ಕಳೆದ ವರ್ಷ ನಾವು ಇಂಗ್ಲೆಂಡ್ ನ ಕೊರ್ನ್ ವಾಲ್ ನಲ್ಲಿರುವ
ನಮ್ಮ ಮಗಳ ಮನೆಗೆ ಹೋಗಿದ್ದೆವು. 6 ತಿಂಗಳ ನಮ್ಮ ಅವಧಿಯಲ್ಲಿ ನಾನು ಹಲವಾರು ಹೊಸ ಜಾಗಗಳನ್ನು
ನೋಡಿದೆ. ಮನೆಯಲ್ಲಿ ಪುಟ್ಟ ಮೊಮ್ಮಗಳ ಆಗಮನವಾಗಿದ್ದುದರಿಂದ ನನ್ನ ಮಡದಿ ಮನೆಯಲ್ಲೇ
ಇರಬೇಕಾಗಿತ್ತು. ನಮ್ಮ ಅಳಿಯಂದಿರ ( ಡಾ.ರೋಹಿತ್) ಜೊತೆಯಲ್ಲಿ ನನ್ನ ಪ್ರಯಾಣ. ಕೆಲಸದ ನಿಮಿತ್ತ
ಅವರು ಕಾರಿನಲ್ಲಿ ಹಲವಾರು ಊರುಗಳಿಗೆ ಹೋಗುತ್ತಿರುತ್ತಾರೆ. ಅವರ ಜೊತೆಗಾರನಾಗಿ ನಾನೂ
ಹೋಗುತ್ತಿದ್ದೆ. ನಮ್ಮ ಗಮ್ಮ್ಯ ಸ್ಥಾನ ತಲುಪಿದಾಗ ಅವರು ನನ್ನನ್ನು ಅಲ್ಲಿನ ಮುಖ್ಯ
ತಾಣವೊಂದರಲ್ಲಿ ಇಳಿಸಿ ಅವರ ಕೆಲಸಕ್ಕೆ ಮುಂದೆ ಹೋಗುತ್ತಿದ್ದರು.
ನಾನೀವಾಗ ಏಕಾಂಗಿ. ಆ ಊರಿನ ಬಗ್ಗೆ ಮೊದಲೇ ಗೂಗಲ್ ನಲ್ಲಿ ಓದಿ
ತಿಳಿದುಕೊಂಡಿರುವುದರಿಂದ ಏನೊಂದು ತೊಂದರೆಯಿಲ್ಲದೆ ತಿರುಗಾಡುತ್ತಿದ್ದೆ. ರೋಹಿತ್ ಮೊದಲೇ
ತಿಳಿಸಿದ ಸಮಯಕ್ಕೆ,ನಿಗದಿತ ಜಾಗಕ್ಕೆ ಬಂದು ನನ್ನನ್ನು ಪಿಕಪ್ ಮಾಡಿ ಮುಂದೆ ಸಾಗುತ್ತಿದ್ದೆವು.
ನಾನು ಈಗ ಹೋಗುತ್ತಿರುವುದು ಪೋರ್ಟ್ ಐಸಾಕ್ ಎಂಬ ಊರಿಗೆ.
ಕಾರಿನಿಂದ ಇಳಿದು ಸುಮಾರು ದೂರ
ರಸ್ತೆಯಲ್ಲಿ ನಡೆದೆ
.
ಆಮೇಲೆ ಎಡಕ್ಕೆ ಹೋಗುವ ಕಿರಿದಾದ
ಕಾಲುದಾರಿಯಲ್ಲಿ ಮುಂದುವರಿದೆ.
ದಾರಿ ಬಹಳ
ಇಳಿಜಾರು. ಎರಡೂ ಪಕ್ಕ ಮನೆಗಳು. ಅವುಗಳನ್ನು ಬಳಸಿಕೊಂಡು ಹಾದಿ ಇಳಿಯುತಿತ್ತು.
ಎಲ್ಲ ಮನೆಗಳ
ಮುಂದೆ ಹೂದೋಟ. ಬಹಳ ಸುಂದರ ನೋಟ. ಸುತ್ತಿ ಬಳಸಿ ಇಳಿಯುತ್ತಲೇ ಇದ್ದೆ. ಎದುರುಗಡೆ ನೀಲಿಮಯವಾದ
ಅಟ್ಲಾಂಟಿಕ್ ಮಹಾ ಸಾಗರ. ಭರದಿಂದ ಬೀಸುವ ಮಾರುತ. ಆಯಾಸದ ಮಾತೇ ಇಲ್ಲ.
