Saturday, 27 March 2010

ಕೊರ್ನ್ ವಾಲ್ ನಲ್ಲಿ ಕೆಲ ದಿನಗಳು

ಕೊರ್ನ್ ವಾಲ್ ಎಂಬ ಊರು ಇರುವುದು ಇಂಗ್ಲೆಂಡ್ ದೇಶದ ಪಶ್ಚಿಮ-ದಕ್ಷಿಣ ಭಾಗದ ಕೊನೆಯಲ್ಲಿ. ಮೂರೂ ಕಡೆಯಲ್ಲಿ ಸಮುದ್ರದಿಂದ ಸುತ್ತುವರೆದಿದ್ದು ಪೂರ್ವ ಭಾಗವು ಡೆವೊನ್ ಕೌಂಟಿಗೆ ಹೊಂದಿಕೊಂಡಿದೆ. ನಮ್ಮ ದೇಶದ ಕನ್ಯಾಕುಮಾರಿಯನ್ನು ನೆನಪಿಸುತ್ತದೆ. ಉತ್ತರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ದಕ್ಷಿಣದಲ್ಲಿ ಇಂಗ್ಲಿಷ್ ಚಾನೆಲ್ ಇದೆ. ಹಾಗಾಗಿ ಇಲ್ಲೆಲ್ಲಾ ಬೀಚ್ ಗಳೇ ಕಾಣಸಿಗುವುದು. ಆದರೆ ನಮ್ಮ ಊರಿನಲ್ಲಿರುವ ಹಾಗೆ ಉದ್ದಕ್ಕೆ ಮೈಲುಗಟ್ಟಲೆ ಚಾಚಿರುವುದಲ್ಲ, ಎತ್ತರವಾದ ಮತ್ತು ಕಡಿದಾದ ಬೆಟ್ಟಗಳ ತಳಭಾಗದಲ್ಲಿ ಜೋರಾಗಿ ಆರ್ಭಟಿಸುವ ಕಡಲು. ಇಂತಹ ನೂರಾರು ಜಾಗಗಳು ಈ ಕೌಂಟಿಯಲ್ಲಿವೆ.

--

--
--

--
ಮೂರೂ ಕಡೆ ಸಮುದ್ರವಿರುವುದರಿಂದ ಇಲ್ಲಿನ ಹವೆ ಸಹಾ ಇಂಗ್ಲೆಂಡಿನ ಹವೆಗಿಂತ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿದೆ. ಇಲ್ಲಿ ಸರಾಸರಿ 4 ರಿಂದ  19 ಡಿಗ್ರಿ ಉಷ್ಣತೆ ಇರುತ್ತದೆ. ಸಾಧಾರಣ ಮಳೆ, ಮತ್ತು ಕೆಲವೊಂದು ದಿನಗಳಲ್ಲಿ ಹಿಮಪಾತ ಸಹಾ ಆಗುತ್ತದೆ.
---


---
ಇಡೀ ಇಂಗ್ಲೆಂಡ್ ದೇಶದಲ್ಲೇ ಇದು ಅತ್ಯಂತ ಸುಂದರ ಪ್ರದೇಶ ಎಂದು ಹೆಸರುವಾಸಿಯಾಗಿದೆ. ಸಣ್ಣಪುಟ್ಟ ಬೆಟ್ಟ, ಕಣಿವೆ, ಕಾಡುಗಳು  ಮತ್ತು  ನದಿಗಳಿಂದ ಕೂಡಿದ ಈ ಪ್ರದೇಶವು ತನ್ನ ಹೂದೋಟಗಳಿಗಾಗಿ ಪ್ರಸಿದ್ದವಾಗಿದೆ. 
---


---
--


--



--


---



---


--


--
ಸುಮಾರು 3500 ಚದರ k.m. ವಿಸ್ತೀರ್ಣವಿರುವ ಇಲ್ಲಿ 50 ಕ್ಕಿಂತ ಹೆಚ್ಚು ದೊಡ್ಡ ಪ್ರಖ್ಯಾತವಾದ ಹೂದೋಟವಿದೆ. ಅಂತೆಯೇ ಹೆಸರುವಾಸಿಯಾದ ಕೋಟೆ ಕೊತ್ತಲಗಳು ಇವೆ, ಸಾಮಂತರುಗಳ ಭವ್ಯ ಭವನಗಳು ಇವೆ. ಹಾಗಾಗಿ ಇದೊಂದು ಪ್ರವಾಸಿ ಸ್ವರ್ಗ! ಇಲ್ಲಿನ ಒಟ್ಟಾರೆ ಜನ ಸಂಖ್ಯೆ 5.5 ಲಕ್ಷ. ಇಲ್ಲಿನ ನಾಗರಿಕರು ಹೆಚ್ಚಾಗಿ ಸಮುದ್ರಯಾನ ಮತ್ತು ಜಲ ಸೇನೆಯಲ್ಲಿ ಸೇವೆ ಮಾಡಿ ನಿವೃತ್ತರಾದವರು. ಇವರನ್ನು ಕೊರ್ನಿಶ್ ಜನರು ಎಂದು ಕರೆಯುತ್ತಾರೆ, ಇವರ ಇಂಗ್ಲಿಷ್ ಭಾಷೆಯ ಧಾಟಿಯೂ ಸ್ವಲ್ಪ ಬೇರೆಯದಾಗಿದ್ದು ತನ್ನದೇ ಆದ ಒಂದು ಸೊಗಡನ್ನು ಹೊಂದಿದೆ. ಬಹಳ ಕಾಲದ ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದ ಕೊರ್ನ್ ವಾಲ್  , ಗ್ರೇಟ್ ಬ್ರಿಟನ್ನಿ ನೊಂದಿಗೆ ಸೇರಿಕೊಂಡಿತು.  ಇಂಗ್ಲೆಂಡನ್ನು ಆಳಿದ ಪ್ರಖ್ಯಾತ ರಾಜರುಗಳಲ್ಲಿ ಬಹಳ ಹೆಸರಾಂತ ರಾಜನಾದ ಆರ್ಥರ್ ದೊರೆ ಕೊರ್ನ್ ವಾಲ್  ನ ಟಿಂತಾಜೆಲ್ (Tintaajel) ಕೋಟೆಯಲ್ಲಿ ಹುಟ್ಟಿದ್ದನಂತೆ. ಈ ಕೋಟೆಯ ಅವಶೇಷಗಳು ಸಮುದ್ರ ದಡದಲ್ಲಿ ಎತ್ತರವಾದ ಜಾಗದಲ್ಲಿ  ಈವಾಗಲೂ ಇದ್ದು ಒಂದು ಆಕರ್ಷಕ ಪ್ರವಾಸಿ ಸ್ಥಳವಾಗಿದೆ.

