ತಿರುಅಣ್ಣಾಮಲೈ
ಈ ಯಾತ್ರೆಯು ಸುಮಾರು 13 ವರ್ಷಗಳ ಹಿಂದೆ ಮಾಡಿದ್ದಾಗಿದೆ.
ನಾವು ಹೋದದ್ದು ಜೂನ್ 19 2007ರಂದು, ಬರೆಯಲು ಶುರು ಮಾಡಿದ್ದು ಇವತ್ತು ಅಷ್ಟೆ. ನನ್ನ ನೆನಪಿನ
ಭಂಡಾರದಿಂದ ಆಯ್ದು ಇಲ್ಲಿ ಬರೆದಿದ್ದೇನೆ. ತಮಿಳುನಾಡಿನ ತಿರುಅಣ್ಣಾಮಲೈಗೆ ಮೊದಲ ಭೇಟಿ. ಮುಂಜಾನೆ
ಮನೆಯಿಂದ ಹೊರಟೆವು. ನಾನು ಕಸ್ತೂರಿ ಅವಳ ಸಹೋದರ ಮುರಳಿ, ಅವನ ಮಡದಿ ಸೀಮಾ, ಮಕ್ಕಳು ಸ್ನೇಹಾ
ಸಚಿನ್ ಮತ್ತು ನಮ್ಮ ಅತ್ತೆ ಸಂಜೀವಿ ಇಷ್ಟು ಜನ ಮಾರುತಿ ಆಲ್ಟೊ ಕಾರಲ್ಲಿ ಪ್ರಯಾಣ.
ಇಲೆಕ್ಟ್ರೊನಿಕ್ ಸಿಟಿ ದಾಟಿ ಹೊಸೂರು ಚೆಕ್ ಪೊಸ್ಟ್ ತಲುಪಿದೆವು.ಅಲ್ಲಿ ಒಂದು ಗೂಡಂಗಡಿಯಲ್ಲಿ
ಚಹಾ ಕುಡಿದೆವು. ಸ್ವಲ್ಪ ವಿಶ್ರಮಿಸಿ ಮುಂದೆ ಸಾಗಿದೆವು. ಬೆಂಗಳೂರಿನಿಂದ ತಿರುಅಣಾಮಲೈ ಗೆ
ಸುಮಾರು 210 ಕಿ.ಮಿ. ದೂರ. ನೇರವಾದ ದಾರಿ. ತಿರುಅಣ್ಣಾಮಲೈಗೆ 2 ವರ್ಷದ ಹಿಂದೊಮ್ಮೆ
ಹೋಗಿದ್ದೆವು. ನಿನ್ನೆ ರಾತ್ರಿ ಸ್ವಲ್ಪ ಮಳೆಯೂ ಆಗಿದ್ದರಿಂದ ಉತ್ತಮ ಹವೆ, ಪ್ರಯಾಣ
ಸುಖವಾಗಿತ್ತು. ಮುಂದೆ ಬಲಕ್ಕೆ ತಿರುಗಿ,
ಕೃಷ್ಣಗಿರಿಗೆ ಹೋಗುವ ರಸ್ತೆ ಹಿಡಿದೆವು. ರಸ್ತೆಯ ಇಕ್ಕೆಲಗಳಲ್ಲೂ ಬತ್ತದ ಹೊಲಗಳು, ಅದರಾಚೆಗೆ
ಉನ್ನತವಾದ ಬೆಟ್ಟಗಳು ಬಹಳ ರಮ್ಯ ನೋಟ. ರಸ್ತೆಯ ಬಲಗಡೆ ಮಲೆ ಮಹದೇಶ್ವರ ಬೆಟ್ಟ ಹರವಿಕೊಂಡಿತ್ತು.
ಹೊಟ್ಟೆ ತಾಳ ಹಾಕುತಿತ್ತು. ಒಂದೆಡೆ ಬಹಳ ಪ್ರಶಸ್ತವಾದ ಜಾಗದಲ್ಲಿ ಕಾರು ನಿಲ್ಲಿಸಿದೆವು.
