Tuesday, 28 June 2011

Madurai

ಈಸಲ ನಾವು ತಮಿಳುನಾಡಿನ ಮದುರೈಗೆ ಹೋಗಿದ್ದೆವು. ಬಹಳ ದಿನಗಳಿಂದ ಮದುರೈ ನೋಡಬೇಕೆಂಬುದು ನನ್ನಾಕೆಯ ಆಶಯವಾಗಿತ್ತು. ನಾನಾದರೋ ಹಲವಾರು ಸಲ ಅಲ್ಲಿಗೆ ಹೋಗಿದ್ದೆ. ರೈಲ್ವೆ ರಿಸರ್ವೇಶನ್ ಮಾಡಿಸಿದೆ. ಮಾರ್ಚ್ ತಿಂಗಳ 8ನೇ ತಾರೀಕು ರಾತ್ರಿ 9.20ಕ್ಕೆ ಹೊರಡುವ ಟ್ಯೂಟಿಕೊರಿನ್ ಎಕ್ಸ್ ಪ್ರೆಸ್ ನಲ್ಲಿ ನಮ್ಮ ಯಾತ್ರೆ ಪ್ರಾರಂಭವಾಯಿತು.
ಹೋಗುವಾಗಲೇ ರೈಲಿನಲ್ಲಿ ನಮ್ಮೂರವರೇ ಆದ ಮಹನೀಯರ ಪರಿಚಯವಾಯಿತು. ಅವರು ತ್ರಿಚೆಂದೂರ್ ದೇವಾಲಯದ ಅರ್ಚಕರು. ನಮ್ಮನ್ನು ಅಲ್ಲಿಗೂ ಬರಲು ಆಮಂತ್ರಿಸಿದರು.
ಸ್ವಲ್ಪ ಹೊತ್ತಿನಲ್ಲೇ ತೂಕಡಿಕೆ ಶುರುವಾಯಿತು. ಬೇಗನೇ ಒಳ್ಳೆಯ ನಿದ್ರೆ ಬಂತು.  ಮುಂಜಾನೆ 6 ಘಂಟೆಗೇ ಎಚ್ಚರವಾಯಿತು. ರೈಲಿನ ಕಿಟಕಿಯಿಂದ ಹೊರಗಿನ ದೃಶ್ಯಗಳನ್ನು  ನೋಡುತ್ತಾ ಇದ್ದಂತೆ ಸೂರ್ಯೊದಯದ ಸೊಬಗನ್ನು ಸವಿದೆವು.
 7.20ಕ್ಕೆ ಸರಿಯಾಗಿ ಮದುರೈಗೆ ತಲುಪಿದೆವು. ಒಂದು ಆಟೋ ಹಿಡಿದು ಮೀನಾಕ್ಷಿ ದೇವಾಲಯದ ಸಮೀಪವೇ ಇರುವ ಹೋಟೆಲ್ ನಲ್ಲಿ ಉಳಕೊಂಡೆವು. ಸ್ನಾನಾದಿಗಳನ್ನು ಪೂರೈಸಿಕೊಂಡು ಉಪಹಾರ ಮುಗಿಸಿ ದೇವಾಲಯ ನೋಡಲು ಹೊರಟೆವು.
ಮದುರೈ ಪಟ್ಟಣವು ವೈಗೈ ನದಿಯ ದಂಡೆಯಲ್ಲಿದೆ. ಬಹಳ ಪುರಾತನ ನಗರವಾಗಿದ್ದು ದೇವಾಲಯಗಳ ನಗರ ಎಂದೇ ಪ್ರಸಿದ್ಧವಾಗಿದೆ. ಪಾಂಡ್ಯ ರಾಜರ ರಾಜಧಾನಿಯಾಗಿದ್ದು ನಂತರ ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು. ನಂತರ ವಿಜಯನಗರ ಅರಸರ ಅಧೀನದಲ್ಲಿದ್ದು ಮತ್ತೆ ಬಂದ ನಾಯಕರ ಆಡಳಿತದಲ್ಲಿತ್ತು. ತರುವಾಯ ಬ್ರಿಟಿಷರು ಬಂದರು. ಹೀಗಾಗಿ ಇಲ್ಲಿ ತುಂಬಾ ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳು ಇವೆ. ಮದುರೈ ಪಟ್ಟಣವು ಸುಮಾರು 50 ಚದರ ಕಿ.ಮಿ. ವಿಸ್ತಾರವಾಗಿದ್ದು ತಮಿಳುನಾಡಿನ ಮೂರನೆಯ ದೊಡ್ಡ ನಗರವಾಗಿದೆ.
