ಆಕ್ಸ್ ಫರ್ಡ್ ವಿಶ್ವವಿದ್ಯಾಲಯ.
ನಾವು ಕಳೆದ ವರ್ಷ ಇಂಗ್ಲೆಂಡ್ ನಲ್ಲಿ
ನಮ್ಮ ಮಗಳ ಮನೆಗೆ ಹೋಗಿದ್ದೆವು. ಅವಳು ವಾಸವಾಗಿರುವುದು ಲಂಡನ್ ಮಹಾನಗರದಿಂದ ಸುಮಾರು 400 ಕಿ.ಮಿ
ದೂರದಲ್ಲಿರುವ ಕೋರ್ನ್ ವಾಲ್ ನ ಮುಖ್ಯ ಪಟ್ಟಣವಾದ ಟ್ರೂರೊದಲ್ಲಿ. ನಮ್ಮ ಅಳಿಯಂದಿರು ಇಲ್ಲೇ
ಹಿರಿಯ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಅವರಿಗೆ ಆಕ್ಸ್ ಫರ್ಡ್
ವಿಶ್ವ ವಿದ್ಯಾಲಯದಲ್ಲಿ ಒಂದು ಕಾನ್ಫರೆನ್ಸ್ ಇದ್ದುದರಿಂದ ಅಲ್ಲಿಗೆ ಹೋಗುವ ಸಂದರ್ಭ ಒದಗಿ ಬಂತು.
ಅವರೊಂದಿಗೆ ನಾನು ಮತ್ತು ಕಸ್ತೂರಿ ಸಹಾ ಹೋಗಿದ್ದೆವು.
ಬೆಳಗ್ಗೆ 6 ಘಂಟೆಗೆ ನಮ್ಮ ಕಾರಿನಲ್ಲಿ
ಹೊರಟ ನಮ್ಮನ್ನು ಅವರ ಸಹೋದ್ಯೋಗಿಗಳಿಬ್ಬರು ಕೂಡಿಕೊಂಡರು. ಸುಮಾರು 4 ½ ಘಂಟೆ ಪ್ರಯಾಣಿಸಿ ಆಕ್ಸ್
ಫರ್ಡ್ ತಲುಪಿದೆವು. ನಮಗೆ ಅಲ್ಲಿನ ಎಲ್ಲಾ ವಿವರಗಳನ್ನು ತಿಳಿಸಿ, ಸಂಜೆ 4 ಘಂಟೆಗೆ ಕಾರು
ನಿಲ್ಲಿಸಿದಲ್ಲಿಗೆ ಬರಲು ಹೇಳಿ ಅವರ ವ್ಯೆದ್ಯಕೀಯ ವಿಭಾಗದ ಕಾಲೆಜ್ ಕಡೆ ಹೋದರು. ನಾವಿಬ್ಬರು ಈ ಐತಿಹಾಸಿಕ ವಿದ್ಯಾನಗರವನ್ನು ನೋಡಲು
ತೆರಳಿದೆವು.
ಈ ಮಹಾ ವಿಶ್ವವಿದ್ಯಾಲಯದ ಬಗ್ಗೆ
ಸ್ವಲ್ಪ ಹೇಳದಿದ್ದರೆ ಈ ಬರಹ ಅಪೂರ್ಣವಾಗುತ್ತದೆ. ಇದನ್ನು ಸುಮಾರು 920 ವರ್ಷಗಳ ಹಿಂದೆ
ಸ್ಥಾಪಿಸಿದರು. ಇಟೆಲಿಯ ವಿಶ್ವವಿದ್ಯಾಲಯದ ನಂತರ ಇದೇ ಅತ್ಯಂತ ಹಳೆಯ ಯೂನಿವರ್ಸಿಟಿಯಾಗಿದೆ.