--

--
--

--
ಅಂತೆಯೇ ಮೆರಿಜಿಯೋನ್ ನಲ್ಲಿರುವ ಸೈಂಟ್ ಮೈಕೆಲ್ಸ್ ಮೌಂಟ್, ಸಮುದ್ರದ ಮದ್ಯದಲ್ಲಿದ್ದು ಒಂದು ಪುಟ್ಟ ನಡುಗಡ್ಡೆಯ ಮೇಲೆ ಕಟ್ಟಿರುವ ಕ್ಯಾಸೆಲ್! ಇಲ್ಲಿ ಒಂದು ಚರ್ಚು ಸಹಾ ಇದೆ. ಭರತದ ಸಮಯದಲ್ಲಿ ಸಮುದ್ರವು ಇದನ್ನು ಸುತ್ತುವರಿದು ಒಂದು ದ್ವೀಪವಾಗುತ್ತದೆ, ಇಳಿತದ ಸಮಯದಲ್ಲಿ ಈಕಡೆಯಿಂದ ಅಲ್ಲಿಯವರೆಗೆ ನಡೆದೇ ಹೋಗಬಹುದು. 
ಇಲ್ಲಿನ ಹೂದೋಟಗಳ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆ ಎನಿಸುತ್ತಿದೆ. ಒಂದೊಂದು ತೋಟವೂ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿದೆ. ಲ್ಯಾನ್ ಹೈಡ್ರೋಕ್  ತೋಟದೊಳಗೆ ಆಗಿನ ಕಾಲದ ಟ್ಯುದರ್ ನ  (Tudar)    ಭವ್ಯ ಭವನವಿದೆ.ಈಗಲೂ ಸಹಾ ಅದನ್ನು ಹಿಂದಿನ ಅದೇ ವೈಭವದಲ್ಲಿ ಇರಿಸಿದ್ದಾರೆ. 

--

--
--

--
--

--
--

--

ಇಲ್ಲಿ ವಿಶಾಲವಾದ ಹುಲ್ಲು ಹಾಸು ಅಲ್ಲಲ್ಲಿ ದೊಡ್ಡ ಮರಗಳು, ವಿವಿಧ  ಬಗೆಯ ಹೂ ಬಿಡುವ ಮರ ಗಿಡಗಳು ಎಲ್ಲವನ್ನೂ    ಅಚ್ಚುಕಟ್ಟಾಗಿ ಬೆಳೆಸಿದ್ದಾರೆ. ಅದೇ ತರಹ ಇತರ ಪ್ರಸಿದ್ಧ ಹೂದೊಟಗಳಾದ ಥ್ರೆಭಾ, ಟ್ರೆಂಗ್ವಿಟಿಯನ್, ಟ್ರೆಲಿಸಿಕ್, ಕೋಟ್ ಹೀಲಿ ಮತ್ತು ಗ್ಲೆನ್ ಡುರ್ಗನ್ ಗಳು ತಮ್ಮದೇ ಆದ ವಿಶೇಷತೆ ಹೊಂದಿದ ಪರಿಸರ, ಸಸ್ಯ, ಹೂವುಗಳು ಮತ್ತು ಹುಲ್ಲು ಹಾಸಿನಿಂದ ರಾರಾಜಿಸುತ್ತವೆ. ಈ ಎಲ್ಲಾ ತೋಟಗಳು ಬೇಸಿಗೆಯ ಕಾಲದಲ್ಲಿ ತಮ್ಮ ಪೂರ್ತಿ ಸೌಂದರ್ಯವನ್ನು ಹೊಂದುವುದರಿಂದ ಆಗ ಇವುಗಳಿಗೆ ಬೇಟಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ, ಆಗಲೇ ಪ್ರವಾಸಿ ಸೀಸನ್  ಸಹಾ ಆರಂಭವಾಗುವುದು.
ಕೊರ್ನಿಶ್ ಜನರು ತುಂಬಾ ಶಾಂತಿ ಪ್ರಿಯರು ಮತ್ತು ಎಲ್ಲರನ್ನೂ ಗೌರವದಿಂದ ಕಾಣುವರು. ಇಲ್ಲಿನ ಮುಖ್ಯ ಕೃಷಿ ಎಂದರೆ ಆಲುಗಡ್ಡೆ,ಮತ್ತು ತರಕಾರಿ. ಆದರೆ ಹೆಚ್ಚಾಗಿ ಜನರು ಹೈನುಗಾರಿಕೆ, ಕುದುರೆ, ಕುರಿ, ಲಾಮ, ಕೋಳಿ ಸಾಕಣೆ ಮಾಡುತ್ತಾರೆ. ಎಲ್ಲೆಡೆಗಳಲ್ಲೂ ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ದಷ್ಟ ಪುಷ್ಟ ದನ ಕರುಗಳು, ಕುದುರೆ, ಕುರಿಗಳನ್ನು ಕಾಣಬಹುದು. ಇದಕ್ಕೆ ಸಂಭಂದಿಸಿದ ಉತ್ಸವಗಳು ಮತ್ತು ಹಬ್ಬಗಳು ಅಲ್ಲಲ್ಲಿ ನಡೆಯುತ್ತವೆ, ಆಗ ಇವುಗಳ ಪ್ರದರ್ಶನ ಸಹಾ ಇರುತ್ತವೆ.
ಕೊರ್ನ್ ವಾಲ್  ನ ಆಡಳಿತ ಕೇಂದ್ರವಾದ ಟ್ರುರೋ ಪಟ್ಟಣವು ತುಂಬಾ ಸುಂದರವಾಗಿದೆ. ಇತರ ಮುಖ್ಯ ಸ್ಥಳಗಳೆಂದರೆ ರೆಡ್ರುತ್, ಫಾಲ್ ಮೌತ್, ನ್ಯೂಕೀ, ಸೈಂಟ್ ಆಗ್ನೆಸ್, ಸೈಂಟ್ ಈವ್ಸ, ಬೋಡ್ಮಿನ್, ಫೋಯೇ, ಮೆರಿಜಿಯೊನ್ ,ಸೈಂಟ್ ಆಸ್ಟೆಲ್, ಲಿಸಾರ್ಡ್ ಮತ್ತು ಲ್ಯಾಂಡ್ಸ್ ಎಂಡ್. ಈ ಎಲ್ಲಾ ಸ್ಥಳಗಳು ಬಹಳ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಪ್ರದೇಶಗಳಾಗಿವೆ.
--

