ಇಲ್ಲಿ ನಾನು ತುಳುನಾಡು,ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಭಾಗದಲ್ಲಿ ಮಾತ್ರ ನಡೆಯುವಂತಹ ಒಂದು ವಿಶೇಷ ಮತ್ತು ಭಕ್ತಿ ಪ್ರಧಾನವಾದ ಉತ್ಸವದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಬರೆಯುತಿದ್ದೇನೆ. ಅದೇ ಒತ್ತೆಕೋಲ ಮಹೋತ್ಸವ.
ಒತ್ತೆಕೋಲ ಅಥವಾ ಕೆಂಡ ಸೇವೆ-ಇದು ತುಳುನಾಡಿನಾದ್ಯಂತ ಬಹಳ ಭಕ್ತಿಯಿಂದ,ವಿಜ್ರಂಭಣೆಯಿಂದ ನಡೆಯುವ ಒಂದು ಉತ್ಸವ.ಇದರ ಹಿನ್ನಲೆಯನ್ನು ಅರಿತುಕೊಳ್ಳುವುದು ಬಹಳ ಅಗತ್ಯ.ಆವಾಗಲಷ್ಟೆ ಇದರ ಮತ್ವವನ್ನು ಅರಿತುಕೊಳ್ಳಬಹುದು.
ಪುರಾಣಗಳಲ್ಲಿ ಹೇಳಿರುವ ನರಸಿಂಹಾವತಾರದ ಉದ್ದೇಶವಾದ ಹಿರಣ್ಯಕಶಿಪು ವಧೆಯನ್ನು ಭಗವಂತನಾದ ನರಸಿಂಹನು ಮಾಡಿದ ಮೇಲೆ ಆತನ ಉಗ್ರ ಕೊಪವನ್ನು ತಣಿಸುವ ಸಲುವಾಗಿ ಮತ್ತು ರಾಕ್ಷಸ ಹಿರಣ್ಯಕಶಿಪುವಿನ ರಕ್ತವು ಆತನ ಮೈಮೇಲೆಲ್ಲಾ ಚೆಲ್ಲಿರುವುದರಿಂದ ಅದನ್ನು ಶುಚಿಗೊಳಿಸಲು ದೇವರು ಉರಿಯುವ ಕೆಂಡದ ಮೇಲೆ ಬಿದ್ದು ತನ್ನನ್ನು ಶುಚಿ ಮಾಡಿಕೊಳ್ಳುತ್ತಾನೆ.ತುಳುನಾಡಿನಲ್ಲಿ ಪ್ರಚಲಿತವಿರುವ ವಿಷ್ಣುಮೂರ್ತಿ ದೈವವೇ ನರಸಿಂಹನ ಪ್ರತೀಕ ಎಂದು ನಂಬುತ್ತಾರೆ. ಹಾಗಾಗಿ ವಿಷ್ಣುಮೂರ್ತಿ ದೈವಕ್ಕೆ ಕೊಡುವ ಒಂದು ವಿಶಿಷ್ಟ ಸೇವೆಯೇ ಈ ಒತ್ತೆಕೋಲ.
ಭೂತಾರಾಧನೆ ತುಳುನಾಡಿನ ಜೀವನದ ಒಂದು ಅವಿಭಾಜ್ಯ ಅಂಗ. ಎಲ್ಲೆಡೆಗಳಲ್ಲೂ ಭೂತಸ್ಥಾನ, ಗುಡಿಗಳನ್ನು ನಾವು ಕಾಣಬಹುದು. ವರ್ಷಕೊಮ್ಮೆ ಈ ಎಲ್ಲ ಭೂತಗಳಿಗೆ ಕೋಲ ಕೊಡುವ ಸಂಪ್ರದಾಯವಿದೆ. ಇದರಲ್ಲಿ ಆಯಾ ಊರಿನ ಎಲ್ಲ ಜಾತಿಯ ಪಂಗಡದ ಜನರು ಕಡ್ಡಾಯವಾಗಿ ಭಾಗವಹಿಸುತ್ತಾರೆ. ತಲ ತಲಾಂತರದಿಂದ ಆಯಾ ಪಂಗಡಕ್ಕೆ ನಿಗದಿ ಪಡಿಸಿದ ಕೆಲಸಗಳನ್ನು ತಪ್ಪದೆ ಭಕ್ತಿಯಿಂದ ನೆರವೇರಿಸುತ್ತಾರೆ.
