Friday, 22 March 2013

Lakkundi



ಲಕ್ಕುಂಡಿಯ ವೈಭವ.

ತ್ರಿಕೂಟೇಶ್ವರ ದೇಗುಲಗಳ ದರ್ಶನ ಮುಗಿಸಿಕೊಂಡು ಹೋಟೆಲ್ ರೂಮಿಗೆ ಮರಳಿ ಬೆಳಗ್ಗಿನ ತಿಂಡಿ ಪೂರೈಸಿಕೊಂಡು ಲಕ್ಕುಂಡಿಯತ್ತ ನಮ್ಮ ಪಯಣ. ಹೋಟೆಲ್ ವಿಶ್ವದ ಎದುರುಗಡೆಯೇ ಇರುವ ಬಸ್ ಸ್ಟಾಪ್ ಗೆ ಬಂದೆವು. ಸ್ವಲ್ಪ ಹೊತ್ತಲ್ಲೇ ಅತಾಧುನಿಕ ಬಸ್ ಬಂದಿತು. ರಶ್ ಇರಲಿಲ್ಲ. ಇಲ್ಲಿಂದ ಲಕ್ಕುಂಡಿಗೆ ಕೇವಲ 11 ಕಿ.ಮೀ. ದೂರ. ಇಬ್ಬರಿಗೆ 22 ರೂ.ಚಾರ್ಜು. ಅರ್ಧ ಘಂಟೆಯಲ್ಲಿ ನಾವು ಲಕ್ಕುಂಡಿ ದೇವಾಲಯಗಳ ಸ್ಟಾಪ್ ನಲ್ಲಿ ಇಳಿದೆವು. ಇಲ್ಲಿಂದ ಸುಮಾರು 200 ಮೀಟರ್ ದೂರ ಸಾಗುತ್ತಲೇ ಲಕ್ಕುಂಡಿಯ ಮ್ಯುಸಿಯಂ ನಮ್ಮನ್ನು ಸ್ವಾಗತಿಸಿತು. ಇದರ ಸುತ್ತೆಲ್ಲಾ ಹಳ್ಳಿ ಮನೆಗಳು ಆವರಿಸಿದ್ದವು. ಬರುವ ಹಾದಿಯಲ್ಲಿ ಹಲವಾರು ಹಂದಿಗಳು ತಮ್ಮ ಕಾಯಕ ನಡೆಸಿದ್ದವು.


    


ಸಂಗ್ರಹಾಲಯದ ಆವರಣದಲ್ಲಿ ಸೊಗಸಾದ ಹುಲ್ಲು ಹಾಸು, ಪಕ್ಕದಲ್ಲಿ ಹೂಗಿಡಗಳನ್ನು ಬೆಳೆಸಿದ್ದರು. ಅಲ್ಲಲ್ಲಿ ಭಗ್ನಗೊಂಡಿರುವ ಶಿಲ್ಪಗಳನ್ನು ಇರಿಸಿ ಇನ್ನೂ ಆಕರ್ಷಕವಾಗಿರಿಸಿದ್ದರು. ತಲಾ 5 ರೂ. ಪ್ರವೇಶ ಧನ ತೆತ್ತು ಒಳಗಡೆ ಹೋದೆವು. ಇಲ್ಲಿ ಲಕ್ಕುಂಡಿಯ ಸಮಗ್ರ ಪರಿಚಯ, ಕಾಲಮಾನ, ರಾಜರುಗಳ ಆಳ್ವಿಕೆಯ ಕಾಲ ಎಲ್ಲವನ್ನೂ ವಿವರವಾಗಿ ಬಹಳ ವ್ಯವಸ್ಥಿತವಾಗಿ ಬರೆದು ಇರಿಸಿದ್ದಾರೆ. ಇಲ್ಲಿ ಒಳಗಡೆ ಫೋಟೋ ತೆಗೆಯಲು ಅವಕಾಶವಿಲ್ಲ ಎಂದು ತಿಳಿಸಿದರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೈಪಿಡಿಗಳೆನಾದರೂ ಸಿಗುವುದೋ ಎಂದು ವಿಚಾರಿಸಿದರೆ ಅದೂ ಇರಲಿಲ್ಲ,ಅದೆಲ್ಲ ಸಧ್ಯದಲ್ಲೇ ನಡೆಯಲಿರುವ ಲಕ್ಕುಂಡಿ ಉತ್ಸವ ವೇಳೆಗೆ ಸಿಗುತ್ತದೆ ಎಂಬ ಮಾಹಿತಿ ದೊರೆಯಿತು.