ಮದುರೈ ಮೀನಾಕ್ಷಿ ದೇವಾಲಯ ಸಂಕೀರ್ಣವು ಸುಮಾರು 45 ಎಕರೆಯಷ್ಟು ವಿಸ್ತಾರವಾಗಿದೆ. ಇಲ್ಲಿನ ಮುಖ್ಯ ದೇವಾಲಯವು ಶಿವನಿಗೆ ಮೀಸಲು. ಇಲ್ಲಿ ಪರಮೇಶ್ವರನನ್ನು ಸುಂದರೇಶ್ವರ ಎಂದು ಹೆಸರಿಸಿದ್ದಾರೆ. ಅದರ ಪಕ್ಕದಲ್ಲೇ ಪಾರ್ವತಿ ದೇವಾಲಯವಿದೆ. ಇಲ್ಲಿ ಪಾರ್ವತಿಯನ್ನು ಮೀನಾಕ್ಷಿ ಎಂದು ಕರೆಯುತ್ತಾರೆ. ದೇವಸ್ಥಾನಕ್ಕೆ ಓಟ್ಟು 12 ಬೃಹತ್ತಾದ ಗೋಪುರಗಳಿದ್ದು, ಮದುರೈ ಶೈಲಿಯ ಗೋಪುರಗಳು ಎಂದೇ ಪ್ರಖ್ಯಾತಿ ಹೊಂದಿದೆ. ಬಹಳ ದೂರದಿಂದಲೇ ಈ ಗೋಪುರಗಳನ್ನು ಕಾಣಬಹುದು. ಇವುಗಳಲ್ಲಿ ಅತೀ ಎತ್ತರದ ಗೋಪುರವೆಂದರೆ ದಕ್ಷಿಣಕ್ಕಿರುವ ಗೋಪುರ.
 ಇದರ ಎತ್ತರ ಸುಮಾರು 170 ಅಡಿಗಳು! ಅತೀ ಎತ್ತರದ ಗೋಪುರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಇವುಗಳ ಮೇಲೆಲ್ಲಾ ಅಸಂಖ್ಯಾತ ಮೂರ್ತಿಗಳು. ಎಲ್ಲಕ್ಕೂ ಬೇರೆ ಬೇರೆ ಬಣ್ಣ ಹಚ್ಚಿದ್ದಾರೆ. ಪುರಾಣ ಕಥೆಗಳನ್ನು ಆಧರಿಸಿದ ಈ ಮೂರ್ತಿಗಳು ಆಕರ್ಷಕವಾಗಿವೆ. ಎಲ್ಲಾ ದೇವಾನುದೇವತೆಗಳು, ಋಷಿ ಮುನಿಗಳು, ದೇವಗಣಗಳು, ಅವರ ವಾಹನಗಳಾದ ಪ್ರಾಣಿಗಳು, ಪಕ್ಷಿಗಳು, ರಾಕ್ಷಸರು, ಭಕ್ತ ಮಾನವರು ಎಲ್ಲಾ ಕಾಣಬಹುದು.
