Tuesday, 31 December 2013

DWARAKAA



ದ್ವಾರಕಾಧೀಶನ ಸನ್ನಿಧಿಗೆ


ನಮ್ಮ ಬಹುದಿನದ ಕನಸು ಕಳೆದ ನವಂಬರ್ ತಿಂಗಳಲ್ಲಿ ನನಸಾಯಿತು. ದ್ವಾರಕಾ, ಸೋಮನಾಥ,ಮೌಂಟ್ ಅಬು ಮತ್ತು ಮೊಧೇರಾದ ಸೂರ್ಯ ದೇವಾಲಯಗಳನ್ನು ನೋಡಬೇಕೆಂಬ ಹಂಬಲವಿರಿಸಿಕೊಂಡಿದ್ದೆವು. ಇದಕ್ಕಾಗಿ 2 ತಿಂಗಳ ಮೊದಲೇ ರೈಲು ಟಿಕೇಟು ಕಾದಿರಿಸಿ 19 ನೇ ತಾರೀಕಿನಂದು ಬೆಂಗಳೂರು-ಮುಂಬಯಿ ರೈಲು ಹತ್ತಿದೆವು. ಅಲ್ಲಿಂದ ಮುಂದಕ್ಕೆ ಸೌರಾಷ್ಟ್ರ ಮೈಲ್ ನಲ್ಲಿ ಅಹಮದಾಬಾದ್ ಮಾರ್ಗವಾಗಿ ದ್ವಾರಕಾ ತಲುಪಿದೆವು. ದಾರಿಯುದ್ದಕ್ಕೂ ಹತ್ತಿಯ ಮತ್ತು ಹರಳಿನ ಬೆಳೆಗಳು ಕಂಗೊಳಿಸುತ್ತಿತ್ತು 



ಗುಜರಾತಿನ ಕ್ಯಾಂಬೆ ಕೊಲ್ಲಿಯಲ್ಲಿ ಸೌರಾಷ್ಟ್ರ ಕರಾವಳಿಯಲ್ಲಿರುವ ದ್ವಾರಕಾ- ಈ ಪಟ್ಟಣವು ಹಿಂದೆ ದ್ವಾರಾವತಿ ಎಂದು ಕರೆಯಲ್ಪಡುತಿತ್ತು. ಮಹಾಭಾರತ ಮತ್ತು ಭಾಗವತ ಪುರಾಣಗಳಲ್ಲಿ ಇದರ ವರ್ಣನೆ ಇದೆ.ದ್ವಾಪರಾ ಯುಗದಲ್ಲಿ ಭಗವಂತನ ಅವತಾರವಾದ ಶ್ರೀಕೃಷ್ಣನು ಈ ಪಟ್ಟಣವನ್ನು ನಿರ್ಮಿಸಿದನೆಂದು ಉಲ್ಲೇಖವಿದೆ. ಶ್ರೀಕೃಷ್ಣನ ಮೇಲಿನ ವ್ಯೆರತ್ವದಿಂದ ಜರಾಸಂಧನು ಹಲವು ಬಾರಿ ಮಧುರೆಯನ್ನು ಆಕ್ರಮಿಸಿ ಶ್ರೀಕೃಷ್ಣನನ್ನು ಕೊಲ್ಲಬೇಕೆಂದು ಪ್ರಯತ್ನಿಸಿದರೂ ಕೊನೆಗೆ ಸೋತು ಹೋಗಿದ್ದನು. ಆದರೂ ಮರಳಿ ಇನ್ನೂ ದೊಡ್ಡ ಸ್ಯೆನ್ಯವನ್ನು ಕಟ್ಟಿ ಮಧುರೆಗೆ ದಂಡೆತ್ತಿ ಬರಲು ಕಾಯುತಿದ್ದನು. ಅದೇವೇಳೆಗೆ ಕಾಲಯವನನೆಂಬ ಕ್ರೂರ ರಾಕ್ಷಸನೂ ಕೃಷ್ಣನನ್ನು ಮುಗಿಸಿಬಿಡಬೇಕೆಂಬ ಉದ್ದೇಶದಿಂದ ಜರಾಸಂಧನೊಂದಿಗೆ ಕೂಡಿ ಆಕ್ರಮಣಕ್ಕೆ ಸಿದ್ಧತೆ ಮಾಡಿಕೊಂಡನು. ಇದನ್ನೆಲ್ಲಾ ತಿಳಿದ ಕೃಷ್ಣನು ತನ್ನ ವೈರಿಗಳು ಪ್ರಭಲರಾಗಿರುವುದರಿಂದ ತಮಗೆ ಈ ಸಲ ಜಯ ಗಳಿಸಲು ಅಸಾಧ್ಯ ಎಂದು ಅರಿತು ಸಮಸ್ತ ಯಾದವರನ್ನು ಕೂಡಿಕೊಂಡು ಸೌರಾಷ್ಟ್ರದ ಕಡಲ ತೀರಲ್ಲಿರುವ ದ್ವಾರಕೆಗೆ ಬಂದು ನೆಲಸಿದರು.



 ಅಲ್ಲಿ ಸಮುದ್ರ ನಾರಾಯಣನ ಅನುಗ್ರಹ ಪಡೆದು ದೇವ ಶಿಲ್ಪಿ ವಿಶ್ವಕರ್ಮನ ನೆರವಿನಿಂದ ಒಂದು ಸುಂದರ ನಗರಿಯನ್ನು ನಿರ್ಮಿಸುತ್ತಾನೆ.ಅಲ್ಲಿ ಯಾದವರು ಕೃಷಿ,ಗೋಪಾಲನೆ ಮತ್ತು ಸಮುದ್ರ ವ್ಯಾಪಾರ ಮೊದಲಾದ ಕಾಯಕಗಳಿಂದ ಬಹಳ ಉನ್ನತಿಯನ್ನು ಸಾಧಿಸುತ್ತಾರೆ. ಹಾಗೆ ಸ್ವತಃ ಶ್ರೀಕೃಷ್ಣನು ನಡೆದಾಡಿದ ಪವಿತ್ರ ನಾಡು, ಎಲ್ಲ ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರತಾಣವಾಗಿದೆ. ಈ ದೇವಾಲಯವನ್ನು ಶ್ರೀಕೃಷ್ಣನ ಮರಿಮಗನಾದ ವಜ್ರನಾಭನು ನಿರ್ಮಿಸಿದನೆಂದು ಹೇಳುತ್ತಾರೆ. ಇಲ್ಲಿನ ವಿಗ್ರಹವನ್ನು ಆದಿಶಂಕರಾಚಾರ್ಯರು ಪ್ರತಿಷ್ಠೆ ಮಾಡಿದರೆಂದೂ ಹೇಳುತ್ತಾರೆ. ಅದ್ವೈತ ಮತದ ಪ್ರಕಾರ ದ್ವಾರಕೆಯು ಚಾರ್ ಧಾಮ್ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪುರಿ,ದಕ್ಷಿಣದಲ್ಲಿ ರಾಮೇಶ್ವರ ಹಾಗೂ ಪಶ್ಚಿಮದಲ್ಲಿ ದ್ವಾರಕೆಗಳೇ ಈ ನಾಲ್ಕು ಪವಿತ್ರ ಧಾಮಗಳು.

ನಾವು ದ್ವಾರಕೆಗೆ 21ನೇ ತಾರೀಖು ಮದ್ಯಾಹ್ನ 3ಘಂಟೆಗೆ ತಲುಪಿದೆವು. ಆಟೋ ದಲ್ಲಿ ನಾವು ಉಡುಪಿ ಮಾಧ್ವ ಮಠಕ್ಕೆ ಬಂದೆವು. ನಮ್ಮ ರೂಮು ಚೆನ್ನಾಗಿತ್ತು. ಸ್ವಲ್ಪ ವಿಶ್ರಮಿಸಿ, ಸ್ನಾನಾದಿಗಳನ್ನು ಮುಗಿಸಿ, ದೇವಾಲಯದ ಕಡೆ ಹೊರಟೆವು. ಬಹಳ ಸಮೀಪವಾದ್ದರಿಂದ ನಡೆದೇ ಹೊರಟೆವು. ದಾರಿಯಲ್ಲಿ ತುಂಬಾ ದನಗಳಿದ್ದವು. ಗೋಪಾಲಕೃಷ್ಣನ ಊರಲ್ಲವೇ.



 ಎಲ್ಲಾ ದನಗಳೂ ಸಾಧು ಸ್ವಭಾವ ಹೊಂದಿದ್ದವು. ಅವುಗಳಿಗೆ ಯಾರೂ ಹೊಡೆದು ಬಡಿಯುತ್ತಿರಲಿಲ್ಲ. ನಾವು ಮುಂದೆ ಹೋಗುತ್ತಿರಬೇಕಾದರೆ ಹುಲ್ಲು ತುಬಿದ ಒಂದು ಟ್ರಾಕ್ಟರ್ ಒಂದುಬಂದಾಗ ಎಲ್ಲ ದನಗಳೂ ಆ ಹುಲ್ಲು ತಿನ್ನಲು ಮುಂದಾದವು. ಕಡೆಗೆ ಅದರ ಚಾಲಕನು ಟ್ರಾಕ್ಟರ್ ಅನ್ನು ನಿಲ್ಲಿಸಿಯೇ ಬಿಟ್ಟನು. ದನಗಳೆಲ್ಲ ಸಾಕಷ್ಟು ಹುಲ್ಲು ತಿಂದವು!ನಾವು ಮುಂದೆ ಒಂದು ಸಂಧಿಯಲ್ಲಿ ಸಾಗಿದಾಗ ಗೋಮತೀ ನದಿಯ ಸ್ನಾನ ಘಟ್ಟ ತಲುಪಿದೆವು. ಇಲ್ಲಿ ಮಾರ್ಗ ಮದ್ಯದಲ್ಲಿ ಒಂದು ಸ್ಥಂಭವನ್ನು ನಿರ್ಮಿಸಿದ್ದಾರೆ.

 ನದಿಯ ದಂಡೆಗೆ ಸಮಾನಾಂತರವಾಗಿ ಸುಂದರವಾದ ಕಂಭಗಳಿಂದ ಕೂಡಿದ, ಮೇಲ್ಚಾವಣಿ ಹೊಂದಿದ ದಾರಿಯನ್ನು ನಿರ್ಮಿಸುತ್ತಿದ್ದಾರೆ.

 ಹೆದ್ದಾರಿಯ ಪಕ್ಕದಲ್ಲಿ ಸುಂದರವಾದ ಮಹಾದ್ವಾರವೂ ಅದರಇಕ್ಕೆಲಗಳಲ್ಲಿ ದೊಡ್ಡದಾದ 2 ಆನೆಗಳ ಪ್ರತಿಮೆಗಳೂ ನಿರ್ಮಾಣದ ಮುಕ್ತಾಯ ಹಂತದಲ್ಲಿದೆ. 

ಈ ಕಾರ್ಯವು ರಿಲಾಯನ್ಸ್ ಕಂಪನಿಯ ವತಿಯಿಂದ ನಡೆಯುತ್ತಿದೆ. ಇದು ಪೂರ್ಣ ಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು.

 ನದಿಗೆ ಇಳಿಯಲು ಸೋಪಾನಗಳನ್ನು ಕಟ್ಟಿದ್ದಾರೆ. ಆದರೇನು, ನಾವು ಹೋದಾಗ ನದಿಯಲ್ಲಿ ಸ್ವಲ್ಪವೇ ನೀರು ಹರಿಯುತಿತ್ತು. ಗೋಮತಿ ನದಿಯು ಸಮುದ್ರವನ್ನು ಸೇರುವ ಸ್ಥಳವಿದು. ಸಮುದ್ರದಲ್ಲಿ ಭರತ ಬಂದಾಗ ನದಿಯ ನೀರೂ ಮೇಲೇರುತ್ತದೆ. ನಾವು ನದಿಯ ಪಕ್ಕದಲ್ಲೇ ಸಾಗಿ ನದಿಗೆ ಇಳಿದೆವು. ಮುಂದೆ ಹೋದಾಗ ನದಿಯಿಂದ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳು ಸಿಗುತ್ತವೆ. ಕೈಕಾಲು ತೊಳೆದು ಮೆಟ್ಟಿಲುಗಳನ್ನೆರಿದೆವು.



