Monday, 4 April 2011

Aavani

ನಮ್ಮಆವಣಿ ಪ್ರವಾಸದ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಆವಣಿ ಎಂಬ ಪುಟ್ಟ ಊರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿದೆ. ಬೆಂಗಳೂರಿನಿಂದ ಕೋಲಾರ ತಲುಪಿ ಅಲ್ಲಿಂದ ಸೀದಾ ಆವಣಿಯನ್ನು ತಲುಪಬಹುದು. ಇಲ್ಲವಾದರೆ ಬಂಗಾರಪೇಟೆ,ಬೇತಮಂಗಲ, ಬಂಗಾರ ತಿರುಪತಿ ಎಲ್ಲ ನೋಡಿಕೊಂಡು ಆವಣಿಗೆ ಬರಬಹುದು.













ಇಲ್ಲಿನ ಪುಟ್ಟ ಊರಿಗೆ ತಾಗಿಕೊಂಡು ದೊಡ್ಡದಾದ ಕಲ್ಲು ಬಂಡೆಗಳ ಬೆಟ್ಟವಿದೆ. ಇದೇ ಇಲ್ಲಿನ ಆಕರ್ಷಣೆ. ಇಲ್ಲಿನ ಇತಿಹಾಸದ ಪ್ರಕಾರ ಇಲ್ಲಿ ರಾಮಾಯಣದ ಸೀತಾ ಮಾತೆಯು ಲವ-ಕುಶರಿಗೆ ಜನ್ಮ ಕೊಟ್ಟಳಂತೆ.ಇದಕ್ಕೆ ಸಾಕ್ಷಿಯೋ ಎಂಬಂತೆ ಬೆಟ್ಟದ ಮೇಲೆ ವಾಲ್ಮೀಕಿ ಮುನಿಗಳ ಆಶ್ರಮವೆಂದು ಹೇಳಲಾಗುವ ಪುಟ್ಟ ಗುಹಾ ಆಶ್ರಮವಿದೆ. ಬಂಡೆಗಳ ಸಂದಿಯಲ್ಲಿ ಕಲ್ಲುಗಳನ್ನು ಜೋಡಿಸಿ ಮಾಡಿದ ಒಂದು ಕೋಣೆ, ಅದರ ಹಿಂಬಾಗಕ್ಕೆ ಕಿರಿದಾದ ಬಾಗಿಲು, ನುಸುಳಿಕೊಂಡು ಹೋದರೆ ಇನ್ನೂಒಂದು ಕೋಣೆ ಇದೆ.








ಊರಿನ ಕೆಳಭಾಗದಿಂದ ಮೆಟ್ಟಲುಗಳನ್ನು ಏರುತ್ತ ಬಂದು ಇಲ್ಲಿಗೆ ತಲುಪುವಾಗ ದೊಡ್ಡ ಬಂಡೆಗಳ ಸಮುಚ್ಚಯ ಎದುರಾಗುತ್ತವೆ. ಅದರ ಮೇಲೆಲ್ಲಾ ಜೇನು ಹುಟ್ಟುಗಳು ತೂಗುತ್ತಿವೆ.

















ಅಲ್ಲಿಂದ ಕೆಳಗಿನ ಊರು ಚಿತ್ತಾರದಂತೆ ಕಾಣುತ್ತದೆ. ಕೆಲವು ಕಡೆ ಬಂಡೆಯನ್ನೇ ಕಡಿದು ಮೆಟ್ಟಲು ಮಾಡಿದ್ದರೆ ಕೆಲವು ಕಡೆ ಚಪ್ಪಡಿ ಹಾಕಿ ಮೆಟ್ಟಿಲು ನಿರ್ಮಿಸಿದ್ದಾರೆ.


ವಾಲ್ಮೀಕಿ ಆಶ್ರಮದ ಪಕ್ಕದಲ್ಲೇ ಪಂಚ ಪಾಂಡವರು ಪ್ರತಿಷ್ಠಾಪಿಸಿದ ೫ ಶಿವಲಿಂಗಗಳ ಗುಡಿ ಇದೆ. ಇದರಲ್ಲಿ ನಡುವೆ ಇರುವ ಲಿಂಗವು ಆಕಾರದಲ್ಲಿ ದೊಡ್ಡದಾಗಿದ್ದು ಭೀಮನು ಸ್ಥಾಪಿಸಿದ  ಲಿಂಗವಿರಬಹುದು ಅನ್ನಿಸುತ್ತದೆ. ಅಲ್ಲೇ ಪಕ್ಕದಲ್ಲಿ ಒಂದು ಬಾಗಿಲುವಾಡವಿದ್ದು ಅಲ್ಲಿ ವಿಶ್ರಮಿಸಬಹುದು.














