ನಾವು ಊರಿಗೆ ಹೋದಾಗಲೆಲ್ಲಾ ಎಲ್ಲರೂ ಸೇರಿ ಯಾವುದಾದರೊಂದು ಜಾಗಕ್ಕೆ ಪ್ರವಾಸ ಇಲ್ಲವೇ ಚಾರಣ ಹೋಗುವುದು ನಮ್ಮ ಹವ್ಯಾಸ. ಈ ಸಲ ನಾವು ಶಿರಸಿಗೆ ಹೋಗೋಣವೆಂದು ಹೇಳಿದಾಗ ಮಕ್ಕಳೆಲ್ಲಾ ಅಲ್ಲಿ ದೇವಸ್ಥಾನ ಮಾತ್ರ ಇರುವುದು, ಅಲ್ಲಿಗೆ ಬೇಡ, ಬೇರೆ ಎಲ್ಲಿಗಾದರೂ ಟ್ರೆಕಿಂಗ್ ಹೋಗಬೇಕು ಎಂಬ ಬೇಡಿಕೆ ಮುಂದಿಟ್ಟರು. ಆಯಿತು, ನಾವು ಶಿರಸಿಗೆ ಹೋಗಿ ಅಲ್ಲಿಂದ ಮುಂದೆ ಯಾವುದಾದರೂ ಟ್ರೆಕಿಂಗ್ ಹೋಗೋಣ ಎಂದು ಸಮಜಾಯಿಸಿದೆ. ನಾನೂ ಮೊದಲೇ ಟ್ರೆಕಿಂಗ್ ಜಾಗವನ್ನು ನಿಶ್ಚಯಿಸಿದ್ದರೂ ಸ್ವಲ್ಪ ಕುತೂಹಲ ಇರಲಿ ಎಂತ ಗುಟ್ಟು ಬಿಟ್ಟುಕೊಡಲಿಲ್ಲ.
ಸರಿ, ಎಲ್ಲಾ ತಯಾರಿಗೆ ತೊಡಗಿದೆವು. ಬೇಕಾದ ಎಲ್ಲಾ ಆಹಾರ ಸಾಮಗ್ರಿಗಳನ್ನು ತಂದದ್ದಾಯಿತು. ಮರು ದಿನ ಬೆಳಿಗ್ಗೆ ಬೇಗ ಎದ್ದು ಉಪ್ಪಿಟ್ಟು ತಯಾರಿಸಿ ಬಾಳೆ ಎಲೆಯಲ್ಲಿ ತಲಾ ಒಂದೊಂದು ಪೊಟ್ಟಣ ಕಟ್ಟಿದೆವು. ಬೆಳಗ್ಗೆ 5.30 ರ ಮೊದಲ ಬಸ್ಸು ಹತ್ತಿ ಕಾಸರಗೋಡಿನಿಂದ ಮಂಗಳೂರಿಗೆ ಬಂದೆವು. ನಾವು ಓಟ್ಟು 16 ಜನ. ನಾನು,ಕಸ್ತೂರಿ, ವೀಣಾ, ಮುರಳಿ, ರಾಜ ನಾರಾಯಣ, ಗಾಯತ್ರಿ, ಪ್ರಸನ್ನ, ವೀಣಾ, ಶಮಿತಾ, ಚೈತ್ರ, ಶ್ರುತಿ, ಸುಬ್ರಹ್ಮಣ್ಯ, ಕಾರ್ತಿಕ್ , ಕೇದಾರ್, ಸಾಕೇತ್ ಮತ್ತು ಗುರು ಮಾಮ.
ಬೆಳಗ್ಗಿನ ಮಡಗಾಂವ್ ಪ್ಯಾಸೆಂಜರ್ ರೈಲು ಮಂಗಳೂರಿಂದ ಹೊರಡುವುದು 7.20ಕ್ಕೆ. ಅಷ್ಟು ಹೊತ್ತಿಗೆ ರೈಲ್ವೆ ಸ್ಟೇಷನ್ ತಲುಪಲಾಗುತ್ತದೊ ಇಲ್ಲವೋ ಎಂಬ ತಳಮಳ ಎಲ್ಲರಿಗೂ. ಅದಕ್ಕೆ ಸರಿಯಾಗಿ ಉಲ್ಲಾಳ ಸೇತುವೆ ದಾಟಿದಾಕ್ಷಣ ಟ್ರಾಫಿಕ್ ಜಾಮ್ ! ನನ್ನ ಭಾವ ಮುರಳಿಗೆ ಬಸ್ಸು ಡ್ರೈವರ್ ನ ಪರಿಚಯವಿದ್ದುದರಿಂದ ಆತನಲ್ಲಿ ನಮ್ಮ ಆತಂಕವನ್ನು ವಿವರಿಸಿದಾಗ ನೀವೇನೂ ಯೋಚನೆ ಮಾಡಬೇಡಿ ನಿಮ್ಮನ್ನು ಸಮಯಕ್ಕೆ ಸರಿಯಾದ ಸಮಯಕ್ಕೆ ತಲುಪಿಸುತ್ತೇನೆ ಎಂದನು. ಆದರೂ ನಮಗೆ ಭಯ, ಯಾಕೆಂದರೆ ಬಸ್ಸು ಇಳಿದು ಸ್ಟೇಷನ್ ಗೆ ಸುಮಾರು ಅರ್ಧ ಕಿ.ಮಿ . ನಡೆಯಬೇಕಾಗಿತ್ತು.
