Tuesday, 6 December 2011

Mekedaatu



ನಾವು ಅದೆಷ್ಟೋ ಜಾಗಗಳನ್ನು ನೋಡಿದ್ದೇವೆ, ಆದರೆ ಮೇಕೆದಾಟು ಮಾತ್ರ ನೋಡಿಲ್ಲವಲ್ಲಾ ಎಂದು ನಮ್ಮ  ಶ್ರುತಿ ಹೇಳಿದಾಗ, ಹೌದಲ್ಲಾ, ನಾವು ಇದನ್ನೇಕೆ ಮರೆತೆವು? ಎಂದುಕೊಂಡೆವು. ಆ ದಿನವೇ ಮೇಕೆದಾಟುಗೆ ಹೋಗುವ ದಿನ ಗೊತ್ತು ಮಾಡಿದೆವು. 2011 ಸೆಪ್ಟೆಂಬರ್ ತಿಂಗಳ ಒಂದು ರವಿವಾರ ನಾವು ಆರು ಜನ ಮಾರುತಿ ಕಾರ್ ನಲ್ಲಿ ಹೊರಟೆವು. ಬೆಂಗಳೂರಿನಿಂದ ಕನಕಪುರ ಸುಮಾರು 70 ಕಿ.ಮೀ. ಮತ್ತು ಕನಕಪುರದಿಂದ ಸಂಗಮಕ್ಕೆ 30ಕಿ.ಮೀ ದೂರವಿದೆ. ಬೆಂಗಳೂರಿಗೆ ಒಂದು ಸುತ್ತು ಹಾಕಿ ಅಂತೂ ಕನಕಪುರ ರಸ್ತೆಗೆ ಬಂದೆವು. ಅಷ್ಟರಲ್ಲಿ ನಮ್ಮ ಮಂಜು ಅವರೂ ಮೊಬೈಲ್ ನಲ್ಲಿ ನಮ್ಮನ್ನು ಸಂಪರ್ಕಿಸಿ ನೀವು ಎಲ್ಲಿದ್ದೀರಾ ನಾವೂ ಅಲ್ಲಿಗೇ ಬರುತಿದ್ದೇವೆ ಎಂದಾಗ ಎಲ್ಲರಿಗೂ ಖುಷಿ ಆಯಿತು. ಅವರಿಗೆ ನಾವಿದ್ದ ಲೋಕೇಶನ್ ಹೇಳಿ, ನಾವು ನಿಧಾನಕ್ಕೆ ಮುಂದೆ ಹೋಗುತ್ತಿರುತ್ತೇವೆ ನೀವು  ಬಂದು ನಮ್ಮನ್ನು ಸೇರಿಕೊಳ್ಳಿ ಎಂದೆವು. 
ನಾವು ಮುಂದೆ ಹೋಗಿ ಕನಕಪುರ ಸೇರಿದೆವು ಆದರೂ ಅವರ ಸುಳಿವಿಲ್ಲ. ಕನಕಪುರದಿಂದ ಎಡಗಡೆಗೆ ಹೋಗುವ ರಸ್ತೆ ಸಂಗಮ - ಮೇಕೆದಾಟು ಸೇರುತ್ತದೆ ಎಂದು ತಿಳಿದುಕೊಂಡು ನಾವು ಮುಂದುವರಿದೆವು. ದಾರಿಯುದ್ದಕ್ಕೂ ಏನೇನೋ ತಿಂಡಿ, ಬಿಸ್ಕತ್ತು, ಜ್ಯೂಸ್  ಎಲ್ಲ ಸೇವಿಸುತ್ತಾ ಮಜವಾಗಿ ಮುಂದೆ ಸಾಗುತಿದ್ದೆವು. ಕಾರ್ ನ ಹಿಂದಿನ ಸೀಟ್ ನಲ್ಲಿ ನಾಲ್ಕು ಜನ ಕುಳಿತಿದ್ದುದರಿಂದ ಅವರಿಗೆ ಸ್ವಲ್ಪ ಇಕ್ಕಟ್ಟು ಆಗಿದ್ದರೂ ಪ್ರಯಾಣದ ಉತ್ಸಾಹದಲ್ಲಿ ಅದನ್ನು ಮರೆತೇಬಿಟ್ಟಿದ್ದರು. ಇಷ್ಟು ಹೊತ್ತಾದರೂ ಮಂಜು ಅವರ ಕಾರು ಇನ್ನೂ ಬಂದಿಲ್ಲ. ಆದರೆ ಸ್ವಲ್ಪ ಹೊತ್ತಲ್ಲಿ ಅವರ ಫೋನ್ ಬಂತು. ಅವರು ನಾವು ಬಂದ ದಾರಿ ಬಿಟ್ಟು ರಾಮನಗರ ದಾರಿಯಾಗಿ ಬರುತ್ತಿದ್ದಾರೆ ಎಂತ ಹೇಳಿದರು. ಹಾಗಾಗಿ ನಾವು ಇನ್ನು ಸಂಗಮದಲ್ಲೇ ಜೊತೆಯಾಗೋಣ ಎಂತ ಹೇಳಿದೆವು. 
 ಸ್ವಲ್ಪ ದೂರ ಕ್ರಮಿಸಿದಾಗ ಎಡಗಡೆಗೆ ಹೋಗುವ ಒಂದು ರಸ್ತೆ ಚುಂಚಿ ಫಾಲ್ಸ್ ಗೆ ಹೋಗುತ್ತದೆ. ಸರಿ ಅದನ್ನು ನೋಡಿಯೇಬಿಡೋಣ ಎಂತ ಅದರಲ್ಲಿ ಸಾಗಿದೆವು.ಸುಮಾರು ದೂರ ಹೋದಾಗ ಯೆಲೆಗುರಿ ಹಳ್ಳಿ ಸಿಗುತ್ತದೆ. ಅದನ್ನು ದಾಟಿ ಮುಂದೆ ಹೊಗಬೇಕು. ಒಟ್ಟು 4 ಕಿ.ಮೀ . ಪ್ರಯಾಣಿಸಿದಾಗ ಒಂದು ಕಾರ್ ಪಾರ್ಕ್ ಸಿಗುತ್ತದೆ. ಕಾರು ನಿಲ್ಲಿಸಿದ್ದೆ ತಡ, ಒಬ್ಬಾಕೆ ಬಂದು 25 ರೂ. ಚೀಟಿ ಹರಿದೇ ಬಿಟ್ಟಳು. ಅದನ್ನು ತೆತ್ತು ಕಾರಿಂದ ಇಳಿದು ಇಲ್ಲಿ ಫಾಲ್ಸ್ ಎಲ್ಲಿದೆ ಎಂದರೆ ಬೆಟ್ಟದ ಕೆಳಗಡೆಗೆ ಕೈ ತೋರಿದಳು. ನಾವು ನಿಧಾನವಾಗಿ ಸ್ವಲ್ಪ ಕೆಳಗೆ ಇಳಿಯುವಷ್ಟರಲ್ಲಿ ಕೆಲವರು ಮೇಲೆ ಬರುತಿದ್ದರು. ಅವರಲ್ಲಿ ಕೇಳಿದರೆ ಇಲ್ಲಿ ಫಾಲ್ಸೂ ಇಲ್ಲ ಏನು ಇಲ್ಲ, ಅದೆಲ್ಲ ಮಳೆಗಾಲಕ್ಕೇನೆ ಕಾಣಸಿಗುವುದು ಎಂದರು. ಈವಾಗ ಅಲ್ಲಿ ಇಳಿದರೆ ಒಂದು ಹೊಂಡದಲ್ಲಿ ಸ್ವಲ್ಪ ನೀರಿದೆ ಅಷ್ಟೇ ಎಂದರು.

