Tuesday, 3 May 2011

London City

 ಈ ಸಲ ಇಂಗ್ಲೆಂಡ್ ಗೆ ಹೋಗಿ ಹಿಂತಿರುಗಿ ಬರುವಾಗ ನಾವು ಲಂಡನ್ ನಗರದ ಹೆಚ್ಚಿನ ಜಾಗಗಳನ್ನು ನೋಡಿ ಬಂದೆವು. ಬ್ರಿಟನ್ನಿನ ದಕ್ಷಿಣ-ಪಕ್ಷಿಮ ಕೊನೆಯಲ್ಲಿ ಕೊರ್ನ್ವಾಲ್ ಕೌಂಟಿ ಇದೆ. ಅಲ್ಲಿ ಟ್ರೂರೋ ಎಂಬ ಪಟ್ಟಣದ ಹತ್ತಿರ ಸ್ಟಿತಿಯನ್ಸ್ ಎಂಬ ಸುಂದರ ಪ್ರದೇಶದಲ್ಲಿದೆ ನಮ್ಮ ಮಗಳ ಮನೆ. ನಾವು 6 ತಿಂಗಳು ಅಲ್ಲಿದ್ದು ಬಹಳಷ್ಟು ಸುಂದರ ತಾಣಗಳಿಗೆ ಭೇಟಿಯಿತ್ತಿದ್ದೆವು. ನಮ್ಮ ವೀಸಾದ ಅವಧಿ ಮುಗಿಯುತಿದ್ದಂತೆ ಅಲ್ಲಿಂದ ಹೊರಟೆವು. ಸ್ಟಿತಿಯನ್ಸ್ನಿಂದ ಲಂಡನ್ ಗೆ ಸುಮಾರು 5 ಘಂಟೆಗಳ ಪ್ರಯಾಣ. ನಮ್ಮ ವಿಮಾನ ರಾತ್ರಿ 10 ಘಂಟೆಗೆ. ನಾವು ರಾತ್ರಿ 2 ಘಂಟೆಗೆ ಮನೆ ಬಿಟ್ಟೆವು. ನನ್ನ ಮಗಳು ಸೌಮ್ಯ, ಅವಳ ಪತಿ ರೋಹಿತ್  ನನ್ನ ಪತ್ನಿ ಕಸ್ತೂರಿ ಮತ್ತು ನಾನು, ಓಟ್ಟು 4 ಜನ ಅವರ ಜಾಗ್ವಾರ್  ಕಾರಿನಲ್ಲಿ ಲಂಡನ್ ಗೆ ಬೆಳಿಗ್ಗೆ 7ಕ್ಕೆ ತಲುಪಿದೆವು. ನಮಗೆಲ್ಲಾ ಒಳ್ಳೆಯ ನಿದ್ರೆ. ಪಾಪ ರೋಹಿತ್ ಗೆ ನಿದ್ರೆಯಿಲ್ಲ. ಅವರಿಗೆ ರಾತ್ರಿ ನಿದ್ದೆಗೆಟ್ಟು ಅಭ್ಯಾಸವಿತ್ತು. ನಮ್ಮ ದೊಡ್ಡ ದೊಡ್ಡ 2 ಬ್ಯಾಗು ಮತ್ತು ಇತರ ಲಗ್ಗೇಜ್ ಗಳನ್ನು ಹೀಥ್ರೂ ವಿಮಾನ ನಿಲ್ದಾಣದ ಕ್ಲಾಕ್ ರೂಂನಲ್ಲಿಟ್ಟು ಲಂಡನ್ ನಗರ ನೋಡಲು ಹೊರಟೆವು.
ಹೀಥ್ರೂ ನಲ್ಲೆ ಟ್ಯೂಬ್ ರೈಲ್ ಸ್ಟೇಷನ್ ಇದೆ. ಅಲ್ಲಿ ಟಿಕೆಟ್ ಕೊಂಡು ಹತ್ತಿದೆವು. ಟ್ಯೂಬ್ ರೈಲ್ ಹೆಚ್ಚಿನೆಡೆ ಭೂಗರ್ಭದಲ್ಲೇ ಸಂಚರಿಸುತ್ತದೆ. ಕೆಲವು ಕಡೆ ಮಾತ್ರ ಮೇಲ್ಗಡೆ ಸಾಗುತ್ತದೆ. ಎಯರ್ ಕಂಡಿಶನ್ ಭೋಗಿಗಳು. ಅದರಲ್ಲೇ ರೈಲು ಯಾವ ಸ್ಥಳಕ್ಕೆ ತಲುಪಿತು, ಮುಂದಿನ ಸ್ಥಳ  ಯಾವುದು ಎಂಬುದೆಲ್ಲಾ ಕಾಣುತ್ತಿರುತ್ತದೆ. ಮೊದಲಿಗೆ ನಾವು ಲಂಡನ್ ಟವರ್ ಸ್ಟೇಷನ್ ನಲ್ಲಿ ಇಳಿದೆವು. ಅಲ್ಲಿದ ಹೊರಗೆ ಬಂದು ನೋಡುತ್ತೇವೆ ತುಂತುರು ಮಳೆ! ಅಯ್ಯೋ ಇದೇನು ಗ್ರಹಚಾರ ಎಂತ ಗೊಣಗುವಷ್ಟರಲ್ಲೇ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಬಂದು ನಮಗೆ 2 ಛತ್ರಿಗಳನ್ನು ಕೊಟ್ಟು, ನಮ್ಮೂರು ನೋಡಿಬನ್ನಿ ಎಂದು ಲಂಡನ್ ಗೆ ಸ್ವಾಗತ ಬಯಸಿದರು. ಅವರಿಗೆ ತುಂಬಾ ಥ್ಯಾಂಕ್ಸ್ ಹೇಳಿ ಮುಂದುವರಿದೆವು. ಅವರ ಸೌಜನ್ಯ ನಮ್ಮನ್ನು ಬೆರಗು ಗೊಳಿಸಿತು. ಪ್ರವಾಸೋದ್ಯಮ ಬೆಳೆಸುವುದು ಎಂದರೆ ಹೀಗೆ! ಬರಿದೇ ಮಾದ್ಯಮಗಳಲ್ಲಿ ಜಾಹೀರಾತು ಮಾಡಿದರೆ ಸಾಲದು. ಬಂದಂಥಹ ಅತಿಥಿಗಳಿಗೆ ನಮ್ಮಿಂದ ಆದಷ್ಟು ಸಹಾಯ, ಸಹಕಾರ ಕೊಡಬೇಕು.
