Wednesday, 15 January 2014

SOMANAATH - GUJARAT



ಜೈಸೋಮನಾಥ

ನಮ್ಮ ದ್ವಾರಕಾ ಯಾತ್ರೆ ಮುಗಿಸಿಕೊಂಡು ನವಂಬರ್ 23 ರ ಬೆಳಗ್ಗೆ 6ಘಂಟೆಗೆ ಹೊರಡುವ ಸರಕಾರೀ ಸಾರಿಗೆ ಬಸ್ ನಲ್ಲಿ ನಾವು ಸೋಮನಾಥಕ್ಕೆ ಹೊರಟೆವು. ಇಲ್ಲಿಂದ ಸುಮಾರು 250 ಕಿ.ಮಿ. ದೂರ ಪ್ರಯಾಣಿಸಬೇಕು. ಬಸ್ಸು ಸ್ವಲ್ಪ ನಿಧಾನವಾಗಿಯೇ ಮುಂದುವರಿಯುತ್ತಿತ್ತು. ಅಲ್ಲಿನ ರಸ್ತೆಗಳು ಚೆನ್ನಾಗಿದ್ದರೂ ಬಸ್ ಗಳು ವೇಗದಲ್ಲಿ ಹೋಗುವಂತಿಲ್ಲ. ಮಧ್ಯದಲ್ಲಿ ಯಾವುದೊ ಒಂದು ಊರಲ್ಲಿ ಬೆಳಗ್ಗಿನ ತಿಂಡಿಗೆ ನಿಲ್ಲಿಸಿದರು. ಅಲ್ಲಿ ನಮಗೆ ಇಷ್ಟವಾದದ್ದೇನೂ ಸಿಗಲಿಲ್ಲ. ಚಾಯ್ ಮತ್ತು ಬಿಸ್ಕೆಟ್ ತಿಂದೆವು. ಗುಜರಾತ್ ನ ಕರಾವಳಿಯಲ್ಲೇ ಬಸ್ ಸಂಚರಿಸುತ್ತಿದ್ದರಿಂದ ಆಗಾಗ ಸಮುದ್ರ ಧರ್ಶನವೂ ಆಗುತಿತ್ತು. ಮೀನಿನ ಗಂಧವೂ ಮೂಗಿಗೆ ಬಡಿಯುತ್ತಿತ್ತು. ನಮ್ಮ ಬಸ್ ನೇರ ದಾರಿಯಲ್ಲಿ ಹೋಗದೆ ಸ್ವಲ್ಪ ಸುತ್ತು ಬಳಸಿ ಹೋಗಬೇಕಾಗಿತ್ತು. ಅಲ್ಲಿ ಸೇತುವೆಯೊಂದರ ದುರಸ್ತಿ ನಡೆಯುತ್ತಿತ್ತು. ಗಾಂಧಿಜಿಯವರ ಹುಟ್ಟೂರು ಪೋರ್ಬಂದರ್ ತಲುಪಿದೆವು. ತಕ್ಕ ಮಟ್ಟಿಗೆ ದೊಡ್ಡ ಊರು ಮಾತ್ರವಲ್ಲ ಪ್ರಮುಖ ಬಂದರು ಇಲ್ಲಿದೆ. ಮುಂದೆ ಕೆಲ ಊರುಗಳನ್ನು ಹಾಯ್ದು ವೆರಾವಲ್ ತಲುಪಿದೆವು ಅಲ್ಲಿಂದ ನಮ್ಮ ಗಮ್ಯ ಸ್ಥಾನವಾದ ಸೋಮನಾಥ್ ಗೆ 6 ಕಿ.ಮಿ. ಪ್ರಭಾಸ ಪಟ್ಟಣದಲ್ಲಿರುವ ಸೋಮನಾಥ್ ಗೆ ಮಧ್ಯಾಹ್ನ 1 ಘಂಟೆಗೆ ತಲುಪಿದೆವು. ಬಸ್ ನಿಲ್ದಾಣದ ಪಕ್ಕದಲ್ಲೇ ಸೋಮನಾಥ್ ಟ್ರಸ್ಟ್ ನ ಆಪೀಸು ಇದ್ದು ಅಲ್ಲಿಗೆ ಹೋಗಿ ನಾವು ಮೊದಲೇ ರಿಸರ್ವ್ ಮಾಡಿದ್ದ ರೂಮಿನ ಕೀಲಿ ಪಡೆದೆವು. ನಾನು ಊರಿನಿಂದಲೇ ದೂರವಾಣಿ ಮೂಲಕ ಇವರನ್ನು ಸಂಪರ್ಕಿಸಿದ್ದೆ. ರೂಮು ರಿಸರ್ವ್ ಮಾಡಲು 1500 ರೂ. DD ಕಳುಹಿಸಲು ಹೇಳಿದ್ದರು. 3 ಜನರಿಗೆ ದಿನವೊಂದರ 400 ರೂ. ಬಾಡಿಗೆ. ರೂಮು ಚೆನ್ನಾಗಿತ್ತು. ಬೇಗನೇಸ್ನಾನ ಮುಗಿಸಿ ಪಕ್ಕದಲ್ಲೇ ಇರುವ ಟ್ರಸ್ಟ್ ನ ಭೋಜನಾಲಯಕ್ಕೆ ಹೋಗಿ ಊಟ ಮುಗಿಸಿದೆವು. ಊಟ ಚೆನ್ನಾಗಿತ್ತು. ಸ್ವಸಹಾಯ ಪದ್ಧತಿ. ಫುಲ್ ಮೀಲ್ಸ್ ಒಬ್ಬರಿಗೆ 35 ರೂ.ಸ್ವಲ್ಪ ಹೊತ್ತು ವಿಶ್ರಮಿಸಿ ಸೋಮನಾಥ ದೇವಾಲಯ ನೋಡಲು ಹೊರಟೆವು.