ಕೊನೆಗೊಮ್ಮೆ ನನ್ನ ಇಳಿತ ಕೊನೆಗೊಂಡಿತು. ನಾನು ಪೋರ್ಟ್
ಐಸಾಕ್ ಬಂದರಿಗೆ ತಲುಪಿದ್ದೆ.
ಪೋರ್ಟ್ ಐಸಾಕ್ ಒಂದು ಪುಟ್ಟ ಹಳ್ಳಿ ಅಥವಾ ಗ್ರಾಮ.
ಸಮುದ್ರಕ್ಕೆ ಹೊಂದಿಕೊಂಡಿರುವ ಕಡಿದಾದ ಬೆಟ್ಟದ ಇಳಿಜಾರಿನಲ್ಲಿ ಊರು ಬೆಳೆದಿದೆ.
ಸುಮಾರು
ಹದಿನೆಂಟನೇ ಶತಮಾನದ ಮಧ್ಯ ಕಾಲದಲ್ಲಿ ಈ ಗ್ರಾಮ ಬೆಳೆಯಿತು. ಮೀನುಗಾರ ಕುಟುಂಬಗಳೇ ಇಲ್ಲಿನ
ನಿವಾಸಿಗಳು. ದೂರದಿಂದ ನೋಡುವಾಗ ಇಲ್ಲಿ ಇಂತಹ ಒಂದು ಹಳ್ಳಿ ಇದೆ ಎಂದು ಕಾಣುವುದೇ ಇಲ್ಲ.
ಇಲ್ಲಿ ಹಲವಾರು ಸಿನೆಮಾಗಳೂ ಟಿವಿ ಸೀರಿಯಲ್ ಗಳೂ
ಚಿತ್ರೀಕರಣಗೊಂಡಿವೆ. ನಾನು ನೊಡಿದ
ಡೋಕ್ ಮಾರ್ಟಿನ್ ಎಂಬ ಸೀರಿಯಲ್ ಇಲ್ಲೇ
ಚಿತ್ರೀಕರಣಗೊಂಡಿದ್ದು, ನನಗೆ ಇಲ್ಲಿನ ಪರಿಚಯ ಚೆನ್ನಾಗಿ ಮಾಡಿ ಕೊಟ್ಟಿತ್ತು. ನಾನು ಸಮುದ್ರಕ್ಕೆ
ಇಳಿದು ಅಟ್ಲಾಂಟಿಕ್ ಸಾಗರದ ನೀರಿನ ಶೀತಲ ಅನುಭವ ಪಡೆದೆ. ಇಂಗ್ಲಿಶ್ ಅಕ್ಷರಮಾಲೆಯ U ಆಕೃತಿಯ
ಬಂದರು, ಮೂರೂ ಕಡೆ ಎತ್ತರವಾದ ಕಡಿದಾದ ಬೆಟ್ಟ. ಸಮುದ್ರದ ನೀರು ಭೂಮಿಯನ್ನು
ಆಕ್ರಮಿಸಿದ ಹಾಗೆ ಕಾಣುವ ನಿಸರ್ಗ ನಿರ್ಮಿತ ಹಿನ್ನೀರು. ಸಮುದ್ರದ ರಭಸವನ್ನು ತಡೆಯಲು ಮಾಡಿದ
ತಡೆಗೋಡೆ. ಇಲ್ಲಿ ಪಕ್ಕದಲ್ಲಿ ನೀರಿನ ಝರಿಯೊಂದು ಜುಳು ಜುಳು ಎಂದು ಹರಿಯುತ್ತಾ ನೇರ ಕಡಲಿಗೇ
ಸೇರುತ್ತದೆ. ಪಕ್ಕದ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಿದ ಮನೆಗಳು, ಹೋಟೆಲ್ ಗಳು ಮತ್ತು ಯಾತ್ರಿ
ನಿವಾಸಗಳು. ಸುಂದರ ಪರಿಸರ.