 ಮುಂದೆ ಸ್ವಲ್ಪ ದೂರ ಅಂಗಡಿಗಳ ಸಾಲು. ನಂತರ ಮತ್ತೆ ಮೆಟ್ಟಿಲುಗಳು. ಅಲ್ಲೇ ಮಹಾದ್ವಾರ. ಈ ದ್ವಾರಕ್ಕೆ ಸ್ವರ್ಗ ದ್ವಾರ ಎಂದು ಹೆಸರು. ಅದನ್ನು ಪ್ರವೇಶಿಸುವ ಮೊದಲು ತುಂಬಾ ಫೋಟೋ ತೆಗೆದೆವು. ಯಾಕೆಂದರೆ ಒಳಗಡೆಗೆ ಕೆಮರಾ ಮೊಬೈಲ್ ಏನನ್ನೂ ಕೊಂಡೊಯ್ಯುವಂತಿಲ್ಲ.ದೇವಾಲಯದ ಟ್ರಸ್ಟ್ ನ ಖಚೇರಿಯಲ್ಲಿ ಅವುಗಳನ್ನು ಜಮಾ ಮಾಡಿ ಒಳಗಡೆ ಹೋದೆವು.



 ಇಲ್ಲಿ ಬಹಳ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಾರೆ. ನನ್ನ ನಾದಿನಿಯ ಕೈಚೀಲದಲ್ಲಿ ಒಂದು ಬಾಲ್ ಪೆನ್ ಇತ್ತು.ಅದನ್ನು ಸಹಾ ಪೂರ್ತಿ ಬಿಚ್ಚಿ ನೋಡಿದರು. ಇದೆಲ್ಲಾ ಭಯೋತ್ಪಾದಕತೆಯ ಕೊಡುಗೆ.

 ದೇವಾಲಯದ ಭವ್ಯ ಗೋಪುರ ಚಾಲುಕ್ಯ ಶೈಲಿಯಲ್ಲಿದೆ. ಇದರಲ್ಲಿ 5 ಅಂತಸ್ತುಗಳಿದ್ದು ಮರಳುಗಲ್ಲಿನಲ್ಲಿ ನಿರ್ಮಿಸಿದ್ದಾರೆ. ಶಿಖರದಲ್ಲಿ ದ್ವಜವು ಹಾರಾಡುತ್ತಿದೆ. 


ಈ ದ್ವಜವನ್ನು ದಿನದಲ್ಲಿ 5 ಸಲ ಬದಲಾಯಿಸುತ್ತಾರೆ. ಹರಿಕೆ ರೂಪದಲ್ಲಿ ಭಕ್ತರು ಮೆರವಣಿಗೆಯಲ್ಲಿ ತಂದು ದ್ವಜಗಳನ್ನು ಒಪ್ಪಿಸುತ್ತಾರೆ. ದ್ವಜ ಸೇವೆ ಒಪ್ಪಿಸಲು ಮುಂಗಡವಾಗಿ ಬುಕ್ ಮಾಡಬೇಕಂತೆ. ಈಗ ಬುಕ್ ಮಾಡಿದರೆ ಅದರ ಸರದಿ ಬರುವುದು 3 ವರ್ಷಗಳ ನಂತರವಂತೆ. ಅಷ್ಟೊಂದು ಹರಿಕೆ ಬಂದಿದೆಯಂತೆ. ದ್ವಾರಕಾದೀಶನ ಈ ದೇವಾಲಯಕ್ಕೆ ತ್ರೈಲೊಕ್ಯ ಸುಂದರ ಜಗತ್ ಮಂದಿರ ಎಂದು ಹೆಸರು.

ಇಲ್ಲಿ 2 ಮಹಾದ್ವಾರಗಳಿವೆ ಗೋಮತೀ ನದಿಭಾಗದಿಂದ ಬರುವ ದ್ವಾರಕ್ಕೆ ಸ್ವರ್ಗ ದ್ವಾರ ಎಂದೂ ಇನ್ನೊಂದು ಕಡೆಯಿಂದ ಬರುವ ದ್ವಾರವು ಮೋಕ್ಷ ದ್ವಾರ ಎಂದು ಹೇಳುತ್ತಾರೆ. ಇಲ್ಲಿ ಬಹಳ ಸುಂದರ ಶಿಲ್ಪ ಕಲಾಕೃತಿಗಳನ್ನು ಕೆತ್ತಿದ್ದಾರೆ.


 ದೇವಾಲಯದ ಒಳಗಡೆ ಗರ್ಭಗುಡಿಯಲ್ಲಿ ಕರಿಶಿಲೆಯಲ್ಲಿ ಕಡೆದ ಅತ್ಯಪೂರ್ವ ಸುಂದರವಾದ ಶ್ರೀಕೃಷ್ಣನ ವಿಗ್ರಹವಿದೆ. ವಜ್ರಾಲಂಕೃತ ದೇವರನ್ನು ಒಮ್ಮೆ ನೋಡಿದಾಗಲೇ ಭಾವಪರವಶರಾಗಿಬಿಡುತ್ತೇವೆ. ಮುಖದಲ್ಲಿ ಮಂದಹಾಸ ಬೀರುತ್ತಾ ನಮ್ಮನ್ನು ನೋಡುತ್ತಿರುವ ಭಗವಂತನೆದುರು ತಲೆಬಾಗಿ ನಮಸ್ಕರಿಸಿದಾಗ ಧನ್ಯತಾ ಭಾವ ಆವರಿಸುತ್ತದೆ. ನಮ್ಮ ಅದೃಷ್ಟದಿಂದ ಆ ದಿನ ಅಷ್ಟು ಜನಸಂದಣಿ ಇದ್ದಿರಲಿಲ್ಲ. ಹಾಗಾಗಿ ಮನದಣಿಯೆ ಹಲವಾರು ಬಾರಿ ದೇವರ ಧರ್ಶನ ಮಾಡಿದೆವು.ಇಲ್ಲಿ ಶ್ರೀ ದೇವರ ಆರತಿ ಸೇವೆಯು ರಾತ್ರಿ 7.45 ಕ್ಕೆ ನಡೆಯುವುದು. ಹಾಗಾಗಿ ನಾವು ಹೊರಗಡೆ ಹೋಗಿ ನದೀ ತೀರದಲ್ಲೇ ಸಾಗಿ ಸಾಗರ ನಾರಾಯಣ ದೇವಾಲಯನೋಡಲು ಹೋದೆವು. ಗೋಮತೀ ನದಿ ಸಮುದ್ರವನ್ನು ಸೇರುವ ಜಾಗದಲ್ಲಿದೆ ಈ ಸುಂದರ ದೇವಾಲಯ. ಅರಬೀ ಸಮುದ್ರದ ಹಿನ್ನಲೆಯಲ್ಲಿ ದೇವಾಲಯದ ಗೋಪುರ ಸುಂದರವಾಗಿ ಕಂಗೊಳಿಸುತ್ತದೆ.

 ಹಿತವಾದ ಗಾಳಿ ಬೀಸುತಿತ್ತು. ಸೂರ್ಯಾಸ್ತವಾಗುತಿದ್ದುದರಿಂದ ಬಾನೆಲ್ಲ ಕೆಂಬಣ್ಣಕ್ಕೆ ತಿರುಗಿ ಪರಿಸರ ಮತ್ತು ದೇವಾಲಯಗಳ ಗೋಪುರಗಳೂ ಕೆಂಬಣ್ಣಕ್ಕೆ ತಿರುಗಿತ್ತು.ಇಲ್ಲಿ ನಾವು ತುಂಬಾ ಫೋಟೋ ತೆಗೆದೆವು. ಕೆಲವು ಪ್ರಯೋಗಗಳನ್ನೂ ನಡೆಸಿದೆವು.
ಸೂರ್ಯ ಮುಳುಗಿದ ಮೇಲೆ ಅಲ್ಲಿಂದ ಹೊರಟು ಇಲ್ಲಿನ ಪೇಟೆ ಸುತ್ತಾಡಿದೆವು. ಅಷ್ಟೇನೂ ದೊಡ್ಡ ಪೇಟೆ ಇಲ್ಲಿಲ್ಲ. ದ್ವಾರಕೆಯ ಕಟ್ಟಡಗಳೂ ಬಹಳ ಹಳೆಯವು,

ಆರತಿಯ ಸಮಯಕ್ಕೆ ಮೊದಲೇ ನಾವು ದೇವಾಲಯಕ್ಕೆ ಮತ್ತೆ ಬಂದೆವು. ಈವಾಗ ಅಲ್ಲಿನ ಸೊಬಗೇ ಬೇರೆ! ಗೋಪುರಕ್ಕೆ ನಾಲ್ಕೂ ದಿಕ್ಕಿನಿಂದ ಲೈಟ್ ಬೀರುತ್ತಾರೆ.ಇದರಿಂದ ಗೋಪುರವು ಒಮ್ಮೆ ಶ್ರೀಗಂಧದ ಬಣ್ಣ ಹೊಂದಿದರೆ ಮತ್ತೊಮ್ಮೆ ರಕ್ತಚಂದನದ ಬಣ್ಣ, ಅರಶಿನ, ಹಸುರು, ನೇರಳೆ ಬಣ್ಣಗಳಿಂದ ಒಂದು ಕನಸಿನ ಲೋಕವನ್ನೇ ಸೃಷ್ಟಿಸುತ್ತಿದೆ. ರಾಜಾಂಗಣದಲ್ಲಿ ಭಕ್ತರು ಅಲ್ಲಲ್ಲಿ ಕುಳಿತು ಭಜನೆ ಮಾಡುತಿದ್ದಾರೆ. ನಾವೂ ಸ್ವಲ್ಪ ಹೊತ್ತು ಅವರೊಂದಿಗೆ ಕುಳಿತಿದ್ದೆವು. ಆರತಿಯ ಸಮಯವಾದ್ದರಿಂದ ಎಲ್ಲರೂ ಒಳಗಡೆ ಹೋದೆವು. ದೇವರಿಗೆ ಅಡ್ಡವಾಗಿ ಪರದೆ ಎಳೆದು ಅಲಂಕಾರ ನಡೆಯುತ್ತಿತ್ತು. ಅಷ್ಟೂ ಹೊತ್ತು ನೆರೆದ ಭಕ್ತರೆಲ್ಲಾ ಜಯಘೋಷ ಮಾಡುತಿದ್ದರು. ಎರಡೂ ಕೈಗಳನ್ನುಮೇಲೆತ್ತಿ ಭಗವಂತನನ್ನು ಪ್ರಾರ್ಥಿಸುತ್ತಿದ್ದರು. ಪರದೆ ಸರಿಯಿತು. ಆರತಿ ಎತ್ತಿದರು, ಭಗವಂತನ ವೈಭವಪೂರ್ಣ ಧರ್ಶನ ಪಡೆದು ಎಲ್ಲರೂ ಧನ್ಯರಾದರು.

ನಾವೂ ಅಲ್ಲಿಂದ ಹೊರಟು ಹೋಟೆಲ್ ನಲ್ಲಿ ಗುಜರಾತಿ ಊಟ ಮಾಡಿ, ಪಕ್ಕದಲ್ಲೇ ಇದ್ದ ಟ್ರಾವೆಲ್ ಏಜನ್ಸಿಯಲ್ಲಿ ಮರುದಿನದ ಬೆಟ್ ದ್ವಾರಕಾ ಧರ್ಶನಕ್ಕಾಗಿ ತಲಾರೂ.70. ರ  ಟಿಕೆಟ್ ಕೊಂಡು ರೂಮಿಗೆ ಬಂದು ನಿದ್ರಿಸಿದೆವು.