 ಯಾವುದನ್ನು ನೋಡುವುದು ಯಾವುದನ್ನು  ಬಿಡುವುದು ಎಂಬ ಗೊಂದಲಕ್ಕೊಳಗಾಗುತ್ತೇವೆ. ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಮೇಲ್ಗಡೆ ನೋಡಿದ ಪರಿಣಾಮವಾಗಿ ಕತ್ತು ನೋಯುತ್ತದೆ. ಹೊರಗಿನ 6 ಗೋಪುರವನ್ನು ಒಳಗೊಂಡು ಬಹಳ ಎತ್ತರವಾದ ಪ್ರಾಕಾರವಿದೆ. ಅದನ್ನು ಏರಿ ಬರಲು ಸುಲಭ ಸಾಧ್ಯವಿಲ್ಲ. ಗೋಪುರದ ಮೂಲಕ ಪ್ರವೇಶಿಸಿದರೆ ದೊಡ್ಡ ರಾಜಾಂಗಣ ಸಿಗುತ್ತದೆ. ಇದರಲ್ಲಿ ಒಂದು ಸುತ್ತು ಬರಬೇಕಾದರೆ ನಾವು ತುಂಬಾ ನಡೆಯಬೇಕಾಗುತ್ತದೆ. ರಾಜಾಂಗಣದ ಒಳ ಪ್ರಾಕರವೂ ಬಹಳ ಎತ್ತರವಾಗಿದ್ದು ಇಲ್ಲಿಯೂ 6 ಗೋಪುರಗಳಿವೆ. ನಾವು ಒಳಗೆ ಪ್ರವೇಶ ಮಾಡುವಾಗ ಯಾವ ದಿಕ್ಕಿನ ಗೋಪುರವೆಂದು ನೆನಪಿಟ್ಟುಕೊಳ್ಳಬೇಕು. ಇಲ್ಲವಾದರೆ ನಮಗೆ ದಾರಿ ತಪ್ಪಿ ಇನ್ನ್ಯಾವುದೋ ಗೋಪುರದಿಂದ ಹೊರ ಬಂದರೆ ನಮ್ಮ ಚಪ್ಪಲಿ ಇಟ್ಟಿರುವ ಜಾಗಕ್ಕೆ ಬರಲು ಪರದಾಡಬೇಕಾಗುತ್ತದೆ. ಎಲ್ಲಾ ಗೋಪುರಗಳೂ ಒಂದೇ ತೆರನಾಗಿದ್ದು 6 ಗೋಪುರಗಳನ್ನು ಹೊಂದಿರುವ ಕಾರಣ ದಿಕ್ಕು ತಪ್ಪಿ ಹೋಗುವ ಸಂಭವ ಹೆಚ್ಚು.
 ಒಳ ಪ್ರಾಕಾರದ ಗೋಡೆಯಲ್ಲಿ ಒಂದು ಕಡೆ ಪುಟ್ಟದಾದ ಒಂದು ಕಿಂಡಿಯಿದ್ದು ರಾಜಾಂಗಣದಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ನಿಂತು ಆ ಕಂಡಿಯಿಂದ ನೋಡಿದರೆ ಮಾತ್ರ ನಮಗೆ ಮೀನಾಕ್ಷಿ ಅಮ್ಮನವರ ದೇವಾಲಯದ ಸುವರ್ಣ ಗೋಪುರವನ್ನು ನೋಡಲು ಸಾಧ್ಯ! ಬೇರೆ ಎಲ್ಲಿಂದಲೂ ಇದನ್ನು ನೋಡಲು ಸಾಧ್ಯವಿಲ್ಲ!
ರಾಜಾಂಗಣದಿಂದ ಒಳ ಹೊಕ್ಕರೆ ಒಂದು ಪಕ್ಕದಲ್ಲಿ ವಿಶಾಲವಾದ ಕಲ್ಯಾಣಿ ಇದೆ.
 ಆದರೆ ನಾವು ಹೋದಾಗ ಅದರಲ್ಲಿ ನೀರೇ ಇರಲಿಲ್ಲ. ( ಹಿಂದೊಮ್ಮೆ ನಾನು ನೋಡಿದ್ದಾಗ ತುಂಬಾ ನೀರಿತ್ತು) ಬದಲಾಗಿ ಅದರಲ್ಲಿ ಅಲ್ಲಲ್ಲಿ ಹುಲ್ಲು ಹಾಗೂ ಹೂ ಗಿಡಗಳನ್ನು ಬೆಳೆಸಿದ್ದರು. ಮದ್ಯದಲ್ಲಿ ಒಂದು ಸುವರ್ಣ ಕಮಲವನ್ನೂ ಇರಿಸಿದ್ದಾರೆ. ಬಹುಷಃ ಮಳೆ ಬಂದಾಗ ನೀರು ತುಂಬಿಕೊಳ್ಳಬಹುದು. ಕಲ್ಯಾಣಿಯ ಪಕ್ಕದಲ್ಲಿ ಮುಂದೆ ಸಾಗಿದರೆ ಸುಂದರೇಶ್ವರನ ಆಲಯ ಸಿಗುತ್ತದೆ. ಇಲ್ಲೆಲ್ಲಾ ಸುಂದರ ಕೆತ್ತನೆಗಳಿರುವ ಸ್ಥಂಭಗಳಿವೆ.