ಒಳಗಡೆ ವಿಶಾಲವಾದ 3 ಹಾಲ್ ಗಳಲ್ಲಿ ಇಲ್ಲಿ ಸುತ್ತು ಮುತ್ತು ದೊರಕಿರುವ ಶಿಲ್ಪಗಳನ್ನು ಜೋಡಿಸಿದ್ದಾರೆ. ಚತುರ್ಮುಖ ಬ್ರಹ್ಮನ ಹಲವಾರು ಮಾದರಿಗಳಿವೆ. ಇದಲ್ಲದೆ ಬೇರೆ ಹಲವಾರು ಶಿಲ್ಪಗಳೂ ಇವೆ. ಒಂದು ಹಾಲ್ ನ ಮಧ್ಯದಲ್ಲಿ ಸೂರ್ಯನಾರಾಯಣನ ವಿಗ್ರಹವಿರಿಸಿದ್ದಾರೆ. ಇದು ಹಿಂದೆ ಕಾಶಿ ವಿಶ್ವೇಶ್ವರ – ಸೂರ್ಯನಾರಾಯಣ ದೇವಾಲಯದಲ್ಲಿತ್ತು. ಸ್ವಲ್ಪ ಭಗ್ನವಾದ್ದರಿಂದ  ಅದನ್ನು ಇಲ್ಲಿಗೆ ಸ್ಥಳಾಂತರಿಸಿದ್ದಾರೆ. ಇವುಗಳನ್ನೆಲ್ಲಾ ನೋಡಿ  ಹೊರಬಂದು ಈ ಕಟ್ಟಡದ ಹಿಂಬದಿಯಲ್ಲಿರುವ ಬ್ರಹ್ಮ ಜಿನಾಲಯವನ್ನು ನೋಡಲು ಹೋದೆವು.


    


ಹಿಂಬದಿಯಲ್ಲಿರುವ ಕೆಲವು ಮೆಟ್ಟಿಲುಗಳನ್ನೇರಿ ಹೋದಾಗಲೇ ನಮಗೆ ಈ ಸುಂದರ ಜಿನಾಲಯದ ದರ್ಶನವಾಗುತ್ತದೆ. ಅಲ್ಲಿಂದಲೇ ಫೋಟೋ ಹಿಡಿಯಲು ಶುರು. ಒಳ್ಳೆಯ ಆಂಗಲ್ ನಲ್ಲಿ ಸುಂದರ ಫೋಟೋಗಳು ಸೆರೆಯಾದವು. ಮುಂದೆ ಕೆಲ ಮೆಟ್ಟಲೇರಿದರೆ ನಾವು ಈ ಆಲಯದ ಮುಂದಿರುತ್ತೇವೆ. ಎತ್ತರವಾದ ಸಮತಟ್ಟು ಜಾಗದಲ್ಲಿ ಇದನ್ನು ನಿರ್ಮಿಸಿದ್ದಾರೆ. ಇಲ್ಲಿಯೂ ಬಹಳ ಸುಂದರವಾದ ಹುಲ್ಲು ಹಾಸನ್ನು ಬೆಳೆಸಿದ್ದಾರೆ. ಹಸಿರು ಜಮಖಾನೆ ಹಾಸಿದಂತೆ ಕಾಣುತ್ತದೆ. ಇದರ ಮಧ್ಯೆ ಜಿನಾಲಯವು ಕಂಗೊಳಿಸುತ್ತದೆ. ಇಲ್ಲಿನ ಮೇಲ್ವಿಚಾರಣೆ ಮಾಡುತ್ತಿದ್ದ ಮಹಿಳೆ ಬಂದು ನಮ್ಮನ್ನು ಸ್ವಾಗತಿಸಿದಳು. ಅಲ್ಲಿ ಬೇರೆ ಯಾರೂ ಪ್ರವಾಸಿಗಳಿಲ್ಲದುದರಿಂದ ನಮ್ಮೊಂದಿಗೆನೇ ಇದ್ದು ಎಲ್ಲಾ ವಿವರಣೆ ಕೊಟ್ಟಳು. ಇಲ್ಲಿಯೂ 28 ಕಂಭಗಳಿರುವ ಸುಂದರ ಮುಖ ಮಂಟಪವಿದೆ. ನಂತರ ಮಹಾಮಂಟಪ ಹಾಗೂ ಗರ್ಭಗೃಹವಿದೆ. ಇಲ್ಲಿನ ಕಂಭಗಳಲ್ಲಿ ಹೆಚ್ಚೇನೂ ಕೆತ್ತನೆಗಳಿಲ್ಲದಿದ್ದರೂ ಕಡಚಿಯಿಂದ ತಿರುವಿ ನುಣುಪಾಗಿಸಿದ್ದಾರೆ.


    


 ಗರ್ಭ ಗೃಹದಲ್ಲಿ ತೀರ್ಥಂಕರನ ಸುಂದರ ಮೂರ್ತಿ ಇದೆ.


    


 ದ್ವಾರದ ಅಕ್ಕಪಕ್ಕದಲ್ಲಿ ಪದ್ಮಾವತಿ ದೇವಿ ಮತ್ತು ಚತುರ್ಮುಖ ಬ್ರಹ್ಮನ ವಿಗ್ರಹವಿದೆ.