--

--

--
--

--
--

--
--

--
--
From photos


--
--
From photos
--
--

--
--
From photos
--
--

--
--

--
--

--
ಲ್ಯಾಂಡ್ಸ್ ಎಂಡ್ ಎಂದರೆ ಭೂಮಿಯ ಕೊನೆ ಅಥವಾ ಅಂಚು ಎಂಧರ್ಥ. ಇಲ್ಲಿ ಬಂದಾಗ ಅದು ಹೌದೆನಿಸುತ್ತದೆ. ಇದರಾಚೆಗೆ ಅಟ್ಲಾಂಟಿಕ್ ಮಹಾಸಾಗರವು ಚಾಚಿಕೊಂಡಿದೆ. ಈ ಸ್ಥಳವು ಗ್ರೇಟ್ ಬ್ರಿಟನ್ನಿನ ದಕ್ಷಿಣದ ತುದಿಯಾಗಿದೆ.
ಮಿನ್ನಾರ್ಕ್ ಥಿಯೇಟರ್ ಇರುವುದು ಸಮುದ್ರದ ಕರೆಯಲ್ಲಿರುವ ಎತ್ತರದ  ಇಳಿಜಾರು ಪ್ರದೇಶದಲ್ಲಿ. ಇದನ್ನು ಒಂದು ಎಂಫಿ ಥಿಯೇಟರ್ ಮಾದರಿಯಲ್ಲಿ  ಕಟ್ಟಿದ್ದಾರೆ, ಮತ್ತು ಇಲ್ಲಿ ನಿಗದಿತ ದಿನಗಳಲ್ಲಿ ಶೇಕ್ಸ್ ಫಿಯರನ ನಾಟಕಗಳನ್ನು ಆಡುತ್ತಾರೆ. ರಾತ್ರಿಯ ಹೊತ್ತು ಸಮುದ್ರದ ಪರಿಸರದಲ್ಲಿ, ವಿಶಿಷ್ಟವಾದ ನೆರಳು ಬೆಳಕಿನ ಮತ್ತು ದ್ವನಿ ಸಂಯೋಜನೆಯ ಮಿಳಿತದಿಂದ ಕೂಡಿದ ಮಹಾನ್ ನಾಟಕ ಕಾರನ ಕೃತಿಗಳನ್ನು ನೋಡುವುದು ಒಂದು ವಿಶೇಷ ಅನುಭವ. ಅಷ್ಟು ನೈಜವಾಗಿರುತ್ತವೆ!
--

--

--

--
ಸ್ಟಿಥಿಯನ್ಸ್  ಎಂಬ ಪುಟ್ಟ ಊರು ಇರುವುದು ಟ್ರುರೋ ಪಟ್ಟಣದ ಹತ್ತಿರ. ಇಲ್ಲಿ ನಮ್ಮ ಮಗಳ ಮನೆಯಿದೆ, ಹಾಗಾಗಿ ಇಲ್ಲಿಗೆ 2-3 ಸಾರಿ  ಬಂದು ಇವನ್ನೆಲ್ಲ ನೋಡಿ ಸಂತೋಷಿಸಲು ಸಾಧ್ಯವಾಯಿತು. ನಮ್ಮ ಅಳಿಯಂದಿರು NHS Cornwall partnership Trust ನಲ್ಲಿ ಹಿರಿಯ ಡಾಕ್ಟರ್ ಆಗಿದ್ದಾರೆ ಮತ್ತು ಇಲ್ಲಿನ ವಿಲೇಜ್ ಕೌನ್ಸಿಲರ್ ಸಹಾ ಆಗಿದ್ದಾರೆ. ಇತ್ತೀಚಿಗೆ ಈ ಮನೆಗೆ  ಗಂಡು ಮಗುವಿನ ಆಗಮನವಾಗಿದೆ.
ಸ್ಟಿಥಿಯನ್ಸ್    ಒಂದು ಹಳ್ಳಿ, (ವಿಲೇಜ್ ) ಆದರೂ ನಮ್ಮ ಊರಿನ ಹಾಗಿಲ್ಲ. ಇಲ್ಲಿ ಸುಮಾರು 500 ಮನೆಗಳಿದ್ದು, ಒಂದು ಶಾಲೆ, ಆಸ್ಪತ್ರೆ, ಜನರಲ್ ಸ್ಟೋರ್, ಪೋಸ್ಟ್ ಆಪೀಸು, ಒಂದು ಚರ್ಚು, ಆಟದ ಮೈದಾನು, ಎಲ್ಲಾ ಇವೆ. ಮನೆಗಳು ಎಲ್ಲವೂ ಸುಂದರವಾಗಿದ್ದು, ಪ್ರತಿಯೊಂದು ಮನೆಗೂ ಒಂದು ಹೂದೋಟ, ಲಾನ್ ಇದ್ದೇ ಇರುತ್ತದೆ.
--

--
---
--

--
--

--

--

--

--

--
--
From photos
--
ಇಲ್ಲಿ ಗಗನ ಚುಂಬಿಗಳಿಲ್ಲ. ಇಲ್ಲಿನ ವಿಶೇಷತೆ ಎಂದರೆ ಕೆಲವು ಕಡೆ ಮನೆಗಳು ಬಹಳ ದೂರದಲ್ಲಿ ಏಕಾಂಗಿಯಾಗಿ ನಿರ್ಜನ ಪ್ರದೇಶದಲ್ಲಿದ್ದರೂ ಸಹಾ ಅಲ್ಲಿಯವರೆಗೆ ವಿದ್ಯುತ್ ಸೌಕರ್ಯ ಮತ್ತು ನೀರಿನ ಸರಬರಾಜು ಇದ್ದೇ ಇರುತ್ತದೆ ಮತ್ತು ಅಲ್ಲಿಯವರೆಗೆ ದಾಮಾರು ರಸ್ತೆ ಸಹಾ ಇರುತ್ತದೆ.
--