ಬಂಡೆಗಳ ಎಡೆಯಿಂದ ಕಾಲ್ದಾರಿಯಲ್ಲಿ ಮುಂದೆ ಸಾಗಿದಾಗ ವಿಶಾಲವಾದ ಪ್ರದೇಶ ಕಾಣುತ್ತದೆ. ಒಂದು ಪಕ್ಕದಲ್ಲಿ ಬಹು ಮಹಡಿ ಕಟ್ಟಡವನ್ನು ಹೋಲುವ ಬಂಡೆಗಳು,

ಇನ್ನೊಂದೆಡೆ ಬಹಳ ದೊಡ್ಡದಾದ ಗುಂಡಗಾದ ಬಂಡೆ! ತಿರುಪತಿಯ ಲಡ್ಡನ್ನು ನೆನಪಿಸುತ್ತಿದೆ.ಅದರ ಕೆಳಗೆ ಸ್ವಲ್ಪ ಹೊತ್ತು ವಿಶ್ರಮಿಸಿದೆವು.
 ಪಕ್ಕದ್ದಲ್ಲೇ ಬಂಡೆಯ ಕಮರಿಯಲ್ಲಿ ಮಳೆ ನೀರು ತುಂಬಿಕೊಂಡು ಆಕರ್ಷಕವಾಗಿದೆ. ಆದರೆ ಅದರಲ್ಲಿ ಇಳಿಯುವುದು ಅಪಾಯಕಾರಿ.ಇದನ್ನು ಧನುಷ್ಕೋಡಿ ಎನ್ನುತ್ತಾರೆ.


ಧನುಷ್ಕೋಡಿ



ಅಲ್ಲಿಂದ ಮೇಲೆ 
ನೋಡಿದಾಗ ದೂರದಲ್ಲಿ ಬೆಟ್ಟದ ಮೇಲೆ ಒಂದು ದೇವಾಲಯ ಕಾಣುತ್ತದೆ. ಹೇಗಪ್ಪ ಅಷ್ಟು ದೂರ ಏರುತ್ತಾ ಹೋಗುವುದು ಎಂಬ ಸಮಸ್ಯೆ ಎದುರಾಗುತ್ತದೆ.
ಸ್ವಲ್ಪ ದೂರ ಹೋಗಿ ನೋಡೋಣ ಎಂದು ಪುಸಲಾಯಿಸಿ ಎಲ್ಲರನ್ನೂ ಮುಂದೆ ಕೊಂಡೊಯ್ದೆವು.

ಅಲ್ಲೇ ಪಕ್ಕದಲ್ಲಿ ನಿಸರ್ಗ ನಿರ್ಮಿತ ಕೊಳವಿದೆ. ನೀರು ಪಾಚಿ ಕಟ್ಟಿಕೊಂಡು ಹಸಿರು ಜಮಖಾನೆ
 ಹಾಸಿದಂತಿತ್ತು. ಮಳೆಗಾಲದಲ್ಲಿ ನೀರು ಚೆನ್ನಾಗಿರಬಹುದು ಮತ್ತು ಈಜಾಟ ಮಾಡಬಹುದು
                













ಇಲ್ಲಿಂದ ಮುಂದೆ ಏರುತ್ತಾ ಸಾಗಬೇಕು. ಕೆಲವೆಡೆ ಕಲ್ಲು ಚಪ್ಪಡಿ ಹಾಕಿದ್ದಾರೆ.
ಏರುತ್ತಾ ಏರುತ್ತಾ ನಾವು ಬೆಟ್ಟದ ತುದಿಯಲ್ಲಿದ್ದೆವು. ಅಷ್ಟೇನೂ ಸುಸ್ತಾಗಲಿಲ್ಲ. ಮೇಲಿಂದ ಬಹಳ ದೂರದವರೆಗೆ ಪುಟ್ಟ ಊರುಗಳೂ, ಹೊಲ ಗದ್ದೆಗಳು, ರಸ್ತೆ ಎಲ್ಲಾ ಸುಂದರವಾಗಿ ಕಾಣುತ್ತದೆ. ಮೇಲೆ ಚೆನ್ನಾಗಿ ಗಾಳಿ ಬೀಸುತ್ತಿದೆ.ಆಯಾಸವೆಲ್ಲ ಪರಿಹಾರವಾಯಿತು.



























ಇಲ್ಲಿ ಸೀತಾ ಪಾರ್ವತಿಯರ ದೇವಸ್ಥಾನವಿದೆ. ಇಲ್ಲಿ ನಿತ್ಯ ಪೂಜೆಗಾಗಿ ಅರ್ಚಕರು ದಿನಾ ಕೆಳಗಿನ ಊರಿನಿಂದ ಮೇಲೆ ಬಂದು ಹೋಗುತ್ತಾರೆ.ನಾವು ಹೋದಾಗ ಅವೇಳೆಯಾಗಿದ್ದರಿಂದ ದೇವರ ದರ್ಶನವಾಗಲಿಲ್ಲ. ಅಲ್ಲೇ ಸ್ವಲ್ಪ ಹೊತ್ತು ಕುಳಿತು ತಿಂಡಿ ತಿಂದು ಸುಧಾರಿಸಿಕೊಂಡೆವು. ದೇವಸ್ಥಾನಕ್ಕೆ   ಸುಂದರವಾದ ಗೋಪುರವಿದ್ದು ಚೆನ್ನಾಗಿದೆ. 