    



    


 ಬ್ರಹ್ಮನ ಒಂದೊಂದು ಮುಖವೂ ಬೇರೆ ಬೇರೆ ವಯಸ್ಸನ್ನು ಸೂಚಿಸುವಂತಿದೆ. ಒಂದು ಮುಖವು 25 ರ ತರುಣನಂತಿದ್ದರೆ ಇನ್ನುಳಿದವು ಕ್ರಮವಾಗಿ 50, 75 ಮತ್ತು 100 ವಯಸ್ಸಿನಂತಿದೆ. ಇದು ಮನುಷ್ಯನ ಆಯುಮಾನವನ್ನು ಸೂಚಿಸುತ್ತದೆ. ಅಲ್ಲಿ ಎಲ್ಲ ನೋಡಿದಮೇಲೆ ಹೊರ ಸೌಂದರ್ಯವನ್ನು ವೀಕ್ಷಿಸಲು ಹೊರಬಂದೆವು. ಥಟ್ಟನೆ ನೋಡುವಾಗ ಇದು ಸಹಾ ಒಂದು ಹಿಂದೂ ದೇವಾಲಯವಿರಬೇಕು ಎಂದೆನಿಸುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದರೆ ನಮಗೆ ಮೇಲಿರುವ ಎಲ್ಲ ಕೊಷ್ಟಕಗಳಲ್ಲಿ ಜಿನ ಮೂರ್ತಿಗಳನ್ನು ಕಾಣಬಹುದು.


    


 ಇಲ್ಲಿ ಅಷ್ಟಾಗಿ ಶಿಲ್ಪಕಲಾ ಶ್ರೀಮಂತಿಕೆ ಕಂಡುಬರದಿದ್ದರೂ ಅಲಂಕಾರಿಕ ಪಟ್ಟಿಕೆಗಳೂ, ಆನೆ, ಸಿಂಹ ಹೂಬಳ್ಳಿಗಳೂ  ಉಳಿದ ಹಿಂದೂ ದೇವಾಲಯದಲ್ಲಿರುವಂತೆ ಕೀರ್ತಿ ಮುಖ ಶುಕನಾಸಿ ಎಲ್ಲವೂ ಇದೆ. ದೇಗುಲದ ಶಿಖರವು ನಕ್ಷತ್ರಾಕೃತಿಯಲ್ಲಿದ್ದು ಮೇಲೆ ಹೋದಂತೆಲ್ಲ ಕಿರಿದಾಗುತ್ತಾ ತುದಿಯಲ್ಲಿ ಕಳಶವನ್ನಿರಿಸಿದ್ದಾರೆ.



    

 ಈ ದೇವಾಲಯವನ್ನು 1007 ನೇ ಇಸವಿಯಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆಯು ಕಟ್ಟಿಸಿದ್ದಳಂತೆ. ಇದರ ಬಗ್ಗೆ ತುಂಬಾ ಶಾಸನಗಳು ದೊರಕಿವೆ. ಇದರ ಪಕ್ಕದಲ್ಲೇ ಇನ್ನೊಂದು ಜಿನಾಲಯವೂ ಇದೆ. ಇದೂ ಸಹಾ ಸುಂದರವಾಗಿದೆ. ಇದರ ಎದುರುಗಡೆ ಶಿರ ವಿಹೀನವಾದ ಒಂದು ಸುಂದರ ಜಿನ ಮೂರ್ತಿಯಿದೆ. ಧ್ಯಾನ ಭಂಗಿಯಲ್ಲಿರುವ ಈ ಮೂರ್ತಿಯು ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರಬೇಕು. ಇದನ್ನು ಸಹಿಸದ ಮಂದಿ ಇದರ ಶಿರಛೇಧ ಮಾಡಿರಬೇಕು. ನೋಡುವಾಗ ಮನಸ್ಸಿಗೆ ಅಷ್ಟು ನೋವಾಗುತ್ತದೆ. ಇದರ ಹಿಂದೆ ಕುಳಿತು ನಮ್ಮ ಶಿರವನ್ನು ಅದಕ್ಕೆ ದಾನ ಮಾಡಿದೆವು. ಆದರೆ ಆ ಮಹಾಮಹಿಮನ ಮುಂಡಕ್ಕೆ ನಮ್ಮಂತಹ ಪಾಮರರ ಶಿರ ಹೊಂದಿಕೆಯಾಗಲಿಲ್ಲ ಎಂದು ಕಾಣುತ್ತದೆ.


    



ಈ ಸಮುಚ್ಚಯದ ಎದುರುಗಡೆ ನೋಡಿದರೆ ಅಲ್ಲೊಂದು ದೇವಾಲಯ ಕಾಣುತ್ತದೆ. ಇದು ನೀಲಕಂಠೇಶ್ವರ ದೇಗುಲ. ಬಹಳ ಅದ್ವಾನಮಯ ಜಾಗದಲ್ಲಿದೆ ಇದು. ಇದರ ಸುತ್ತಲೂ ಹಳೆಯ ಮನೆಗಳು ತುಂಬಿವೆ. ಪಕ್ಕದಲ್ಲೇ ಎಮ್ಮೆ ಹಸುಗಳೂ ತಮ್ಮ ಮನೆ ಮಾಡಿಕೊಂಡಿವೆ. ಇರಲಿ, ಶಿವ ಎಂದರೆ ಪಶುಪತಿಯಲ್ಲವೇ. ಇದರ ಮೇಲ್ಚಾವಣಿ ಬರಿಯ ತುಂಡು ಕಲ್ಲುಗಳನ್ನು ಜೋಡಿಸಿ ಇರಿಸಿದ್ದಾರೆ.



