Friday, 29 May 2020

Thiruannaamalai


ತಿರುಅಣ್ಣಾಮಲೈ

ಈ ಯಾತ್ರೆಯು ಸುಮಾರು 13 ವರ್ಷಗಳ ಹಿಂದೆ ಮಾಡಿದ್ದಾಗಿದೆ. ನಾವು ಹೋದದ್ದು ಜೂನ್ 19 2007ರಂದು, ಬರೆಯಲು ಶುರು ಮಾಡಿದ್ದು ಇವತ್ತು ಅಷ್ಟೆ. ನನ್ನ ನೆನಪಿನ ಭಂಡಾರದಿಂದ ಆಯ್ದು ಇಲ್ಲಿ ಬರೆದಿದ್ದೇನೆ. ತಮಿಳುನಾಡಿನ ತಿರುಅಣ್ಣಾಮಲೈಗೆ ಮೊದಲ ಭೇಟಿ. ಮುಂಜಾನೆ ಮನೆಯಿಂದ ಹೊರಟೆವು. ನಾನು ಕಸ್ತೂರಿ ಅವಳ ಸಹೋದರ ಮುರಳಿ, ಅವನ ಮಡದಿ ಸೀಮಾ, ಮಕ್ಕಳು ಸ್ನೇಹಾ ಸಚಿನ್ ಮತ್ತು ನಮ್ಮ ಅತ್ತೆ ಸಂಜೀವಿ ಇಷ್ಟು ಜನ ಮಾರುತಿ ಆಲ್ಟೊ ಕಾರಲ್ಲಿ ಪ್ರಯಾಣ. ಇಲೆಕ್ಟ್ರೊನಿಕ್ ಸಿಟಿ ದಾಟಿ ಹೊಸೂರು ಚೆಕ್ ಪೊಸ್ಟ್ ತಲುಪಿದೆವು.ಅಲ್ಲಿ ಒಂದು ಗೂಡಂಗಡಿಯಲ್ಲಿ ಚಹಾ ಕುಡಿದೆವು. ಸ್ವಲ್ಪ ವಿಶ್ರಮಿಸಿ ಮುಂದೆ ಸಾಗಿದೆವು. ಬೆಂಗಳೂರಿನಿಂದ ತಿರುಅಣಾಮಲೈ ಗೆ ಸುಮಾರು 210 ಕಿ.ಮಿ. ದೂರ. ನೇರವಾದ ದಾರಿ. ತಿರುಅಣ್ಣಾಮಲೈಗೆ 2 ವರ್ಷದ ಹಿಂದೊಮ್ಮೆ ಹೋಗಿದ್ದೆವು. ನಿನ್ನೆ ರಾತ್ರಿ ಸ್ವಲ್ಪ ಮಳೆಯೂ ಆಗಿದ್ದರಿಂದ ಉತ್ತಮ ಹವೆ, ಪ್ರಯಾಣ ಸುಖವಾಗಿತ್ತು. ಮುಂದೆ ಬಲಕ್ಕೆ ತಿರುಗಿ,  ಕೃಷ್ಣಗಿರಿಗೆ ಹೋಗುವ ರಸ್ತೆ ಹಿಡಿದೆವು. ರಸ್ತೆಯ ಇಕ್ಕೆಲಗಳಲ್ಲೂ ಬತ್ತದ ಹೊಲಗಳು, ಅದರಾಚೆಗೆ ಉನ್ನತವಾದ ಬೆಟ್ಟಗಳು ಬಹಳ ರಮ್ಯ ನೋಟ. ರಸ್ತೆಯ ಬಲಗಡೆ ಮಲೆ ಮಹದೇಶ್ವರ ಬೆಟ್ಟ ಹರವಿಕೊಂಡಿತ್ತು. ಹೊಟ್ಟೆ ತಾಳ ಹಾಕುತಿತ್ತು. ಒಂದೆಡೆ ಬಹಳ ಪ್ರಶಸ್ತವಾದ ಜಾಗದಲ್ಲಿ ಕಾರು ನಿಲ್ಲಿಸಿದೆವು. 

ಮನೆಯಿಂದ ಕಟ್ಟಿಕೊಂಡು ತಂದಿದ್ದ ಬುತ್ತಿ, ನೀರು ಎಲ್ಲ ತೆಗೆದುಕೊಂಡು ಸಮೀಪದಲ್ಲೆ ಇದ್ದ ಹರವಾದ ಬಂಡೆಯಲ್ಲಿ ಕುಳಿತು ಬೆಳಗ್ಗಿನ ನಾಷ್ಟಾ ಮುಗಿಸಿದೆವು




. ಸ್ವಲ್ಪ ಹೊತ್ತು ಅಲ್ಲೇ ಕಳೆದು ಮುಂದೆ ಪ್ರಯಾಣಿಸಿದೆವು. ಸುಮಾರು 10 ಕಿ.ಮಿ.ಸಾಗಿದಾಗ ರಸ್ತೆಯ ಪಕ್ಕದಲ್ಲಿ ಹಲವು ಬಸ್ ಗಳು ನಿಂತಿದ್ದವು. ಏನೆಂದು ನೋಡಿದರೆ ಅಲ್ಲಿ ಮಾವಿನ ಹಣ್ಣಿನ ವ್ಯಾಪಾರ ನಡೆದಿತ್ತು. ಅಲ್ಲಿ ಮಾವಿನ ಹಣ್ಣಿನ ಮಂಡಿ ಇದೆ. ಹಿಂದಿನ  ಸಲವೂ ಇಲ್ಲಿಂದ ಮಾವಿನ ಹಣ್ಣು ಕೊಂಡಿದ್ದೆವು. ಅಲ್ಲಿ ಮಾರಟ ನಡೆಸುತಿದ್ದ ಒಬ್ಬ ಹುಡುಗನಿಗೆ ನಮ್ಮ ಗುರುತು ಸಿಕ್ಕಿತು. ಅವನು ನಮ್ಮನ್ನು ಸ್ವಲ್ಪ ದೂರದಲ್ಲಿದ್ದ ಮಂಡಿಗೆ ಕರೆದೊಯ್ದನು. ಅಲ್ಲಿ ಹಲವಾರು ಬಗೆಯ ಮಾವಿನ ಹಣ್ಣಿನ ರಾಶಿ ಹಾಕಿದ್ದರು. ಇಲ್ಲಿಂದ ಪರ ಊರುಗಳಿಗೆ ಲಾರಿಯಲ್ಲಿ ಹಣ್ಣು ಕಳಿಸುತ್ತಾರೆ. ಸ್ಯಾಂಪಲ್ ಕೇಳಿದರೆ ತಲಾ ಒಂದೊಂದು ಇಡೀ ಹಣ್ಣನ್ನೇ ನಮಗೆ ಕೊಡುತಿದ್ದ. ಅಲ್ಲಿಂದ ಸುಮಾರು 15 ಕಿಲೋ ಮಾವು ಕೊಂಡೆವು. ಬಹಳ ಕಡಿಮೆ ಕ್ರಯ. ಕೊನೆಗೆ ನಮಗಾಗಿ ಬಹಳ ದೊಡ್ಡದಾದ ಒಂದು ಹಣ್ಣನ್ನು ಉಚಿತ ವಾಗಿ ಕೊಟ್ಟನು. ವಾಪಾಸು ಬರುವಾಗ  ಇಲ್ಲಿಗೆ ಬರಲೇ ಬೇಕು ಎಂದು ಆಹ್ವಾನಿಸಿದ ಬೇರೆ. ಅಲ್ಲಿಂದ ಹೊರಟೆವು. ಮುಂದೆ ದಾರಿ ಕವಲೊಡೆಯುತ್ತದೆ. ಸೀದಾ ಹೊದರೆ ಪಾಂಡಿಚೇರಿ, ಎಡಕ್ಕೆ ತಿರುಗಿದರೆ ತಿರುಅಣ್ಣಾಮಲೈ. ಸುಮಾರು 10 ಕಿ,ಮಿ ಇರಬಹುದು.
ದಾರಿಯಲ್ಲಿ ಶ್ರೀ ರಮಣ ಮಹರ್ಷಿ ಆಶ್ರಮ ಸಿಗುತ್ತದೆ. ಅಲ್ಲಿ ಒಳಗಡೆ ಹೋದೆವು. ಇದು ಬಹಳ ಪ್ರಶಾಂತ ಜಾಗ.