ಬೆಟ್ ದ್ವಾರಕಾ

ಬೆಟ್ ದ್ವಾರಕಾ ಒಂದು ದ್ವೀಪ, ದ್ವಾರಕೆಯಿಂದ ಸುಮಾರು 30 ಕಿ.ಮಿ.ದೂರದಲ್ಲಿದೆ. ಕ್ಯಾಂಬೆ ಕೊಲ್ಲಿಯ ಪ್ರಮುಖ ಬಂದರು, ಓಖಾ ಬಂದರಾಗಿದೆ. ಇಲ್ಲಿಂದ ಬೋಟ್ ನಲ್ಲಿಸುಮಾರು 5 ಕಿ.ಮಿ ಸಮುದ್ರ ಪ್ರಯಾಣ ಮಾಡಿ ಬೆಟ್ ದ್ವಾರಕಾ ತಲುಪಬೇಕು. ನಾವು ಬೆಳಗ್ಗೆ ತಿಂಡಿ ಮುಗಿಸಿ 8 ಘಂಟೆಗೆ ಮಿನಿ ಬಸ್ ನಲ್ಲಿ ಹೊರಟೆವು. ಸುಮಾರು 20ಜನರಿದ್ದೆವು. ಮೊದಲಿಗೆ ನಮ್ಮ ಬಸ್ ಹೊರಟು 8 ಕಿ.ಮಿ ದೂರದಲ್ಲಿರುವ ರುಕ್ಮಿಣಿ ಮಂದಿರಕ್ಕೆ ತಲುಪಿತು..ಇಲ್ಲಿ ಶ್ರೀಕೃಷ್ಣನ ಮಡದಿ ರುಕ್ಮಿಣಿಯ ಸುಂದರವಾದ ಮಂದಿರವಿದೆ.

ನಮ್ಮ ಗೈಡ್ ನ ವಿವರಣೆಯ ಪ್ರಕಾರ, ದೂರ್ವಾಸ ಮುನಿ ದ್ವಾರಕೆಗೆ ಬಂದಾಗ ರಾಣಿ ರುಕ್ಮಿಣಿ ಅವರನ್ನು ಬಹಳ ತಡವಾಗಿ ಎದುರುಗೊಂಡದಕ್ಕೆ ಕುಪಿತರಾಗಿ 12 ವರ್ಷ ಕಾಲ ನೀನು ಶ್ರೀಕೃಷ್ಣನಿಂದ ದೂರ ಇರಬೇಕು ಎಂದು ಶಾಪ ಕೊಟ್ಟರಂತೆ. ಹಾಗೆ ಅವಳಿಗೆ ಇಲ್ಲಿ ದೇವಾಲಯ ಕಟ್ಟಿದ್ದಾರೆ. ಇದು ಸಹಾ ಸಮುದ್ರ ಬದಿಯಲ್ಲೇ ಇದ್ದು ಬಹಳ ಸುಂದರ ಗೋಪುರವನ್ನು ಒಳಗೊಂಡಿದೆ. ಒಳಗಡೆ ರುಕ್ಮಿಣಿಯ ಸುಂದರ ಅಮೃತಶಿಲೆಯ ಮೂರ್ತಿ ಇದೆ. ನಮ್ಮ ಮುಂದಿನ ತಾಣ ನಾಗೇಶ್ವರ.

ನಾಗೇಶ್ವರಲಿಂಗವು ಭಾರತಾದ್ಯಂತ ಇರುವ ದ್ವಾದಶ ಜ್ಯೋತಿರ್ಲಿಂಗಳಲ್ಲಿ 12 ನೇ ಜ್ಯೋತಿರ್ಲಿಂಗವಾಗಿದೆ. ಸುಂದರವಾದ ದೇವಾಲಯ ಮತ್ತು ಪರಿಸರವಿದೆ.
 ಒಳಗಡೆ ಪ್ರಶಾಂತವಾಗಿದ್ದು ನಾವು ನಾಗೇಶ್ವರನ ಧರ್ಶನ ಮಾಡಿದೆವು. ಹೊರಗಡೆ ಬಹಳ ದೊಡ್ಡ ಪರಮೇಶ್ವರನ ಕಾಂಕ್ರೀಟ್ ನ ವಿಗ್ರಹ ನಿರ್ಮಿಸಿದ್ದಾರೆ.


 ಅಲ್ಲಿಂದ ಹೊರಟು ನಾವು ಗೋಪಿ ತಲಾವ್ ಎಂಬಲ್ಲಿಗೆ ಬಂದೆವು. ಇಲ್ಲಿ ಒಂದು ದೇವಾಲಯವಿದ್ದು ಪಕ್ಕದಲ್ಲೇ ಒಂದು ದೊಡ್ಡ ಸರೋವರವಿದೆ. ಇಲ್ಲಿ ಗೋಪಿಯರು ಜಲಕ್ರೀಡೆ ಆಡುತ್ತಿದ್ದರಂತೆ. ಕೊನೆಗೆ ಕೃಷ್ಣನು ಅವರಿಗೆಲ್ಲ ಈ ಸರೋವರದಲ್ಲೇ ಮೋಕ್ಷವನ್ನು ಕೊಡಿಸಿದನು ಎಂದು ಐತಿಹ್ಯ.



ಕೊನೆಗೆ ನಾವು ಒಖಾ ತಲುಪಿದೆವು. ಅಲ್ಲಿನ ಬೋಟ್ ಜೆಟ್ಟಿಯಲ್ಲಿ ಸರದಿಯಲ್ಲಿ ನಿಂತು ಬೋಟ್ ಏರಿದೆವು. ಸುಮಾರು 150 ಜನರನ್ನು ಹತ್ತಿಸುತ್ತಾರೆ.


 5  ಕಿ.ಮಿ. ಸಮುದ್ರ ಯಾನ, ಬಹಳ ಮಜಾ ಆಗಿತ್ತು. ಬಂದರಿನಲ್ಲಿ ನಿಂತಿರುವ ದೊಡ್ಡ ಹಡಗುಗಳನ್ನೂ ನೋಡಿದೆವು. ಮೀನುಗಾರಿಕೆಯಲ್ಲಿ ತೊಡಗಿರುವ ಹಲವಾರು ನಾವೆಗಳೂ ಇದ್ದವು.












 ಒಟ್ಟು ಅರ್ಧಘಂಟೆ ಪ್ರಯಾಣಿಸಿ ಬೆಟ್ ತಲುಪಿದೆವು. ಅಲ್ಲಿಯೂ ಜೆಟ್ಟಿ ಇತ್ತು. ಪ್ರಯಾಣ ದರ ಒಬ್ಬರಿಗೆ 10 ರೂ. ಬೆಟ್ ದ್ವಾರಕ ಒಂದು ದ್ವೀಪ.ಇಲ್ಲಿ ಸುಮಾರು 5000 ಜನಸಂಖ್ಯೆ ಇದ್ದು ಹೆಚ್ಚಿನವರು ಮುಸ್ಲಿಮರು.


 ಬರಿಯ 1000 ಮಂದಿ ಹಿಂದೂಗಳು ಮತ್ತು ಕೆಲವೇ ಬ್ರಾಹ್ಮಣ ಕುಟುಂಬಗಳಿವೆಯಂತೆ. ಅವರಿಗೆಲ್ಲಾ ಅಕ್ಕಿ ಮತ್ತಿತರ ಅಹಾರ ವಸ್ತುಗಳು ಒಖಾದಿಂದಲೇ ಬರಬೇಕು. ಮೀನುಗಾರಿಕೆ ಇಲ್ಲಿನ ನಿವಾಸಿಗಳ ಮುಖ್ಯ ಕಸುಬು.

ಶ್ರೀಕೃಷ್ಣನ ಕಾಲದ ಸುಂದರ ನಗರಿ ಈಗ ಕಾಣಸಿಗುವುದೇ ಇಲ್ಲ. ದ್ವಾಪರಾ ಯುಗದ ಅಂತ್ಯ ಕಾಲದಲ್ಲಿ ಯಾದವರೆಲ್ಲಾ ತಮ್ಮ ತಮ್ಮಲ್ಲೇ ಹೊಡೆದಾಡಿ ಸತ್ತರು ಎಂದು ಪುರಾಣ ಹೇಳುತ್ತದೆ. ಇದರಿಂದ ಶ್ರೀಕೃಷ್ಣನಿಗೆ ತುಂಬಾ ದುಃಖವಾಗಿ ಪೂರ್ತಿ ದ್ವಾರಕಾ ನಗರಿಯನ್ನೇ ಸಮುದ್ರದಲ್ಲಿ ಮುಳುಗಿಸುತ್ತಾನೆ. ಮತ್ತು ತಾನು ತನ್ನ ಅವತಾರವನ್ನು ಸಮಾಪ್ತಿಗೊಳಿಸುತ್ತಾನೆ. ಈಗಲೂ ಸಮದ್ರದ ಅಡಿಯಲ್ಲಿ ಸುಮಾರು 40 ಅಡಿಗಳಷ್ಟು ಕೆಳಗಡೆ ಒಂದು ದೊಡ್ಡ ನಗರಿಯೇ ಮುಳುಗಡೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ.2001 ರಲ್ಲಿ ನೇಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನೋಲಜಿ (NIOT) ಮತ್ತು S .R. RAO ಎಂಬ ಸಂಶೋಧಕರು ಮುತುವರ್ಜಿವಹಿಸಿ ಈ ಪಟ್ಟಣವನ್ನು  ಕಂಡುಹಿಡಿದಿದ್ದಾರೆ. ಇದನ್ನು ನಾವು ಯು ಟ್ಯೂಬ್ ನಲ್ಲಿ ನೋಡಬಹುದು. ಆದರೆ ಇದು ನಿಜವಾದ ಶ್ರೀಕೃಷ್ಣನ ದ್ವಾರಕೆ ಎಂಬುದು ಇನ್ನೂ ವಿವಾದದಲ್ಲಿದೆ. ನಾವು ಬೋಟ್ ನಲ್ಲಿ ಸಾಗಿದ ಸಮುದ್ರದ ಕೆಳಗಡೆಯೇ ಈ ಮುಳುಗಿರುವ ಪಟ್ಟಣ ಇದೆಯಂತೆ.

ಬೆಟ್ ಎಂದರೆ ಭೇಟಿ ಎಂದೂ ಆಗುತ್ತದೆ, ಭೇಂಟ್ ಎಂದರೆ ಕಾಣಿಕೆ ಎಂದೂ ಆಗುತ್ತದೆ. ಇಲ್ಲಿ ಕೃಷ್ಣನ ಗೆಳೆಯ ಸುಧಾಮನು ತನ್ನ ಕಷ್ಟ ಕಾಲದಲ್ಲಿ ಕೃಷ್ಣನನ್ನು ಭೇಟಿ ಆಗಲು ಬಂದ ಸ್ಥಳವಂತೆ. ಹಾಗೆ ಬರುವಾಗ ಅವಲಕ್ಕಿಯ ಪುಟ್ಟ ಗಂಟನ್ನು ಕೃಷ್ಣನಿಗೆ ಅರ್ಪಿಸಲು ತರುತ್ತಾನೆ. ಹಾಗಾಗಿ ಭೆಟ್ ದ್ವಾರಕ ಎಂದು ಹೆಸರು ಬಂತು.ಇಲ್ಲಿ ದ್ವಾರಕಾ ದೆವಾಲಯಕ್ಕಿಂತಲೂ ಪುರಾತನವಾದ ದ್ವಾರಕಾದೀಶನ ದೇವಾಲಯವಿದೆ. ಅಷ್ಟೇನು ದೊಡ್ಡ ಮಂದಿರವಲ್ಲ. ಇಲ್ಲಿ ಕೃಷ್ಣ, ಬಲರಾಮ ಮತ್ತು ಕೃಷ್ಣನ ರಾಣಿಯರಾದ ರುಕ್ಮಿಣಿ, ಸತ್ಯಭಾಮ, ಜಾಂಬವತಿ ಮತ್ತು ರಾಧೆಯರ ಗುಡಿ ಇದೆ. ನಮಗೆ ಕೊಟ್ಟಿರುವ ಕಾಲಾವಕಾಶ ಕಡಿಮೆ ಇದ್ದುದರಿಂದ ಅಲ್ಲಿಂದ ಬೇಗನೆ ಮರಳ ಬೇಕಾಯಿತು. ದ್ವೀಪದಲ್ಲಿ ಸುತ್ತಾಡುವ ಅವಕಾಶ ಇರಲಿಲ್ಲ. ಮರಳಿ ಬೋಟ್ ನಲ್ಲಿ ಪಯಣಿಸಿ ನಂತರ ಬಸ್ ನಲ್ಲಿ ದ್ವಾರಕಾ ತಲುಪುವಾಗ ಮಧ್ಯಾಹ್ನ 2 ಘಂಟೆ. ಅಲ್ಲೇ ಊಟ ಮುಗಿಸಿ ರೂಮಿಗೆ ಬಂದು ಸ್ವಲ್ಪ ವಿಶ್ರಾಮ ಪಡೆದೆವು. ಮತ್ತೊಮ್ಮೆ ದ್ವಾರಕಾದೀಶನ ಧರ್ಶನ, ಆರತಿ, ಪ್ರಸಾದ ಎಲ್ಲಾ ಪಡೆದು ಧನ್ಯತೆಯಿಂದ ರೂಮಿಗೆ ಮರಳಿದೆವು.