    


 ಒಳಗಡೆ ಶಿವಲಿಂಗಕ್ಕೆ ನಮಿಸಿ ಅಲ್ಲಿಂದ ಹೊರಟೆವು. ಲಕ್ಕುಂಡಿಯಲ್ಲಿ ಹಿಂದೆ 101 ದೇಗುಲಗಳೂ 101 ಭಾವಿ ಇತ್ತೆಂದು ಐತಿಹ್ಯ. ಈಗ ಕೇವಲ ಬೆರಳೆಣಿಕೆಯಷ್ಟಿವೆ. ಹೆಚ್ಚಿನ ದೇಗುಲಗಳು ನೆಲಸಮವಾಗಿದ್ದು ಅದರ ತಳಪಾಯದಲ್ಲೇ ಈಗಿನವರು ಮನೆ ಕಟ್ಟಿಕೊಂಡಿದ್ದಾರೆ.

ನಮ್ಮ ಮುಂದಿನ ವೀಕ್ಷಣೆ ಕಾಶಿ ವಿಶ್ವೇಶ್ವರ ದೇವಾಲಯ.

ಮ್ಯುಸಿಯಂನ ಮುಂದುಗಡೆ ಇರುವ ಕಚ್ಚಾ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದಮೇಲೆ ಮತ್ತೆ ಬಲಕ್ಕೆ ತಿರುಗಬೇಕು. ಇಲ್ಲ ಒಂದು ದೊಡ್ಡ ಕೆರೆ ಇದೆ. ಸುತ್ತಲೂ ಕಬ್ಬಿಣದ ಬೇಲಿ ಹಾಕಿದ್ದಾರೆ. ಇದರ ಪಕ್ಕದಲ್ಲೇ ಒಂದು ಸುಸಜ್ಜಿತ ಗೆಸ್ಟ್ ಹೌಸ್ ಇದೆ. ಈ ಕೆರೆಯು ನೀರಿನಿಂದ ತುಂಬಿದ್ದರೆ ಗೆಸ್ಟ್ ಹೌಸ್ ನಲ್ಲಿ ಉಳಕೊಳ್ಳಲು  ಇನ್ನೂ ಸೋಗಸಾಗಿರುತಿತ್ತು. ಇದೇ ಕೆರೆಯ ಪಕ್ಕದಲ್ಲಿ ಸ್ವಲ್ಪವೇ ದೂರದಲ್ಲಿ 2 ದೇಗುಲ ಕಾಣುತ್ತದೆ.


  

 ಒಂದು  ನನ್ನೇಶ್ವರ ಇನ್ನೊಂದು ಕಾಶಿ ವಿಶ್ವೇಶ್ವರ ದೇವಾಲಯಗಳು. ಅಷ್ಟು ದೂರದಿಂದಲೇ  ಅದರ ಸೌಂದರ್ಯ ನಮ್ಮನ್ನು ಕೈ ಬೀಸಿ ಕರೆಯುತ್ತದೆ. ನಾವು ಮೊದಲಿಗೆ ನನ್ನೇಶ್ವರ ದೇವಾಲಯಕ್ಕೆ ಹೋದೆವು. ಇದು ಸುಮಾರು 12 ನೇ ಶತಮಾನದ ದೇಗುಲ.ಎತ್ತರವಾದ ದಿಬ್ಬದ ಮೇಲಿದೆ. ಬಹುಶಃ ಜರಿದು ಬೀಳದಂತೆ ರಕ್ಷಣೆಗೋಸ್ಕರ ಕರಿಕಲ್ಲಿನ ಗೋಡೆಯನ್ನು ದಿಬ್ಬಕ್ಕೆ ಹೊಂದಿಸಿ ಕಟ್ಟಿದ್ದಾರೆ.



  

 ಕೆಲ ಮೆಟ್ಟಿಲು ಏರಿದರೆ ನಾವು ದೇವಾಲಯದ ಆವರಣದಲ್ಲಿರುತ್ತೇವೆ. ಇಲ್ಲಿಯೂ ಹುಲ್ಲು ಹಾಸು ಬೆಳೆಸಿದ್ದಾರೆ. ಈ ದೇವಾಲಯವು ಪುಟ್ಟದಾಗಿ ಬಹಳ ಚೊಕ್ಕವಾಗಿ ಕಂಗೊಳಿಸುತ್ತದೆ. ಮುಂಭಾಗದಲ್ಲಿ ಮುಖ ಮಂಟಪವಿದೆ. ಇಲ್ಲಿನ ಕಂಭಗಳೂ ಸುಂದರವಾಗಿವೆ. ಕೆತ್ತನೆಗಳೂ ವಿಭಿನ್ನವಾಗಿವೆ. ಗಾಜಿನಲ್ಲಿ ಮಾಡಿದವೋ ಎಬಂತೆ ಮಿರಿ ಮಿರಿ ಮಿನುಗುತ್ತವೆ. ಅದಕ್ಕೊಪ್ಪುವ ಮುಂಬಾಗಿಲು, ಹಲವು ಪಟ್ಟಿಗಳಿಂದ ಕೂಡಿ  ಮೇಲೆ ಮಧ್ಯದಲ್ಲಿ ಗಜಲಕ್ಷ್ಮಿಯನ್ನು ಕೆತ್ತಿದ್ದಾರೆ.