 ಅಲ್ಲಿ ರಮಣ ಮಹರ್ಷಿಗಳ ಸಮಾಧಿ ಇದೆ. ಪ್ರಾರ್ಥನಾ ಮಂದಿರ ಇದೆ. ಉದ್ಯಾನವಿದೆ. ಇಲ್ಲೆಲ್ಲಾ ಬಹಳ ನವಿಲುಗಳು ಇವೆ.








 ಇದರ ಹಿಂದುಗಡೆ ಅಣ್ಣಾಮಲೆ ಬೆಟ್ಟವಿದೆ. ಅಲ್ಲೂ ಸಹ ಬಹಳ ನವಿಲುಗಳು ಇವೆಯಂತೆ. ಮರದ ಮೇಲೆ, ಕಟ್ಟಡದ ಮೆಲೆಲ್ಲಾ ನವಿಲುಗಳು ಕುಳಿತಿರುತ್ತವೆ. ಅವಕ್ಕೆಲ್ಲ ಆಶ್ರಮದವರು ಅಹಾರ ಕೊಡುತ್ತಾರೆ.
















ಅಲ್ಲಿ ಸುಮಾರು ಹೊತ್ತು ಕಳೆದು ಅರುಣಾಚಲೇಶ್ವರನ ಸನ್ನಿಧಾನಕ್ಕೆ ಹೋದೆವು.



 ಅಣ್ಣಾಮಲೆ ಎಂಬ ಬೆಟ್ಟದ ಬುಡದಲ್ಲಿ ಬಹಳ ವಿಸ್ತಾರವಾದ ಪ್ರಾಂಗಣವಿರುವ ಈ ದೇವಾಲಯಕ್ಕೆ 4 ಬೃಹತ್ ಗೋಪುರಗಳಿವೆ. ಎಲ್ಲಕ್ಕೂ ಬಿಳಿಯ ಬಣ್ಣ ಹಚ್ಚಿದ್ದಾರೆ. ಹಸಿರು ಪ್ರಕೃತಿಯ ನಡುವೆ ಇದರ ವರ್ಣ ಸಂಯೊಜನೆ ಮನೋಹರವಾಗಿದೆ. 








ನಾವು ಅಲ್ಲಿಗೆ ತಲುಪುವಾಗ ಮಧ್ಯಾಹ್ನದ ಪೂಜೆಯ ಸಮಯವಾಗಿತ್ತು. ಮುಖ್ಯ ದ್ವಾರದಿಂದ ಒಳ ಪ್ರವೇಶಿಸಿದೆವು. ನೇರ ದೇವರ ಪೂಜಾ ಧರ್ಶನಕ್ಕೆ ಹೋದೆವು. ವಿಶೇಷ ರಶ್ ಇರದ ಕಾರಣ ಚೆನ್ನಾಗಿ ದರ್ಶನ ಪಡೆದು ಮಂಗಳಾರತಿ ನೋಡಿ ಪ್ರಸಾದ ಸ್ವೀಕರಿಸಿ ಹೊರ ಬಂದೆವು. ರಾಜಾಂಗಣದಲ್ಲಿ ಒಂದು ಸುತ್ತು ಬಂದೆವು. ಗೋಪುರಗಳನ್ನು ವೀಕ್ಷಿಸಿದೆವು. ಇಲ್ಲಿ ಹಲವಾರು ಗುಡಿಗಳಿವೆ. ಅದರಲ್ಲಿ ಮುಖ್ಯವಾದದ್ದು ಗಣಪತಿ ಗುಡಿ. ಬಹಳ ಕಲಾತ್ಮಕ ಗುಡಿಯಲ್ಲಿ ಸುಂದರವಾದ ವಿಘ್ನೇಶ್ವರನ ಮೂರ್ತಿ. ನೋಡಿದಷ್ಟೂ ಇನ್ನೂ ನೋಡಬೇಕು ಎನ್ನಿಸುವ ಸುಂದರ ವಿಗ್ರಹ. ಇಲ್ಲಿ ದೊಡ್ಡದೊಂದು ಕಲ್ಯಾಣಿ ಇದೆ. ಇದರ ನೀರು ಔಷದ ಗುಣವುಳ್ಳದ್ದು ಎನ್ನುತ್ತಾರೆ. ನವಂಬರ್ ಡಿಸೆಂಬರ್ ತಿಂಗಳಲ್ಲಿ ಬರುವ ಕಾರ್ತಿಕ ಹುಣ್ಣಿಮೆಯಂದು
ಇಲ್ಲಿ ವಿಶೇಷ ಜಾತ್ರೆ. ದೇವಾಲಯದಲ್ಲಿ ದೀಪಗಳನ್ನು ಉರಿಸಿ ಅಲಂಕರಿಸುತ್ತಾರೆ ಮಾತ್ರವಲ್ಲ ಎದುರಿನ ಬೆಟ್ಟದಲ್ಲೂ ದೀಪ ಹಚ್ಚುತ್ತಾರೆ. ಬೆಟ್ಟದ ತುತ್ತ ತುದಿಯಲ್ಲಿ ದೊಡ್ಡ ದೀವಟಿಗೆಯ ಆಕಾರದಲ್ಲಿ ಇರುವ ದೀಪವನ್ನು ಉರಿಸುತ್ತಾರೆ. ಇದು ಹಲವಾರು ಕಿ.ಮಿ. ದೂರದವರೆಗೂ ಕಾಣಿಸುತ್ತದೆ. ಕೆಲವರು ಅಂದು 14 ಕಿ.ಮಿ. ಸುತ್ತಳತೆ ಇರುವ ಬೆಟ್ಟದ ಪರಿಕ್ರಮ ಸಹಾ ಮಾಡುತ್ತಾರೆ. ಸಾವಿರಾರು ಜನ ನೆರೆಯುತ್ತಾರೆ.
ಈ ದೇವಾಲಯವು 9ನೇ ಶತಮಾನದಲ್ಲಿ ಚೋಳರ ಆಳ್ವಿಕೆಯಲ್ಲಿತ್ತು. ನಂತರ ಬಂದ ಪಲ್ಲವರು, ಆದಿ ಹೊಯ್ಸಳರು, ವಿಜಯನಗರದವರು, ಹೈದರ್-ಟಿಪ್ಪು ಮತ್ತು ಇಂಗ್ಲಿಷರ ಆಳ್ವಿಕೆಯಲ್ಲಿತ್ತು. 7ನೇ ಶತಮಾನದಲ್ಲಿ ಈ ದೇವಾಲಯದ ಉಲ್ಲೇಖ ವಿರುವ ಶಾಸನಗಳು ಸಿಕ್ಕಿವೆ. ಬಹಳ ಪುರಾತನ ಕ್ಷೇತ್ರವಿದು.
ನಾವು ಹೊರ ಬಂದು ಪಕ್ಕದಲ್ಲೇ ಇರುವ ಹೋಟೆಲ್ ನಲ್ಲಿ ಊಟ ಮುಗಿಸಿ ಸ್ವಲ್ಪ ಸುತ್ತಾಡಿ ನಂತರ 2 ಘಂಟೆಗೆ
ಪಾಂಡಿಚೇರಿಗೆ ಪಯಣ ಮುಂದುವರಿಸಿದೆವು. ಸರಿ ಸುಮಾರು 100 ಕಿ.ಮಿ. ದೂರ.