 ಎದುರುಗಡೆಯಲ್ಲಿ ಭದ್ರಕಾಳಿ ಮತ್ತು ಊರ್ಧ್ವ ತಾಂಡವ ಮೂರ್ತಿಗಳಿವೆ. ಮಧ್ಯದಲ್ಲಿ ನಂದಿ ಮಂಟಪವಂತೂ ಬಹಳ ಕೆತ್ತನೆ ಕೆಲಸದಿಂದ ಕೂಡಿದ ಸ್ಥಂಭಗಳಿಂದ ಆಕರ್ಷಣೀಯವಾಗಿದೆ. ಮಧ್ಯೆ ನಂದಿಯಿದೆ. ಮಹಾದ್ವಾರದ ಎರಡೂ ಪಕ್ಕದಲ್ಲಿ ದ್ವಾರಪಾಲಕರ ಮೂರ್ತಿಗಳಿವೆ. ಮತ್ತೊಂದೆಡೆ ನವಗ್ರಹಗಳಿವೆ. ಸ್ವರ್ಣ ದ್ವಜ ಸ್ಥಂಭವಿದೆ. ಮೇಲ್ಗಡೆ ಆಕರ್ಷಕವಾಗಿ ರಂಗೋಲಿ ಹಾಕಿದಂತೆ ಪೇಯಿಂಟ್ ಮಾಡಿದ್ದಾರೆ.
 ಮದುರೈಗೆ ಬಹಳಷ್ಟು ವಿದೇಶೀಯರು ಬರುತ್ತಾರೆ. ಹೆಚ್ಚಿನ ವಿದೇಶೀ ಮಹಿಳೆಯರು ನಮ್ಮ ಭಾರತೀಯ ಉಡುಗೆ ತೊಟ್ಟು ಹಣೆಗೆ ತಿಲಕವಿಟ್ಟು ಹೂ ಮುಡಿದು ಅಪ್ಪಟ ಭಾರತೀಯರಂತೆ ಬರುತ್ತಾರೆ. ಕೈಯಲ್ಲಿ ಬೆಲೆಬಾಳುವ ಅತ್ಯಾಧುನಿಕ ಕ್ಯಾಮರಾ ಹಿಡಿದುಕೊಂಡು ಎಲ್ಲವನ್ನೂ ಬಹಳ ಕುತೂಹಲದಿಂದ ಫೋಟೋ ಹಿಡಿಯುತ್ತಾರೆ. ಇವರಿಗೆಲ್ಲಾ ಇಲ್ಲಿಯವರೆಗೆ ಮಾತ್ರ ಪ್ರವೇಶ, ಮುಂದೆ ಒಳಗಡೆ ಹೋಗುವಂತಿಲ್ಲ. ಒಳಗಡೆ ಯಾರಿಗೂ ಫೋಟೋ ತೆಗೆಯಲು ಅವಕಾಶವಿಲ್ಲ. ನಮ್ಮ ಕ್ಯಾಮರಾ ಬ್ಯಾಗು ಸೇರಿತು. ನಾವು ಆಲಯದ ಹೊರ ಸುತ್ತಿನಲ್ಲಿ ಒಂದು ಪ್ರದಕ್ಷಿಣೆ ಹಾಕಿ, ಒಳಗಡೆ ಹೋದೆವು. ಒಳಹೊಗುತಿದ್ದಂತೆ ಬಲ ಪಕ್ಕಕ್ಕೆ ನಟರಾಜನ ರಜತ ಮೂರ್ತಿಯಿದೆ, ಬಹಳ ಸುಂದರವಾಗಿದೆ. ಎದುರುಗಡೆ ಸುಂದರೆಶ್ವರನ ಲಿಂಗವಿದೆ. ಅಲ್ಲಿ ನಾವು ಶಿವಲಿಂಗಕ್ಕೆ ನಮಿಸಿ ದರ್ಶನ ಪಡೆದೆವು. ಜನಜಂಗುಳಿಯಿಲ್ಲವಾದ್ದರಿಂದ ಬಹಳ ಆರಾಮವಾಗಿ ದೇವರನ್ನು ಕಾಣುವಂತಾಯಿತು. ಪ್ರಸಾದ ಸ್ವೀಕರಿಸಿಕೊಂಡು ಹೊರಬಂದೆವು.