ಇಲ್ಲಿ ಭೂತ ಎಂದರೆ ದೆವ್ವ ಅಥವಾ ಕೆಟ್ಟ ಶಕ್ತಿಗಳಲ್ಲ. ಭೂತವನ್ನು ದೈವ ಅಥವಾ ದೈವೀಕ ಶಕ್ತಿ, ನಂಬಿದವರನ್ನು ಕೈ ಬಿಡದ, ಕಷ್ಟಕಾಲದಲ್ಲಿ ರಕ್ಷಿಸುವ ಶಕ್ತಿ ಎಂದು ನಂಬುತ್ತಾರೆ.
ಭೂತ ಕೋಲದ ದಿನ ಭೂತದ ವೇಷ ಕಟ್ಟುವವನು ಆಯಾ ಭೂತದ ವೇಷವನ್ನು ಕಟ್ಟಿಕೊಂಡು ಮೈ ಮೇಲೆ ಆವೇಶ ಬರಿಸಿಕೊಂಡು ನರ್ತಿಸುತ್ತಾನೆ. ಬೇರೆ ಬೇರೆ ಪಂಗಡದ ವ್ಯಕ್ತಿಗಳು ಇಂತಹದೇ ಭೂತ ಕಟ್ಟಬೇಕೆಂಬ ನಿಯಮವಿದೆ. ಪರವ, ಪಂಬದ, ಮಲಯ, ಕೊಪಾಳ ಮೊದಲಾದ ಜಾತಿಯ ಜನರು ಭೂತ ಕಟ್ಟುವುದು, ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ನೆರವೇರಿಸುತ್ತಾರೆ. ಆಯಾ ಊರಿನ ಎಲ್ಲಾ ವರ್ಗದ ಜನರು ಜಾತಿ ಭೇಧವಿಲ್ಲದೆ ತಮಗೆ ನಿಗದಿತವಾದ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೆ ನೆರವೇರಿಸುತ್ತಾರೆ.
ಹೆಚ್ಚಾಗಿ ಒತ್ತೆಕೋಲವು ಮೇ ತಿಂಗಳಲ್ಲಿ ಜರಗುವುದು. ಇದಕ್ಕಾಗಿ ಮೊದಲೇ ಒಳ್ಳೆಯ ದಿನ ನಿಶ್ಚಯ ಮಾಡುತ್ತಾರೆ. ಎಲ್ಲರೂ ಸೇರಿ ಒಂದು ನಿಗದಿತ ಮರವನ್ನೂ ಕಡಿದು ಕೋಲ ನಡೆಯಲಿರುವ ಜಾಗದಲ್ಲಿ ವಾದ್ಯ ಘೋಶ ದೊಂದಿಗೆ ತಂದು ಹಾಕುತ್ತಾರೆ. ಜೊತೆಯಲ್ಲಿ ದೈವದ ಸೇವಕರು ಎಂಬ ಬೆಳ್ಚಪ್ಪಾಡರೂ ಕೈಯಲ್ಲಿ ಖಡ್ಗವನ್ನೂ ಹಿಡಿದುಕೊಂಡು ಆವೇಶದಿಂದ ಆಗಾಗ ಮೈಯನ್ನು ಕಡಿದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಹರಿಕೆ ರೂಪದಲ್ಲಿ ಕಟ್ಟಿಗೆಯ ರಾಶಿಯೇ ಬಂದು ಬೀಳುತ್ತದೆ. ಅದನ್ನು ಯಾರೂ ಕೊಂಡೊಯ್ಯಬಾರದು. ಇಲ್ಲಿ ನಾನು ಕಾಸರಗೋಡಿನ ಕೂಡಲು, ಕುತ್ಯಾಳ ಗೋಪಾಲಕೃಷ್ಣ ಮತ್ತು ಶಿವಮಂಗಿಲ ದೇವರ ಸನ್ನಿಧಿಯಲ್ಲಿ ಜರಗಿದ ಒತ್ತೆಕೋಲದ ಕುರಿತಾದ ವಿವರಣೆ ನೀಡುತ್ತಿದ್ದೇನೆ.