--

ಅಂಥಹ ಏಕಾಂಗಿ ಮನೆಗಳಿಗೆ ಇಲ್ಲಿ ತುಂಬಾ ಬೇಡಿಕೆ ಇದೆ ಮತ್ತು ದುಬಾರಿಯಾಗಿದೆ. ಇಲ್ಲಿ ಕಳ್ಳ ಕಾಕರ ಹಾವಳಿ ಇಲ್ಲವೇ ಇಲ್ಲ. ದೊಂಬಿ, ಗಲಭೆಗಳಿಲ್ಲದ ಪ್ರಶಾಂತವಾದ ಊರಿದು. ಎರಡೂ ಕಡೆ ಸಮುದ್ರ ಹತ್ತಿರವಾಗಿದ್ದುದರಿಂದ ಒಳ್ಳೆಯ ವಾತಾವರಣ ಇದೆ. ಆಕಡೆ 5  ಮೈಲು ಈ ಕಡೆ 6 ಮೈಲು  ಹೋದರೆ ಸಮುದ್ರ ಸಿಗುತ್ತದೆ! ಇಲ್ಲಿ ಒಂದು ದೊಡ್ಡ ಮಾನವ ನಿರ್ಮಿತ ಸರೋವರವಿದೆ. ಸ್ಟಿಥಿಯನ್  ಲೇಕ್ ಅಂತ ಕರೆಯುತ್ತಾರೆ. ಇಲ್ಲಿಂದ ಕುಡಿಯುವ ನೀರು ಇಲ್ಲಿ ಸುತ್ತ ಮುತ್ತಲಿನ ಹಳ್ಳಿಗಳಿಗೆಲ್ಲಾ ಸರಬರಾಜು ಆಗುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ನೌಕಾ ಕ್ರೀಡೆ ನಡೆಯುತ್ತದೆ. ಇದರ ಸುತ್ತು ನಡೆದಾಡಲು ಮತ್ತು ಆಣೇಕಟ್ಟಿನ ಮೇಲೆ ಹೋಗಲು ತುಂಬಾ ಸೊಗಸು. ಸ್ಟಿಥಿಯನ್  ಫೇರ್ ಮತ್ತು 
ಸ್ಟಿಥಿಯನ್ ಷೋಗಳು ಇಲ್ಲಿ  ಬಹಳ ಪ್ರಸಿದ್ಧ. ಊರಿನ ಎಲ್ಲಾ ಜನಗಳು ಇದರಲ್ಲಿ ಭಾಗವಹಿಸುತ್ತಾರೆ.                 
       

Friday, 19 March 2010

ಯಾಣಕ್ಕೊಂದು ಪ್ರಯಾಣ

ಯಾಣವನ್ನು ನೋಡಲೇಬೇಕೆಂಬ ಆಸೆ ಮನಸಲ್ಲಿ ಮೂಡಿ ಹಲವು ವರ್ಷಗಳೇ  ಕಳೆದಿತ್ತು. ಆದರೆ ಬೇಕಾದ ಸಂದರ್ಭ ಕೂಡಿ ಬರಲಿಲ್ಲ. ಕೊನೆಗೂ ಒಮ್ಮೆ ಎಲ್ಲರೂ ಕೂಡಿದಾಗ, ಈ ಸಲ  ಯಾಣವನ್ನು ನೋಡಿಯೇಬಿಡೋಣ ಅಂತ ತೀರ್ಮಾನಿಸಿದೆವು.ನಾವು ಹದಿನಾರು ಮಂದಿ ದೊಡ್ಡವರು ಮತ್ತು ನಾಲ್ಕು ಚಿಕ್ಕ ಮಕ್ಕಳು ಕ್ರಿಸ್ಮಸ್ ದಿನದಂದು ಕಾಸರಗೋಡಿನಿಂದ ಹೊರಟು ಮಂಗಳೂರಿಗೆ ಬಂದು ಮುಂಜಾನೆ ಏಳು ಗಂಟೆಗೆ ಹೊರಡುವ ವೆರ್ನಾ ಪ್ಯಾಸೆಂಜರ್ ರೈಲು ಹತ್ತಿದೆವು. ಮಕ್ಕಳಿಗಂತೂ ರೈಲು ಪ್ರಯಾಣವು ಬಹಳ ಖುಷಿಯಾಗಿತ್ತು. ರೈಲಿನಲ್ಲಿ ಹೋಗುತ್ತಾ ಬೆಳಗಿನ ಉಪಹಾರ ಮುಗಿಸಿದೆವು. ಮನೆಯಿಂದ ತಂದ ಹಲಸಿನ ಎಲೆಯಲ್ಲಿ ಮಾಡಿದ ಕೊಟ್ಟಿಗೆ ಮತ್ತು ಮಿಡಿ ಉಪ್ಪಿನಕಾಯಿ ಮತ್ತು ಚಟ್ನಿ ಬಹಳ ರುಚಿಕರವಾಗಿತ್ತು. ಹೋಗುವಾಗ ದಾರಿಯಲ್ಲಿ ಮುರುಡೇಶ್ವರ ಕ್ಷೇತ್ರ ಸಿಗುತ್ತದೆ. ಅಲ್ಲಿ ಇಳಿದು ದೇವರ ದರ್ಶನ ಮಾಡಿ ಎಲ್ಲಾ ನೋಡಿಕೊಂಡು ಮುಂದೆ ಹೋಗುವುದು ಅಂತ ಮೊದಲೇ ನಿಶ್ಚಯಿಸಿದ್ದೆವು.
ಸುಮಾರು ಹನ್ನೊಂದು ಗಂಟೆಗೆ ಮುರುಡೇಶ್ವರದಲ್ಲಿ ಇಳಿದು ದೇವಸ್ಥಾನಕ್ಕೆ  ಹೋದೆವು. ದೇವರ ದರ್ಶನವಾಯಿತು. ಸುತ್ತು ಮುತ್ತು ಎಲ್ಲಾ ನೋಡಿದೆವು.
--
--
ಸಮುದ್ರ ಕಿನಾರೆಯಲ್ಲಿರುವ ಈ ದೇವಾಲಯ ಬಹಳ ಆಕರ್ಷಣೀಯವಾಗಿದೆ. ಇಲ್ಲಿರುವ ಬೃಹತ್, ಶಿವನ ಮೂರ್ತಿ ನಮ್ಮನ್ನು ಬೆರಗು ಗೊಳಿಸುತ್ತದೆ ಮಾತ್ರವಲ್ಲ ಬಹಳ ದೂರದವರೆಗೂ ಕಾಣಿಸಿಕೊಂಡು ಭಕ್ತರನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿನ ಪರಿಸರವು ಬಹಳ ಶುಚಿಯಾಗಿದ್ದು ಮನಸ್ಸಿಗೆ ಆನಂದವನ್ನು ಕೊಡುತ್ತದೆ. ಮುರುಡೇಶ್ವರನ ಪ್ರಸಾದ ಭೋಜನ ಉಂಡು ನಾವು ಕುಮಟಾ ಗೆ ಬಂದೆವು. ಅಲ್ಲಿ ಬಸ್ಸು ನಿಲ್ದಾಣದಲ್ಲಿ ವಿಚಾರಿಸಿದಾಗ ಯಾಣಕ್ಕೆ ಬೆಳಗ್ಗೆ ಒಂಬತ್ತು ಗಂಟೆಗೆ ಬಸ್ಸು ಇದೆ ಅಂತ ತಿಳಿಯಿತು. ಹಾಗಾಗಿ ನಾವು ಗೋಕರ್ಣಕ್ಕೆ ಹೋದೆವು.
--

