Tuesday, 12 March 2013

Mahadeva Temple Itagi




ಸುಮಾರು ಮೂರು-ನಾಲ್ಕು ವರ್ಷಗಳ ಹಿಂದೆ ಬೆಂಗಳೂರು ದೂರ ದರ್ಶನ, ಚಂದನ ವಾಹಿನಿಯಲ್ಲಿ ಪ್ರಸಾರಗೊಂಡಿದ್ದ ಇಟಗಿಯ ಮಹಾದೇವ ಹಾಗೂ ಲಕ್ಕುಂಡಿಯ ವಿಶ್ವೇಶ್ವರ ಮತ್ತು ಸೂರ್ಯನಾರಾಯಣ ದೇಗುಲಗಳ ಒಂದು ಸುಂದರ ದೃಶ್ಯ ಕಾವ್ಯ ಮನಸಲ್ಲಿ ಅಚ್ಚೊತ್ತಿತ್ತು. ಅಷ್ಟು ಸುಂದರವಾಗಿ, ನವಿರಾದ ಶೃಂಗಾರವನ್ನು ಲೇಪಿಸಿ ಅದನ್ನು ನಿರೂಪಿಸಿದ್ದರು. ಒಬ್ಬ ರಾಜಕುಮಾರ ಮತ್ತು ಅವನ ರಾಣಿ ಆ ದೇಗುಲದ ವರ್ಣನೆ ಮಾಡುತ್ತಿದ್ದರು. ಅಲ್ಲಿನ ಪ್ರತಿಯೊಂದು ಕಂಭ, ಅದರಲ್ಲಿನ ಶಿಲ್ಪ ಸೌಂದರ್ಯ, ಬಾಗಿಲುವಾಡ, ಗುಡಿ ಗೋಪುರಗಳನ್ನು ಅವರದೇ ಆದ ಶೃಂಗಾರಮಯ ಭಾಷೆಯಲ್ಲಿ ವಿವರಿಸಿ ಆಸ್ವಾದಿಸುತ್ತಿದ್ದರು. ಇದು ನಿಜಕ್ಕೂ ಬಹಳ ಆಕರ್ಷಣೀಯವಾಗಿತ್ತು. ದೂರದರ್ಶನ ಬೆಂಗಳೂರಿಗೆ ನಮ್ಮ ಅಭಿನಂದನೆಗಳು. ಅದೇ ಕಾರ್ಯಕ್ರಮವು ಹಲವು ಸಲ ಮರುಪ್ರಸಾರಗೊಂಡಿದ್ದು, ಅದನ್ನು ನೋಡಿ ಆ ಸುಂದರ ದೇಗುಲಗಳನ್ನು ನೋಡಲೇ ಬೇಕೆಂದು ನಿರ್ಧರಿಸಿದ್ದೆವು. ಇದಕ್ಕೆ ಪೂರಕವಾಗಿ ಇಂಟರನೆಟ್ ನಲ್ಲಿ ತಡಕಾಡಿ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆವು.
ಈ ದೇಗುಲಗಳು ಇರುವುದು ನಮ್ಮ ನಾಡಿನ ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ. ಗದಗ ತಲುಪುವ ಬಗ್ಗೆ ಮಾಹಿತಿ ಸಂಗ್ರಹಿಸಿದೆವು. ಬೇಕಾದಷ್ಟು ಬಸ್ಸುಗಳು ಲಭ್ಯವಿದೆ. ನಮ್ಮ ಆಯ್ಕೆ ರೈಲು ಪ್ರಯಾಣ. ಇಲ್ಲಿಗೆ ಹುಬ್ಬಳ್ಳಿಯ ಮೂಲಕ ರೈಲಿನಲ್ಲಿ ಹೋಗಿ ಅಲ್ಲಿಂದ ಬಸ್ ನಲ್ಲೋ ಅಥವಾ ಅಲ್ಲಿಂದ ಬೇರೆ ರೈಲಿನಲ್ಲೋ ತಲುಪಬಹುದು. ಇನ್ನೊಂದು ರೈಲು ಸ್ವಲ್ಪ ಸುತ್ತುಬಳಸಿ ಸೀದಾ ಗದಗಕ್ಕೇನೆ ತಲಪುತ್ತದೆ. ಇದು ಅನಂತಪುರ ಗುಂತಕಲ್ಲು, ಬಳ್ಳಾರಿ ಹೊಸಪೇಟೆ ಕೊಪ್ಪಳ ಮಾರ್ಗವಾಗಿ ಗದಗ ಸೇರುತ್ತದೆ. ನಾವು ಈ ಹಂಪಿ ಎಕ್ಷಪ್ರೆಸ್ಸ ಅನ್ನು ಆಯ್ದು ಕೊಂಡೆವು. 2013 ಫೆಬ್ರವರಿ 14 ನೆ ತಾರೀಕಿನಂದು ರಾತ್ರಿ 10 ಘಂಟೆಗೆ ಬೆಂಗಳೂರು ಸಿಟಿಯಿಂದ ಹೊರಟ ರೈಲು ಮರುದಿನ ಬೆಳಗ್ಗೆ 9.15ಕ್ಕೆ ಗದಗ ತಲುಪಿತು.
ರೈಲು ಇಳಿದು ಅಟೋ ಮಾಡಿಕೊಂಡು ನಾವು ಮುಂಗಡವಾಗಿ ಕಾಯ್ದಿರಿಸಿದ ಹೋಟೆಲ್ ವಿಶ್ವ ವನ್ನು ತಲುಪಿದೆವು. ಸುಮಾರು 3 ಕಿ. ಮಿ ದೂರ.