ವಿಷ್ಣುಮೂರ್ತಿ ದೈವವನ್ನು ಕಟ್ಟುವವರು ಮಲಯರು. ದೈವದ ಮಹಿಮೆಯನ್ನು ಹಾಡಿನ ಮೂಲಕ ಹಾಡುತ್ತಾರೆ. ಜೊತೆಯಲ್ಲಿ ತಾಳ ವಾದ್ಯವೂ ಇರುತ್ತದೆ.ಇದಕ್ಕೆ ಪಾರ್ಧನ ಎನ್ನುತ್ತಾರೆ.
ಕೆಂಪು ಬಣ್ಣದ ದಿರಿಸನ್ನು ಭೂತಕ್ಕೆ ಉಡಿಸುತ್ತಾರೆ. ಮುಖವರ್ಣಿಕೆಗಾಗಿ ಬಿಳಿ,ಹಸಿರು, ಅರಸಿನ, ಕಪ್ಪು, ಕೆಂಪು ಮೊದಲಾದ ಬಣ್ಣಗಳಿಂದ ಅಲಂಕರಿಸುತ್ತಾರೆ.ತಲೆಯ ಮೇಲೆ ಕಿರೀಟ ಧರಿಸಿ, ಹೂ ಮಾಲೆಗಳಿಂದ ಅಲಂಕೃತವಾಗಿ ಒಟ್ಟಾರೆ ನರಸಿಂಹನ ರೂಪವನ್ನು ಹೋಲುವ ಈ ಅಲಂಕಾರಗಳು ಬಹಳ ಆಕರ್ಷಕ ಹಾಗೂ ಭಯಾನಕವಾಗಿ ರೂಪುಗೊಳ್ಳುತ್ತದೆ.
ಕಾಲಿಗೆ ಗಗ್ಗರ ಕಟ್ಟಿಕೊಂಡು ಕೈಯಲ್ಲಿ ಪಟ್ಟದ ಖಡ್ಗ, ಗುರಾಣಿ, ತ್ರಿಶೂಲಗಳನ್ನು ಹಿಡಿದು ಆವೇಶದಿಂದ ರಾತ್ರಿ ಬೆಳಗಾಗುವವರೆಗೆ ನರ್ತಿಸುತ್ತಾನೆ. ವಿಷ್ಣುಮೂರ್ತಿ ಭೂತದ ಗುಡಿಯಲ್ಲಿ ಪೂಜೆಗೊಳ್ಳುವ ಕತ್ತಿಯನ್ನು, ಬಿಲ್ಲು ಬಾಣವನ್ನು ಕೈಯಲ್ಲಿ ಹಿಡಿದುಕೊಂಡಾಗ ಆತನ ಮೈಮೇಲೆ ದೈವದ ಆವಾಹನೆಯಗುತ್ತದೆ.
ಸಂಜೆ ಸುಮಾರು ೭ ಘಂಟೆಯಾಗುತ್ತಿದ್ದಂತೆ ಊರಿನ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ ಭೂತಕ್ಕೆ ಅಪ್ಪಣೆ ಕೊಡಿಸುತ್ತಾರೆ.
