಕೊಂಡು ನಾವೆಗಳು ಪೂರ್ವ ಆಫ್ರಿಕಾ ತೀರವನ್ನು ತಲಪುತ್ತದಂತೆ.  ಅಲ್ಲಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ದೊಡ್ಡ ಬೋಟ್ ಗಳಲ್ಲಿ ರೆಸ್ಟೋರೆಂಟ್ ಗಳಿವೆ. ನಾವೂ ಒಂದು ಬೋಟ್ ಗೊತ್ತುಮಾಡಿಕೊಂಡು ಸುಮಾರು 1ಘಂಟೆ ಕಾಲ ಕ್ರೀಕ್ ನಲ್ಲಿ ವಿಹರಿಸಿದೆವು. ತಂಗಾಳಿ ಬೀಸುತಿತ್ತು. ಮೇಲೆ ನೀಲಾಕಾಶದಲ್ಲಿ ಮಿನುಗುವ ನಕ್ಷತ್ರಗಳು, ಎರಡೂ ದಡದಲ್ಲಿ ಬಣ್ಣ ಬಣ್ಣದ ದೀಪಗಳಿಂದ ತುಂಬಿದ ಗಗನ ಚುಂಬಿಗಳು, ಅವುಗಳ ವಿದ್ಯುತ್  ದೀಪಗಳು ಕ್ರೀಕ್ ನ ನೀರಲ್ಲಿ ಪ್ರತಿಫಲನಗೊಂಡು ಅದ್ಬುತ ಲೋಕವನ್ನೇ ನಿರ್ಮಿಸಿತ್ತು. ಬಹಳ ಖುಷಿಪಟ್ಟೆವು. ನಂತರ ನಾವೆಲ್ಲಾ ಅಲ್ಲೇ ದಡದಲ್ಲಿರುವ ದೇವಸ್ಥಾನಗಳಿಗೆ ಹೋದೆವು. ಹೌದು ಇಲ್ಲಿಯೂ ಹಿಂದೂ ದೇವಳಗಳಿವೆ. ಹಲವಾರು ದೇವರ ಗುಡಿಗಳೊಂದಿಗೆ ಜೈನ ದೇವಾಲಯವೂ ಇಲ್ಲಿದೆ. ಅದರ ಮಾರ್ಗದಲ್ಲಿ ಸಂಚರಿಸುವಾಗ ನಮ್ಮ ದೇಶದ ದೇವಾಲಯಗಳ ಪರಿಸರವೇ ನೆನಪಾಗುತ್ತದೆ. ಹೂವು, ಹಣ್ಣು, ಕಾಯಿ, ಅಗರಬತ್ತಿ, ಕುಂಕುಮ ಮತ್ತಿತರ ಪೂಜಾಸಾಮಗ್ರಿಗಳ ಅಂಗಡಿಗಳು ಇಲ್ಲಿವೆ. ದುಬೈನಲ್ಲಿ ನಮ್ಮ ದೇವರ ದರ್ಶನ ಮಾಡಿ ಅಲ್ಲಿ ಹಂಚಿದ ಪ್ರಸಾದ ತಿಂದು ಪುನೀತರಾದೆವು. ಮತ್ತೆ ಒಂದು ದೊಡ್ಡ ಶಾಪಿಂಗ್ ಕೊಂಪ್ಲೆಕ್ಸ್ ಸುತ್ತಾಡಿಕೊಂಡು ಕ್ರೀಕ್ ನ ಬದಿಯಲ್ಲಿ ಕುಳಿತು ಮೊರೋಕ್ಕನ್ ಫಿಲಾಫಿಲ್ ತಿಂದೆವು. ಮಲೆಯಾಳಿ ಅಂಗಡಿಯೊಂದರಲ್ಲಿ ಜ್ಯೂಸ್ ಕುಡಿದು ಮನೆಗೆ ಬಂದಾಗ ರಾತ್ರಿ 10 ಘಂಟೆ. ಮುಂದಿನ ದಿನಗಳಲ್ಲಿ ನಾವು ಹಲವಾರು ಪ್ರಮುಖ ಮಾಲ್ ಗಳನ್ನು ಸಂದರ್ಶಿಸಿದೆವು.
 ಮುಖ್ಯವಾಗಿ ಜುಮೈರಾ ಪ್ಲಾಜಾ, ದುಬೈ ಮಾಲ್ , ಮಾಲ್ ಒಫ್ ಎಮಿರೇಟ್ಸ್ , ಭುರ್ಜ್ ಮಾನ್ ಸೆಂಟರ್ , ವಾಫಿ ಶಾಪಿಂಗ್ ಮಾಲ್ , ಡ್ರಾಗನ್ ಮಾಲ್ , ಇಬ್ನಬತೂತ ಮಾಲ್ ಮತ್ತು ಲುಲು ಸೆಂಟರ್. ಇವುಗಳೆಲ್ಲ ದುಬೈನಲ್ಲಿರುವ ಪ್ರಖ್ಯಾತ ಮಾಲ್ ಗಳು. ಒಂದೊಂದಕ್ಕೂ ತನ್ನದೇ ಆದ ವಿಶಿಷ್ಟ ಸೌಂದರ್ಯ ಆಕರ್ಷಣೆ ಇದೆ. ನಮಗೆ ಬೇಕಾದ ಪರ್ಫ್ಯೂಮ್ ಗಳನ್ನು ಕೊಂಡೆವು. ನನ್ನ ಇಷ್ಟದ ಯಾರ್ಡ್ಲೆ ಪರ್ಫ್ಯೂಮ್ ಗಳ ದೊಡ್ಡ ಸಂಗ್ರಹವೇ ಅಲ್ಲಿತ್ತು. ಹಲವಾರು ಬಗೆಯ ಪರಿಮಳದ ಯಾರ್ಡ್ಲೆ ಕೊಂಡುಕೊಂಡೆ. ಅಂತೆಯೇ ಊರಿಗೆಂದು ತುಂಬಾ ಚಾಕೊಲೆಟ್ ಸಹಾ ಕೊಂಡೆವು. ಬಟ್ಟೆ ಬರೆ ಎಂದು ನಮ್ಮ ಲಗ್ಗೇಜ್ ತುಂಬಿತು. ಡ್ರಾಗನ್ ಮಾಲ್ ಪೂರ್ತಿ ಚೈನಾ ಬಜಾರ್ ಇದ್ದಂತೆ. ಇದರ ಕಟ್ಟಡವು ತುಂಬಾ ಉದ್ದವಾಗಿದ್ದು ಚೈನಾ ಡ್ರಾಗನ್ ಪ್ರಾಣಿಯ ಆಕೃತಿಯಲ್ಲಿದೆ. ಇನ್ನೊಂದೆಡೆ ಬಹಳ ದೊಡ್ಡ ಎಲೆಕ್ಟ್ರೋನಿಕ್ ಮಾಲ್ ಇದೆ. ಇಲ್ಲಿ ಎಲ್ಲಾ ಹೊಸ ಬಗೆಯ ಎಲೆಕ್ಟ್ರೋನಿಕ್ ವಸ್ತುಗಳು ಸಿಗುತ್ತವೆ. ಬೆಲೆ ತುಂಬಾ ಕಡಿಮೆ.
ಶುಕ್ರವಾರ ಶನಿವಾರ ಇಲ್ಲಿ ರಜಾದಿನ. ಹಾಗಾಗಿ  ರವಿಯ ಫ್ಯಾಮಿಲಿ ಮತ್ತು ನಾವಿಬ್ಬರೂ ಅಬುಧಾಬಿಗೆ ಹೋದೆವು. ಸುಮಾರು 1 1/2 ಘಂಟೆಯ ಕಾರು ಪ್ರಯಾಣ. 120 ಕಿ.ಮಿ.