ಒಳ್ಳೆಯ ಸುಸಜ್ಜಿತ ರೂಮು ಸಿಕ್ಕಿತು. ಅಲ್ಲಿ ನಮ್ಮ ಸ್ನಾನ ಮೊದಲಾದುವುಗಳನ್ನು ಮುಗಿಸಿ ಕೆಳಗೆ ರೆಸ್ಟೋರೆಂಟ್ ಗೆ ಬಂದು ಬ್ರೇಕ್ ಫಾಸ್ಟ್ ಕಮ್ ಲಂಚ್ ಮುಗಿಸಿದೆವು. ಅಲ್ಲಿಂದಲೇ ಸ್ವಲ್ಪ ತಿಂಡಿ ಕಟ್ಟಿಸಿಕೊಂಡು ಇಟಗಿಗೆ ಹೊರಟೆವು. ರೆಸ್ಟೋರೆಂಟ್ ಮ್ಯಾನೇಜರ್ ಪ್ರವೀಣ್ ಶೆಟ್ಟಿ ಯವರು ಹೇಳಿದಂತೆ ಅಲ್ಲೇ ಹತ್ತಿರದ ಬಸ್ ಸ್ಟಾಪ್ ಗೆ  ಇಟಗಿಗೆ ಹೋಗುವ ಬಸ್ ಬರುತ್ತದೆ ಎಂದು ಹೇಳಿದರು.ಅಲ್ಲಿಗೆ ಸುಮಾರು ಬಸ್ ಗಳು ಬಂದು ಹೋದವು. ನಮಗೆ ಯಾವುದರಲ್ಲಿ ಏರಬೇಕೆಂದು ತಿಳಿಯಲಿಲ್ಲ. ಹಾಗಾಗಿ ಅಲ್ಲೇ ನಿಂತಿದ್ದ ಹಿರಿಯರನ್ನು ವಿಚಾರಿಸಿದೆ. ನಾನು ಆ ಕಡೆಗೇನೆ ಹೋಗುತಿದ್ದೇನೆ, ನನ್ನೊಂದಿಗೇ ಬಂದುಬಿಡಿ ಎಂದರು. ಸ್ವಲ್ಪ ಹೊತ್ತಲ್ಲೇ ಬಸ್ ಬಂದಿತು. ಅಷ್ಟಾಗಿ ರಶ್ ಇರಲಿಲ್ಲ. ಇಲ್ಲಿಂದ ಇಟಗಿಗೆ ಸುಮಾರು 35 ಕಿ.ಮಿ. ದೂರ, ರಸ್ತೆ ಚೆನ್ನಾಗಿತ್ತು. ಬಸ್ ಚಾರ್ಜು ಇಬ್ಬರಿಗೆ 58ರೂ. ಇಲ್ಲಿ ಒಂದು ಮಾತು. ಈ ಎರಡೂ ಜಿಲ್ಲೆಗಳಲ್ಲೂ ಮೂರು-ನಾಲ್ಕು ಇಟಗಿಗಳು ಇವೆ. ಕುಕನೂರು ಇಟಗಿ, ರೋಣ ಇಟಗಿ ಇನ್ನಾವುದೋ ಇಟಗಿ ಇದೆಯಂತೆ. ಅದ್ದರಿಂದ ಸರಿಯಾಗಿ ವಿಚಾರಿಸಿ ಬಸ್ ಹಿಡಿಯುವುದು ಲೇಸು. ಕುಕನೂರು ಇಟಗಿ ಇರುವುದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ. ಸದ್ಯದಲ್ಲೇ ಕುಕನೂರನ್ನು ತಾಲೂಕು ಕೇಂದ್ರ ಆಗಿ ಮಾಡುತ್ತಾರಂತೆ. ನಮಗೆ ಬೇಕಾಗಿದ್ದ ಕುಕನೂರು ಇಟಗಿಯ ಬಸ್ಸು ಮುಂದೆ ಸಾಗುತ್ತಾ ಪ್ರಖ್ಯಾತ ಲಕ್ಕುಂಡಿಯನ್ನು ದಾಟಿಯೇ ಮುಂದೆ ಹೋಗಬೇಕು. ಮುಂದೆ ಬನ್ನಿಕೊಪ್ಪದಲ್ಲಿ ಎಡಕ್ಕೆ ತಿರುಗಿ ಇಟಗಿಯನ್ನು ಸೇರಿತು. ದಾರಿಯುದ್ದಕ್ಕೂ ಜೋಳದ ಹೊಲಗಳು. ಹೆಚ್ಚಿನೆಡೆ ಕಟಾವು ಮುಗಿದಿತ್ತು. ಅಲ್ಲೇ ಕಾಳು ಒಕ್ಕಣೆ ಮಾಡಿ ರಾಶಿ ಮಾಡಿದ್ದರು.
ಬಸ್ ಇಳಿದಾಗಲೇ ಇಟಗಿ ಹಳ್ಳಿಯ ದರ್ಶನವಾಗುತ್ತದೆ. ಎಲ್ಲ ಹಳ್ಳಿಗಳಂತೆಯೇ ಎಲ್ಲ ಕಡೆ ಚೆಲ್ಲಿರುವ ಕಸ ಪ್ಲಾಸ್ಟಿಕ್ ಗಳ ರಾಶಿ,  ಅಲ್ಲಲ್ಲಿ ಮೋರಿಯಿಂದ ಹರಿವ ಕೊಳಚೆ ನೀರು, ಅದರಲ್ಲೇ ಸಂತುಷ್ಟವಾಗಿರುವ ಹಂದಿಗಳು ಎಲ್ಲ ಎದುರಾದವು. ದೂರದಲ್ಲೇ ಮಹಾದೇವ ದೇಗುಲ ಕಾಣಿಸುತ್ತದೆ. ಅದರ ಎದುರುಗಡೆ ಬಹಳ ವಿಸ್ತಾರವಾದ ಕಲ್ಯಾಣಿ ಇದೆ. ಆದರೆ ನೀರು ಇಲ್ಲ.