ಇಲ್ಲಿ ಒಟ್ಟು 38 ಪ್ರತ್ಯೇಕ ಕಾಲೆಜ್ ಗಳಿವೆ. ಇದಲ್ಲದೆ ಸುಮಾರು 70 ಕ್ಕೂಮಿಗಿಲಾದ ಸಂಶೋಧನಾ
ಕೇಂದ್ರಗಳಿವೆ. ಎಲ್ಲದಕ್ಕೂ ಅದರದೇ ಆದ ನೀತಿ ನಿಯಮಾವಳಿಗಳಿದ್ದರೂ ಎಲ್ಲವೂ ಆಕ್ಸ್ ಫರ್ಡ್ ನ
ನಿಬಂಧನೆಗಳಿಗೆ ಒಳಪಟ್ಟಿದೆ. ಇಲ್ಲಿ ಪದವಿ ಪೂರ್ವ ಹಾಗೂ ಪದವಿಗಳ ಎಲ್ಲಾ ವಿಷಯಗಳನ್ನು ಅಧ್ಯಯನ
ಮಾಡುತ್ತಿರುವ 22000 ವಿದ್ಯಾರ್ಥಿಗಳಿದ್ದಾರೆ. ಜಗತ್ತಿನ ಎಲ್ಲಾ ದೇಶಗಳಿಂದ ಬಂದಿರುವ
ವಿದ್ಯಾರ್ಥಿಗಳು ಇಲ್ಲಿದ್ದಾರೆ. ನಮ್ಮ ಭಾರತೀಯರೂ ಸಾಕಷ್ಟು ಮಂದಿ ಕಂಡುಬಂದರು. ಇಲ್ಲಿ ಕಲಿಯಲು
ಯಾವುದೇ ರೀತಿಯ ಮೀಸಲಾತಿ, ವಶೀಲಿ, ದುಡ್ಡಿನ ಬಲ ಇನ್ನಿತರ ಅಡ್ಡದಾರಿಗಳು ನಡೆಯುವುದಿಲ್ಲ.
ಅರ್ಹತೆಯೊಂದೇ ಇಲ್ಲಿ ಪ್ರಧಾನ. ಹಾಗಾಗಿ ಇಲ್ಲಿಂದ ಪದವಿ ಪಡೆದವರು ಉನ್ನತ ಮಟ್ಟವನ್ನು
ತಲುಪುತ್ತಾರೆ. ನೊಬೆಲ್ ಪುರಸ್ಕಾರ ಪಡೆದವರಲ್ಲಿ ಸುಮಾರು 27 ಮಂದಿ ಇಲ್ಲಿ ಕಲಿತವರು.
ಬ್ರಿಟನ್ನಿನ 26 ಮಂದಿ ಪ್ರಧಾನ ಮಂತ್ರಿಗಳು ಇಲ್ಲಿ ವ್ಯಾಸಂಗ ಮಾಡಿದವರು. ಜಗತ್ತಿನ ವಿವಿಧ ದೇಶಗಳ
30 ಮಂದಿ ಪ್ರಧಾನಿಗಳೂ, ಕವಿ, ಕಲಾಕಾರರೂ, ಕ್ರೀಡಾಪಟುಗಳು, ಆರ್ಥಿಕ, ನ್ಯಾಯ, ವ್ಯವಹಾರ,
ಮಾಧ್ಯಮ, ವೈದ್ಯಕೀಯ, ವಿಜ್ನಾನ, ಇಂಜಿನಿಯರಿಂಗ್,
ವಾಣಿಜ್ಯ ಆರ್ಕಿಟೆಕ್ಟ್ ಮೊದಲಾದ ರಂಗಗಳಲ್ಲಿ ಪ್ರಖ್ಯಾತಿ ಪಡೆದವರು ಇಲ್ಲಿನ
ವಿದ್ಯಾರ್ಥಿಗಳಾಗಿದ್ದಾರೆ. ನಮ್ಮ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಮನಮೊಹನ ಸಿಂಘ್,
ಸಿರಿಮಾವೋ ಬಂಡಾರ ನಾಯಕೆ. ಭುಟ್ಟೋ, ಬೇನಜೀರ್ ಭುಟ್ಟೋ, ಮನ್ಸೂರ್ ಆಲಿ ಖಾನ್ ಪಟೌಡಿ ಮತ್ತು
ಇಮ್ರಾನ್ ಖಾನ್ ಎಲ್ಲರೂ ಇಲ್ಲಿ ಓದಿದವರು. ಜಗತ್ತಿನ ಯೂನಿವರ್ಸಿಟಿಗಳ ಪಟ್ಟಿಯಲ್ಲಿ ಇದು 5 ನೆಯ
ಸ್ಥಾನದಲ್ಲಿದೆ.
