Monday, 25 July 2011

Trekking at Aavani


 ಆವಣಿಯ ಕುರಿತಾದ ಒಂದು ಲೇಖನವನ್ನು ಹಿಂದೆ ಬರೆದಿದ್ದೆ. ಅದರ ಕೊನೆಯಲ್ಲಿ ಇನ್ನೊಂದು ಸಲ ಈ ಬೆಟ್ಟದಲ್ಲಿ ಒಂದು ರಾತ್ರಿ ಕಳೆಯಬೇಕು ಎಂದು ನಿಶ್ಚಯಿಸಿದ್ದೆವು. ಮನಸಲ್ಲಿ ಅದೇ ಗುಂಗು. ನಮ್ಮ ಚಾರಣ ತಂಡದೊಂದಿಗೆ ಅದರ ಬಗ್ಗೆ ಹೇಳಿದಾಗ ಎಲ್ಲರೂ ತಯಾರು ಎಂದರು. ತಂಡಕ್ಕೆ ಹೊಸಬರೂ ಸೇರಿಕೊಂಡರು. ಒಟ್ಟು 15 ಜನರು 3 ಕಾರಿನಲ್ಲಿ ಹೋಗುವುದೆಂದಾಯಿತು. ಮೊನ್ನೆ ಜೂನ್ 18,19 ಶನಿವಾರ-ರವಿವಾರದಂದು ಎಲ್ಲಾ ತಯಾರಿಗಳೊಂದಿಗೆ ಹೊರಟೇ ಬಿಟ್ಟೆವು. ಕಸ್ತೂರಿ, ರವಿ, ಕಿರಣ, ಶ್ರುತಿ ಮತ್ತು ನಾನು ಒಂದು ಕಾರಿನಲ್ಲಾದರೆ ವಿಶು, ಪಲ್ಲವಿ, ವೀಣಾ, ಆಚಾರ್ ಭಾವ ಮತ್ತು ಅಶ್ವಿನ್ ಇನ್ನೊಂದರಲ್ಲಿ. ಮುರಳಿ, ಯಮುನಾ, ನಾಗಪ್ಪಯ್ಯ, ನಿಶಾ ಹಾಗೂ ಅರವಿಂದ ಮತ್ತೊಂದು ಕಾರಲ್ಲಿ ಬಂದು ಕೆ.ಅರ್.ಪುರಂನಲ್ಲಿ ನಮ್ಮನ್ನು ಕೂಡಿಕೊಂಡರು. ಅಲ್ಲಿಂದ ಮುಂದೆ ನಮ್ಮ ಗಮ್ಯ ಕೈವಾರಕ್ಕೆ. ಕುಷಿಯಿಂದ ಮಾತಾಡುತ್ತಾ ಸಾಗುತಿದ್ದಂತೆ ಕೈವಾರಕ್ಕೆ ಬೆಳಗ್ಗೆ 10 ಘಂಟೆಗೆ ತಲುಪಿದೆವು.


ಮೊದಲಿಗೆ ಕೈವಾರ ತಾತಯ್ಯನವರ ಮಂದಿರ ನೋಡಿದೆವು. ಬಹಳ ಸುಂದರ ಪ್ರಶಾಂತ ಪರಿಸರ. ನಂತರ ಹತ್ತಿರವೇ ಇರುವ ಅಮರನಾರಾಯಣ ದೇವಾಲಯ ಮತ್ತು  ಭೀಮೇಶ್ವರ ದೇಗುಲಕ್ಕೆ ಹೋದೆವು. 

 ದರ್ಶನವಾದಮೇಲೆ ಯೋಗಿ ನಾರೇಯಣರ ಗುಹೆ ನೋಡಲು ಹೋದೆವು. ಹೊಲ ಬೆಟ್ಟಗಳ ಮಧ್ಯೆ ಇರುವ ಮಾರ್ಗದಲ್ಲಿ ನಡೆದೇ ಹೋದೆವು. ಅಕ್ಕ ಪಕ್ಕದ ಹೊಲಗಳಲ್ಲಿ ಟೊಮೆಟೋ ಮತ್ತು ಅವರೆಕಾಯಿ ಬೆಳೆದಿದ್ದರು. ನಾವೂ ಸ್ವಲ್ಪ ಕಿತ್ತು ತಿಂದೆವು.


ಗುಹೆ ಮತ್ತು ಇತರ ಮಂದಿರಗಳನ್ನು ನೋಡಿಕೊಂಡು ಕೈವಾರಕ್ಕೆ ಬಂದು ಪ್ರಸಾದ ಭೋಜನ ಮಾಡಿದೆವು. ಬಹಳ ಆದರದಿಂದ ನಮಗೆ ಊಟ ಬಡಿಸಿದ್ದರು. ಬಹಳ ಚೆನ್ನಾಗಿತ್ತು ಊಟ. ಅಲ್ಲಿಂದ ಮಧ್ಯಾಹ್ನ 2 ಘಂಟೆಗೆ ಆವಣಿಯತ್ತ ಪಯಣ. ಕೈವಾರದಿಂದ H  ಕ್ರಾಸ್ ಗೆ ಬಂದು ಅಲ್ಲಿಂದ ಕೋಲಾರ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಮುಳಬಾಗಿಲಿಗೆ 10 ಕಿ.ಮೀ ಮೊದಲೇ ಬಲಕ್ಕೆ ತಿರುಗಿ 12 ಕಿ.ಮೀ. ಹೋದರೆ ಆವಣಿ ತಲುಪುತ್ತೇವೆ. ರಸ್ತೆ ಚೆನ್ನಾಗಿದೆ. 


 ದೂರದಿದಲೇ ಆವಣಿ ಬೆಟ್ಟ ನಮ್ಮನ್ನು ಕೈ ಬೀಸಿ ಕರೆಯುತಿತ್ತು. ಬೆಟ್ಟದ ಬುಡಕ್ಕೆ ತಲಪುವಾಗ ಸಾಯಂಕಾಲ 4 ಘಂಟೆ. ಪಕ್ಕದಲ್ಲೇ ಇರುವ ಮನೆಯಯವರೊಡನೆ ವಿಜ್ನಾಪಿಸಿಕೊಂಡು ನಮ್ಮ ಮೂರೂ ಕಾರುಗಳನ್ನು ಅವರ ಸುಪರ್ದಿಯಲ್ಲಿ ಬಿಟ್ಟೆವು. ನೀವೇನೂ ಯೋಚನೆ ಮಾಡಬೇಡಿ ಕಾರನ್ನು ಜಾಗ್ರತೆಯಾಗಿ ನೋಡಿಕೊಳ್ಳುತ್ತೇವೆ ಎಂಬ ಆಶ್ವಾಸನೆ ದೊರಕಿತು. ಸಂತೋಷವಾಗಿ ಹೋಗಿಬನ್ನಿ ಎಂದು ಹಾರೈಸಿದರು.

ನಮ್ಮ ಸರಕು ಸರಂಜಾಮುಗಳನ್ನು ಹೊತ್ತುಕೊಂಡು ಬೆಟ್ಟ ಏರಲು ಆರಂಬಿಸಿದೆವು. ಎಲ್ಲರ ಕೈಯಲ್ಲೂ ನೀರಿನ ಬಾಟಲಿಗಳು. ಯಾಕೆಂದರೆ ಮೇಲೆ ಕುಡಿಯುವ ನೀರು ಸಿಗುವುದಿಲ್ಲ. ಅಲ್ಲಲ್ಲಿ ನಿಂತು ದಣಿವಾರಿಸುತ್ತಾ ಮೇಲೇರಿದೆವು.






ಅರವಿಂದ, ನಿಶಾ ಮತ್ತು  ಶ್ರುತಿಯರನ್ನು ಕಿಚಾಯಿಸುತ್ತಲೇ ಇದ್ದ. ನಮ್ಮನ್ನು ಹಿಂಬಾಲಿಸುತ್ತಾ ಒಂದು ನಾಯಿ ಬರುತ್ತಾ ಇತ್ತು. ಶ್ರುತಿ ಮತ್ತು ನಿಶಾ ಅದರೊಡನೆ ಗೆಳೆತನವನ್ನೂ ಮಾಡಿಬಿಟ್ಟಿದ್ದರು. ಎಷ್ಟು ಹೇಳಿದರೂ ಅದು ಹಿಂದಕ್ಕೆ ಹೋಗಲೇ ಇಲ್ಲ. ಸರಿ, ಬಂದರೆ ಬರುತ್ತದೆ, ಅದಕ್ಕೆ ಬೋರ್ ಆದಾಗ ವಾಪಸು ಹೋಗಬಹುದು ಎಂದಿದ್ದೆವು. ಇಲ್ಲ ಅದು ಇವತ್ತು ನಮ್ಮನ್ನು ಮೇಲಿನವರೆಗೆ ತಲುಪಿಸಿಯೇ ಸಿದ್ಧ ಎಂಬಂತಿತ್ತು. ಈ ರೀತಿ ನಾಯಿ ಮನುಷ್ಯರನ್ನು ಹಿಂಬಾಲಿಸುವುದು ಮಹಾಭಾರತ ಕಾಲದಲ್ಲೇ ಇತ್ತು. ಪಾಂಡವರ ಸ್ವರ್ಗಾರೋಹಣ ಕಾಲದಲ್ಲಿ ಅವರನ್ನು ನಾಯಿಯೊಂದು ಹಿಂಬಾಲಿಸಿತ್ತು ಎಂದು ತಿಳಿದಿದೆ.  ಅದೇ ಒಂದು ಚಟವಾಗಿ ಮುಂದೆ ಅನುವಂಶಿಕವಾಗಿ ನಾಯಿಗಳಿಗೆ ಬಂದಿರಬೇಕು!  ಈಗಾಗಲೇ ಅದಕ್ಕೆ ಜಿಮ್ಮಿ ಎಂಬ ನಾಮಕರಣವೂ ಆಗಿತ್ತು. ಬಾಲ ಅಲ್ಲಾಡಿಸುತ್ತಾ ನಮ್ಮ ಹಿಂದೆ ಮುಂದೆ ಅಡ್ಡಾಡುತಿತ್ತು. ಎರಡು ನೀರಿನ ಬಾಟಲಿಗಳನ್ನು ಅದರ ಕತ್ತಿಗೆ ನೇತು ಹಾಕಿದರೆ ನಮ್ಮ ಭಾರ ಸ್ವಲ್ಪ ಕಮ್ಮಿ ಆಗಬಹುದೇನೋ ಎಂಬ ಯೋಚನೆ ಬಂದಿತ್ತು.