ಆದರೆ ಮಂಗಳೂರು ತಲುಪುತಿದ್ದಂತೆ ಬಸ್ಸು ಯಾವಾಗಲೂ ಹೋಗುವ ರೂಟ್ ಬಿಟ್ಟು ಒಳದಾರಿಯಲ್ಲಿ ಸಂಚರಿಸಿ ಸೀದಾ ರೈಲ್ ವೇ ಸ್ಟೇಷನ್ ಗೇ ಬಂದು ನಿಂತಿತು. ನಮ್ಮ ಆತಂಕ ಕಳೆಯಿತು. ಡ್ರೈವರ್ ಗೆ ಥ್ಯಾಂಕ್ಸ್ ಹೇಳಿ ಲಗುಬಗೆಯಿಂದ ಇಳಿದು ಟಿಕೆಟ್ ಕೊಳ್ಳಲು ಓಡಿದೆವು. ಅಲ್ಲಿ ಹೆಚ್ಚು ಸಂದಣಿ ಇಲ್ಲದುದರಿಂದ ಬೇಗ ಟಿಕೆಟ್ ಪಡೆದು ಟ್ರೈನ್ ನಿಂತಿರುವ ಫ್ಲಾಟ್ ಫಾರಂಗೆ ತಲುಪಿ, ರೈಲು ಹತ್ತಿದೆವು. ಎಲ್ಲರಿಗೂ ಕುಶಿಯೋ ಕುಶಿ.ಇಷ್ಟೆಲ್ಲಾ ಗಡಿಬಿಡಿ ಮಾಡಿದರೂ ರೈಲು ಹೊರಡುವ ಲಕ್ಷಣ ಕಾಣಲಿಲ್ಲ. ಯಾವುದೋ ರೈಲು ಬಂದಾದ ಮೇಲೆ ಅರ್ಧ ಘಂಟೆ ತಡವಾಗಿ ನಮ್ಮ ರೈಲು ಹೊರಟಿತು. ಟ್ರೈನ್ ನಲ್ಲಿ ಹೆಚ್ಚು ರಶ್ ಇರಲಿಲ್ಲ, ಹಾಗಾಗಿ ಎಲ್ಲರೂ ಒಟ್ಟಿಗೇ ಕುಳಿತು ಮಾತಾಡುತ್ತಾ ಪಯಣಿಸಿದೆವು. ಉಪ್ಪಿಟ್ಟಿನ ಪೊಟ್ಟಣ ಹೊರಬಂತು.ಎಲ್ಲರೂ ಹೊಟ್ಟೆ ತುಂಬಾ ತಿಂದರು. ಕಾಫಿ ಕುಡಿದು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುಂದುವರಿಯುತಿದ್ದಂತೆ ಕೆಲವರು ತೂಕಡಿಸಲು ತೊಡಗಿದರು. ಬೆಳಗ್ಗೆ ಬೇಗ ಎದ್ದುದರಿಂದ ಮತ್ತು ರೈಲ್ ನ ತೂಗಾಟದಿಂದ ಸಹಜವಾಗಿ ಸ್ವಲ್ಪ ನಿದ್ರೆ ಬಂತು.
ದಾರಿಯಲ್ಲಿ ಕಾಣಸಿಗುವ ಅದೆಷ್ಟೋ ನದಿಗಳನ್ನು, ಬಯಲನ್ನು ನೋಡುತ್ತಾ ಹೋದಂತೆ ರೈಲು ಕುಮಟಾ ತಲುಪಿದಾಗ ಸುಮಾರು 11.30. ಎಲ್ಲರೂ ಇಳಿದೆವು. ಅಲ್ಲಿಂದ ಕುಮಟಾ ಬಸ್ಸು ನಿಲ್ದಾಣಕ್ಕೆ ತಲುಪಬೇಕು. ಸ್ಟೇಷನ್ ನಿಂದ ಮುಖ್ಯ ರಸ್ತೆಗೆ ಬರುತಿದ್ದಂತೆ ಅದೃಷ್ಟವೋ ಎಂಬಂತೆ ಶಿರಸಿಯ ಬಸ್ಸು ಬರುತಿತ್ತು. ಎಲ್ಲರೂ ಬಸ್ಸು ಹತ್ತಿದೆವು. ಇಲ್ಲಿಯೂ ನಮಗೆ ನಡೆಯುವುದು ತಪ್ಪಿತು. ಶಿರಸಿಗೆ 58 ಕಿ.ಮಿ., ಬಸ್ಸಿನಲ್ಲಿ ಸ್ವಲ್ಪ ರಶ್ ಇತ್ತು, ಆದರೂ ಮುಂದೆ ಹೋಗುತಿದ್ದಂತೆ ಎಲ್ಲರಿಗೂ ಸರಿಯಾಗಿ ಕುಳಿತು ಕೊಳ್ಳಲು ಜಾಗ ಸಿಕ್ಕಿತು. ಬಸ್ಸು ದೇವಿಮನೆ ಘಾಟ್ ಏರಿ ಶಿರಸಿ ತಲುಪುವಾಗ 1 ಘಂಟೆ. ಅಲ್ಲಿಂದ ಶಿರಸಿಯ ಮುಖ್ಯ ದೇವಾಲಯವಾದ ಮಾರಿಕಾಂಬಾ ದೇವಸ್ಥಾನಕ್ಕೆ ಬಂದೆವು.