--
ಅಲ್ಲಿ ಸಮುದ್ರ ಕಿನಾರೆಯಲ್ಲಿ ಸೂರ್ಯಾಸ್ತ ನೋಡಿಕೊಂಡು ಮಹಾಬಲೇಶ್ವರನ ದರ್ಶನ ಮಾಡಿಕೊಂಡು ರಾತ್ರಿ ಅಲ್ಲೇ ಒಂದು ಮನೆಯ ದೊಡ್ಡ ಹಾಲ್ ಬಾಡಿಗೆಗೆ ಪಡಕೊಂಡು ಚೆನ್ನಾಗಿ ನಿದ್ರಿಸಿ ಮರುದಿನ ಮುಂಜಾನೆ ಪುನಃ ಕುಮಟಾ ತಲುಪಿದೆವು.
ಕುಮಟಾದಿಂದ ಯಾಣಕ್ಕೆ ಸುಮಾರು 26 k.m. ಪ್ರಯಾಣಿಸಬೇಕು, ಸಿರ್ಸಿಯಿಂದಲೂ ಯಾಣಕ್ಕೆ ಬರಬಹುದು ಆದರೆ ಸುಮಾರು 45 k.m. ದೂರವಿದೆ. ಚಾರಣಿಗರಿಗಾದರೆ ಕಾಡೊಳಗಿನ ಏರಿಳಿತದ ಕಷ್ಟಕರವಾದ ದಾರಿಯೂ ಇದೆ.  
ಒಂಬತ್ತು ಗಂಟೆಗೆ ಬರಬೇಕಾದ ಬಸ್ಸು ಹತ್ತೂವರೆಗೆ ಬಂತು, ಎಲ್ಲರೂ ಕುಳಿತುಕೊಂಡೆವು. ಸುಮಾರು ದೂರ ಹೋದಮೇಲೆ ಬಸ್ಸಿನ ಕಂಡಕ್ಟರ್ ಬಂದು ಟಿಕೆಟ್ ಕೊಡಲು ಬಂದ. ಆಗಷ್ಟೇ ನಮಗೆ ಆಘಾತವಾದದ್ದು, ಈ ಬಸ್ಸು ಕೆಲ ತಿಂಗಳಿಂದ ಯಾಣದವರೆಗೆ ಹೋಗುವುದಿಲ್ಲ, ಅಲ್ಲೇ ಯಾವುದೋ ಒಂದು ಹಳ್ಳಿಯವರೆಗೆ ಮಾತ್ರ ಹೋಗುವುದು ಅಂತ. ಮಾರ್ಗ ರಿಪೇರಿಯಲ್ಲಿರುವ ಕಾರಣ ಬಸ್ಸು ಹೋಗುವುದಿಲ್ಲವಂತೆ. ಬಸ್ಸಿನ ಬೋರ್ಡಿನಲ್ಲಿ ಗಡದ್ದಾಗಿ ಕುಮಟಾ--ಯಾಣ ಅಂತ ಬರೆದಿದ್ದರು. ಹಿಂದಿನ ದಿನ ಬಸ್ ನಿಲ್ದಾಣದಲ್ಲಿ ವಿಚಾರಿಸುವಾಗ ಸಹಾ ಯಾಣದವರೆಗೆ ಬಸ್ಸು ಹೋಗುತ್ತದೆ ಎಂದಿದ್ದರು. ಕೊನೆಯ ಪಕ್ಷ ಬಸ್ಸು ಹೊರಡುವ ಮೊದಲೇ ಈ ವಿಷಯ ತಿಳಿಸಿದ್ದರೆ ಬೇರೆ ವಾಹನವನ್ನಾದರೂ ಗೊತ್ತುಮಾಡಿಕೊಂಡು ಹೋಗಬಹುದಾಗಿತ್ತು. ನಮ್ಮ ಹಾಗೆ ಇನ್ನೂ ಕೆಲವರು ಬೇಸ್ತು ಬಿದ್ದಿದ್ದರು. ನಮ್ಮ ಪೇಚಾಟ ನೋಡಿ ನಮ್ಮ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಹುಡುಗ ಹೇಳಿದ- ಏನು ಯೋಚಿಸಬೇಡಿ ಸಾರ್, ನಮಗೆ ಅಲ್ಲಿ ಅಂಗಡಿ ಇದೆ ಮತ್ತು ಜೀಪು ಸಹಾ  ಇದೆ, ನಿಮಗೆ ಬೇಕಾದರೆ ನಾನು ಏರ್ಪಾಡು ಮಾಡಿಕೊಡುತ್ತೇನೆ ಎಂದಾಗ ನಮ್ಮ ಆತಂಕ ಕಡಿಮೆ ಆಯಿತು. ಯಾಕೆಂದರೆ ಆಲ್ಲಿಂದ ಮುಂದೆ ಎಂಟು k.m.ಹೋಗಬೇಕಾಗಿತ್ತು. ಮಕ್ಕಳು, ಪ್ರಾಯದವರು ಎಲ್ಲರನ್ನು ಕಟ್ಟಿಕೊಂಡು ಯಾಣಕ್ಕೆ  ಹೋಗಿ ತಿರುಗಿ ಬರಲು ಸಾಧ್ಯವೇ ಇರಲಿಲ್ಲ. ಅಂತೂ ಸೊಂಡಳ್ಳಿಯಲ್ಲಿ  ಬಸ್ಸು ಇಳಿದೆವು. ಸ್ವಲ್ಪ ಹೊತ್ತಿನಲ್ಲಿ ನಮಗಾಗಿ ಜೀಪು ಬಂತು. ಆಹಾ ಎಂಥಹಾ  ಲಕ್ಷುರಿ ಜೀಪು!
---
--
ಅಲ್ಲಿದ್ದ ಕೆಲವರೆಲ್ಲಾ ಸಿಕ್ಕಿದ ಲಾರಿ ಹತ್ತಿ ಹೋದರು, ಕೆಲವರು ನಡೆದೇ ಹೊರಟರು. ಪಾಪ ನಮ್ಮೊಂದಿಗೆ ಬೆಂಗಳೂರಿನ ದಂಪತಿಗಳು ಮತ್ತು ಅವರ ಮಗು ಅಲ್ಲಿ ಉಳಿದಿದ್ದರು. ಸರಿ ಹೇಗಾದರೂ ಮಾಡಿ ಎಲ್ಲರನ್ನೂ ತನ್ನೊಳಗೆ ತುಂಬಿಕೊಂಡಿತು ನಮ್ಮ ವಾಹನ. ಇದಲ್ಲದೇ ಅದರೊಳಗೆ ಮೊದಲೇ ತುಂಬಿರುವ ತಂಪು ಪಾನಿಯದ ಕ್ರೆಟರ್ ಗಳೂ ಟಾಪ್ ನಲ್ಲಿ ಹಾಕಿದ್ದ ಪೈಪು  ಇನ್ನಿತರ ಸಾಮಗ್ರಿಗಳಿಂದ ತುಂಬಿ ಹೋಗಿತ್ತು. ನಾವೆಲ್ಲಾ ಅದರೊಳಗೆ ಹೇಗೆ  ಹಿಡಿಸಿದೆವು? ಎಂಬುದೇ  ನಮಗೆ ಸೋಜಿಗ! ಪ್ರಯಾಣ ಮುಂದುವರೆಯಿತು. ಧೂಳು ತುಂಬಿದ ಹಳ್ಳ ದಿಣ್ಣೆಗಳ   ಮಣ್ಣಿನ ಮಾರ್ಗ. ಅಲ್ಲಲ್ಲಿ ರಿಪೇರಿ ಕೆಲಸ ನಡೆದಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಪುಟ್ಟ ಅಂಗಡಿಗಳಿಗೆ ತಂಪು ಪಾನೀಯ, ಮತ್ತಿತರ ಸಾಮಾನುಗಳನ್ನು ಇಳಿಸಿಕೊಂಡು ಮುಂದೆ ಹೋಗುತ್ತಾ ಇತ್ತು ನಮ್ಮ ಜೀಪು. ಸಾಮಾನು ಖಾಲಿ ಆದ ಹಾಗೆ ಕಾಲುಗಳನ್ನು ಸ್ವಲ್ಪ ಚಾಚಲು ಸಾಧ್ಯವಾಯಿತು.
ಅಲ್ಲೊಂದೆಡೆ ಮಾರ್ಗ ರಿಪೇರಿ ಭರ್ಜರಿಯಾಗಿ ಸಾಗುತಿತ್ತು, ಅಲ್ಲಿ ಮಣ್ಣಿನಲ್ಲಿ ನಮ್ಮ ಜೀಪಿನ ಚಕ್ರ ಹೂತು ಹೋಯಿತು, ಮೇಲೆ ಏಳುವುದೇ ಇಲ್ಲ, ಆಮೇಲೆ ಅದು ಸ್ಟಾರ್ಟ್ ಆಗುವುದನ್ನು ಸಹಾ  ನಿಲ್ಲಿಸಿಯೇ ಬಿಟ್ಟಿತು. ಇನ್ನೂ ಸುಮಾರು ದೂರ ಹೋಗಬೇಕು. ನಾವೆಲ್ಲಾ ಇಳಿದೆವು ಜೀಪನ್ನು ತಳ್ಳಲು ನೋಡಿದೆವು, ಊಹುಂ ನಮ್ಮಿಂದ ಆಗಲೇ ಇಲ್ಲ. ಆಮೇಲೆ ಅಲ್ಲಿದ್ದ JCB ಯ ಸಹಾಯ ಕೇಳಿದೆವು. ಆ ಯಂತ್ರ ಬಂದು ನಮ್ಮ ಜೀಪನ್ನು ತನ್ನ ಸೊಂಡಿಲಿನಿಂದ ಮುಂದೆ ತಳ್ಳಿ ಸರಿ ದಾರಿಗೆ ತಂದು ನಿಲ್ಲಿಸಿತು. ನಮ್ಮ ಡ್ರೈವರ್ ಏನೇನೋ  ಮಾಡಿ ಸ್ಟಾರ್ಟ್ ಮಾಡಿದ. ಮತ್ತೆ ಎಲ್ಲರೂ ಅದರೊಳಗೆ ತುಂಬಿಕೊಂಡೆವು.
----