ಬೆಟ್ಟದ ಒಂದು ಮಜಲನ್ನು ತಲುಪಿದೆವು. ಅಲ್ಲಿ ದೊಡ್ಡದೊಂದು ಬಂಡೆ ಮುಂದೆ ಚಾಚಿಕೊಂಡಿತ್ತು. ಅಲ್ಲಿ ಸ್ವಲ್ಪ ಕುಳಿತೆವು. ಎದುರುಗಡೆ ಒಂದರ ಮೇಲೆ ಒಂದು ಪೇರಿಸಿಟ್ಟ ಬಂಡೆಗಳು. ತುತ್ತ ತುದಿಯಲ್ಲ್ಲಿ ಚೌಕಾಕಾರದ ಒಂದು ಬಂಡೆ. ಇದನ್ನು ನಾವು ಸೀತಾ ದೇವಿಯ ಸಾಬೂನು! ಎಂದು ಕರೆದೆವು.


ಮುಂದೆ ಸ್ವಲ್ಪ ವಿಶಾಲ ಜಾಗ, ಅಲ್ಲೇ ವಾಲ್ಮೀಕಿ ಆಶ್ರಮವಿದೆ. ಲವ-ಕುಶರ ಜನ್ಮ ಇಲ್ಲೇ ಆಯಿತಂತೆ.' ವಾಲ್ಮೀಕಿ ಮೆಟರ್ನಿಟಿ ಹೋಂ ' ಎಂದೆ ನಾನು. ಪಕ್ಕದಲ್ಲೇ ಪಾಂಡವರು ಪ್ರತಿಷ್ಟಿಸಿದ ಪಂಚಲಿಂಗಗಳ ಗುಡಿ. ಒಳಗೆ ಹೋಗಿ ಅಲ್ಲಿ ಸ್ವಲ್ಪ ಸ್ವಚ್ಛ ಮಾಡಿ ಒಂದು ಬಾಟಲಿ ನೀರಿನಿಂದ ರುದ್ರಾಭಿಷೇಕ ಮಾಡಿದೆವು. ಇಲ್ಲಿ ಶಿವನಿಗೆ ನಮ್ಮಂತಹ ಯಾತ್ರಿಕರಿಂದಲೇ ಪೂಜೆ ಅಷ್ಟೇ.



ಮುಂದೆ ಒಂದು ಬಾಗಿಲುವಾಡವಿತ್ತು. ಅಲ್ಲಿ ತಂಪಾದ ಗಾಳಿ ಬೀಸುತಿತ್ತು. ಮುಂದೆ ಏಕಾಂತ ರಾಮೇಶ್ವರನ ಗುಡಿ. ಅಲ್ಲಿಂದ ಮುಂದೆ ಸ್ವಲ್ಪ ಏರಿದಾಗ ಲಕ್ಷ್ಮಣ ತೀರ್ಥ ಸಿಗುತ್ತದೆ. ಇದನ್ನು ಧನುಷ್ಕೋಟಿ  ಎನ್ನುತ್ತಾರೆ. ಪಕ್ಕದಲ್ಲೇ ದೊಡ್ಡ ಗುಂಡಗಾದ ಬಂಡೆ ಇದೆ. ಅಲ್ಲಿ ಕುಳಿತು ನಾವು ಗಂಟು ಬಿಚ್ಚಿದೆವು.




ಎಲ್ಲರೂ ಸೇರಿ ಉತ್ಸಾಹದಿಂದ ಭೇಲ್ ಪುರಿ ಮಾಡಿ ತಿಂದೆವು. ಪ್ರಥಮ ಬಾರಿಗೆ ಚಾರಣ ಬಂದವರಿಗೆ ಇದನ್ನು ಮಾಡುವ ಅವಕಾಶ ದೊರೆಯಿತು. ಬಹಳ ರುಚಿಕರವಾಗಿತ್ತು. ಜೊತೆಗೆ ಕುಡಿಯಲು ಫಾಂಟ ಸಹಾ ಇತ್ತು. ಆಯಾಸವೆಲ್ಲಾ ಮಾಯ!




ಮುಂದೆ ಹೋದಂತೆ ಒಂದು ದೊಡ್ಡ ಕೊಳ ಇದೆ, ನೀರು ಮಾತ್ರ ಪಾಚಿಕಟ್ಟಿಕೊಂಡು ಹಸಿರು ಕಾರ್ಪೆಟ್ ನಂತೆ ತೋರುತಿತ್ತು. ಮಳೆ ಬಂದು ನೀರು ತುಂಬಿದರೆ ಈಜು, ಡೈವ್ ಹೊಡೆಯಬಹುದಿತ್ತು. ಎಂದು ಈಜು ಬಾರದ, ಅರವಿಂದ ಸಲಹೆ ನೀಡಿದ. ಮುಂದುವರಿದಂತೆ ಏರು ಶುರುವಾಗುತ್ತದೆ. ಮೆಟ್ಟಿಲುಗಳನ್ನು ಮಾಡಿದ್ದಾರೆ.



ಅದರಲ್ಲಿ ಏರುತ್ತಾ ಅಂತೂ ನಮ್ಮ ಗಮ್ಯ ಸ್ಥಾನವಾದ ಸೀತಾ ಪಾರ್ವತಿ ದೇವಾಲಯವನ್ನು ತಲುಪಿದೆವು. ಎಲ್ಲರಿಗೂ ಬಹಳ ಸುಸ್ತಾಗಿದ್ದರೂ ಅಲ್ಲಿ ಭರ್ರನೆ ಬೀಸುವ ಗಾಳಿಯಿಂದಾಗಿ ಉಲ್ಲಾಸವಾಯಿತು.



ಮೊದಲು ಒಂದು ಚಹಾ ಬೇಕು ಎಂದು ನಾಗಪ್ಪಯ್ಯ ಭಾವನ ಬೇಡಿಕೆ. ಕೂಡಲೇ ಚಹಾ ಪ್ರವೀಣ ಮುರಳಿ ಕಾರ್ಯೋನ್ಮುಖನಾದ. ನಮ್ಮ ಗ್ಯಾಸ್ ಸ್ಟೋವ್ ಹೊರಬಂತು. ಆದರೆ ಅದನ್ನು ಉರಿಸಲು ಗಾಳಿ,ಬಿಡಲಿಲ್ಲ. ಎಲ್ಲಿಯಾದರೂ ಗಾಳಿಯಿಂದ ರಕ್ಷಣೆಯಿರುವ ಜಾಗವಿದೆಯೋ ಎಂದು ಅಶ್ವಿನ್ ಮತ್ತು ಆಚಾರ್ ಭಾವ ಹುಡುಕಾಡಿದರು. ಕೊನೆಗೆ ದೇವಾಲಯದ ಒಂದು ಪಕ್ಕದಲ್ಲಿ ನೀರು ತುಂಬಿಸಲು ಕಟ್ಟಿರುವ ಸಿಮೆಂಟ್ ಟ್ಯಾಂಕ್ ಕಂಡಿತು. ಅದರೊಳಗೆ ಗ್ಯಾಸ್ ಸ್ಟೋವ್ ಇರಿಸಿದರೆ ಏನೂ ತೊಂದರೆ ಬರಲಾರದು ಎಂದು, ಅದೇ ನಮ್ಮ ಇಂದಿನ ಅಡಿಗೆ ಮನೆ ಎಂದು ನಿಶ್ಚಯಿಸಿದೆವು.



ಸ್ವಲ್ಪಹೊತ್ತಲ್ಲಿ ಚಹಾ ತಯಾರಾಯಿತು. ಸಕ್ಕರೆ ಜಾಸ್ತಿ ಹಾಕಿದ್ದು, ಕಮ್ಮಿ ಹಾಕಿದ್ದು, ಸಕ್ಕರೆ ಇಲ್ಲದ್ದು ಎಂದು ವೆರೈಟಿ ಚಹಾ ಎಲ್ಲರೂ  ಕುಡಿದದ್ದಾಯಿತು. ಜೊತೆಗೆ ಶ್ರುತಿ, ಪಲ್ಲವಿಯಿಂದ ಬಿಸ್ಕತ್ತು ಹಂಚಿಕೆ.
ಅಷ್ಟರಲ್ಲೇ ರಾಮ ಬಂಟನಾದ ಕೋತಿಯೊಂದು ಕುತೂಹಲದಿಂದ ಬಂತು. ಕೂಡಲೇ ಜಿಮ್ಮಿ ಅದನ್ನು ದೂರ ಓಡಿಸಿತು. ನಾಯಿಯಿದ್ದದ್ದು ಸಾರ್ಥಕವಾಯಿತು. ಆ ಮೇಲೆ ಇನ್ನೂ 3-4 ಕೋತಿಗಳು ಬಂದವಾದರೂ ಜಿಮ್ಮಿ ಅವುಗಳನ್ನು ಹತ್ತಿರ ಬರಗೊಡಲಿಲ್ಲ. ದೇವಾಲಯದ ಎದುರುಗಡೆ ಸುಮಾರು 50/30 ಅಡಿಗಳಷ್ಟು ವಿಶಾಲ ಜಾಗ, ಅದಕ್ಕೆ ಸಿಮೆಂಟ್ ಹಾಕಿದ್ದಾರೆ. ಸುತ್ತಲೂ ಕಬ್ಬಿಣದ ಪೈಪ್ ನಿಂದ ಆವರಣ ಮಾಡಿದ್ದಾರೆ. ಅಲ್ಲಿಂದ ಕೆಳಗಡೆ ಸ್ವಲ್ಪ ಪ್ರಪಾತ. ಸುತ್ತಲಿನ ಹಳ್ಳಿಗಳು, ಹೊಲ ಗದ್ದೆಗಳು ದೂರದ ಬೆಟ್ಟಗಳೆಲ್ಲಾ ಸುಂದರವಾಗಿ ಕಾಣುತ್ತದೆ.