ದೇವರ ದರ್ಶನ ಆಯಿತು.ಅಲ್ಲೇ ಇದ್ದವರೊಬ್ಬರು ಊಟಕ್ಕೆ ಬನ್ನಿ ಎಂದು ನಮ್ಮನ್ನು ದೇವಸ್ಥಾನದ ಊಟದ ಹಾಲ್ ಗೆ ಕರೆದೊಯ್ದರು. ಎಲ್ಲರೂ ದೇವರ ಪ್ರಸಾದ ಭೋಜನ ಮಾಡಿದೆವು. ಬಹಳ ಅಚ್ಚುಕಟ್ಟಾಗಿ ರುಚಿಯಾದ ಪಾಯಸದ ಊಟ ಬಡಿಸಿದರು.
ಪಕ್ಕದಲ್ಲೇ ದೇವಾಲಯದ ಛತ್ರ ಇತ್ತು. ರೂಂ ಸಿಗುವುದೋ ಎಂದು ನೋಡಲು ನಾನು ಹೋದೆ. ವಿಚಾರಿಸಲಾಗಿ ನಮಗೆ ಅನುಕೂಲವಾಗುವಂತಹ ದೊಡ್ಡದೊಂದು ಹಾಲ್ ಕೊಟ್ಟರು. 4 ಫ್ಯಾನ್, ಲೈಟ್ ಎಲ್ಲ ಇತ್ತು. ದೊಡ್ಡ ದೊಡ್ಡ 2 ಜಮಖಾನೆ ಸಹ ದೊರಕಿತು. ಎಲ್ಲ ಅನುಕೂಲಕರವಾಗಿ ನೆರವೇರಿದ ಸಂತೋಷದಿಂದ ದೇವರಿಗೆ ವಂದಿಸಿದೆವು. ಹಾಗೇನೆ ಸ್ವಲ್ಪ ಹೊತ್ತು ವಿಶ್ರಮಿಸಿದೆವು.
ಸಂಜೆ 4 ಗಂಟೆ ಗೆ ಕಾಫಿ ಕುಡಿದು ಮಾರಿಕಾಂಬಾದ ಎದುರುಗಡೆಯೇ ಬಂದು ನಿಲ್ಲುವ ಮಿನಿ ಬಸ್ಸು ಏರಿ ಬನವಾಸಿಗೆ ಹೊರಟೆವು. ಸುಮಾರು 21 ಕಿ. ಮಿ ದೂರ. ಅಲ್ಲಲ್ಲಿ ನಿಂತು ಹೋಗುವುದರಿಂದ 1 ಘಂಟೆ ಪ್ರಯಾಣ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ ನೋಡಲು ಸ್ವಲ್ಪ ನಡೆಯಬೇಕು. ಕಿರಿದಾದ ರಸ್ತೆ ಯಲ್ಲಿ ಹೋದಾಗ ಮುಂದೆ ರಾಜ ಬೀದಿ ಸಿಗುತ್ತದೆ. ಮುಂದೆ ದೇವಾಲಯದ ರಥ ಕಾಣುತ್ತದೆ. ಮುಖದ್ವಾರ ಚೆನ್ನಾಗಿದೆ.
ಅದನ್ನು ಹಾದು ಮುಂದೆ ಹೋದರೆ ದೇವಾಲಯದ ಪ್ರಾಂಗಣದಲ್ಲಿರುತ್ತೇವೆ. ಕ್ರಿಸ್ತ ಶಕ 345 ರಿಂದ ಸುಮಾರು 200 ವರ್ಷಗಳ ಕಾಲ ಕರ್ನಾಟಕವನ್ನಾಳಿದ ಕದಂಭ ಅರಸರ ರಾಜಧಾನಿಯಾಗಿದ್ದ, ಪಂಪ ಮಹಾಕವಿಯ ಮೆಚ್ಚಿನ ಬನವಾಸಿಯಲ್ಲಿ ಈವಾಗ ನೋಡಸಿಗುವುದು ಸುಂದರವಾದ ಮಧುಕೇಶ್ವರ ದೇವಾಲಯ ಮಾತ್ರ.