ಸೋಮ ಎಂದರೆ ಚಂದ್ರ. ( Moon ) ಸೋಮ ಪ್ರತಿಷ್ಟಾಪಿಸಿದ ಶಿವಲಿಂಗವು ಸೋಮನಾಥ ಎಂದಾಯಿತು. ಧಕ್ಷನಿಂದ ಶಾಪಕ್ಕೊಳಗಾಗಿ ಚಂದ್ರನು ಪರಿತಪಿಸುತ್ತಿರುವಾಗ ಬ್ರಹ್ಮನ ಆದೇಶದಂತೆ ಭೂಮಿಗೆ ಬಂದು ಕಡಲತೀರದಲ್ಲಿ ಒಂದು ಚಿನ್ನದ ದೇವಾಲಯ ಕಟ್ಟಿಸಿ ಅಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ತಪಸ್ಸು ಮಾಡಿದಾಗ ಶಿವನು ಒಲಿದು ಆತನ ಶಾಪ ಮೋಕ್ಷ ಮಾಡುತ್ತಾನೆ. ಮಾತ್ರವಲ್ಲ ಜ್ಯೋತಿರ್ಲಿಂಗದ ರೂಪದಲ್ಲಿ ಅಲ್ಲಿಯೇ ನೆಲೆಸುತ್ತಾನೆ. ಈ ಸುವರ್ಣ ದೇಗುಲವು ನಾಶವಾದ ಮೇಲೆ ಸೂರ್ಯ ದೇವನೂ ಇಲ್ಲಿ ರಜತ ದೇವಾಲಯ ನಿರ್ಮಿಸುತ್ತಾನೆ. ಅದೂ ಅಳಿದು ಹೋದಮೇಲೆ ಶ್ರೀಕೃಷ್ಣನು ಶ್ರೀಗಂಧದ ಕಟ್ಟಿಗೆಯಿಂದ ದೇವಾಲ ನಿರ್ಮಿಸುತ್ತಾನೆ. ಅದೂ ಸಹಾ ಅಳಿದು ನಾಶವಾಗಿ ಕಲಿಯುಗದಲ್ಲಿ ಕ್ರಿಸ್ತ ಶಕ 649ರಲ್ಲಿ ವಲ್ಲಭಿ ಎಂಬ ರಾಜನು ಅದನ್ನು ಮತ್ತೆ ಕಟ್ಟಿಸುತ್ತಾನೆ, ಆದರೆ ಅದು ಅರಬರ ಧಾಳಿಗೆ ತುತ್ತಾಗಿ ನಿರ್ನಾಮವಾಯಿತು. ದ್ವಿತೀಯ ನಾಗಭಟ ಎಂಬ ರಾಜನು 815 ನೇ ಇಸವಿಯಲ್ಲಿ ಪುನ್ಹರಚಿಸುತ್ತಾನೆ. ಆಗ ಬಹಳ ವೈಭವದಿಂದ, ಅಗಣಿತ ಮೌಲ್ಯದ ಚಿನ್ನಾಭರಣ, ಮುತ್ತು ರತ್ನಾದಿಗಳಿಂದ ಸೋಮನಾಥವು ಪ್ರಖ್ಯಾತಿ ಹೊಂದಿತ್ತು. ಆದರೆ ಆ ಐಶ್ವರ್ಯವೇ ಅದಕ್ಕೆ ಮುಳುವಾಯಿತು. 1024 ರಲ್ಲಿ ಮಹಮ್ಮದ್ ಘಜನಿ ಹಲವು ಬಾರಿ ಆಕ್ರಮಣ ನಡೆಸಿ ಕೊಳ್ಳೆಹೊಡೆದು ತನ್ನ ಊರಿಗೆ ಸಾಗಿಸಿದ ಎಂದು ನಾವು ಚರಿತ್ರೆಯ ಪಾಠದಲ್ಲಿ ಓದಿರುತ್ತೇವೆ. ಆದರೂ ಸೋಮನಾಥನ ಮೇಲಿರುವ ಅಚಲ ಭಕ್ತಿಯಿಂದ ದೇವಾಲಯ ಮತ್ತೆ ತಲೆ ಎತ್ತುತ್ತದೆ. ಈ ಬಾರಿ ಗುರ್ಜರ ಅರಸು ಭೋಜ, ನಂತರ ಸೋಲಂಕಿಯ ರಾಜ ಭೀಮದೇವ 1026- 1042ರಲ್ಲಿ ಇದನ್ನು ಕಟ್ಟಿದರು. ಸುಮಾರು 250 ವರ್ಷಗಳವರೆಗೆ ಸೋಮನಾಥಾನ ಕೀರ್ತಿ ಮೆರೆಯಿತು. ಆದರೆ 1296 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಇದನ್ನು ಕೊಳ್ಳೆ ಹೊಡೆದು ನಾಶ ಮಾಡಿದ. ಮತ್ತೆ ಮತ್ತೆ ಇದನ್ನು ಕಟ್ಟಿದರು. 1451ರಲ್ಲಿ ಮಹಮ್ಮದ್ ಬೇಗಡನಿಂದ 1665 ರಲ್ಲಿ ಔರಂಗಜೇಬ ನಿಂದ ದ್ವಂಸಗೊಂಡಿತು.ಆತನು ದೇವಾಲಯ ಕೆಡವಿ ಅಲ್ಲೇ ಒಂದು ಮಸೀದಿಯನ್ನೂ ನಿರ್ಮಿಸಿದನು. ಪಾಳುಬಿದ್ದ ದೇವಾಲಯದ ಅವಶೇಷಗಳು ತಮ್ಮ ಕಣ್ಣೀರ ಕಥೆಯನ್ನು ಹೇಳುತ್ತಾ ಬಿದ್ದಿದ್ದವು. ಅಹಲ್ಯಾಭಾಯಿ ಹೋಳ್ಕರ್ ಎಂಬ ಪೇಶವೇ ವಂಶದ ಮಹಾರಾಣಿ ಅಲ್ಲಿಗೆ ಬಂದು ಇದನ್ನು ನೋಡಿ ಬಹಳ ದುಃಖಪಟ್ಟು, ಹಿಂದಿನ ದೇವಾಲಯದ ಸಮೀಪದಲ್ಲೇ ಸೋಮನಾಥ ಲಿಂಗ ಪ್ರತಿಷ್ಟಾಪಿಸಿಪೂಜೆ ಅರ್ಚನೆಗಳನ್ನು ಪ್ರಾರಂಭಿಸಿದಳು. ಈ ದೇವಾಲಯವು ಈವಾಗಲೂ ಇದ್ದು ನಾವು ನೋಡಬಹುದು.