ಹಿಂದುಗಡೆ ಅಲ್ಲಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಜಾಗ. ನಾವು ಅಲ್ಲೆಲ್ಲ ಸುತ್ತಾಡಿದೆವು. ಅಲ್ಲಿ ಬೆಟ್ಟದ ಅಂಚಿನಲ್ಲಿ ದೊಡ್ಡ ಗೊಳಾಕೃತಿಯ ಹೆಬ್ಬಂಡೆ. ಅದಕ್ಕೆ ಉರುಳು ಬಂಡೆ ಎಂದು ಹೆಸರು. ವಿಶೇಷವೆಂದರೆ ಅದರ ಕೆಳಗಡೆ ಸುಮಾರು 2 ಅಡಿಗಳಷ್ಟು ಎತ್ತರದ ಸಂದಿಯಿದೆ. ಇದರಲ್ಲಿ ಅಂಗಾತ ಮಲಗಿಕೊಂಡು ನಿಧಾನವಾಗಿ ಉರುಳುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆ ಬರಬಹುದು. ಕಡಿಮೆಯೆಂದರೂ 20 ಉರುಳನ್ನು ಹಾಕಬೇಕಾಗುತ್ತದೆ. ಮನಸಲ್ಲಿ ಏನಾದರೂ ನೆನೆದು ಈ ರೀತಿ ಉರುಳುಸೇವೆ ಮಾಡಿದರೆ ಅದು ನೆರವೇರುತ್ತದಂತೆ. ಮೊದಲಿಗೆ ಅರವಿಂದ ಮತ್ತು ನನ್ನ ಸರದಿ. ಆಮೇಲೆ ನಮ್ಮ ಹೆಚ್ಚಿನವರು ಉರುಳುಸೇವೆ ಮಾಡಿದರು. ಕಿರಣನಿಗೆ ಒಂದು ಸಲ ಸಾಕಾಗಲಿಲ್ಲ. 3 ಸಲ ಉರುಳಿದಳು. ಬೇಡವೆಂದು ಹೇಳುತಿದ್ದ ಆಚಾರ್ ಭಾವ, ನಾಗಪ್ಪಯ್ಯ, ಯಮುನಾ ಮತ್ತು ರವಿ ಸಹಾ ಉರುಳಿದರು.  ಅಲ್ಲಿಗೂ ಬಂದಿದ್ದ ಕೋತಿಗಳು ನಾವೇನು ಮಾಡುತ್ತಿದ್ದೆವು ಎಂತ ಕುತೂಹಲದಿಂದ ನೋಡುತ್ತಿದ್ದವು. ಪಲ್ಲವಿ ವೀಡಿಯೊ ರೆಕಾರ್ಡ್ ಮಾಡುತಿದ್ದಳು. ಕತ್ತಲಾಗುತ್ತಾ ಬಂತು. ಸೂರ್ಯ ಮುಳುಗಿದ. ನಾವೂ ದೇವಾಲಯದತ್ತ ಹಿಂತಿರುಗಿದೆವು. ನಮ್ಮ ಸರಕುಗಳನ್ನು ಕೋತಿಗಳಿಂದ ರಕ್ಷಿಸಲು ವಿಶು ಮತ್ತು ಅಶ್ವಿನ್, ಜಿಮ್ಮಿಯ ಜೊತೆಯಲ್ಲಿ ಕಾವಲಿದ್ದರು.
ಇನ್ನು ರಾತ್ರಿಯ ಊಟವಾಗಬೇಕಲ್ಲಾ, ಅದರ ತಯಾರಿಗೆ ತೊಡಗಿದೆವು. ಇದರಲ್ಲಿ ನಮ್ಮ ಹೆಂಗಸರ ಪಾಲಿಲ್ಲ. ನಾವೇ ಎಲ್ಲಾ ಮಾಡುತ್ತೇವೆ, ನಮ್ಮ ಸಿಕ್ರೆಟ್ ರೆಸಿಪಿ ಇದೆ ಎಂದು ಅವರನ್ನು ದೂರವಿರಿಸಿದೆವು. ನಾನು, ಮುರಳಿ, ಅಶ್ವಿನ್ ಮತ್ತು ಅರವಿಂದ ಇದರ ಮುಖ್ಯ ಅಡಿಗೆಯವರು.



ಮೊದಲು ಬೀನ್ಸ್, ಟೊಮೆಟೋ, ಈರುಳ್ಳಿ ಧಾರಾಳ ಕೊಚ್ಚಿದೆವು. ಜೊತೆಗೆ ಮೆಣಸಿನಕಾಯಿ, ತೆಂಗಿನ ತುರಿ, ಗರಂ ಮಸಾಲ, ಅರಸಿನ ಪುಡಿ, ಪುಳಿಯೋಗರೆ ಪುಡಿ, ಬೆಲ್ಲ, ಉಪ್ಪು, ಸ್ವಲ್ಪ ಎಣ್ಣೆ ಮತ್ತು ಕಾಳು ಮೆಣಸು ಕುಟ್ಟಿ ಪುಡಿಮಾಡಿ ಪಾತ್ರೆಗೆ ನೀರು ಹಾಕಿ ಬೇಯಲು ಬಿಟ್ಟೆವು. ನಂತರ ಅದಕ್ಕೆ ಅಕ್ಕಿ ಹಾಕಿ ಬೇಯಿಸಿದೆವು. 15 ಜನರೂ ಮತ್ತು ಜಿಮ್ಮಿಗೆ ಬೇಕಾಗುವಷ್ಟು ಹುಗ್ಗಿ ಆಗಬೇಕಲ್ಲಾ. ಅದು ಬೇಯಲು ಸುಮಾರು ಹೊತ್ತು ಬೇಕಾಯಿತು.
ಅಷ್ಟರಲ್ಲಿ ಶ್ರುತಿಗೆ ಕ್ಯಾಂಪ್ ಫಯರ್ ಬೇಕೇ ಬೇಕು ಎಂಬ ಒತ್ತಾಸೆ. ಅಲ್ಲಿನ ಅಷ್ಟು ರಭಸದ ಗಾಳಿಗೆ ಹೇಗೆ ಬೆಂಕಿ ಹಚ್ಚುವುದು ಎಂಬ ಚಿಂತೆ ಎಲ್ಲರಿಗೂ. ನೋಡೋಣ ಎಲ್ಲಾದರೂ ಗಾಳಿ ಕಡಿಮೆಯಿರುವ ಜಾಗವಿದೆಯೋ ಎಂದು ನಾವೆಲ್ಲಾ ಟಾರ್ಚ್ ಹಿಡಿದು ಸರ್ವೆ ಮಾಡಿದೆವು. ಅದೃಷ್ಟಕ್ಕೆ ಬಂಡೆಯ ಹಿಂಭಾಗದಲ್ಲಿ ಆಯಕಟ್ಟಿನ ಒಂದು ಜಾಗ ಸಿಕ್ಕಿತು. ಅಲ್ಲಿ ಎಲ್ಲರಿಗೂ ಕುಳಿತುಕೊಳ್ಳಲು ಬಯಲು ರಂಗಮಂದಿರದಂತಿರುವ ಜಾಗ ಸಿಕ್ಕಿತು.



ಅಲ್ಲಿ ಒಣ ಟೊಂಗೆಗಳು ದೊರೆತವು. ಸುತ್ತಲೂ, ಹಿಂದೆ ಜಾತ್ರೆ ಸಮಯದಲ್ಲಿ ಒಡೆದ ತೆಂಗಿನಕಾಯಿಯ ಚಿಪ್ಪುಗಳ ಚೂರುಗಳು ಧಾರಾಳವಾಗಿ ಹರಡಿದ್ದವು. ಕಸ್ತೂರಿ, ವೀಣನ ನೇತೃತ್ವದಲ್ಲಿ ಶ್ರುತಿ, ನಿಶಾ ಎಲ್ಲರೂ ಸೇರಿ ಅವುಗಳನ್ನು ಓಟ್ಟು ಮಾಡಿ ತಂದರು. ಮೊದಲಿಗೆ ಬೆಂಕಿ ಹಚ್ಚಲು ಕಷ್ಟವಾಯಿತಾದರೂ ಆಮೇಲೆ ವಿಜಯಿಯಾದೆವು. ಸಣ್ಣ ಉರಿ ಕ್ರಮೇಣ ದೊಡ್ಡದಾಯಿತು. ಮುರಳಿಯೂ ಉತ್ಸಾಹದಿಂದ ಮಂತ್ರ ಹೇಳುತ್ತಾ ಹೋಮ ಮಾಡಿದ.



ಸುತ್ತಲೂ ಕತ್ತಲೆ, ಚಳಿಗಾಳಿ, ಬೆಟ್ಟದ ಮೇಲೆ ನಾವು ಮಾತ್ರ. ದೂರದಲ್ಲಿ  ಕೆಳಗಿನ ಊರಿನ ದೀಪಗಳ ಬೆಳಕು, ಆಗಸದಲ್ಲಿ ಮಿನುಗುವ ನಕ್ಷತ್ರಗಳು, ಆಗತಾನೆ ಮೂಡಿ ಬಂದ ಚಂದಿರ! ವಾಹ್ ಇದೇ ಮಜಾ! ನಾವು ಎಷ್ಟು ಹಣ ಕೊಟ್ಟರೂ ಸಿಟಿಯಲ್ಲಿ ಸಿಗದ ಆನಂದ ಇಲ್ಲಿ ನಮಗೆ ದೊರೆಯಿತು. ಅಷ್ಟರಲ್ಲಿ ಊಟ ರೆಡಿ ಎಂದು ಅಶ್ವಿನ್ ಎಲ್ಲರನ್ನೂ ಬರಹೇಳಿದ.