ಪಕ್ಕದಲ್ಲಿ ಮೀನಾಕ್ಷಿ ಅಮ್ಮನವರ ಆಲಯ. ಒಳಗಡೆ ಹೋಗುತಿದ್ದಂತೆ ಎದುರುಗಡೆ ಎತ್ತರದಲ್ಲಿ ಮೀನಾಕ್ಷಿ ದೇವಾಲಯ. ಸುತ್ತಲೂ ಸ್ಥಂಭಗಳಿಂದ ಅಲಂಕೃತವಾದ ಸುತ್ತಂಬಲವಿದೆ. ಇದರಲ್ಲಿ ಪ್ರದಕ್ಷಿಣೆ ಮಾಡಿ ಒಳಗೆ ಹೋದೆವು. ದೇವಿಯ ದರ್ಶನಕ್ಕಾಗಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ವಾತಾನುಕೂಲಿಯೂ ಇದೆ. ಇಲ್ಲಿಯೂ ನಾವು ಸರದಿಯಲ್ಲಿ ನಿಂತುಕೊಂಡು ಮೀನಾಕ್ಷಿ ಅಮ್ಮನವರ ದರ್ಶನ ಮಾಡಿದೆವು. ಬಹಳ ಸುಂದರ ವಿಗ್ರಹ. ಕೈಯಲ್ಲಿ ಹಸಿರು ಗಿಣಿಯನ್ನು ಹಿಡಿದಿರುವುದು ಇಲ್ಲಿಯ ವೈಶಿಷ್ಟ್ಯ. ದೇವಿಯ ಅರ್ಚನೆಯ ಸುಗಂಧಭರಿತ ಕುಂಕುಮ ಪ್ರಸಾದ ಪಡೆದುಕೊಂಡು ಸ್ವಲ್ಪಹೊತ್ತು ಕುಳಿತುಕೊಂಡು ಪ್ರಾರ್ಥಿಸಿಕೊಂಡೆವು. ಸುತ್ತಲೂ ಆಳ್ವಾರ್ ಗಳ ಮೂರ್ತಿಗಳಿವೆ. ಪರಿವಾರ ದೇವರ ಗುಡಿಗಳಿವೆ. ಇಲ್ಲಿ ಒಂದು ಬಹಳ ಸುಂದರವಾದ ಬೃಹತ್ ವಿನಾಯಕನ ಮೂರ್ತಿಯಿದೆ. ಇದರ ಕೆತ್ತನೆಯಂತೂ ಕಣ್ಮನ ಸೆಳೆಯುತ್ತದೆ.

ಹಾಗೇನೆ ಸುತ್ತಾಡಿಕೊಂಡು ಹೊರಬಂದಾಗ ನಮಗೆ ಟೆಂಪಲ್ ಮ್ಯೂಸಿಯಂ ಕಂಡಿತು. ಟಿಕೆಟ್ ಪಡಕೊಂಡು ಒಳ ಹೊಕ್ಕೆವು. ಬಹಳ ವಿಶಾಲವಾಗಿ, ತುಂಬಾ ಸ್ಥಂಭಗಳುಳ್ಳ ದೊಡ್ಡ ಮ್ಯೂಸಿಯಂ.
 ಎಲ್ಲಿ ನೋಡಿದರೂ ಸುಂದರವಾದ ಕಲ್ಲಿನ ಮೂರ್ತಿಗಳು, ಅದಕ್ಕೆ ಸರಿಯಾಗಿ ಫೋಕಸ್ ಮಾಡಿರುವ ಲೈಟ್ ಗಳ ಮಂದ ಪ್ರಾಕಾಶದಲ್ಲಿ ಇನ್ನೂ ಆಕರ್ಷಕವಾಗಿ ಕಾಣುತ್ತವೆ.