 ಈವಾಗ ಗೊತ್ತಾಯಿತು ಪಾರ್ಕಿಂಗ್ ಚಾರ್ಜು ತೆಗೆದುಕೊಳ್ಳಲು ಅವಳು ಯಾಕೆ ಅಷ್ಟು ಗಡಿಬಿಡಿ ಮಾಡಿದ್ದು ಎಂತ. ಅಂತೂ 8 ಕಿ.ಮೀ. ಪ್ರಯಾಣ,ಮೇಲೆ 25 ರೂ. ದಂಡ! ಸರಿಯಾಗಿ ಬೇಸ್ತು ಬಿದ್ದಿದ್ದೆವು. ಅಲ್ಲಿಂದ ಬೇಗನೇ ಹೊರಟೆವು. ಒಂದು ಅರ್ಧ ಕಿ.ಮೀ. ಬಂದಾಗ ನಮಲ್ಲಿ ಯಾರಿಗೋ ಒಂದು ಬೋರ್ಡ್ ಕಾಣಿಸಿತು. ನೋಡಿದರೆ ಅಲ್ಲಿ ಕಿರಿದಾದ ರಸ್ತೆ ಇದ್ದು, ಸಂಗಮಕ್ಕೆ ಹೋಗುತ್ತದೆ ಎಂತ ತಿಳಿದೆವು. ಪಕ್ಕದಲ್ಲೇ ಒಬ್ಬ ಕುರಿ ಮೇಯಿಸುತಿದ್ದವನೊಂದಿಗೆ, ಈ ರಸ್ತೆಯಲ್ಲಿ ಹೋದರೆ ಸಂಗಮ ತಲುಪುತ್ತೇವಾ ಎಂತ ಕೇಳಿದರೆ, ಓಯ್ತದೆ ಎಂಬ ಉತ್ತರ ಬಂತು. ಅದರಲ್ಲಿ ಸುಮಾರು 200 ಮೀಟರ್ ಹೋಗುವಷ್ಟರಲ್ಲೇ ದಾಮಾರು ಮಾರ್ಗ ಮುಗಿಯಿತು. ಮುಂದೆ ಮಣ್ಣಿನ ಹಾದಿ! ಮತ್ತೂ ಮುಂದೆ ಹೋದಾಗ ಬರೀ ಚಕ್ಕಡಿ, ಟ್ರಾಕ್ಟರ್ ಹೋಗೋ ಕಚ್ಚಾ ರಸ್ತೆ. ಅದರಲ್ಲೇ ಸಾಹಸ ಮಾಡುತ್ತಾ ಮುಂದುವರಿದೆವು.ಒಂದೆಡೆಯಲ್ಲಂತೂ ನಾನು ಕಾರ್ ಅನ್ನು ಹೊಲಕ್ಕೇ ಇಳಿಸಿ ಹೋಗಬೇಕಾಯಿತು. ರಸ್ತೆಯಲ್ಲಿ ಅಷ್ಟು ದೊಡ್ಡ ಗಾತ್ರದ ಹೊಂಡ!  ಕೊನೆಗೊಮ್ಮೆ ನಾವು ಮುಖ್ಯ ರಸ್ತೆಗೆ ಬಂದು ಸೇರಿದೆವು.
ಮುಂದೆ ನಮಗೆ ಘಾಟ್ ರಸ್ತೆ ಸಿಕ್ಕಿತು. ಇಳಿಜಾರು ಹಾಗೂ ತಿರುವುಗಳು, ಪಕ್ಕದಲ್ಲಿ ಕಾಡು. ಸುಮಾರು ದೂರ ಪ್ರಯಾಣಿಸಿ ನಾವು ಸಂಗಮಕ್ಕೆ ಬಂದು ತಲುಪಿದೆವು. ರಜಾದಿನ ಆದ್ದರಿಂದ ಕಾರು,ಬೈಕ್ ಗಳು ತುಂಬಿದ್ದವು. ಪಾರ್ಕಿಂಗ್ ಸುಲಭದಲ್ಲಿ ಸಿಗಲಿಲ್ಲ. ಅಂತೂ ಒಂದು ಪಕ್ಕದಲ್ಲಿ ಕಾರ್ ನಿಲ್ಲಿಸಿ ಪಾರ್ಕಿಂಗ್ ಚಾರ್ಜ್ 50ರೂ. ಕೊಟ್ಟು ನಮ್ಮ ನಮ್ಮ ಬ್ಯಾಕ್ ಪ್ಯಾಕ್ ಏರಿಸಿಕೊಂಡು ಹೊರಡುವಷ್ಟರಲ್ಲೇ ಮಂಜು ಅವರ ಕಾರ್ ಬಂದೇಬಿಟ್ಟಿತು. ಸರಿ ಪರಸ್ಪರ ಅನುಭವ ವಿನಿಮಯ ಮಾಡಿಕೊಂಡು ಮುಂದೆ ನಡೆದೆವು. 
ಅಕ್ಕ ಪಕ್ಕದಲ್ಲಿ ಗೂಡಂಗಡಿಗಳು, ಅದೇ ಮಾಮೂಲಿ ಭಜಿ, ಬೋಂಡ,ಬಾಳೆಹಣ್ಣು, ಸೌತೆಕಾಯಿ, ಫಾಂಟ,ಕೋಲಾ ಕಾಫಿ, ಟೀ ಎಲ್ಲ ಇದ್ದವು. ಜೋತೆಗೆನೇ ಫಿಶ್ ಫ್ರೈ ಸಹಾ ಧಾರಾಳವಾಗಿ ಇಟ್ಟಿದ್ದರು. ಸಂಗಮದಲ್ಲಿ ಮೀನು ಹಿಡಿದು ಅದನ್ನೇ ಇಲ್ಲಿ ಫ್ರೈ ಮಾಡುತ್ತಾರೆ. ಇದರಿಂದ ಹೊರಡುವ ಮತ್ಸ್ಯಗಂಧವು ಕೆಲವರನ್ನು ಅದರೆಡೆಗೆ  ಆಕರ್ಷಿಸಿದರೆ, ಕೆಲವರನ್ನು ಅಲ್ಲಿಂದ ಕಾಲ್ಕೀಳುವಂತೆ ಮಾಡುತ್ತದೆ. ಎಲ್ಲಿ ನೋಡಿದರೂ ಮೀನಿನ ಮುಳ್ಳು, ಅದಕ್ಕೆ ಎರಗುವ ಕಾಗೆಗಳು, ನಾಯಿಗಳು. ಅದನ್ನೆಲ್ಲ ದಾಟಿ ಸಂಗಮಕ್ಕೆ ಬಂದೆವು. ಅಲ್ಲೂ ಬೇಕಾದಷ್ಟು ಕಸ ಎಸೆದಿದ್ದಾರೆ.
ನದಿಯನ್ನು ದಾಟಲು ಹರಿಗೋಲುಗಳಿವೆ. ತಲಾ 50 ರೂ. ತೆತ್ತು ನಾವೆಲ್ಲಾ ಒಂದೇ ಹರಿಗೋಲಿನಲ್ಲಿ ಹತ್ತಿದೆವು.ಈ ಚಾರ್ಜು ಹೋಗಲು ಮತ್ತು ವಾಪಸ್ ಬರಲು ಸಹಾ ಸೇರಿದೆ. ಈ ಹರಿಗೂಲೆಂದರೆ  ಬಿದಿರು ಪ್ಲಾಸ್ಟಿಕ್ ಹಾಳೆ ಗೋಣಿತಾಟು ಮೊದಲಾದವುಗಳಿಂದ ಮಾಡಿದ ಒಂದು ಬುಟ್ಟಿಯಾಕಾರದ  ದೋಣಿ. ಕಾವೇರಿ ನದಿಯ ಪ್ರಸಿದ್ಧ ತಾಣಗಳಾದ ರಂಗನತಿಟ್ಟು, ನಿಮಿಷಾಂಬಾ, ತಲಕಾಡು ಮೊದಲಾದ ಕಡೆಗಳಲ್ಲೆಲ್ಲಾ ಈ ಹರಿಗೊಲನ್ನೇ ಕಾಣಬಹುದು. ಆ ದೊಡ್ಡ ಬುಟ್ಟಿಯಲ್ಲಿ ನಾವು 10ಜನರೂ ಹಿಡಿಸಿದೆವು.