 ಉರಿಯುತಿದ್ದ ಬೆಂಕಿಯನ್ನು ನೀರು ಚಿಮುಕಿಸಿ ಆರಿಸಿದೆವು. ಎಲ್ಲರೂ ದೇವಾಲಯಕ್ಕೆ ಬಂದು ಕುಳಿತೆವು. ಎದುರುಗಡೆ ಒಂದು ವಿದ್ಯುತ್ ಕಂಭದಲ್ಲಿ ಒಂದು ಬಲ್ಬ್ ಜೋಕಾಲಿಯಾಡುತಿತ್ತು. ಗಾಳಿಗೆ ಒಮ್ಮೊಮ್ಮೆ ಉರಿದು ನಂದಿ ಹೋಗುತಿತ್ತು. ಈ ಕಣ್ಣ ಮುಚ್ಚಾಲೆ ನೋಡಿ-ನೋಡಿ ಸಾಕಾದ ಮುರಳಿ ಅದರ ಸ್ಟೇ ವೈರ್ ನ್ನು ಜೋರಾಗಿ ಅಲುಗಾಡಿಸಿದ, ತಗೋ, ಬಲ್ಬ್ ಉರಿಯಿತು! ಇದರಲ್ಲೆಲ್ಲಾ ಅವನಿಗೆ ಸಾಕಷ್ಟು ಅನುಭವವಿತ್ತು, ಹೇಗೆಂದರೆ ಊರಲ್ಲಿ ಅವರ ಮನೆ ಇರುವುದು ಹಳ್ಳಿಯಲ್ಲಿ, ಅಲ್ಲಿ ಕರೆಂಟ್ ಲೂಸ್ ಕನೆಕ್ಷನ್ ಆದಾಗ ಇದೆ ರೀತಿ ಮಾಡುತಿದ್ದರು. ಇಲಾಖೆಯವರು ಅಲ್ಲಿಗೆ ಬರುವುದು ಬಹಳ ತಡವಾಗಿ.  ಪೇಪರ್ ಪ್ಲೇಟಿನಲ್ಲಿ ಎಲ್ಲರಿಗೂ ಬಡಿಸಲಾಯಿತು. ಒಂದು ದೊಡ್ಡ ತಪ್ಪಲೆ ತುಂಬಾ ಹುಗ್ಗಿ ತುಂಬಿತ್ತು. ಎಲ್ಲರೂ ಹೊಟ್ಟೆ ತುಂಬಾ ಉಂಡರು. ಬಹಳ ರುಚಿಯಾಗಿದೆ ಎಂದು ಎಲ್ಲರೂ ಹೊಗಳಿದರು. ನಮ್ಮ ರೆಸಿಪಿಯನ್ನು ಹೆಂಗಸರೆಲ್ಲಾ ಕೇಳಿ ತಿಳಕೊಂಡರು. ಅಂದು ಜಿಮ್ಮಿಗೆ ಸಹಾ ಹೊಟ್ಟೆ ತುಂಬಾ ಊಟ ಸಿಕ್ಕಿತು. ಅದು ಸಹಾ ನೆಕ್ಕಿ ನೆಕ್ಕಿ ತಿಂದದ್ದು ನೋಡಿ ನಿಜಕ್ಕೂ ಊಟ ಚೆನ್ನಾಗಿಯೇ ಇತ್ತು ಎಂಬುದಕ್ಕೆ ಮೂಕ ಸಾಕ್ಷಿ! ಅಷ್ಟರಲ್ಲಿ ವಿದ್ಯುತ್ ಕೈ ಕೊಟ್ಟಿತೆಂದು ಕಾಣುತ್ತದೆ. ಲೈಟ್ ನಂದಿ ಹೋಯಿತು. ಇನ್ನೇನು? ನಮ್ಮ ಎಮರ್ ಜೆನ್ಸಿ ಲ್ಯಾಂಪ್ ಉರಿಸಿದೆವು. " ಇನ್ನು  ಎಲ್ಲೂ ಹೋಗಿಬಿಡಬೇಡ ಇಲ್ಲೇ ಇರು ಬೆಳಗ್ಗೆ ಅವಲಕ್ಕಿ ಇದೆ '' ಎಂದು ಜಿಮ್ಮಿಗೆ ಹೇಳಿದೆ. ಅದಕ್ಕೊಪ್ಪಿ ಅದು ಬೆಳಗಿನವರೆಗೆ  ನಮ್ಮ ಕಾಲ ಬುಡದಲ್ಲೇ ಮುದುಡಿಕೊಂಡಿತ್ತು. ಇನ್ನು ಮಲಗುವ ತಯಾರಿ, ಬೆಡ್ ಶೀಟ್, ಹೊದಿಕೆಗಳು ಹೊರ ಬಂದಿತು. ಸ್ವೆಟರ್, ಜಾಕೆಟ್ ಗಳನ್ನು ಧರಿಸಿಕೊಂಡೆವು. ಮಂಕಿ ಕ್ಯಾಪ್, ಸ್ಕಾರ್ಫ್ ಸಹಾ ಉಪಯೋಗಕ್ಕೆ ಬಂತು.


ಆದರೂ ಚಳಿ ಆಗುತಿತ್ತು. ನಾವೆಲ್ಲಾ ಓಟ್ಟು ಸೇರಿ ರಾತ್ರಿ ತುಂಬಾ ಹೊತ್ತು ಮಜವಾಗಿ ಹರಟುತಿದ್ದೆವು. ಬಿಸಿ ಬಿಸಿ ಚಹಾ ಬಂತು.
ಇಷ್ಟರಲ್ಲಿ ಮುರಳಿ ಮತ್ತು ಕೆಲವರು ಕೆಳಗಡೆ ಹೋಗಿ ಬಂದರು. ತಿಂಗಳ ಬೆಳಕು ಈಗ ಎಲ್ಲಾ ಕಡೆ ಹರಡಿ ಒಂಥರಾ ಸುಂದರ ರಮ್ಯ ವಾತಾವರಣ ಸೃಷ್ಟಿಸಿತ್ತು.



ಯಾವಾಗ ನಿದ್ದೆ ಹತ್ತಿತೋ ತಿಳಿಯದು. ಆಮೇಲೆ ಬೆಳಗ್ಗೆ 6 ಘಂಟೆಗೇ ಎಚ್ಚರವಾದದ್ದು. ಬೆಡ್ ಟೀ ರೆಡಿ ಆಗಿತ್ತು. ಬೆಳಗ್ಗೆ ಅಲ್ಲೇ ಹಿಂದುಗಡೆ ಇರುವ ಅಗ್ನಿ ತೀರ್ಥದಲ್ಲಿ ಮುಖಮಾರ್ಜನ ತೀರಿಸಿಕೊಂಡು ಬಂದೆವು. ಗಟ್ಟಿ ಅವಲಕ್ಕಿ ನೆನೆಸಿಹಾಕಿ ಅದಕ್ಕೆ ಪುಳಿಯೋಗರೆ ಪುಡಿ ಮಿಕ್ಸ್ ಮಾಡಿದೆವು, ಮತ್ತೊಮ್ಮೆ ಚಹಾ ಮಾಡಿದ್ದರು. ಎಲ್ಲರಿಗೂ ನಾಷ್ಟಾ ಆಯಿತು. ಜಿಮ್ಮಿಗೆ ಸಹಾ ಹೊಟ್ಟೆ ತುಂಬಾ ಅವಲಕ್ಕಿ ಪುಳಿಯೋಗರೆ ಸಿಕ್ಕಿತ್ತು.
ದೇವಸ್ಥಾನದ ಅರ್ಚಕರು ಬೆಳಗ್ಗೆ 8 ಘಂಟೆಗೇ ಬರುತ್ತೇನೆ ಎಂದಿದ್ದರು. ಆದರೆ ಅವರ ಸುಳಿವೇ ಇಲ್ಲ. ದೂರದಲ್ಲೆಲ್ಲಾದರೂ ಬರುತ್ತಿರುವುದು ಕಾಣಿಸುವುದೇನೋ ಎಂದು ಕೆಳಗೆ ನೋಡಿದರೂ ಅವರನ್ನು ಕಾಣಲಿಲ್ಲ. ಏನೂ ಮಾಡುವುದು? ಹೊರಗಿನಿಂದಲೇ ಪಾರ್ವತಿ ಅಮ್ಮನಿಗೆ ನಮಿಸಿದೆವು. ಅಲ್ಲೆಲ್ಲಾನೀರು ಚಿಮುಕಿಸಿ ರವಿ ಮತ್ತು ಕಿರಣ ಶುದ್ಧ  ಮಾಡಿದರು. ನಾವು  ಕೊಂಡುಹೊಗಿದ್ದ ಎಲ್ಲಾ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಹೊತ್ತುಕೊಂಡು,  ಅಲ್ಲಿಂದ ಹೊರಟು ಕೆಳಗಿಳಿದೆವು. ಬೇಗನೇ ಬೆಟ್ಟದ ಬುಡ ತಲುಪಿದೆವು. ಕಾರುಗಳು ಕ್ಷೇಮವಾಗಿದ್ದವು. ಮನೆಯವರಿಗೆ ಥ್ಯಾಂಕ್ಸ್ ಹೇಳಿ ಹೊರಗಡೆ ತಂದು ನಮ್ಮ ಲಗ್ಗೇಜ್ ಎಲ್ಲಾ ಅದರಲ್ಲಿ ಇರಿಸಿ, ಪಕ್ಕದಲ್ಲೇ ಇರುವ ರಾಮಲಿಂಗೇಶ್ವರ ದೇವಾಲಯ ನೋಡಲು ಹೋದೆವು. ಬಹಳ ಪುರಾತನ ದೇವಾಲಯ. ರಾಮ,ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಆಂಜನೇಯರು ಪ್ರತಿಷ್ಠಾಪಿಸಿದ ಶಿವಲಿಂಗಗಳಿವೆ. ಇದರಲ್ಲಿ ರಾಮಲಿಂಗೇಶ್ವರನಿಗೆ
ಮಾತ್ರ ಪೂಜೆ. ಉಳಿದವರೆಲ್ಲಾ ಪೂಜಾವಂಚಿತರು. ದುರಾದೃಷ್ಟವಶಾತ್ ಇಲ್ಲಿ ಫೋಟೋ ತೆಗೆಯಲು ಅವಕಾಶವಿಲ್ಲ, ಇದು ಕೇಂದ್ರ ಸರಕಾರಕ್ಕೊಳಪಟ್ಟ ಪ್ರಾಚ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ, ಬೇಕಾದರೆ ಬೆಂಗಳೂರಿನಿಂದಲೇ ಅನುಮತಿ ಪಡೆದಿರಬೇಕು ಎಂದು ಅಲ್ಲಿರುವ ಓರ್ವ ಮೇಲ್ವಿಚಾರಕ ನಮ್ಮನ್ನು ತಡೆದನು. ಅಲ್ಲ, ಫೋಟೋ ತೆಗೆದರೆ ದೇವಾಲಯ ಸವೆದು ಹೋಗುತ್ತದೇನೋ? ಅಷ್ಟು ಪ್ರಾಮುಖ್ಯ ಹೊಂದಿದ, ಇದೇ ಇಲಾಖೆಗೆ ಒಳಪಟ್ಟ ಬೇಲೂರು, ಹಳೆಬೀಡುಗಳಲ್ಲಿ ಈ ತೆರನಾದ ನಿರ್ಬಂಧವಿಲ್ಲ. ಇಲ್ಲಿ ಯಾಕೆ ಹೀಗೆ? ಎಂದು ನಿರಾಶೆಯಾಯಿತು. ಆದರೂ ನಾವೂ ಹೊರಗಿನ ಆವರಣದಿಂದ ದೇವಾಲಯದ ಒಂದೆರಡು ಫೋಟೋ ತೆಗೆದೇಬಿಟ್ಟೆವು.