ಮನೆಯಿಂದ ಕಟ್ಟಿಕೊಂಡು ತಂದಿದ್ದ ಬುತ್ತಿ, ನೀರು ಎಲ್ಲ ತೆಗೆದುಕೊಂಡು ಸಮೀಪದಲ್ಲೆ ಇದ್ದ ಹರವಾದ
ಬಂಡೆಯಲ್ಲಿ ಕುಳಿತು ಬೆಳಗ್ಗಿನ ನಾಷ್ಟಾ ಮುಗಿಸಿದೆವು
. ಸ್ವಲ್ಪ ಹೊತ್ತು ಅಲ್ಲೇ ಕಳೆದು ಮುಂದೆ
ಪ್ರಯಾಣಿಸಿದೆವು. ಸುಮಾರು 10 ಕಿ.ಮಿ.ಸಾಗಿದಾಗ ರಸ್ತೆಯ ಪಕ್ಕದಲ್ಲಿ ಹಲವು ಬಸ್ ಗಳು
ನಿಂತಿದ್ದವು. ಏನೆಂದು ನೋಡಿದರೆ ಅಲ್ಲಿ ಮಾವಿನ ಹಣ್ಣಿನ ವ್ಯಾಪಾರ ನಡೆದಿತ್ತು. ಅಲ್ಲಿ ಮಾವಿನ
ಹಣ್ಣಿನ ಮಂಡಿ ಇದೆ. ಹಿಂದಿನ ಸಲವೂ ಇಲ್ಲಿಂದ
ಮಾವಿನ ಹಣ್ಣು ಕೊಂಡಿದ್ದೆವು. ಅಲ್ಲಿ ಮಾರಟ ನಡೆಸುತಿದ್ದ ಒಬ್ಬ ಹುಡುಗನಿಗೆ ನಮ್ಮ ಗುರುತು
ಸಿಕ್ಕಿತು. ಅವನು ನಮ್ಮನ್ನು ಸ್ವಲ್ಪ ದೂರದಲ್ಲಿದ್ದ ಮಂಡಿಗೆ ಕರೆದೊಯ್ದನು. ಅಲ್ಲಿ ಹಲವಾರು ಬಗೆಯ
ಮಾವಿನ ಹಣ್ಣಿನ ರಾಶಿ ಹಾಕಿದ್ದರು. ಇಲ್ಲಿಂದ ಪರ ಊರುಗಳಿಗೆ ಲಾರಿಯಲ್ಲಿ ಹಣ್ಣು ಕಳಿಸುತ್ತಾರೆ.
ಸ್ಯಾಂಪಲ್ ಕೇಳಿದರೆ ತಲಾ ಒಂದೊಂದು ಇಡೀ ಹಣ್ಣನ್ನೇ ನಮಗೆ ಕೊಡುತಿದ್ದ. ಅಲ್ಲಿಂದ ಸುಮಾರು 15
ಕಿಲೋ ಮಾವು ಕೊಂಡೆವು. ಬಹಳ ಕಡಿಮೆ ಕ್ರಯ. ಕೊನೆಗೆ ನಮಗಾಗಿ ಬಹಳ ದೊಡ್ಡದಾದ ಒಂದು ಹಣ್ಣನ್ನು
ಉಚಿತ ವಾಗಿ ಕೊಟ್ಟನು. ವಾಪಾಸು ಬರುವಾಗ ಇಲ್ಲಿಗೆ
ಬರಲೇ ಬೇಕು ಎಂದು ಆಹ್ವಾನಿಸಿದ ಬೇರೆ. ಅಲ್ಲಿಂದ ಹೊರಟೆವು. ಮುಂದೆ ದಾರಿ ಕವಲೊಡೆಯುತ್ತದೆ. ಸೀದಾ
ಹೊದರೆ ಪಾಂಡಿಚೇರಿ, ಎಡಕ್ಕೆ ತಿರುಗಿದರೆ ತಿರುಅಣ್ಣಾಮಲೈ. ಸುಮಾರು 10 ಕಿ,ಮಿ ಇರಬಹುದು.