 ಇಲ್ಲಿ ಕಾವೇರಿ ನದಿ ಮತ್ತು ಅರ್ಕಾವತಿ ನದಿಗಳು ಒಟ್ಟು ಸೇರುವ ಸಂಗಮ ಸ್ಥಳ. ನದಿ ಸುಮಾರು 150 ಮೀಟರ್ ಅಗಲವಿದೆ. ಹರಿಗೋಲು ನಿಧಾನವಾಗಿ ಮುಂದೆ ಸಾಗಿ ಮಧ್ಯ ನೀರಿನಲ್ಲೇ ನಿಂತುಬಿಟ್ಟಿತು. ಅಲ್ಲಿಯವರೆಗೆ ಮಾತ್ರ ಅದು ಹೋಗುವುದಂತೆ. ಯಾಕೆಂದರೆ ಕೆಳಗಡೆ ಹೂಳು ತುಂಬಿದ್ದರಿಂದ ಅದರ ತಳಭಾಗವು ಅದಕ್ಕೆ ತಗಲಿ ಮುಂದುವರಿಯಲು ಆಗುವುದಿಲ್ಲ ಎಂದ ನಮ್ಮ ಅಂಬಿಗ . ಒಬ್ಬೊಬ್ಬರಾಗಿ ತಮ್ಮ ಬಟ್ಟೆಯನ್ನು, ಪ್ಯಾಂಟ್ ಅನ್ನು ಮೊಳಕಾಲಿನವರೆಗೆ ಮಡಚಿ ನೀರಿಗೆ ಇಳಿದು ನದಿ ದಾಟಿದೆವು. ನಿಜವಾಗಿ ಇದೇ ಒಳ್ಳೆಯ ಮಜಾ ಆಯಿತು.
ದಡ ಸೇರಿ ಒಂದು ಕಡೆ ಕುಳಿತು ತಿಂಡಿ ತಿನ್ನ ಬೇಕು ಎಂತ ಒಳ್ಳೆಯ ಪ್ರಶಸ್ಥ ಜಾಗ ಹುಡುಕಿದೆವು. ಎಲ್ಲಿ ನೋಡಿದರೂ ಕಸ, ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು, ಪೇಪರ್ ಪ್ಲೇಟ್ ಗಳು, ಇನ್ನಿತರ ಆಹಾರ ತ್ಯಾಜ್ಯ ಗಳು. ಇಷ್ಟೆಲ್ಲಾ ಕಸ ಇದ್ದರೂ ಒಂದೇ ಒಂದು ಕಸದ ಡಬ್ಬಿ ಇಲ್ಲ! ನದಿಯ ದಂಡೆಯಲ್ಲಿ ಕಲ್ಲು ಬಂಡೆಗಳಿವೆ ಅಲ್ಲಿಯಾದರೂ ಕುಳಿತುಕೊಳ್ಳೋಣವೆಂದರೆ ಅಲ್ಲೂ ವಾಸನೆ, ಗಲೀಜು, ತ್ಯಜಿಸಿರುವ ಬಟ್ಟೆಗಳು, ಒಳ ಉಡುಪುಗಳು. ಅಲ್ಲೊಂದು ಮಂಟಪ ಕಾಣಿಸಿತು. ಅಲ್ಲಿಗೆ ಹೋದರೆ ಅಲ್ಲೂ ಇದೇ ವೈಭವ.