ಈ ದೇವಾಲಯವು 9 ನೇ ಶತಮಾನದ್ದು. ಅಲ್ಲಲ್ಲಿ ಕದಂಭರ ಕಾಲದ ಹಳೆಯ ಅವಶೇಷ ಗಳಿವೆಯಂತೆ. ಹೆಚ್ಚಿನ ಶಾಸನಗಳು, ಕಲ್ಲುಗಳು ಈಗಿನ ಮನೆಗಳಲ್ಲಿ ಬಟ್ಟೆ ಒಗೆಯುವ ಕಲ್ಲುಗಳಾಗಿ, ಇನ್ನಿತರ ಉಪಯೋಗಕ್ಕಾಗಿ ಬಳಸಲಾಗುತ್ತಿದೆಯಂತೆ. ಮಧುಕೇಶ್ವರ ದೇವಾಲಯದ ಸುತ್ತ ಎತ್ತರವಾದ ಮತ್ತು ಬಲವಾದ ಕಲ್ಲಿನ ಗೋಡೆ ಇದೆ. ಇದರ ಒಳಭಾಗಕ್ಕೆ ತಾಗಿಕೊಂಡು ಸುಮಾರು ಚಿಕ್ಕ ಗುಡಿಗಳಿವೆ. ಈ ಗುಡಿಗಳಲ್ಲಿ ಬನವಾಸಿಯ ಬೇರೆ ಬೇರೆ ಜಾಗಗಳಲ್ಲಿ ದೊರಕಿರುವ ದೇವಮೂರ್ತಿ ಗಳನ್ನಿರಿಸಿದ್ದಾರೆ.
ಆಗಿನ ಕಾಲದ ಶಿಲ್ಪ ಕಲೆಯ ವೈಭವವನ್ನು ಕಣ್ಣಾರೆ ಕಂಡು ಆನಂದಿಸಬಹುದು. ಬೇಲೂರು,ಹಳೇಬೀಡುಗಳ ನಿರ್ಮಾಣಕ್ಕೂ ಹಲವು ಶತಮಾನಗಳ ಹಿಂದೆಯೇ ಇಷ್ಟು ಸೊಗಸಾದ ದೇವಾಲಯ ನಿರ್ಮಿಸಿದ್ದರೆಂದರೆ ನಮ್ಮ ಕರ್ನಾಟಕದ ಶಿಲ್ಪಕಲೆ ಅದೆಷ್ಟು ಉನ್ನತಮಟ್ಟದಲ್ಲಿತ್ತು ಎಂಬುದಕ್ಕೆ ಸಾಕ್ಷಿ.
ಈ ದೇವಾಲಯದ ಸೊಬಗು, ಶಿಲ್ಪ ಕಲಾ ನೈಪುಣ್ಯಕ್ಕೆ ಕಲಶವಿಟ್ಟಂತೆ ಅಲ್ಲಿರುವ ಶಿಲಾ ಮಂಚ ಎಲ್ಲರ ಗಮನ ಸೆಳೆಯುತ್ತದೆ. ಅದರ ನಾಜೂಕಾದ ಕೆತ್ತನೆ ವಿನ್ಯಾಸ, ಸೊಬಗು ಬೇರೆಲ್ಲೂ ಕಾಣಸಿಗದು.ಅಷ್ಟು ಆಕರ್ಷಣೀಯವಾಗಿದೆ.
ಆದರೆ ಅದನ್ನು ಬಹಳ ಅನಾಕರ್ಷಣೀಯವಾದ ಕಬ್ಬಿಣದ ಸರಳುಗಳ ಬಾಗಿಲ ಹಿಂದೆ ಇರಿಸಿದ್ದಾರೆ. ಅದರ ಫೋಟೋ ಹಿಡಿಯಬೇಕಾದರೆ ಆ ಸರಳುಗಳ ಮಧ್ಯೆ ಕ್ಯಾಮರ ತುರುಕಿಸಿ ತೆಗೆಯಬೇಕು. ಸಾಮಾನ್ಯ ಕ್ಯಾಮರಾದಲ್ಲಿ ಅದರ ಪೂರ್ಣ ಚಿತ್ರ ದೊರಕುವುದೇ ಇಲ್ಲ. ಅದನ್ನು ಇನ್ನೂ ಹೆಚ್ಚಿನ ದೊಡ್ಡ ಜಾಗದಲ್ಲಿ ಇರಿಸಿದ್ದರೆ ಫೋಟೋ ಹಿಡಿಯಲು ಅನುಕೂಲವಾಗುತಿತ್ತು. ದೇವಾಲಯದ ಪ್ರಾಕಾರಕ್ಕೆ ಒಂದು ಸುತ್ತು ಬರುವಾಗ ಶ್ರುತಿ ಅಲ್ಲಿದ್ದ ಎಲ್ಲಾ ಮೂರ್ತಿಗಳಿಗೆ ಅಡ್ಡಬಿದ್ದು ಸುಸ್ತಾದಳು. ಆಮೇಲೆ ನಾವೆಲ್ಲ ಒಳಗಡೆ ಪ್ರವೇಶಿಸಿದೇವು.
ಸುಂದರವಾದ ಕಟೆದ ಸ್ಥಂಭಗಳುಳ್ಳ ಮಂಟಪ ಬಹಳ ಸೊಗಸಾಗಿದೆ. ಎದುರುಗಡೆ ನಂದಿ ಬಹಳ ಚೆನ್ನಾಗಿದೆ. ನಾವಲ್ಲದೆ ಬೇರೆ ಯಾವ ಯಾತ್ರಿಕರೂ ಇರದ ಕಾರಣ ಬಹಳ ಪ್ರಶಾಂತವಾಗಿತ್ತು.