ದಾರಿಯಲ್ಲಿ ಶ್ರೀ ರಮಣ ಮಹರ್ಷಿ ಆಶ್ರಮ ಸಿಗುತ್ತದೆ. ಅಲ್ಲಿ
ಒಳಗಡೆ ಹೋದೆವು. ಇದು ಬಹಳ ಪ್ರಶಾಂತ ಜಾಗ.
ಅಲ್ಲಿ ರಮಣ ಮಹರ್ಷಿಗಳ ಸಮಾಧಿ ಇದೆ. ಪ್ರಾರ್ಥನಾ
ಮಂದಿರ ಇದೆ. ಉದ್ಯಾನವಿದೆ. ಇಲ್ಲೆಲ್ಲಾ ಬಹಳ ನವಿಲುಗಳು ಇವೆ.
ಇದರ ಹಿಂದುಗಡೆ ಅಣ್ಣಾಮಲೆ
ಬೆಟ್ಟವಿದೆ. ಅಲ್ಲೂ ಸಹ ಬಹಳ ನವಿಲುಗಳು ಇವೆಯಂತೆ. ಮರದ ಮೇಲೆ, ಕಟ್ಟಡದ ಮೆಲೆಲ್ಲಾ ನವಿಲುಗಳು
ಕುಳಿತಿರುತ್ತವೆ. ಅವಕ್ಕೆಲ್ಲ ಆಶ್ರಮದವರು ಅಹಾರ ಕೊಡುತ್ತಾರೆ.
ಅಲ್ಲಿ ಸುಮಾರು ಹೊತ್ತು ಕಳೆದು
ಅರುಣಾಚಲೇಶ್ವರನ ಸನ್ನಿಧಾನಕ್ಕೆ ಹೋದೆವು.
ಅಣ್ಣಾಮಲೆ ಎಂಬ ಬೆಟ್ಟದ ಬುಡದಲ್ಲಿ ಬಹಳ ವಿಸ್ತಾರವಾದ
ಪ್ರಾಂಗಣವಿರುವ ಈ ದೇವಾಲಯಕ್ಕೆ 4 ಬೃಹತ್ ಗೋಪುರಗಳಿವೆ. ಎಲ್ಲಕ್ಕೂ ಬಿಳಿಯ ಬಣ್ಣ ಹಚ್ಚಿದ್ದಾರೆ.
ಹಸಿರು ಪ್ರಕೃತಿಯ ನಡುವೆ ಇದರ ವರ್ಣ ಸಂಯೊಜನೆ ಮನೋಹರವಾಗಿದೆ.
ನಾವು ಅಲ್ಲಿಗೆ ತಲುಪುವಾಗ
ಮಧ್ಯಾಹ್ನದ ಪೂಜೆಯ ಸಮಯವಾಗಿತ್ತು. ಮುಖ್ಯ ದ್ವಾರದಿಂದ ಒಳ ಪ್ರವೇಶಿಸಿದೆವು. ನೇರ ದೇವರ ಪೂಜಾ
ಧರ್ಶನಕ್ಕೆ ಹೋದೆವು. ವಿಶೇಷ ರಶ್ ಇರದ ಕಾರಣ ಚೆನ್ನಾಗಿ ದರ್ಶನ ಪಡೆದು ಮಂಗಳಾರತಿ ನೋಡಿ ಪ್ರಸಾದ
ಸ್ವೀಕರಿಸಿ ಹೊರ ಬಂದೆವು. ರಾಜಾಂಗಣದಲ್ಲಿ ಒಂದು ಸುತ್ತು ಬಂದೆವು. ಗೋಪುರಗಳನ್ನು
ವೀಕ್ಷಿಸಿದೆವು. ಇಲ್ಲಿ ಹಲವಾರು ಗುಡಿಗಳಿವೆ. ಅದರಲ್ಲಿ ಮುಖ್ಯವಾದದ್ದು ಗಣಪತಿ ಗುಡಿ. ಬಹಳ