ಇಲ್ಲಿನ ಪ್ರಮುಖ ಕಾಲೇಜುಗಳಲ್ಲಿ
ಕ್ರೈಸ್ಟ್ ಕಾಲೆಜು, ಮೇರಿ ಮೆಗ್ದಲೀನ್, ಕ್ವೀನ್ಸ್, ಸೈಂಟ್ ಜೋನ್ಸ್, ಸೈಂಟ್ ಆನ್ಸ್, ಸೈಂಟ್
ಪೀಟರ್, ಟ್ರಿನಿಟಿ, ಸೈಂಟ್ ಆಂಟೊನಿ, ಬಲ್ಲಿಯೋಲ್, ಲಿಂಕನ್ ಮತ್ತು ವಧಾಮ್ ಕಾಲೇಜ್ ಗಳು
ಹೆಸರುವಾಸಿಯಾಗಿವೆ. ಎಲ್ಲಾ ಕಾಲೆಜುಗಳಿಗೂ ಅದರದ್ದೇ ಆದ ಕೆಥೆಡ್ರಲ್, ಚರ್ಚ್, ಚಾಪೆಲ್ ಗಳಿವೆ.
ಇಲ್ಲಿನ ಬಹುತೇಕ ಕಾಲೆಜ್ ಕಟ್ಟಡಗಳು ನೋಡಲು ಚರ್ಚ್ ನಂತಿದ್ದರೂ ಅವೆಲ್ಲವೂ ಕಾಲೆಜುಗಳೇ ಆಗಿವೆ.
ಇಲ್ಲಿ ಹಲವಾರು ಮ್ಯೂಸಿಯಮ್ ಗಳು, ಲೈಬ್ರರಿಗಳು ಮತ್ತು ಪ್ರಸಿದ್ಧ ಆಕ್ಸ್ ಫರ್ಡ್ ಪ್ರೆಸ್ಸ್ ಇದೆ.
ನಾವು ಸ್ವಲ್ಪ ದೂರ ನಡೆಯುವಷ್ಟರಲ್ಲೇ
ಉನ್ನತವಾದ ಕಂಭಗಳಿಂದ ರಾರಾಜಿಸುವ ಮುಖಮಂಟಪ ಹೊಂದಿದ ಬಹಳ ದೊಡ್ಡದಾದ ಲೈಬ್ರರಿ ಎದುರಾಯಿತು.
ಇದು
ಬೋಡ್ಲೀಯನ್ ಲೈಬ್ರರಿ. ಸರ್ ಥೋಮಸ್ ಬೋಡ್ಲಿ ಇದರ ಸಂಸ್ಥಾಪಕ. ಇಲ್ಲಿ 1617 ರಲ್ಲಿ
ಕುಲಪತಿಯಾಗಿದ್ದ ಲೋರ್ಡ್ ವಿಲಿಯಂ ಹರ್ಬರ್ಟ್ ನ ಪುತ್ಥಳಿಯನ್ನು ಒಳಾಂಗಣದಲ್ಲಿ ನಿಲ್ಲಿಸಿದ್ದಾರೆ.
ಇದರ ಒಳಗಡೆ ಸಾಮಾನ್ಯ
ಪ್ರವಾಸಿಗರಿಗೆ ಪ್ರವೇಶವಿಲ್ಲ. ಇದು ಸಹಜ, ಎಲ್ಲರೂ ಒಳಗೆ ಹೋಗಿ ಮಾತಾಡಿಕೊಂಡಿದ್ದರೆ ಅಭ್ಯಾಸ
ಮಾಡುವವರಿಗೆ ತೊಂದರೆ ಆಗುತ್ತದಲ್ಲಾ.
ಒಂದು ಮಾತು- ಕಾಲೇಜಿನ ಒಳಗಡೆ
ಹೋಗಬೇಕಾದರೆ ಪ್ರವೇಶಧನ ಕೊಡಬೇಕು. ನಮಗೆ ಇನ್ನೂ ಬಹಳ ನೋಡಲಿಕ್ಕಿದೆ. ಹಾಗಾಗಿ ಎಲ್ಲವನ್ನೂ
ಹೊರಗಿಂದಲೇ ನೋಡಿ ಫೋಟೊ ಹಿಡಿದು ತೃಪ್ತಿ ಪಟ್ಟೆವು.
ಇದರ ಪಕ್ಕದಲ್ಲಿರುವ ಇನ್ನೊಂದು ಕಟ್ಟಡ, ರಾಡ್ ಕ್ಲಿಫ್
ಕೆಮರಾ, ಇದು ವಾಚನಾಲಯ.