ದೇವಾಲಯದ ಸೊಬಗನ್ನು ಕ್ಯಾಮರದಲ್ಲಿ ಹಿಡಿದಿಟ್ಟು ಮಧುಕೇಶ್ವರನ ದರ್ಶನ ಮಾಡಿದೆವು. ಒಳಗೆಲ್ಲಾ ಕತ್ತಲು, ವಿದ್ಯುತ್ ಕೈ ಕೊಟ್ಟಿತ್ತು. ಪ್ರಸಾದ ಪಡೆದು, ಅಲ್ಲಿಂದ ಹೊರಟು ಬಸ್ಸು ಹಿಡಿದು ಶಿರಸಿಗೆ ಬಂದು ಮಾರಿಕಾಂಬೆಯ ದರ್ಶನವನ್ನು ಮತ್ತೊಮ್ಮೆ ಮಾಡಿದೆವು. ದೇವರ ಆಭರಣಗಳು, ಅಲಂಕಾರ, ದೇವಾಲಯದ ಒಳಗಡೆಯ ಶುಚಿಯಾದ ಪರಿಸರ, ಅರ್ಚಕರ, ಸಿಬ್ಬಂಧಿಯವರ ವಿನಯ, ಎಲ್ಲಾ ಮೆಚ್ಚುವಂತಹದ್ದು. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದೆವು. ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ಉಪಹಾರ ಮಾಡಿ ಬಸ್ಸ್ ಸ್ಟ್ಯಾಂಡ್ ಗೆ ಬಂದೆವು.
ಇಂದು ನಮ್ಮ ಟ್ರೆಕ್ಕಿಂಗ್ ದಿನ! ಹೋಗುವ ಜಾಗ ಶಿರಸಿಯಿಂದ ಸುಮಾರು 25 ಕಿ.ಮಿ ದೂರಲ್ಲಿರುವ ಕೆಪ್ಪ ಜೋಗಕ್ಕೆ! ಇದನ್ನು ಉಂಚಳ್ಳಿ ಜಲಪಾತ, ಲೂಸಿಂಗ್ಟನ್ ಫಾಲ್ಸ್ ಎಂದೂ ಕರೆಯುತ್ತಾರೆ. ಆಗಿನ ಆಂಗ್ಲರ ಕಾಲದಲ್ಲಿ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿದ್ದ ಜೆ.ಡಿ.ಲೂಸಿಂಗ್ಟನ್ ಎಂಬ ಮಹಾಶಯನು ಈ ಜಲಪಾತವನ್ನು ಹೊರ ಜಗತ್ತಿಗೆ ಪರಿಚಯಿಸಿದ ಕಾರಣ ಆತನ ಹೆಸರನ್ನು ಇದಕ್ಕೆ ಇರಿಸಿದ್ದಾರೆ. ಇನ್ನು ಇದರ ಹತ್ತಿರ ಹೋದರೆ ಅದರ ಭೋರ್ಗರೆತದಿಂದ ಬೇರೇನೂ ಕೇಳಿಸುವುದಿಲ್ಲ, ಅದಕ್ಕಾಗಿ ಕೆಪ್ಪ ಜೋಗ ಎಂತಲೂ ಕರೆಯುತ್ತಾರೆ.
ಎಲ್ಲರೂ ಬಹಳ ಉತ್ಸುಕತೆಯಿಂದ ಬಸ್ಸಿಗಾಗಿ ಕಾದೆವು, ಅಲ್ಲಿಗೆ ಹೋಗುವ ಬಸ್ಸು ಸಕಾಲದಲ್ಲಿ ಬರಲೇ ಇಲ್ಲ. ಅಷ್ಟರಲ್ಲಿ ಒಂದು ಮಿನಿ ಬಸ್ಸು ಬಂತು. ಅದರಲ್ಲಿ ಹತ್ತಿ ಎಲ್ಲರೂ ಕೆಪ್ಪ ಜೋಗದತ್ತ ಪಯಣಿಸಿದೆವು. ನಮ್ಮ ವಾಹನವು ಅಮೀನಳ್ಳಿ ಮೂಲಕವಾಗಿ ಹೆಗ್ಗರಣೆ ಎಂಬ ಪುಟ್ಟ ಹಳ್ಳಿಗೆ ಬಂದು ತಲುಪಿತು. ಅಲ್ಲಿಂದ ಮುಂದೆ 5 ಕಿ.ಮಿ. ಹೋಗಬೇಕು. ಜೀಪುಗಳು ಇಲ್ಲಿ ಲಭ್ಯ. ಆದರೆ ನಾವು ಟ್ರೆಕ್ಕಿಂಗ್ ಗೆ ಎಂತ ಬಂದವರು ಜೀಪ್ ಹತ್ತುವುದೆ? ನಡೆದೇ ಹೋಗಬೇಕು ಎಂತ ತೀರ್ಮಾನಿಸಿ ಮುಂದೆ ಸಾಗಿದೆವು.