  

 ಇದನ್ನು ದಾಟಿ ಮುಂದೆ ಹೋದರೆ  ಒಳಮಂಟಪ ಕಾಣುತ್ತದೆ. ಇಲ್ಲಿನ 4 ಕಂಭಗಳೂ ಬಹಳ ಸುಂದರವಾಗಿವೆ. ಗರ್ಭಗೃಹದಲ್ಲಿ ನನ್ನೇಶ್ವರನ ಶಿವಲಿಂಗವಿದೆ. ಮೇಲ್ಗಡೆ ಕಮಲದ ಕೆತ್ತನೆಯಿದೆ.



  



  



  



  


 ಇದನ್ನೆಲ್ಲಾ ನೋಡಿ ಹೊರಬಂದು ದೇವಾಲಯದ ಹೊರ ಅಲಂಕಾರವನ್ನು ನೋಡಲು ಹೊರಟೆವು. ದಕ್ಷಿಣ ದಿಕ್ಕಿನಲ್ಲಿ ಒಂದು ಸುಂದರ ಬಾಗಿಲುವಾಡವಿದೆ. ಇಲ್ಲಿ ಸಹಾ ದ್ವಾರದ  ಪಟ್ಟಿಕೆಗಳ ಅಲಂಕಾರವು ಸುಂದರವಾಗಿದೆ.



  


  


 ಈ ಕಾಲದಲ್ಲಿ ಎಲ್ಲ ದೇವಾಲಯಗಳ ರಚನೆಯು ಹೆಚ್ಚಿನಂಶ ಒಂದೇ ತೆರನಾಗಿದ್ದು ಕಳಶ ಗೋಪುರವು ನಕ್ಷತ್ರದ ಆಕಾರವಿರುತ್ತದೆ. ಮೇಲೆ ಹೋದಂತೆಲ್ಲಾ ಅಕ್ಕರದಲ್ಲಿ ಕಿರಿದಾಗಿ ತುತ್ತ ತುದಿಯಲ್ಲಿ ಕಳಶವನ್ನಿರಿಸಿದ್ದಾರೆ. ಅಲ್ಲಲ್ಲಿ ಸುಂದರ ಅಲಂಕಾರಿಕ ಕೆತ್ತನೆಗಳೂ ಆನೆ ಸಿಂಹ ಮೊದಲಾದವುಗಳಿಂದ ಸುಂದರವಾಗಿರಿಸಿದ್ದಾರೆ. ಹಿಂದಿನ ದಿನ ಸುರಿದ ಹಗರ ಮಳೆಯು ಇದು ಒಳ್ಳೆಯ ವಾತಾವರಣ ನೀಡಿತ್ತು. ಹಿತವಾದ ಗಾಳಿ ಪ್ರಖರವಲ್ಲದ ಬಿಸಿಲು ಫೋಟೋ ಹಿಡಿಯಲು ಅನುಕೂಲವಾಗಿತ್ತು. ಹಾಗೆ ಮುಂದುವರಿದಾಗ ನಮಗೆ ಒಂದು ಅಪರೂಪದ ಪಕ್ಷಿ ಅಲ್ಲಿ ಕುಳಿತು ನಮ್ಮಂತೆಯೇ ಶಿಲ್ಪ ಸೌಂದರ್ಯವನ್ನು ಆಸ್ವಾದಿಸುತ್ತಿದೆಯೇನೋ ಎಂಬಂತೆ  ಕಂಡುಬಂತು. ಕೂಡಲೇ ಕೆಮರಾದಲ್ಲಿ ಅದನ್ನು ಸೆರೆ ಹಿಡಿದೆವು.




  

 ಅದ್ಯಾವ ಪಕ್ಷಿ ಎಂದು ನಮಗೆ ಗೊತ್ತಿರಲಿಲ್ಲ. ಊರಿಗೆ ಬಂದಮೇಲೆ ಗೂಗಲ್ ನಲ್ಲಿ ಹುಡುಕಿದಾಗ ಅದರ ಕುಲ ಗೋತ್ರ ಎಲ್ಲ ತಿಳಿಯಿತು. ಅಳಿವಿನಂಚಿನಲ್ಲಿರುವ ಇದರ ಹೆಸರು Hoopoe ಅಂತೆ. ನಮ್ಮವರು ಇದಕ್ಕೆ ಚಂದ್ರ ಮುಕುಟ ಪಕ್ಷಿ ಎಂದು ಸುಂದರ ನಾಮಕರಣ ಮಾಡಿದ್ದಾರೆ. ಬಹಳ ಅನ್ವರ್ಥ ನಾಮ! 

ಇಲ್ಲಿನ ಮುಖಮಂಟಪದಲ್ಲೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದವು. ಇಲ್ಲಿಂದಲೇ ಕಾಶಿ ವಿಶ್ವನಾಥನ ಭವ್ಯ ಸುಂದರ ದೇಗುಲ ಕಾಣುತ್ತದೆ. ಮಧ್ಯೆ ಒಂದು ರಸ್ತೆ ಅಡ್ಡಲಾಗಿದೆ ಅಷ್ಟೇ. ಪಕ್ಕದಲ್ಲೇ ಒಂದು ಗೂಡಂಗಡಿಯಲ್ಲಿ ಮಿರ್ಚಿ ಭಜಿ, ಚಹಾ ಕುಡಿದು ಉತ್ಸಾಹ ಹೆಚ್ಚಿಸಿಕೊಂಡೆವು. ಮುಂದುವರಿದು ಕಾಶಿ ವಿಶ್ವನಾಥನ ದರ್ಶನಕ್ಕೆ ಹೊರಟೆವು.