ಮರುದಿನ ಬೆಳಿಗ್ಗೆ ನಮ್ಮ ಪ್ರಯಾಣ ಸೋಮನಾಥಕ್ಕೆ.


























Friday, 20 December 2013

BEKAL FORT KASARAGOD



ಬೇಕಲ ಕೋಟೆ
ಕಾಸರಗೋಡಿನಿಂದ ದಕ್ಷಿಣಕ್ಕೆ ಸುಮಾರು 18 ಕಿ.ಮೀ.ದೂರದಲ್ಲಿ ಅರಬೀ ಸಮುದ್ರಕ್ಕೆ ಮೈಯೊಡ್ಡಿ ನಿಂತಿದೆ ಒಂದು ಪರಿಪೂರ್ಣ ಸುಂದರ, ಐತಿಹಾಸಿಕ ಕೋಟೆ- ಬೇಕಲ ಕೋಟೆ. ಇಲ್ಲಿಗೆ ಭೇಟಿ ಕೊಡುವುದೆಂದರೆ ಒಂದು ಅನಿರ್ವಚನೀಯ ಅನುಭವ. ಐತಿಹಾಸಿಕ ಅನುಭವಗಳೊಂದಿಗೆ ಅರಬೀ ಸಮುದ್ರದ ಆಹ್ಲಾದಕರ ನೋಟವನ್ನೂ ಅನುಭವಿಸಬಹುದು.ಈ ಕೋಟೆಯನ್ನು ಇಕ್ಕೇರಿ ನಾಯಕರಲ್ಲಿ ಪ್ರಸಿದ್ಧನಾಗಿರುವ ಶಿವಪ್ಪನಾಯಕನು ಸುಮಾರು 1650 ನೇ ಇಸವಿಯಲ್ಲಿ ಕಟ್ಟಿಸಿದನಂತೆ. ತುಳುನಾಡು ಎಂದು ಕರೆಸಿಕೊಳ್ಳುತಿದ್ದ ಪ್ರದೇಶದ ಒಂದು ಪ್ರಮುಖ ರಕ್ಷಣಾ ಕೋಟೆ ಇದಾಗಿತ್ತು.
ಸ್ಥಳೀಯರು ಆಗ ಇದನ್ನು ದೇಕಲ ಕೋಟೆ ಎಂದು ಕರೆಯುತಿದ್ದರು. ಇದನ್ನು ಕಟ್ಟಿ ಮುಗಿಸಿದಾಗ ಇದಕ್ಕೆ ಒಂದು ಹೆಸರು ಇಡಬೇಕಿತ್ತು. ಹಲವಾರು ಹೆಸರು ಸೂಚಿತವಾದರೂ ಯಾವ ಹೆಸರೂ ನಾಯಕರಿಗೆ ತೃಪ್ತಿ ತರಲಿಲ್ಲ. ಯಾವುದಾದರೊಂದು ಹೆಸರು ಬೇಕಲ್ಲಾ, ಬೇಕಲ್ಲಾ ಎಂದು ಚರ್ಚಿಸಿದಾಗ ಕೊನೆಗೆ ಬೇಕಲವೆಂಬ ಹೆಸರೇ ಖಾಯಂ ಆಯಿತಂತೆ.ಇದು ಅಂತೆ ಕಂತೆ ಅಷ್ಟೇ.
ನಾಯಕರ ಆಳ್ವಿಕೆ ಕೊನೆಗೊಂಡು ಈ ಕೋಟೆಯು ಟಿಪ್ಪು ಸುಲ್ತಾನನ ವಶಕ್ಕೆ ಬಂದು ತರುವಾಯ 1799 ರಲ್ಲಿ ಆತನ ಮರಣದ ನಂತರ ಬ್ರಿಟಿಷರ ವಶವಾಯಿತು. ಆ ಮೇಲೆ ಸ್ವಾತಂತ್ರ್ಯ ದೊರೆತಮೇಲೆ ಸರಕಾರದ ಸೊತ್ತು ಆಗಿ ಉಳಿಯಿತು. ಈ ಕಾಲದಲ್ಲಿ ಏನೊಂದೂ ವಿಷೆಶಗಳಿಲ್ಲದೆ ಕೋಟೆಯೂ ತನ್ನ ಗತಕಾಲದ ನೆನಪುಗಳನ್ನು ಮೆಲುಕಾಡುತ್ತಾ ತೂಕಡಿಸುತಿತ್ತು. ಅಲ್ಲಿ ಒಂದು ಪ್ರವಾಸಿ ಬಂಗಲೆ ಮತ್ತು ಅಡಿಗೆ ಮನೆ, ಕಾವಲುಗಾರನ ನಿವಾಸ ನಿರ್ಮಿತವಾಯಿತು.
ನಾವು ಚಿಕ್ಕಂದಿನಲ್ಲಿ ಇಲ್ಲಿಗೆ ಪಿಕ್ನಿಕ್ ಗೆಂದು ಬರುತಿದ್ದೆವು. ಆಗ ಇಲ್ಲಿ ಯಾವುದೇ ಪ್ರೆವೇಶ ಧನ, ಕಟ್ಟುಪಾಡುಗಳು ಇರುತ್ತಿರಲಿಲ್ಲ. ಇಲ್ಲಿ ಕುಡಿಯುವ ನೀರಿನ ಸೌಲಭ್ಯ ಸಹಾ ಇರಲಿಲ್ಲ. ನಮಗೆ ಬೇಕಾದ ತಿಂಡಿ, ನೀರು ಎಲ್ಲಾ ಕಟ್ಟಿಕೊಂಡು ಬೆಳಗ್ಗೆ ಕಾಸರಗೋಡಿನಿಂದ ಬಂದು, ನಮ್ಮಿಷ್ಟ ಬಂದಂತೆ ಆಟವಾಡಿ, ಸಮುದ್ರ ಸ್ನಾನ ಮಾಡಿ ಸಂಜೆಯಾದ ಮೇಲೆ ವಾಪಾಸು ಮನೆಗೆ ಮರಳುತಿದ್ದೆವು. ಹೆಚ್ಚೂ ಕಮ್ಮಿ ನಿರ್ಜನ ಕೋಟೆಯಾಗಿತ್ತು.
ಯಾವಾಗ ಇಲ್ಲಿ ತಮಿಳು ಸಿನೆಮಾ ಬೋಂಬೈ ಚಿತ್ರೀಕರಣವಾಯಿತೋ, ಈ ಕೋಟೆಯ ಭಾಗ್ಯದ ಬಾಗಿಲು ತೆರೆಯಿತು. ಬಹಳ ಸುಂದರವಾಗಿ ಕೋಟೆಯನ್ನು ಸಿನೆಮಾದಲ್ಲಿ ಚಿತ್ರಿಸಿದರು ಮಣಿರತ್ನಂ. ಆಮೇಲೆ ಇಲ್ಲಿಗೆ ಚಿತ್ರ ನಿರ್ಮಾಪಕರ, ಜಾಹಿರಾತುದಾರರ ದಂಡೇ ಬಂದವು. ಸರಕಾರಕ್ಕೂ ಈಗ ಎಚ್ಚರವಾಗಿರಬೇಕು. ಇಲ್ಲಿನ ಮಹತ್ವ ಮನವರಿಕೆಯಾಗಿ 1995 ರಲ್ಲಿ ಬೇಕಲ ಕೋಟೆಯನ್ನು ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರ ಎಂದು ಘೋಷಿಸಿ ಅದಕ್ಕೆ ಒಂದುನಿಗಮವನ್ನು ಸ್ಥಾಪಿಸಿತು. ಇದರ ಫಲವಾಗಿ ಕೋಟೆಯು ಬಹಳ ಅಭಿವೃದ್ಧಿ ಪಡೆಯಿತು. ದುರಸ್ತಿ ಕಾರ್ಯಗಳೂ ಚೆನ್ನಾಗಿ ನಡೆದವು. ಸುಂದರವಾದ ಉದ್ಯಾನವನ್ನು ಬೆಳೆಸಿ ಪ್ರವಾಸಿಗಳ ಮನಕ್ಕೆ ಮುದವನ್ನು ಕೊಡುವ ತಾಣವನ್ನಾಗಿಸಿದರು. ಪ್ರವೇಶಧನ ರೂ.5  ಮತ್ತು ಕೆಮರಾಕ್ಕೆ ರೂ.25 ಇರಿಸಿದ್ದಾರೆ. ಸೂರ್ಯಾಸ್ತವಾದಮೇಲೆ ಇಲ್ಲಿ ಪ್ರವೇಶ ನಿಷಿದ್ಧ. ಕೋಟೆಯ ಒಳಗಡೆ ಒಂದೆರಡು ಅಂಗಡಿಗಳಿದ್ದು ಪ್ರವಾಸಿಗಳ, ಮಕ್ಕಳ ಬೇಡಿಕೆ ಪೂರಯಿಸುತ್ತಿವೆ. ಕೋಟೆಯ ಹೊರ ಭಾಗದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು ಪಕ್ಕದಲ್ಲಿ ಹಲವಾರು ಸ್ಟಾಲ್ ಗಳು ತಲೆ ಎತ್ತಿವೆ.
ಕೋಟೆಯ ಮುಂಭಾಗದಲ್ಲಿ ಕಂದಕವಿದ್ದು ಹಿಂದೊಮ್ಮೆ ಅದರ ತುಂಬಾ ನೀರು ತುಂಬಿಸಿ ಮೊಸಳೆಗಳನ್ನು ಅದರಲ್ಲಿ ಸಾಕುತ್ತಿದ್ದಿರಬೇಕು. ಮುಂಭಾಗದ ಮುಖ್ಯ ದ್ವಾರವನ್ನು ದಾಟುತ್ತಿದ್ದಂತೆಯೇ ಕೋಟೆಯ ರಕ್ಷಕ ಸ್ವಾಮಿಯಾದ ಆಂಜನೇಯನ ಗುಡಿ ಸಿಗುತ್ತದೆ. ಇದನ್ನು ಮುಖ್ಯಪ್ರಾಣ ದೇವಸ್ಥಾನ ಎಂದು ಕರೆಯುತ್ತಾರೆ. ಅಲ್ಲಿಂದ ಎಡಗಡೆಗೆ ತಿರುವಿನಲ್ಲಿ ಸಾಗಿದರೆ ಪ್ರವೇಶಕ್ಕಾಗಿ ಟಿಕೆಟ್ ಕೊಡುವ ಕೌಂಟರ್ ಸಿಗುತ್ತದೆ. ಟಿಕೆಟ್ ಪಡಕೊಂಡು ಮುಂದಿನ ದ್ವಾರ ಪ್ರವೇಶಿಸಿದೊಡನೆ ನಮಗೆ ಕೋಟೆಯ ಸಮಗ್ರ ಧರ್ಶನವಾಗುತ್ತದೆ. ಸುಂದರವಾದ ಹುಲ್ಲುಗಾವಲನ್ನು ಬೆಳೆಸಿದ್ದಾರೆ. ಅದರ ಅಂಚಿನಲ್ಲಿ ಹೂವಿನ ಗಿಡಗಳು ನಮ್ಮನ್ನು ಆಮಂತ್ರಿಸುತ್ತವೆ.


 ಮಧ್ಯದಲ್ಲಿ ಇರುವ ದಾರಿಯಲ್ಲಿ ಸಾಗಿದರೆ ನಮಗೆ ಎತ್ತರವಾದ ಒಂದು ಬುರುಜು, ವೀಕ್ಷಣಾಸ್ಥಳ ಕಾಣುತ್ತದೆ. ಇದನ್ನು ಏರಲು ಉತ್ತಮ ಏರುದಾರಿಯಿದೆ. ಹಿಂದೆ ಇದರಲ್ಲೇ ಫಿರಂಗಿಗಳನ್ನೂ ಮೇಲ್ಗಡೆ ಸಾಗಿಸುತ್ತಿದ್ದರಂತೆ. ಅಲ್ಲಿಂದ ನೋಡಿದರೆ ನಮಗೆ ಸುತ್ತಲಿನ 360 ಡಿಗ್ರಿಯ ನೋಟ ಸಾಧ್ಯ.