ಚೆನ್ನಾಗಿ ಡಾಮಾರು ಹಾಕಿದ ರಸ್ತೆ ಇತ್ತು, ಅಕ್ಕ ಪಕ್ಕ ಅಡಿಕೆ ತೋಟ, ಕಾಡು ಎಲ್ಲಾ ನೋಡುತ್ತಾ, ಪುಟ್ಟ ಮಗುವನ್ನು ಸರದಿಯಲ್ಲಿ ಹೆಗಲಮೇಲೇರಿಸಿಕೊಂಡು ನಡೆದೆವು. ಸುಮಾರು 4 ಕಿ. ಮಿ. ಸಾಗಿದಾಗ ಒಂದು ಪುಟ್ಟ ಗೂಡಂಗಡಿ ಸಿಗುತ್ತದೆ. ಅಲ್ಲಿನ ಹೆಗಡೆಯವರು ಸ್ಟ್ರಾಂಗ್ ಕಾಫಿ ಮಾಡಿ ಕೊಟ್ಟರು. ಇಲ್ಲಿಯವರೆಗೆ ಮಾತ್ರ ವಾಹನಗಳು ಬರುತ್ತವೆ.
ಮುಂದೆ 1ಕಿ.ಮಿ. ನಡೆದಾಗ ನಾವು ಸೀದಾ ಜಲಪಾತದ ಎದುರುಗಡೆ ಇದ್ದೆವು.
ಮುಂದೆ 1ಕಿ.ಮಿ. ನಡೆದಾಗ ನಾವು ಸೀದಾ ಜಲಪಾತದ ಎದುರುಗಡೆ ಇದ್ದೆವು.
ಅಲ್ಲಿ ಒಂದು ವ್ಯೂ ಪಾಯಿಂಟ್ ಇದೆ. ಅದರಲ್ಲಿ ನಿಂತು ಜಲಪಾತ ನೋಡಿದೆವು ಫೋಟೋ, ವೀಡಿಯೊ ಎಲ್ಲದರ ಮೂಲಕ ಅದನ್ನು ಸೆರೆ ಹಿಡಿದೆವು. ಸುಮಾರು 116 ಮೀಟರ್ ಎತ್ತರದಿಂದ ಜಲಪಾತವು ಅಘನಾಶಿನಿ ನದಿಗೆ ದುಮುಕುತ್ತದೆ. ಇಲ್ಲಿಂದ ನದಿಯು ಹರಿಯುತ್ತ ಅಲ್ಲಲ್ಲಿ ಹಲವಾರು ಹೆಸರಾಂತ ಜಲಪಾತಗಳನ್ನು ನಿರ್ಮಿಸಿದೆ.
ಇಲ್ಲಿಂದ ಸ್ವಲ್ಪ ಕೆಳಗಡೆ ಇನ್ನೊಂದು ವ್ಯೂ ಪಾಯಿಂಟ್ ಇದೆ. ಇಲ್ಲಿಗೆ ಹೋಗಲು ಮೆಟ್ಟಲುಗಳಿವೆ. ಅದರಲ್ಲಿಳಿದು ಹೋದರೆ ಕೆಪ್ಪ ಜೋಗದ ದಿವ್ಯ ದರ್ಶನವಾಗುತ್ತದೆ. ಇಲ್ಲಿನ ನೋಟ ಬಹಳ ರಮ್ಯ , ರುದ್ರ ರಮಣೀಯ. ತಳಭಾಗದಲ್ಲಿ ಹಸಿರು ಕನ್ನಡಿಯಂತೆ ಹೊಳೆಯುತ್ತಿದೆ, ಅದಕ್ಕೆ ಮೇಲಿನಿಂದ ಹಾಲಿನ ಧಾರೆ ಸುರಿಯುತ್ತಿದೆ.
ಪ್ರಕೃತಿ ದೇವಿಯು ತನ್ನ ಅಚ್ಚ ಬಿಳುಪಾದ ಸೀರೆಯನ್ನು ಒಣಗಲು ಹಾಕಿದಂತೆ ತೋರುತ್ತದೆ. ನೀರ ಹನಿಗಳು ಗಾಳಿಯ ರಭಸಕ್ಕೆ ನಮ್ಮ ಮೇಲೆ ಸಿಂಚನವಾಗುತ್ತದೆ. ವಾತಾವರಣವು ತಂಪಾಗಿದ್ದು ಬೇರೆ ಯಾವ ಸದ್ದು ಕೂಡಾ ಕೇಳಿಸುವುದಿಲ್ಲ. ಕೆಪ್ಪ ಜೋಗ- ಅನ್ವರ್ಥ ನಾಮ. ಅಲ್ಲಿಂದ ನದಿ ಹರಿಯುವ ಕೊಳ್ಳ ಕಾಣಿಸುತ್ತದೆ.
ಅಲ್ಲಿ ಸ್ವಲ್ಪ ಹೊತ್ತು ಇದ್ದು ತಿಂಡಿ ತಿಂದು ಕಾಲ ಕಳೆದೆವು. ಇನ್ನು ಶುರು ನಮ್ಮ ಸಾಹಸಗಳು. ಮೇಲಿನ ವ್ಯೂ ಪಾಯಿಂಟ್ ನ ಬಲಗಡೆಗೆ ಒಂದು ಕಾಲ್ದಾರಿ. ಅದರಲ್ಲಿ ಮುಂದೆ ಹೋದರೆ ನಾವು ಕಾಡಿನ ಒಳಗಡೆ ಇರುತ್ತೇವೆ, ಎಡಗಡೆಗೆ ಪ್ರಪಾತ. ಸುತ್ತಲೂ ಕಾಡು. ಕಾಲು ಜಾರುವಷ್ಟು ಇಳಿಜಾರು, ಕಾಡು ಬಳ್ಳಿಗಳು. ಬಿದಿರ ಮೆಳೆ, ಮುಳ್ಳು ಕಂಟಿ ಗಳಿಂದ ಕೂಡಿದ ದಾರಿ.