ಅಗಲವಾದ 6 ಲೇನ್ ರಸ್ತೆ. ಮಧ್ಯದಲ್ಲಿ ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ದಾರಿಯುದ್ದಕ್ಕೂ ಖರ್ಜೂರದ ಮರಗಳನ್ನು ಬೆಳೆಸಿದ್ದಾರೆ. ನಾವು ಹೋದ ಸಮಯದಲ್ಲಿ ಚೆನ್ನಾಗಿ ಬಲಿತ ಖರ್ಜೂರದ ಗೊನೆಗಳು ಇಳಿಬಿದ್ದಿದ್ದವು. ಕೆಂಪು, ಅರಸಿನ ಬಣ್ಣದ ಈ ಹಣ್ಣುಗಳನ್ನು ನೋಡುವುದೇ ಒಂದು ಆನಂದ. ಒಂದೆಡೆ ಕಾರು ನಿಲ್ಲಿಸಿ ಕೆಲವು ಹಣ್ಣುಗಳನ್ನು ಕೊಯ್ದು ರುಚಿ ನೋಡಿದೆವು.
 ಚೆನ್ನಾಗಿತ್ತು. ಸರಿಯಾಗಿ ಹಣ್ಣಾದಮೇಲೆ ಇವುಗಳನ್ನೂ ಕೊಯ್ಲು ಮಾಡಿ ಒಣಗಿಸುತ್ತಾರೆ. ಮರುಭೂಮಿಯಲ್ಲಿ ಎಷ್ಟು ಹುಲುಸಾಗಿ ಈ ಬೆಳೆ ಬರುತ್ತದೆ ಎಂದಾಗ ಆಶ್ಚರ್ಯ ವಾಗುತ್ತದೆ. ಖರ್ಜೂರದ ಮರಗಳು ಅರಬ್ ದೇಶದ ರಾಷ್ಟ್ರೀಯ ವೃಕ್ಷ! ಅಬುಧಾಬಿ ತಲಪುತಿದ್ದಂತೆ ಗಗನಚುಂಬಿಗಳು ಕಾಣಲು ಪ್ರಾರಂಭ. ಆದರೂ ದುಬೈನಲ್ಲಿ ಇದ್ದಷ್ಟು ಎತ್ತರದ್ದು ಇಲ್ಲಿಲ್ಲ. ಬಾಕಿ ಎಲ್ಲಾ ದುಬೈನಂತೆಯೇ ಇದೆ. ನಾವೂ ಮೊದಲಿಗೆ ರವಿಯ ಗೆಳೆಯನ ಮನೆಗೆ ಹೋದೆವು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಆಮೇಲೆ ತಿರುಗಾಡಲು ಹೋದೆವು.
 ಯಥಾಪ್ರಕಾರ ಮಾಲ್ ಗಳು, ದೊಡ್ಡದೊಂದು 5 ಸ್ಟಾರ್ ಹೋಟೆಲ್ ಗೂ ಭೇಟಿ ಕೊಟ್ಟೆವು.
 ಅಬುಧಾಬಿ, ಪೆಟ್ರೋಲ್ ಉತ್ಪಾದಿಸುವ ದೇಶ. ಬಹಳ ಶ್ರೀಮಂತ ದೇಶ. ಅಲ್ಲಿಂದ ರಾತ್ರಿ ವಾಪಸು ಮನೆಗೆ ಬಂದೆವು.
ಮರುದಿನ ನಾವು ಅಲ್ಲಿನ ದೊಡ್ಡದೊಂದು ಪಾರ್ಕ್ ಗೆ ಹೋಗಿದ್ದೆವು. ನಂತರ ಕಡಲ ಕಿನಾರೆಯಲ್ಲಿರುವ ದುಬೈ ನ ಆಕರ್ಷಣೆಯಲ್ಲೊಂದಾದ ಬುರ್ಜ್ ಅಲ್ ಅರಬ್ ಎಂಬ ಬಹು ದೊಡ್ಡ ಹೋಟೆಲ್ ನ ಪಕ್ಕ ಹೋಗಿದ್ದೆವು.