ಅಂತಹುದೇ ಇನ್ನೊಂದರಲ್ಲಿ ಪದವಿ ಪ್ರಧಾನ, ಮತ್ತಿತರ ಕಾರ್ಯಕ್ರಮಗಳು ನಡೆಯುವುದು. ಇದು ಶೆಲ್ ಡೊನಿಯನ್
ಥಿಯೇಟರ್.
ಲೈಬ್ರರಿಯ ಒಂದು ಪಕ್ಕದಲ್ಲಿ ಯೂನಿವರ್ಸಿಟಿ ಚರ್ಚ್ ಇದೆ.
ಅಲ್ಲಿ ನಮಗೆ ಎದುರಾದ ಒಬ್ಬ
ಮಹನೀಯರಲ್ಲಿ ವಿಚಾರಿಸಿ ಕ್ರೈಸ್ಟ್ ಚರ್ಚ್ ಕಾಲೆಜಿನ ಕಡೆಗೆ ಹೋದೆವು. ಬಹಳ ಸುಂದರವಾದ ಮಹಾದ್ವಾರ
ಹಾಗೂ ಗೋಪುರವನ್ನು ಒಳಗೊಂಡಿದೆ.
ಅದನ್ನು ಹೊಕ್ಕು ಮುಂದೆ ವಿಶಾಲವಾದ ಸುಂದರ ಹುಲ್ಲು ಹಾಸು ಮತ್ತು
ಉದ್ಯಾನವನ್ನು ಹಾದು ನಾವು ಕಾಲೇಜಿನ ಎದುರು ಬಂದೆವು.
ಇದು ಕಾಲೆಜ್ ಮಾತ್ರವಲ್ಲ ಒಂದು ಅಪೂರ್ವ
ಕೆಥೆಡ್ರಲ್ ಸಹಾ ಒಳಗೊಂಡಿದೆ. ಬಹಳ ಭವ್ಯ ಕಟ್ಟಡಗಳು. ಕಾಲೇಜಿನ ಭೋಜನ ಗೃಹವಂತೂ ಊಹಿಸಲಾಗದಷ್ಟು
ಬೃಹತ್ತಾಗಿದೆ. ಇಲ್ಲೇ ಹ್ಯಾರಿ ಪೋಟರ್ ಸಿನಿಮಾದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ನಾವು
ಕಾಲೇಜಿನ ಪಾವಟಿಕೆಗಳನ್ನು ಏರಿ ಫೊಟೋ ತೆಗೆದುಕೊಂಡೆವು. ಅದೆಷ್ಟು ಮಾಹಾನುಭಾವರುಗಳು ಈ
ಮೆಟ್ಟಲುಗಳನ್ನು, ಈ ನೆಲವನ್ನು ತುಳಿದಿದ್ದರೋಎಂದು ಯೋಚಿಸುವಾಗ ಮನ ಪುಳಕಿತವಾಯಿತು. ಅಂತೂ ನಾವೂ
ಒಮ್ಮೆ ಆಕ್ಸ್ ಫರ್ಡ್ ಮೆಟ್ಟಲು ಏರಿದೆವು ಎಂಬ ಮಿತ್ಯಾನಂದ ಪಡೆದೆವು!
ಇಲ್ಲೇ ಸ್ವಲ್ಪ ದೂರದಲ್ಲಿ ಮೆಗ್ದಲೀನ್
ಕಾಲೆಜ್ ಇದೆ. ಇದು ಸಹಾ ಬಹಳ ದೊಡ್ಡದಿದ್ದು ಸುಂದರವಾಗಿದೆ. ಇನ್ನೂ ಹಲವಾರು ಕಾಲೇಜುಗಳು ಅಕ್ಕ
ಪಕ್ಕದಲ್ಲಿ ಇವೆ. ನಾವು ದೂರದಿಂದಲೇ ಫೊಟೊ ಹಿಡಿದು ಸಾಗುತ್ತಿದ್ದೆವು.
ಈವಾಗ ನಾವು ಇಲ್ಲಿನ
ಮುಖ್ಯ ರಸ್ತೆಗೆ ಬಂದೆವು. ಇಲ್ಲಿ ಬಹಳಷ್ಟು ಮಾಲ್ ಗಳೂ ಶೋರೂಂಗಳೂ ಅಂಗಡಿಗಳೂ ಇವೆ. ಚಿತ್ರಮಂದಿರ,
ಬ್ಯಾಂಕ್ ಇನ್ನಿತರ ಆಪೀಸುಗಳು ಹೋಟೆಲ್ ಇತ್ಯಾದಿಗಳು ಇವೆ.