ಕಲಾತ್ಮಕ ಗುಡಿಯಲ್ಲಿ ಸುಂದರವಾದ ವಿಘ್ನೇಶ್ವರನ ಮೂರ್ತಿ. ನೋಡಿದಷ್ಟೂ ಇನ್ನೂ ನೋಡಬೇಕು ಎನ್ನಿಸುವ
ಸುಂದರ ವಿಗ್ರಹ. ಇಲ್ಲಿ ದೊಡ್ಡದೊಂದು ಕಲ್ಯಾಣಿ ಇದೆ. ಇದರ ನೀರು ಔಷದ ಗುಣವುಳ್ಳದ್ದು
ಎನ್ನುತ್ತಾರೆ. ನವಂಬರ್ ಡಿಸೆಂಬರ್ ತಿಂಗಳಲ್ಲಿ ಬರುವ ಕಾರ್ತಿಕ ಹುಣ್ಣಿಮೆಯಂದು
ಇಲ್ಲಿ ವಿಶೇಷ ಜಾತ್ರೆ. ದೇವಾಲಯದಲ್ಲಿ ದೀಪಗಳನ್ನು ಉರಿಸಿ
ಅಲಂಕರಿಸುತ್ತಾರೆ ಮಾತ್ರವಲ್ಲ ಎದುರಿನ ಬೆಟ್ಟದಲ್ಲೂ ದೀಪ ಹಚ್ಚುತ್ತಾರೆ. ಬೆಟ್ಟದ ತುತ್ತ
ತುದಿಯಲ್ಲಿ ದೊಡ್ಡ ದೀವಟಿಗೆಯ ಆಕಾರದಲ್ಲಿ ಇರುವ ದೀಪವನ್ನು ಉರಿಸುತ್ತಾರೆ. ಇದು ಹಲವಾರು ಕಿ.ಮಿ.
ದೂರದವರೆಗೂ ಕಾಣಿಸುತ್ತದೆ. ಕೆಲವರು ಅಂದು 14 ಕಿ.ಮಿ. ಸುತ್ತಳತೆ ಇರುವ ಬೆಟ್ಟದ ಪರಿಕ್ರಮ ಸಹಾ
ಮಾಡುತ್ತಾರೆ. ಸಾವಿರಾರು ಜನ ನೆರೆಯುತ್ತಾರೆ.
ಈ ದೇವಾಲಯವು 9ನೇ ಶತಮಾನದಲ್ಲಿ ಚೋಳರ ಆಳ್ವಿಕೆಯಲ್ಲಿತ್ತು.
ನಂತರ ಬಂದ ಪಲ್ಲವರು, ಆದಿ ಹೊಯ್ಸಳರು, ವಿಜಯನಗರದವರು, ಹೈದರ್-ಟಿಪ್ಪು ಮತ್ತು ಇಂಗ್ಲಿಷರ
ಆಳ್ವಿಕೆಯಲ್ಲಿತ್ತು. 7ನೇ ಶತಮಾನದಲ್ಲಿ ಈ ದೇವಾಲಯದ ಉಲ್ಲೇಖ ವಿರುವ ಶಾಸನಗಳು ಸಿಕ್ಕಿವೆ. ಬಹಳ
ಪುರಾತನ ಕ್ಷೇತ್ರವಿದು.
ನಾವು ಹೊರ ಬಂದು ಪಕ್ಕದಲ್ಲೇ ಇರುವ ಹೋಟೆಲ್ ನಲ್ಲಿ ಊಟ
ಮುಗಿಸಿ ಸ್ವಲ್ಪ ಸುತ್ತಾಡಿ ನಂತರ 2 ಘಂಟೆಗೆ
ಪಾಂಡಿಚೇರಿಗೆ ಪಯಣ ಮುಂದುವರಿಸಿದೆವು. ಸರಿ ಸುಮಾರು 100
ಕಿ.ಮಿ. ದೂರ.