----


ಅಂತೂ ಯಾಣಕ್ಕೆ ಬಂದೆವು. ಜೀಪಿನವನು ಸಂಜೆಗೆ ಬಂದು ನಮ್ಮನ್ನು ಕರೆದೊಯ್ಯುತ್ತೇನೆ ಅಂತ ಹೇಳಿ ಹೊರಟು ಹೋದನು. ನಮಗೆ ಇನ್ನೂ ಮೂರು k.m. ನಡೆಯಬೇಕಾಗಿತ್ತು. ಆದರೆ ಯಾಣದ ಹತ್ತಿರ ಬಂದ ಹುರುಪಿನಲ್ಲಿ ಎಲ್ಲರೂ ಉತ್ಸಾಹದಿಂದ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಸಹ್ಯಾದ್ರಿಯ ಕಾಡು, ಅಲ್ಲಲ್ಲಿ ನೀರಿನ ಹರಿವು, ಜೀರುಂಡೆಯ ನಾದ, ತಂಪಾದ ವಾತಾವರಣ!
--
--
ಜೀಪಿನ 'ಸುಖಪ್ರಯಾಣವನ್ನು' ಪ್ರಕೃತಿ ಮರೆಸಿತ್ತು. ಅಲ್ಲಲ್ಲಿ ಸ್ವಲ್ಪ ವಿಶ್ರಮಿಸಿಕೊಂಡು ಕಾಡಿನ ಸೊಬಗನ್ನು ನೋಡುತ್ತಾ ಹೋಗುತಿದ್ದಂತೆ ನಮಗೆ ದಾರಿ ಸವೆದದ್ದೇ ತಿಳಿಯಲಿಲ್ಲ.   
--
--
ಅಗೋ ಅಲ್ಲಿ ಯಾಣ ಅಂತ ನಮ್ಮಲ್ಲಿ ಯಾರೋ ಕೂಗಿದರು. ಎಲ್ಲರೂ ಮೇಲೆ ನೋಡುವಾಗ ನಮಗೆ ಕರಿ ಕಲ್ಲಿನ ಚೂಪಾದ ಒಂದು ಶಿಖರ ಕಾಣಿಸಿತು,ಅದೇ ಮೋಹಿನಿ ಶಿಖರ! ಅರಣ್ಯದ ಹಸಿರಿನ ಮಧ್ಯದಿಂದ ತಲೆ ಎತ್ತಿ ನಿಂತಿದೆ ಯಾಣದ ಅತ್ಯಂತ ಸುಂದರ ಶಿಖರ.
----

----
ಮುಂದೆ ಹೋಗುತಿದ್ದಂತೆ ಮೇಲೆ ಏರಲು ಕಟಾಂಜನವಿರುವ ಮೆಟ್ಟಲುಗಳು , ಅದನ್ನು ಏರಿ ಹೋದಾಗ ಮೋಹಿನಿಯ ಸುಂದರ ಆಕೃತಿ ಗೋಚರಿಸುತ್ತದೆ. ಈ ಶಿಖರವು ಸುಮಾರು ಮುನ್ನೂರು ಅಡಿಗಳಷ್ಟು ಎತ್ತರವಿದೆ. ಅಲ್ಲೇ ವಿಚಿತ್ರಾಕಾರದ ಬಂಡೆಗಳು ಗುಹೆಗಳು ಎಲ್ಲಾ ಇವೆ.