ನಾವು ಅಲ್ಲಿಂದ ಹಿಂತಿರುಗುವಾಗ ಅದೇ ಮೇಲ್ವಿಚಾರಕ ನಮ್ಮನ್ನು ಮಾತಾಡಿಸಿ ನಾವು ರಾತ್ರಿ ಬೆಟ್ಟದ ಮೇಲೆ ಮಲಕೊಂಡಿರಾ? ಬೇಕಿದ್ದರೆ ನಾನೇ ಇಲ್ಲಿ ಎಲ್ಲಾದರೂ ಮಲಗುವ ಏರ್ಪಾಡು ಮಾಡುತಿದ್ದೆ ಎಂದು ತುಂಬಾ ನೊಂದುಕೊಂಡರು. ಪಾಪ ಅವರಿಗೇನು ಗೊತ್ತು, ನಾವು ರಾತ್ರಿ ಬೆಟ್ಟದ ಮೇಲೇ ರಾತ್ರಿ ಕಳೆಯಲು ತಯಾರಾಗಿ ಬಂದವರೆಂದು!
ಆಮೇಲೆ ನಾವು ಶೃಂಗೇರಿ ಶಾರದಾ ಪೀಠ ದೇವಾಲಯಕ್ಕೆ ಹೋದೆವು. ಬಹಳ ಸುಂದರವಾದ ದೇವಾಲಯ.ಅಲ್ಲಿನ ಅರ್ಚಕರಿಗೆ ನಾವು ಹಿಂದಿನ ದಿನ ಬಂದದ್ದು ತಿಳಿದಿತ್ತು. ಇಡೀ ಊರಿಗೇ ತಿಳಿದಿತ್ತು. ಅಷ್ಟು ಚಿಕ್ಕ ಊರು! ಅವರಿಗೆ ನಮ್ಮ ಹುಚ್ಚುತನ ಕಂಡು ಆಶ್ಚರ್ಯವಾಗಿತ್ತು. ಅವರು ಅಲ್ಲಿ ಪೂಜೆ ಕಾರ್ಯ ವಹಿಸಿಕೊಂಡು 3 ವರ್ಷಗಳೇ ಆಯಿತಂತೆ. ಈ ವರ್ಷಗಳಲ್ಲಿ ಯಾರೂ ಅಲ್ಲಿ ಮೇಲೆ ರಾತ್ರಿ ಕಳೆದದ್ದು ಅವರ ಅರಿವಿನಲ್ಲಿಲ್ಲ ಎಂದರು. ಇಲ್ಲಿಗೆ ಬರುವ ಯಾತ್ರಿಕರ ಸಂಖ್ಯೆ ಬಹಳ ವಿರಳ. ನೀವು ಬಂದುದು ತುಂಬಾ ಸಂತೋಷ ಎಂದರು. ಹೀಗೇ ಇಲ್ಲಿಗೆ ಇನ್ನೂ ಹೆಚ್ಚಿನ ಯಾತ್ರಿಗಳು ಬರಲಿ ಎಂದು ಹಾರೈಸಿದರು.
ಪ್ರಸಾದ ಪಡಕೊಂಡು ನಾವು ಆವಣಿಯಿಂದ ಹೊರಟೆವು. ದೂರ ದೂರದವರೆಗೂ ಆವಣಿ ಬೆಟ್ಟ ಕಾಣಿಸುತಿತ್ತು.
ಮುಂದೆ ನಾವು ಕುರುಡುಮಲೆ, ಕೈಲಾಸಗಿರಿ ನೋಡಿಕೊಂಡು ಕೋಲಾರದ ಕೋಟಿಲಿಂಗೇಶ್ವರ ನೋಡಿಕೊಂಡು ಬೆಂಗಳೂರಿಗೆ ಬಂದೆವು.
ಆವಣಿಯು ಕುರುಡುಮಲೆ ಹಾಗೂ ಬಂಗಾರ ತಿರುಪತಿಗೆ ಸಮೀಪದಲ್ಲಿದೆ. ನೀವೆಂದಾದರೂ ಇಲ್ಲಿಗೆ ಹೋದರೆ ಖಂಡಿತಾ ಆವಣಿಗೆ ಹೋಗಿರಿ. ನಿಮ್ಮನ್ನು ಆವಣಿ ನಿರಾಶೆಗೊಳಿಸುವುದಿಲ್ಲ.
ಫೋಟೋ ಕೃಪೆ - ವಿಶ್ವಾಸ್.
     

    

 
 

Sunday, 17 July 2011

Rameshwaram



 ಮದುರೈಯಲ್ಲಿ ರಾತ್ರಿ ಕಳೆದು ಮುಂಜಾನೆ 5 ಘಂಟೆಗೆಲ್ಲಾ ಎದ್ದು ರೈಲ್ವೆ ಸ್ಟೇಷನ್ ಗೆ ಹೊರಟೆವು. ಒಂದು ಆಟೋ ಸಿಕ್ಕಿದ್ದರಿಂದ ಬೇಗನೇ ತಲುಪಿ ಟಿಕೆಟ್ ಕೊಂಡು ಮದುರೈ- ರಾಮೇಶ್ವರಮ್ ಪ್ಯಾಸೆಂಜರ್ ಗಾಡಿ ಹತ್ತಿದೆವು. ಬೆಳಗ್ಗೆ 6.15 ಕ್ಕೆ ರೈಲು ಹೊರಟಿತು. ಸುಮಾರು 173 ಕಿ.ಮೀ. ಪ್ರಯಾಣ. ಹಾಗೇ ತೂಕಡಿಕೆ- ಅರ್ಧ ನಿದ್ರೆಯಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಮುಂದೆ ಮಾನಾ ಮದುರೈ ಯಲ್ಲಿ ರೈಲು ನಿಂತಾಗ ಎಚ್ಚರವಾಯಿತು. ಬೆಳಗ್ಗಿನ ಉಪಾಹಾರದ ಗಡಿಬಿಡಿ ಗೌಜು. ಅದನ್ನು ಮಾರುವವರ ಪೈಪೋಟಿಯ ಗಲಾಟೆ. ಆದರೆ ಎಲ್ಲರೂ ಮಾರುತಿದ್ದುದು ಉದ್ದಿನ ವಡೆ, ಮಸಾಲವಡೆ. ತಮಿಳುನಾಡಿನಲ್ಲಿ ಒಳ್ಳೆಯ ಇಡ್ಲಿ ಸಿಗಬೇಕಿತ್ತು. ಆದರೆ ಅದರ ಸುಳಿವೇ ಇಲ್ಲ. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಲು ಮನಸ್ಸಾಗಲಿಲ್ಲ. ಕಾಫಿ ಬಿಸ್ಕತ್ತಿನಲ್ಲಿ ಸುಧಾರಿಸಿದೆವು. ಪ್ಯಾಸೆಂಜರ್ ಗಾಡಿಯಾದ್ದರಿಂದ ಎಲ್ಲಾ ಸ್ಟೇಷನ್ ಗಳಲ್ಲೂ ರೈಲು ನಿಂತು ಸಾಗುತಿತ್ತು. ಆದರೂ ಇಡ್ಲಿ ಮಾತ್ರ ಸಿಗಲೇ ಇಲ್ಲ. ಕಿಟಕಿಯಿಂದ ಹೊರಗಿನ ಸುಂದರ ದೃಶ್ಯಗಳನ್ನು ಆಸ್ವಾದಿಸುತ್ತಾ ಮನ ತುಂಬಿದೆವು.


ಹಲವಾರು ಕೇಳರಿಯದ ಊರುಗಳನ್ನು ಹಾದು ಪಾಂಬನ್ ಸ್ಟೇಷನ್ ಬಂದಿತು. ಇಲ್ಲಿಂದ ಮುಂದೆ ಸಮುದ್ರ.


ಅದರ ಮೇಲೆ ರೈಲಿಗಾಗಿ 90 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಒಂದು ಸೇತುವೆ ಇದ್ದರೆ, ಮೋಟಾರು ವಾಹನಕ್ಕಾಗಿ ಪ್ರತ್ಯೇಕವಾದ ಒಂದು ಸೇತುವೆಯಿದೆ. 1988 ರಲ್ಲಿ ನಿರ್ಮಿಸಲಾದ  ಇದನ್ನು ಪಾಂಬನ್ ಸೇತುವೆ ಎಂದು ಕರೆಯುತ್ತಾರೆ.   ನಾವು ಸಮುದ್ರದ ಮೇಲೆ ಕಟ್ಟಿರುವ ಎರಡನೇ ಅತೀ ಉದ್ದದ ಸೇತುವೆ ಇದು.


ಈ ಸೇತುವೆಯು ಸುಮಾರು 2.3 ಕಿ.ಮೀ.ಉದ್ದವಿದೆ. ಪಾಕ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ ಇದನ್ನು ನೋಡುವುದು, ಹಾಗೂ ಅದರ ಮೇಲೆ ಪ್ರಯಾಣಿಸುವುದೇ ಒಂದು ರೋಚಕ ಅನುಭವ.

 ಕೆಳಗಡೆ ಹಸಿರು ನೀಲಿ ವರ್ಣದ ಸಮುದ್ರ, ಅದರಲ್ಲಿ ಸಂಚರಿಸುವ ಬೋಟುಗಳು. ಬಿರುಸಾಗಿ ಬೀಸುವ ಗಾಳಿ, ಎಲ್ಲಾ ತುಂಬಾ ಆಕರ್ಷಣೀಯ.


ದೊಡ್ಡ ಬೋಟು ಮತ್ತು ಹಡಗುಗಳು ರೈಲು ಸೇತುವೆಯ ಅಡಿಯಿಂದ ಸಾಗಬೇಕಾದರೆ ಮಧ್ಯದಲ್ಲಿ ಅದನ್ನು ಇಬ್ಭಾಗವಾಗಿ ಮೇಲಕ್ಕೆ ಎತ್ತುವ ವ್ಯವಸ್ಥೆ ಇದೆ. ನಮ್ಮ ರೈಲು ಇದರ ಮೇಲೆ ನಿಧಾನವಾಗಿ ಚಲಿಸಿ ಮುಂದೆ ರಾಮೇಶ್ವರಮ್ ಸ್ಟೇಷನ್ ತಲುಪಿತು.
ರಾಮೇಶ್ವರಮ್ ಒಂದು ದ್ವೀಪ, ಶಂಕುವಿನ ಆಕೃತಿಯಲ್ಲಿದೆ. ತಮಿಳುನಾಡಿನ ರಾಮನಾಥಪುರಮ್ ಜಿಲ್ಲೆಯಲ್ಲಿದೆ. ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣಕ್ಕೆ ಹಿಂದೂ ಮಹಾಸಾಗರ. ಈ  ಜಾಗವನ್ನು ಮನ್ನಾರ್ ಕೊಲ್ಲಿ ಎನ್ನುತ್ತಾರೆ.  ಕೊಂಚ ಹೆಚ್ಚೇ ಎನ್ನಿಸಬಹುದಾದ ಉಷ್ಣ ವಾತಾವರಣ, ಗಾಳಿಯಲ್ಲಿನ ತೇವಾಂಶದಿಂದ ಬೆವರು ಸುರಿಯುತ್ತದೆ.
ರೈಲು ಇಳಿದಾಕ್ಷಣ ಅಲ್ಲೇ ಬಂದಿದ್ದ ಬಸ್ ಏರಿದೆವು. ಬರೇ 2 ರೂ. ಟಿಕೆಟ್ ಗೆ. ನಾವು ರಾಮೇಶ್ವರಮ್ ದೇಗುಲದ ಎದುರುಗಡೆಯೇ ಇಳಿದೆವು.