ಇದೊಂದು ಶೈವ –ವೈಷ್ಣವ ದೇವಾಲಯ. ಇಲ್ಲಿ ಶಿವ ಹಾಗೂ ಸೂರ್ಯ ದೇವರುಗಳ ಮಂದಿರವಿದೆ. ಎದುರುಬದುರಾಗಿ ಎರಡೂ ದೇವಾಲಯಗಳು ತಳಪಾಯ ಒಂದೇ ಆಗಿ ಪರಸ್ಪರ ಜೋಡಿಸಲ್ಪಟ್ಟಿದೆ.



  

 ಈ ದೇವಾಲಯಗಳನ್ನು 1087 ನೇ ಇಸವಿಯಲ್ಲಿ ಚಾಲುಕ್ಯ ರಾಜ ತ್ರಿಭುವನಮಲ್ಲದೇವನು ಕಟ್ಟಿಸಿದನೆಂದು ಅಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಚೋಳರ ಧಾಳಿಯಿಂದ ಭಗ್ನಗೊಂಡಿದ್ದರೂ ಮತ್ತೆ ಇದನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಮುಖಮಂಟಪದಲ್ಲಿ ಹಲವಾರು ಕಂಭಗಳಿದ್ದು ಸುಂದರವಾಗಿದೆ. ಇಲ್ಲಿನ ಮುಖ್ಯದ್ವಾರ ಬಹಳ ನಾಜೂಕಾದ ಕೆತ್ತನೆಗಳಿಂದ ಕೂಡಿದ್ದು ಸಪ್ತ ಪಟ್ಟಿಕೆಗಳ ಸುಂದರ ಬಾಗಿಲುವಾಡವಿದೆ. ಮಧ್ಯದಲ್ಲಿ ಗಜ ಲಕ್ಷ್ಮಿಯನ್ನು ಕೆತ್ತಿದ್ದಾರೆ.




  

 ಇದರ ಮೂಲಕ ಒಳಹೊದರೆ ಒಳಮಂಟಪ ಕಾಣುತ್ತದೆ. ಇಲ್ಲಿ ಸೊಂದರ ಕೆತ್ತನೆಗಳುಳ್ಳ 4 ಕಂಭಗಳಿವೆ. ಇವುಗಳನ್ನು ಎಷ್ಟು ನುಣುಪಾಗಿಸಿದ್ದಾರೆಂದರೆ ಇದರಲ್ಲಿ ನಮ್ಮ ಪ್ರತಿಬಿಂಬ ಕಾಣುತ್ತದೆ. ಇದರ ಉನ್ನತೋದರ ಮತ್ತು ನತೋದರ ರಚನೆಯಿಂದಾಗಿ ಅಲ್ಲಿ ನಮ್ಮ ಪ್ರತಿಬಿಂಬವು ತಲೆ ಕೆಳಗಾಗಿ ಮೂಡುತ್ತದೆ. ಇದೊಂದು ಅಚ್ಚರಿ!




  


  

 ಕಂಭಗಳ ತಳದಲ್ಲಿ ಸುಂದರ ಶಿಲ್ಪಗಳನ್ನು ಕೊರೆದಿದ್ದಾರೆ. ಗರ್ಭಗೃಹದ ಬಾಗಿಲುವಾಡ ಸಹಾ ಆಕರ್ಷಕವಾಗಿದೆ. ಒಳಗಡೆ ಶಿವಲಿಂಗವಿದೆ. ದೇವರನ್ನು ಪ್ರಾರ್ಥಿಸಿ ಹೊರಬಂದೆವು. ಎದುರುಗಡೆ ಸೂರ್ಯನಾರಾಯಣನ ದೇಗುಲ. ಇಲ್ಲಿ ವಿಗ್ರಹವಿಲ್ಲ. ಭಗ್ನಗೊಂಡಿದ್ದರಿಂದ ಅದನ್ನು ಮ್ಯುಸಿಯಂನಲ್ಲಿರಿಸಿದ್ದಾರೆ. ಇಲ್ಲಿನ ಬಾಗಿಲುವಾಡದ ಮೇಲೆ ಸೂರ್ಯನ ಮೂರ್ತಿಯನ್ನು ಕೆತ್ತಿದ್ದಾರೆ. 
  