ಗುಡಿಯ ಒಳಗಿನ ನಂದಾದೀಪದಿಂದ ಮಡಲಿನ ಸೂಟೆಗಳಿಗೆ ಬೆಂಕಿ ಹಚ್ಚಿಸಿ ಎಲ್ಲಾ ಬೆಳ್ಚಪ್ಪಾಡರೂ ಆವೇಶದಿಂದ ಮೇಲರಿ ಕಡೆಗೆ ಹೋಗಿ ಎಲ್ಲಾ ಕಡೆಗಳಿಂದ ಬೆಂಕಿ ಹಚ್ಚುತ್ತಾರೆ. ಚೆಂಡೆ, ನಗಾರಿ, ಕೊಂಬು-ಕಹಳೆ ,ಬ್ಯಾಂಡು-ಭಜಂತ್ರಿ ಗಳು ಮೊಳಗುತ್ತಿರುತ್ತವೆ. ಬೆಂಕಿಯು ಕ್ಷಣದಲ್ಲೇ ಮೆಲರಿಯ ಎಲ್ಲಾಕಡೆ ಆವರಿಸಿ ಕೊಂಡು ಸುಮಾರು ೩೦ ಅಡಿಗಳಷ್ಟು ಎತ್ತರಕ್ಕೆ ತನ್ನ ಕೆನ್ನಾಲಿಗೆಯನ್ನು ಚಾಚುತ್ತದೆ.
ಅದರ ಹತ್ತಿರ ಹೋಗಲಾರದಷ್ಟು ಧಗೆ. ರಾತ್ರಿ ಸುಮಾರು ೨ ಘಂಟೆಯ ವರೆಗೆ ಎಲ್ಲಾ ಕಟ್ಟಿಗೆ ಉರಿದು ನಿಗಿ ನಿಗಿ ಕೆಂಡವಾಗುತ್ತದೆ. ಎಲ್ಲಾ ಕೆಂಡವನ್ನು ಒಟ್ಟಿಗೆ ಸೇರಿಸಿ ರಾಶಿ ಮಾಡುತ್ತಾರೆ.
ಭೂತದ ನಾನಾ ರೀತಿಯ ನರ್ತನ ನಡೆಯುತ್ತಿರುತ್ತದೆ. ಭಗವಂತನಾದ ನರಸಿಂಹನು ಹಿರಣ್ಯಕಶಿಪುವಿನ ಉಧರವನ್ನು ತನ್ನ ನಖಗಳಿಂದ ಸಿಗಿದು, ಕರುಳನ್ನು ಬಗೆದು ಆತನ ನೆತ್ತರನ್ನು ಕುಡಿದು ವಧಿಸುವ ಸಂಧರ್ಭವನ್ನು ಭೂತವು ಅಭಿನಯಿಸಿ ತೋರಿಸುತ್ತದೆ. ಆಗಿನ ಆ ಭಯಾನಕ ಆವೇಶ, ಉಗ್ರ ಕೋಪ ಎಲ್ಲಾ, ಅಲ್ಲಿ ನೆರೆದಿರುವ ಸಾವಿರಾರು ಭಕ್ತರಿಗೆ
ತಲೆಭಾಗುವಂತೆ ಮಾಡುತ್ತದೆ.
ಮೇಲರಿಯನ್ನು ಎಲ್ಲಾ ಸಜ್ಜು ಗೊಳಿಸಿ ಆದಾಗ ಭೂತಕ್ಕೆ ತೆಂಗಿನ ಎಳೆ ಗರಿಯಿಂದ ತಯಾರಿಸಲಾದ ದಿರಿಸನ್ನು ತೊಡಿಸಲಾಗುತ್ತದೆ. ಭೂತವು ತನ್ನ ಎಲ್ಲಾ ಅನುಯಾಯಿಗಳೊಂದಿಗೆ ಮೂರು ಸುತ್ತು ಬರುತ್ತದೆ. ಮತ್ತು ಆ ಉರಿಯುವ ಕೆಂಡದ ಮೇಲೆ ಏರಿ ಅದರ ಮೇಲೆ ಬೀಳುತ್ತದೆ.
ಆವಾಗಲೆಲ್ಲ ಜೊತೆಯಲ್ಲಿರುವ ಸಹಾಯಕರು ಭೂತವನ್ನು ಎಳೆದು ಈ ಕಡೆ ತರುತ್ತಾರೆ. ಆದರೂ ಏನಿಲ್ಲವೆಂದರೂ ೧೫-೨೦ ಸಲ ಮೇಲರಿಗೆ ಬೀಳುತ್ತದೆ. ಭೂತವನ್ನು ನಿಯಂತ್ರಿಸುವುದೇ ಕಷ್ಟವಾಗುತ್ತದೆ.