 ಸಾಲದ್ದಕ್ಕೆ ಕೋತಿಗಳ ಕಾಟ. ಸುತ್ತಲೂ ಕಾಡು ಇದ್ದುದರಿಂದ ಕೋತಿಗಳು ಸಹಜ ಬಿಡಿ. ಒಂದು ಘಡವ ಬಂದು  ನಮ್ಮ ಚೀಲದಿಂದ ಕೈ ಹಾಕಿ ಒಂದು ಸೇಬು ಹಣ್ಣನ್ನು ಎಗರಿಸಿಯೇಬಿಟ್ಟಿತು.ಎಷ್ಟೆಂದರೂ ನಮ್ಮ ಪೂರ್ವಜನಲ್ಲವೇ ಅದರ ಪಾಲು ದಕ್ಕಿಸಿಕೊಂಡಿತು ಎಂದುಕೊಂಡೆವು. ನಾವು ಹೊಟ್ಟೆ ತುಂಬಿಸಿಕೊಂಡೆವು.
ಇಲ್ಲಿಂದ ಮೇಕೆದಾಟುಗೆ ಸುಮಾರು 4ಕಿ.ಮೀ. ಯಷ್ಟು ಕಾಡು ದಾರಿ. ಕಾಡು ಅಷ್ಟೊಂದು ದಟ್ಟವಾಗಿ ಇಲ್ಲವಾದರೂ ನೋಡಲು ಸುಂದರವಾಗಿತ್ತು. ಬಲ ಪಕ್ಕದಲ್ಲಿ ಕಾವೇರಿ ರಭಸದಿಂದ ಹರಿಯುತ್ತಿದ್ದಾಳೆ. ಅಲ್ಲೆಲ್ಲಾ ನೀರಿಗೆ ಇಳಿಯುವುದು ಬಹಳ ಅಪಾಯಕಾರಿ. ಮೇಕೆದಾಟು ಗೆ ನಡೆದೇ ಹೋಗಬಹುದು. ಇಲ್ಲವಾದರೆ ಆಗಾಗ ಅಲ್ಲಿಗೇನೇ ಬರುವ ಬಸ್ ನಲ್ಲಿ ಹೋಗಬಹುದು. ನಾವು ಬಸ್ ಹತ್ತಿದೆವು. ಎರಡೂ ಕಡೆಯ ಚಾರ್ಜು ಒಟ್ಟು 40 ರೂ. ಇಲ್ಲಿ ಬಸ್ ನ ಟಾಪ್ ನ ಮೇಲೆಲ್ಲಾ ಕುಳಿತು ಹೋಗುತ್ತಾರೆ. ಬಸ್ ಮುಂದೆ ಸಾಗಿ ಮೇಕೆದಾಟು ಗೆ ಬಂತು . ಅಲ್ಲಿ ಇಳಿದು ಕೆಲ ಹೆಜ್ಜೆ ಹಾಕಿದರೆ ಮೆಕೆದಾಟುವಿನ ರುದ್ರ ರಮಣೀಯ ದೃಶ್ಯ ಕಾಣುತ್ತದೆ. ಅಲ್ಲಿ ನಾವು ಕಡಿದಾದ ಬಂಡೆಯ ಪಕ್ಕದಲ್ಲಿ ಜಾಗರೂಕರಾಗಿ ಕೆಳಗೆ ಇಳಿಯಬೇಕು.