ಇದೊಂದು ದೊಡ್ಡ ಹಾಯಿಹಡಗಿನ ಆಕೃತಿ ಹೊಂದಿದ ಅತ್ಯಾಧುನಿಕ ಹೋಟೆಲ್. ಎಲ್ಲಾ ಹೋಟೆಲ್ ಗಳು ಪಂಚತಾರಾ ಹೋಟೆಲ್ ಆದರೆ ಇದು ಸಪ್ತ ತಾರಾ ಹೋಟೆಲ್! ಇದಕ್ಕೆ 60 ಮಹಡಿಗಳಿವೆ. ಇದರ ಮೇಲ್ಗಡೆ ಒಂದು ಈಜುಕೊಳ ಹಾಗೂ ಹೆಲಿಪ್ಯಾಡ್ ಸಹಾ ಇದೆ. ಸಾಲದ್ದಕ್ಕೆ ಒಂದು ಟೆನ್ನಿಸ್ ಕೋರ್ಟ್! ಇಲ್ಲಿನ ರೂಮುಗಳು ಬಲು ದುಬಾರಿಯಂತೆ. ಆದರೂ ರೂಮು ಬೇಕಾದಲ್ಲಿ ಬಹಳ ಮುಂಚಿತವಾಗಿಯೇ ಬುಕ್ ಮಾಡಬೇಕಂತೆ. ಈ ಕಟ್ಟಡಕ್ಕೆ ಹೊರಗಿನಿಂದ ಬಣ್ಣ ಬಣ್ಣದ ಬೆಳಕನ್ನು ಬೀರುತ್ತಾರೆ, ಕ್ಷಣ ಕ್ಷಣಕ್ಕೂ ತನ್ನ ಬಣ್ಣವನ್ನೂ ಬದಲಾಯಿಸುತ್ತಾ ಇರುತ್ತದೆ.
ಮರುದಿನ ಶ್ರೀಹರಿ ಬಂದು ನಮ್ಮನ್ನು ಅವರ ಮನೆಗೆ ಕೊಂಡೊಯ್ದನು. ಅವನ ಪತ್ನಿ ದಿವ್ಯಾ, ಮಕ್ಕಳು ಅಶು ಮತ್ತು ಅನ್ವಿತಾ ನಮ್ಮನ್ನು ಸ್ವಾಗತಿಸಿದರು. ಆ ದಿನ ನಾವು ಇಲ್ಲಿನ ಬಹುದೊಡ್ಡ ಚಿನ್ನದ ಮಾರ್ಕೆಟ್ ಗೆ ಹೋದೆವು.


 ಇದನ್ನು ಅಲ್ಲಿ ಗೋಲ್ಡ್ ಸೂಕ್ ಎನ್ನುತ್ತಾರೆ. ಇದನ್ನು ವಿವರಿಸಲು ನನಗೆ ಶಬ್ದಗಳೇ ಸಿಗುತ್ತಿಲ್ಲ. ಅಬ್ಭಾ ಎಷ್ಟೊಂದು ಮಳಿಗೆಗಳು ! ಎಲ್ಲಿ ನೋಡಿದರೂ ಚಿನ್ನ! ಹೌದು ಚಿನ್ನದ ಆಭರಣಗಳ ಅದ್ಬುತ ಪ್ರದರ್ಶನ! ಬೇರೆ ವಸ್ತುಗಳ ಅಂಗಡಿಗಳೇ ಇಲ್ಲ. ಬರೇ ಚಿನ್ನ ಮತ್ತು ವಜ್ರ ಮತ್ತಿತರ ಅಮೂಲ್ಯ ಹರಳುಗಳ ಆಭರಣಗಳು. ಎಷ್ಟೊಂದು ವಿನ್ಯಾಸ! ನೋಡಿ ನೋಡಿ ನಮ್ಮ ಕಣ್ಣುಗಳೇ ದಣಿದವು.