ಕೆಲವೆಡೆಯಲ್ಲಂತೂ ದಾರಿಯೇ ಇಲ್ಲ. ಮಳೆಗಾಲದಲ್ಲಿ ಮೇಲಿನಿಂದ ಹರಿದು ಬರುವ ಮಳೆನೀರಿನ ಕೊರಕಲು. ಅದರಲ್ಲೇ ಕೆಳಗೆ ಇಳಿಯಬೇಕು. ಅಲ್ಲಲ್ಲಿ ದೊಡ್ಡ ಬಂಡೆಗಳು ದಾರಿಗಡ್ಡವಾಗಿ ಮಲಗಿವೆ, ಅದನ್ನು ಸುತ್ತುವರಿದು, ಇಲ್ಲ ಅದನ್ನೇರಿ, ಅಥವಾ ಅದರ ಸಂದಿಗಳಲ್ಲಿ ನುಸುಳಿ ಕೆಳಗಿಳಿದೆವು. ಸುಮಾರು 1ಕಿ.ಮಿ. ಇಳಿಯಬೇಕು. ಅಂತೂ ಕಷ್ಟಪಟ್ಟು ಎಲ್ಲರೂ ನದಿಯ ಪಾತ್ರಕ್ಕೆ ಬಂದೆವು. ಅಲ್ಲಲ್ಲಿ ಬಂಡೆಗಳಿಂದ ಕೂಡಿದ ಆಘನಾಶಿನಿ ನದಿ. ಎರಡೂ ದಡದಲ್ಲಿ ದಟ್ಟವಾದ ಕಾಡು, ನೀರು ತುಂಬಾ ಇತ್ತು. ಅದರ ಹರಿವೂ ಜೋರಾಗಿತ್ತು. ನಮ್ಮಲ್ಲಿ ಹೆಚ್ಚಿನವರಿಗೆ, ಕೆರೆ, ನದಿ, ಸಮುದ್ರಗಳಲ್ಲಿ ಈಜಾಡಿ ಅನುಭವವಿದ್ದುದರಿಂದ ಏನೂ ಭಯವಿಲ್ಲದೆ ನೀರಿಗೆ ಇಳಿದೇ ಬಿಟ್ಟೆವು. ಆದರೂ ಇಲ್ಲಿ ಬಹಳ ಜಾಗರೂಕರಾಗಿರಬೇಕು. ಅಷ್ಟೊಂದು ನೀರಿನ ಸೆಳೆತವಿದೆ. ಆಹಾ ಎಷ್ಟೊಂದು ಮಜಾ! ನಮ್ಮ ಮೈ ಕೈ ನೋವು ಎಲ್ಲಾ ಮಾಯ! ಸುಮಾರು ಹೊತ್ತು ನದಿಯಲ್ಲಿ ಸ್ನಾನ ಮಾಡಿದಿದೆವು.
ಆ ಜಾಗ ಎಷ್ಟು ಸುಂದರವಾಗಿತ್ತೆಂದರೆ ಗುರುಮಾಮ, ತಾನು ಮದುವೆ ಆದಮೇಲೆ ಹನಿಮೂನ್ ಗೆ ಇಲ್ಲಿಗೇ ಬರುತ್ತೇನೆ ಎಂದು ಬುಕ್ ಮಾಡಿಯೇ ಬಿಟ್ಟರು. ಕೆಲವರು ಸ್ವಲ್ಪ ಸುತ್ತು ಬಳಸಿ ನೇರ ಜಲಪಾತದ ಬುಡಕ್ಕೇನೇ ಹೋದರು. ಆದರೂ ಅದನ್ನು ಕೈಯಿಂದ ಮುಟ್ಟಲು ಆಗುವುದಿಲ್ಲ. ಮದ್ಯ ದೊಡ್ಡ ಸರೋವರವಿದೆ. ಅದರ ಆಳ ನಮಗೆ ತಿಳಿಯದು. ಅಲ್ಲಿಗೆ ಹೋಗುವುದು ತೀರಾ ಅಪಾಯ. ಜಳಕವಾದ ಮೇಲೆ ಊರಿಂದ ತಂದ ಸಿಹಿ ತಿಂಡಿಗಳಾದ ಲಡ್ಡು, ಹೋಳಿಗೆ, ಚಕ್ಕುಲಿ, ಮತ್ತು ಅಲ್ಲೇ ದಿಡೀರ್ ಆಗಿ ತಯಾರಿಸಿದ ಅವಲಕ್ಕಿ ಚಟ್ನಿ, ಜೊತೆಗೆ ನದಿಯ ನೀರಿನಿಂದಲೇ ತಯಾರಿಸಿದ ನಿಂಬೆ ಶರಬತ್ತು! ಸಾಲದೇ? ನಮ್ಮ ಹೊಟ್ಟೆ ತುಂಬಿತು. ಮಕ್ಕಳೆಲ್ಲಾ ಇನ್ನೂ ನೀರಾಟವಾಡುತಿದ್ದರು. ಬಣ್ಣ ಬಣ್ಣದ ಕಲ್ಲುಗಳನ್ನು ಸಂಗ್ರಹ ಮಾಡುತಿದ್ದರು. ಕಾಡಿನ ಒಳಗೂ ಸ್ವಲ್ಪ ದೂರ ಸಾಗಿ ಅಲ್ಲಿನ ವಿಸ್ಮಯಗಳನ್ನು ಕಂಡು ಆನಂದಿಸಿದರು. ಸಂಜೆ 4 ಘಂಟೆಯಾಗುತಿದ್ದಂತೆ ಹಿಂದಿರುಗಲು ತೊಡಗಿದೆವು. ಈಗ 1ಕಿ.