 ಆದರೆ ಇದು ಚಿಕ್ಕ ದೇವಾಲಯ ಬಹಳ ಭವ್ಯತೆ ಇದಕ್ಕಿಲ್ಲ. 1947ರಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಮತ್ತು ಕೆ.ಎಂ. ಮುನ್ಶಿ ಯವರು ಇಲ್ಲಿಗೆ ಬಂದು “ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೆ ನಾವು ಸೋಮನಾಥನ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ” ಎಂದು ಅರಬೀ ಸಮುದ್ರದ ನೀರು ಮುಟ್ಟಿ ಪ್ರತಿಜ್ಞೆ ಮಾಡಿದರು. ಸ್ವಾತಂತ್ರ್ಯ ಬಂತು. ಸೋಮನಾಥದ ಕೆಲಸವೂ ಬಹಳ ತ್ವರಿತವಾಗಿ ನಡೆದು 1951 ರಲ್ಲಿ ಪೂರ್ಣಗೊಂಡು, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಂದ ಪ್ರಾಣಪ್ರತಿಷ್ಠೆಗೊಂಡು ಅತ್ಯಪೂರ್ವ ಪರಿಪೂರ್ಣ ದೇವಾಲಯ ಮತ್ತು ಜ್ಯೋತಿರ್ಲಿಂಗ ಮತ್ತೊಮ್ಮೆ ನಮ್ಮವರ ಹೆಮ್ಮೆಯ, ಭಕ್ತಿ ಮತ್ತು ಛಲದ ಪ್ರತೀಕವಾಗಿ ತನ್ನ ಮೊದಲಿದ್ದ ಸ್ಥಾನದಲ್ಲೇ ರಾರಾಜಿಸುತ್ತಿದೆ.



 ( ಮೇಲೆ ಕೊಟ್ಟಿರುವ ವಿವರಗಳು ಮತ್ತು ಅಂಕಿ ಅಂಶಗಳನ್ನು ವಿಕಿಪೀಡಿಯಾದಿಂದ ಪಡೆದಿದ್ದೇನೆ— ಇಷ್ಟು ವಿವರಣೆ ಇಲ್ಲದಿದ್ದರೆ ಸೋಮನಾಥದ ವಿವರಣೆ ಅಸಾಧ್ಯ) ಇದರ ವೆಚ್ಚಕ್ಕಾಗಿ ಸರಕಾರದಿಂದ ಒಂದು ಕಾಸೂ ಪಡೆಯಬಾರದೆಂದು ಬಾಪೂಜಿಯವರು ಹೇಳಿದ್ದರಂತೆ. ಆದಕಾರಣ ಸಂಪೂರ್ಣ ವೆಚ್ಚವನ್ನು ಭಾರತದ ಭಕ್ತ ಜನರಿಂದಲೇ ಸಂಗ್ರಹಿಸಿ ನಿರ್ಮಿಸಿದ್ದಾರೆ. ಆಗ ಇದಕ್ಕಾಗಿ ರಚಿಸಿದ ಟ್ರಸ್ಟ್ ಈವಾಗಲೂ ಬಹಳ ಶಿಸ್ತು ಬದ್ದವಾಗಿ ನಡೆಯುತ್ತಿದೆ. ಯಾತ್ರಿಗಳಿಗಾಗಿ ಅತಿಥಿ ಗೃಹಗಳು ಭೋಜನಾಲಯಗಳು ಸೈಟ್ ಸೀಯಿಂಗ್ ಬಸ್ ಗಳು ಎಲ್ಲವನ್ನೂ ಟ್ರಸ್ಟ್ ನೋಡಿಕೊಳ್ಳುತ್ತದೆ.



 ಎಲ್ಲವೂ ಅಗ್ಗದಲ್ಲಿ. ಎಲ್ಲೆಡೆ ಶುಚಿತ್ವ ಭದ್ರತೆ ಇದೆ, ಭದ್ರತಾದಳದ ಕಣ್ಣು ತಪ್ಪಿಸಿ ಯಾರೂ ದೇವಾಲಯದ ಆವರಣವನ್ನೇ ಪ್ರವೇಶಿಸುವಂತಿಲ್ಲ. ಇಲ್ಲಿ ಸಹಾ ಕೆಮರಾ ಮೊಬೈಲ್ ಎಲ್ಲಾ ನಿಷೇಧಿಸಲಾಗಿದೆ.