Pondicherry


ಪಾಂಡಿಚೇರಿ


ಪಾಂಡಿಚೇರಿ ಅಥವಾ ಪುದುಚೇರಿ ಇರುವುದು ಭಾರತದ ಪೂರ್ವ ಕರಾವಳಿಯಲ್ಲಿ. ಬಂಗಾಳ ಆಖಾತದ ಕಿನಾರೆಯಲ್ಲಿ ತಮಿಳು ನಾಡಿಗೆ ಹೊಂದಿಕೊಂಡಿದೆ. ಇದು ಕೇಂದ್ರಾಡಳಿತ ಪ್ರದೇಶವಾಗಿದ್ದು ಹಿಂದೆ ಫ್ರೆಂಚರ ವಸಾಹತ್ತಾಗಿತ್ತು. ಇವರು 1674 ರಿಂದ 1954 ರ ವರೆಗೆ ಪಾಂಡಿಚೇರಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಇಲ್ಲಿಂದಲೇ ಅವರು ತಮ್ಮ ಇತರ ವಸಾಹತ್ತುಗಳ ಕಾರುಬಾರು ಮಾಡುತಿದ್ದರು. ನಾವು ತಿರು ಅಣ್ಣಾಮಲೈ ನಿಂದ ಹೊರಟು ತಿಂಡಿವನಂ ಮಾರ್ಗವಾಗಿ ಪಾಂಡಿಚೇರಿಗೆ 5 ಘಂಟೆಗೆ ತಲುಪಿದೆವು. ಅರಬಿಂದೊ ಆಶ್ರಮದ ವತಿಯಿಂದ ನಡೆಸುವ ಗೆಸ್ಟ್ ಹೌಸ್ ನಲ್ಲಿ ಮೊದಲೇ ರೂಮ್ ಕಾಯ್ದಿರಿಸಿದ್ದೆವು. ಇದು ಇರುವುದು ರಿಯೊ ರೋಮೆನ್ ರೊಲ್ಯಾಂಡ್ ರಸ್ತೆಯಲ್ಲಿ. ಅಲ್ಲಲ್ಲಿ ವಿಚಾರಿಸುತ್ತಾ ಅಂತೂ ಅಲ್ಲಿಗೆ ತಲುಪಿದೆವು. ನಮಗೆ ಬಹಳ ದೊಡ್ಡದಾದ ಒಂದು ಡಾರ್ಮೆಟರಿ ಕೊಟ್ಟಿದ್ದರು. ಅಲ್ಲಿ ಒಟ್ಟು 10 ಬೆಡ್ ಇದ್ದವು.


 ಸುಮಾರು ಬಾತ್ ರೂಮ್ ಗಳೂ ಇದ್ದು ಅನುಕೂಲವಾಗಿತ್ತು. ಫ್ಯಾನ್ ಗಳೂ ಬಹಳವಿದ್ದವು. ಇದು ನಮಗೆ ಮಾತ್ರ, ಬೇರೆ ಯಾರೂ ಇಲ್ಲಿಗೆ ಬರುವುದಿಲ್ಲ ಅಂತ ಖಾತ್ರಿ ಮಾಡಿಕೊಂಡು ಅಲ್ಲಿ ಉಳಕೊಂಡೆವು. ಅಲ್ಲೇ ಉಪಹಾರ ಗೃಹವೂ ಇದ್ದು ಅಲ್ಲಿ ಕಾಫಿ ಕುಡಿದು ಊರು ಸುತ್ತಲು ಹೋದೆವು. ಪಕ್ಕದ ರಸ್ತೆಯಲ್ಲಿ ಸ್ವಲ್ಪವೇ ನಡೆದಾಗ ಬೀಚ್ ಸಿಗುತ್ತದೆ. ಅಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಒಂದು ಸುಂದರ ಮಂಟಪದಲ್ಲಿ ಸ್ಥಾಪಿಸಿದ್ದಾರೆ.


ರಸ್ತೆಯ ಎಡ ಬದಿ ಫ್ರೆಂಚ್ ವಾರ್ ಮೆಮೊರಿಯಲ್ ಇದೆ.


 ಇನ್ನೂ ಹಲವಾರು ಸರಕಾರೀ ಕಟ್ಟಡಗಳು ಇವೆ. ದೂರದಲ್ಲಿ ಲೈಟ್ ಹೌಸ್ ಕಾಣುತ್ತದೆ. ಆದರೆ ಸಮುದ್ರದ ನೀರಿಗೆ ಇಳಿಯುವಂತಿಲ್ಲ,









 ಅಲ್ಲೆಲ್ಲಾ ಕಲ್ಲು ಬಂಡೆಗಳನ್ನು ಹಾಕಿ ಕಡಲ ಕೊರೆತವನ್ನು ತಡೆಯುವ ಸಲುವಾಗಿ ಹಾಕಿದ್ದಾರೆ. ಬೀಚ್ ನಲ್ಲಿ ಸುಮಾರು ಅಂಗಡಿಗಳು ಇವೆ. ಒಳ್ಳೆಯ ಸುಂದರ ಜಾಗ. ಸೂರ್ಯಾಸ್ಥದ ಸುಂದರ ದೃಶ್ಯ ನಮಗೆ ದೊರೆಯಿತು. ಅಲ್ಲಿಂದ ಹೊರಟೆವು. ಮುಂದೆ ಒಂದು ವಿನಾಯಕ ದೇವಾಲಯ ಮತ್ತು ಇನ್ನೊಂದು ಆಲಯ ದರ್ಶಿಸಿದೆವು.