ಅವರಿತ್ತ ಛತ್ರಿ ಹಿಡಿದುಕೊಂಡು ಲಂಡನ್ ಟವರ್ ನೋಡಲು ಹೋದೆವು. ದಾರಿಯಲ್ಲೇ ಒಂದು ರೋಮನ್ ಪುತ್ಥಳಿ ಕಂಡೆವು. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ಟವರ್ ಕಾಣಿಸಿತು. ಇಲ್ಲೇ ಬ್ರಿಟಿಶ್ ರಾಜವಂಶದ ಆಭರಣಗಳನ್ನು ಇರಿಸಿದ್ದಾರಂತೆ. ಜಗತ್ ಪ್ರಸಿದ್ಧ ಕೊಹಿನೂರ್ ವಜ್ರವೂ, ಇತರ ರತ್ನಾಭಾರಣಗಳೂ ಇಲ್ಲಿಯೇ ಇರುವುದಂತೆ. ಸಾರ್ವಜನಿಕರಿಗೆ ದರ್ಶನದ ಸಮಯಕ್ಕೆ ಇನ್ನೂ ಕೆಲ ಘಂಟೆ ಕಾಯಬೇಕು. ಹಾಗಾಗಿ ಹೊರಗಿನಿಂದಲೇ ಆ ಕೋಟೆಯನ್ನು ನೋಡಿದೆವು. ಹಿಂದಿನ ಕಾಲದಲ್ಲಿ ಅದನ್ನು ಟಂಕಸಾಲೆಯಾಗಿಯೂ,ರಾಜಕೀಯ ಬಂದೀಖಾನೆಯನ್ನಾಗಿಯೂ ಬಳಸುತಿದ್ದರು.
ಟವರ್ ನ ಎಲ್ಲಾ ಮಾಹಿತಿಗಳನ್ನು ಫಲಕಗಳಲ್ಲಿ ಬರೆದಿರಿಸಿದ್ದಾರೆ. ಸುಮಾರು 1100ನೇ ಇಸವಿಯಲ್ಲಿ ಇದರ ನಿರ್ಮಾಣವಾಯಿತು. ಹಿಂದೆ, ಇದರ ಸುತ್ತಲೂ ನೀರು ತುಂಬಿದ ಕಂದಕವಿತ್ತು.
ಈವಾಗ ನೀರಿಲ್ಲ, ಬದಲಾಗಿ ಹಸಿರು ಹುಲ್ಲು ಬೆಳೆಸಿದ್ದಾರೆ. ಬಂಡೆಕಲ್ಲಿನ ಕೋಟೆಗೆ ಇದು ಬಹಳ ಚೆನ್ನಾಗಿ ಹೊಂದುತ್ತದೆ. ಸುತ್ತಲೂ ಹೂಗಿಡಗಳೂ, ಸುಂದರವಾದ ಮರಗಳೂ ಇದರ ಶೋಭೆಯನ್ನು ಹೆಚ್ಚಿಸುತ್ತಿದೆ. ಒಂದೇ ಒಂದು ಕಸ-ಕಡ್ಡಿ ಇಲ್ಲ.ಅಷ್ಟು ಚೆನ್ನಾಗಿ ಇರಿಸಿದ್ದಾರೆ.
ಮುಂದೆ ಹೋದಂತೆಲ್ಲಾ ನಮಗೆ ಇಂಗ್ಲೆಂಡಿನ ಜೀವನಾಡಿಯಾಗಿರುವ ಥೇಮ್ಸ್ ನದಿ ಗೋಚರಿಸುತ್ತದೆ. ಇದರ ಎರಡೂ ಪಕ್ಕದಲ್ಲಿ ತುಂಬಾ ಬೋಟ್ ಗಳನ್ನು ನಿಲ್ಲಿಸಿದ್ದಾರೆ. ಹೊತ್ತೇರಿದಂತೆಲ್ಲಾ ಇವುಗಳ ಕಾರ್ಯ ಪ್ರಾರಂಭವಾಗಬಹುದು. ಇದರಲ್ಲಿ ಕುಳಿತು ಥೇಮ್ಸ್ ನದಿಯಲ್ಲಿ ವಿಹರಿಸಬಹುದು. ಈ ನದಿಗೆ ಅಡ್ಡಲಾಗಿ ಹಲವಾರು ಸೇತುವೆಗಳಿವೆ.ಅವುಗಳಲ್ಲಿ ಪ್ರಮುಖವಾದದ್ದು ಟವರ್ ಬ್ರಿಡ್ಜ್ .
ಬಹಳ ಹಳೆಯದು ಮತ್ತು ಪ್ರಸಿದ್ಧವಾದದ್ದು. ಈಗಲೂ ಹೊಚ್ಹ ಹೊಸದರಂತೆ ಇದೆ. ನದಿಯಲ್ಲಿ ಸಾಗುವ ದೊಡ್ಡ ನಾವೆಗಳು ಇದರಡಿಯಲ್ಲಿ ಹೋಗಬೇಕಾದರೆ ಸೇತುವೆಯನ್ನು ಮಧ್ಯದಲ್ಲಿ ಮೇಲಕ್ಕೆ ಎತ್ತುತ್ತಾರೆ. ನಾವೆಗಳು ಆಕಡೆಗೆ ದಾಟಿದ ಮೇಲೆ ಮತ್ತೆ ಯಥಾಸ್ಥಿತಿಗೆ ತರಲಾಗುತ್ತದೆ. ನಾವು ಅಲ್ಲಿ ತುಂಬಾ ಫೋಟೋ ಹಿಡಿದೆವು.
ಆಮೇಲೆ ಸ್ವಲ್ಪ ದೂರ ನಡೆದು ಸೇತುವೆಯ ಮೇಲೆ ನಡೆದು ಅಲ್ಲಿಂದ ತೋರುವ ದೃಶ್ಯಗಳನ್ನು ಕಂಡು ತೃಪ್ತಿಪಟ್ಟೆವು.
ಈ ನದಿಯ ದಂಡೆಯಲ್ಲೇ ಈಸ್ಟ್ ಇಂಡಿಯಾ ಕಂಪನಿಯ ಕಟ್ಟಡವಿದ್ದು ಈಗಲೂ ಕಾರ್ಯವೆಸಗುತ್ತಿದೆ. ನದಿಯ ದಂಡೆಗಳಲ್ಲಿ ಅತ್ಯಾಧುನಿಕ ಕಟ್ಟಡಗಳಿವೆ.
ಲಂಡನ್ ನಗರವು, ಜಗತ್ತಿನ ಅತಿ ದೊಡ್ಡ ವ್ಯಾಪಾರ ವಹಿವಾಟನ್ನು ಹೊಂದಿದ ಪ್ರದೇಶ.
ಇದೇ ನದಿಯ ಒಂದು ದಂಡೆಯಲ್ಲಿ ಜಗತ್ತಿನ ಅತೀ ದೊಡ್ದದರಲ್ಲೊಂದಾದ ಸುತ್ತು ತಿರುಗುವ ಚಕ್ರವೊಂದಿದೆ.
ಜಯಂಟ್ ವೀಲ್ ನಂತೆ ಇದು ತಿರುಗುತ್ತದೆ. ಇದಕ್ಕೆ ಲಂಡನ್ ಐ ಎಂದು ಕರೆಯುತ್ತಾರೆ. ಇದರಲ್ಲಿ ಕುಳಿತುಕೊಳ್ಳುವ ಹಲವಾರು ಕ್ಯಾಬಿನ್ ಗಳಿದ್ದು ಅದರಲ್ಲಿ ಕುಳಿತು ನಿಧಾನವಾಗಿ ಸುತ್ತುತ್ತಾ ಲಂಡನ್ ನಗರದ ಪೂರ್ತಿ ವೀಕ್ಷಣೆ ಮಾಡಬಹುದು.
ಅಲ್ಲಿಂದ ನಾವು ಹೊರಟು  ಟ್ಯೂಬ್ ರೈಲ್ ಸ್ಟೇಷನ್ ಗೆ ಬಂದೆವು. ನಮಗೆ ಛತ್ರಿ ಯನ್ನು ಕೊಟ್ಟ ಮಹಿಳೆಯನ್ನು ಕಂಡು ಅದನ್ನು ನಮ್ಮ ಧನ್ಯವಾದ ಸಹಿತ ಹಿಂತಿರುಗಿಸಿದೆವು.
ರೈಲು ಬಂತು. ನಾವು ಮುಂದೆ ಲಂಡನ್ನಿನ ಪ್ರಖ್ಯಾತ ಬಿಗ್ ಬೆನ್ ಗಡಿಯಾರವಿರುವೆಡೆಗೆ ಬಂದೆವು. ಇದನ್ನು 1858ರಲ್ಲಿ ಸ್ಥಾಪಿಸಿಸಿದರಂತೆ. ಅಲ್ಲಿಂದ ಈವರೆಗೆ ಕರಾರುವಕ್ಕಾಗಿ ಸಮಯ ತೋರಿಸುತ್ತಾ ಇದೆ.
 ಇದು ಜಗತ್ತಿನ ಅತೀ ಎತ್ತರವಾದ ಮತ್ತು ದೊಡ್ಡದಾದ ಗಡಿಯಾರ ಗೋಪುರ, ಇದರ ಎತ್ತರ 180 ಅಡಿಗಳು. ನಾಲ್ಕೂಕಡೆ ಮುಖವಿದ್ದು ಒಂದೊಂದು ಡಯಲ್ 25 ಅಡಿ ವ್ಯಾಸ ಹೊಂದಿದೆ. ಇದರ ದೊಡ್ಡ ಮುಳ್ಳಿನ ಉದ್ದವೇ 14 ಅಡಿ ಇದೆ ಎಂದರೆ ಇದರ ಭವ್ಯತೆಯನ್ನು ಊಹಿಸಬಹುದು. ಈಗ ಘಂಟೆ 9. ಗಡಿಯಾರದ ಘಂಟೆ ಬಾರಿಸಲು ಶುರು. ಈ ಸದ್ದನ್ನು ನಾವು ಬಿ.ಬಿ.ಸಿ. ರೇಡಿಯೋನಲ್ಲಿ ಕೇಳಿದ್ದ ನೆನಪು. ಇಂದು ಕಿವಿಯಾರೆ ಆಲಿಸಿದೆವು. ಕಣ್ಣಾರೆ ಕಂಡೆವು. ಬಿಗ್ ಬೆನ್ ಗೆ ತಾಗಿಕೊಂಡು ಬ್ರಿಟಿಶ್ ಪಾರ್ಲಿಮೆಂಟಿನ  ಬೃಹತ್ತಾದ  ಕಟ್ಟಡವಿದೆ.
ಮೊದಲು ಈ ಕಟ್ಟಡವನ್ನು ಪ್ಯಾಲೆಸ್ ಒಫ್ ವೆಸ್ಟ್ ಮಿನ್ ಸ್ಟರ್ ಎಂದು ಕರೆಯುತಿದ್ದರು. ಇದರ ವಾಸ್ತು ಶೈಲಿ ಬಹಳ ಸುಂದರವಾಗಿದೆ. ಒಲಿವರ್ ಕ್ರೋಮ್ ವೆಲ್ ನ ಪುತ್ಥಳಿ ಇದರ ಎದುಗಡೆ ಇದೆ. ಪಕ್ಕದಲ್ಲಿ ಥೇಮ್ಸ್ ನದಿ ಹರಿಯುತ್ತಿದೆ. ಅಲ್ಲೂ ಒಂದು ದೊಡ್ಡ ಸೇತುವೆಯಿದೆ.
ಇಲ್ಲಿಂದ ಸ್ವಲ್ಪ ದೂರದಲ್ಲಿ ಪುರಾತನವಾದ ವೆಸ್ಟ್ ಮಿನ್ ಸ್ಟರ್ ಅಬೆ ಎಂಬ ಸುಂದರವಾದ ಚರ್ಚು ಇದೆ. ಸೈಂಟ್ ಪೀಟರ್ ನ ಚರ್ಚ್ ಇದಾಗಿದ್ದು ಇಲ್ಲಿಯೇ ಬ್ರಿಟಿಶ್ ರಾಜ,ರಾಣಿಯರ ಪಟ್ಟಾಭಿಷೇಕ ನಡೆಯುವುದು. ಬ್ರಿಟಿಶ್ ರಾಜ ಕುಟುಂಬದ ವಿವಾಹಗಳು ಇಲ್ಲೇ ನಡೆಯುವುದು. ರಾಜವಂಶಜರ ಸಮಾಧಿಯೂ ಇಲ್ಲೇ ನಡೆಯುವುದು.
ಇತ್ತೀಚಿಗೆ ಅಲ್ಲಿ ನಡೆದ ವಿವಾಹವೆಂದರೆ ರಾಜಕುಮಾರ ವಿಲಿಯಮ್ಸ್ ಮತ್ತು ಕ್ಯಾಥರೀನ್ ರದ್ದು. ಈ ಅದ್ದೂರಿಯ ಸಮಾರಂಭದ ನೇರ ಪ್ರಸಾರವನ್ನು ನಮ್ಮ ಹಲವಾರು ಟಿ.ವಿ.ಚಾನೆಲ್ ಗಳು ಪ್ರಸಾರ ಮಾಡಿದ್ದರು. ನಾವು ಅಲ್ಲಿಗೆ ಹೋದ ದಿನ ರವಿವಾರವಾಗಿದ್ದರಿಂದ ಒಳಗಡೆ ಪ್ರಾರ್ಥನಾ ಕಾರ್ಯ ನಡೆದಿತ್ತು. ಹಾಗಾಗಿ ಒಳಗಡೆಗೆ ಯಾವ ಪ್ರವಾಸಿಗರನ್ನೂ ಬಿಡುತ್ತಿರಲಿಲ್ಲ.
ಅದರ ಹೊರಗಿನ ಭವ್ಯ ಗೋಪುರ ಗೋತಿಕ್ ಶೈಲಿಯದಾಗಿದ್ದು ಬಹಳ ಸುಂದರವಾಗಿದೆ. ಅದರ ಹೆಬ್ಬಾಗಿಲಂತೂ ಅತ್ಯಾಕರ್ಷಕವಾಗಿದೆ. ಒಳಗಡೆ ನೋಡಲಾಗಲಿಲ್ಲ ಎಂಬ ನಿರಾಸೆಯನ್ನು ರಾಜಕುಮಾರನ ವಿವಾಹದ ನೇರಪ್ರಸಾರ  ನಿವಾರಿಸಿತು. ಎಷ್ಟೊಂದು ಸುಂದರ ಹಾಗೂ ಭವ್ಯವಾಗಿದೆ! ಅದರ ಅತೀ ಎತ್ತರವಾದ ಸ್ತಂಭಗಳು, ಅದರ ಮೇಲಿನ ಕಮಾನುಗಳು, ಚಿನ್ನದ ಗಿಲಾವಿಯಿಂದ ಹೊಳೆಯುವ ಅಲಂಕಾರಿಕ ಹೂಬಳ್ಳಿಗಳು ಎಲ್ಲಾ ಸುಂದರವಾಗಿದೆ, ರಾಜಯೋಗ್ಯವಾಗಿದೆ. ಇನ್ನೆಂದಾದರೂ ಲಂಡನ್ ಗೆ ಹೋದರೆ ಖಂಡಿತಾ ಅದರ ಒಳಗೆ ಹೋಗಿ ನೋಡಲೇಬೇಕು. ಮುಂದೆ ನಾವು ಸೈಂಟ್ ಜೇಮ್ಸ್ ಪಾರ್ಕ್ ಗೆ ಹೋದೆವು. ನಮ್ಮ ಕಬ್ಬನ್ ಪಾರ್ಕ್ ನೆನಪಾಯಿತು. ಬಹಳ ಚೆನ್ನಾಗಿದೆ.
ಅದರ ಒಂದು ಪಕ್ಕದಲ್ಲಿ ದೊಡ್ಡ ಸರೋವರವಿದ್ದು ಅದರ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ. ಅದರಲ್ಲಿ ವಿಹರಿಸುತ್ತಿರುವ ಅಚ್ಚ ಬಿಳುಪಿನ ಹಂಸಗಳು, ಬೇರೆ ಬೇರೆ ಜಾತಿಯ ನೀರಕ್ಕಿಗಳು ನೋಡಲು ಸುಂದರವಾಗಿವೆ. ದೊಡ್ಡ ಜಾತಿಯ ಅಳಿಲುಗಳೂ ಅಲ್ಲಿ ನಿರ್ಭಯವಾಗಿ ಜನರು ಕೊಡುವ ಹಣ್ಣು, ಬೀಜಗಳನ್ನು ಕೈಯಿಂದಲೇ ಸ್ವೀಕರಿಸುತ್ತವೆ. ವೀಪಿಂಗ್ ಟ್ರೀ ಎಂದು ಹೆಸರಿಸಿದ ಮರಗಳು ನೀರಿನ ಪಕ್ಕದಲ್ಲೇ ಇದ್ದು ತಮ್ಮ ಎಳೆ ಹಸಿರು ಬಣ್ಣವನ್ನು ನೀರಲ್ಲಿ ಪ್ರತಿಬಿಂಬಿಸುತ್ತದೆ. ಅಲ್ಲಿನ ಚುಮು ಚುಮು ಚಳಿ, ಸುಂದರ ಪರಿಸರ, ಆಹಾ! ಸ್ವರ್ಗ!  ಅಲ್ಲಿ ಕುಳಿತುಕೊಳ್ಳಲು ತುಂಬಾ ಬೆಂಚುಗಳನ್ನು ಇರಿಸಿದ್ದಾರೆ. ನಾವೂ ಅಲ್ಲಿಯೇ ಕುಳಿತು ಬರ್ಗರ್, ಸ್ಯಾಂಡ್ ವಿಚ್ ತಿಂದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡೆವು. ಮತ್ತೆ ಮುಂದುವರಿಯುತ್ತಾ ಮಹಾರಾಣಿಯವರ 
ನಿವಾಸವಾದ ಬಕಿಂಗ್ ಹ್ಯಾಮ್ ಅರಮನೆಯ ಮುಂಭಾಗಕ್ಕೆ ಬಂದೆವು.
ಇಲ್ಲಿಯೇ ರಾಣಿ ಎಲಿಜಬೆಥ್ ಇರುವುದು. ರಾಣಿ ಅಲ್ಲಿದ್ದರೆ ಮಾತ್ರ ಯೂನಿಯನ್ ಜಾಕ್ ದ್ವಜವು ಮೇಲೆ ಹಾರಾಡುತ್ತಿರುತ್ತದೆ. ಅರಮನೆಯು ಬಹಳ ದೊಡ್ಡದಾಗಿದೆ, ಸುಂದರವೂ ಇದೆ. ಆದರೂ ನಮ್ಮ ಮೈಸೂರು ಅರಮನೆಯ ಸೊಗಸು ಅದಕ್ಕಿಲ್ಲ.
ಅರಮನೆಯ ಮುಂಭಾಗದಲ್ಲಿ ವೃತ್ತಾಕಾರದ ದೊಡ್ಡ ಕಾರಂಜಿ ಇದೆ.
ಮದ್ಯದಲ್ಲಿ ಎತ್ತರಕ್ಕೆ ಚಾಚಿದ ಸ್ತಂಭವಿದ್ದು ಅದರಲ್ಲಿ ಸುಂದರವಾದ ಮೂರ್ತಿಗಳಿವೆ. ಒಂದು ಪಕ್ಕದಲ್ಲಿ ವಿಕ್ಟೋರಿಯಾ ಮಹಾರಾಣಿಯ ಮೂರ್ತಿ ಗಮನ ಸೆಳೆಯುತ್ತಿದೆ.
ಕೆಳಗಡೆ ಗಂಭೀರವಾಗಿ ನಿಂತ ಸಿಂಹಗಳಿವೆ ಮತ್ತು ಅದರ ಮೇಲೆ ಕೈಇರಿಸಿಕೊಂಡ ವೀರರ ಮೂರ್ತಿಗಳಿವೆ. ಇನ್ನೂ ಕೆಲವು ಆಕರ್ಷಕ ಮೂರ್ತಿಗಳಿವೆ.
 ತುತ್ತ ತುದಿಯಲ್ಲಿ ಚಿನ್ನದ ಮುಲಾಮನ್ನು ಹಚ್ಚಲಾದ ಕಿನ್ನರಿಯ ಮೂರ್ತಿಇದೆ. ಸುತ್ತಲೂ ನೀರು ಬೀಳುತ್ತಿದೆ. ಒಟ್ಟಾರೆ ಹೇಳಬೇಕೆಂದರೆ ಬಹಳ ಆಕರ್ಷಣೀಯ, ಮನೋಹರ ದೃಶ್ಯ.
 ಅಲ್ಲೆಲ್ಲಾ ಬಹಳ ಜನ ಪ್ರವಾಸಿಗಳು ನೆರೆದಿದ್ದು ಫೋಟೋ ಹಿಡಿಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಚೇಂಜ್ ಆಫ್ ಗಾರ್ಡ್ ಎಂಬ ಕಾರ್ಯಕ್ರಮ ನಡೆಯಲಿದೆ. ಕೆಂಪು-ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ ಅರಮನೆಯ ಸೈನಿಕರು ವಿಚಿತ್ರವಾದ ಟೊಪ್ಪಿಗೆ ಧರಿಸಿ ಬ್ಯಾಂಡ್ ನ ದ್ವನಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ ಅರಮನೆಯ ಗೇಟ್ ನ ಒಳಗೆ ಹೋಗುತ್ತಾರೆ. ಅವರ ಜೊತೆಯಲ್ಲೇ ಕುದುರೆ ಸವಾರರು ಸಹ ಇರುತ್ತಾರೆ.
ಅಷ್ಟರಲ್ಲಿ ಅರಮನೆಯಿಂದ ಹಿಂದಿನ ದಿನದ ಪಾಳಿಯನ್ನು ಮುಗಿಸಿದ ಸೈನಿಕರು ಹೊರ ಬಂದು ಪರಸ್ಪರ ಗೌರವ ಸೂಚಿಸಿ ತಮ್ಮ ಪಾಳಿಯನ್ನು ಬದಲಾಯಿಸಿಕೊಳ್ಳುತ್ತಾರೆ. ನಿತ್ಯವೂ ಕ್ಲಪ್ತ ಸಮಯದಲ್ಲಿ ಇದು ನಡೆಯುತ್ತದೆ. ಇದನ್ನು ನೋಡಲೆಂದೇ ದೇಶ ವಿದೇಶಗಳ ಪ್ರವಾಸಿಗರು ನೆರೆಯುತ್ತಾರೆ.ಅರಮನೆಯ ಒಳಗೆ ಹೋಗಲು ವಿಶೇಷ ಪಾಸು ಮಾಡಿಸಬೇಕಾಗುತ್ತದೆ.
ನಮ್ಮ ಮುಂದಿನ ಭೇಟಿ ನ್ಯಾಚುರಲ್  ಹಿಸ್ಟರಿ ಮ್ಯೂಸಿಯಂಗೆ.
 ನಾವು ಸೌತ್ ಕೆನ್ಸಿಂಗ್ಟನ್ ಸ್ಟೇಷನ್ ನಲ್ಲಿ ಇಳಿದು ಅಲ್ಲಿಗೆ ಬಂದೆವು. ಇದರ ಪಕ್ಕದಲ್ಲೇ ಸೈನ್ಸ್ ಮ್ಯೂಸಿಯಂ ಮತ್ತು ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂ ಸಹ ಇದೆ. ನ್ಯಾಚರಲ್ ಹಿಸ್ಟರಿ ಮ್ಯೂಸಿಯಂ ಜಗತ್ತಿನ ಅತೀ ದೊಡ್ದದರಲ್ಲೊಂದಾದ ಮ್ಯೂಸಿಯಂ. ಇದರಲ್ಲಿ ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಕೀಟ ಶಾಸ್ತ್ರ, ಖನಿಜ ಶಾಸ್ತ್ರ, ಪ್ರಾಗೈತಿಹಾಸಿಕ ಶಾಸ್ತ್ರಗಳ ಬಗ್ಗೆ ವಿಸ್ತೃತವಾದ ನಮೂನೆಗಳನ್ನು ಪ್ರದರ್ಶಿಸಿದ್ದಾರೆ. ಸುಮಾರು 70 ಮಿಲಿಯ ವಿವಿಧ ನಮೂನೆಗಳ ಅಗಾಧ ಸಂಗ್ರಹವೇ ಇಲ್ಲಿದೆ. ಎಲ್ಲವನ್ನೂ ಸರಿಯಾಗಿ ನೋಡಲು ಕನಿಷ್ಠ ೧೫ ದಿನಗಳಾದರೂ ಬೇಕಾಗಬಹುದು.
 ಮ್ಯೂಸಿಯಂನ ಭವ್ಯವಾದ ಬಾಗಿಲ ಒಳಗೆ ಹೋದಾಗ ಒಂದು ವಿಶಾಲ ಹಾಲ್  ಸಿಗುತ್ತದೆ. ಇಲ್ಲಿ ಬೃಹತ್ ಗಾತ್ರದ ಡೈನೋಸಾರ್ ನ ಅಸ್ತಿಪಂಜರವನ್ನು ಜೋಡಿಸಿಟ್ಟಿದ್ದಾರೆ. ಅದರ ಕೆಳಗಡೆ ನಾವೂ ನಿಂತಾಗ ನಾವೆಷ್ಟು ಕುಬ್ಜರು ಎಂದೆನಿಸುತ್ತದೆ. ಕಡಿಮೆಯೆಂದರೂ 50-60 ಜನರಾದರೂ ಅದರಡಿಯಲ್ಲಿ ನಿಲ್ಲಬಹುದು. ಈ ವರ್ಗದ ಪ್ರಾಣಿಗಳ ಅಸಂಖ್ಯಾತ ನಮೂನೆಗಳನ್ನು ಜೋಡಿಸಿಟ್ಟಿದ್ದಾರೆ. ಇವುಗಳೆಲ್ಲ ಅಪರೂಪದ ಪಳೆಯುಳಿಕೆಗಳು. ನಮ್ಮ ಭೂಮಿಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾದ ಈ ಬೃಹತ್ ಜೀವಿಗಳ ಬಗ್ಗೆ ಚೆನ್ನಾದ ಅರಿವು ಮೂಡಿಸುತ್ತದೆ. ಅಲ್ಲಿಂದ ಮೆಟ್ಟಿಲುಗಳನ್ನು ಇಳಿದು ಇರುಕಲಾದ ಜಾಗಕ್ಕೆ ಬಂದಾಗ ನಮಗೆ ನಿಜವಾದ ಡೈನೋಸಾರ್ ನ ದರ್ಶನವಾಗುತ್ತದೆ.
 ಅದು ತನ್ನ ಬೃಹತ್ ಕೋರೆ ಹಲ್ಲುಗಳನ್ನು ಪ್ರದರ್ಶಿಸುತ್ತಾ ಬಾಯಿಯಿಂದ ನೆತ್ತರು ಸುರಿಸುತ್ತಾ, ಕೆಂಗಣ್ಣಿನಿಂದ ನೋಡುತ್ತಾ ಅಗಲವಾಗಿ ಬಾಯಿ ತೆರೆದು ಘರ್ಜಿಸುತ್ತದೆ. ತಲೆಯನ್ನು ಅತ್ತಿತ್ತ ತೊನೆದಾಡಿಸುತ್ತದೆ. 2-3 ಹೆಜ್ಜೆ ಮುಂದಿಟ್ಟಾಗಲಂತೂ ಎಲ್ಲರ ಎದೆಬಡಿತ ಒಮ್ಮೆಗೇ ನಿಂತಂತಾಗುತ್ತದೆ. ಅದು ಮಾನವ ನಿರ್ಮಿತ ಯಾಂತ್ರಿಕ ಡೈನೋಸಾರ್! ಅದರ ಗಾತ್ರ, ಚರ್ಮದ ಸುಕ್ಕುಗಳು, ಎಲ್ಲವು ನಿಜವಾದ ಡೈನೋಸಾರ್ ಎಂದೇ ಭಾಸವಾಗುತ್ತದೆ. ಅದರ ಘರ್ಜನೆಗೆ ಹೆದರಿ ಜನರು ಮಕ್ಕಳು ಎಲ್ಲರೂ ಕಿರಿಚಾಡುತ್ತಾರೆ. ಅಷ್ಟು ನೈಜವಾಗಿದೆ.
 ಮುಂದೆ ಹೋದಂತೆ ನಮಗೆ ಈ ಭೂಮಿಯಲ್ಲಿದ್ದ, ಇರುವ ಎಲ್ಲಾ ಪ್ರಾಣಿಗಳ ನಿಜವಾದ ತೊಗಲಿನಿಂದ ಮಾಡಿದ ನಮೂನೆಗಳನ್ನು ಕಾಣಬಹುದು. ತಿಮಿಂಗಿಲ, ಶಾರ್ಕ್, ಆನೆ, ಕುದುರೆ, ಜೀಬ್ರಾ, ಸಿಂಹ, ಹುಲಿ, ಹಿಮ ಕರಡಿ, ಉಳಿದ ಚಿಕ್ಕ ದೊಡ್ಡ ಪ್ರಾಣಿಗಳು, ಹಾವು, ಹಕ್ಕಿಗಳು ಎಲ್ಲಾ ಇಲ್ಲಿವೆ. ಎಲ್ಲವೂ ಜೀವಂತವಾಗಿವೆಯೇನೋ ಎಂಬಂತೆ ತೋರುತ್ತದೆ.
 ಕೀಟಗಳಿಗಾಗಿಯೇ ಬೇರೆಯೇ ಒಂದು ವಿಭಾಗವಿದೆ. ಮುಂದೆ ನಾವು ಖನಿಜಗಳ ಸಂಗ್ರಹ ನೋಡಲು ಹೋದೆವು. ಇದರಲ್ಲಿ ನನಗೆ ವಿಶೇಷ ಆಸಕ್ತಿ ಇದ್ದುದರಿಂದ ಇಲ್ಲಿಗೇ ಹೋಗೋಣ ಎಂದು ಒತ್ತಾಯಿಸಿದೆ. ಅಬ್ಭಾ ಎಷ್ಟೊಂದು ಬಗೆಯ ಬಣ್ಣ ಬಣ್ಣದ ಹೊಳೆಯುವ ಖನಿಜಗಳು.
 ಸಾಮಾನ್ಯ ಕ್ವಾರ್ಟ್ಸ್ ನಿಂದ ತೊಡಗಿ ವಜ್ರದವರೆಗೆ ಎಲ್ಲಾ ರತ್ನಗಳ ಮೂಲ ರೂಪವನ್ನು ಇರಿಸಿದ್ದಾರೆ. ಅವುಗಳನ್ನು ಸಾಣೆಹಿಡಿದು ಪಾಲಿಶ್ ಮಾಡಿ ಇರಿಸಿದ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಮನಮೋಹಕ.
ಇದಲ್ಲದೆ ಕಬ್ಬಿಣ ಮತ್ತು ಇತರ ಎಲ್ಲಾ ಲೋಹಗಳಿಂದ ಹಿಡಿದು ಬೆಳ್ಳಿ, ಚಿನ್ನ, ಪ್ಲಾಟಿನಂ ಮತ್ತು ಇತರ ಅಪರೂಪದ ರೇರ್ ಮೆಟಲ್ ಗಳನ್ನು ಇರಿಸಿದ್ದಾರೆ.