 ದೂರದ ಪಳ್ಳಿಕ್ಕೆರೆ, ಉದುಮ ಮತ್ತು ಹೊಸದುರ್ಗಗಳವರೆಗೆಗಿನ ನೋಟಗಳು ಕಾಣುತ್ತವೆ. ಹಾಗೇನೆ ಪಶ್ಚಿಮದಲ್ಲಿ ವಿಶಾಲ ಅರಬಿ ಸಮುದ್ರವೂ ಅದರಲ್ಲಿ ಸಾಗುತ್ತಿರುವ ಹಡಗು, ಮೀನುಗಾರಿಕಾ ನಾವೆಗಳೂ ಕಾಣುತ್ತವೆ. ಕೋಟೆಯ ಬಹುಪಾಲು ಸಮುದ್ರ ಆವರಿಸಿಕೊಂಡಿದೆ.



 ಎಂಥಹಾ ಬೇಸಿಗೆಯಲ್ಲೂ ಇಲ್ಲಿ ಸಮುದ್ರದಿಂದ ಬೀಸುವ ತಂಪಾದ ಗಾಳಿ ನಮ್ಮನ್ನು ಮುದಗೊಳಿಸುತ್ತದೆ. ಇಲ್ಲೇ ಕೆಳಗಡೆ ಒಂದು ನೀರಿನ ಭಾವಿ ಸಹಾ ಕಾಣಬಹುದು.
 ಇಲ್ಲಿಂದ ಕೆಳಗಿಳಿದು ಮುಂದೆ ಸಾಗಿದರೆ ಅಲ್ಲಿ ಮತ್ತೊಂದು ಬುರುಜು ಸಿಗುತ್ತದೆ. ಅಲ್ಲೇ ಪಕ್ಕದಲ್ಲಿ ಹಿಂದಿನಕಾಲದ ಮದ್ದು ಗುಂಡು ಮೊದಲಾದ ಸ್ಪೋಟಕ ಸಾಮಗ್ರಿಗಳನ್ನು ಸಂಗ್ರಹಿಸಿಡುವ ಒಂದು ಉಗ್ರಾಣ ಸಿಗುತ್ತದೆ.



 ಮುಂದೆಲ್ಲಾ ಸಾಗಿದಂತೆ ಕೋಟೆಯ ಗೋಡೆಯ ಅಂಚಿನಲ್ಲೇ ನಮಗೆ ಇನ್ನೂ ಹಲವು ಬುರುಜುಗಳು ಎದುರಾಗುತ್ತವೆ. ಇಲ್ಲಿ ಅರಬೀ ಸಮುದ್ರದ ಸುಂದರ ನೋಟ ಸಿಗುತ್ತದೆ. ಕೋಟೆಯ ಗೋಡೆಗಳಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಕಂಡಿಗಳಿದ್ದು ಕೊವಿಗಳಿಂದ ಗುಂಡು ಹಾರಿಸಲು ಮಾಡಿದ ರಚನೆಗಳು ಎಂದು ಗೊತ್ತಾಗುತ್ತದೆ. ಅಂತೆಯೇ ಬುರುಜುಗಳಲ್ಲಿ ಫಿರಂಗಿಗಳಿಂದ ಗುಂಡು ಸಿಡಿಸಲು ಕೊಂಚ ಅಗಲವಾದ ಸಂಧಿಯನ್ನೂ ರಚಿಸಿದ್ದಾರೆ.



 ಇಲ್ಲಿ ಕೋಟೆಯ ಎಡಭಾಗದಲ್ಲಿ ಒಂದು ಗುಹಾ ಮಾರ್ಗವಿದ್ದು ಅದರಲ್ಲಿ ಇಳಿದು ಬಗ್ಗಿಕೊಂಡು ಸಾಗಿದರೆ ಕಡಲ ತೀರಕ್ಕೆ ಹೋಗಬಹುದು. ಹಿಂದೆ ನಾವೆಷ್ಟೋ ಸಲ ಅದರಲ್ಲಿ ಸಾಗಿದ್ದೆವು. ಆದರೆ ಈಗ ಅಲ್ಲೆಲ್ಲಾ ಒಂದು ಜಾತಿಯ ಎತ್ತರವಾದ ಹುಲ್ಲು ಬೆಳೆದು ಆ ಸುರಂಗ ಎಲ್ಲಿದೆ ಎಂದು ತಿಳಿಯುವುದೇ ಇಲ್ಲ. ಈ ಹುಲ್ಲನ್ನು ತೆಗೆದರೆ ಖಂಡಿತಾ ಆ ಸುರಂಗ ಮಾರ್ಗ ಗೋಚರಿಸುವುದು. ಇಲಾಖೆಯವರು ಈ ಬಗ್ಗೆ ಅವಶ್ಯ ಗಮನಹರಿಸಬೇಕು.






 ಮುಂದೆ ಹೋದಂತೆ ಕೋಟೆಯಿಂದ ಸಮುದ್ರಮುಖವಾಗಿ ಒಂದು ಬಾಗಿಲು ಇದೆ. ಅಲ್ಲಿಂದ ಕೆಳಗಿಳಿಯಲು ಮೆಟ್ಟಿಲುಗಳಿವೆ. ಇದರಲ್ಲಿಳಿದು ಹೋದರೆ ನೇರ ಸಮುದ್ರಕ್ಕೆ ತಾಗಿಕೊಂಡೇ ಇರುವ ಒಂದು ಬುರುಜು ಸಿಗುತ್ತದೆ.












 ಇದೇ ಇಲ್ಲಿನ ಮುಖ್ಯ ಆಕರ್ಷಣೆ ಎನ್ನಬಹುದು. ಇಲ್ಲಿ ನಿಂತರೆ ಸಿಗುವ ಆನಂದ ಅಷ್ಟಿಷ್ಟಲ್ಲ. ನೀರಿನ ತೆರೆಗಳು ಭೋರ್ಗರೆಯುತ್ತಾ ಬುರುಜು ಮತ್ತು ಅದರ ಸುತ್ತಲಿನ ಬಂಡೆಗಳಿಗೆ ಅಪ್ಪಳಿಸುವಾಗ  ಅಷ್ಟೆತ್ತರಕ್ಕೆ ನೀರು ಚಿಮ್ಮಿ ಪ್ರವಾಸಿಗಳನ್ನು ಕೇಕೆ ಹಾಕುವಂತೆ ಮಾಡುತ್ತದೆ. ಕೆಲವೊಮ್ಮೆ ಅಲ್ಲಿ ನಿಂತವರ ಮೇಲೂ ನೀರಿನ ಪ್ರೋಕ್ಷಣೆ ಮಾಡುತ್ತವೆ. ಇಲ್ಲಿ ಸೂರ್ಯಾಸ್ತವನ್ನೂ ನೋಡಬಹುದು.





ಕೋಟೆಯಲ್ಲಿ ಹಿಂದಿನ ಕಾಲದ ಕಟ್ಟಡಗಳು ಯಾವುದೂ ಈಗ ಕಾಣಲಾರೆವು. ಕೆಲವು ಕಡೆ ಹಳೆಯ ಕಟ್ಟಡದ ತಳಪಾಯ ಮಾತ್ರ ಇದೆ. ಇಲ್ಲಿನ ಒಂದು ಕೊರತೆ ಎಂದರೆ ಮಳೆ ಬಂದಾಗ ಆಶ್ರಯ ಪಡೆಯಲು ಯಾವ ಸೌಕರ್ಯವೂ ಇಲ್ಲ. ಬೇಕಿದ್ದರೆ ಪ್ರವಾಸಿ ಬಂಗಲೆಯ ಜಗಲಿಗೆ ಓಡಬೇಕಷ್ಟೇ.
ನಿಜಕ್ಕೂ ಇದೊಂದು ಅವಶ್ಯವಾಗಿ ನೋಡಲೇ ಬೇಕಾದ ತಾಣ. ನೀವೂ ನೋಡಬನ್ನಿ.


Friday, 22 March 2013

Lakkundi



ಲಕ್ಕುಂಡಿಯ ವೈಭವ.

ತ್ರಿಕೂಟೇಶ್ವರ ದೇಗುಲಗಳ ದರ್ಶನ ಮುಗಿಸಿಕೊಂಡು ಹೋಟೆಲ್ ರೂಮಿಗೆ ಮರಳಿ ಬೆಳಗ್ಗಿನ ತಿಂಡಿ ಪೂರೈಸಿಕೊಂಡು ಲಕ್ಕುಂಡಿಯತ್ತ ನಮ್ಮ ಪಯಣ. ಹೋಟೆಲ್ ವಿಶ್ವದ ಎದುರುಗಡೆಯೇ ಇರುವ ಬಸ್ ಸ್ಟಾಪ್ ಗೆ ಬಂದೆವು. ಸ್ವಲ್ಪ ಹೊತ್ತಲ್ಲೇ ಅತಾಧುನಿಕ ಬಸ್ ಬಂದಿತು. ರಶ್ ಇರಲಿಲ್ಲ. ಇಲ್ಲಿಂದ ಲಕ್ಕುಂಡಿಗೆ ಕೇವಲ 11 ಕಿ.ಮೀ. ದೂರ. ಇಬ್ಬರಿಗೆ 22 ರೂ.ಚಾರ್ಜು. ಅರ್ಧ ಘಂಟೆಯಲ್ಲಿ ನಾವು ಲಕ್ಕುಂಡಿ ದೇವಾಲಯಗಳ ಸ್ಟಾಪ್ ನಲ್ಲಿ ಇಳಿದೆವು. ಇಲ್ಲಿಂದ ಸುಮಾರು 200 ಮೀಟರ್ ದೂರ ಸಾಗುತ್ತಲೇ ಲಕ್ಕುಂಡಿಯ ಮ್ಯುಸಿಯಂ ನಮ್ಮನ್ನು ಸ್ವಾಗತಿಸಿತು. ಇದರ ಸುತ್ತೆಲ್ಲಾ ಹಳ್ಳಿ ಮನೆಗಳು ಆವರಿಸಿದ್ದವು. ಬರುವ ಹಾದಿಯಲ್ಲಿ ಹಲವಾರು ಹಂದಿಗಳು ತಮ್ಮ ಕಾಯಕ ನಡೆಸಿದ್ದವು.


    


ಸಂಗ್ರಹಾಲಯದ ಆವರಣದಲ್ಲಿ ಸೊಗಸಾದ ಹುಲ್ಲು ಹಾಸು, ಪಕ್ಕದಲ್ಲಿ ಹೂಗಿಡಗಳನ್ನು ಬೆಳೆಸಿದ್ದರು. ಅಲ್ಲಲ್ಲಿ ಭಗ್ನಗೊಂಡಿರುವ ಶಿಲ್ಪಗಳನ್ನು ಇರಿಸಿ ಇನ್ನೂ ಆಕರ್ಷಕವಾಗಿರಿಸಿದ್ದರು. ತಲಾ 5 ರೂ. ಪ್ರವೇಶ ಧನ ತೆತ್ತು ಒಳಗಡೆ ಹೋದೆವು. ಇಲ್ಲಿ ಲಕ್ಕುಂಡಿಯ ಸಮಗ್ರ ಪರಿಚಯ, ಕಾಲಮಾನ, ರಾಜರುಗಳ ಆಳ್ವಿಕೆಯ ಕಾಲ ಎಲ್ಲವನ್ನೂ ವಿವರವಾಗಿ ಬಹಳ ವ್ಯವಸ್ಥಿತವಾಗಿ ಬರೆದು ಇರಿಸಿದ್ದಾರೆ. ಇಲ್ಲಿ ಒಳಗಡೆ ಫೋಟೋ ತೆಗೆಯಲು ಅವಕಾಶವಿಲ್ಲ ಎಂದು ತಿಳಿಸಿದರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೈಪಿಡಿಗಳೆನಾದರೂ ಸಿಗುವುದೋ ಎಂದು ವಿಚಾರಿಸಿದರೆ ಅದೂ ಇರಲಿಲ್ಲ,ಅದೆಲ್ಲ ಸಧ್ಯದಲ್ಲೇ ನಡೆಯಲಿರುವ ಲಕ್ಕುಂಡಿ ಉತ್ಸವ ವೇಳೆಗೆ ಸಿಗುತ್ತದೆ ಎಂಬ ಮಾಹಿತಿ ದೊರೆಯಿತು.