 ನಂತರ ನಾವು ಹೊದದ್ದು ಅರಬಿಂದೊ ಆಶ್ರಮಕ್ಕೆ. ಪಕ್ಕದಲ್ಲೇ ಇತ್ತು. ತುಂಬಾ ಜನ ವಿದೇಶಿಯರಿದ್ದರು. ಅಲ್ಲಿ ಯೋಗ ಮತ್ತು ಆದ್ಯಾತ್ಮ ವಿಷಯಗಳನ್ನು ಹೇಳಿಕೊಡುತ್ತಾರೆ. ಆರೋವಿಲ್ಲ ಎಂಬ ಇದರ ಇನ್ನೊಂದು ಜಾಗ ಇಲ್ಲಿಂದ ಸ್ವಲ್ಪ ದೂರದಲ್ಲಿದೆಯಂತೆ.ನಮಗೆ ಅಲ್ಲಿಗೆ ಹೋಗಲಾಗಲಿಲ್ಲ. ರಾತ್ರಿಯ ಊಟ ಅಡಯಾರ್ ಆನಂದ ಭವನದಲ್ಲಿ ಮಾಡಿದೆವು. ನಂತರ ರೂಮ್ ಗೆ ಬಂದು ಮಲಕೊಂಡೆವು. ಪಾಂಡಿಚೇರಿಯ ರಸ್ತೆಗಳೆಲ್ಲ ಇಟ್ಟಿಗೆಗಳನ್ನು ಹಾಕಿ ಮಾಡಿದವು. ಇಲ್ಲೆಲ್ಲಾ ಫ್ರೆಂಚ್ ಶೈಲಿಯ ಕಟ್ಟಡಗಳು ಚರ್ಚ್ ಗಳು ನೊಡಲು ಸುಂದರವಾಗಿವೆ.
ಮರುದಿನ ಬೆಳಗ್ಗೆ ಎದ್ದು ಬೀಚ್ ಗೆ ವಾಕಿಂಗ್ ಹೋದೆವು. ಬೀಚ್ ನಲ್ಲಿ ಫ್ರೆಂಚ್ ಗವರ್ನರ್ ಆಗಿದ್ದ ಡ್ಯೂಪ್ಲೆಯ ಪ್ರತಿಮೆ ನೋಡಿದೆವು.






 ಅಲ್ಲಿ ವಾಕಿಂಗ್ ಮುಗಿಸಿ ರೂಮ್ ಗೆ ಬಂದು ಬೆಳಗ್ಗಿನ ನಾಶ್ಟಾ ಅಲ್ಲೇ ಮುಗಿಸಿ ಮುಂದಿನ ಪಯಣಕ್ಕಾಗಿ ಹೊರಟೆವು. ನಮ್ಮ ಇಂದಿನ ಜಾಗ ಚಿದಂಬರಂಗೆ.






Chidambaram


ಚಿದಂಬರಂ

ಪಾಂಡಿಚೇರಿ ಬಿಡುವಾಗಲೇ ಬೆಳಗ್ಗೆ 10 ಘಂಟೆ ಆಯಿತು. ಇಲ್ಲಿಂದ ಸುಮಾರು 65 ಕಿ.ಮಿ. ದೂರ ಚಿದಂಬರಂ ಗೆ. ಕಡಲೂರು ದಾರಿಯಾಗಿ ಸಾಗಿದೆವು. ಹಚ್ಚ ಹಸಿರಾದ ಹೊಲಗಳು ಇಕ್ಕೆಲಗಳಲ್ಲಿ ಕಣ್ಣಿಗೆ ಅಪ್ಯಾಯಮಾನವಾಗಿತ್ತು.



















 ಅಂತೂ 11.45 ಕ್ಕೆ ಅಲ್ಲಿಗೆ ತಲುಪಿದೆವು. ಚಿದಂಬರಂ ನ ನಟರಾಜ ದೇವಾಲಯವು ಮಧ್ಯಾಹ್ನ 12 ಘಂಟೆಗೆ ಮುಚ್ಚುತ್ತದೆ ಎಂದು ತಿಳಿದು ಲಗುಬಗೆಯಿಂದ ಒಳಗೆ ಹೋದೆವು. ಅದಾಗಲೇ ಗರ್ಭ ಗುಡಿಯ ಬಾಗಿಲು ಹಾಕಿದ್ದರು. ಅಲ್ಲಿಂದಲೇ ಕೈ ಮುಗಿದೆವು. ಎದುರುಗಡೆ ದೊಡ್ಡದಾದ ಸ್ವರ್ಣ ಲೇಪನಗೊಂಡ ನಟರಾಜನ ಸುಂದರ ಮೂರ್ತಿ. ಇದಕ್ಕೆ ಕನಕ ಸಭಾ ಎನ್ನುತ್ತಾರೆ. ಫೊಟೋ ತೆಗೆಯಲು ಅಲ್ಲಿ ನಿರ್ಭಂಧವಿದೆ.




ಬೇರೆ ಕಡೆ ಯಾರೂ ಇಲ್ಲದ ಜಾಗದಲ್ಲಿ ಕೆಲ ಫೊಟೋ ತೆಗೆದೆ. ಆಗಲೇ ಅಲ್ಲಿನ ಪರಿಚಾರಕ ಮುದುಕನೊಬ್ಬ ನಮ್ಮನ್ನು ಗದರಿಸುತ್ತಾ ಹೊತ್ತಾಯಿತು ಹೊರಗೆ ಹೋಗಿ ಎಂದು ಅಪ್ಪಣೆ ಮಾಡಿದ. ಇನ್ನೇನು ನಾವು ಹೊರ ಬಂದೆವು.







ಇದು ಚೋಳರ ಕಾಲದಲ್ಲಿ ಬಹಳ ಅಭಿವೃದ್ದಿ ಹೊಂದಿದ ದೇವಾಲಯ. 10ನೇ ಶತಮಾನದಲ್ಲಿ ರಾಜ ರಾಜ ಚೋಳನು ಇಲ್ಲಿನ ಗೋಪುರ, ಕಲ್ಯಾಣಿ, ಸಾವಿರ ಕಂಭಗಳ ವಿಶಾಲವಾದ ಪೌಳಿ ಗಳನ್ನು ಕಟ್ಟಿಸಿದ. ಬಹಳಷ್ಟು ಭೂಮಿಯನ್ನು ದತ್ತಿ ಬಿಟ್ಟಿದ್ದ. ಅವನ ನಂತರದ ಅರಸರೂ ಈ ದೇವಾಲಯಕ್ಕೆ ತುಂಬಾ ಸಂಪತ್ತನ್ನು ಕೊಟ್ಟಿರುತ್ತಾರೆ. ವಿಶಾಲವಾದ ಪ್ರಾಂಗಣವಿದೆ. ದೊಡ್ಡ ಗೋಪುರವಿದೆ.