ಮಿ.ಯಷ್ಟು ಏರಬೇಕು.ನಿಧಾನವಾಗಿ ಏರುತ್ತಾ ಅಲ್ಲಲ್ಲಿ ನಿಂತು ದಣಿವಾರಿಸುತ್ತಾ ಮೇಲೆ ಬಂದೆವು. ಅಲ್ಲಿಂದ ಮತ್ತೆ ನಡೆದು ಹೆಗಡೆಯವರ ಅಂಗಡಿಯಲ್ಲಿ ಕಾಫಿ ಕುಡಿದು ನಮ್ಮ ದೇಹವನ್ನು ರಿಚಾರ್ಜ್ ಮಾಡಿಕೊಂಡೆವು. ಗೂಡಂಗಡಿಯಲ್ಲಿ ಮಲೆನಾಡಿನ ಉತ್ಪನ್ನಗಳಾದ ಜೇನು, ಏಲಕ್ಕಿ, ಲವಂಗ, ದಾಲ್ಚಿನ್ನಿ, ವೆನಿಲ್ಲಾ ಎಲ್ಲವನ್ನೂ ಕೊಂಡುಕೊಂಡೆವು. ಬಸ್ಸು ಬರುವ ಹೆಗ್ಗರಣೆವರೆಗೆ ಸಾಗಿ ಬಸ್ಸಿನಲ್ಲಿ ಶಿರಸಿಗೆ ತಲುಪಿದಾಗ 7ಘಂಟೆ. ಮತ್ತೊಮ್ಮೆ ದೇವರ ದರ್ಶನ, ಆಮೇಲೆ ಹೋಟೆಲಲ್ಲಿ ಊಟ, ಶಿರಸಿಯ ಪೇಟೆಯಲ್ಲಿ ಅಪ್ಪೆ ಮಿಡಿ ಉಪ್ಪಿನಕಾಯಿಗಾಗಿ ಹುಡುಕಾಡಿದೆವು. ಕೆಲವು ಬ್ರಾಂಡ್ ನ ಅಪ್ಪೆಮಿಡಿ ಉಪ್ಪಿನಕಾಯಿ ಸಿಕ್ಕಿತು. ಊರಿಗೆ ಬಂದು ಉಪ್ಪಿನಕಾಯಿ ರುಚಿ ನೋಡಿದೆವು, ಚೆನ್ನಾಗಿತ್ತು. ಆದರೆ ಕೆಲವು ಬಾಟಲಿಗಳಲ್ಲಿ ಮೇಲ್ಗಡೆ ಅಪ್ಪೆ ಮಿಡಿ, ಕೆಳಗಡೆ ಸಾದಾ ಮಾವಿನ ಮಿಡಿ ಹಾಕಿ ನಮಗೆ ಟೋಪಿ ಹಾಕಿದ್ದರು.
ಬೇಗ ಬೇಗ ರೂಮಿಗೆ ಬಂದು ನಮ್ಮ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಶಿರಸಿ ಬಸ್ ಸ್ಟ್ಯಾಂಡ್ ಗೆ ಬಂದು ಸೀದಾ ಮಂಗಳೂರಿಗೆ, ಅಲ್ಲಿಂದ ಕಾಸರಗೋಡಿಗೆ ಕ್ಷೇಮವಾಗಿ ತಲುಪಿದೆವು. ಶಿರಸಿಯ ಸುತ್ತ ಮುತ್ತ ಇನ್ನೂ ಹಲವು ಜಲಪಾತಗಳಿವೆ. ಸಾತೊಡ್ಡಿ, ಮಾಗೋಡು, ಶಿವಗಂಗೆ ಮತ್ತು ಬುರುಡೆ ಜಲಪಾತಗಳಿಗೆ ಹೋಗಬಹುದು. ಪ್ರಸಿದ್ದವಾದ ಯಾಣ ಕ್ಕೆ ಹೋಗಬಹುದು. ಸೋಂದಾ ಮತ್ತು ಸಹಸ್ರಲಿಂಗ ಸಹ ಶಿರಸಿಗೆ ಸಮೀಪದಲ್ಲೇ ಇದೆ. ಹಾಗೇನೆ ಗೋಕರ್ಣ, ಮುರುಡೇಶ್ವರ ಮತ್ತು ಜೋಗ ಜಲಪಾತಕ್ಕೂ ಇಲ್ಲಿಂದ ಹೋಗಬಹುದು.