ಇಲ್ಲಿನ ಬಸ್ಸುಗಳು ಬಹಳ
ಸುಂದರವಾಗಿವೆ. ವಿದ್ಯಾರ್ಥಿಗಳು ಹೆಚ್ಚಾಗಿ ಬಳಸುವುದು ಸೈಕಲ್. ಬೈಕುಗಳು ಇಲ್ಲವೇ ಇಲ್ಲ.
ನಾವು ಅಲ್ಲಿರುವ ಸೈನ್ಸ್ ಬರಿಯಿಂದ
ಬರ್ಗರ್, ಹಣ್ಣುಗಳು ಮತ್ತು ಜ್ಯೂಸ್ ಕೊಂಡು ಪಕ್ಕದಲ್ಲೇ ಇರುವ ಪಾರ್ಕ್ ನಲ್ಲಿ ಕುಳಿತು ಹಸಿವು
ನಿವಾರಿಸಿಕೊಂಡೆವು. ಆಮೇಲೆ ಸ್ವಲ್ಪ ವಿಶ್ರಾಮ.
ಮುಂದೆ ನಡೆದಾಗ ಅಲ್ಲಿನ ಪುರ ಭವನ
ಕಂಡೆವು. ನಂತರ ಅಲ್ಲಿನ ಸಿಟಿ ಹಾಲ್ ಎಲ್ಲಾ ನೋಡಿಕೊಂಡು ಆಕ್ಸ್ ಫರ್ಡ್ ನ ಇನ್ನೊಂದು ಭಾಗಕ್ಕೆ
ತಲುಪಿದೆವು. ಇಲ್ಲಿ ಮೆಡಿಕಲ್, ಎಂಜಿನೀಯರಿಂಗ್, ಕಂಪ್ಯೂಟರ್ ಮತ್ತು ಆರ್ಕಿಟೆಕ್ಚರ್ ಮತ್ತು
ವಿಜ್ನಾನ ವಿಭಾಗಗಳಿವೆ. ಎಲ್ಲವೂ ಅದೇ ಹಳೆಯ ಶೈಲಿಯ ಕಟ್ಟಡಗಳು. ಇವುಗಳನ್ನು ನೋಡುವುದೇ ಒಂದು
ಆನಂದ.
ಇಲ್ಲಿಯೇ ನಮಗೆ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಎದುರಾಯಿತು. ಹಿಂದೊಮ್ಮೆ ಲಂಡನ್ ನಲ್ಲಿನ
ಮ್ಯೂಸಿಯಂ ನೋಡಿದ್ದ ನಮಗೆ ಇದರೊಳಗೆ ಹೋಗುವ ಕುತೂಹಲ ಆಗಲಿಲ್ಲ.
ಘಂಟೆ 4 ಆಯಿತು. ನಾವು ಕಾರಿನೆಡೆಗೆ
ಬಂದೆವು. ರೋಹಿತ್ ಮತ್ತಿಬ್ಬರು ಸಹಾ ಬಂದಿದ್ದರು. ಅಲ್ಲಿಂದ ಹೊರಟೆವು. ದಾರಿಯಲ್ಲಿ ಸ್ವಲ್ಪ
ಉಪಹಾರ, ಕಾಫಿ ಸೇವಿಸಿ ಮುಂದೆ ಪಯಣಿಸಿದೆವು. ನಮ್ಮೊಂದಿಗೆ ಬಂದಿದ್ದ ಇಬ್ಬರನ್ನೂ ಅವರವರ ಮನೆಗೆ
ತಲುಪಿಸಿ ನಾವು ಮನೆಗೆ 9 ಘಂಟೆಗೆ ತಲುಪಿದೆವು.
ಊಟ ಮುಗಿಸಿ ಮಲಗಿದ ನಮಗೆ ನಿದ್ರೆ
ಬರುತ್ತಿಲ್ಲ. ಕಣ್ಣಲ್ಲಿ ಆಕ್ಸ್ ಫರ್ಡ್ ನ ಭವ್ಯ ಕಾಲೆಜುಗಳ ನೋಟಗಳೇ ತುಂಬಿ ಬರುತಿತ್ತು.
ಮೇಲೆ ಹೇಳಿರುವ ಕೆಲ ಅಂಕಿ ಅಂಶಗಳನ್ನು
ಗೂಗಲ್ ವಿಕಿಪೀಡಿಯಾದಿಂದ ಪಡೆದಿದ್ದೇನೆ.