 ಬೇಗನೇ ಬಂದಿದ್ದರೆ ದೇವರನ್ನು ನೋಡಬಹುದಿತ್ತು. ನಮ್ಮ ಪಾಲಿಗೆ ಅದೇ ಚಿದಂಬರ ರಹಸ್ಯವಾಗುಳಿಯಿತು. ಇದು 10ನೇ ಶತಮಾನದಲ್ಲ, ಇನ್ನೂ ಕೆಲ ಶತಮಾನಗಳ ಹಿಂದಿನ ದೇವಾಲಯ. ಇಲ್ಲಿ ಪೂಜಾವಿಧಿ ನಡೆಸುವವರು ದೀಕ್ಷಿತರು ಎಂಬ ಬ್ರಾಹ್ಮಣರು. ಇವತ್ತಿಗೂ ಅವರೇ ವಂಶ ಪಾರಂಪರ್ಯವಾಗಿ ಮುಂದುವರಿಯುತಿದ್ದಾರೆ. ಈ ದೇವಾಲಯದ ಆಡಳಿತವೂ ಅವರದ್ದೆ. ಅಲ್ಲಿ ಕಾಣಿಕೆ ಹುಂಡಿ ಇಲ್ಲ, ತಟ್ಟೆಗೇ ಹಾಕಿ ಎನ್ನುತ್ತಾರೆ. ಸ್ವಲ್ಪ ಒರಟು ಜನ.
ದೇವಾಲಯದ ಹೊರಭಾಗದಲ್ಲಿ ರಸ್ತೆ ಇದೆ. ಇದು ರಥಬೀದಿ ಇರಬೇಕು. ಇಲ್ಲಿ 2 ಅಲಂಕೃತ ತೇರು ಇದ್ದವು. ಸುಂದರವಾಗಿತ್ತು.


 ಊಟದ ಹೊತ್ತಾಯಿತು. ನಾವು ವೆಜಿಟೇರಿಯನ್ ಹೊಟೆಲ್ ಎಲ್ಲಿದೆ ಎಂತ ವಿಚಾರಿಸಿದೆವು. ಯಾರೋ ನಮಗೆ ದಾರಿ ತೋರಿದರು. ಒಂದು ದೊಡ್ಡ ಮನೆಯಂತಿರುವ ಹೋಟೆಲ್. ಅಲ್ಲಿ ಊಟದ ಚೀಟಿ ಪಡೆದು ಊಟಕ್ಕೆ ಕುಳಿತೆವು. ಬಾಳೆ ಎಲೆಯ ಊಟ. ಅಷ್ಟರಲ್ಲಿ ಬಡಿಸುವ ಹುಡುಗರಲ್ಲಿ ಒಬ್ಬ ಮುಂದೆ ಬಂದು ಮುರಳಿಯಣ್ಣಾ ಎಂದು ಕೂಗಿದನು. ನನ್ನ ಭಾವನಿಗೆ ಆಚ್ಚರಿ, ಇದ್ಯಾರಪ್ಪಾ ನನ್ನನ್ನು ಕರೆಯುತ್ತಿರುವುದು ಎಂತ. ನೋಡಿದರೆ ಅವರ ಒಕ್ಕಲಾಗಿದ್ದವನ ಮಗ ! ಅವನು ಇಲ್ಲಿ ಕೆಲಸ ಮಾಡುತಿದ್ದ. ನಮ್ಮನ್ನೆಲ್ಲಾ ವಿಚಾರಿಸಿದ. ನಮಗೆಲ್ಲಾ ಆದರದಿಂದ ಬಡಿಸಲು ಉಳಿದವರಿಗೆ ಹೇಳಿದ. ತಾನು ಮಾತ್ರ ನಮಗೆ ಬಡಿಸಲು ಬರಲೇ ಇಲ್ಲ. ನಾವು ಅವನ ಧಣಿಗಳಲ್ಲವೇ. ಹಾಗಾಗಿ ಸಂಕೋಚ. ಊಟ ಆದಮೇಲೆ ಒಂದು ದೊಡ್ಡ ಜಗ್ ನಲ್ಲಿ ಒಳ್ಳೆಯ ಮಜ್ಜಿಗೆ ಕೊಡಿಸಿದ. ನಮ್ಮ ಅತ್ತೆಯವರಿಗೆ ಎಲೆ ಅಡಿಕೆ ತಂದು ಕೊಟ್ಟ. ಬಹಳ ಗೌರವದಿಂದ ನಮ್ಮ ಕಾರ್ ನ ವರೆಗೆ ಬಂದು ನಮ್ಮನ್ನು ಬೀಳ್ಕೊಟ್ಟ. ಪಕ್ಕದ ಅಂಗಡಿಯಿಂದ ತುಂಬಾ ಎಳೆ ಸೌತೆಕಾಯಿ ಕೊಂಡು ಕಾರಲ್ಲಿ ತುಂಬಿಕೊಂಡೆವು. ಇನ್ನು ನಮ್ಮ ಪ್ರಯಾಣ ತಂಜಾವೂರು ಗೆ.






Tanjaavur


ತಂಜಾವೂರು

ಚಿದಂಬರಂನಿಂದ ಹೊರಟೆವು. ಇಲ್ಲಿಂದ 110 ಕಿ.ಮಿ. ದೂರ ಪ್ರಯಾಣಿಸಬೇಕು. ಸ್ವಲ್ಪ ದೂರ ಹೋಗುವಾಗಲೇ ನಿದ್ದೆ ತೂಗತೊಡಗಿತು. ಅಲ್ಲೆಲ್ಲೋ ಕಾರ್ ನಿಂತಾಗಲೇ ಎಚ್ಚರ. ಟ್ರಾಫಿಕ್ ಜಾಮ್ . ಪಕ್ಕದಲ್ಲಿ ನೋಡುತ್ತೇನೆ ಒಂದು ದೇವಾಲಯ. ಅಲ್ಲೇ ಸಾಗುತ್ತಿದ್ದವನೊಡನೆ ವಿಚಾರಿಸಿದೆ ಯಾವ ದೇವಾಲಯ ಎಂತ. ವೈದೀಶ್ವರನ್ ಕೋಯಿಲ್ ಎಂದ.