 ಕೆಳಗಿನಿಂದ ಮೇಲೇರುವವರಿಗೂ  ಕಷ್ಟದಲ್ಲಿ ಜಾಗಬಿಡಬೇಕು. ಕೆಳಗೆ ಇಳಿದಾಕ್ಷಣ ಸ್ವಲ್ಪ ಜಾಗ  ಮರಳು, ಆಮೇಲೆ ಬಂಡೆ, ಇದರ ಮೇಲೆ ಹತ್ತುವುದು ಕಷ್ಟವೇನಿಲ್ಲ. ಮುಂದೆ ಹೋದರೆ ಅದೇ ಬಂಡೆ ಕಡಿದಾಗಿ ಸುಮಾರು  60ಅಡಿ ಆಳದಲ್ಲಿ ಕಾವೇರಿ ಹರಿಯುತಿದ್ದಾಳೆ. ಆವಾಗಿನ ರೂಪವೇ ಬೇರೆ ಈಗಿನ ರೌದ್ರ ರೂಪವೇ ಬೇರೆ. ಅಬ್ಭಾ ಏನು ರಭಸ!

 ನಾವು ನಿಂತಲ್ಲಿಂದ ಎದುರುಗಡೆ ಕಡಿದಾದ ಗೋಡೆಯಂತೆ ಬಂಡೆ ಇದೆ. ಸುಮಾರು 150 ಅಡಿ ಎತ್ತರವಿದೆ. ಈ ಕಡೆಯಿಂದ ಆ ಬದಿಗೆ ಸುಮಾರು 100 ಅಡಿಗಳ ಫಾಸಲೆಯಿದೆ. ಮೇಕೆ ಅದ್ಹೇಗೆ ಅಷ್ಟು ದೂರಕ್ಕೆ ನೆಗೆಯಿತೋ ಊಹಿಸಲಾಗುತ್ತಿಲ್ಲ. ಕಲ್ಪನೆಯಿರಬಹುದು. ಅಲ್ಲೊಂದು ಕಡೆ ಬಂಡೆಯು ಕಾರ್ನೀಸಿನಂತೆ ಸುಮಾರು 7-8ಅಡಿ  ಮುಂದಕ್ಕೆ ಚಾಚಿದೆ. ಬಹುಷಃ ಇದೇ ಕಾರ್ನೀಸ್ ಒಂದಾನೊಂದು ಕಾಲದಲ್ಲಿ ಇನ್ನು ಹೆಚ್ಚು ಉದ್ದಕ್ಕೆ ಚಾಚಿರಬಹುದಾದ ಸಾಧ್ಯತೆ ಇದ್ದಿರಬಹುದು. ಅಲ್ಲಿಂದ ಮೇಕೆ ಜಿಗಿದಿರಬಹುದು. ಕ್ರಮೇಣ ಕಾಲನ ಹೊಡೆತಕ್ಕೆ ಬಂಡೆ ಕುಸಿದಿರಲೂಬಹುದು. ಇದೆಲ್ಲ, ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಯೂ ಖಂಡಿತವಾಗಿಯೂ ಯೋಚಿಸುತ್ತಿರಬಹುದಾದ ವಿಷಯ.

 ಆದರೆ ಒಂದಂತೂ ನಿಜ ಇಲ್ಲಿ ಜಿಗಿದದ್ದು ಮೆಕೆಯೇ ಸರಿ, ಹಸು, ಜಿಂಕೆ, ಕುರಿ, ಹುಲಿ,ತೋಳ ಅಥವಾ ಇನ್ನಿತರ ಯಾವುದೇ ಪ್ರಾಣಿಯಲ್ಲ. ಯಾಕೆಂದರೆ ಇದು ಮೇಕೆದಾಟು!!
ಇಲ್ಲಿ ಸೋಜಿಗವೆಂದರೆ ನಾವು ನಿಂತಿರುವ ಬಂಡೆಯಲ್ಲೇ ಒಂದು ದೊಡ್ಡ ಭಾವಿಯಾಕಾರದ ಹೊಂಡವಿದೆ. ಇದು ಸುಮಾರು 20 ಅಡಿ ಆಳವಿದ್ದು ತಳ ಭಾಗದಲ್ಲಿ ನೀರು ಒಳ ಬರುವಂತೆ ಒಂದು ಬಾಯಿ ಇದೆ. ಇದು ನಿಸರ್ಗ ನಿರ್ಮಿತ.

 ನೀರು ಹರಿವಲ್ಲಿ, ಎದುರುಗಡೆ ಬಂಡೆಯಲ್ಲಿ ಎಲ್ಲ ನೀರಿನ ಹರಿಯುವಿಕೆಯಿಂದಾಗಿ ಸವಕಳಿಯಾಗಿ ಚಿತ್ರ ವಿಚಿತ್ರ ಆಕೃತಿ ಗಳು, ಗವಿಗಳು. ಕೊರಕಲುಗಳು ಉಂಟಾಗಿವೆ. ಆದರೆ ಇಲ್ಲಿ ನೀರಿಗೆ ಇಳಿಯಲು ದಾರಿಯಿಲ್ಲ. ಸಾಹಸ ಮಾಡಿ ಇಳಿಯಬಹುದಾದರೂ  ಬಹಳ ಅಪಾಯಕಾರಿ. ನೀರಲ್ಲಿ ಕೊಚ್ಚಿ ಹೋದರೆ ಆಮೇಲೆ ಶವಕ್ಕಾಗಿ ತಮಿಳುನಾಡಿಗೆ ಹೋಗಬೇಕಾಗಬಹುದು. 
ಇಲ್ಲಿನ ಬಂಡೆಯ ಮೇಲೆ ಸಹಾ ತುಂಬಾ ಎಚ್ಚರಿಕೆ ಬೇಕು. ಅದರಲ್ಲೂ ಹೈ ಹೀಲ್ಡ್ ಚಪ್ಪಲ್ ಧರಿಸಿರುವ ಹೆಮ್ಮಕ್ಕಳು. ನುಣುಪಾದ ಬಂಡೆ ಅಷ್ಟು ಜಾರುತ್ತದೆ,  ಇಲ್ಲಿ ಕೂಡ ಮೀನಿನ ಮುಳ್ಳು, ಬೀರು ಬಾಟಲಿ ಒಡೆದು ತಮ್ಮ ಸಂಸ್ಕೃತಿ ಮೆರೆದಿದ್ದಾರೆ. ನಾವು ತುಂಬಾ ಹೊತ್ತು ಇಲ್ಲಿದ್ದು ಫೋಟೋ ಹಿಡಿದು ನಂತರ ಮೇಲ್ಗಡೆ ಬಂದೆವು.