ನಾವು ಕೆಳಗಿಳಿದು ಹೊರಗಿನ ಸೊಬಗನ್ನು ವೀಕ್ಷಿಸಲು ಹೊರಟೆವು. ದೇವಾಲಯದ ಸುತ್ತಲೂ ತಳಭಾಗದಲ್ಲಿ ಸುಂದರ ಆನೆಗಳ ಸಾಲು ಇದೆ. ಗೊಪುರವು ನಕ್ಷತ್ರ ಆಕೃತಿಯಲ್ಲಿದೆ. ಇದರ ತುಂಬಾ ಶಿಲ್ಪಗಳಿವೆ. ಇಲ್ಲಿನ ಹೊರ ಬಿತ್ತಿಯಲ್ಲಿ ಸುಂದರ ಕೆತ್ತನೆಗಳಿವೆ. ಮಹಾಭಾರತ ರಾಮಾಯಣದ ಕೆಲ ದೃಶ್ಯಗಳನ್ನೂ ಕೆತ್ತಿದ್ದಾರೆ. ರಾವಣನು ಆನೆಯೊಂದಿಗೆ ಮಲ್ಲಯುದ್ಧ ಮಾಡುತ್ತಿರುವುದು, ಕೈಲಾಸ ಪರ್ವತವನ್ನು ಎತ್ತುತ್ತಿರುವ, ಭೀಮನು ಭಗದತ್ತನ ಆನೆಯೊಂದಿಗೆ ಕಾದಾಡುತ್ತಿರುವುದು, ಗಜಾಸುರ ಸಂಹಾರ ಮತ್ತು ಪಾರ್ವತಿ ತಪಸ್ಸು ಮಾಡುತ್ತಿರುವ ಚಿತ್ರಣಗಳು ಬಹಳ ಸುಂದರವಾಗಿವೆ.



  



  



  


  


  



  



  

 ಇದಲ್ಲದೆ ಅಲಂಕಾರಿಕ ಕೊಷ್ಟಕಗಳು, ಪಟ್ಟಿಕೆಗಳೂ ಸಿಂಹ, ಕುದುರೆಗಳ ಸಾಲು ಕಿನ್ನರ ಖೇಚರರ ಶಿಲ್ಪಗಳು, ವಿಷ್ಣು, ಇಂದ್ರ, ಗಣಪತಿ, ಮೊದಲಾದ ದೇವರ ಕೆತ್ತನೆಗಳೂ ಸುಂದರವಾಗಿವೆ. ದಕ್ಷಿಣ ದಿಕ್ಕಿನಲ್ಲಿರುವ ದ್ವಾರವಂತೂ ನಾವು ಈವರೆಗೆ ನೋಡಿದ್ದೆಲ್ಲಕ್ಕಿಂತ ಸುಂದರವಾಗಿದೆ. 9 ಪಟ್ಟಿಕೆಗಳಿಂದ ಕಂಗೊಳಿಸುತ್ತದೆ.




  



  



  


 ಇದರಲ್ಲಿ ಬಹಳ ನವಿರಾದ ಸೂಕ್ಷ್ಮವಾದ ಕೆತ್ತನೆಗಳಿವೆ. ಇದನ್ನು ವರ್ಣಿಸಲು ನಾನು ಅಶಕ್ತ. ಅಷ್ಟೊಂದು ಬಗೆಯ ರಚನೆಗಳಿವೆ. ಆದರೆ ಇದಕ್ಕೆ ಹೊಂದಿಸಿದ ಮರದ-ತಂತಿಯ ಬಾಗಿಲು ಇಲ್ಲಿ ಅಭಾಸವಾಗಿದೆ. 

ಇದೇ ತೆರನಾದ ಶಿಲ್ಪಕಲೆಯು ಸೂರ್ಯ ದೇವಾಲಯದ ಹೊರಗೂ ಕಂಡುಬರುತ್ತದೆ.
ಅಷ್ಟರಲ್ಲೇ ಅಲ್ಲಿನ ಹಳ್ಳಿಯ ಹುಡುಗರಿಬ್ಬರು ಬಂದು ತಮ್ಮ ಫೋಟೋ ತೆಗೆಯಲು ಆಗ್ರಹಿಸಿದರು. ಸರಿ ಎಂದು ಫೋಟೋ ಕ್ಲಿಕ್ಕಿಸಿ ಅವರಿಗೆ ತೋರಿಸಿದೆ. ಅದಾಗಲೇ ಇನ್ನೂ ಕೆಲ ಮಕ್ಕಳು ಬಂದರು. ಅವರದ್ದೂ ತೆಗೆದಾಯಿತು. ಒಬ್ಬ ಪೋರನಂತೂ ಅಲ್ಲಿರುವ ಖಾಲಿ ಕೋಷ್ಟಕದಲ್ಲಿ ಕುಳಿತು ಫೋಟೋ ಹಿಡಿಯಲು ಆಗ್ರಹಿಸಿದನು.


  

 ಇನ್ನು ಸಾಕು ಎಂದು ಅವರನ್ನು ಸಾಗಹಾಕಿದೆ. ಇಲ್ಲೇ ಸ್ವಲ್ಪವೇ ದೂರದಲ್ಲಿ 3 ಬೇರೆ ಬೇರೆ ದೇಗುಲಗಳು ಕಾಣುತ್ತದೆ. ವಿಚಾರಿಸಲಾಗಿ ಅಲ್ಲೇನೂ ವಿಶೇಷವಿಲ್ಲ, ಮಾತ್ರವಲ್ಲ ಅದು ನಮ್ಮ ಇಲಾಖೆಗೆ ಸೇರಿಲ್ಲ ಎಂದು ಹೇಳಿದಳು. 

