Saturday, 16 March 2013

Gadaga




ಗದಗದ ವೀರನಾರಾಯಣ ಮತ್ತು ತ್ರಿಕೂಟೇಶ್ವರ ದೇವಾಲಯಗಳು.

ನಾವು ಇಟಗಿಯಿಂದ ನೇರ ಗದಗಕ್ಕೆ ಬಂದೆವು. ಗದಗ ಬಸ್ ನಿಲ್ದಾಣದಿಂದ ವೀರನಾರಾಯಣ ದೇಗುಲಕ್ಕೆ  ಕೇವಲ 15 ನಿಮಿಷಗಳ ದಾರಿ. ಅಲ್ಲಲ್ಲಿ ವಿಚಾರಿಸಿಕೊಂಡು ದೇವಾಲಯಕ್ಕೆ ತಲುಪಿದೆವು.
ಎದುರುಗಡೆಯೇ ಎತ್ತರವಾದ ರಾಜಗೋಪುರ. ತಮಿಳುನಾಡು ಶೈಲಿಯಲ್ಲಿ ಇದನ್ನು ನಿರ್ಮಿಸಿದ್ದಾರೆ. ಫೋಟೋ ಹಿಡಿಯೋಣವೆಂದು ನೋಡಿದರೆ ಕೆಮರಾದ ಬ್ಯಾಟರಿ ನಿರ್ಜೀವವಾಗಿತ್ತು. ಸರಿ ಹಾಗೇ ನೋಡಿಕೊಂಡು ಬರೋಣ ಎಂದು ಮುಂದಡಿಯಿಟ್ಟೆವು. ವಿಶಾಲವಾದ ಪ್ರಾಂಗಣ, ಪಕ್ಕದಲ್ಲಿ ಒಂದು ದೊಡ್ಡ ಸಭಾಮಂದಿರ, ಇಲ್ಲಿ ಪ್ರವಚನ ನಡೆಯುತ್ತಿತ್ತು. ದೇವಾಲಯವು ದೊಡ್ಡದಾಗಿದ್ದು ಹಲವಾರು ಸುಂದರ ಕಂಭಗಳಿಂದ ಕೂಡಿದೆ. ಇವುಗಳಲ್ಲೊಂದು ಕಂಭಕ್ಕೆ ಒರಗಿಕೊಂಡು ಕವಿ ಕುಮಾರ ವ್ಯಾಸ ಎಂದೇ ಪ್ರಖ್ಯಾತರಾದ ಗದುಗಿನ ನಾರಣಪ್ಪನವರು ಗದುಗಿನ ಭಾರತ ಎಂಬ ಮಹಾಕಾವ್ಯವನ್ನು ರಚಿಸಿದ್ದು. ಇದರ ನೆನಪಿಗಾಗಿ ಈ ಕಂಭಕ್ಕೆ ನಿತ್ಯವೂ ಹೂ ಕುಂಕುಮ ಅರ್ಪಿಸುತ್ತಾರೆ. ಗರ್ಭಗೃಹದಲ್ಲಿ ಆಳೆತ್ತರದ ಸುಂದರ ವೀರನಾರಾಯಣನ ವಿಗ್ರಹ. ಭಕ್ತಿಯಿಂದ ನಮಿಸಿ ಪ್ರಸಾದ ಪಡಕೊಂಡು ಹೊರಬಂದೆವು. ಇಂದಿನ ಕಾರ್ಯಕ್ರಮ ಮುಗಿಯಿತು. ಇನ್ನು ರೂಮಿಗೆ. ದಾರಿಯಲ್ಲಿ ಒಂದು ಉತ್ತಮ ಹೋಟೆಲ್ ಗೆ  ಹೋಗಿ ಹೊಟ್ಟೆ ತುಂಬಿಸಿದೆವು. ಹಾಗೇನೆ ದಾರಿಯಲ್ಲಿ ಹಣ್ಣು ದ್ರಾಕ್ಷಿ ಎಲ್ಲ ಕೊಂಡೆವು. ಇಲ್ಲಿ ದ್ರಾಕ್ಷಿ ಬಹಳ ಅಗ್ಗ. ಬೆಂಗಳೂರಲ್ಲಿ ಕಿಲೋಗೆ 60 ರೂ. ಆದರೆ, ಇಲ್ಲಿ 40 ರೂ. ಹೋಟೆಲ್ ತಲುಪಿದೆವು. ಅಲ್ಲಿ ಅದರ ಮಾಲಿಕರಾದ ಶ್ರೀ.ವಿಶ್ವನಾಥ ಶೆಟ್ಟಿಯವರು ಸಿಕ್ಕಿದರು. ನಾವು ಊರಿನವರು ಎಂದು ನಮ್ಮೊಡನೆ ಆತ್ಮೀಯವಾಗಿ ಬಹಳ ಹೊತ್ತು ಮಾತಾಡಿದರು. ನಮಗೂ ಹೋಮ್ಲಿ ಅನ್ನಿಸಿತು. ರಾತ್ರಿ ಒಳ್ಳೆಯ ನಿದ್ದೆ.
ಮರುದಿನ ಮುಂಜಾನೆ ಎದ್ದು ತ್ರಿಕೂಟೇಶ್ವರ ದೇವಾಲಯ ನೋಡಲು ಹೊರಟೆವು. ನಮ್ಮ ಹೋಟೆಲ್ ನಿಂದ ಸುಮಾರು 1.5 ಕಿ.ಮೀ. ದೂರ ಅಷ್ಟೇ. ನಮ್ಮ ಬೆಳಗ್ಗಿನ ವಾಕಿಂಗ್ ಆಗುವುದೆಂದು ನಡಕೊಂಡೆ ಅಲ್ಲಿಗೆ ಹೋದೆವು. ಇಲ್ಲಿ ಒಂದು ಬಹಳ ವಿಸ್ತಾರವಾದ ಕೆರೆ ಇದೆ. ಇದನ್ನು ಬೀಷ್ಮ ಹೊಂಡ ಎನ್ನುತ್ತಾರೆ. ಸ್ವಲ್ಪವೇ ನೀರಿತ್ತು. ಆದರೆ ಪರಿಸರ ಬಹಳ ಸುಂದರವಾಗಿದೆ. ಇದರಲ್ಲಿ ಪೂರ್ತಿ ನೀರು ತುಂಬಿದ್ದರೆ ಎಷ್ಟು ಸೊಗಸಾಗಿತ್ತು ಎಂದು ಯೋಚಿಸಿದೆವು. ಮುಖ್ಯ ರಸ್ತೆಯಿಂದ ಒಂದು ಚಿಕ್ಕ ಗಲ್ಲಿ ಹಿಡಿದೆವು. ಬಹಳ ಗಲೀಜಾಗಿತ್ತು. ಸ್ವಲ್ಪ ದೂರ ಅಷ್ಟೆ. ಸುತ್ತಲೂ ಮನೆಗಳಿಂದ ಆವರಿಸಿರುವ ಒಂದು ಜಾಗದಲ್ಲಿ ತ್ರಿಕೂಟೇಶ್ವರ ದೇವಾಲಯವಿದೆ. ಮುಂಭಾಗದಲ್ಲಿ ಮುಖ್ಯ ದ್ವಾರ. ಅದನ್ನು ದಾಟಿ ಕೆಲ ಮೆಟ್ಟಿಲುಗಳನ್ನಿಳಿದು ಸಾಗಿದರೆ ಪ್ರಾಂಗಣ. 