 ಮಧ್ಯೆ ನಟರಾಜನ ಸುಂದರ ಮೂರ್ತಿ. ಒಂದೆಡೆಯಲ್ಲಿ ವರ್ಣ ಚಿತ್ರಗಳ ಸಂಗ್ರಹ.
 ಭಿತ್ತಿ ಚಿತ್ರಗಳು ನೋಡಲು ಸುಂದರವಾಗಿವೆ. ಇನ್ನೊಂದೆಡೆ ಕಂಚಿನ ಪುರಾತನ ಮೂರ್ತಿಗಳನ್ನು ಗಾಜಿನ ಪೆಟ್ಟಿಗೆಯೊಳಗೆ ಇರಿಸಿದ್ದಾರೆ.
 ಎಲ್ಲವನ್ನೂ ಸರಿಯಾಗಿ ನೋಡಲು 2 ಘಂಟೆಗಳಾದರೂ ಬೇಕು. ಬಹಳ ಆಕರ್ಷಕವಾಗಿ ನೀಟಾಗಿ ಇರಿಸಿದ್ದಾರೆ.
ಇದನ್ನೆಲ್ಲಾ ನೋಡಿಕೊಂಡು ಹೊರ ಬಂದೆವು. ಘಂಟೆ 12. ಕಾಫಿ ಕುಡಿದು ಬಸ್ ಸ್ಟ್ಯಾಂಡಿಗೆ ಬಂದೆವು. ಅಲ್ಲಿ ಸ್ವಲ್ಪ ದ್ರಾಕ್ಷಿ, ಸೌತೆಕಾಯಿ ಕೊಂಡು, ಮಾರಿಯಮ್ಮನ್ ತೆಪ್ಪ ಕೊಳಕ್ಕೆ ಹೋಗುವ ಬಸ್ ಏರಿದೆವು. ಸುಮಾರು 3 ಕಿ.ಮಿ. ಅಷ್ಟೇ. ಅಲ್ಲಿ ಇಳಿದು ತೆಪ್ಪ ಕೊಳದ ಬಳಿಗೆ ಬಂದೆವು. ಬಹಳ ವಿಸ್ತಾರವಾದ ಕೊಳ.
 
ತುಂಬಾ ನೀರಿತ್ತು. ಮಧ್ಯೆ ಒಂದು ಕೃತಕ ದ್ವೀಪ. ಅದರಲ್ಲಿ ಒಂದು ದೇವಾಲಯದ ಮಾದರಿ ಕಟ್ಟಡ. ಕೆಲವು ಮರಗಳೂ ಇದ್ದು ಸುಂದರವಾಗಿತ್ತು. ಆದರೆ ಅಲ್ಲಿಗೆ ಹೋಗಲು ಯಾವ ಸೌಕರ್ಯವೂ ಇರಲಿಲ್ಲ. ಸುತ್ತಲೂ ಕೊಳಕ್ಕೆ  ಇಳಿಯಲು ಸೋಪಾನಗಳಿದ್ದವು. ಅಲ್ಲೇ ಕುಳಿತು ಸೌತೆಕಾಯಿ ತಿಂದೆವು. ದ್ರಾಕ್ಷಿ ಬಹಳ ಸಿಹಿಯಾಗಿತ್ತು. ಬಿಸಿಲಿನ ಬೇಗೆಗೆ ತುಂಬಾ ಹಿತವೆನಿಸಿತು. ನಂತರ ಅಲ್ಲೇ ಪಕ್ಕದಲ್ಲಿದ್ದ ಮಾರಿಯಮ್ಮನ್ ದೇವಸ್ಥಾನಕ್ಕೆ ಹೋದೆವು. ಪುಟ್ಟ ಗುಡಿ, ಅದಕ್ಕೆ ಇಷ್ಟು ದೊಡ್ಡ ಕೊಳ! ಆಶ್ಚರ್ಯವೆನಿಸಿತು. ಮಾರಿಯಮ್ಮನ ಜಾತ್ರೆಗೆ ಈ ಕೊಳದಲ್ಲಿ ತೆಪ್ಪೋತ್ಸವ ಮಾಡುತ್ತಾರಂತೆ.