ಕೆಲವೊಮ್ಮೆ ಮನೆಯ ಯಜಮಾನರು ಮತ್ತು ಊರವರು ಬಂದು ಭೂತವು ಶಾಂತವಾಗಬೇಕೆಂದು ಕೈ ಮುಗಿದು ಬೇಡಿಕೊಳ್ಳುತ್ತಾರೆ. ನಂತರ ಅಲ್ಲಿರುವ ಎಲ್ಲಾ ಬೆಳ್ಚಪ್ಪಾಡರೂ ಮೇಲರಿಯನ್ನೂ ೩-೩ ಸಲ ಏರುತ್ತಾರೆ. ಎಲ್ಲರೂ ಬರಿಗಾಲಲ್ಲಿ ಕೆಂಡ ತುಳಿಯುತ್ತರಾದರು ಏನೊಂದೂ ಅನಿಷ್ಟ ಸಂಭವಿಸುವುದಿಲ್ಲ.
ಇವರೆಲ್ಲರೂ ಕೋಲದ ೩ ದಿನಗಳ ಹಿಂದಿನಿಂದಲೂ ಶುದ್ಧವಾಗಿರಬೇಕೆಂಬ ನಿಯಮವಿದೆ. ಕೆಲವೆಡೆಗಳಲ್ಲಿ ಮನೆತನದ ಹಿರಿಯರನ್ನು ಸ್ತ್ರೀಯರನ್ನೂ, ಮಕ್ಕಳನ್ನು ಸಹಾ ಭೂತವೇ ಕೈ ಹಿಡಿದು ಕೆಂಡ ಹಾಯಿಸುವ ಸಂಪ್ರದಾಯವಿದೆ. ಯಾರಿಗೂ ಏನೂ ಅಪಾಯವಾಗುವುದಿಲ್ಲ.
ಇದಾದ ನಂತರ ಭೂತಕ್ಕೆ ಬಾರಣೆ ಕೊಡುತ್ತಾರೆ. ನೆರೆದಿರುವ ಎಲ್ಲರಿಗೂ ಅಭಯ ನೀಡಿ ಪ್ರಸಾದ ರೂಪವಾಗಿ ಎಳನೀರು, ಅರಶಿನದ ಹುಡಿಯನ್ನೂ ಬಾಳೆಯ ಎಳೆಯಲ್ಲಿ ಇರಿಸಿ ಭೂತವೇ ಎಲ್ಲರಿಗೂ ಹಂಚುತ್ತದೆ. ಜನರೂ ಭೂತಕ್ಕೆ ಕಾಣಿಕೆ ಸಲ್ಲಿಸುತ್ತಾರೆ. ಎಲ್ಲರೂ ಧನ್ಯತಾ ಭಾವದಿಂದ ಮರಳುವ ಹೊತ್ತಿಗೆ ಸೂರ್ಯ ಉದಯಿಸುವ ಹೊತ್ತಾಗಿರುತ್ತದೆ.
ವಿಶೇಷವೆಂದರೆ ಸಾಮಾನ್ಯವಾಗಿ ಒತ್ತೆಕೋಲ ಕಳೆದ ಮರು ದಿನ ಮಳೆ ಬರುತ್ತದೆ. ವೈಜ್ಞಾನಿಕವಾಗಿ ಇದು ಮೇಲಿನ ವಾತಾವರಣ ಬಿಸಿಯಾದುದರಿಂದ ಆಗಿರಬಹುದು. ಇದರ ಬಗ್ಗೆ ಇಲ್ಲಿ ವಿಶ್ಲೇಷಣೆ ಬೇಡ.
ಜಾತಿ ಅಂತಸ್ತು ಇವುಗಳ ಬೇಧವಿಲ್ಲದೆ ಊರಿನ ಎಲ್ಲರೂ ಸೇರಿ ಮಾಡುವಂಥಹ ಈ ಮಹೋತ್ಸವ ಎಲ್ಲರನ್ನೂ ಒಗ್ಗಟ್ಟಾಗಿರಿಸುತ್ತದೆ.
No comments:
Post a Comment