 ಬಸ್ ರೆಡಿ ಇತ್ತು. ಸಂಗಮಕ್ಕೆ ಬಂದು ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ಖುಷಿ ಪಟ್ಟೆವು. ಇಲ್ಲಿ ಬಹಳ ಎಚ್ಚರವಿರಬೇಕು. ಎರಡು ನದಿಗಳ ಸಂಗಮವಾದ್ದರಿಂದ ನೀರಿನಲ್ಲಿ ಸುಳಿಗಳು ಸಹಜ. ಇತ್ತೀಚೆಗೆ ಒಂದೇ ಕುಟುಂಬದ 4 ಜನ ನೀರು ಪಾಲು ಆದದ್ದು ಇಲ್ಲೇ. ನಂತರ ಹರಿಗೋಲು ಪಯಣ, ಅಲ್ಲಿ ಬೇರೇನೂ ನೋಡಲು ಇಲ್ಲವಾದ್ದರಿಂದ ಬೇಗನೇ ಹೊರಟೆವು.
 ಬರುತ್ತಾ ದಾರಿಯಲ್ಲಿ ಪಿರಾಮಿಡ್ ವ್ಯಾಲಿ ಸಿಗುತ್ತದೆ. ಅಲ್ಲಿಗೆ ಭೇಟಿ ಕೊಟ್ಟೆವು. ಬಹಳ ಚೆನ್ನಾಗಿರುವ ಜಾಗ. ಸುತ್ತಲೂ ಹೂದೋಟ, ಪ್ರಶಾಂತ ವಾತಾವರಣ, ಮಧ್ಯದಲ್ಲಿ ಬೃಹದಾಕಾರದ ಪಿರಮಿಡ್ ನಿರ್ಮಿಸಿದ್ದಾರೆ. ಅದರ ಒಳಗಡೆ ಕುಳಿತು ಧ್ಯಾನ ಮಾಡಬಹುದು. ಅಲ್ಲಿ ಏನೋ ಒಂದು ವಿಚಿತ್ರ ಅನುಭವವಾಗುತ್ತದೆ. ಅಲ್ಲಿಂದ ಹೊರಟು ರಾತ್ರಿ ಬೆಂಗಳೂರಿಗೆ ಬಂದೆವು.


Wednesday, 21 September 2011

ಬಿಸಿಲೆಯ ವೈಭವ


 ಮಂಗಳೂರಿನಿಂದ ಬೆಂಗಳೂರು ಪ್ರಯಾಣ ಎಂದರೆ, ಇದರಲ್ಲೇನಿದೆ ಮಹಾ ವಿಶೇಷ ಅಂತ ಮುಖ ತಿರುಗಿಸಬೇಡಿ. ಇದು ಕಷ್ಟಕರವಾದ ಮಾಮೂಲಿ ಬಸ್ ಪ್ರಯಾಣವಲ್ಲ. ನಮ್ಮ ಪ್ರಯಾಣ ರೈಲಿನಲ್ಲಿ! ಹಗಲು ಹೊತ್ತು ಸಂಚರಿಸುವ ರೈಲಿನಲ್ಲಿ, ಅದೂ ಮಳೆಗಾಲದಲ್ಲಿ!  ಈ ಪ್ರಯಾಣದ ಮಜಾ ಸಿಗಬೇಕಾದರೆ ಮಳೆಗಾಲವೇ ಸೂಕ್ತ ಸಮಯ.
ನಾವು ಆಗಸ್ಟ್ 18 ರಂದು ಬೆಳಗ್ಗೆ ಕಾಸರಗೋಡಿನಿಂದ ಬಸ್ ನಲ್ಲಿ  ಮಂಗಳೂರಿಗೆ ಬಂದೆವು. ಅಲ್ಲಿಂದ 8.40ಕ್ಕೆ ಹೊರಡುವ ಬೆಂಗಳೂರು ಎಕ್ಸ್ಪ್ ಪ್ರೆಸ್ ರೈಲ್ ಹತ್ತಿದೆವು. ವಿಶೇಷ ರಶ್ ಇರಲಿಲ್ಲ. ನಮಗೆ ಬೇಕಾದ ಅನುಕೂಲಕರ ಸೀಟ್ ಆಯ್ಕೆ ಮಾಡಿ ಆರಾಮವಾಗಿ ಕುಳಿತೆವು. ಸಮಯಕ್ಕೆ ಸರಿಯಾಗಿ ರೈಲ್ ಹೊರಟಿತು. ಮೊದಲಿಗೆ ಕಂಕನಾಡಿ ಜಂಕ್ಷನ್ ಬಂತು, ಆಮೇಲೆ ಬಂಟವಾಳ, ಕಬಕ ಪುತ್ತೂರು ಕಳೆದು ಸುಬ್ರಹ್ಮಣ್ಯ ರೋಡ್ ಸ್ಟೇಷನ್ ನಲ್ಲಿ ರೈಲು ನಿಂತಿತು.