 ಆವರಣದ ಹೊರಗಿನಿಂದಲೇ ಫೋಟೋ ತೆಗೆಯಬೇಕಷ್ಟೇ. ಅಲ್ಲೇ ಒಂದು ಸುಂದರ ಪಾರ್ಕ್ ನಿರ್ಮಿಸಿದ್ದಾರೆ. ದೂರದಲ್ಲಿ ಸೋಮನಾಥ ಕಂಡರೆ, ಎದುರುಗಡೆ ವಿಶಾಲ ಕಡಲು. ಅಲ್ಲಿಂದಲೇ ಹಲವಾರು ಫೋಟೋ ತೆಗೆದೆವು.



 ನಂತರ ಪಕ್ಕದ ದಾರಿಯಲ್ಲಿ ಸಾಗಿ ಸಮುದ್ರ ಕಿನಾರೆಗೆ ಬಂದೆವು. ಅಲ್ಲೆಲ್ಲ ಸಂತೆ ನೆರೆದಿತ್ತು. ಎಳನೀರು ಕುಡಿದು ಮುಂದೆ ಹೋದೆವು. ಮಕ್ಕಳಿಗಾಗಿ ಆಟದ ಹಲವಾರು ಆಕರ್ಷಣೆ, ಕುದುರೆ ಒಂಟೆ ಸವಾರಿಯೂ ಇತ್ತು. ಶಂಖ, ಕಪ್ಪೆಚಿಪ್ಪುಗಳು, ಮುತ್ತು ಹವಳ ಕೆಲವು ಬಗೆಯ ರತ್ನಗಳನ್ನೂ ಅಲ್ಲಿ ಮಾರುತಿದ್ದರು. ಬಹಳ ಅಗ್ಗವಾಗಿ. ಇವುಗಳ ಕ್ವಾಲಿಟಿ ಬಗ್ಗೆ ಏನೂ ಹೇಳುವಂತಿಲ್ಲ. ನಾವು ನೀರಿಗಿಳಿದು ಸುಮಾರು ಹೊತ್ತು ಆಟವಾಡಿದೆವು.



ಅಲ್ಲಿಂದ ಹೊರಟು ನಾವು ದೇವರ ದರ್ಶನಕ್ಕೆ ಹೋದೆವು. ಮೊದಲಿಗೆ ಸುರಕ್ಷಾ ತಪಾಸಣೆ ನಡೆಯಿತು. ಇದಕ್ಕೂ ಮೊದಲು ಕೆಮರಾ ಮೊಬೈಲ್ ಎಲ್ಲ ಅಲ್ಲಿ ಜಮಾ ಮಾಡಿದೆವು. ಮುಂದೆ ವಿಶಾಲವಾದ ಜಾಗ, ಎಲ್ಲೆಡೆ ಅಲಂಕಾರಿಕ ಟೈಲ್ ಹಾಕಿದ್ದಾರೆ. ಇಲ್ಲಿ ಸೋಮನಾಥನಿಗೆ ಅಭಿಮುಖವಾಗಿ ನಿಂತಿರುವ ಸರ್ದಾರ್ ಪಟೇಲ್ ಅವರ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ.



 ಮತ್ತೆ ಸರದಿಯಲ್ಲಿ ಸಾಗಲು ಕಟಾಂಜನವಿದೆ. ಅದರಲ್ಲಿ ಹೋದರೆ ದೇವಾಲಯದ ಮುಖ್ಯ ದ್ವಾರ. ಇಲ್ಲಿ ಮತ್ತೊಮ್ಮೆ ಸುರಕ್ಷಾ ತಪಾಸಣೆ, ಅಲ್ಲಿಂದ ಒಳಗಡೆ ಹೋದರೆ ಬಹಳ ವಿಶಾಲವಾದ ಪ್ರಾಂಗಣ, ಎಲ್ಲೆಲ್ಲೂ ಹುಲ್ಲು ಹಾಸು, ಅಲಂಕಾರಿಕ ಸಸ್ಯಗಳು. ಅಲ್ಲಲ್ಲಿ ಕುಳಿತು ದೇವಾಲಯ ನೋಡಬಹುದು. ಮಧ್ಯದಲ್ಲಿ ದಾರಿಯಿದೆ. ಸಮುದ್ರದಿಂದ ಎತ್ತರದಲ್ಲಿದೆ. ಅಲ್ಲಿಂದ ಸಮುದ್ರ ಧರ್ಶನ ಸೊಗಸಾಗಿದೆ. ನಮಗೆ ಸೂರ್ಯಾಸ್ತವೂ ಅಲ್ಲೇ ನೋಡಲು ಸಾಧ್ಯವಾಯಿತು. ಹೊರಗಿನಿಂದಲೇ ದೇವಾಲಯದ ಸೊಬಗನ್ನು ವೀಕ್ಷಿಸಿದೆವು. ದೇವಾಲಯವು ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಶಿಖರವು 52 ಮೀಟರ್ ಎತ್ತರವಿದ್ದು ತುತ್ತ ತುದಿಯಲ್ಲಿ ದ್ವಜವಿದೆ. ಇಲ್ಲಿ ಶಿಲ್ಪ ಕಲಾಕೃತಿಗಳು ಜಾಸ್ತಿ ಇಲ್ಲ. ಆದರೆ ಇದ್ದ ಶಿಲ್ಪಗಳು ಸುಂದರವಾಗಿದ್ದವು.