ಮೊದಲಿಗೆ ಹೊಟ್ಟೆ ತುಂಬಿಸ ಬೇಕಾಗಿತ್ತು. ಅಲ್ಲೇ ಇರುವ ಹೋಟೆಲ್ ಗೆ ಹೋಗಿ ಹಸಿವು ಇಂಗಿಸಿಕೊಂಡೆವು. ನಾವು ಮೊದಲೇ ಬುಕ್ ಮಾಡಿರುವ ಉಡುಪಿ ಛತ್ರ, ಪಕ್ಕದಲ್ಲೇ ಇದ್ದುದರಿಂದ ಅಲ್ಲಿಗೆ ಹೋಗಿ ರೂಮ್ ಪಡ ಕೊಂಡೆವು. ಉಡುಪಿಯ ಪೇಜಾವರ ಮಠದವರ ಈ ಛತ್ರ ವು ಬಹಳ ಚೆನ್ನಾಗಿದೆ. ಇವರದ್ದೇ ಇನ್ನೊಂದು ಛತ್ರವು ಪಕ್ಕದಲ್ಲೇ ಇದೆ. ಅಲ್ಲಿದ್ದ ಹೆಚ್ಚಿನವರು ನಮ್ಮೂರಿನವರೇ ಆದ್ದರಿಂದ, ನಿರಾಳವಾಗಿ ಇರುವಂತಾಯಿತು. ಸ್ನಾನ ಎಲ್ಲಾ ಮುಗಿಸಿ ದೇವರ ಧರ್ಶನಕ್ಕೆ ಹೊರಟೆವು. ಎತ್ತರವಾದ ಶ್ವೇತ ಬಣ್ಣ ಬಳಿದ ಗೋಪುರ.

 

ಇಲ್ಲಿ ಬಣ್ಣಗಳ ತಾಕಲಾಟ ಇಲ್ಲ. ಒಳಗಡೆ ಹೋದರೆ ಎತ್ತರವಾದ ಸ್ಥಂಭಗಳುಳ್ಳ ಪ್ರಾಂಗಣ.ಮದುರೈ ನಲ್ಲಿದ್ದಂತೆಯೇ, ಆದರೆ ಅಲ್ಲಿರುವಷ್ಟು ಕೆತ್ತನೆಗಳಿಲ್ಲ.


ಆದರೂ ಭವ್ಯವಾಗಿದೆ. ಅದರಲ್ಲಿ ಒಂದು ಸುತ್ತು ಬಂದೆವು. ಒಂದು ಪಕ್ಕದಲ್ಲಿ ಸಾಲಾಗಿ ಶಿವಲಿಂಗಗಳನ್ನು ಇರಿಸಿದ್ದಾರೆ. ರಾಮೇಶ್ವರಮ್ ವೈಷ್ಣವ ಹಾಗೂ ಶೈವರಿಗೆ ಬಹಳ ಪ್ರಾಮುಖ್ಯ ಕ್ಷೇತ್ರವಾಗಿದೆ. ಇದನ್ನು ' ಚಾರ್ ಧಾಮ್ ' ಎಂದು ಪರಿಗಣಿಸಲಾಗಿದೆ. ರಾಮೇಶ್ವರಮ್ ಗೆ ಬಂದವರು ಕಾಶಿಗೆ ಹೋಗಬೇಕೆಂದೂ, ಕಾಶಿಗೆ ಹೋದವರು ರಾಮೇಶ್ವರಮ್ ಗೆ ಬರಬೇಕೆಂಬ ಪ್ರತೀತಿ. ಇಲ್ಲಿಗೇ ಬಂದವರು ಸಮುದ್ರದ ಮರಳನ್ನು ಒಯ್ದು ಗಂಗೆಯಲ್ಲಿ ಸಮರ್ಪಿಸಿದರೆ, ಅಲ್ಲಿಂದ ಗಂಗಾಜಲವನ್ನು ತಂದು ಇಲ್ಲಿ ದೇವರಿಗೆ ಅಭಿಷೇಕ ಮಾಡಿಸುತ್ತಾರೆ. ಕಾಶೀ ಯಾತ್ರೆಯ ಫಲ ಪೂರ್ತಿಯಾಗಬೇಕಾದರೆ ಈ ಆಚರಣೆ ಮಾಡಬೇಕಂತೆ. ಹಾಗಾಗಿ ಇಲ್ಲಿ ದಕ್ಷಿಣ ಮತ್ತು ಉತ್ತರ ಭಾರತೀಯರು ಎಲ್ಲರೂ ಬರುತ್ತಾರೆ. ಎಲ್ಲಾ ಪ್ರದೇಶದ ಜನಗಳಿಗೂ ಅನುಕೂಲವಾಗುವಂತೆ ಅವರವರ ಮಠಗಳ ಛತ್ರಗಳೂ, ಹೋಟೆಲ್ ಗಳೂ ಇಲ್ಲಿವೆ. ಅಂತೆಯೇ ಆಯಾ ಪ್ರದೇಶದ ರೀತಿ ರಿವಾಜಿಗನುಸಾರವಾಗಿ ಪೂಜೆ, ಕ್ರಿಯೆಗಳನ್ನು ನಡೆಸಿಕೊಡುವ ಅರ್ಚಕ ಸಮೂಹವೂ ಇದೆ.
ಇಲ್ಲಿ ಕೋಟಿ ತೀರ್ಥಗಳೆಂಬ 22 ಬಾವಿಗಳಿವೆ. ಸಮುದ್ರ ಸ್ನಾನ ಮಾಡಿಕೊಂಡು, ಸೂರ್ಯೋದಯ ನೋಡಿಕೊಂಡು ಸೀದಾ ಇಲ್ಲಿಗೇ ಬಂದು ಎಲ್ಲಾ ತೀರ್ಥಗಳ ನೀರಿನಲ್ಲಿ ಮಿಂದು ರಾಮೇಶ್ವರನ ಧರ್ಶನ ಮಾಡುವುದು ಪುಣ್ಯಕರ ಎಂದು ನಂಬುತ್ತಾರೆ. ಈ ಸ್ನಾನದ ನಂತರ ಒಳಗಡೆ ಬರುವ ಭಕ್ತಾದಿಗಳಿಂದ ಸುರಿದ ನೀರಿನಿಂದಾಗಿ ಒಳಗಿನ ನೆಲವೆಲ್ಲಾ ಜಾರುತ್ತದೆ. ನಡೆಯುವಾಗ ಜಾಗ್ರತೆ ವಹಿಸಬೇಕು.
ಈಗಿರುವ ದೇವಾಲಯವು 12 ನೆ ಶತಮಾನದ್ದು ಎಂದು ತಿಳಿಯಲಾಗಿದೆ. ಆದರೆ ರಾಮೆಶ್ಹ್ವರವು ರಾಮಾಯಣ ಕಾಲದಲ್ಲೇ ಇತ್ತು ಎಂದು ಪುರಾಣಗಳ ಉಲ್ಲೇಖವಿದೆ. ಸೀತಾ ಮಾತೆಯನ್ನು ಅರಸುತ್ತಾ  ಶ್ರೀರಾಮಚಂದ್ರನು ಇಲ್ಲಿಗ ಬಂದು ಸಮುದ್ರ ಸೇತುವನ್ನು ಕಟ್ಟಿ, ಲಂಕೆಗೆ ಕಪಿ ಸೈನ್ಯ ಸಮೇತನಾಗಿ ಹೋಗಿ ರಾವಣವಧೆ ಮಾಡಿ ಸೀತಾದೇವಿಯನ್ನು ಬಿಡಿಸಿಕೊಂಡು ಹಿಂತಿರುಗಿ ಬಂದು, ಬ್ರಹ್ಮಹತ್ಯಾ ಧೋಷ ಪರಿಹಾರಕ್ಕಾಗಿ ಶಿವ ಪೂಜೆಗಾಗಿ ಶಿವಲಿಂಗ ಪ್ರತಿಷ್ಠೆ ಮಾಡುವ ಸಲುವಾಗಿ, ಕಾಶಿಯಿಂದ ಶಿವಲಿಂಗವನ್ನು ತರಲು ಆಂಜನೇಯನನ್ನು ಕಳುಹಿಸುತ್ತಾನೆ. ನಿಶ್ಚಯಿಸಿದ ಸುಮುಹೂರ್ಥಕ್ಕೆ ಸರಿಯಾಗಿ ಆಂಜನೇಯನು ಬರದ ಕಾರಣ ಸೀತಾದೇವಿಯೇ ಮರಳಿನಿಂದ ಶಿವಲಿಂಗ ರಚಿಸಿ ಪ್ರತಿಷ್ಠಾಪಿಸಿದಳಂತೆ. ಆಂಜನೇಯನು ತಡವಾಗಿ ಬಂದುದಕ್ಕೆ ನೊಂದುಕೊಂಡಾಗ ಅವನು ತಂದ ಶಿವಲಿಂಗವನ್ನೂ ಅಲ್ಲೇ ಸ್ಥಾಪಿಸಿದರಂತೆ. ಹಾಗಾಗಿ ಇದು ಶ್ರೀರಾಮ, ಸೀತಾ ಮಾತೆಯಿಂದ ಪೂಜಿಸಲ್ಪಟ್ಟ ಶಿವಲಿಂಗವೆಂದು ನಂಬುತ್ತಾರೆ. ಭಾರತ ದೇಶದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ರಾಮನಾಥೇಶ್ವರ ಲಿಂಗವೂ ಸೇರಿದೆ. ರಾಮೇಶ್ವರವನ್ನು ದಕ್ಷಿಣ ಕಾಶಿ ಎನ್ನುತ್ತಾರೆ. ಅಂತೆಯೇ ಇದು ಅತೀ ಪವಿತ್ರ ಸ್ಥಳವೆಂದು ನಂಬಿಕೆ. ದೇವರ ಗರ್ಭಗುಡಿಯಲ್ಲಿ ಇನ್ನೂ ಒಂದು ಶಿವಲಿಂಗವಿದ್ದು ಇದು ಸ್ಪಟಿಕಲಿಂಗವಾಗಿದೆ. ಪ್ರತೀದಿನ ಬೆಳಗ್ಗೆ 5.10ಕ್ಕೆ ಸ್ಪಟಿಕಲಿಂಗ ದರ್ಶನವಿದೆ. ಇದಕ್ಕಾಗಿ 50 ರೂ. ಟಿಕೆಟ್ ಪಡಕೊಳ್ಳಬೇಕು.
ನಾವು ದೇವರ ದರ್ಶನಕ್ಕಾಗಿ ಒಳ ಹೋದೆವು. ಅಂದು ಗುರುವಾರ ಹೆಚ್ಚು ಸಂದಣಿ ಇರಲಿಲ್ಲ. ದೇವರನ್ನು ಸರಿಯಾಗಿ ನೋಡಲು ಸಾಧ್ಯವಾಯಿತು. ಸರಿಯಿರಿ, ಮುಂದೆ ಹೋಗಿ ಎಂದು ನೂಕುವವರಿಲ್ಲ. ಮನಸಾರೆ ದೇವರಿಗೆ ವಂದಿಸಿದೆವು. ಅದೆಷ್ಟೋ ದೂರದಿಂದ ಗಂಗಾಜಲವನ್ನು ಭಕ್ತಿಯಿಂದ ತಂದು ಶಿವನಿಗೆ ಅಭಿಷೇಕ ಮಾಡುವವರ ಶ್ರದ್ಧಾ ಭಕ್ತಿ ನೋಡುವಂತಾಗಿದೆ. ಬೇಕಾದರೆ ಇಲ್ಲೇ ಗಂಗಾಜಲದ ಪುಟ್ಟ ಕುಡಿಕೆ ಸಿಗುತ್ತದೆ. ಅದನ್ನೇ ಕೊಂಡು ನಾವೂ ಗಂಗಾಭಿಷೇಕ ಸೇವೆಯನ್ನು ಮಾಡಿಸಿದೆವು. ಮಧ್ಯಾಹ್ನದ ಪೂಜೆಯನ್ನೂ ನೋಡಿದೆವು. ಅಲ್ಲಿಂದ ಹೊರಬಂದು ಪಕ್ಕದಲ್ಲೇ ಇರುವ ದೇವಿಯ ಆಲಯಕ್ಕೆ ಹೋಗಿ ದರ್ಶನ ಪಡೆದೆವು.
ಹೊರಗೆ ಬಂದು ಮಾರ್ಗದಲ್ಲೇ ದೇವಸ್ಥಾನಕ್ಕೆ ಒಂದು ಸುತ್ತು ಬಂದೆವು. ಅಲ್ಲೆಲ್ಲಾ ಅಂಗಡಿಗಳು. ಪೂಜಾ ಸಾಮಗ್ರಿ, ಶಂಖ ಚಿಪ್ಪುಗಳನ್ನು ಸುಂದರವಾಗಿ ಜೋಡಿಸಿ ಮಾಡಿದ ಬಗೆ ಬಗೆಯ ಕಲಾಕೃತಿಗಳು, ಊದುವ ಶಂಖ ಇತ್ಯಾದಿಗಳ ಮಳಿಗೆಗಳು ತುಂಬಿವೆ.ಅಂತೆಯೇ ಹೋಟೆಲ್ ಗಳೂ ಛತ್ರ ಗಳೂ ಇವೆ. ನಾವು  ಊಟ ಮಾಡಿ ಸ್ವಲ್ಪ ಹೊತ್ತು ರೂಮಿನಲ್ಲಿ ವಿಶ್ರಮಿಸಿದೆವು. ಚೆನ್ನಾಗಿ ನಿದ್ರೆ ಬಂದಿತ್ತು. ಎಚ್ಚರವಾಗುವಾಗ 3.30. ಲಗುಬಗೆಯಿಂದ ಎದ್ದು ಹೊರಟೆವು. ನಮಗೆ ಧನುಷ್ಕೋಡಿಗೆ ಹೋಗಬೇಕು. ದೇವಸ್ಥಾನದ ಎದುರುಗಡೆಯೇ ಬಸ್ ಬರುತ್ತದೆ. ಅಲ್ಲಿ ಕಾದೆವು. 4.45ಕ್ಕೆ ಬಸ್ ಬಂದಿತು. ಸುಮಾರು 12 ಕಿ.ಮೀ. ದೂರ. ಅರ್ಧ ಘಂಟೆಯಲ್ಲಿ ಅಲ್ಲಿಗೆ ತಲುಪಿದೆವು. ಅಲ್ಲಿಯವರೆಗೆ ಮಾತ್ರ ರಸ್ತೆಯಿದೆ . ಮುಂದೆ ಮರಳದಾರಿ, ಜೀಪ್ ಮಾತ್ರ ಸಾಗಬಲ್ಲುದು.ಮುಂದೆ 7 ಕಿ.ಮೀ.ಸಾಗಬೇಕು.