ಮುಂದೆ ನಾವು ಮಾಣಿಕೇಶ್ವರ ದೇಗುಲ ಮತ್ತು ಮುಸುಕಿನ ಭಾವಿ ನೋಡಲು ಹೊರಟೆವು. ಇದಕ್ಕಾಗಿ ನಾವು ಹಳ್ಳಿಯೊಳಗೆ ಸಂಚರಿಸಿ ಕೊನೆಗೆ ಒಂದು ಹೊಲದ ಪಕ್ಕದಲ್ಲಿ ಸಾಗಿದೆವು. ಇಲ್ಲಿನ ಬೇಲಿಯಲ್ಲಿ ನಮಗೆ ಮಲ್ಬೆರಿ ಹಣ್ಣು ಕಂಡಿತು. ಇದನ್ನು ನಾವಿಬ್ಬರೂ ನಮ್ಮ ಬಾಲ್ಯದಲ್ಲಿ ತಿಂದು ಅನುಭವಿಸಿದ್ದೆವು. ಸುಮಾರು ಹಣ್ಣುಗಳನ್ನು ಕೊಯ್ದು ತಿಂದೆವು. ಕೆಂಪು, ಕಪ್ಪು ಹಣ್ಣುಗಳು ಪುಟ್ಟದಾಗಿ ದ್ರಾಕ್ಷಿ ಗೊಂಚಲಿನ ಹಾಗೆ ಇದೆ. ಬಹಳ ಚಿಕ್ಕದು, ಆದರೆ ರುಚಿಯಂತೂ ಸಿಹಿ, ಸ್ವಲ್ಪ ಹುಳಿ. ನಮ್ಮ ದಾಹವೂ ತಣಿಯಿತು. 

ಮಾಣಿಕೇಶ್ವರ ದೇವಾಲಯ ತಲುಪಿದೆವು. ಅಷ್ಟೇನೂ ಶಿಲ್ಪಕಲಾಗಾರಿಕೆ ಇಲ್ಲದಿದ್ದರೂ ಸುಂದರವಾಗಿದೆ. ಇದರ ಎದುರುಗಡೆ ಬಹಳ ಆಳವಾದ, ಸುಮಾರು 80 ಮೆಟ್ಟಿಲುಗಳಿರುವ ಭಾವಿ ಇದೆ. ಆದರೆ ಒಂದು ತೊಟ್ಟು ನೀರು ಇರಲಿಲ್ಲ. ಇದರ ಆಳವನ್ನು ನೋಡುವಾಗಲೇ ಭಯವಾಗುತ್ತದೆ.


  



  


  

 ಈ ದೇವಾಲಯವಲ್ಲದೆ ಇನ್ನೂ ಹಲವಾರು ದೇಗುಲಗಳು ಇವೆಯಂತೆ. ಅದನ್ನೆಲ್ಲ ನೋಡಲು ನಮಗೆ ಸಮಯವಿರಲಿಲ್ಲ. ಅಲ್ಲಿದ ಹೊರಟು ಬಸ್ ನಿಲ್ದಾಣಕ್ಕೆ ಬಂದೆವು. ಅಲ್ಲಿ ಸಿಹಿಯಾದ ಬೋರೆ ಹಣ್ಣು ಕೊಂಡು ತಿಂದೆವು. ಬಸ್ ಹತ್ತಿ ಗದಗಕ್ಕೆ ಬಂದೆವು. ರೂಮಿನಲ್ಲಿ ವಿಶ್ರಾಂತಿ ಪಡೆದು ರೈಲು ನಿಲ್ದಾಣಕ್ಕೆ ಹೊರಟೆವು. ದಾರಿಯಲ್ಲಿ ಗದಗದ ಗಿರಮಿಟ, ಮಿರ್ಚಿ ಭಜಿ ತಿಂದು ಕಬ್ಬಿನ ರಸ ಸವಿದೆವು.  ನಮ್ಮ ರೈಲು ಸಂಜೆ  7.10 ಕ್ಕೆ. ಅಷ್ಟರಲ್ಲೇ ಜೋರಾಗಿ ಗಾಳಿ ಬೀಸಿತು, ಸ್ವಲ್ಪ ಮಳೆಯೂ ಆಯಿತು. ರೈಲು 20 ನಿಮಿಷ ತಡವಾಗಿ ಬಂತು. ರೈಲು  ಬೆಂಗಳೂರಿಗೆ ಮುಂಜಾನೆ 6.15 ತಲುಪಿತು. ಬಸ್ ಹಿಡಿದು ಮನೆ ಸೇರಿದೆವು. ನಮ್ಮ ಒಂದು ಕನಸು ನನಸಾದ ಧನ್ಯತಾಭಾವ ಮನದಲ್ಲಿ ಉಳಿಯಿತು.

ಈ ಲೇಖನವನ್ನು ಮೂರು ಪ್ರತ್ಯೇಕ ಭಾಗವಾಗಿ ಬರೆದಿದ್ದೇನೆ. ನಮ್ಮ ಯಾತ್ರೆಯ ಸಂಪೂರ್ಣ ಮಾಹಿತಿಗಾಗಿ ನನ್ನ ಹಿಂದಿನ ಬ್ಲಾಗ್, ಇಟಗಿ ಮತ್ತು ಗದಗವನ್ನು ಸಹಾ ಓದಬೇಕು.