 ಕಾರ್ ತಿರುಗಿಸಿದ ಮುರಳಿ. ಒಳ ಹೋದೆವು. ಬಹಳ ದೊಡ್ಡದಾದ ಆಲಯ. ನಾವು 25 ಕಿ. ಮಿ. ಪ್ರಯಾಣಿಸಿದ್ದೆವು. ಇಲ್ಲಿನ ದೇವರು ಶಿವ, ಎಲ್ಲಾ ರೋಗಗಳನ್ನು ಗುಣಪಡಿಸುವ ವೈದ್ಯ. ಅದಕ್ಕಾಗಿ ವೈದ್ಯನಾಥ ಎಂಬ ಹೆಸರು. ಇತರ ದೇವರುಗಳೊಂದಿಗೆ ದನ್ವಂತರಿ ದೇವರು ಸಹಾ ಇದ್ದಾರೆ. ಒಂದು ಕಲ್ಯಾಣಿ ಇದೆ. ಇದರ ನೀರಿಗೆ ಔಷಧ ಗುಣವಿದೆಯಂತೆ.
ಅಲ್ಲಿಂದ ಮುಂದೆ ಹೋದಾಗ ಕುಂಭಕೋಣ ಕ್ಕೆ ಹೊಗುವ ದಾರಿ ಎಡಕ್ಕೆ ಸಿಗುತ್ತದೆ. ಮತ್ತೂ ಸ್ವಲ್ಪ ದೂರದಲ್ಲಿ ಬಲಕ್ಕೆ ತಿರುಗಿದರೆ ಗಂಗೈಕೊಂಡ ಚೋಳಪುರ ಸಿಗುತ್ತದೆ. ಇಲ್ಲಿಂದ ವೆಲ್ಲಾಂಗಣ್ಣಿ ಗೂ ಹತ್ತಿರ. ಅದೆಲ್ಲಾ ಇನ್ನೊಮ್ಮೆ ನೋಡೋಣ ಎಂದುಕೊಂಡು ಮುಂದುವರಿದೆವು. ತಂಜಾವೂರು ಹತ್ತಿರವಾಯಿತು. ಇಲ್ಲೆಲ್ಲಾ ಬತ್ತದ ಕೃಷಿ ಜಾಸ್ತಿ. ಎಲ್ಲಿ ನೋಡಿದರೂ ಬತ್ತದ ಹೊಲಗಳು. ಅದಕ್ಕೇ ತಂಜಾವೂರನ್ನು ಬತ್ತದ ಕಣಜ ಎನ್ನುತ್ತಾರೆ. ನಾವು ಪಟ್ಟಣ ತಲುಪುವಾಗ ಬಹಳ ಜೋರಾದ ಜಡಿಮಳೆ, ಸಿಡಿಲು ಮಿಂಚು ಗಾಳಿ ಎಲ್ಲಾ ಒಮ್ಮೆಲೇ ಧಾಳಿ ಇಟ್ಟವು. ನಾವು ಪುಣ್ಯಕ್ಕೆ ಒಂದು ಲಾಡ್ಜ್ ನ ಒಳಗೆ ಇದ್ದೆವು. ರೂಮ್ ಸಾದಾರಣವಿತ್ತು. ನಮಗೆ ಅಗತ್ಯವಾಗಿ ಬೇಕಾದ್ದು ಕಾರ್ ಪಾರ್ಕಿಂಗ್. ಅದು ಅಲ್ಲಿತ್ತು. ಕಾಫಿ ಕುಡಿದು ವಿಶ್ರಾಮ. ರಾತ್ರಿಯ ಊಟ ಯಾರಿಗೂ ಬೇಡ ಎಂದರು. ಸರಿ ಮಾವಿನ ಹಣ್ಣಿನಲ್ಲಿ ಸುಧಾರಿಸುವಾ ಎಂದುಕೊಂಡೆವು. ಎಲ್ಲರೂ ಹೊಟ್ಟೆ ತುಂಬಾ ಬಗೆ ಬಗೆಯ ಮಾವಿನ ಹಣ್ಣಿನ ಕಾಳಗ ಹೊಡೆದೆವು. ಬೇಗನೇ ನಿದ್ದೆ ಬಂತು. 
ಬೆಳಗ್ಗೆ ಬೇಗನೇ ಎದ್ದು ಎಲ್ಲಾ ಕಾರ್ಯ ಮುಗಿಸಿ ಬೃಹದೀಶ್ವರನನ್ನು ಕಾಣಲು ಹೊರಟೆವು. ಸಮೀಪದ ಒಂದು ಒಳ್ಳೆಯ ಹೋಟೆಲ್ ನಲ್ಲಿ ಇಡ್ಲಿ ವಡೆ ಕಾಫಿ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡೆವು. ದೇವಾಲಯಕ್ಕೆ ಸ್ವಲ್ಪ ದೂರ. ಇದು ಕಾವೇರಿ ನದಿಯ ಎಡ ದಂಡೆಯಲ್ಲಿದೆ. ಅದೋ ದೇವಸ್ಥಾನ ಕಂಡಿತು. ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿ ಒಳಗೆ ಹೋದೆವು.




 ಇಲ್ಲಿ ಒಂದಾದಮೇಲೆ ಇನ್ನೊಂದು ಹೀಗೆ 3 ದ್ವಾರಗಳಿವೆ. ಮೊದಲನೆಯದು ಚಿಕ್ಕದು ಆ ಮೇಲೆ 2 ದೊಡ್ಡ ದ್ವಾರ. ಅದಕ್ಕೆ ಸ್ವಲ್ಪ ಕುಬ್ಜವಾದ ಗೋಪುರ. ನಂತರ ವಿಶಾಲವಾದ ರಾಜಾಂಗಣ. ಇದು ಸುಮಾರು 240/120 ಮೀಟರ್ ವಿಶಾಲವಾಗಿದೆ. ಎದುರುಗಡೆ ದೊಡ್ಡ ನಂದೀಮಂಟಪವಿದೆ. ಏಕಶಿಲಾ ನಂದಿಯ ವಿಗ್ರಹವಿದೆ. ಅದರಾಚೆ ಬೃಹದೀಶ್ವರನ ಭವ್ಯ ದೇವಾಲಯ. ಇಲ್ಲಿರುವುದೆಲ್ಲಾ ದೊಡ್ಡ ದೊಡ್ಡ ಆಕೃತಿಗಳೇ. ಈ ದೇವಾಲಯವನ್ನು ಚೋಳ ಚಕ್ರವರ್ತಿ ರಾಜ ರಾಜ ಚೋಳನು 1010 ರಲ್ಲಿ ಕಟ್ಟಿಸಿದನು. ಇಲ್ಲಿನ ಗೋಪುರ ವಿಶಿಷ್ಟವಾದದ್ದು. ಎಲ್ಲಾ ಕಡೆ ಹೊರಗಿನ ಗೋಪುರ ದೊಡ್ಡದಾಗಿದ್ದರೆ ಇಲ್ಲಿ ಹಾಗಲ್ಲ, ಮುಖ್ಯ ದೇವಾಲಯದ ಗೋಪುರವೇ ಅತೀ ಎತ್ತರವಾಗಿದೆ. ಇದರ ಎತ್ತರ 66 ಮೀಟರ್, ಅದರ ಮೇಲೆ 25 ಟನ್ ಭಾರವಿರುವ ಏಕ ಶಿಲಾ ಮುಕುಟ ಅದರ ಮೇಲೆ ಸ್ವರ್ಣಮಯ ಕಳಶ.




 ಎದುರುಗಡೆ ಮುಖಮಂಟಪ ಮತ್ತು ತುಂಬಾ ಪಾವಟಿಕೆಗಳಿರುವ ಸೋಪಾನ. ದ್ವಾರದಲ್ಲಿ ದೊಡ್ಡದಾದ ದ್ವಾರಪಾಲಕರು!




 ನಾವು ಮೊದಲಿಗೆ ಇದರ ಹೊರಭಾಗವನ್ನು ನೋಡಲು ಒಂದು ಸುತ್ತು ಬಂದೆವು. ಇಲ್ಲಿನ ಭಿತ್ತಿಯಲ್ಲಿ ಹಲವಾರು ವಿಗ್ರಹಗಳನ್ನು ಇರಿಸಿದ್ದಾರೆ. ಗಣೇಶ, ಕುಮಾರಸ್ವಾಮಿ,ಪಾರ್ವತಿ, ವೀರಭದ್ರ, ಸೂರ್ಯ,ಮಹಾವಿಷ್ಣು ವರಾಹಿ ಮತ್ತು ದಕ್ಷಿಣಾಮೂರ್ತಿ ಇವು ಪ್ರಮುಖವಾದವು.