ಮುಂದೆ ನಾವು ಅಲ್ಲಿಂದಲೇ ಬಸ್ ಹತ್ತಿಕೊಂಡು ಸುಮಾರು 7 ಕಿ.ಮಿ. ದೂರವಿರುವ ತಿರುಪುರಕುಂಡ್ರಂಗೆ ಬಂದೆವು. ಇಲ್ಲಿಯೂ ಒಂದು ದೊಡ್ಡ ದೇವಾಲಯವಿದೆ. ಹಿಂದುಗಡೆ ಎತ್ತರವಾದ ಬೆಟ್ಟ. ನಾವು ಅಲ್ಲಿ ತಲುಪಿದಾಗ ಬಾಗಿಲು ಮುಚ್ಚಿತ್ತು. ಸಂಜೆ 4 ಘಂಟೆಗೆ ದರ್ಶನ. ಹೊಟ್ಟೆ ಹಸಿದಿತ್ತು. ಒಂದು ಉಡುಪಿ ಹೋಟೆಲ್ ಸಿಕ್ಕಿತು. ಅಲ್ಲಿ ಊಟ ಮಾಡಿ ದೇವಾಲಯದ ಎದುರುಗಡೆ ಗೋಪುರದಲ್ಲಿ ಸ್ವಲ್ಪ ವಿಶ್ರಮಿಸಿದೆವು. ಸಮಯಕ್ಕೆ ಸರಿಯಾಗಿ ಬಾಗಿಲು ತೆರೆದರು, ಒಳಗೆ ಸಾಲಿನಲ್ಲಿ ಹೋದೆವು. ಮೊದಲಿಗೆ ಒಂದು ದೊಡ್ಡ ಕೊಳ, ಅಲ್ಲಿ ಕೈ ಕಾಲು ತೊಳೆದು ಒಳಗೆ ಹೋದೆವು. ಎತ್ತರದಲ್ಲಿ ಇರುವ ಕಾರಣ ಸ್ವಲ್ಪ ಮೆಟ್ಟಿಲು ಏರಬೇಕು. ಒಳಗಡೆ ಮುರುಗನ್ ದೇವರಲ್ಲದೆ ಇನ್ನೂ ಕೆಲವು ದೇವರ ವಿಗ್ರಹಗಳಿವೆ. ಎಲ್ಲಾ ದೇವರನ್ನು ಪ್ರಾರ್ಥಿಸಿಕೊಂಡು ಹೊರ ಬಂದಾಗ ನಮ್ಮ ಬಸ್ ಬಂದಿತು. ಅದನ್ನೇರಿ ಮದುರೈಗೆ ವಾಪಸು ಬಂದೆವು. ಮದುರೈ ಪೇಟೆ ಸುತ್ತಾಡಿದೆವು. ಸಣ್ಣ ಪುಟ್ಟ ಶಾಪಿಂಗ್ ಮಾಡಿದೆವು. ನಂತರ ಮಗದೊಮ್ಮೆ ಮೀನಾಕ್ಷಿ ಧರ್ಶನಕ್ಕೆ ಒಳಗೆ ಹೋದೆವು.
ನಮ್ಮ ಅದೃಷ್ಟಕ್ಕೆ ಈಗಲೂ ರಶ್ ಇರಲಿಲ್ಲ. ಸಾವಕಾಶವಾಗಿ ದೇವರನ್ನು ನೋಡಿಕೊಂಡು ಹೊರ ಬಂದು ಅಲ್ಲೇ ಕೊಳದ ಹತ್ತಿರ ಕುಳಿತು ಗೋಪುರಗಳನ್ನು ನೋಡುತ್ತಾ ಕುಳಿತೆವು.
ರಾತ್ರಿಯಾಯಿತು. ರೂಮಿಗೆ ಬರುವಾಗ ಹೊಟ್ಟೆ ತುಂಬಿಸಿಕೊಂಡು ಬಂದು ಸ್ನಾನ ಮಾಡಿ ಮಲಗಿಕೊಂಡೆವು. ಮರುದಿನ ಬೆಳಿಗ್ಗೆ 6 ಘಂಟೆಗೆ ರಾಮೇಶ್ವರಕ್ಕೆ ರೈಲಿನಲ್ಲಿ ನಮ್ಮ ಪ್ರಯಾಣ. ಈ ಯಾತ್ರೆಯನ್ನು ಮುಂದೆ ಬರೆಯುತ್ತೇನೆ.