ಪಕ್ಕದಲ್ಲಿ ಸ್ವಲ್ಪವೇ ದೂರದಲ್ಲಿ ಎತ್ತರವಾದ ಜಾಗದಲ್ಲಿ ಒಂದು
ಫಿರಂಗಿ ಇರಿಸಿದ್ದಾರೆ. ಅಲ್ಲಿಗೆ ಹೋ.ಗಲು ಮೆಟ್ಟಿಲುಗಳು ಇವೆ. ನಾನು ಅಲ್ಲಿಗೆ ಹೋಗಿ ಅದರ ಸಮೀಪ
ನಿಂತೆ. ಅದೆಷ್ಟೋ ಕಾಲದಿಂದ ಅದ್ಯಾವುದೋ ಅಜ್ನಾತ ಶತ್ರುವನ್ನು ಹೊಡೆದುರುಳಿಸಲು ಸಜ್ಜಾಗಿ
ನಿಂತಿದೆ. ಒಂದು ಲೈಫ್ ಬೋಟ್ ಕೇಂದ್ರವೂ ಇಲ್ಲಿದೆ.
ನಾನು ಡೋಕ್ ಮಾರ್ಟಿನ್ ಸೀರಿಯಲ್ ನಲ್ಲಿ ನೊಡಿದ ಎಲ್ಲಾ
ಜಾಗಗಳೂ ಅಂಗಡಿಗಳೂ ಪಬ್ ಎಲ್ಲವನ್ನೂ ಇಲ್ಲಿ ಪ್ರತ್ಯಕ್ಷ ನೋಡಿದೆ. ಬಹಳ ಚಿರಪರಿಚಿತ ಜಾಗ
ಎಂದೆನಿಸಿತು.
ಹಾಗೇನೆ ನಾನು
ಪಕ್ಕದಲ್ಲಿ ಸಾಗುವ ಒಂದು ರಸ್ತೆಯಲ್ಲಿ ಊರು ನೊಡಲು ಹೋದೆ. ಇದೊಂದು ಟೂರಿಸ್ಟ್
ಕೇಂದ್ರವಾಗಿದ್ದುದರಿಂದ ಇಲ್ಲಿ ತುಂಬಾ ಹೊಟೆಲ್ ಗಳೂ ವಸತಿಗೃಹಗಳೂ ಇವೆ. ಇಲ್ಲೆಲ್ಲಾ ಬಹುತೇಕ
ಹೋಟೆಲ್ ಗಳಲ್ಲಿ ಮತ್ಸ್ಯ ವಿಭವಗಳೇ ಸಿಗುವುದು. ಮದ್ಯದ ಬಾಟಲಿಗಳು ಯಾತ್ರಿಕರನ್ನು ಒಳಬರಲು
ಅಮಿಷವೊಡ್ಡುತ್ತಿವೆ.
ಇವನ್ನು ಇನ್ನ್ –ಪಬ್ ಎನ್ನುತ್ತಾರೆ. ನನಗಾದರೋ ಇದರೊಳಗೆ ಏನೂ ಸಿಗಲಾರದು.
ನಾನು ಶುದ್ಧ ಸಸ್ಯಾಹಾರಿ. ಒಂದು ಹಳೆಯ ಶಾಲೆಯನ್ನೇ ಹೋಟೆಲ್
ಆಗಿ ಪರಿವರ್ತಿಸಿದ್ದಾರೆ. ಒಂದು ಪುಟ್ಟ
ಚರ್ಚು ಸಹಾ ಇಲ್ಲಿದೆ. ಇಲ್ಲಿ ಕಡಲ ಹಕ್ಕಿಗಳು ತುಂಬಾ ಇವೆ. ಬಹಳ ದೂರ ನಡೆದು ಬೇರೊಂದು ದಾರಿಯಲ್ಲಿ ಬೆಟ್ಟದ
ಇನ್ನೊಂದು ಬಾಹುವಿಗೆ ಬಂದೆ. ಅಲ್ಲಿಯೂ ಸುಂದರವಾದ ಮನೆಗಳೂ ಹೋಟೆಲ್ ಗಳೂ ಇದ್ದವು. ದೂರದಲ್ಲಿ
ಕಾಣುವ ಬೆಟ್ಟದ ತಪ್ಪಲಲ್ಲಿ ಕೆಲವಾರು ಒಂಟಿ ಮನೆಗಳು ಕಾಣುತ್ತಿದ್ದವು. ಇಂತಹಾ ಸುಂದರ
ಪ್ರದೇಶದಲ್ಲಿ ಯಾರ ಹಂಗೂ ಇಲ್ಲದೆ ಜೀವಿಸಬೇಕು ಎನ್ನುವುದು ನಮಗೆಲ್ಲಾ ಕನಸಿನಲ್ಲಿ ಮಾತ್ರ ಸಾಧ್ಯ.