ವಿಶಾಲವಾದ ಒಂದು ದೊಡ್ಡ ಬಂಡೆಯ ಅಡಿಯಲ್ಲಿ ನಾವು ಹಾದು ಹೋಗುತಿದ್ದೇವೆ. ಕೆಲವರು ಅದನ್ನು ಗೋವರ್ಧನಗಿರಿ ಎಂಬಂತೆ ಕಿರುಬೆರಳಿನಿಂದ ಎತ್ತಿ ಹಿಡಿದು ಫೋಟೋ ತೆಗೆಸಿಕೊಂಡರು.       
--
--
ಮತ್ತೆ ಮುಂದುವರೆದಂತೆ ನಮಗೆ ತಣ್ಣನೆಯ ನೀರಿನ ಆಸರೆಯೊಂದು ಸಿಕ್ಕಿತು, ನೀರು ಕುಡಿದು ಮುಂದೊತ್ತಿದಾಗ ಯಾಣದ ಪ್ರಮುಖ ಶಿಖರವಾದ ಭೈರವ ಶಿಖರದ  ದರ್ಶನವಾಗುತ್ತದೆ. ಅಬ್ಭಾ ಏನು ಗಾಂಭೀರ್ಯ! ಎಷ್ಟೊಂದು ಸುಂದರ! ಪ್ರಕೃತಿ ನಿರ್ಮಿಸಿದ ಪರಶಿವನ ನಿಜ ರೂಪವೇ ಇದು. ನಾವು ಮನದಲ್ಲಿ ಹೇಗೆ ಕಲ್ಪಿಸುತ್ತೇವೋ ಹಾಗೆ ಇದು ರೂಪುಗೊಳ್ಳುತ್ತದೆ. ಸುತ್ತಲೂ ದಟ್ಟವಾದ ಹಸಿರು  ಕಾಡು, ನಿಶಬ್ಧ, ನೀರವ, ಚುಮು ಚುಮು ಚಳಿ ಬೇರೆ, ಮನಸ್ಸು ಪ್ರಕೃತಿಯಲ್ಲಿ ಲೀನವಾಗಿದೆ.
--
--
ಭೈರವೇಶ್ವರ ಪರ್ವತ ಶಿಖರವು ಸುಮಾರು ನಾನ್ನೂರು ಅಡಿಗಳಷ್ಟು ಎತ್ತರವಿದ್ದು ಇದರ ತಳಭಾಗದ ದೇವಸ್ಥಾನದಲ್ಲಿ ಸ್ವಯಂಭು ಲಿಂಗ ರೂಪಿಯಾದ ಶಿವಲಿಂಗವಿದೆ, ಲಿಂಗದ ಮೇಲೆ ಪ್ರಕೃತಿಯೇ ನೀರನ್ನು ತೊಟ್ಟಿಕ್ಕುತ್ತದೆ. ಈ ನೀರು ಎಲ್ಲಿಂದ ಬರುತ್ತದೆ ಅಂತ ಯಾರಿಗೂ ತಿಳಿದಿಲ್ಲ. ಈ ಪರ್ವತದ ಕಲ್ಲಿನಲ್ಲಿ, ಸುಣ್ಣ, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶಗಳಿವೆಯಂತೆ. ಭಸ್ಮಾಸುರ ಮೋಹಿನಿಯರ ಕಥೆಯನ್ನು ಈ ಪರ್ವತಗಳಿಗೆ ಜೋಡಿಸಿದ್ದಾರೆ. ಗಾಳಿ, ಮಳೆ, ಬಿಸಿಲು ಎಲ್ಲದಕ್ಕೂ ಮೈಯೊಡ್ಡಿ ನಿಂತ ಈ ಪರ್ವತಗಳು ಅದೆಷ್ಟು ಕಾಲದಿಂದ ಹೀಗೇ ನಿಂತಿವೆಯೋ ಏನೋ. ತನ್ನ ಮೈಯನ್ನೆಲ್ಲಾ ರೂಕ್ಷವನ್ನಾಗಿಸಿಕೊಂಡು ಬೇರೆಲ್ಲೂ ಕಂಡರಿಯದ ತೆರದಲ್ಲಿ  ಸಿಂಗರಿಸಿಕೊಂಡು  ಪ್ರವಾಸಿಗರನ್ನು, ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ.
ದೇವರ  ದರ್ಶನ  ಮಾಡಿ ಅಲ್ಲೇ ಪಕ್ಕದಲ್ಲಿದ್ದ ಒಂದು ಪಡಸಾಲೆಯಲ್ಲಿ ಕುಳಿತು ನಾವು ತಂದಿರುವ ಬುತ್ತಿ ಬಿಚ್ಚಿದೆವು. ಬಾಳೆ ಎಲೆಯಲ್ಲಿ, ಕೊಟ್ಟಿಗೆ, ಚಕ್ಕುಲಿ, ಲಾಡು, ಹೋಳಿಗೆ, ಬಾಳೆಹಣ್ಣು ಎಲ್ಲಾ ಸೇರಿದಾಗ  ಗಡದ್ದಾದ ಒಂದು ಔತಣವೇ ಆಯಿತು. ತಂಪಾದ ಲಿಂಬೆ ಶರಬತ್ತು ಕುಡಿದು ಸ್ವಲ್ಪ ವಿಶ್ರಮಿಸಿ ಆಮೇಲೆ ಯಾಣವನ್ನು ಸರಿಯಾಗಿ ಅವಲೋಕಿಸಲು ಹೋದೆವು. ಪರ್ವತದ ಹಿಂಭಾಗದಲ್ಲಿ ಒಂದು ಗುಹೆಯ ಸ್ವರೂಪವಿದ್ದು ಅಲ್ಲಿಗೆ ಹೋಗಲು ಮೆಟ್ಟಲುಗಳು ಇವೆ. ಅದನ್ನೇರಿದರೆ ನಾವು ಯಾಣದ ಗರ್ಭದ ಒಳಗಡೆ ಹೋಗಲು ಸಾದ್ಯವಾಗುತ್ತದೆ. ದೊಡ್ಡ ಬಂಡೆ ಮಧ್ಯ ಸೀಳು ಬಿಟ್ಟಾಗ ಆಗುವ ಕೊರಕಲಾದ ಜಾಗ!
---

---

ಮೇಲೆ ಕಿರಿದಾದ ಸಂದಿಯಲ್ಲಿ ಆಕಾಶ ಕಾಣಿಸುತ್ತದೆ. ಈ ಸಂದಿಯಲ್ಲೇ ಒಂದೆರಡು ಮರಗಳು ಸಹಾ ಬೆಳೆದು ನಿಂತಿವೆ! ಅಂಕು ಡೊಂಕಾದ ಈ ದಾರಿಯಲ್ಲಿ ಆಟವಾಡಲು ತುಂಬಾ ಚೆನ್ನಾಗಿರುತ್ತದೆ.
--