        

 ನಾವು ಶಾರ್ಟ್ ಕಟ್ ಮಾಡಿ ಕಲ್ಯಾಣಿ ಯಲ್ಲೇ ನಡೆದು ನಮ್ಮ ಗಮ್ಯ ಸ್ಥಾನ ತಲುಪಿದೆವು.

ಇಟಗಿಯ ಮಹಾದೇವ ದೇವಾಲಯ
ದೇವಾಲಯದ ಪಾವಟಿಕೆಗಳ ಪಕ್ಕದಲ್ಲೇ ಸುಂದರ ಹಾಗೂ ದೊಡ್ಡದಾದ ರಥವಿದೆ. ಮೇಲ್ಗಡೆ ಏರಿ ಹೋದರೆ ಅದೊಂದು ಕಲ್ಪನಾತೀತ ಲೋಕ!
ಹಲವಾರು ದೇಗುಲಗಳ ಸಮುಚ್ಚಯ. ಎಲ್ಲದರ ಸುತ್ತಲೂ ಸುಂದರವಾದ ಹುಲ್ಲು ಹಾಸು, ಅದರ ಅಂಚಿನಲ್ಲಿ, ಮಧ್ಯದಲ್ಲಿ ಹೂ ಗಿಡಗಳು, ಅಲಂಕಾರಿಕ ಸಸ್ಯಗಳನ್ನು ಬೆಳೆಸಿದ್ದಾರೆ. ಹಸಿರು ಹಸಿರಾಗಿ ಕಂಗೊಳಿಸುವ ಹುಲ್ಲು ಹಾಸನ್ನು ಬಹಳ ಮುತುವರ್ಜಿವಹಿಸಿ ಆರೈಕೆ ಮಾಡಿ ಪೋಷಿಸಿದ್ದಾರೆ. ಅಲ್ಲಿನ ಶಿಲ್ಪಕಲಾ  ಪರಿಸರಕ್ಕೆ ಬಹಳ ಚೆನ್ನಾದ ಒಂದು ಆಯಾಮವನ್ನು ದೊರಕಿಸಿದ್ದಾರೆ. 