 ಇಲ್ಲಿ ಹೆಚ್ಚಿನ ಅಂಗಡಿಗಳು ನಮ್ಮ ಭಾರತ ದೇಶದವು ಎಂದು ತಿಳಿದು ಹೆಮ್ಮೆಯಾಯಿತು. ಜನರು ಚಿನ್ನ ಕೊಳ್ಳುತಿದ್ದಾರೆ, ನಮ್ಮಂತಹ ಯಾತ್ರಿಕರು ಅದನ್ನು ನೋಡಿ ಸಂತೋಷಪಟ್ಟುಕೊಳ್ಳುತಿದ್ದಾರೆ. ನಾವು ಕೆಲ ಅಂಗಡಿಗಳ ಒಳಗೆ ಹೋಗಿ ನೋಡಿ ಬಂದೆವು. ಯಾವುದೇ ಅಡ್ಡಿಗಳಿಲ್ಲದೆ ಒಳಗೆ ಹೋಗಿ ನೋಡಬಹುದು. ಅಂಥಹ ಹೇಳಿಕೊಳ್ಳುವಂತಹ ಸೆಕ್ಯೂರಿಟಿ ಇಲ್ಲಿಲ್ಲ.
ನಮ್ಮ ಮುಂದಿನ ತಾಣ ಅಲ್ ಐನ್ ಎಂಬ ಬೆಟ್ಟ ಪ್ರದೇಶಕ್ಕೆ. ಸುಮಾರು 140 ಕಿ.ಮಿ. ದೂರ. ಇದೊಂದು ದೊಡ್ಡ ಬೆಟ್ಟಗಳ ಸಮೂಹವಾಗಿದ್ದು ಮೇಲೆ ಹೋಗಲು ಸೊಗಸಾದ ರಸ್ತೆ ಇದೆ.
 ಬೆಟ್ಟವು ಬೋಳು ಬೋಳಾಗಿದ್ದು ಅಲ್ಲಲ್ಲಿ ಖರ್ಜೂರದ ಮರ ಮತ್ತು ಇತರ ಮರಗಳಿವೆ. ಆದರೆ ವಿಚಿತ್ರವಾದ ಒಂದು ಸಂಗತಿಯನ್ನು ಕಂಡೆವು. ಅದೇನೆಂದರೆ ಪೂರ್ತಿ ಬೆಟ್ಟಕ್ಕೆ ಹಸಿರು ಹುಲ್ಲನ್ನು ಹೊದಿಸುವ ಕೆಲಸ. ಒಂದು ವಿಶೇಷ ಬಗೆಯ ಸಸ್ಯವನ್ನು ಬೆಳೆಸಿದ್ದಾರೆ. ಇದು ನೆಲದಲ್ಲಿ ಹರಡುತ್ತಾ ಹಬ್ಬುತ್ತದೆ. ಸುಮಾರು 60% ಬೆಟ್ಟವನ್ನು ಇದು ಆವರಿಸಿ ಹಸಿರು ಕಂಬಳಿ ಹೊದೆಸಿದಂತಿದೆ.
 ಹಸಿರು ಬೆಳೆಸಲು ಇವರು ಅದೆಷ್ಟು ಕಷ್ಟಪಡುತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇಲ್ಲಿ ಒಂದು ಬಿಸಿನೀರಿನ ಊಟೆ ಇದೆ, ಸದಾ ಇದರಿಂದ ಬಿಸಿನೀರು ಉಕ್ಕಿ ಹರಿದು ಒಂದು ಪುಟ್ಟ ಕಾಲುವೆಯಂತೆ ಹರಿಯುತ್ತದೆ. ಮಕ್ಕಳು, ನಾವೆಲ್ಲ ಇದರಲ್ಲಿ ಆಟ ಆಡಿದೆವು.