ಸುತ್ತಲಿನ ವೀಕ್ಷಣೆಗಾಗಿ ಸುತ್ತಲೂ ಕಬ್ಬಿಣದ ಕಟಕಟೆಯಿದೆ. ದೇವಾಲಯದ ಹಿಂಭಾಗದಲ್ಲಿ ಮತ್ತೆ, ದೊಡ್ಡ ದೊಡ್ಡ ಬಂಡೆಗಳ ವಿಶಾಲ ಜಾಗವಿದೆ. ಮಕ್ಕಳಿಗೆ ಆಟವಾಡಲು ಪ್ರಶಸ್ತ ಜಾಗ! ಆದರೆ ಒಂದೇ ಒಂದು ಕೊರತೆಯೆಂದರೆ ಇಲ್ಲೆಲ್ಲೂ ನೀರು ಸಿಗುವುದಿಲ್ಲ. ಕುಡಿಯಲು ಬೇಕಾಗುವಷ್ಟು ನೀರನ್ನು ಜೊತೆಯಲ್ಲೇ ಕೊಂಡೊಯ್ಯ ಬೇಕು.



ನಾವು ಇಲ್ಲಿಗೆ ಬಂದದ್ದು ಏಪ್ರಿಲ್ ೩ ರಂದು. ಬಹಳ ಸೆಕೆ ಇತ್ತು. ಕೆಳ ದಿನಗಳ ಹಿಂದಷ್ಟೇ ಇಲ್ಲಿ ಜಾತ್ರೆ ನಡೆದಿರಬೇಕು. ಹಾಗಾಗಿ ಎಲ್ಲಿ ಕಾಲಿಟ್ಟರೂ ತೆಂಗಿನಕಾಯಿ ಚಿಪ್ಪು, ಮತ್ತು ಪ್ಲಾಸ್ಟಿಕ್ .ನೋಡುವಾಗ ಬಹಳ ವ್ಯಸನ ವಾಗುತ್ತದೆ. ಎಷ್ಟೊಂದು ಸುಂದರ ತಾಣವನ್ನೂ ನಾವು ಎಷ್ಟು ಕೆಡಿಸಬಹುದು ಎಂತ ತೋರಿಸುತ್ತದೆ.

ಸೂರ್ಯ ಕೆಳಗಿಳಿಯುತಿದ್ದಂತೆ ನಾವೂ ಇಳಿಯಲು ಪ್ರಾರಂಭಿಸಿದೆವು.
 ಅರ್ಧ ಘಂಟೆಯಲ್ಲಿ ನಾವೂ ಕೆಳಗೆ ತಲುಪಿದೆವು.
ಆವಣಿ ಬೆಟ್ಟವು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ರಾತ್ರಿ ಕ್ಯಾಂಪ್ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ನಾನು ಮತ್ತು ಶ್ರುತಿ ಮುಂದಿನ ಚಳಿಗಾಲದಲ್ಲಿ ಇಲ್ಲಿ ಚಾರಣ ಮಾಡುವ ಪ್ಲಾನ್ ರಚಿಸಿದೆವು. ಖಂಡಿತವಾಗಿಯೂ ಇನ್ನೊಂದು ಸಲ ನಮ್ಮ ತಂಡದ ಎಲ್ಲ ಸದಸ್ಯರನ್ನು ಕರೆದುಕೊಂಡುಬಂದು ಇಲ್ಲಿ ಒಂದು ದಿನ ನೈಟ್ ಕ್ಯಾಂಪ್ ಮಾಡಿ ಬರಬೇಕು ಎಂಬ ಸಂಕಲ್ಪ ಮಾಡಿ ಬಂದೆವು.
ಕೆಳಗಡೆ ಆವಣಿ ಊರಲ್ಲಿ ಶೃಂಗೇರಿ ಶಾರದಾಂಬೆಯ ಸುಂದರ ದೇವಾಲಯವಿದೆ.ಮತ್ತು ಇದರ ಪಕ್ಕದಲ್ಲೇ ರಾಮಲಿಂಗೇಶ್ವರ ದೇವಾಲಯವಿದೆ. ಹೊತ್ತು ಬಹಳವಾದ್ದರಿಂದ ನಾವು ಇದನ್ನು ನೋಡಲಾಗಲಿಲ್ಲ.ಆದರೆ ಈ ದೇವಾಲಯವು ಬಹಳ ಸುಂದರ ವಾಗಿದೆಯಂತೆ.ಇದು ಚೋಳರ ಕಾಲದಲ್ಲಿ ನಿರ್ಮಿತವಾಗಿದ್ದು ಸುಮಾರು ೧೪೦೦ ವರ್ಷಗಳಷ್ಟು ಹಳೆಯ ದೇವಾಲಯ.






1 comment: