ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ
ಕೂಡ್ಲು ಎಂಬ ಈ ಪುಟ್ಟ ಗ್ರಾಮವಿರುವುದು ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಕಾಸರಗೋಡಿನಲ್ಲಿ. ಕಾಸರಗೋಡಿನಿಂದ ಮಧೂರು ಸಿದ್ದಿವಿನಾಯಕ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 3km. ಪ್ರಯಾಣಿಸಿ, ರಾಮದಾಸ ನಗರದಿಂದ ಎಡಕ್ಕೆ ತಿರುಗಿ 1/2 km. ದೂರ ಸಾಗಿದರೆ ನೀವು ಸರಿಯಾಗಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಇರುತ್ತೀರಿ. ಪಟ್ಟಣದ ಗಜಿ ಬಿಜಿಯಿಂದ ದೂರವಾಗಿ ಪ್ರಶಾಂತಮಯ ಪರಿಸರದಲ್ಲಿ ತನ್ನದೇ ಆದ ವಿಶಿಷ್ಟವಾದ ಗೋಪುರವನ್ನು ಹೊಂದಿರುವ ಈ ದೇವಾಲಯವು ಸುಮಾರು 350 ವರ್ಷಗಳ ಇತಿಹಾಸವನ್ನು ಹೊಂದಿದೆ. ಕೂಡ್ಲು ಶ್ಯಾನುಭಾಗರ ಮನೆಯ ಹಿರಿಯರಿಂದ ಪ್ರತಿಷ್ಟಾಪನೆಗೊಂಡ ಈ ದೇವಾಲಯವು ಕಾಲಾನಂತರ ಈಗಿರುವ ಭವ್ಯ ಗೋಪುರವನ್ನು ಹೊಂದಿಕೊಂಡು ನವೀಕರಿಸಲ್ಪಟ್ಟಿದೆ.
ಸುಮಾರು 3ಅಡಿಗಳಷ್ಟು ಎತ್ತರವಿರುವ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹವು ನೋಡಲು ಸುಂದರವಾಗಿದ್ದು ಕೈಗಳಲ್ಲಿ ಪುಟ್ಟ ಮಗುವನ್ನು ಕಾಣಬಹುದು. ಭಕ್ತಿಯಿಂದ ಬೇಡಿದ ಭಕ್ತರಿಗೆ ಸಂತಾನ ಭಾಗ್ಯವನ್ನು ಕರುಣಿಸಿರುವ ಹಲವಾರು ನಿದರ್ಶನಗಳು ಇವೆ, ಮತ್ತು ಈ ದೇವರನ್ನು ಸಂತಾನ ಗೋಪಾಲಕೃಷ್ಣನೆಂದೇ ಕರೆಯುತ್ತಾರೆ. ಇದಲ್ಲದೆ ಶ್ರೀ ಅನ್ನಪೂರ್ಣೇಶ್ವರಿ ಮತ್ತು ಶ್ರೀ ಧರ್ಮ ಶಾಸ್ಥಾರ ಪ್ರತಿಷ್ಠೆಗಳೂ ಇಲ್ಲಿವೆ. ದೇವಾಲಯವನ್ನು ಪ್ರವೆಶಿಸುತಿದ್ದಂತೆ ನಿಮಗೆ ತಂಪಾದ ಗಾಳಿಯು ಸ್ವಾಗತ ಕೋರುತ್ತದೆ. ಗೋಪುರದ ಒಳ ಭಾಗದಲ್ಲಿ ಎತ್ತರವಾದ ಕಂಚಿನ ದ್ವಜಸ್ಥಂಭ, ಬಲಿಕಲ್ಲುಗಳನ್ನು ಕಾಣಬಹುದು. ವಿಶಾಲವಾದ ರಾಜಾಂಗಣ, ಮತ್ತು ಪ್ರದಕ್ಷಿಣಾಪಥವನ್ನು ಹೊಂದಿದೆ. ಅಂಗಣದ ಸುತ್ತಲೂ ಜಾತ್ರೆಯ ಸಮಯದಲ್ಲಿ ಕುಳಿತುಕೊಳ್ಳಲು ಗೋಪುರಗಳಿದ್ದು, ಪ್ರತ್ಯೇಕ ಅಗ್ರಶಾಲೆ, ದಾಸ್ತಾನು ಉಗ್ರಾಣ ಇವೆ.
ಎಡನಾಳಿಗೆಯಿಂದ ಸುತ್ತುವರೆದ ದೇವಸ್ಥಾನದ ಒಳಗೆ ಪ್ರವೇಶಿಸಿದರೆ, ಪಶ್ಚಿಮಾಭಿಮುಖನಾಗಿ ನಿಂತಿರುವ ಶ್ರೀ ಗೋಪಾಲಕೃಷ್ಣ ದೇವರ ದರ್ಶನವಾಗುವುದು. ಅಲ್ಲೇ ಇನ್ನೊಂದು ಗರ್ಭಗೃಹದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ ಕೂಡಾ ಆಗುತ್ತದೆ.
ದೇವರಿಗೆ ಒಂದು ಪ್ರದಕ್ಷಿಣೆ ಹಾಕಿ ಬರುವಾಗ ಅಲ್ಲಿಯೇ ಇರುವ ರಾಜರಾಜೇಶ್ವರಿ ದೈವದ ಸ್ಥಾನವನ್ನು ನೋಡಿ ಕೈ ಮುಗಿದು ಬರಬಹುದು. ಇಲ್ಲಿ ನಿತ್ಯ ಮೂರೂ ಹೊತ್ತು ಪೂಜೆ ನಡೆಯುತ್ತದೆ.
-----
-----
ಪ್ರತೀ ವರ್ಷ ಕುಂಭ ಮಾಸದ ನವಮಿಯಂದು ದ್ವಜಾರೋಹಣಗೊಂಡು ಶ್ರೀ ಗೋಪಾಲಕೃಷ್ಣ ದೇವರ ಜಾತ್ರೆ ಪ್ರಾರಂಭವಾಗಿ ಪೌರ್ಣಮಿಯಂದು ರಥೋತ್ಸವ, ಮರುದಿನ ಅವಭೃತ ಸ್ನಾನ, ದ್ವಜಾವರೋಹಣದ ನಂತರ ಜಾತ್ರೆ ಮುಕ್ತಾಯಗೊಳ್ಳುತ್ತದೆ. ಮಾರನೆ ದಿವಸ ರಾಜ ರಾಜೇಶ್ವರಿ ದೈವದ ನೇಮ ಕೂಡಾ ನಡೆಯುತ್ತದೆ. ಅದೇ ರೀತಿ ಪ್ರತೀ ವರ್ಷ ಅನ್ನಪೂರ್ಣೆಶ್ವರಿ ದೇವರ ನವರಾತ್ರಿ ಉತ್ಸವ ಮತ್ತು ವಿಜಯ ದಶಮಿಯಂದು ಹೊಸಾರೋಗಣೆ ಕೂಡ ನಡೆಯುತ್ತದೆ. ಈ ಎರಡೂ ಜಾತ್ರೆಗಳು ಬಹಳ ಪ್ರಸಿದ್ಧವಾಗಿದ್ದು, ಊರ, ಪರಊರ ಭಕ್ತ ಜನರೆಲ್ಲರೂ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ತುಂಬಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಬಯಲಾಟವು ಸಹಾ ನಡೆಯುತ್ತದೆ.
ಕುತ್ಯಾಳ ಗೋಪಾಲಕೃಷ್ಣ ದೇವರು ಯಕ್ಷಗಾನಪ್ರಿಯ! ಅಂತೆಯೇ ಶ್ರೀ ದೇವರ ಹೆಸರಿನಲ್ಲಿ ನಡೆಯುವ ಒಂದು ಯಕ್ಷಗಾನ ಮೇಳ ಕೂಡ ಇದೆ. ಕುತ್ಯಾಳ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಎಂಬ ಈ ಮೇಳವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮೇಳಗಳಿಗೆ ಸರಿಸಾಟಿಯಾಗಿದ್ದು, ಬಹಳ ಜನ ಹೆಸರಾಂತ ಯಕ್ಷಗಾನ ಕಲಾವಿದರು ಇಲ್ಲಿಂದಲೇ ತಮ್ಮ ಕಲಾ ಜೀವನವನ್ನು ಆರಂಬಿಸಿದ್ದಾರೆ. ಈಗಲೂ ಸಹಾ ಸೇವೆಯ ಆಟ, ಸಣ್ಣ ಮಟ್ಟಿನ ತಿರುಗಾಟದ ಆಟಗಳು ನಡೆಯುತ್ತಿರುತ್ತವೆ.
ಶ್ರೀ ಕ್ಷೇತ್ರದಲ್ಲಿ ವಿವಾಹ ಮತ್ತಿತರ ಶುಭ ಕಾರ್ಯಗಳು ಜರಗುತ್ತಿರುತ್ತವೆ ಮತ್ತು ಅದಕ್ಕೆ ಬೇಕಾದ ಉತ್ತಮ ಸೌಲಭ್ಯಗಳೂ ಇಲ್ಲಿವೆ.
ಶ್ರೀ ಶಿವಮಂಗಿಲ ಸದಾಶಿವ ದೇವಸ್ಥಾನ
ಕೂಡ್ಲು ಶಿವಮಂಗಿಲ ಸದಾಶಿವ ದೇವಸ್ತಾನವು, ಬಹಳ ಪ್ರಶಾಂತವಾದ ಸ್ಥಳದಲ್ಲಿದೆ. ಗೋಪಾಲಕೃಷ್ಣ ದೇವಳದಿಂದ ಬರೇ 250 ಮೀಟರ್ ದೂರದಲ್ಲಿದೆ. ಈ ದೇವಸ್ತಾನದ ಸ್ಥಾಪನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರೂ ಬಹಳ ವರ್ಷಗಳಿಂದ ಕೂಡ್ಲು ಶ್ಯಾನುಭಾಗ ಮನೆತನದವರು ಇದನ್ನು ನಡೆಸಿಕೊಂಡು ಬರುತಿದ್ದಾರೆ. ಇದಕ್ಕಾಗಿ ಇವರಿಗೆ ಸರಕಾರದಿಂದ ಸನದನ್ನು ಸಹಾ ಕೊಡಲಾಗಿದೆ. ಕೂಡ್ಲು ಮನೆಯ ಮನೆ ದೇವರು ಅಂತ ನಂಬಿಕೊಂಡು ಬಂದಿದ್ದಾರೆ. ಮೊದಲು ಜೀರ್ಣಾವಸ್ಥೆಯಲ್ಲಿದ್ದ ದೇವಸ್ತಾನವನ್ನು ಜೀರ್ಣೋದ್ಧಾರ ಮಾಡಿಸಿ, ನಿತ್ಯ ಮೂರೂ ಹೊತ್ತು ಪೂಜೆಯ ಏರ್ಪಾಡು ಮಾಡಿದ್ದಾರೆ.
-----
-----
ಇಲ್ಲಿಗೆ ಬರಲು ಮಾರ್ಗ ಸೌಕರ್ಯವಿದ್ದು ದೇವಸ್ಥಾನದ ಮುಂಭಾಗದ ವರೆಗೆ ವಾಹನಗಳಲ್ಲಿ ಬರಬಹುದಾಗಿದೆ. ಇಲ್ಲಿಂದಲೇ ಪಕ್ಕದಲ್ಲಿರುವ ಸಣ್ಣ ಸೇತುವೆ ದಾಟಿ ಮುಂದೆ ಹೋದರೆ ಮಧೂರು ರಸ್ತೆಗೆ ಸೇರುತ್ತದೆ. ಈ ದೇವಸ್ಥಾನವು ಚಿಕ್ಕದಾದರೂ ಚೊಕ್ಕವಾಗಿ,ಸುಂದರವಾಗಿದೆ. ಒಳ ಹೊಕ್ಕೊಡನೆ ಕೊಡಿಮರ, ಬಲಿಕಲ್ಲು ಮತ್ತು ಕಟ್ಟೆಗಳನ್ನು ಕಾಣಬಹುದು. ರಾಜಾಂಗಣ ಮತ್ತು ಸುತ್ತಲಿನ ಅಂಗಣಗಳು ಚೆನ್ನಾಗಿವೆ. ಸುತ್ತಲೂ ಇರುವ ಹಸಿರಾದ ಅಡಿಕೆ ತೋಟ ದೇವಾಲಯಕ್ಕೆ ಒಂದು ಪ್ರಶಾಂತ ಪರಿಸರವನ್ನು ನೀಡುತ್ತದೆ. ಇಲ್ಲಿಗೆ ಬಂದ ಭಕ್ತಾದಿಗಳು ಈ ಪ್ರಶಾಂತತೆಯನ್ನು ಅನುಭವಿಸಿ ದೇವಸ್ಥಾನವನ್ನು ಪ್ರವೇಶಿಸಿದಾಗ ಎದುರಿಗೆ ಇರುವ ಗರ್ಭಗೃಹದಲ್ಲಿರುವ ಸದಾಶಿವ ದೇವರ ದರ್ಶನವಾಗುತ್ತದೆ. ಗರ್ಭಗೃಹದ ಎದುರಿಗೆ ನಮಸ್ಕಾರ ಮಂಟಪವಿದೆ. ದೇವಾಲಯದ ವಾಸ್ತುವು ಕೇರಳ ಮತ್ತು ದಕ್ಷಿಣ ಕನ್ನಡದ ಶೈಲಿಯಲ್ಲಿದೆ.
-----
-----
ಇಲ್ಲಿ ವರ್ಷಂಪ್ರತಿ ಜಾತ್ರಾ ಮಹೋತ್ಸವವು, ಮಹಾ ಶಿವರಾತ್ರಿಯಂದು ಪ್ರಾರಂಭವಾಗಿ ಐದು ದಿನಗಳ ಕಾಲ ನಡೆಯುತ್ತದೆ. ಊರಿನ ಎಲ್ಲಾ ಭಕ್ತಾದಿಗಳು ಶ್ರೀ ದೇವರ ಜಾತ್ರೆಯಲ್ಲಿ ಭಾಗವಹಿಸಿ ಕೃತಾರ್ಥರಾಗುತ್ತಾರೆ. ಜಾತ್ರೆಯ ಮೂರನೆ ದಿವಸ ದೇವರನ್ನು ರಾಮದಾಸನಗರದ ಗೋಪಾಲಕೃಷ್ಣ ಹೈಸ್ಕೂಲ್ ನ ಎದುರು ಇರುವ ಕಟ್ಟೆಗೆ ಘೋಷ ಯಾತ್ರೆಯಲ್ಲಿ ಕೊಂಡೊಯ್ಯುವುದು, ಐದನೇ ದಿವಸ ಅವಭೃತ ಸ್ನಾನಕ್ಕಾಗಿ, ಶ್ರೀ ವಿಷ್ಣುಮಂಗಿಲ ದೇವಸ್ತಾನದ ಚಕ್ರ ತೀರ್ಥದಲ್ಲಿ ಮಿಂದು ಶ್ರೀ ಮಹಾ ವಿಷ್ಣು ದೇವರ ದರ್ಶನ ಮಾಡುವುದು ವಾಡಿಕೆ. ಜಾತ್ರೆಯ ಮಾರಣೆ ದಿವಸ, ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯುತ್ತದೆ.
------
------
ಇಲ್ಲಿ ಎರಡು ವರ್ಷಗಳಿಗೊಮ್ಮೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು (ಕೆಂಡ ಸೇವೆ) ಸಹಾ ಜರಗುತ್ತದೆ. ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ನರಸಿಂಹಾವತಾರದ ಪ್ರತೀಕವಾಗಿರುವ ವಿಷ್ಣುಮೂರ್ತಿಯ ಈ ಒತ್ತೆಕೋಲ ಮಹೋತ್ಸವವು ಊರಿನ ಮತ್ತು ಪರ ಊರಿನ ಬಹಳ ಭಕ್ತರನ್ನು ಬರಮಾಡಿಸುತ್ತದೆ.
-----
-----
ಭಯ ಮತ್ತು ಭಕ್ತಿಗಳನ್ನು ಏಕ ಕಾಲಕ್ಕೆ ಮೂಡಿಸುವ ಈ ಒತ್ತೆಕೋಲ ಮಹೋತ್ಸವವು ಕಾಸರಗೋಡು ಮತ್ತು ಕುಂಬಳೆ ಮತ್ತು ಸುತ್ತು ಮುತ್ತಲ ಪ್ರದೇಶಗಳಲ್ಲಿ ಮಾತ್ರ ಜರಗುತ್ತದೆ. ಒಮ್ಮೆಯಾದರೂ ಇದನ್ನು ನೋಡಲೇ ಬೇಕು.
-----
-----
ಭಯ ಮತ್ತು ಭಕ್ತಿಗಳನ್ನು ಏಕ ಕಾಲಕ್ಕೆ ಮೂಡಿಸುವ ಈ ಒತ್ತೆಕೋಲ ಮಹೋತ್ಸವವು ಕಾಸರಗೋಡು ಮತ್ತು ಕುಂಬಳೆ ಮತ್ತು ಸುತ್ತು ಮುತ್ತಲ ಪ್ರದೇಶಗಳಲ್ಲಿ ಮಾತ್ರ ಜರಗುತ್ತದೆ. ಒಮ್ಮೆಯಾದರೂ ಇದನ್ನು ನೋಡಲೇ ಬೇಕು.
ವಿಷ್ಣುಮಂಗಿಲ ಶ್ರೀ ಮಹಾವಿಷ್ಣು ದೇವಸ್ಥಾನ
ಕೂಡ್ಲು ದೇವಸ್ಥಾನಗಳಲ್ಲಿ ಒಂದಾದ ವಿಷ್ಣುಮಂಗಿಲ ಮಹಾವಿಷ್ಣು ದೇವಾಲಯವು ಮೇಲೆ ಹೇಳಿದ ಎರಡೂ ದೇವಾಲಯಗಳಿಂದ ಸುಮಾರು 1 km. ದೂರದಲ್ಲಿದೆ. ಸುತ್ತಲೂ ಬತ್ತದ ಗದ್ದೆಗಳಿಂದ ಆವೃತವಾಗಿ ಬಹಳ ಶಾಂತ ಪರಿಸರದಲ್ಲಿದೆ. ಹಸಿರಾದ ಬತ್ತದ ಬೆಳೆ ಈ ದೇವಸ್ಥಾನಕ್ಕೆ ಒಂದು ವಿಶೇಷ ಸೌಂದರ್ಯವನ್ನಿಯುತ್ತದೆ.
------
-----
ಬಹಳ ಪುರಾತನ ದೇವಾಲಯವಿದು. ಇಲ್ಲಿಗೆ ಮದ್ವಾಚಾರ್ಯರು ಬಂದು ಇಲ್ಲಿನ ಚಕ್ರ ತೀರ್ಥದಲ್ಲಿ ಮಿಂದು ಶ್ರೀ ಮಹಾವಿಷ್ಣು ದೇವರನ್ನು ಪೂಜಿಸಿದ್ದರೆಂದು, ವಿಷ್ಣುಮಂಗಿಲದ ತ್ರಿವಿಕ್ರಮ ಪಂಡಿತಾಚಾರ್ಯರೊಡನೆ ಹದಿನೈದು ದಿನಗಳ ಕಾಲ ದ್ವೈತ -ಅದ್ವೈತ ತತ್ವಗಳ ವಾದವನ್ನು ಮಾಡಿ ಅವರನ್ನು ವಾದದಲ್ಲಿ ಪರಾಭವಗೊಳಿಸಿದ್ದರು ಮತ್ತು ಅವರನ್ನು ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಿದರು ಎಂದು ಮದ್ವ ವಿಜಯ ಎಂಬ ಗ್ರಂಥದಲ್ಲಿ ಉಲ್ಲೇಖವಾಗಿದೆ ಎಂದು ಹೇಳುತ್ತಾರೆ.
ಶ್ರೀ ಮದ್ವಾಚಾರ್ಯರ ಕಾಲ 1238-1317 ರ ವರೆಗೆ.ಈ ಮಾಹಿತಿಯನ್ನು ಪರಿಗಣಿಸಿದರೆ ಈ ದೇವಾಲಯ ಮತ್ತು ಚಕ್ರತೀರ್ಥ ಎಂಬ ಕೆರೆ ಸುಮಾರು 800 ವರ್ಷಗಳಷ್ಟು ಹಳೆಯದಿರಬಹುದು ಎಂದು ಊಹಿಸಬಹುದು. ಈ ದೇವಸ್ಥಾನವನ್ನು ಯಾರು ಸ್ಥಾಪಿಸಿರಬಹುದು ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಉಡುಪಿಯ ಅಷ್ಟ ಮಠದ ಯತಿಗಳಿಗೆ ಮತ್ತು ಮಾಧ್ವ ಸಂಪ್ರದಾಯಸ್ಥರಿಗೆ ಈ ದೇವಸ್ಥಾನವು ತುಂಬಾ ಪ್ರಾಮುಖ್ಯವಾದದ್ದು. ಈಗಲೂ ಸಹಾ ಉಡುಪಿಯ ಸ್ವಾಮೀಜಿಗಳು ಬಂದರೆ ಅವರು ಮೊದಲು ಚಕ್ರತೀರ್ಥದಲ್ಲಿ ಮಿಂದು ಶ್ರೀ ಮಹಾವಿಷ್ಣು ದೇವರ ಪೂಜೆ ಮಾಡಿ ಹೋಗುವುದು ಸಂಪ್ರದಾಯವಾಗಿದೆ.
------
-----
ಈ ದೇವಸ್ಥಾನದ ಗೋಪುರ ಮತ್ತು ಮುಖ್ಯ ದೇವಾಲಯದ ಸಂಪೂರ್ಣ ನವೀಕರಣವನ್ನು ದಿವಂಗತ ಕೂಡ್ಲು ಸದಾಶಿವ ಶಾನುಭಾಗರು ಮಾಡಿಸಿದ್ದರು. ನಿತ್ಯವೂ ಮೂರೂ ಹೊತ್ತು ಪೂಜೆ ಇಲ್ಲಿ ನಡೆಯುತ್ತಿದೆ.ಇಲ್ಲಿಗೆ ಬಂದ ಭಕ್ತರಿಗೆ ಇಲ್ಲಿನ ಪರಿಸರ ಪ್ರಶಾಂತ ವಾತಾವರಣ, ಇಲ್ಲಿನ ಪಾವಿತ್ರ್ಯತೆ ಎಲ್ಲವೂ ಮೆಚ್ಚಿಗೆಯಾಗುವಂತಹದು.
-----
-----
ಮಕರ ಸಂಕ್ರಮಣದ ಪುಣ್ಯ ದಿನದಂದು ಇಲ್ಲಿ ಒಂದು ದಿವಸದ ಉತ್ಸವ ಬಹಳ ವಿಜೃಂಭಣೆಯಿಂದ ಜರಗುತ್ತದೆ.ಊರಿನ ಎಲ್ಲಾ ಭಕ್ತ ಜನರು ಬಂದು ಶ್ರೀ ಮಹಾವಿಷ್ಣು ದೇವರ ಜಾತ್ರೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ.
-----
-----
ಜಾತ್ರೆ ಕಳೆದ ಮರುದಿನ ಬೆಳಿಗ್ಗೆ ಪಕ್ಕದಲ್ಲಿರುವ ಧೂಮಾವತಿ ದೈವಕ್ಕೆ ಕೋಲ ಕೊಡುತ್ತಾರೆ. ಇದರ ಮಾರಣೆ ದಿನ ಕೂಡ ಭೂತ ಕೋಲ ನಡೆಯುತ್ತದೆ. ಬಹಳ ಕಾರಣಿಕದ ಭೂತ ಇದಾಗಿದ್ದು, ಇಲ್ಲಿ ಬಂದು ಬೇಡಿಕೊಂಡರೆ ಅವರ ಕೋರಿಕೆ ನೆರವೇರುತ್ತದೆ ಎಂತ ನಂಬಿಕೆಯಿದೆ.