  

 ಇಲ್ಲಿ ಗಾಯತ್ರಿ, ಸಾವಿತ್ರಿ, ಸರಸ್ವತಿ ದೇವಾಲಯಗಳ ಜೊತೆಗೆ ತ್ರಿಕೂಟೇಶ್ವರ ದೇವಾಲಯವೂ ಇದೆ, ಇವುಗಳಲ್ಲಿ ಸರಸ್ವತಿ ಮತ್ತು ತ್ರಿಕೂಟೇಶ್ವರ ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಾಲದವು. ಇಲ್ಲಿ ಸಹಾ ಶತ್ರುಗಳ ಧಾಳಿಯಿಂದ ವಿಗ್ರಹ ಮತ್ತು ಶಿಲ್ಪಗಳು ವಿರೂಪಗೊಳಿಸಲ್ಪಟ್ಟಿವೆ. ಸರಸ್ವತಿಯ ಕೈಗಳನ್ನೇ ಭಗ್ನಗೊಳಿಸಿದ್ದಾರೆ.


  


 ಹಾಗಾಗಿ ಇಲ್ಲಿ ಪೂಜೆ ಇಲ್ಲ. ಅದಕ್ಕಾಗಿ ಕಾಲಾನಂತರ ಗಾಯತ್ರಿ ಮತ್ತು ಸಾವಿತ್ರಿಯರ ದೇಗುಲಗಳನ್ನು ಕಟ್ಟಿಸಿದ್ದಾರೆ. ಆದರೆ ಇವುಗಳಲ್ಲಿ ಶಿಲ್ಪಕಲೆಯ ಅಲಂಕಾರವಿಲ್ಲ.


  


  

 ತ್ರಿಕೂಟೇಶ್ವರ ದೇಗುಲದ ಕಳಶ ಗೋಪುರ ಸಹಾ ನಾಶಗೊಳಿಸಿದ್ದು ಇದನ್ನು ಸಿಮೆಂಟಿನಿಂದ ಮತ್ತೆ ಕಟ್ಟಿದ್ದಾರೆ. ಸರಸ್ವತಿ ದೇಗುಲದ ಮುಖ ಮಂಟಪದ ಒಂದೊಂದು ಕಂಭವೂ ವಿಭಿನ್ನವಾಗಿ ಒಂದಕ್ಕಿಂತ ಒಂದು ಮಿಗಿಲಾಗಿ ಪೈಪೋಟಿ ನಡೆಸುತ್ತಿದೆ ಎನ್ನಿಸುತ್ತದೆ. ಅಷ್ಟು ಸುಂದರ ಮೋಹಕ ಕಲಾಗಾರಿಕೆ ಇಲ್ಲಿದೆ.


  

  


  


  


  


  



  


  


  

 ಗರ್ಭಗೃಹದ ಬಾಗಿಲುವಾಡವೂ ಸುಂದರವಾಗಿದೆ. ಆದರೆ ಅದರ ಮರದ ಬಾಗಿಲು ಸಾಮಾನ್ಯವಾಗಿದೆ.

  


 ಇಲ್ಲಿನ ಕಂಭಗಳ ಸೊಗಸನ್ನೇ ನೋಡುತ್ತಾ ನಿಂತರೆ ಸಮಯ ಹೋಗುವುದೇ ತಿಳಿಯದು. ಚಿನ್ನ ಬೆಳ್ಳಿಯ ಆಭರಣ ತಯಾರಕರು ಇಲ್ಲಿಗೆ ಬಂದು  ಇಲ್ಲಿನ ಕಲಾ ಮಾದರಿಗಳನ್ನು ತಮ್ಮ ಆಭರಣಗಳಲ್ಲಿ ಪಡಿಮೂಡಿಸುತ್ತಾರಂತೆ. ಅಷ್ಟು ಸೂಕ್ಷ್ಮ ಕಲಾ ವೈಭವ ಇಲ್ಲಿದೆ. ನಾವು ಅಲ್ಲಿಗೆ ಹೋದಂದು, ಸ್ಥಳೀಯ ಚಿತ್ರಕಲಾ ಶಾಲೆಯ ಕೆಲ ವಿದ್ಯಾರ್ಥಿಗಳು ಅಲ್ಲಿ ಕುಳಿತು ಅಲ್ಲಿರುವ ಶಿಲ್ಪಗಳ ಚಿತ್ರ ಬಿಡಿಸುತ್ತಾ ಇದ್ದರು.


  

 ಜೊತೆಗೆ ಅವರ ಆಚಾರ್ಯರು ಸಹಾ ಅಲ್ಲಿದ್ದರು. ಅವರು ನಮಗೆ ಈ ದೇವಾಲಯದ, ಶಿಲ್ಪ ಕಲೆಯ ಬಗ್ಗೆ ಬಹಳಷ್ಟು ಮಾಹಿತಿ ಒದಗಿಸಿದರು. ಸರಸ್ವತಿ ದೇಗುಲದ ಹೊರ ಭಿತ್ತಿಯಲ್ಲಿ ಸಹಾ ಬಹಳ ಶಿಲ್ಪಗಳಿವೆ. ಅಲಂಕಾರಿಕ ಹೂಬಳ್ಳಿಗಳೂ ಇನ್ನಿತರ ಕೆತ್ತನೆಗಳೂ ಇವೆ. 