ರೈಲ್ ನಲ್ಲಿ ಚಹಾ, ಕಾಪಿ, ಇಡ್ಲಿ, ವಡೆ ಮತ್ತು ಇತರ ತಿನಸುಗಳನ್ನು ಮಾರುವವರು 5 ನಿಮಿಷಕ್ಕೊಮ್ಮೆ ಬರುತ್ತಿರುತ್ತಾರೆ. ಚಾಯ್-ಚಾಯ್ -ಚಾಯೇ ಮತ್ತು ಕಪಿ -ಕಪಿ - ಕಾಪೀಗಳನ್ನು ಕೇಳಿ ಕೇಳಿ ಸುಸ್ತಾಗುತ್ತೇವೆ. ಈ ಚಹಾ ಕಾಫಿಗಳ ರುಚಿ ಮಾತ್ರ ನಮ್ಮಿಂದ ಗುರುತಿಸಲು ಆಗುವುದೇ ಇಲ್ಲ. ಭಾರತದ ಯಾವ ಮೂಲೆಗಾದರೂ ರೈಲಿನಲ್ಲಿ  ಪ್ರಯಾಣಿಸಿದರೂ  ಏಕ ರುಚಿಯುಳ್ಳ ಈ ಪಾನೀಯ ಸಿಗುತ್ತದೆ. ಅನೇಕತೆಯಲ್ಲಿ ಏಕತೆಯನ್ನು ನಾವು ಈ ರೈಲಿನ ಪಾನೀಯದಲ್ಲಿ ಕಂಡುಕೊಳ್ಳಬಹುದು. ಅತ್ತ ಚಹಾವೂ ಅಲ್ಲ ಇತ್ತ ಕಾಫಿಯೂ ಅಲ್ಲ.  ಚುರು ಮುರಿ ಮಾರುವವನಾದರೋ ತನ್ನ ದೊಡ್ಡ ಮೂಟೆಯೊಂದಿಗೆ ಅತ್ತಿತ್ತ ಸರಿದಾಡುವಾಗ ಹಳಸಲು ಈರುಳ್ಳಿಯ ಗಬ್ಬು, ಕುಳಿತವರಿಗೆ ಉಚಿತವಾಗಿ ದೊರೆಯುವಂತೆ ಮಾಡುತಿದ್ದ. ಇದರೆಡೆಯಲ್ಲಿ ನಮ್ಮ ಬೆಳಗ್ಗಿನ ಉಪಾಹಾರ ಸಣ್ಣ ನಿದ್ದೆ ಎಲ್ಲಾ ಆಯಿತು. ಅಲ್ಲಲ್ಲಿ ತುಂತುರು ಮಳೆ ಹಿತಕರವಾದ ವಾತಾವರಣ ನಿರ್ಮಿಸಿತ್ತು. 


ಎಲ್ಲೆಡೆ ಬತ್ತದ ಗದ್ದೆಗಳಲ್ಲಿ ನಾಟಿಯ ಕೆಲಸ ನಡೆಯುತ್ತಿತ್ತು, ಎಳೆ ಹಸಿರು ಬಣ್ಣದ ನಾಟಿ ಮಾಡಿದ ಗದ್ದೆಗಳು ಚಳಿಗೆ ಹಸಿರು ಹಾಸನ್ನು ಹೊದ್ದುಕೊಂಡು ಸೋಮಾರಿಯಾಗಿ ಇನ್ನೂ ಮಲಗಿಕೊಂಡಂತಿತ್ತು. ತೆಂಗಿನ, ಕಂಗಿನ ತೋಟಗಳು ಮಳೆಯಲ್ಲಿ ಮಿಂದು ನಳ ನಳಿಸುತಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಜೀವ ನಾಡಿ ನೇತ್ರಾವತಿ ನದಿಯೂ ತುಂಬಿ ಹರಿಯುತ್ತಿತ್ತು.
ಸುಬ್ರಹ್ಮಣ್ಯ ದೇವರ ದರ್ಶನ ಮಾಡಿಕೊಂಡು ಹಿಂತಿರುಗುವ ಬಹಳ ಜನ ಇಲ್ಲಿಂದ ರೈಲು ಏರುತ್ತಾರೆ. ಈ ಸ್ಟೇಷನ್ ನಿಂದ ಸುಬ್ರಹ್ಮಣ್ಯ ದೇವಾಲಯ ಸುಮಾರು 10 ಕಿ.ಮೀ ದೂರದಲ್ಲಿದೆ. ಬೇಕಾದಷ್ಟು ವಾಹನಗಳು ಲಭ್ಯವಿದೆ. ಇಲ್ಲಿ ನಮ್ಮ ರೈಲ್ ಗೆ ಇನ್ನೊಂದು ಎಂಜಿನ್ ಜೋಡಿಸುತ್ತಾರೆ. ಮುಂದೆ ಸಿಗಲಿದೆ ಘಾಟಿ! ಏರು ದಾರಿ, ಕಡಿದಾದ ಪ್ರಪಾತ,  ಅಸಂಖ್ಯಾತ ತಿರುವುಗಳು, ಸೇತುವೆಗಳು ಮತ್ತು ಪ್ರಮುಖ ಆಕರ್ಷಣೆಯಾದ ರೈಲು ಸುರಂಗಗಳು! ಇಲ್ಲಿ ಒಟ್ಟಾರೆ 58 ಸುರಂಗಗಳಿವೆ. ಸುಮಾರು ಅಷ್ಟೇ ಸೇತುವೆಗಳೂ ಇವೆ.
ಈ ಪ್ರಯಾಣದ ರೋಮಾಂಚಕ ಅನುಭವ ಇನ್ನು ಮುಂದೆ ಬರಲಿದೆ. 2 ಎಂಜಿನ್ ಗಳ ನಮ್ಮ ಗಾಡಿ ನಿಧಾನವಾಗಿ ಮುಂದೆ ಹೋಗಲಾರಂಭಿಸಿತು. ಮುಂದೆ ಸಿಗುವ ತಿರುವುಗಳು ಎಷ್ಟು ಕಡಿದಾದ್ದರೆಂದರೆ ನಮಗೆ ರೈಲಿನ ಮುಂಭಾಗ ಹಾಗೂ ಹಿಂಭಾಗಗಳು ಕುಳಿತಲ್ಲಿಂದಲೇ ಕಾಣುತಿತ್ತು.