ಆದರೆ ಅಲ್ಲಿ ಜೀಪುಗಳು ಇರಲಿಲ್ಲ. ಮತ್ತು ಸಂಜೆ 6 ಘಂಟೆಯ ನಂತರ ಅಲ್ಲಿ ಯಾರೂ ಇರಕೂಡದು ಎಂಬ ಭಾರತೀಯ ನೌಕಾಸೇನೆ, ಕೋಸ್ಟ್ ಗಾರ್ಡ್ಸ್ ನ  ಆಜ್ಞಾಪಣೆ ಇದೆ. ಹಾಗಾಗಿ ನಾವು. ಧನುಷ್ಕೋಡಿಯ ತುದಿ ಮುಟ್ಟಲಿಕ್ಕಾಗಲಿಲ್ಲ. ಸ್ವಲ್ಪ ನಿರಾಶೆಯಾಯಿತು. ನಮ್ಮ ಮದ್ಯಾಹ್ನದ ನಿದ್ರೆ ಈ ಒಳ್ಳೆಯ ಅವಕಾಶವನ್ನು ಕಸಿದಿತ್ತು. ಅಲ್ಲಿಯೂ ಇದೇ ರೀತಿ ಸಮುದ್ರ, ಮರಳು ಅಷ್ಟೇ. ಮತ್ತು ಹಿಂದೆ 1964 ರಲ್ಲಿ ಬಂದ ಸುನಾಮಿಯ ರೌದ್ರಾವತಾರದ ಸಾಕ್ಷಿ ಯಾಗಿ ನೆಲಸಮವಾಗಿರುವ ಮನೆ,ಕಟ್ಟಡಗಳು, ರೈಲುಮಾರ್ಗ, ಒಂದು ಹಳೆಯ ಚರ್ಚ್ ನ ಅವಶೇಷಗಳಿವೆಯಂತೆ. ಒಂದು ದೇವಸ್ಥಾನವಿದ್ದದ್ದು ಸಹಾ ನೀರಲ್ಲಿ ಮುಳುಗಿಹೋಗಿದೆ.
ಶ್ರೀರಾಮಪಾದ ಎಂಬ ಸ್ಥಳವಿದೆ. ಅಲ್ಲಿ ಪೂಜೆ ಮಾಡಬಹುದು. ಅಲ್ಲಿಂದ ಲಂಕೆಗೆ ಬರೇ 30 ಕಿ.ಮೀ. ಅಷ್ಟೇ.


ಹೇಗೂ ಇಲ್ಲಿಯವರೆಗೆ ಬಂದಿದ್ದೆವಲ್ಲಾ ಕಡಲ ತೀರದಲ್ಲೇ ಚಾರಣ ಮಾಡೋಣ ಎಂತ ಚಾರಣಪ್ರಿಯರಾದ ನಾವಿಬ್ಬರೂ ಒಮ್ಮತದಿಂದ ತೀರ್ಮಾನಿಸಿದೆವು.
ಇಲ್ಲಿ ಕಡಲು ಎರಡೂ ಕಡೆ ಇದೆ. ಮಧ್ಯದಲ್ಲಿ ಸುಮಾರು ಅರ್ಧ ಕಿ.ಮೀ ನಷ್ಟು ಭೂಮಿಯಿದೆ ಅಷ್ಟೇ. ಬರೇ ಮರಳು, ಮರಗಳೇ ಇಲ್ಲದಅಗಲ ಕಿರಿದಾದ ಜಾಗ! ಕೆಲವೆಡೆ ಮರಳ ದಿಬ್ಬಗಳು, ಕೆಲವೆಡೆ ಜವುಗು ಮರಳು.


 ಅದರಲ್ಲಿ ಕಾಲಿಡಲು ಧೈರ್ಯವಿರಲಿಲ್ಲ. ಒಂದುವೇಳೆ ಹೂತು ಹೋದರೆ? ಭರ್ರನೆ ಬೀಸುವ ಗಾಳಿ, ದಡಕ್ಕಪ್ಪಳಿಸುವ ತೆರೆಗಳು, ವ್ಯಗ್ರವಾದ ಸಾಗರ, ಅಲ್ಲಿ ನಾವಿಬ್ಬರೇ ನಡೆಯುತ್ತಾ ಸಾಗಿದೆವು. ಒಂದುವೇಳೆ ಸುನಾಮಿ ಬಂದರೆ? ಎಂಬ ಆತಂಕವೂ ಮನದಲ್ಲಿ ಮೂಡಿತು. ಅಲ್ಲೆಲ್ಲಾ ಚದುರಿರುವ ಚಿಪ್ಪು, ಶಂಖುಗಳನ್ನು ಆರಿಸುತ್ತಾ, ಕಸ್ತೂರಿ ಒಂದು ಕ್ಯಾರಿ ಬ್ಯಾಗ್ ನಲ್ಲಿ ತುಂಬಿಸುತಿದ್ದಳು. ಇದರಿಂದ ನಮ್ಮ ನಡೆ ನಿಧಾನಗತಿಯಲ್ಲಿ ಸಾಗುತಿತ್ತು. ಹೀಗೇ ಸುಮಾರು 3 ಕಿ.ಮೀ. ಮುಂದೆ ಹೋದೆವು.