 ಮತ್ತೆ ನಾಟ್ಯ ಮಂಟಪ, ಇಲ್ಲಿನ ಕಂಭಗಳು ಎತ್ತರವಾಗಿದ್ದು ಸುಂದರವಾಗಿವೆ. ಹೊರಗಿನ ಸಾಲಿನ ಕಂಭಗಳಿಗೆ ಚಿನ್ನದ ಬಣ್ಣದ ಪೇಯಿಂಟ್ ಮಾಡಿದ್ದಾರೆ. ಅಲ್ಲಿಂದ ಮುಂದೆ ಮತ್ತೊಂದು ದ್ವಾರ, ಅದರ ಮೆಟ್ಟಲಲ್ಲಿ ನಿಂತಾಗಲೇ ಸೋಮನಾಥ ಜ್ಯೋತಿರ್ಲಿಂಗ ದರ್ಶನ ವಾಯಿತು. ದೇವರ ದರ್ಶನ ಎಲ್ಲರಿಗೂ ಸುಲಭವಾಗಲೆಂದು ಎರಡೂ ಪಕ್ಕದಲ್ಲಿ ರೈಲಿಂಗ್ ಹಾಕಿದ್ದರೆ. ಒಂದು ಬದಿ ಮಹಿಳೆಯರಿಗೆ ಮತ್ತು ಇನ್ನೊಂದು ಬದಿ ಪುರುಷರಿಗೆ. ಅದರಲ್ಲಿ ಹೋಗಿ ದೇವರ ದರ್ಶನ ಮತ್ತು ಪ್ರಾರ್ಥನೆ ಮಾಡಿ ಮುಂದೆ ಹೋದೆವು. ಎಷ್ಟು ಸಲ ಬೇಕಾದರೂ ಈ ರೀತಿ ದರ್ಶನ ಮಾಡಬಹುದು. ಈ ಒಳಾಂಗಣವು ಬಹಳ ದೊಡ್ಡದಾಗಿದ್ದು 250 ಜನರಿದ್ದರೂ ರಶ್ ಅನ್ನಿಸುವುದಿಲ್ಲ. ಗರ್ಭ ಗುಡಿ ದೊಡ್ಡದಾಗಿದೆ. ಮಧ್ಯದಲ್ಲಿ ದೊಡ್ಡ ಶಿವ ಲಿಂಗ, ಪೂಜೆ ನಡೆಯುವಾಗ ಅರ್ಚಕರು ನಮಗೆ ಅಡ್ಡಲಾಗಿ ನಿಲ್ಲುವುದಿಲ್ಲ. ಪಂಡಾಗಳ ಹಾವಳಿಯೂ ಇಲ್ಲಿಲ್ಲ.

ಸಂಜೆ 7.15 ಕ್ಕೆ ಆರತಿ. ಜನರೆಲ್ಲ ಭಕ್ತಿಯಿಂದ ಸೋಮನಾಥನ ಘೋಷ ಮಾಡುತಿದ್ದರು. ಮೊದಲಿಗೆ ಧೂಪಾರತಿ, ಮತ್ತೆ ಮುಖ್ಯ ಆರತಿ ನಡೆಯುತ್ತದೆ. ಅದಾದ ಮೇಲೆ ಜನರೆಲ್ಲಾ ಆರತಿ ಸ್ವೀಕರಿಸಿ ಹೊರ ಹೋದರು. ಈವಾಗ ದೇವರನ್ನು ಹತ್ತಿರದಲ್ಲೇ ನೋಡಬಹುದು. ಅಲಂಕಾರವನ್ನೆಲ್ಲಾ ತೆಗೆದು ಅಭಿಷೇಕ ಮಾಡುತ್ತಾರೆ. ನಾವು ಇದಕ್ಕಾಗಿಯೇ ಅಲ್ಲಿಯೇ ನಿಂತಿದ್ದೆವು. ಪರಿ ಪೂರ್ಣ ಜ್ಯೋತಿರ್ಲಿಂಗ ದರ್ಶನವಾಯಿತು. ದೇವರಿಗೆ ಅರ್ಚಿಸಿದ ಬಿಲ್ವ ಪತ್ರೆ ಹೂವುಗಳು ನಮಗೆ ದೊರಕಿದವು. ಮತ್ತೊಮ್ಮೆ ನಮಿಸಿ ಹೊರ ಬಂದೆವು. ಇಲ್ಲಿ ಹೊರ ಭಾಗದಲ್ಲಿ ಎತ್ತರವಾದ ಜಾಗದಲ್ಲಿ ಒಂದು ದೊಡ್ಡ ಟಿವಿ ಇರಿಸಿದ್ದಾರೆ.