        
 
ಮುಖ್ಯ ದೇವಾಲಯವಾದ ಮಹಾದೇವನ ದೇಗುಲ ಮಧ್ಯದಲ್ಲಿದ್ದರೆ ಅದರ ಸುತ್ತಲೂ ಹಲವಾರು ಪುಟ್ಟ ಗುಡಿಗಳಿದ್ದು ಎಲ್ಲದರಲ್ಲೂ ಶಿವಲಿಂಗವನ್ನು ಪ್ರತಿಷ್ಟಿಸಿದ್ದಾರೆ.

      
      

      

 ಇದಲ್ಲದೆ ದಕ್ಷಿಣ ದಿಕ್ಕಿನಲ್ಲಿ ಸರಸ್ವತಿ  ಮಠವಿದೆ. ಉತ್ತರದ ಕಡೆ ಮೂರ್ತಿನಾರಾಯಣ ಮತ್ತು ಚಂದಲೇಶ್ವರಿ ದೇಗುಲಗಳಿವೆ. ಸಾಹಸ ಭೈರವ ದೇವಾಲಯವೂ ಇದೆ. ಈ ದೇವಾಲಯಗಳನ್ನು ಬಾದಾಮಿ ಚಾಲುಕ್ಯರ ವಂಶಜರಾದ ಕಲ್ಯಾಣ ಚಾಲುಕ್ಯರಲ್ಲಿ ಬಹಳ ಹೆಸರಾಂತ 6ನೇ ವಿಕ್ರಮಾದಿತ್ಯನ ಸೇನಾನಿಯಾದ ಮಹಾದೇವ ದಂಡನಾಯಕನು ಕಟ್ಟಿಸಿದ್ದನೆಂದು ತಿಳಿಯುತ್ತದೆ. 11ನೇ ಶತಮಾನದ ಈ ದೇಗುಲಗಳು ಈಗಲೂ ಅಷ್ಟೇ ಸುಂದರವಾಗಿವೆ. ಊರಿನಿಂದ ಪ್ರತ್ಯೇಕವಾಗಿ ಎತ್ತರದ ದಿಬ್ಬದ ಮೇಲೆ ಸುಮಾರು 4 ಎಕರೆ ಪ್ರದೇಶದಲ್ಲಿ ಈ ದೇಗುಲವಿದೆ. ಮಧ್ಯದಲ್ಲಿ  ಪೂರ್ವಾಭಿಮುಖವಾಗಿ ಮಹಾದೇವ ಮಂದಿರವಿದ್ದು ಅದಕ್ಕೆ ಹೊಂದಿಕೊಂಡಿರುವ ಬಹು ಕಂಭಗಳ ಮುಖ ಮಂಟಪವಿದೆ.
      

 ಇದರಲ್ಲಿ 42 ಕಂಭಗಳಿದ್ದು ಅವುಗಳ ಕೆಳ ಭಾಗವು ಚೌಕಾಕಾರವಾಗಿದ್ದು ಮೇಲ್ಭಾಗವು ದುಂಡಗಾಗಿದೆ. ತಳಭಾಗದಲ್ಲಿ ಸುಂದರ ಕೆತ್ತನೆ ಕೆಲಸಗಳಿದ್ದು ಮೇಲ್ಭಾಗವನ್ನು ಆ ಕಾಲದ ಕಡಚ್ಹಲ್  (ಲೇತ್) ಬಳಸಿ ನುಣುಪುಗೊಳಿಸಿದ್ದಾರೆ. ಇದರಲ್ಲೂ ಬಹಳ ಜ್ಯಾಮಿತಿಯ ಪರಿಣತೆಯಿಂದ ಹಲವಾರು ಚಕ್ರಾಕಾರಗಳನ್ನೂ ಕೊರೆದಿದ್ದಾರೆ. ಇವುಗಳಲ್ಲಿ ನಮ್ಮ ಮುಖವನ್ನು ಕಾಣಬಹುದು. ಅಷ್ಟು ನುಣುಪಾಗಿದೆ.