 ಇನ್ನೂ ಮೇಲ್ಗಡೆ ಒಂದು ವಿಶಾಲ ಜಾಗವಿದೆ. ಅಲ್ಲಿಂದ ನೋಡಿದರೆ ಪೂರ್ತಿ ಬೆಟ್ಟ ಸಮೂಹದ ದರ್ಶನವಾಗುತ್ತದೆ. ಇಲ್ಲಿ ನಮ್ಮ ಕೆಲವು ಹಿಂದಿ ಸಿನೆಮಾದ ಶೂಟಿಂಗ್  ನಡೆದಿದೆಯಂತೆ. ಸೊಗಸಾದ ಜಾಗ.

 ನಾವು ಶಾರ್ಜಾವನ್ನೂ ನೋಡಿದೆವು. ದುಬೈ ನಿಂದ ಕೇವಲ 12. ಕಿ.ಮಿ. ದೂರ ಅಷ್ಟೇ. ಆದರೆ ಪೀಕ್ ಹವರ್ ತಪ್ಪಿಸಿಕೊಂಡು ಹೋಗಬೇಕು. ಇಲ್ಲವಾದರೆ ಟ್ರಾಫಿಕ್ ಜಾಮ್ ಇರುತ್ತದೆ. ಇದು ಸಹಾ ದೊಡ್ಡ ಪಟ್ಟಣ. ಇಲ್ಲೂ ಒಂದು ದೊಡ್ಡ ಗೋಲ್ಡ್ ಸೂಕ್ ಇದೆ. ಮಾಲ್ ಗಳೂ ಇವೆ.
 ಒಂದು ದೊಡ್ಡ ಲೇಕ್ ಇದೆ. ಎಲ್ಲಾ ನೋಡಿಕೊಂಡು ವಾಪಸು ಮನೆಗೆ ಬಂದೆವು. ಇನ್ನೂ ಕೊನೆಯದಾಗಿ ನಾವೂ ಹೋದದ್ದು ಜುಮೈರಾ ಎಂಬಲ್ಲಿಗೆ. ಇಲ್ಲಿಯೇ ಜಗತ್ತಿನ ಅತೀ ಎತ್ತರದ ಕಟ್ಟಡ ಇರುವುದು. ಇದನ್ನು ಬುರ್ಜ್ ದುಬೈ ಎನ್ನುತ್ತಾರೆ. ಈವಾಗ ಬುರ್ಜ್ ಖಲೀಫಾ ಎಂದು ಕರೆಯುತ್ತಾರೆ. ಇದರ ಎತ್ತರ ಸುಮಾರು 828 ಮೀಟರ್ ಎಂದರೆ 2716 ಅಡಿಗಳು! 160 ಮಹಡಿಗಳು ಮತ್ತು 40 ನಿರ್ವಹಣಾ ಫ್ಲೋರ್ ಗಳಿವೆಯಂತೆ.
 ದೂರದಿಂದಲೇ ಇದು ಗೋಚರಿಸುತ್ತದೆ. ಅಂತರಿಕ್ಷಕ್ಕೆ ಹಾರಿಬಿಡಲಿರುವ ರಾಕೆಟ್ ನಂತೆ ಭಾಸವಾಗುತ್ತದೆ. ನಾವು  ಹೋದಾಗ ಅದರ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿತ್ತು. ಹಾಗಾಗಿ ಅದರ ಸಮೀಪ ಹೋಗಲು ಬಿಡುತ್ತಿರಲಿಲ್ಲ. ಮುಂದೆ ನಾವು ಪಾಮ್ ಎಂದು ಪ್ರಸಿದ್ಧವಾದ ಜಾಗಕ್ಕೆ ಹೋದೆವು. ಇದರ ವಿಶೇಷವೆಂದರೆ ಇದು ಬೃಹತ್ತಾದ ಖರ್ಜೂರದ ಮರದ ಆಕೃತಿಯಲ್ಲಿದೆ. ಸಮುದ್ರಕ್ಕೆ ಬಂಡೆಗಳನ್ನು ಹಾಕಿ ಮೇಲೆ ಮಣ್ಣು ತುಂಬಿಸಿ ಅದರಲ್ಲಿ ಈ ನಗರವನ್ನು ಕಟ್ಟಿದ್ದಾರೆ.