ಒಳಗಡೆ ವಿಶಾಲವಾದ 3 ಹಾಲ್ ಗಳಲ್ಲಿ ಇಲ್ಲಿ ಸುತ್ತು ಮುತ್ತು ದೊರಕಿರುವ ಶಿಲ್ಪಗಳನ್ನು ಜೋಡಿಸಿದ್ದಾರೆ. ಚತುರ್ಮುಖ ಬ್ರಹ್ಮನ ಹಲವಾರು ಮಾದರಿಗಳಿವೆ. ಇದಲ್ಲದೆ ಬೇರೆ ಹಲವಾರು ಶಿಲ್ಪಗಳೂ ಇವೆ. ಒಂದು ಹಾಲ್ ನ ಮಧ್ಯದಲ್ಲಿ ಸೂರ್ಯನಾರಾಯಣನ ವಿಗ್ರಹವಿರಿಸಿದ್ದಾರೆ. ಇದು ಹಿಂದೆ ಕಾಶಿ ವಿಶ್ವೇಶ್ವರ – ಸೂರ್ಯನಾರಾಯಣ ದೇವಾಲಯದಲ್ಲಿತ್ತು. ಸ್ವಲ್ಪ ಭಗ್ನವಾದ್ದರಿಂದ  ಅದನ್ನು ಇಲ್ಲಿಗೆ ಸ್ಥಳಾಂತರಿಸಿದ್ದಾರೆ. ಇವುಗಳನ್ನೆಲ್ಲಾ ನೋಡಿ  ಹೊರಬಂದು ಈ ಕಟ್ಟಡದ ಹಿಂಬದಿಯಲ್ಲಿರುವ ಬ್ರಹ್ಮ ಜಿನಾಲಯವನ್ನು ನೋಡಲು ಹೋದೆವು.


    


ಹಿಂಬದಿಯಲ್ಲಿರುವ ಕೆಲವು ಮೆಟ್ಟಿಲುಗಳನ್ನೇರಿ ಹೋದಾಗಲೇ ನಮಗೆ ಈ ಸುಂದರ ಜಿನಾಲಯದ ದರ್ಶನವಾಗುತ್ತದೆ. ಅಲ್ಲಿಂದಲೇ ಫೋಟೋ ಹಿಡಿಯಲು ಶುರು. ಒಳ್ಳೆಯ ಆಂಗಲ್ ನಲ್ಲಿ ಸುಂದರ ಫೋಟೋಗಳು ಸೆರೆಯಾದವು. ಮುಂದೆ ಕೆಲ ಮೆಟ್ಟಲೇರಿದರೆ ನಾವು ಈ ಆಲಯದ ಮುಂದಿರುತ್ತೇವೆ. ಎತ್ತರವಾದ ಸಮತಟ್ಟು ಜಾಗದಲ್ಲಿ ಇದನ್ನು ನಿರ್ಮಿಸಿದ್ದಾರೆ. ಇಲ್ಲಿಯೂ ಬಹಳ ಸುಂದರವಾದ ಹುಲ್ಲು ಹಾಸನ್ನು ಬೆಳೆಸಿದ್ದಾರೆ. ಹಸಿರು ಜಮಖಾನೆ ಹಾಸಿದಂತೆ ಕಾಣುತ್ತದೆ. ಇದರ ಮಧ್ಯೆ ಜಿನಾಲಯವು ಕಂಗೊಳಿಸುತ್ತದೆ. ಇಲ್ಲಿನ ಮೇಲ್ವಿಚಾರಣೆ ಮಾಡುತ್ತಿದ್ದ ಮಹಿಳೆ ಬಂದು ನಮ್ಮನ್ನು ಸ್ವಾಗತಿಸಿದಳು. ಅಲ್ಲಿ ಬೇರೆ ಯಾರೂ ಪ್ರವಾಸಿಗಳಿಲ್ಲದುದರಿಂದ ನಮ್ಮೊಂದಿಗೆನೇ ಇದ್ದು ಎಲ್ಲಾ ವಿವರಣೆ ಕೊಟ್ಟಳು. ಇಲ್ಲಿಯೂ 28 ಕಂಭಗಳಿರುವ ಸುಂದರ ಮುಖ ಮಂಟಪವಿದೆ. ನಂತರ ಮಹಾಮಂಟಪ ಹಾಗೂ ಗರ್ಭಗೃಹವಿದೆ. ಇಲ್ಲಿನ ಕಂಭಗಳಲ್ಲಿ ಹೆಚ್ಚೇನೂ ಕೆತ್ತನೆಗಳಿಲ್ಲದಿದ್ದರೂ ಕಡಚಿಯಿಂದ ತಿರುವಿ ನುಣುಪಾಗಿಸಿದ್ದಾರೆ.


    


 ಗರ್ಭ ಗೃಹದಲ್ಲಿ ತೀರ್ಥಂಕರನ ಸುಂದರ ಮೂರ್ತಿ ಇದೆ.


    


 ದ್ವಾರದ ಅಕ್ಕಪಕ್ಕದಲ್ಲಿ ಪದ್ಮಾವತಿ ದೇವಿ ಮತ್ತು ಚತುರ್ಮುಖ ಬ್ರಹ್ಮನ ವಿಗ್ರಹವಿದೆ.


    



    


 ಬ್ರಹ್ಮನ ಒಂದೊಂದು ಮುಖವೂ ಬೇರೆ ಬೇರೆ ವಯಸ್ಸನ್ನು ಸೂಚಿಸುವಂತಿದೆ. ಒಂದು ಮುಖವು 25 ರ ತರುಣನಂತಿದ್ದರೆ ಇನ್ನುಳಿದವು ಕ್ರಮವಾಗಿ 50, 75 ಮತ್ತು 100 ವಯಸ್ಸಿನಂತಿದೆ. ಇದು ಮನುಷ್ಯನ ಆಯುಮಾನವನ್ನು ಸೂಚಿಸುತ್ತದೆ. ಅಲ್ಲಿ ಎಲ್ಲ ನೋಡಿದಮೇಲೆ ಹೊರ ಸೌಂದರ್ಯವನ್ನು ವೀಕ್ಷಿಸಲು ಹೊರಬಂದೆವು. ಥಟ್ಟನೆ ನೋಡುವಾಗ ಇದು ಸಹಾ ಒಂದು ಹಿಂದೂ ದೇವಾಲಯವಿರಬೇಕು ಎಂದೆನಿಸುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದರೆ ನಮಗೆ ಮೇಲಿರುವ ಎಲ್ಲ ಕೊಷ್ಟಕಗಳಲ್ಲಿ ಜಿನ ಮೂರ್ತಿಗಳನ್ನು ಕಾಣಬಹುದು.


    


 ಇಲ್ಲಿ ಅಷ್ಟಾಗಿ ಶಿಲ್ಪಕಲಾ ಶ್ರೀಮಂತಿಕೆ ಕಂಡುಬರದಿದ್ದರೂ ಅಲಂಕಾರಿಕ ಪಟ್ಟಿಕೆಗಳೂ, ಆನೆ, ಸಿಂಹ ಹೂಬಳ್ಳಿಗಳೂ  ಉಳಿದ ಹಿಂದೂ ದೇವಾಲಯದಲ್ಲಿರುವಂತೆ ಕೀರ್ತಿ ಮುಖ ಶುಕನಾಸಿ ಎಲ್ಲವೂ ಇದೆ. ದೇಗುಲದ ಶಿಖರವು ನಕ್ಷತ್ರಾಕೃತಿಯಲ್ಲಿದ್ದು ಮೇಲೆ ಹೋದಂತೆಲ್ಲ ಕಿರಿದಾಗುತ್ತಾ ತುದಿಯಲ್ಲಿ ಕಳಶವನ್ನಿರಿಸಿದ್ದಾರೆ.



    

 ಈ ದೇವಾಲಯವನ್ನು 1007 ನೇ ಇಸವಿಯಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆಯು ಕಟ್ಟಿಸಿದ್ದಳಂತೆ. ಇದರ ಬಗ್ಗೆ ತುಂಬಾ ಶಾಸನಗಳು ದೊರಕಿವೆ. ಇದರ ಪಕ್ಕದಲ್ಲೇ ಇನ್ನೊಂದು ಜಿನಾಲಯವೂ ಇದೆ. ಇದೂ ಸಹಾ ಸುಂದರವಾಗಿದೆ. ಇದರ ಎದುರುಗಡೆ ಶಿರ ವಿಹೀನವಾದ ಒಂದು ಸುಂದರ ಜಿನ ಮೂರ್ತಿಯಿದೆ. ಧ್ಯಾನ ಭಂಗಿಯಲ್ಲಿರುವ ಈ ಮೂರ್ತಿಯು ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರಬೇಕು. ಇದನ್ನು ಸಹಿಸದ ಮಂದಿ ಇದರ ಶಿರಛೇಧ ಮಾಡಿರಬೇಕು. ನೋಡುವಾಗ ಮನಸ್ಸಿಗೆ ಅಷ್ಟು ನೋವಾಗುತ್ತದೆ. ಇದರ ಹಿಂದೆ ಕುಳಿತು ನಮ್ಮ ಶಿರವನ್ನು ಅದಕ್ಕೆ ದಾನ ಮಾಡಿದೆವು. ಆದರೆ ಆ ಮಹಾಮಹಿಮನ ಮುಂಡಕ್ಕೆ ನಮ್ಮಂತಹ ಪಾಮರರ ಶಿರ ಹೊಂದಿಕೆಯಾಗಲಿಲ್ಲ ಎಂದು ಕಾಣುತ್ತದೆ.


    



ಈ ಸಮುಚ್ಚಯದ ಎದುರುಗಡೆ ನೋಡಿದರೆ ಅಲ್ಲೊಂದು ದೇವಾಲಯ ಕಾಣುತ್ತದೆ. ಇದು ನೀಲಕಂಠೇಶ್ವರ ದೇಗುಲ. ಬಹಳ ಅದ್ವಾನಮಯ ಜಾಗದಲ್ಲಿದೆ ಇದು. ಇದರ ಸುತ್ತಲೂ ಹಳೆಯ ಮನೆಗಳು ತುಂಬಿವೆ. ಪಕ್ಕದಲ್ಲೇ ಎಮ್ಮೆ ಹಸುಗಳೂ ತಮ್ಮ ಮನೆ ಮಾಡಿಕೊಂಡಿವೆ. ಇರಲಿ, ಶಿವ ಎಂದರೆ ಪಶುಪತಿಯಲ್ಲವೇ. ಇದರ ಮೇಲ್ಚಾವಣಿ ಬರಿಯ ತುಂಡು ಕಲ್ಲುಗಳನ್ನು ಜೋಡಿಸಿ ಇರಿಸಿದ್ದಾರೆ.



    


 ಒಳಗಡೆ ಶಿವಲಿಂಗಕ್ಕೆ ನಮಿಸಿ ಅಲ್ಲಿಂದ ಹೊರಟೆವು. ಲಕ್ಕುಂಡಿಯಲ್ಲಿ ಹಿಂದೆ 101 ದೇಗುಲಗಳೂ 101 ಭಾವಿ ಇತ್ತೆಂದು ಐತಿಹ್ಯ. ಈಗ ಕೇವಲ ಬೆರಳೆಣಿಕೆಯಷ್ಟಿವೆ. ಹೆಚ್ಚಿನ ದೇಗುಲಗಳು ನೆಲಸಮವಾಗಿದ್ದು ಅದರ ತಳಪಾಯದಲ್ಲೇ ಈಗಿನವರು ಮನೆ ಕಟ್ಟಿಕೊಂಡಿದ್ದಾರೆ.

ನಮ್ಮ ಮುಂದಿನ ವೀಕ್ಷಣೆ ಕಾಶಿ ವಿಶ್ವೇಶ್ವರ ದೇವಾಲಯ.