      


      

 ಇಡೀ ದೇವಾಲವು ಬಳಪದ ಕಲ್ಲಿನಿಂದ ರಚಿಸಿದ್ದರಿಂದ ಇಷ್ಟು ಮಟ್ಟಿನ ನಯಗಾರಿಕೆ ಸಾಧ್ಯ. ಮಂಟಪದ ಮೇಲ್ಭಾಗದಲ್ಲಿ ನಟರಾಜನ ಕೆತ್ತನೆ ಇದೆ. ಮುಂದೆ ಸುಂದರವಾದ ನಂದಿ ವಿಗ್ರಹವಿದೆ. ನಂತರ ಮುಖ್ಯ ದ್ವಾರ. ಒಂದೇ ಕಲ್ಲಿನಲ್ಲಿ 7 ಪಟ್ಟಿಕೆಗಳನ್ನು ರಚಿಸಿ ಅದರಲ್ಲಿ ಹೂಬಳ್ಳಿಗಳನ್ನು ಬಿಡಿಸಿದ್ದಾರೆ.

      



      

 ಇದನ್ನು ದಾಟಿ ಮುಂದೆ ಹೋದರೆ ನವರಂಗ, ಅಲ್ಲಿ  ಸುಂದರ ಕೆತ್ತನೆಗಳಿರುವ 4 ಕಂಭಗಳಿವೆ. ಮೇಲ್ಭಾಗದಲ್ಲಿ  ಸಹಾ ಸುಂದರ ಅಲಂಕಾರಿಕ ಶಿಲ್ಪಗಳಿವೆ. ಈ ದೇವಾಲಯದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಕೂಡ ಬಾಗಿಲುಗಳಿದ್ದು, ಸುಂದರ ಕೆತ್ತನೆಗಳುಳ್ಳ ಬಾಗಿಲುವಾಡವಿದೆ. ಗರ್ಭ ಗೃಹದ ಮುಂದುಗಡೆ ಮಕರ ತೋರಣವಿದ್ದು ಏಕಶಿಲಾ ಫಲಕದಲ್ಲಿ ಸುಂದರವಾದ ಚಿತ್ರಣವಿದೆ.

    

    

 ಮುಂದೆ ಗರ್ಭಗೃಹದ  ಬಾಗಿಲು. ಇದರ ಬಾಗಿಲುವಾಡವಂತೂ ಎಲ್ಲವನ್ನೂ ಮೀರಿಸುತ್ತದೆ. ಮಧ್ಯದಲ್ಲಿ ಮಹಾದೇವನ ವಿಗ್ರಹ.


      


 ನಾವು ಹೋಗಿರುವಾಗ ಬಾಗಿಲು ಹಾಕಿದ್ದರು. ಆದರೂ ಬಾಗಿಲಿಗೆ ಕಂಡಿಗಳಿದ್ದು ದೇವರನ್ನು ನೋಡಲಾಗುತ್ತದೆ. ಇಲ್ಲಿನ ತೋಟಗಾರನಾದ ಪಾಷಾ ಮತ್ತು ಒಬ್ಬರು ಕಾಲೇಜಿನ ಪ್ರಾಧ್ಯಾಪಕರು ನಮಗೆ ಅಲ್ಲಿನ ಎಲ್ಲ ವಿಶೇಷಗಳನ್ನು ಸೊಗಸಾಗಿ ವಿವರಿಸಿದರು. ಪಾಷಾ ಒಬ್ಬ ಸಾಮಾನ್ಯ ತೋಟಗಾರನಾಗಿದ್ದರು ಸಹಾ ಅವನ ವಿವರಣೆಗಳು, ಉತ್ಸಾಹ ಎಲ್ಲ ನಮಗೆ ಮೆಚ್ಚಿಕೆಯಾದವು. ಕತ್ತಲಿರುವ ಕಡೆ ಟಾರ್ಚ್ ಬೆಳಕು ಬೀರಿ ನಮಗೆ ಎಲ್ಲಾ ಕಡೆ ತೋರಿಸಿದ. ಅಲ್ಲಿ ಆ ದಿನ ಬಂದಿರುವವರು ನಾವಿಬ್ಬರೇ, ಅದೂ ಅಷ್ಟು ದೂರದ ಬೆಂಗಳೂರಿನಿಂದ ಎಂದು ತಿಳಿದು ಬಹಳ ಸಂತಸ ಪಟ್ಟರು. ಅವರಿಬ್ಬರಿಗೂ ತಮ್ಮ ಊರಿನ ಈ ಶಿಲ್ಪಕಲಾ ಖಜಾನೆಯನ್ನು ತೋರಿಸಲು ತುಂಬಾ ಹೆಮ್ಮೆ ಮತ್ತು ಉತ್ಸಾಹ. ಒಂದು ಮಾತು- ಶಿಲ್ಪಕಲೆಯ ಬಗ್ಗೆ ಅಪಾರ ಜ್ಞಾನವಿಲ್ಲದ ಹೊರತು ನಮ್ಮಂತಹ ಸಾಮಾನ್ಯ ಯಾತ್ರಿಕರಿಗೆ ಇದರ ಬಗ್ಗೆ ವಿವರಣೆ ಕೊಡುವುದು ಅಸಾಧ್ಯ. ಅದರ ಕಷ್ಟ ನನಗೀಗ ಅನುಭವವಾಗುತ್ತಿದೆ. ಬರೆಯಲು ಶಬ್ಧಗಳು ಸಿಗುತ್ತಿಲ್ಲ. ನಮಗೆ ಅಲ್ಲಿ ಏನು ಕಂಡಿದೆಯೋ ಅದನ್ನು ಉತ್ಹ್ಪ್ರೇಕ್ಷೆಯಿಲ್ಲದೆ ಬರೆಯುವ ಸಾಹಸ ಮಾಡುತಿದ್ದೇನೆ. ಇಲ್ಲಿನ ಹೆಚ್ಚಿನ ವಿವರಗಳೆಲ್ಲಾ ಇವರಿಬ್ಬರು ಹೇಳಿರುವುದೇ ಆಗಿದೆ. ಮಹಾದೇವನಿಗೆ ಭಕ್ತಿಯಿಂದ ನಮಿಸಿ ಹೊರ ಬಂದೆವು.