 ಇದಲ್ಲದೆ ಗಣಪತಿ, ಪಾರ್ವತಿ, ವೀರಭದ್ರ ಮತ್ತು ಕುಮಾರಸ್ವಾಮಿಯರಿಗೆ ಪ್ರತ್ಯೇಕ ಆಲಯಗಳಿವೆ.

 ನಿನ್ನೆ ಒಳ್ಳೆಯ ಮಳೆಬಂದ ಕಾರಣ ಹವೆ ಬಹಳ ತಂಪಾಗಿತ್ತು. ಜಾಸ್ತಿ ಜನರೂ ಇರಲಿಲ್ಲ. ಎಲ್ಲಾ ಕಡೆ ಆರಾಮವಾಗಿ ನೋಡಿದೆವು. ಹೊರಗಿನ ಪೌಳಿ ಪ್ರಾಕಾರಗಳು ಈ ದೇವಾಲಯಕ್ಕೆ ಅಪೂರ್ವ ಶೋಭೆಯನ್ನು ಕೊಡುತಿತ್ತು. ದಕ್ಷಿಣಾಮೂರ್ತಿಯನ್ನು ನೋಡಲು ಒಂದು ಏಣಿ ಹತ್ತಿ ಹೋಗಬೇಕು. ಉಳಿದ ಬೇರೆ ದೇವಾಲಯಗಳಲ್ಲಿ ಕಂಡುಬರುವ ಮುಕ್ಕಾದ ವಿಗ್ರಹಗಳು ಇಲ್ಲಿಲ್ಲ. ಚೋಳರ ಪರಾಕ್ರಮಕ್ಕೆ ಹೆದರಿ ಇಲ್ಲಿ ಹೆಚ್ಚು ಆಕ್ರಮಣಗಳು ಆಗದ ಕಾರಣ ಯಾರೂ ಇದನ್ನು ಹಾಳುಗೆಡವಲು ಪ್ರಯತ್ನಿಸಲಿಲ್ಲ.


ಕಾಲನ ಹೊಡೆತಕ್ಕೆ ಅಲ್ಪ ಸ್ವಲ್ಪ ಹಾಳಾಗಿದ್ದರೂ ಅದನ್ನು ಸರಿಪಡಿಸುವ ಕಾರ್ಯ ಈಗಲೂ ನಡೆಯುತ್ತಿದೆ. ದೇವಾಲಯದ ಗೋಪುರಗಳು ಮತ್ತು ಕಟ್ಟಡಗಳು ಶ್ರೀಗಂಧದ ವರ್ಣದಲ್ಲಿ ಕಂಗೊಳಿಸುತ್ತಿವೆ.








 ಇದನ್ನು ನೋಡಲು ಬಹಳ ಸುಂದರ ಅನುಭವವಾಗುತ್ತದೆ. ಬಣ್ಣಗಳ ಗೋಜಲು ಇಲ್ಲಿಲ್ಲ. ದೇವಾಲಯದ ಸುತ್ತಲೂ ಕಲ್ಲಿನಲ್ಲಿ ಕೊರೆದಿರುವ ಶಿಲಾ ಶಾಸನಗಳಿವೆ. ಸ್ವತಃ ರಾಜ ರಾಜ ಚೋಳನೇ ಬರೆದಿರುವ ತಮಿಳು ಲಿಪಿಯಲ್ಲಿರುವ ಸಂಸ್ಕೃತ ಬರವಣಿಗೆಯನ್ನು ಇಲ್ಲಿ ಕಲ್ಲಿನಲ್ಲಿ ಬರೆದಿದ್ದಾರೆ. ಒಂದು ಸುತ್ತು ಬಂದಾಯ್ತು. ಇಲ್ಲೇ ಬಲಗಡೆ ಇರುವ ಒಂದು ಮಂಟಪದಲ್ಲಿ ತಂಜಾವೂರು ಶೈಲಿಯ ಚಿತ್ರಕಲೆ ನೋಡಿದೆವು. ಕಾಲನ ಹೊಡೆತಕ್ಕೆ ಎಲ್ಲಾ ಮಸುಕು ಮಸುಕಾಗಿದೆ. ಅಲ್ಲೇ ಸ್ವಲ್ಪ ಕುಳಿತೆವು, ದಣಿವಾಗಿತ್ತು. ಗೋಪುರದ ಮೇಲೆ ಕುಳ್ಳಿರಿಸಿದ ಮುಕುಟ ಶಿಲೆಯನ್ನು ಆಚ್ಚರಿಯಿಂದ ನೊಡುತಿದ್ದೆವು. 25 ಟನ್ ಭಾರವಿರುವ ಇದನ್ನು ಅಷ್ಟು ಎತ್ತರಕ್ಕೆ ಹೇಗೆ ಏರಿಸಿದರು ಎಂಬ ಕುತೂಹಲ ನಮಗೆಲ್ಲಾ. ನಾನು ಹಿಂದೆ ನ್ಯಾಷನಲ್ ಜಿಯೋಗ್ರಫಿ ಛಾನಲ್ ನಲ್ಲಿ ಒಂದು ಕಾರ್ಯಕ್ರಮ ನೋಡಿದ್ದೆ. ದೊಡ್ಡದಾದ ಶಿಲೆಯನ್ನು ಬಹಳ ದೂರದಿಂದ ಆನೆಗಳ ಸಹಾಯದಿಂದ ಎಳೆದು ತಂದಿರಬಹುದು ಎಂದು ಅವರ ಅಂಬೋಣ. ಅದಕ್ಕಾಗಿ ಅವರು ಒಂದು ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದರು. ಅಗಲವಾದ ಮಾರ್ಗವನ್ನು ಮಾಡಿ ಕೆಳಗಡೆ ಮರದ ದಿಂಡುಗಳನ್ನು ಹಾಸಿ ಅದರ ಮೇಲೆ ಈ ಕಲ್ಲನ್ನು ಇರಿಸಿ ಆನೆಗಳು ಮತ್ತು ಮನುಷ್ಯ ಪ್ರಯತ್ನದಿಂದ ಇಲ್ಲಿಯವರೆಗೆ ಎಳೆದು ತಂದರು. ಆಮೇಲೆ ಇದನ್ನು ಅಷ್ಟು ಎತ್ತರಕ್ಕೆ ಹೇಗೆ ಸಾಗಿಸಿದರು? ಇದೇ ಯಕ್ಷಪ್ರಶ್ನೆ. ಅವರ ಅಂದಾಜಿನಂತೆ ಕೆಳಗಿನ ನೆಲ ಮಟ್ಟದಿಂದ 16 ಅಂತಸ್ತಿನ ತುತ್ತ ತುದಿಯವರೆಗೆ ಇಳಿಜಾರು ಆಗಿರುವ ಒಂದು ಮಾರ್ಗ ರಚಿಸಿರಬೇಕು. ಅದರಲ್ಲಿ ಸನ್ನೆಗಳ ಮತ್ತು ರಾಟೆಗಳ ಸಹಾಯದಿಂದ ಬಲವಾದ ಹಗ್ಗ ಕಟ್ಟಿ ಆನೆಗಳಿಂದ ಎಳೆಸಿರಬೇಕು ಎಂದು. ಇರಬಹುದು ಅಂತ ನನಗೆ ಅನ್ನಿಸಿತು. ಆ ಕಾಲದಲ್ಲಿ ಕ್ರೇನ್ ಇರಲಿಲ್ಲವಲ್ಲಾ.
ಇನ್ನು ಒಳಗಡೆ ಹೋದೆವು. ದ್ವಾರದ ಇಕ್ಕೆಲಗಳಲ್ಲಿ ಶಿವಗಣಗಳ ದ್ವಾರಪಾಲಕರು. ಬಹಳ ಗಂಭೀರವಾದ್ದವು.