 ಇದರಲ್ಲಿ ದೇವರಿಗೆ ನಡೆಯುವ ಎಲ್ಲಾ ಸೇವೆಗಳನ್ನೂ ಲೈವ್ ಆಗಿ ನೋಡಬಹುದು. ಇಲ್ಲಿ ರಾತ್ರಿ 8 ಘಂಟೆಗೆ ಲೈಟ್ ಶೋ ಇದೆ. ಇದನ್ನು ನೋಡಲು 50 ರೂ. ಟಿಕೆಟ್ ಕೊಂಡು ಅಲ್ಲಿಗೆ ಹೋದೆವು. ಒಳ ಪ್ರಾಂಗಣದ ಒಂದು ಪಕ್ಕದಲ್ಲಿ ಗ್ಯಾಲರಿ ನಿರ್ಮಿಸಿದ್ದಾರೆ. ಅಲ್ಲಿ ಕುಳಿತು ನಾವು ಇದನ್ನು ನೋಡಿದೆವು. ಬಹಳ ವಿಶೇಷವಾದ ಅನುಭವವನ್ನು ನೀಡುತ್ತದೆ, ಸಮುದ್ರದ ತಂಪಾದ ಗಾಳಿ, ಕತ್ತಲಲ್ಲಿ ಮಿನುಗುವ ನಕ್ಷತ್ರಗಳು ಎಲ್ಲವೂ ಈ ಶೋ ಗೆ ಒಳ್ಳೆಯ ಆಯಾಮವನ್ನು ಒದಗಿಸುತ್ತದೆ. ಇದ್ದಕ್ಕಿದ್ದಂತೆ ಸಿಡಿಲು ಮಿಂಚು ಬಿರುಗಾಳಿ, ಸಮುದ್ರದ ಭೋರ್ಗರೆತ ಎಲ್ಲಾ ಬಂತು. ಇದೇನಪ್ಪಾ ಮಳೆ ಬರುತ್ತದೋ ಎಂದುಕೊಂಡೆವು. ಅಷ್ಟರಲ್ಲಿ ಗಂಭೀರ ದ್ವನಿ ಕಡಲ ಕಡೆಯಿಂದ ಕೇಳಿಬಂತು. ‘ ನಾನು ಸಮುದ್ರ ರಾಜ ‘ ಎಂದು ಹೇಳಿ ಚಂದ್ರನಿಂದ ಸ್ಥಾಪನೆಗೊಂಡು ಈವರೆಗಿನ ಏಳು-ಬೀಳುಗಳನ್ನೆಲ್ಲಾ ಬಹಳ ಪರಿಣಾಮಕಾರಿಯಾಗಿ ವಿವರಿಸುತ್ತಾನೆ. ಹಿಂದೆ ಇದ್ದ ವೈಭವ, ನಂತರ ಆಕ್ರಮಣಗಳು, ಆಕ್ರಮಣಕಾರರ ಅಟ್ಟಹಾಸ, ಕುದುರೆಗಳ ಕೆನೆತ, ಖಡ್ಗಗಳ ಖಣಿ ಖಣಿತ, ಜನರ ಆಕ್ರಂದನ ಚೀತ್ಕಾರ ಎಲ್ಲವೂ ಬೆಳಕು ದ್ವನಿಯ ಚಮತ್ಕಾರದಲ್ಲಿ ಬಹಳ ಪರಿಣಾಮಕಾರಿಯಾಗಿ ತೋರಿಸುತ್ತಾರೆ. ಇದನ್ನು ನೋಡದಿದ್ದರೆ ನಮಗೆ ಸೋಮನಾಥದ ಇತಿಹಾಸ ಮಹತ್ವ ತಿಳಿಯುವುದಿಲ್ಲ. ದೇವಾಲಯದ ಹೊರಮಂಟಪದಲ್ಲಿ ಒಂದುಕಡೆ ಹಳೆಯ ಸೋಮನಾಥದ ಅವಶೇಷಗಳ ಫೋಟೋ ಗ್ಯಾಲರಿ ಇದೆ. ಇವುಗಳನ್ನು ನೋಡುವಾಗ ಎಷ್ಟೊಂದು ಭರ್ಬರವಾಗಿ ಅದನ್ನು ದ್ವಂಸ ಮಾಡಿದ್ದರು ಎಂದು ತಿಳಿಯುತ್ತದೆ. ರಾತ್ರಿ ಒಳ್ಳೆಯ ಊಟ ಮಾಡಿ ರೂಮಿಗೆ ಬಂದು ಮಲಗಿದೆವು.

ಮರುದಿನ ಬೆಳಗ್ಗೆ 8 ಘಂಟೆಗೆ ಹೊರಡುವ ಸೋಮನಾಥ-ಪ್ರಭಾಸ ಧರ್ಶನ, ಮಿನಿ ಬಸ್ ನಲ್ಲಿ ಹೊರಟೆವು. ಈ ಬಸ್ ಸೋಮನಾಥ್ ಟ್ರಸ್ಟ್ ನ ವತಿಯಿಂದಲೇ ನಡೆಸಲ್ಪಡು ತ್ತಿದೆ. ನಮ್ಮ ಗೆಸ್ಟ್ ಹೌಸ್ ಗೆ 2 ಬಸ್ ನಿಗದಿಯಾಗಿದೆ. ಪೂರ್ತಿ ಯಾತ್ರೆಗೆ ತಲಾ 20ರೂ. ಮೊದಲು ನಮ್ಮನ್ನು ಶಾರದಾಪೀಠ, ಸೂರ್ಯ ಮಂದಿರ ನೋಡಲು ಇಳಿಸಿದರು.



 ಸೂರ್ಯ ಮಂದಿರವು ಹಳೆಯದಾದ ದೇವಾಲಯ, ಎತ್ತರವಾದ ಜಾಗದಲ್ಲಿತ್ತು. ಆದರೆ ಅದರ ಸುತ್ತೆಲ್ಲ ಮನೆಗಳು ಒತ್ತೊತ್ತಾಗಿ ಇದ್ದುದರಿಂದ ಅಷ್ಟು ಆಕರ್ಷಣೀಯವಾಗಿ ಕಾಣಲಿಲ್ಲ. ಶಾರದಾಪೀಠ ವು ಚೆನ್ನಾಗಿದೆ. ಮತ್ತೆ ಕೆಲವಾರು ಪುಟ್ಟ ದೇವಾಲಯಗಳನ್ನು ನೋಡಿದೆವು. ಆಮೇಲೆ ತ್ರಿವೇಣಿ ಘಾಟ್ ಗೆ ಬಂದೆವು.