ನಾವು ಹೋದ ಎಲ್ಲಾ ಕಡೆ ಫೋಟೋ ತೆಗೆಯಲು, ವಿಡಿಯೋ ಮಾಡಲು ಯಾವೊಂದು ಆಕ್ಷೇಪವೂ ಇರಲಿಲ್ಲ. ಯಾವುದೇ ಶುಲ್ಕ ಸಹಾ ಕೊಡಬೇಕಾಗಿಲ್ಲ. ಆದರೆ ನಮ್ಮಲ್ಲಿ? ಯಾವ ವಿಶೇಷ ಜಾಗಗಳಿಗೆ ಹೋದರೂ ಶುಲ್ಕ ನೀಡಬೇಕು. ದೇವಾಲಯದ ಒಳಗಡೆ ಫೋಟೋ ತೆಗೆಯುವಂತಿಲ್ಲ. ಇದರಿಂದ ಏನೂ ತೊಂದರೆ ಎಂದು ನನಗೆ ಗೊತ್ತಾಗುತ್ತಿಲ್ಲ. ಪ್ರವಾಸಿಗರು ಬಂದು ಫೋಟೋ ತೆಗೆದು ಅವರವರ ಊರಿಗೆ ಹೋದಮೇಲೆ ಖಂಡಿತಾ ಅವುಗಳನ್ನು ತಮ್ಮ ನೆಂಟರಿಷ್ಟರಿಗೆ ಗೆಳೆಯರಿಗೆಲ್ಲಾ ತೋರಿಸಿಯೇ ತೋರಿಸುತ್ತಾರೆ. ಇದೇ ಒಂದು ಪುಕ್ಕಟೆ  ಜಾಹೀರಾತಲ್ಲವೇ? ಇದರಿಂದ ಪರದೇಶಗಳ ಜನರೂ ನಮ್ಮ ದೇಶದ ವಿಶೇಷಗಳನ್ನು, ದೃಶ್ಯಗಳನ್ನೂ ನೋಡುವಂತಾಗುತ್ತದೆ. ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಸುರಿಯುವ ಸರಕಾರಕ್ಕೆ, ಫೋಟೋಗ್ರಫಿ ಶುಲ್ಕದಿಂದ ಬರುವ ಅಲ್ಪಮೊತ್ತಕ್ಕೆ ಯಾಕಿಷ್ಟು ಮೋಹ ಎಂದು ತಿಳಿಯುವುದಿಲ್ಲ. ಕೆಲವೆಡೆ ವಿದೇಶಿಯರಿಂದ ಅವರ ದೇಶದ ಹಣವನ್ನು, ಇಲ್ಲ ಅದಕ್ಕೆ ತತ್ಸಮಾನವಾದ ನಮ್ಮ ಹಣವನ್ನು ಶುಲ್ಕವಾಗಿ ವಿಧಿಸುತ್ತಾರೆ. ಏನಿಲ್ಲವೆಂದರೂ ಕೊನೆಯಪಕ್ಷ ವಿದೇಶಿ ಪ್ರವಾಸಿಗರಿಂದ ಯಾವುದೇ ಶುಲ್ಕವನ್ನೂ ವಸೂಲಿ ಮಾಡಬಾರದು. ಇದರಿಂದ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಲಾಭ ಆಗಬಹುದು.   
 ಈಗಾಗಲೇ ಘಂಟೆ 4.30. ನಡೆದೂ ನಡೆದು ಕಾಲುಗಳು ಸೋತಿದ್ದವು. ನೋಡಿ ನೋಡಿ ಕಣ್ಣುಗಳೂ ದಣಿದಿದ್ದವು . ಮನಸ್ಸು ಮಾತ್ರ ತುಂಬಿತ್ತು. ಈ ಸಲಕ್ಕೆ ಇಷ್ಟು ಸಾಕು, ಇನ್ನೊಂದು ಸಲ ಬರುವಾಗ ಇನ್ನೂ ಹೆಚ್ಚಿನ ಜಾಗಗಳನ್ನು ನೋಡೋಣ ಎಂದಳು ನಮ್ಮ ಮಗಳು. ಇನ್ನೂ ನೋಡಬೇಕಾದ ಜಾಗಗಳು ಬಹಳ ಇವೆ. ಬ್ರಿಟಿಶ್ ಮ್ಯೂಸಿಯಂ, ಮೇಡಂ ಟ್ಯುಸಾಡಿ ಗ್ಯಾಲರಿ, ಆರ್ಟ್ ಗ್ಯಾಲರಿ, ವಿಂಡ್ಸರ್ ಕ್ಯಾಸಲ್ , ಹೈಡ್ ಪಾರ್ಕ್, ಪಿಕಾಡೆಲ್ಲಿ ಚೌಕ, ಟ್ರಫಾಲ್ಗರ್ ಚೌಕ, ಕೆಂಬ್ರಿಡ್ಜ್  ಮತ್ತು ಒಕ್ಸ್ ಫೋರ್ಡ್ ವಿಶ್ವ ವಿದ್ಯಾಲಯಗಳು, ಲಾರ್ಡ್ಸ್ ಕ್ರಿಕೆಟ್ ಮೈದಾನ ಎಲ್ಲವೂ ನೋಡುವಂತಹ ಜಾಗಗಳು. ಸೌತ್ ಹಾಲ್ ಅಂತೂ ನಮ್ಮ ಭಾರತದ ಜನರಿಂದ, ಅವರದ್ದೇ ಹೋಟೆಲ್ ಗಳು, ಅಂಗಡಿಗಳಿಂದ ತುಂಬಿದೆಯಂತೆ.
ನಾವು ಮ್ಯೂಸಿಯಂಗೆ ವಿದಾಯ ಹೇಳಿ ಟ್ಯೂಬ್ ಹಿಡಿದು ಹೀಥ್ರೂ ಗೆ ಬಂದೆವು. ಅಲ್ಲಿ ಉಪಾಹಾರ ಮಾಡಿ, ನಮ್ಮ ಲಗ್ಗೇಜ್ ಪಡಕೊಂಡು ಚೆಕ್ ಇನ್ ಗಾಗಿ ಹೋದೆವು. ಬ್ಯಾಗುಗಳು ಒಳಹೊದವು. ಭಾರವಾದ ಮನಸ್ಸಿನಿಂದ ಮಗಳು, ಅಳಿಯಂದಿರನ್ನು  ಬೀಳ್ಕೊಂಡು ನಮ್ಮ ಮುಂದಿನ ಪ್ರಯಾಣಕ್ಕಾಗಿ ಒಳಗಡೆ ಹೋದೆವು. 6 ತಿಂಗಳ ಅವರ ಒಡನಾಟ ಒಮ್ಮೆಲೆ ಕೊನೆಗೊಂಡಾಗ ನಮ್ಮಿಬ್ಬರ ಕಣ್ಣುಗಳೂ ನೆನೆದಿದ್ದವು.
ನಮ್ಮ ಮುಂದಿನ ಪ್ರಯಾಣ ಎಮಿರೇಟ್ಸ್  ವಿಮಾನದಲ್ಲಿ ದುಬೈಗೆ. ಇಲ್ಲಿನ ಅನುಭವಗಳನ್ನು ಮುಂದೊಮ್ಮೆ ಬರೆಯುತ್ತೇನೆ.
     
 

No comments:

Post a Comment