    

    


    

    
 ದೇವಾಲಯದ ಹೊರ ಸೌಂದರ್ಯವನ್ನು ನೋಡಲು ಬಂದೆವು. ಈ ದೇವಾಲಯವು ಎತ್ತರದ ನಕ್ಷತ್ರಾಕಾರದ ಜಗಲಿಯ ಮೇಲೆ ನಿರ್ಮಿಸಿದ್ದಾರೆ. ಇದರ ಉದ್ದ 120 ಅಗಲ 100 ಅಡಿಗಳಿವೆಯಂತೆ. ಚಾಲುಕ್ಯ ಶೈಲಿಯ ದೇವಾಲಯ ಇದಾಗಿದ್ದು ಮುಂದೆ ಹೊಯ್ಸಳರೂ ಈ ಭಾಗವನ್ನು ಆಳುತ್ತಿದ್ದದರಿಂದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರಗಳಲ್ಲಿಯೂ ಈ ಶೈಲಿಯ ಪ್ರಭಾವವನ್ನು ಕಾಣಬಹುದು. ಇಲ್ಲಿ ನಮಗೆ ಬೇಲೂರು ದೇವಾಲಯದಲ್ಲಿರುವಷ್ಟು ಶಿಲ್ಪಕೆತ್ತನೆಗಳು ಕಾಣ ಬರದಿದ್ದರೂ ಬಹಳ ಸುಂದರವಾಗಿ ಚಿಕ್ಕ ಚಿಕ್ಕ ಮೂರ್ತಿಗಳೂ, ಆನೆ, ನವಿಲು. ಪಕ್ಷಿ ಹೂ ಬಳ್ಳಿಗಳನ್ನು  ಕಾಣಬಹುದು. ಯಕ್ಷ ಯಕ್ಷಿಣಿ, ನಾಗ ನಾಗಿಣಿ, ಗಜಲಕ್ಷ್ಮಿ ಮತ್ತು ಇತರ ದೇವಾನುದೇವತೆಗಳ ಮೂರ್ತಿಗಳನ್ನೂ ಇಲ್ಲಿ ಕಡೆದಿದ್ದಾರೆ. ಇಲ್ಲಿನದೇ ಆದ ಒಂದು ಪ್ರತ್ಯೇಕ ಸುಂದರ ಅಲಂಕಾರಿಕ ಪಟ್ಟಿಕೆಗಳನ್ನು ಇಲ್ಲಿ ಕಾಣಬಹುದು. 