ಮ್ಯುಸಿಯಂನ ಮುಂದುಗಡೆ ಇರುವ ಕಚ್ಚಾ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದಮೇಲೆ ಮತ್ತೆ ಬಲಕ್ಕೆ ತಿರುಗಬೇಕು. ಇಲ್ಲ ಒಂದು ದೊಡ್ಡ ಕೆರೆ ಇದೆ. ಸುತ್ತಲೂ ಕಬ್ಬಿಣದ ಬೇಲಿ ಹಾಕಿದ್ದಾರೆ. ಇದರ ಪಕ್ಕದಲ್ಲೇ ಒಂದು ಸುಸಜ್ಜಿತ ಗೆಸ್ಟ್ ಹೌಸ್ ಇದೆ. ಈ ಕೆರೆಯು ನೀರಿನಿಂದ ತುಂಬಿದ್ದರೆ ಗೆಸ್ಟ್ ಹೌಸ್ ನಲ್ಲಿ ಉಳಕೊಳ್ಳಲು  ಇನ್ನೂ ಸೋಗಸಾಗಿರುತಿತ್ತು. ಇದೇ ಕೆರೆಯ ಪಕ್ಕದಲ್ಲಿ ಸ್ವಲ್ಪವೇ ದೂರದಲ್ಲಿ 2 ದೇಗುಲ ಕಾಣುತ್ತದೆ.


  

 ಒಂದು  ನನ್ನೇಶ್ವರ ಇನ್ನೊಂದು ಕಾಶಿ ವಿಶ್ವೇಶ್ವರ ದೇವಾಲಯಗಳು. ಅಷ್ಟು ದೂರದಿಂದಲೇ  ಅದರ ಸೌಂದರ್ಯ ನಮ್ಮನ್ನು ಕೈ ಬೀಸಿ ಕರೆಯುತ್ತದೆ. ನಾವು ಮೊದಲಿಗೆ ನನ್ನೇಶ್ವರ ದೇವಾಲಯಕ್ಕೆ ಹೋದೆವು. ಇದು ಸುಮಾರು 12 ನೇ ಶತಮಾನದ ದೇಗುಲ.ಎತ್ತರವಾದ ದಿಬ್ಬದ ಮೇಲಿದೆ. ಬಹುಶಃ ಜರಿದು ಬೀಳದಂತೆ ರಕ್ಷಣೆಗೋಸ್ಕರ ಕರಿಕಲ್ಲಿನ ಗೋಡೆಯನ್ನು ದಿಬ್ಬಕ್ಕೆ ಹೊಂದಿಸಿ ಕಟ್ಟಿದ್ದಾರೆ.



  

 ಕೆಲ ಮೆಟ್ಟಿಲು ಏರಿದರೆ ನಾವು ದೇವಾಲಯದ ಆವರಣದಲ್ಲಿರುತ್ತೇವೆ. ಇಲ್ಲಿಯೂ ಹುಲ್ಲು ಹಾಸು ಬೆಳೆಸಿದ್ದಾರೆ. ಈ ದೇವಾಲಯವು ಪುಟ್ಟದಾಗಿ ಬಹಳ ಚೊಕ್ಕವಾಗಿ ಕಂಗೊಳಿಸುತ್ತದೆ. ಮುಂಭಾಗದಲ್ಲಿ ಮುಖ ಮಂಟಪವಿದೆ. ಇಲ್ಲಿನ ಕಂಭಗಳೂ ಸುಂದರವಾಗಿವೆ. ಕೆತ್ತನೆಗಳೂ ವಿಭಿನ್ನವಾಗಿವೆ. ಗಾಜಿನಲ್ಲಿ ಮಾಡಿದವೋ ಎಬಂತೆ ಮಿರಿ ಮಿರಿ ಮಿನುಗುತ್ತವೆ. ಅದಕ್ಕೊಪ್ಪುವ ಮುಂಬಾಗಿಲು, ಹಲವು ಪಟ್ಟಿಗಳಿಂದ ಕೂಡಿ  ಮೇಲೆ ಮಧ್ಯದಲ್ಲಿ ಗಜಲಕ್ಷ್ಮಿಯನ್ನು ಕೆತ್ತಿದ್ದಾರೆ.




  

 ಇದನ್ನು ದಾಟಿ ಮುಂದೆ ಹೋದರೆ  ಒಳಮಂಟಪ ಕಾಣುತ್ತದೆ. ಇಲ್ಲಿನ 4 ಕಂಭಗಳೂ ಬಹಳ ಸುಂದರವಾಗಿವೆ. ಗರ್ಭಗೃಹದಲ್ಲಿ ನನ್ನೇಶ್ವರನ ಶಿವಲಿಂಗವಿದೆ. ಮೇಲ್ಗಡೆ ಕಮಲದ ಕೆತ್ತನೆಯಿದೆ.



  



  



  



  


 ಇದನ್ನೆಲ್ಲಾ ನೋಡಿ ಹೊರಬಂದು ದೇವಾಲಯದ ಹೊರ ಅಲಂಕಾರವನ್ನು ನೋಡಲು ಹೊರಟೆವು. ದಕ್ಷಿಣ ದಿಕ್ಕಿನಲ್ಲಿ ಒಂದು ಸುಂದರ ಬಾಗಿಲುವಾಡವಿದೆ. ಇಲ್ಲಿ ಸಹಾ ದ್ವಾರದ  ಪಟ್ಟಿಕೆಗಳ ಅಲಂಕಾರವು ಸುಂದರವಾಗಿದೆ.



  


  


 ಈ ಕಾಲದಲ್ಲಿ ಎಲ್ಲ ದೇವಾಲಯಗಳ ರಚನೆಯು ಹೆಚ್ಚಿನಂಶ ಒಂದೇ ತೆರನಾಗಿದ್ದು ಕಳಶ ಗೋಪುರವು ನಕ್ಷತ್ರದ ಆಕಾರವಿರುತ್ತದೆ. ಮೇಲೆ ಹೋದಂತೆಲ್ಲಾ ಅಕ್ಕರದಲ್ಲಿ ಕಿರಿದಾಗಿ ತುತ್ತ ತುದಿಯಲ್ಲಿ ಕಳಶವನ್ನಿರಿಸಿದ್ದಾರೆ. ಅಲ್ಲಲ್ಲಿ ಸುಂದರ ಅಲಂಕಾರಿಕ ಕೆತ್ತನೆಗಳೂ ಆನೆ ಸಿಂಹ ಮೊದಲಾದವುಗಳಿಂದ ಸುಂದರವಾಗಿರಿಸಿದ್ದಾರೆ. ಹಿಂದಿನ ದಿನ ಸುರಿದ ಹಗರ ಮಳೆಯು ಇದು ಒಳ್ಳೆಯ ವಾತಾವರಣ ನೀಡಿತ್ತು. ಹಿತವಾದ ಗಾಳಿ ಪ್ರಖರವಲ್ಲದ ಬಿಸಿಲು ಫೋಟೋ ಹಿಡಿಯಲು ಅನುಕೂಲವಾಗಿತ್ತು. ಹಾಗೆ ಮುಂದುವರಿದಾಗ ನಮಗೆ ಒಂದು ಅಪರೂಪದ ಪಕ್ಷಿ ಅಲ್ಲಿ ಕುಳಿತು ನಮ್ಮಂತೆಯೇ ಶಿಲ್ಪ ಸೌಂದರ್ಯವನ್ನು ಆಸ್ವಾದಿಸುತ್ತಿದೆಯೇನೋ ಎಂಬಂತೆ  ಕಂಡುಬಂತು. ಕೂಡಲೇ ಕೆಮರಾದಲ್ಲಿ ಅದನ್ನು ಸೆರೆ ಹಿಡಿದೆವು.




  

 ಅದ್ಯಾವ ಪಕ್ಷಿ ಎಂದು ನಮಗೆ ಗೊತ್ತಿರಲಿಲ್ಲ. ಊರಿಗೆ ಬಂದಮೇಲೆ ಗೂಗಲ್ ನಲ್ಲಿ ಹುಡುಕಿದಾಗ ಅದರ ಕುಲ ಗೋತ್ರ ಎಲ್ಲ ತಿಳಿಯಿತು. ಅಳಿವಿನಂಚಿನಲ್ಲಿರುವ ಇದರ ಹೆಸರು Hoopoe ಅಂತೆ. ನಮ್ಮವರು ಇದಕ್ಕೆ ಚಂದ್ರ ಮುಕುಟ ಪಕ್ಷಿ ಎಂದು ಸುಂದರ ನಾಮಕರಣ ಮಾಡಿದ್ದಾರೆ. ಬಹಳ ಅನ್ವರ್ಥ ನಾಮ! 

ಇಲ್ಲಿನ ಮುಖಮಂಟಪದಲ್ಲೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದವು. ಇಲ್ಲಿಂದಲೇ ಕಾಶಿ ವಿಶ್ವನಾಥನ ಭವ್ಯ ಸುಂದರ ದೇಗುಲ ಕಾಣುತ್ತದೆ. ಮಧ್ಯೆ ಒಂದು ರಸ್ತೆ ಅಡ್ಡಲಾಗಿದೆ ಅಷ್ಟೇ. ಪಕ್ಕದಲ್ಲೇ ಒಂದು ಗೂಡಂಗಡಿಯಲ್ಲಿ ಮಿರ್ಚಿ ಭಜಿ, ಚಹಾ ಕುಡಿದು ಉತ್ಸಾಹ ಹೆಚ್ಚಿಸಿಕೊಂಡೆವು. ಮುಂದುವರಿದು ಕಾಶಿ ವಿಶ್ವನಾಥನ ದರ್ಶನಕ್ಕೆ ಹೊರಟೆವು.

ಇದೊಂದು ಶೈವ –ವೈಷ್ಣವ ದೇವಾಲಯ. ಇಲ್ಲಿ ಶಿವ ಹಾಗೂ ಸೂರ್ಯ ದೇವರುಗಳ ಮಂದಿರವಿದೆ. ಎದುರುಬದುರಾಗಿ ಎರಡೂ ದೇವಾಲಯಗಳು ತಳಪಾಯ ಒಂದೇ ಆಗಿ ಪರಸ್ಪರ ಜೋಡಿಸಲ್ಪಟ್ಟಿದೆ.



  

 ಈ ದೇವಾಲಯಗಳನ್ನು 1087 ನೇ ಇಸವಿಯಲ್ಲಿ ಚಾಲುಕ್ಯ ರಾಜ ತ್ರಿಭುವನಮಲ್ಲದೇವನು ಕಟ್ಟಿಸಿದನೆಂದು ಅಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಚೋಳರ ಧಾಳಿಯಿಂದ ಭಗ್ನಗೊಂಡಿದ್ದರೂ ಮತ್ತೆ ಇದನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಮುಖಮಂಟಪದಲ್ಲಿ ಹಲವಾರು ಕಂಭಗಳಿದ್ದು ಸುಂದರವಾಗಿದೆ. ಇಲ್ಲಿನ ಮುಖ್ಯದ್ವಾರ ಬಹಳ ನಾಜೂಕಾದ ಕೆತ್ತನೆಗಳಿಂದ ಕೂಡಿದ್ದು ಸಪ್ತ ಪಟ್ಟಿಕೆಗಳ ಸುಂದರ ಬಾಗಿಲುವಾಡವಿದೆ. ಮಧ್ಯದಲ್ಲಿ ಗಜ ಲಕ್ಷ್ಮಿಯನ್ನು ಕೆತ್ತಿದ್ದಾರೆ.




  

 ಇದರ ಮೂಲಕ ಒಳಹೊದರೆ ಒಳಮಂಟಪ ಕಾಣುತ್ತದೆ. ಇಲ್ಲಿ ಸೊಂದರ ಕೆತ್ತನೆಗಳುಳ್ಳ 4 ಕಂಭಗಳಿವೆ. ಇವುಗಳನ್ನು ಎಷ್ಟು ನುಣುಪಾಗಿಸಿದ್ದಾರೆಂದರೆ ಇದರಲ್ಲಿ ನಮ್ಮ ಪ್ರತಿಬಿಂಬ ಕಾಣುತ್ತದೆ. ಇದರ ಉನ್ನತೋದರ ಮತ್ತು ನತೋದರ ರಚನೆಯಿಂದಾಗಿ ಅಲ್ಲಿ ನಮ್ಮ ಪ್ರತಿಬಿಂಬವು ತಲೆ ಕೆಳಗಾಗಿ ಮೂಡುತ್ತದೆ. ಇದೊಂದು ಅಚ್ಚರಿ!