ಇದೇ ದಾರಿಯಲ್ಲಿ ಅಲ್ಲವೇ? ಶ್ರೀರಾಮಚಂದ್ರನು, ಲಕ್ಷ್ಮಣ, ಸುಗ್ರೀವ, ಆಂಜನೇಯ, ಜಾಂಭವ ಮತ್ತು ಕಪಿ ಸೈನ್ಯದೊಂದಿಗೆ ಸಾಗಿದ್ದು! ಇದರ ನೆನಪಾಗಿ ಮೈ ಪುಳಕಿತವಾಯಿತು. ಅವರು ಹೋದ ದಾರಿಯಲ್ಲೇ ನಾವಿಂದು ಹೋಗುತಿದ್ದೇವೆ! ಮುಂದೆ ಧನುಷ್ಕೋಡಿಯಲ್ಲಿ ಸಮುದ್ರಕ್ಕೆ ಸೇತುವೆ ರಚಿಸಿ ಲಂಕೆಯನ್ನು ಮುತ್ತಿದರಂತೆ. ಆ ರಾಮಸೇತುವಿನ ಅವಶೇಷಗಳು ಈಗಲೂ ನೀರಿನ ಕೆಳಗೆ ಇದೆಯಂತೆ. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಯು ನಿಜವಾಗಿ ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದಿರಬಹುದೋ ಏನೋ? ಅಷ್ಟು ನೈಜವಾಗಿದೆ.
ಹೊತ್ತು ಕಂತಿತು, ಅಷ್ಟರಲ್ಲೇ ಧನುಷ್ಕೋಡಿಯಿಂದ ವಾಪಾಸು ಬರುತಿದ್ದ ಜೀಪು ಬಂದು ನಿಂತಿತು. ನಾವೂ ಕೂಡಲೇ ಅಲ್ಲಿಂದ ಹಿಂತಿರುಗಬೇಕೆಂದೂ, ಇಲ್ಲವಾದರೆ ಕೋಸ್ಟ್ ಗಾರ್ಡ್ ಗಳು ಬಂದು ಗದರಿಸುತ್ತಾರೆ ಎಂದು ತಿಳಿಸಿದರು. ನಾವೂ ಆದಷ್ಟು ಬೇಗನೇ ಹಿಂತಿರುಗಿದೆವು. ಬಸ್ ಬಂದಿತ್ತು. ಅದರಲ್ಲಿ ರಾಮೇಶ್ವರಮ್ ಗೆ ವಾಪಸಾದೆವು. ದಾರಿಯಲ್ಲಿ ಕೋದಂಡರಾಮ ದೇವಸ್ಥಾನ ಕಾಣಿಸುತಿತ್ತು. ಭಾರತದ ರಾಷ್ಟ್ರಪತಿಯಾಗಿದ್ದ ಶ್ರೀಯುತ  ಎ.ಪಿ.ಜೆ.ಅಬ್ದುಲ್ ಕಲಾಂ  ಅವರ ಹುಟ್ಟೂರು ಧನುಷ್ಕೋಡಿ. ಇಲ್ಲಿ ಅವರ ಮನೆ ಇದೆಯಂತೆ.
ಕಾಫಿ ತಿಂಡಿ ಆದಾಗ ಆಯಾಸವೆಲ್ಲ ಕಡಿಮೆಯಾಯಿತು. ನಮಗೆ ಬೇರೇನೂ ಕೆಲಸವಿರಲಿಲ್ಲ.


 ನೆಟ್ಟಗೆ ದೇವಸ್ಥಾನದ ಒಳಗೆ ಹೋದೆವು, ದೇವರ ದರ್ಶನ ಮಾಡಿದೆವು. ಮತ್ತೆ ಅಲ್ಲೇ ಇರುವ ಸಮುದ್ರದ ಕಿನಾರೆಯಲ್ಲಿ ಕುಳಿತೆವು. ಈಗ ಯಾರೂ ಸ್ನಾನ ಮಾಡುತ್ತಿರಲಿಲ್ಲ. ಹೆಚ್ಚು ರಶ್ ಇರಲಿಲ್ಲ. ಸಮುದ್ರದ ನೀರು ಈಗ ಕಪ್ಪಾಗಿ ತೋರುತಿತ್ತು. ಅದರ ಮೇಲೆ ಪಕ್ಕದ ಕಟ್ಟಡಗಳ ಲೈಟ್, ಬೋಟ್ ಗಳ ಬೆಳಕು ಎಲ್ಲಾ ಸೊಗಸಾಗಿ ಪ್ರತಿಫಲಿಸುತ್ತಿತ್ತು. ಸುಮಾರು ಹೊತ್ತು ಅಲ್ಲಿದ್ದೆವು. ನಂತರ ರಾತ್ರಿಯೂಟ ಮಾಡಿಕೊಂಡು ರೂಮಿಗೆ ಹೋದೆವು. ರಾತ್ರಿ ಬಾತ್ ರೂಮಿಗೆ ಹೋದಾಗ ಏನೋ ಗಬ್ಬು ವಾಸನೆ, ಏನೆಂದು ನೋಡುವಾಗ ನಾವು  ಅಲ್ಲಿಂದ ಆರಿಸಿ ತಂದ ಚಿಪ್ಪುಗಳ ಕರಾಮತ್ತು. ತಕ್ಷಣ ಪೂರ್ತಿ ಚೀಲವನ್ನೇ ಹೊರಗೆ ಎಸೆದೆವು.
 ಮರುದಿನ ಬೆಳಗ್ಗೆ 5 ಘಂಟೆಗೇ ಎದ್ದು ಸಮುದ್ರ ಸ್ನಾನಕ್ಕೆ ಹೋದೆವು. ಅಲ್ಲೆಲ್ಲ ಆಗಲೇ ಬಹಳ ಜನ ಸೇರಿದ್ದರು. ಸಮುದ್ರವು ಇಲ್ಲಿ ಶಾಂತವಾಗಿತ್ತು. ನೀರಿನಲ್ಲಿ ಬಹಳ ದೂರದವರೆಗೆ ಹೋಗಿ ಸ್ನಾನ ಮಾಡಿದೆವು. ಇಬ್ಬರಿಗೂ ಈಜು ಬರುವುದರಿಂದ ಏನೇನೂ ಭಯವಿಲ್ಲದೆ, ಬಹಳ ಹೊತ್ತು ನೀರಲ್ಲಿದ್ದೆವು. ಸೂರ್ಯೋದಯದ ಸೊಬಗನ್ನೂ ಸವಿದೆವು. ಬಹಳ ಕುಶಿ ಪಟ್ಟೆವು.
ಮುಂದೆ ಕೋಟಿ ತೀರ್ಥ ಸ್ನಾನ. ಇದಕ್ಕಾಗಿ ಟಿಕೆಟ್ ಪಡಕೊಂಡು, ಮತ್ತೆ ಒಬ್ಬ ಏಜೆಂಟ್ ನೊಂದಿಗೆ ಸಾಲಿನಲ್ಲಿ ಹೋಗಿ ನಿಂತೆವು. ಇಲ್ಲಿ ತುಂಬಾ ರಶ್ ಇರುತ್ತದೆ. ಆತನೊಂದಿಗೆ ಇನ್ನೂ ಹಲವಾರು ಮಂದಿ ಇದ್ದರು. ಎಲ್ಲರನ್ನೂ ಒಟ್ಟಿಗೇ ಕೊಂಡೊಯ್ದು ಒಂದೊಂದು ತೀರ್ಥಭಾವಿಯಿಂದಲೂ ಪುಟ್ಟ ಬಕೆಟ್ ನಲ್ಲಿ ನೀರು ಮೊಗೆದು ಒಬ್ಬೊಬ್ಬರ ತಲೆಗೆ ಸುರಿಯುತ್ತಾನೆ. ನಂತರ ಮುಂದಿನ ಭಾವಿಯೆಡೆಗೆ ದೌಡಾಯಿಸಬೇಕು. ಯಾರೂ ತಪ್ಪಿಸಿಕೊಳ್ಳಬಾರದು. ಇಲ್ಲಿನ ಹೆಚ್ಚಿನ ಎಲ್ಲಾ ಭಾವಿಗಳು ಹತ್ತಿರ ಹತ್ತಿರದಲ್ಲೇ ಇವೆ. ಆದರೆ ವಿಚಿತ್ರವೆಂದರೆ ಒಂದರ ನೀರು ಇನ್ನೊಂದರಂತಿಲ್ಲ. ಒಂದು ಸಿಹಿ ನೀರಾದರೆ ಇನ್ನೊಂದು ಸವಳು. ಒಂದು ಅತೀ ತಂಪು ಆದರೆ ಇನ್ನೊಂದು ಉಗುರುಬಿಸಿ ನೀರು.ಅವನು ನೀರು ಸುರಿಯುತ್ತಿರುವಾಗಲೇ ಕೆಲವರು ಅದನ್ನು ಬಾಟಲಿಯಲ್ಲಿ ತುಂಬಿಕೊಳ್ಳುತ್ತಿದ್ದರು. ಅಂತೂ ಎಲ್ಲಾ ತೀರ್ಥಗಳನ್ನು ಮಿಂದಾಯಿತು. ಇಲ್ಲೆಲ್ಲಾ ಫೋಟೋ ತೆಗೆಯಲು ಅವಕಾಶವಿಲ್ಲ. ಅದು ಸೌಜನ್ಯವೂ ಅಲ್ಲವೆನ್ನಿ. ನಾವು ಒಣಬಟ್ಟೆ ಧರಿಸಿ ಶ್ರೀದೇವರ ಧರ್ಶನ ಮಾಡಿದೆವು. ಅಂತೂ ಮನದಣಿಯೆ 3 ಸಲ ದೇವರನ್ನು ನೋಡಿದ ಹಾಗಾಯಿತು.
ಮದ್ಯಾಹ್ನದ ಊಟ ಮುಗಿಸಿ ನಾವು ಬಸ್ಸಿನಲ್ಲಿ ಮದುರೈಗೆ ಬಂದೆವು. ಅಲ್ಲಿನ ನೂತನ ಬಸ್ ಸ್ಟ್ಯಾಂಡ್ ಬಹಳ ಚೆನ್ನಾಗಿತ್ತು. ಸ್ವಲ್ಪ ಹೊತ್ತು ಅಲ್ಲಿ ಶಾಪಿಂಗ್ ಮಾಡಿ ಸಿಟಿ ಬಸ್ ನಲ್ಲಿ ಮದುರೈ ರೈಲ್ವೆ ಸ್ಟೇಷನ್ ಗೆ ಬಂದು ರಾತ್ರಿ 8 ಘಂಟೆಗೆ ಹೊರಡುವ ಟ್ಯುಟಿಕೊರಿನ್ - ಬೆಂಗಳೂರು ರೈಲು ಹತ್ತಿ ಬೆಳಗ್ಗೆ 6.40 ಕ್ಕೆ ಊರು ಸೇರಿದೆವು. ಬಹಳ ಕಾಲ ಸವಿ ನೆನಪಿನಲ್ಲಿರುವಂತಹಾ ಒಂದು ಯಾತ್ರೆಯಾಗಿತ್ತು.