  


  

ತ್ರಿಕೂಟೇಶ್ವರನ ಆಲಯದ ಹೊರ ಸುತ್ತಿನಲ್ಲಿ ತುಂಬಾ ಶಿಲ್ಪಗಳಿವೆ. ಪುರಾಣದ ಭಾಗಗಳು, ಗಣೇಶ, ವಾಮನಾವತಾರ, ಅಶೋಕವನದಲ್ಲಿರುವ ಸೀತೆ, ರಾಮ ಲಕ್ಷ್ಮಣ, ಆಂಜನೇಯ ಆನೆ, ಸಿಂಹಮುಖ ಇತ್ಯಾದಿ ಶಿಲ್ಪಗಳಿವೆ. ಅಲ್ಲಲ್ಲಿ ಸುಂದರ ಜಾಲಂಧರಗಳನ್ನೂ ರಚಿಸಿದ್ದಾರೆ.
  
  

 ಹೆಚ್ಚಿನ ಎಲ್ಲಾ ಶಿಲ್ಪಗಳು ಭಗ್ನಗೊಂಡಿವೆಯಾದರೂ ಒಟ್ಟಾರೆಯಾಗಿ (ಮಾಸ್ ಎಫೆಕ್ಟ್) ನೋಡುವಾಗ ಬಹಳ ಸುಂದರವಾಗಿ ತೋರುತ್ತದೆ. ಪಕ್ಕದಲ್ಲಿ ಒಂದು ರಾಮೇಶ್ವರ  ಗುಡಿ ಇದೆ. ಇದಲ್ಲದೆ ಒಂದು ಮಾನಸ್ತಂಭ ಮತ್ತು ಒಂದು ಭಾವಿ ಸಹಾ ಇದೆ. ಜನರಹಿತವಾದ ಈ ಬೆಳಗ್ಗಿನ ಪರಿಸರವು ಪ್ರಶಾಂತವಾಗಿ ನಮಗೆ ಇನ್ನೂ ಹೆಚ್ಚಿನ ಆನಂದ ಆಯಿತು. ಈ ಗುಡಿಯ ಒಳಗಡೆ ತ್ರಿಕೂಟೇಶ್ವರ ಲಿಂಗಗಳಿವೆ. ಪೂಜೆ ಮುಗಿಸಿ ಬಾಗಿಲು ಹಾಕಿತ್ತಾದರೂ ದೇವರ ಧರ್ಶನ ಲಭ್ಯ.

  


  

  


   

ಇದರ ಎದುರುಗಡೆ ಹಲವಾರು ಕಂಭಗಳ ಒಂದು ನಂದಿ ಮಂಟಪವಿದೆ. ಮತ್ತೊಂದು ಬಾರಿ ಎಲ್ಲಾ ಸುಂದರ ಕಂಭಗಳನ್ನು ನೋಡಿಕೊಂಡು ಅಲ್ಲಿಂದ ಹೊರಟೆವು.
ಇಲ್ಲಿಂದ ಸ್ವಲ್ಪ ದೂರದಲ್ಲಿ ಸೋಮೇಶ್ವರ ದೇವಾಲಯವೂ ಇದೆ ಎಂದು ತಿಳಿಯಿತು. ಸಮಯಾವಕಾಶವಿದ್ದರೆ ಸಾಯಂಕಾಲ ಅದನ್ನು ನೋಡೋಣ ಎಂದುಕೊಂಡೆವು. ಮರಳಿ ರೂಮಿಗೆ. ನಮ್ಮ ಮುಂದಿನ ತಾಣ ಲಕ್ಕುಂಡಿ! ಇದನ್ನು ಪ್ರತ್ಯೇಕವಾಗಿ ಬರೆಯುವುದು ಉಚಿತ ಎಂದು ನನ್ನ ಅನಿಸಿಕೆ. 

1 comment:

  1. Borgata to acquire Borgata for $2.7B - Dr.MCD
    Borgata, the hotel-casino, will become the second casino 광명 출장안마 operator 구미 출장안마 to operate a gambling 양산 출장샵 license in the 안성 출장마사지 United States. 광주광역 출장샵

    ReplyDelete