  


  

 ಕಂಭಗಳ ತಳದಲ್ಲಿ ಸುಂದರ ಶಿಲ್ಪಗಳನ್ನು ಕೊರೆದಿದ್ದಾರೆ. ಗರ್ಭಗೃಹದ ಬಾಗಿಲುವಾಡ ಸಹಾ ಆಕರ್ಷಕವಾಗಿದೆ. ಒಳಗಡೆ ಶಿವಲಿಂಗವಿದೆ. ದೇವರನ್ನು ಪ್ರಾರ್ಥಿಸಿ ಹೊರಬಂದೆವು. ಎದುರುಗಡೆ ಸೂರ್ಯನಾರಾಯಣನ ದೇಗುಲ. ಇಲ್ಲಿ ವಿಗ್ರಹವಿಲ್ಲ. ಭಗ್ನಗೊಂಡಿದ್ದರಿಂದ ಅದನ್ನು ಮ್ಯುಸಿಯಂನಲ್ಲಿರಿಸಿದ್ದಾರೆ. ಇಲ್ಲಿನ ಬಾಗಿಲುವಾಡದ ಮೇಲೆ ಸೂರ್ಯನ ಮೂರ್ತಿಯನ್ನು ಕೆತ್ತಿದ್ದಾರೆ. 
  


ನಾವು ಕೆಳಗಿಳಿದು ಹೊರಗಿನ ಸೊಬಗನ್ನು ವೀಕ್ಷಿಸಲು ಹೊರಟೆವು. ದೇವಾಲಯದ ಸುತ್ತಲೂ ತಳಭಾಗದಲ್ಲಿ ಸುಂದರ ಆನೆಗಳ ಸಾಲು ಇದೆ. ಗೊಪುರವು ನಕ್ಷತ್ರ ಆಕೃತಿಯಲ್ಲಿದೆ. ಇದರ ತುಂಬಾ ಶಿಲ್ಪಗಳಿವೆ. ಇಲ್ಲಿನ ಹೊರ ಬಿತ್ತಿಯಲ್ಲಿ ಸುಂದರ ಕೆತ್ತನೆಗಳಿವೆ. ಮಹಾಭಾರತ ರಾಮಾಯಣದ ಕೆಲ ದೃಶ್ಯಗಳನ್ನೂ ಕೆತ್ತಿದ್ದಾರೆ. ರಾವಣನು ಆನೆಯೊಂದಿಗೆ ಮಲ್ಲಯುದ್ಧ ಮಾಡುತ್ತಿರುವುದು, ಕೈಲಾಸ ಪರ್ವತವನ್ನು ಎತ್ತುತ್ತಿರುವ, ಭೀಮನು ಭಗದತ್ತನ ಆನೆಯೊಂದಿಗೆ ಕಾದಾಡುತ್ತಿರುವುದು, ಗಜಾಸುರ ಸಂಹಾರ ಮತ್ತು ಪಾರ್ವತಿ ತಪಸ್ಸು ಮಾಡುತ್ತಿರುವ ಚಿತ್ರಣಗಳು ಬಹಳ ಸುಂದರವಾಗಿವೆ.



  



  



  


  


  



  



  

 ಇದಲ್ಲದೆ ಅಲಂಕಾರಿಕ ಕೊಷ್ಟಕಗಳು, ಪಟ್ಟಿಕೆಗಳೂ ಸಿಂಹ, ಕುದುರೆಗಳ ಸಾಲು ಕಿನ್ನರ ಖೇಚರರ ಶಿಲ್ಪಗಳು, ವಿಷ್ಣು, ಇಂದ್ರ, ಗಣಪತಿ, ಮೊದಲಾದ ದೇವರ ಕೆತ್ತನೆಗಳೂ ಸುಂದರವಾಗಿವೆ. ದಕ್ಷಿಣ ದಿಕ್ಕಿನಲ್ಲಿರುವ ದ್ವಾರವಂತೂ ನಾವು ಈವರೆಗೆ ನೋಡಿದ್ದೆಲ್ಲಕ್ಕಿಂತ ಸುಂದರವಾಗಿದೆ. 9 ಪಟ್ಟಿಕೆಗಳಿಂದ ಕಂಗೊಳಿಸುತ್ತದೆ.




  



  



  


 ಇದರಲ್ಲಿ ಬಹಳ ನವಿರಾದ ಸೂಕ್ಷ್ಮವಾದ ಕೆತ್ತನೆಗಳಿವೆ. ಇದನ್ನು ವರ್ಣಿಸಲು ನಾನು ಅಶಕ್ತ. ಅಷ್ಟೊಂದು ಬಗೆಯ ರಚನೆಗಳಿವೆ. ಆದರೆ ಇದಕ್ಕೆ ಹೊಂದಿಸಿದ ಮರದ-ತಂತಿಯ ಬಾಗಿಲು ಇಲ್ಲಿ ಅಭಾಸವಾಗಿದೆ. 

ಇದೇ ತೆರನಾದ ಶಿಲ್ಪಕಲೆಯು ಸೂರ್ಯ ದೇವಾಲಯದ ಹೊರಗೂ ಕಂಡುಬರುತ್ತದೆ.
ಅಷ್ಟರಲ್ಲೇ ಅಲ್ಲಿನ ಹಳ್ಳಿಯ ಹುಡುಗರಿಬ್ಬರು ಬಂದು ತಮ್ಮ ಫೋಟೋ ತೆಗೆಯಲು ಆಗ್ರಹಿಸಿದರು. ಸರಿ ಎಂದು ಫೋಟೋ ಕ್ಲಿಕ್ಕಿಸಿ ಅವರಿಗೆ ತೋರಿಸಿದೆ. ಅದಾಗಲೇ ಇನ್ನೂ ಕೆಲ ಮಕ್ಕಳು ಬಂದರು. ಅವರದ್ದೂ ತೆಗೆದಾಯಿತು. ಒಬ್ಬ ಪೋರನಂತೂ ಅಲ್ಲಿರುವ ಖಾಲಿ ಕೋಷ್ಟಕದಲ್ಲಿ ಕುಳಿತು ಫೋಟೋ ಹಿಡಿಯಲು ಆಗ್ರಹಿಸಿದನು.


  

 ಇನ್ನು ಸಾಕು ಎಂದು ಅವರನ್ನು ಸಾಗಹಾಕಿದೆ. ಇಲ್ಲೇ ಸ್ವಲ್ಪವೇ ದೂರದಲ್ಲಿ 3 ಬೇರೆ ಬೇರೆ ದೇಗುಲಗಳು ಕಾಣುತ್ತದೆ. ವಿಚಾರಿಸಲಾಗಿ ಅಲ್ಲೇನೂ ವಿಶೇಷವಿಲ್ಲ, ಮಾತ್ರವಲ್ಲ ಅದು ನಮ್ಮ ಇಲಾಖೆಗೆ ಸೇರಿಲ್ಲ ಎಂದು ಹೇಳಿದಳು. 

ಮುಂದೆ ನಾವು ಮಾಣಿಕೇಶ್ವರ ದೇಗುಲ ಮತ್ತು ಮುಸುಕಿನ ಭಾವಿ ನೋಡಲು ಹೊರಟೆವು. ಇದಕ್ಕಾಗಿ ನಾವು ಹಳ್ಳಿಯೊಳಗೆ ಸಂಚರಿಸಿ ಕೊನೆಗೆ ಒಂದು ಹೊಲದ ಪಕ್ಕದಲ್ಲಿ ಸಾಗಿದೆವು. ಇಲ್ಲಿನ ಬೇಲಿಯಲ್ಲಿ ನಮಗೆ ಮಲ್ಬೆರಿ ಹಣ್ಣು ಕಂಡಿತು. ಇದನ್ನು ನಾವಿಬ್ಬರೂ ನಮ್ಮ ಬಾಲ್ಯದಲ್ಲಿ ತಿಂದು ಅನುಭವಿಸಿದ್ದೆವು. ಸುಮಾರು ಹಣ್ಣುಗಳನ್ನು ಕೊಯ್ದು ತಿಂದೆವು. ಕೆಂಪು, ಕಪ್ಪು ಹಣ್ಣುಗಳು ಪುಟ್ಟದಾಗಿ ದ್ರಾಕ್ಷಿ ಗೊಂಚಲಿನ ಹಾಗೆ ಇದೆ. ಬಹಳ ಚಿಕ್ಕದು, ಆದರೆ ರುಚಿಯಂತೂ ಸಿಹಿ, ಸ್ವಲ್ಪ ಹುಳಿ. ನಮ್ಮ ದಾಹವೂ ತಣಿಯಿತು. 

ಮಾಣಿಕೇಶ್ವರ ದೇವಾಲಯ ತಲುಪಿದೆವು. ಅಷ್ಟೇನೂ ಶಿಲ್ಪಕಲಾಗಾರಿಕೆ ಇಲ್ಲದಿದ್ದರೂ ಸುಂದರವಾಗಿದೆ. ಇದರ ಎದುರುಗಡೆ ಬಹಳ ಆಳವಾದ, ಸುಮಾರು 80 ಮೆಟ್ಟಿಲುಗಳಿರುವ ಭಾವಿ ಇದೆ. ಆದರೆ ಒಂದು ತೊಟ್ಟು ನೀರು ಇರಲಿಲ್ಲ. ಇದರ ಆಳವನ್ನು ನೋಡುವಾಗಲೇ ಭಯವಾಗುತ್ತದೆ.


  



  


  

 ಈ ದೇವಾಲಯವಲ್ಲದೆ ಇನ್ನೂ ಹಲವಾರು ದೇಗುಲಗಳು ಇವೆಯಂತೆ. ಅದನ್ನೆಲ್ಲ ನೋಡಲು ನಮಗೆ ಸಮಯವಿರಲಿಲ್ಲ. ಅಲ್ಲಿದ ಹೊರಟು ಬಸ್ ನಿಲ್ದಾಣಕ್ಕೆ ಬಂದೆವು. ಅಲ್ಲಿ ಸಿಹಿಯಾದ ಬೋರೆ ಹಣ್ಣು ಕೊಂಡು ತಿಂದೆವು. ಬಸ್ ಹತ್ತಿ ಗದಗಕ್ಕೆ ಬಂದೆವು. ರೂಮಿನಲ್ಲಿ ವಿಶ್ರಾಂತಿ ಪಡೆದು ರೈಲು ನಿಲ್ದಾಣಕ್ಕೆ ಹೊರಟೆವು. ದಾರಿಯಲ್ಲಿ ಗದಗದ ಗಿರಮಿಟ, ಮಿರ್ಚಿ ಭಜಿ ತಿಂದು ಕಬ್ಬಿನ ರಸ ಸವಿದೆವು.  ನಮ್ಮ ರೈಲು ಸಂಜೆ  7.10 ಕ್ಕೆ. ಅಷ್ಟರಲ್ಲೇ ಜೋರಾಗಿ ಗಾಳಿ ಬೀಸಿತು, ಸ್ವಲ್ಪ ಮಳೆಯೂ ಆಯಿತು. ರೈಲು 20 ನಿಮಿಷ ತಡವಾಗಿ ಬಂತು. ರೈಲು  ಬೆಂಗಳೂರಿಗೆ ಮುಂಜಾನೆ 6.15 ತಲುಪಿತು. ಬಸ್ ಹಿಡಿದು ಮನೆ ಸೇರಿದೆವು. ನಮ್ಮ ಒಂದು ಕನಸು ನನಸಾದ ಧನ್ಯತಾಭಾವ ಮನದಲ್ಲಿ ಉಳಿಯಿತು.

ಈ ಲೇಖನವನ್ನು ಮೂರು ಪ್ರತ್ಯೇಕ ಭಾಗವಾಗಿ ಬರೆದಿದ್ದೇನೆ. ನಮ್ಮ ಯಾತ್ರೆಯ ಸಂಪೂರ್ಣ ಮಾಹಿತಿಗಾಗಿ ನನ್ನ ಹಿಂದಿನ ಬ್ಲಾಗ್, ಇಟಗಿ ಮತ್ತು ಗದಗವನ್ನು ಸಹಾ ಓದಬೇಕು.