ಮುಂದೆ ಹೋದಂತೆ ಮನೆಗಳು ವಿರಳವಾದವು. ನಡೆದಾಡುವ ಮತ್ತು ಜಾಗಿಂಗ್ ಟ್ರ್ಯಾಕ್ ಇನ್ನೂ
ಮುಂದುವರಿದಿತ್ತು. ಅಲ್ಲೇ ಒಂದು ಬೆಂಚಿನಲ್ಲಿ ಕುಳಿತು ನಾನು ತಂದ ಫಲಾಹಾರ ತಿಂದು ಜ್ಯೂಸ್
ಕುಡಿದೆ. ಕಡಲ ಹಕ್ಕಿಗಳು ಬಂದು ತಮ್ಮ ಪಾಲನ್ನು ಬೇಡಿದವು. ಇಲ್ಲಿಂದ ಕೆಳಗೆ ಇಳಿದು ನಾನು ಬಂದ
ದಾರಿಯನ್ನು ಎಣಿಸುವಾಗ ಚಿಂತೆಯಾಯಿತು. ಇಲ್ಲಿಂದಲೇ ಬೇರೆ ದಾರಿ ಇರಬೇಕು ಎಂದು ತರ್ಕಿಸಿ ಹಾಗೇ
ಮುಂದುವರಿದೆ. ಬಲಕ್ಕೆ ಒಂದು ರಸ್ತೆ ಕಂಡಿತು. ಅದರಲ್ಲಿ ಸಾಗಿದಾಗ ಒಂದು ಕರಕುಶಲ ಅಂಗಡಿ ಕಂಡಿತು.
ಒಳಗೆ ಹೋಗಿ ಅಲ್ಲಿದ್ದ ಮಹಿಳೆಯೊಡನೆ ನಾನು ಹೋಗಬೇಕಾಗಿದ್ದ N H S ಆಸ್ಪತ್ರೆ ಎಲ್ಲಿದೆ ಎಂದು ಕೇಳಿದೆ. ಅವಳಿಗೆ ಸ್ವಲ್ಪ
ಗಾಭರಿ ಆಯಿತು. ಯಾಕೆ ಏನಾದರೂ ತೊಂದರೆ ಇದೆಯಾ ಎಂತ ಕೇಳಿದಳು. ಇಲ್ಲ ಅಲ್ಲಿ ನನ್ನ ಅಳಿಯ ಡಾಕ್ಟರು,
ಅಲ್ಲಿಗೆ ಮೇಲ್ವಿಚಾರಣೆಗೆ ಬಂದಿದ್ದಾರೆ ಅವರನ್ನು ಕೂಡಿಕೊಂಡು ಮನೆಗೆ ಹೋಗಬೇಕು ಎಂದೆ. ಸರಿ
ಮುಂದೆ ಕಾಣುವ ರಸ್ತೆಯಲ್ಲಿ ಸೀದಾ ಹೋದರೆ ಅಲ್ಲೇ ಮೇಲೆ ಬಲಕ್ಕಿದೆ ಆಸ್ಪತ್ರೆ ಎಂದಳು. ಬಹಳ ಆತ್ಮೀಯತೆಯಿಂದ ನನ್ನ ಮತ್ತು ಮನೆಯವರ ವಿಚಾರ ಕೇಳಿದಳು.
ಅವಳಿಗೆ ಧನ್ಯವಾದ ಹೇಳಿ ಮುಂದೆ ಸಾಗಿ ರೋಹಿತ್ ರನ್ನು ಸೇರಿಕೊಂಡೆ. ಕಾರಲ್ಲಿ ಹಿಂತಿರುಗುವಾಗ
ನಮ್ಮಿಷ್ಟದ ಹಳೆಯ ಹಿಂದಿ ಹಾಡುಗಳನ್ನು ಕೇಳುತ್ತಾ ಮನೆಗೆ ತಲುಪಿದೆವು.
\