    


    

    

ಈ ದೇಗುಲದ ಶಿಖರವು ಹಿಂದೆ ನಾಶವಾದ ಕಾರಣ, ಹೊಸದಾಗಿ ಸಿಮೆಂಟ್ ನ ಶಿಖರವನ್ನು ಕಟ್ಟಿದ್ದಾರೆ. ಇದರಲ್ಲಿ ಯಾವುದೇ ಶಿಲ್ಪಗಳಿಲ್ಲ. ಉತ್ತರ ಮತ್ತು ದಕ್ಷಿಣ ದ್ವಾರದ ಬಾಗಿಲುವಾಡಗಳೂ ಬಹಳ ಆಕರ್ಷಣೀಯವಾಗಿದೆ.
ಇದಾದ ಮೇಲೆ ನಾವು ಸರಸ್ವತಿ ಮಠಕ್ಕೆ ಹೋದೆವು. ಇಲ್ಲಿನ ಎದುರುಗಡೆ ಜಗಲಿಯಲ್ಲಿ ಹಲವಾರು ಚಿಕ್ಕ ದೊಡ್ಡ ಶಾಸನಗಳನ್ನೂ ಭಗ್ನವಾಗಿರುವ ಶಿಲಾ ಮೂರ್ತಿಗಳನ್ನೂ ಇರಿಸಿದ್ದಾರೆ.

    

    

 ಒಳಗಡೆ ಕಂಭಗಳಿಂದ ಕೂಡಿದ ದೊಡ್ಡ ಅಂತರಂಗವಿದೆ. ಮುಂದೆ ಗರ್ಭಗೃಹದಲ್ಲಿ ಶಿವಲಿಂಗವಿದೆ. ಇದರ ಎರಡೂ ಪಾರ್ಶ್ವದಲ್ಲಿ ಒಂದೊಂದು ಕೊಠಡಿ ಇದ್ದು ಇವುಗಳ ಕೆಳಗಡೆ ಗುಪ್ತವಾಗಿರುವ ನೆಲ ಮಾಳಿಗೆಯಿದೆ.

    

 ಇದರಲ್ಲಿ ಸುಮಾರು 50 ಜನ ಕುಳಿತು ಕೊಳ್ಳಬಹುದಂತೆ. ಈ ಮಂದಿರದಲ್ಲಿ ಹಿಂದೆ ಸಂಸ್ಕೃತ ವ್ಯಾಸಂಗ ನಡೆಯುತಿತ್ತಂತೆ. ಸರಸ್ವತಿ ಮಠದ ಎದುರುಗಡೆ ಹುಲ್ಲುಹಾಸಿನಲ್ಲಿ ಒಂದು ಸುಂದರವಾದ ಚತುರ್ಮುಖ ಬ್ರಹ್ಮನ ವಿಗ್ರಹವಿರಿಸಿದ್ದಾರೆ. 

    

ಅಲ್ಲಲ್ಲಿ ಅಲಂಕಾರಿಕ ತುಂಡುಗಂಭಗಳನ್ನೂ ಇರಿಸಿ ಆ ಇಡೀ ಪರಿಸರಕ್ಕೆ ಒಂದು ಶೋಭೆಯನ್ನು ತಂದಿಳಿಸಿದ್ದಾರೆ. ಎಲ್ಲ ಕೋನಗಳಿಂದಲೂ ಮಹಾದೇವ ಮಂದಿರದ ಸೊಬಗನ್ನು ಕೆಮರಾದಲ್ಲಿ ಸೆರೆಹಿಡಿದೆವು.

    

    

    
    

 ಪೂರ್ವ ದಿಕ್ಕಿನ ವಿಶಾಲ ಕಲ್ಯಾಣಿ ನೀರಿನಿದ ತುಂಬಿರುತಿದ್ದರೆ ಇನ್ನೂ ಸೊಗಸಾಗಿರುತಿತ್ತು. ಸರಿಯಾಗಿ ಮಳೆ ಬಂದರೆ ಮಾತ್ರ ಇದು ಸಾಧ್ಯ. ದೇವಾಲಯದ ಪಶಿಮ ದಿಕ್ಕಿನಲ್ಲಿ ಒಂದು ಸುಂದರ, ಆಳವಾದ ಕೊಳವಿದೆ. ಇದಕ್ಕೆ ಕೀಲ್ಗೊಂಡ ಎಂದು ಹೇಳುತ್ತಾರೆ. ಬಹಳ ಉತ್ತಮ ರೀತಿಯಲ್ಲಿ ಇದನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಈಗ ಇದರ ತಳದಲ್ಲಿ ಮಾತ್ರ ಸ್ವಲ್ಪ ನೀರಿತ್ತು. ಇಲ್ಲಿನ ಹುಲ್ಲುಹಾಸು, ಹೂದೋಟಕ್ಕೆ ಇದರಿಂದಲೇ ನೀರು ಎತ್ತುತ್ತಾರೆ.