 ಒಳ ಪ್ರವೇಶಿಸುವಾಗ ವಿಶಾಲವಾದ ನಾಟ್ಯ ಮಂಟಪ. ಅದರಲ್ಲಿ ಆ ಕಾಲದಲ್ಲಿ ನೃತ್ಯ ಸೇವೆ ಸಂಗೀತ ಸೇವೆ ನಡೆಯುತಿತ್ತು. ಸುಮಾರು 400 ಮಂದಿ ನೃತ್ಯಾಂಗನೆಯರು ಅಲ್ಲಿದ್ದರಂತೆ. ಸಂಗೀತ ಮತ್ತು ನಾಟ್ಯ ಮತ್ತು ಚಿತ್ರಕಲೆಗಳು ಇಲ್ಲಿ ಹೆಸರುವಾಸಿಯಾಗಿದೆ. ನನ್ನ ಮಾವನವರು, ದಿವಂಗತ ಗೊಪಾಲಕೃಷ್ಣ ಶ್ಯಾನುಭಾಗರು ಅವರ ಬಾಲ್ಯದಲ್ಲಿ ಪಿಟೀಲು ಕಲಿಯಲು ಮತ್ತು ಚಿತ್ರಕಲೆ ಕಲಿಯಲು ಕಾಸರಗೋಡಿನಿಂದ ಇಲ್ಲಿಗೆ ಬಂದಿದ್ದರಂತೆ. ಅವರು ಇಲ್ಲೆಲ್ಲಾ ಎಷ್ಟು ಸಲ ಬಂದಿರಬಹುದು ನಡೆದಾಡಿರಬಹುದು ಎಂದು ಯೋಚಿಸುವಾಗ ಮೈ ನವಿರೆದ್ದಿತು. ಇಲ್ಲಿನ ಗೋಡೆಗಳಲ್ಲಿ ತಂಜಾವೂರು ಚಿತ್ರಕಲೆಗಳು ಬಹಳ ಇವೆ. ಆದರೆ ಎಲ್ಲಾ ಎಣ್ಣೆಯ ಮತ್ತು ಕರ್ಪೂರದ ಹೊಗೆಯಿಂದಾಗಿ ಮಸುಕುಗೊಂಡಿವೆ. ಸಾಲದ್ದಕ್ಕೆ ಸಾಕಷ್ಟು ಬೆಳಕೂ ಇರಲಿಲ್ಲ. ಮುಂದೆ ಗರ್ಭ ಗುಡಿಯಲ್ಲಿ ಶಿವಲಿಂಗ ಧರ್ಷನವಾಯಿತು. ಇದೇ ಬೃಹದೀಶ್ವರ ಲಿಂಗ. ಇಡೀ ಭಾರತದಲ್ಲೇ ಇಷ್ಟು ದೊಡ್ಡ ಶಿವಲಿಂಗ ಬೇರಿಲ್ಲ. ಬರೊಬ್ಬರಿ 29 ಅಡಿಗಳ ಕರಿಯ ಶಿಲೆಯಲ್ಲಿ ಮಾಡಿದ ಶಿವಲಿಂಗ. ಇದಕ್ಕೆ ಅಭಿಶೇಕ ಮಾಡಲು ಲಿಂಗದ ಹಿಂದುಗಡೆ ಉಕ್ಕಿನ ಒಂದು ಅಟ್ಟಳಿಗೆಯೇ ಇದೆ. ಅರ್ಚಕರು ಇದನ್ನು ಏರಿ ಶಿವನಿಗೆ ಅಭಿಶೇಕ ಮಾಡುತ್ತಾರೆ. ಹೂವಿನ ಅಲಂಕಾರ ಗಂಧ ಚಂದನ ಹಚ್ಚುತ್ತಾರೆ. ನಾವು ಭಕ್ತಿಯಿಂದ ಅಡ್ಡಬಿದ್ದು ಪ್ರಾರ್ಥನೆ ಸಲ್ಲಿಸಿದೆವು. ಹಣ್ಣುಕಾಯಿ ಅರ್ಪಿಸಿದೆವು. ಪ್ರಸಾದ ಸ್ವೀಕರಿಸಿದೆವು. ಮನಸ್ಸಿಗೆ ಒಂದು ಧನ್ಯತಾ ಭಾವ ಆವರಿಸಿತು. ಸ್ವಲ್ಪ ಹೊತ್ತು ಅಲ್ಲಿ ಕುಳಿತು ಧ್ಯಾನ ಮಾಡಿದೆವು. ಹೊರಬರಲು ಮನಸ್ಸೇ ಬರಲಿಲ್ಲ. ಆದರೂ ಹೊರಡಲೇಬೇಕಲ್ಲಾ. ಅಲ್ಲಿ ಮುಖ್ಯ ದ್ವಾರದಲ್ಲಿ ದೇವರ ಆನೆ ನಿಲ್ಲಿಸಿದ್ದರು. ನಮ್ಮ ಸಚಿನ್ ಗೆ ಅದನ್ನು ನೋಡಿದ ಕೂಡಲೇ ಅಲ್ಲಿಗೆ ಬೇಗನೇ ತಲುಪುವ ಆತುರ. ಅವನಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಅಲ್ಲಿಗೆ ಹೋದ ಕೂಡಲೇ ಆನೆಗೆ ಬಾಳೆ ಹಣ್ಣು ತಿನ್ನಿಸುವ ಕಾರ್ಯಕ್ರಮ.



 ಕೈನಲ್ಲಿದ್ದ ಬಾಳೆ ಹಣ್ಣು ಎಲ್ಲಾ ಮುಗಿಯಿತು. ಇನ್ನೂ ಕೊಡಬೇಕೆಂದು ಹಠ. ಸರಿ ಹೊರಗೆ ಹೋಗಿ ಒಂದು ಚಿಪ್ಪು ಹಣ್ಣು ತಂದು ಆನೆಗೆ ಕೊಟ್ಟನು. ಆನೆಯಿಂದ ಆಶೀರ್ವಾದ ಪಡೆದನು.











ನಾವು ಅಲ್ಲಿಂದ ಹೊರಟು ರೂಮ್ ಗೆ ಬಂದು ನಮ್ಮ ಸಾಮಾನು ಎಲ್ಲಾ ತೆಗೆದುಕೊಂಡು ಖಾಲಿ ಮಾಡಿದೆವು. ಒಂದು ಒಳ್ಳೆಯ ಹೊಟೆಲ್ ನಲ್ಲಿ ಊಟ ಮಾಡಿ ಹೊರಟೆವು. ನಮ್ಮ ಮುಂದಿನ ತಾಣ ತಿರುಚಿನಾಪಳ್ಳಿ, ಶ್ರೀರಂಗಂ.