ಇಲ್ಲಿ ಕಪಿಲಾ, ಹಿರಣ್ ಮತ್ತು ಸರಸ್ವತಿ ನದಿಗಳ ಸಂಗಮ. ಇಲ್ಲಿ ಸ್ನಾನ ಮಾಡಬಹುದು.ಇದು ಚೆನ್ನಾಗಿದೆ. ನಂತರ ನಾವು ಪರಶುರಾಮ ಮಂದಿರಕ್ಕೆ ಹೋದೆವು. ಇಲ್ಲಿ ಒಂದು ಪುಟ್ಟ ಮಂದಿರ, ಕೊಳ ಇದೆ. ಪ್ರಶಾಂತ ಜಾಗ.



 ನಮ್ಮನ್ನು ಇಲ್ಲಿಂದ ಕಾಮನಾಥ ಮಹಾದೇವ ದೇವಾಲಯಕ್ಕೆ ತಂದು ನಿಲ್ಲಿಸಿದರು.



 ಅದನ್ನು ನೋಡಿ, ನಾವು ಸಮುದ್ರ ಕಿನಾರೆಗೆ ಬಂದೆವು. ಅಲ್ಲಿ ಸಮುದ್ರದಲ್ಲೇ ಇರುವ 2 ಶಿವಲಿಂಗ ಕಾಣುತ್ತದೆ. ಇದರ ಮಹತ್ವ ಏನು ಎಂತ ಗೊತ್ತಾಗುವುದಿಲ್ಲ. ಆದರೆ ನಮ್ಮ ಗೈಡ್ ಹೇಳಿದಂತೆ ಬೇಡನೋಬ್ಬನು ಇಲ್ಲಿ ನಿಂತು ಬಾಣ ಬಿಡುವಾಗ ಅದು ಆಕಸ್ಮಿಕವಾಗಿ ಅಶ್ವತ್ಥ ಮರದಡಿಯಲ್ಲಿ ಯೋಗ ನಿದ್ರೆಯಲ್ಲಿರುವ ಶ್ರೀಕೃಷ್ಣನ ಕಾಲಿನ ಹೆಬ್ಬೆರಳಿಗೆ ತಾಗುತ್ತದೆ. ನಾವೂ ಅಲ್ಲಿರುವ ಲಿಂಗಗಳಿಗೆ ಬೊಗಸೆ ಬೊಗಸೆ ಸಮುದ್ರದ ನೀರಿನ ಅಭಿಷೇಕ ಮಾಡಿದೆವು. ಮತ್ತೆ ಮೇಲೆ ಬರುವಾಗ ಅಲ್ಲೂ ಒಂದು ಲಿಂಗ ಕಂಡಿತು. ನಂತರ ನಾವು ಬಾಲ್ಕಾ ತೀರ್ಥಕ್ಕೆ ಹೋದೆವು. ಇಲ್ಲಿ ಅಶ್ವತ್ಥ ವೃಕ್ಷದ ಕೆಳಗಡೆ ಯೋಗಾರೂಢನಾಗಿ ಮಲಗಿದ್ದ ಶ್ರಿಕೃಷ್ಣನ ಮರ್ಮಸ್ಥಾನವಾದ ಕಾಲಿನ ಹೆಬ್ಬೆರಳಿಗೆ ಬೇಡ ಹೂಡಿದ ಬಾಣ ತಗುಲಿತು. ಇಲ್ಲಿ ಶ್ರೀಕೃಷ್ಣನು ಮರಕ್ಕೆ ಒರಗಿಕೊಂಡು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ಅತೀ ಸುಂದರ ಮೂರ್ತಿ ಇದೆ. ಎದುರುಗಡೆ ಬೇಡನು ತಾನು ತಿಳಿಯದೇ ಮಾಡಿದ ತಪ್ಪಿಗಾಗಿ ಕ್ಷಮೆ ಯಾಚಿಸುತ್ತಿದ್ದಾನೆ. ಈ ನಿಮಿತ್ತಕ್ಕೂ ಒಂದು ಕಾರಣವಿದೆಯಂತೆ. ಹಿಂದೆ ಕೃಷ್ಣನ ಪ್ರೇರಣೆಯಿಂದ ಏಕಲವ್ಯನ ಕೈಯ ಹೆಬ್ಬೆರಳನ್ನು ದ್ರೋಣಾಚಾರ್ಯರು ಗುರುದಕ್ಷಿಣೆಯಾಗಿ ಪಡೆದು ಆತನನ್ನು ಮುಂದೆ ಬಾಣ ಬಿಡದ ಹಾಗೆ ಮಾಡಿದ್ದರು. ಮತ್ತೆ ಮುಂದಿನ ಜನ್ಮದಲ್ಲಿ ಎಕಲವ್ಯನೇ ಈ ಬೇಡನಾಗಿ ಸೇಡು ತೀರಿಸಿಕೊಂಡನು. ಹಾಗೆ ಬೆರಳಿಗೆ ಬೆರಳು ಎನ್ನುತ್ತಾರೆ. ಮುಂದಿನ ತಾಣ ದೇಹೋತ್ಸರ್ಗ. ಹೆಸರೇ ಹೇಳುವಂತೆ ಇಲ್ಲಿಯೇ ಬಲರಾಮ ತನ್ನ ಅವತಾರವನ್ನು ಮುಗಿಸಿ ನಾಗಲೋಕಕ್ಕೆ ಹಿಂತಿರುಗಿದನಂತೆ. ಇಲ್ಲಿ ಒಂದು ಪುಟ್ಟ ದೇವಾಲಯವಿದೆ ಅಲ್ಲಿ ಕೆಲವಾರು ಮೆಟ್ಟಿಲುಗಳನ್ನಿಳಿದು ಹೋದರೆ ಗುಹೆಯ ಒಂದು ಜಾಗವಿದೆ. ಅದರ ಭಿತ್ತಿಯಲ್ಲಿ ಆದಿಶೇಷನ ಮೂರ್ತಿ ರಚಿಸಿದ್ದಾರೆ.