-- 

ಆದರೆ ಹುಷಾರಾಗಿರಬೇಕು, ಇಲ್ಲಿನ ಕತ್ತಲ ಸಂದಿಗಳಲ್ಲಿ ದೊಡ್ಡ ದೊಡ್ಡ ಹೆಜ್ಜೇನು ಗೂಡುಗಳಿವೆ, ಅವಕ್ಕೆ ಏನಾದರೂ  ತೊಂದರೆ ಆದಲ್ಲಿ ಅಪಾಯ ತಪ್ಪಿದ್ದಲ್ಲ.  ಆದರೆ ಇಂತಹ ದುರ್ಗಮ ಜಾಗ ನೋಡುವುದೇ ಒಂದು  ಸಾಹಸ.  ಇಲ್ಲಿಂದ ಶ್ರಮ ಪಟ್ಟು ಮೇಲೆ ಹತ್ತಿದರೆ ಶಿಖರದ ತುದಿಯವರೆಗೆ ಏರಬಹುದಂತೆ.  ಆದರೆ ಇದು ಪರಿಣಿತರಿಗೆ ಮಾತ್ರ ಸಾಧ್ಯ. 
ಹಾಗೇನೆ ಮುಂದುವರಿದಲ್ಲಿ  ನಾವು ಈ ಗುಹಾ ಮಾರ್ಗದ ಇನ್ನೊಂದು ಬದಿಯಲ್ಲಿರುತ್ತೇವೆ.
---

-- 

ಅಲ್ಲಿ ಇಳಿಯಲು ಕಡಿದಾದ ದಾರಿಯಿದೆ. ಅದರಲ್ಲಿಳಿದು ಸ್ವಲ್ಪ ನಡೆದರೆ ನಾವು ಭೈರವ ಶಿಖರದ ಮುಂಭಾಗಕ್ಕೆ ಬಂದಿರುತ್ತೇವೆ. ಆಲ್ಲಿಂದ ತಲೆ ಎತ್ತಿ ನೋಡಿದಾಗ ತುಂಬಾ ಮೇಲೆ, ನೂರಾರು ಹೆಜ್ಜೇನು ಹುಟ್ಟುಗಳು ತೂಗುತ್ತಿರುವುದು ಕಾಣಿಸುತ್ತದೆ.
---

--

ಮತ್ತೊಮ್ಮೆ ಸುತ್ತು ಮುತ್ತು ಅಲೆದು, ಕಾಡೊಳಗೆ ನುಗ್ಗಿ ಆನಂದಿಸಿದೆವು, ಬೇರೆ ಬೇರೆ ಕೋನಗಳಿಂದ ಯಾಣದ ಸೊಬಗನ್ನು ಸೆರೆ ಹಿಡಿದೆವು. ಅಲ್ಲೇ ಕೆಳಗಡೆ ನೀರು ಹರಿಯುತಿತ್ತು. ಅಲ್ಲಿ, ನಮ್ಮ ಕೆಲವರು ಸ್ನಾನ ಮಾಡಿದರು. ಮತ್ತೊಮ್ಮೆ ತಿಂಡಿ ಸಮಾರಾಧನೆ ಆಯಿತು.
---

---

ಇನ್ನೇನು ಹೊರಡಲು ಹೊತ್ತಾಯಿತು, ಆದರೂ ಹೊರಡುವ ಆತುರ ಯಾರಿಗೂ ಇಲ್ಲ. ಅಲ್ಲೇ ಒಂದು ರಾತ್ರಿ ಕಳೆದರೆ ಚೆನ್ನಾಗಿರುತಿತ್ತು ಎಂತ ಎಲ್ಲರ ಆಸೆ, ಆದರೆ ಚಳಿ ಜಾಸ್ತಿ ಆಗತೊಡಗಿತ್ತು, ಮತ್ತು ಜೀಪು ಸಹಾ ನಮ್ಮನ್ನು ಕಾಯುತ್ತಿರಬಹುದು. ಹಾಗಾಗಿ ಮೆಲ್ಲನೆ ಹೊರಟೆವು. ಕೊನೆಯ ಬಾರಿಗೆ ಒಮ್ಮೆ ಮೋಹಿನಿಯನ್ನು ನೋಡಲು ಆಸೆ!

--

--
ಹಲವಾರು ದಿಕ್ಕಿನಿಂದ ಅವಳ ಫೋಟೋ ಸೆರೆಹಿಡಿದೆವು. ಇದೇ ತರಹದ ಚಿಕ್ಕ ಪುಟ್ಟ ಶಿಲಾ ಶಿಖರಗಳು ಈ ಕಾಡಿನಲ್ಲಿ ತುಂಬಾ ಇದೆಯಂತೆ. ಅದನ್ನೆಲ್ಲಾ ನೋಡಲು ಮತ್ತು ಇಲ್ಲಿ ಒಂದು ರಾತ್ರಿ ಕಳೆಯಲು ಇನ್ನೊಂದು ಸಲ ಖಂಡಿತಾ ಬರಬೇಕು ಎಂದು ನಿಶ್ಚಯಿಸಿ ಆಲ್ಲಿಂದ ಹೊರಟೆವು.
ಕೊನೆಯ ಬಾರಿಗೆ ಎಲ್ಲರೂ ಭೈರವೇಶ್ವರನ ಮುಂದೆ ನಿಂತು ಫೋಟೋ ತೆಗೆಸಿಕೊಂಡೆವು.

---

---

ಈಗ ನಾವು ಕೆಳಗೆ ಇಳಿಯ ಬೇಕಾಗಿರುವುದರಿಂದ ಆಯಾಸವಿಲ್ಲದೆ ನಮ್ಮ ಜೀಪು ನಿಂತಿರುವಲ್ಲಿಗೆ ತಲುಪಿದೆವು. ಮತ್ತೆ ಅದೇ 'ಸುಖ ಪ್ರಯಾಣ'. ಜೀಪಿನಿಂದ ಇಳಿದು ಅಲ್ಲೇ ಅಂಗಡಿಯಲ್ಲಿ ಕಾಫಿ ಕುಡಿದು ಬಸ್ಸು ಹತ್ತಿ ಕುಮಟಾ ಬಂದು ಸೇರಿದೆವು.
ಆಲ್ಲಿಂದ ರಾತ್ರಿ ಬಸ್ಸಿನಲ್ಲಿ ಹೊರಟು, ಮಂಗಳೂರಿಗೆ ತಲುಪಿ ಆಲ್ಲಿಂದ ಕಾಸರಗೋಡಿಗೆ ಬಂದೆವು.