 ಖರ್ಜೂರದ ಮರದ ಗರಿಗಳ ಭಾಗದಲ್ಲಿ ದೊಡ್ಡ ದೊಡ್ಡ ವಿಲ್ಲಾ ಗಳಿವೆ. ದುಬೈನಲ್ಲೇ ಅತೀ ದುಬಾರಿ ಕಟ್ಟಡಗಳಿವು. ಇದನ್ನು ನೋಡುವಾಗ ಮನುಷ್ಯನ ಕಲ್ಪನೆಗೆ ಮಿತಿಯೇ ಇಲ್ಲ ಎಂದೆನಿಸುತ್ತದೆ. ಇದರ ಸಂಪೂರ್ಣ ಫೋಟೋ ತೆಗೆಯಬೇಕಾದರೆ ವಿಮಾನದಿಂದಲೇ ತೆಗೆಯಬೇಕಷ್ಟೆ.ಇಂತಹದೇ ಇನ್ನೂ ಕೆಲವು ನಿರ್ಮಾಣಗಳು ದುಬೈನ ಬೇರೆ ಕೆಲವು ಕಡೆಗಳಲ್ಲಿ ನಡೆಯುತ್ತಿದೆಯಂತೆ. ದುಡ್ಡಿನಲ್ಲೇ ಮುಳುಗಿರುವ ದೇಶಕ್ಕೆ ಮಾತ್ರ ಇಂತಹ ಕಾರ್ಯ ಮಾಡಲು ಸಾದ್ಯ.
ನಾವು  ಹೊರಡುವ ಸಮಯವಾಯಿತು. ಎಲ್ಲರೂ ನಮ್ಮನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಂಡರು. ಕ್ಷೇಮವಾಗಿ, ಸವಿ ನೆನಪುಗಳೊಂದಿಗೆ ನಾವು ಬೆಂಗಳೂರಿಗೆ ತಲುಪಿದೆವು.
ವಿಷಾದವೆಂದರೆ ಜಾಗತಿಕ ಹಣಕಾಸಿನ ಮುಗ್ಗಟ್ಟು(Recession)ದುಬೈ ಗೂ ತಟ್ಟಿತು. ಹೆಚ್ಚಿನ ಎಲ್ಲಾ ಕಟ್ಟಡಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿತು. ತುಂಬಾ ಜನ ಕೆಲಸ ಕಳೆದುಕೊಂಡರು. ಕೆಲವರು ಊರಿಗೆ ಮರಳಿದರು. ತಮ್ಮ ಕಾರುಗಳನ್ನು ಮಾರಲೂ ಅವರಿಗೆ ಸಾಧ್ಯವಾಗದೆ ಅದನ್ನು ವಿಮಾನ ನಿಲ್ದಾಣದಲ್ಲೇ ಪಾರ್ಕ್ ಮಾಡಿ ಹೊರಟು ಬರಬೇಕಾಯಿತಂತೆ. ಸುಮಾರು 1000ಕ್ಕೂ ಮೇಲ್ಪಟ್ಟು, ವಾರಸುದಾರರಿಲ್ಲದ ಕಾರುಗಳು ದುಬೈ ವಿಮಾನ ನಿಲ್ದಾಣದಲ್ಲಿದ್ದವು ಎಂದು ಪೇಪರ್ ನಲ್ಲಿ ಓದಿದೆ.