    


    

 ಇಲ್ಲಿ ಯುಗಾದಿಯಂದು ಸೂರ್ಯ ಕಿರಣವು ಮಹಾದೇವನ ವಿಗ್ರಹದ ಮೇಲೆ ಬೀಳುತ್ತದೆ. ಆ ದಿನ ಭಕ್ತಾದಿಗಳು ಬಂದು ಈ ಸೋಜಿಗವನ್ನು ಕಂಡು ಧನ್ಯರಾಗುತ್ತಾರೆ. ಇದಲ್ಲದೆ ಎಳ್ಳಮವಾಸ್ಯೆಯಂದು ಮಹಾದೇವನ ರಥೋತ್ಸವ ಜರಗುತ್ತದೆ. ಶಾಸನಗಳಲ್ಲಿ ವರ್ಣಿಸಿರುವಂತೆ ಇದು ದೇವಾಲಯಗಳ ಚಕ್ರವರ್ತಿ ‘ ಈ ನಾಮ ಇದಕ್ಕೆ ಅನ್ವರ್ಥ!
ವ್ಯಸನದ ಒಂದು ಮಾತೆಂದರೆ ಇಲ್ಲಿ ಶತ್ರುಗಳ ಧಾಳಿಯಿಂದಾಗಿ ಹೆಚ್ಚಿನ ಎಲ್ಲಾ ಶಿಲ್ಪಗಳನ್ನು ವಿರೂಪಗೊಳಿಸಿದ್ದಾರೆ. ಇದು ನಮ್ಮ ದೌರ್ಭಾಗ್ಯ.
ಈಗ ಘಂಟೆ 6 ಆಯಿತು ಸೂರ್ಯನ ಬಂಗಾರದ ರಶ್ಮಿಗಳು ಮಹಾದೇವ ಮಂದಿರದ ಮೇಲೆ ಬಿದ್ದು ಸ್ವರ್ಣಮಯವಾಯಿತು.

    

 ನಾವೂ ಅಲ್ಲಿಂದ ಹೊರಟೆವು. ನಮ್ಮ ಇಬ್ಬರು ಸಂಗಾತಿಗಳು ಆತ್ಮೀಯರಾಗಿದ್ದರು. ಅವರಿಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸಿ ಹೊರಟೆವು. ಪಕ್ಕದಲ್ಲೇ ಇದೆ ಬಸ್ ಸ್ಟಾಪ್. ಸ್ವಲ್ಪದರಲ್ಲೇ ಗದಗಕ್ಕೆ ಹೋಗುವ ಬಸ್ ಬಂತು. 7.30ಕ್ಕೆ ಗಡಕ್ಕೆ ತಲುಪಿದೆವು. ಇಟಗಿ ಗದಗದ ಆಸುಪಾಸಿನಲ್ಲಿ ಇನ್ನೂ ಹಲವಾರು ನೋಡತಕ್ಕಂತಹ ಶಿಲ್ಪಕಲಾ ದೇಗುಲಗಳಿವೆ. ಉದಾ.- ಕಲ್ಲೂರು, ಲಕ್ಷ್ಮೇಶ್ವರ, ಲಕ್ಕುಂಡಿ,ಗದಗ, ಅಣ್ಣಿಗೇರಿ,ಕುಕನೂರು, ಕಲ್ಮೇಶ್ವರ ಇತ್ಯಾದಿ.ಇವೆಲ್ಲವೂ ಗದಗದಿಂದ 30ಕಿ.ಮಿ ದೂರದಲ್ಲಿದೆ. ಇಲ್ಲಿಂದ ಪ್ರಸಿದ್ದ ಬಾದಾಮಿ ಸುಮಾರು 80 ಕಿ.ಮಿ. ದೂರದಲ್ಲಿದೆ.
ನಮ್ಮ ಈ ಪ್ರಯಾಣದ ಮುಂದಿನ ತಾಣಗಳು ಗದಗದ ವೀರನಾರಾಯಣ ಮತ್ತು ತ್ರಿಕೂಟೇಶ್ವರ ಹಾಗೂ ಸೋಮೇಶ್ವರ ದೇವಾಲಯ ಮತ್ತು ಲಕ್ಕುಂಡಿಯ ವೈಭವ. ಇದನ್ನು ಪ್ರತ್ಯೇಕವಾಗಿ ಬರೆಯುವೆ.

No comments:

Post a Comment