 ಇಲ್ಲಿಂದಲೇ ಕೆಳಗೆ ಪಾತಾಳಕ್ಕೆ ದಾರಿಯೋ ಏನೋ? ಇಲ್ಲಿ ಗೀತಾ ಮಂದಿರವಿದೆ. ಶ್ರೀಕೃಷ್ಣನು ಅಲ್ಲಿಯೇ ಅವತಾರ ಸಮಾಪ್ತಿಗೊಳಿಸಿದನು ಎಂಬುದಕ್ಕೆ ಸೂಚಕವಾಗಿ ಆತನ ಅಮೃತ ಶಿಲೆಯ ಪಾದಗಳನ್ನು ಕಾಣಬಹುದು.






 ಎದುರುಗಡೆ ತ್ರಿವೇಣಿ ತೀರ್ಥವಿದೆ. ಇದನ್ನೆಲ್ಲಾ ನೋಡಿ ನನಗನ್ನಿಸಿದ್ದೇನೆಂದರೆ ಪ್ರಭಾಸ ಎಂಬುದೊಂದು ದುರಂತಮಯ ಜಾಗ. ಸಮಸ್ತ ಯಾದವರು ಹೊಡೆದಾಡಿ ಇಲ್ಲಿಯೇ ಸತ್ತರು ಬಲರಾಮನೂ ಕೃಷ್ಣನೂ ಇಲ್ಲಿಯೇ ನಮ್ಮ ಭೂಮಿ ಬಿಟ್ಟು ಹೋದರು. ತರುವಾಯ ಸೋಮನಾಥದ ಮೇಲೆ ಆಕ್ರಮಣಗಳ ಸರಮಾಲೆ. ಭಾವುಕ ಮನಸ್ಸಿಗೆ ಒಂಥರಾ ನೋವಾಗುತ್ತದೆ.

ನಮ್ಮನ್ನು ಮತ್ತೆ ಸೋಮನಾಥಕ್ಕೆ ತಂದು ಬಿಟ್ಟರು. ಊಟ ಮುಗಿಸಿ ವಿಶ್ರಾಂತಿ ಪಡೆದು ಮಗದೊಮ್ಮೆ ಸೋಮನಾಥ ದರ್ಶನಕ್ಕೆ ಹೋದೆವು. ಒಳಗಡೆ ಉದ್ಯಾನದಲ್ಲೇ ಕುಳಿತು ಮನತುಂಬ ದೇವಾಲಯದ ಸೊಬಗು, ಭವ್ಯತೆ ತುಂಬಿಕೊಂಡೆವು. ಇಲ್ಲಿ ನಮ್ಮ ಭೂಮಿಯ ಪ್ರತಿಕೃತಿ ಮಾಡಿ ಅದರಲ್ಲಿ ಒಂದು ಬಾಣವನ್ನು ರಚಿಸಿದ್ದಾರೆ. ಈ ಬಾಣವು ನೇರ ದಕ್ಷಿಣ ದ್ರುವವನ್ನು ತೋರಿಸುತ್ತದೆ. ನಮ್ಮ ಭಾರತ ದೇಶದಲ್ಲಿ ಈ ರೀತಿ ಯಾವುದೇ ಭೂಭಾಗವನ್ನು ಸ್ಪರ್ಶಿಸದೇ ನೇರ ದಕ್ಷಿಣ ದ್ರುವವನ್ನು ತಲುಪಬಹುದಾದ ಜಾಗ ಇದು. ದೇವರ ದರ್ಶನಕ್ಕೆ ಹೋದೆವು, ಇವತ್ತು ಸಹಾ ರಶ್ ಇರಲಿಲ್ಲ. ನಮ್ಮ ಅದೃಷ್ಟ. ನವಂಬರ್ ತಿಂಗಲ್ಲಿ ಮಾತ್ರ ರಶ್ ಕಡಿಮೆಯೆಂದು ಇಲ್ಲಿನ ಅರ್ಚಕರೊಬ್ಬರು ಹೇಳಿದರು. ಆರತಿ ಆಯಿತು.




ಆಮೇಲೆ ಪ್ರಸಾದಗಳನ್ನೂ ಪಡೆದುಕೊಂಡು ಮರಳಿದೆವು. ಬೆಳಗ್ಗೆ 6 ಘಂಟೆಗೆ ಹೊರಡುವ ಸೋಮನಾಥ-ಅಹಮದಾಬಾದ್ ರೈಲ್ ನಲ್ಲಿ ಅಹ್ಮದಾಬಾದ್ ಪ್ರಯಾಣ.