ಈವಾಗ ಪ್ರಕೃತಿ ತನ್ನ ಇನ್ನೊಂದು ರೂಪವನ್ನು ತೋರಲು ಆರಂಬಿಸಿತು. ಕಾಡು ರೈಲು ಮಾರ್ಗದ ಎರಡೂ ಪಕ್ಕದಲ್ಲಿ ಹಬ್ಬಿಕೊಂಡಿತ್ತು. ಅಲ್ಲಲ್ಲಿ ಪುಟ್ಟ ಜಲಪಾತಗಳೂ ತೊರೆಗಳೂ ನಿಸರ್ಗದ ಬೆಡಗನ್ನು ಹೆಚ್ಚಿಸುತ್ತಿತ್ತು.


ಇದು ಪಶ್ಚಿಮ ಘಟ್ಟದ ಪ್ರಖ್ಯಾತ ಬಿಸಿಲೆ ಕಾಡು.ಸುಳ್ಯ ದಿಂದ ಸಕಲೇಶಪುರದ ವರೆಗೆ ಹಬ್ಬಿರುವ ಬಿಸಿಲೆ ಕಾಡು ಬಹಳ ವೈವಿದ್ಯಮಯ ಪ್ರಾಣಿ ಪಕ್ಷಿ, ಮರ ಮಟ್ಟುಗಳಿಂದ ಕೂಡಿದ್ದಾಗಿದೆ. ಬೆತ್ತದ ಬಳ್ಳಿಗಳಂತೂ ಹೇರಳವಾಗಿವೆ.ಅಂತೆಯೇ ಬಿದಿರ ಮೆಳೆಗಳು ಧಾರಾಳವಾಗಿವೆ.

ಇದು ಆನೆಗಳ ಪ್ರಿಯ ತಾಣ. ಶಿರಾಡಿ ಘಾಟಿಯಲ್ಲಿ ಬಸ್ ಪ್ರಯಾಣದಲ್ಲೂ ಈ ಕಾಡನ್ನು ನೋಡಬಹುದಾದರೂ ರೈಲು ಪ್ರಯಾಣದಲ್ಲಿ ಇನ್ನೂ ಹೆಚ್ಚು ಸುಂದರ, ಆಕರ್ಷಕವಾಗಿ ಕಾಣುತ್ತದೆ.



ಇಷ್ಟರಲ್ಲೇ ಶಿರಿಬಾಗಿಲು ಸ್ಟೇಷನ್ ಬಂತು. ಇಲ್ಲಿ ರೈಲು ನಿಲ್ಲುವುದಿಲ್ಲ. ಇನ್ನು ಮುಂದೆ ಶುರು ಸುರಂಗ-ಸೇತುವೆಗಳ ಜುಗಲ್ ಬಂದಿ! 
ರೈಲ್ ನಲ್ಲಿದ್ದ ಯುವಕರು ಬಾಗಿಲ ಬಳಿ ಕುಳಿತುಕೊಂಡರೆ ಯುವತಿಯರೂ ಅವರನ್ನು ಸೇರಿಕೊಂಡರು. ಕ್ಯಾಮರಾ, ಮೊಬೈಲ್ ಗಳಲ್ಲಿ ಫೋಟೋ ಹಿಡಿದದ್ದೇ ಹಿಡಿದದ್ದು. ದೊಡ್ಡವರೂ ಇದರಲ್ಲಿ ಭಾಗಿಯಾಗಿದ್ದರು. ನಾನು ಸಹಾ. ಅಷ್ಟು ಸುಂದರ ದೃಶ್ಯಾವಳಿ. ಕಾಡನ್ನು ಸೀಳಿಕೊಂಡು ರೈಲು ಕೆಲವು ಸೇತುವೆಗಳನ್ನು ದಾಟಿತು.



ಅಗೋ ಮೊದಲ ಸುರಂಗ! ಸಾಕಷ್ಟು ಉದ್ದವಾಗಿತ್ತು. ಒಮ್ಮೆಲೆ ಪಡ್ಡೆಗಳ ಕಿರುಚಾಟ, ಶಿಳ್ಳೆ, ಕೇಕೆ ಎಲ್ಲಾ  ಮೇಳೈಸಿದವು. ಸುರಂಗ ಪ್ರಯಾಣಕ್ಕೆ ಸ್ವಯೋಜಿತ ಹಿಮ್ಮೇಳ! ಓಟ್ಟು ಮಜಾ ಆಯಿತು. ಈ ಸೌಭಾಗ್ಯ ಪೂರಾ 58 ಸುರಂಗ ದಾಟುವವರೆಗೂ ನಮಗೆ ಲಭಿಸಿತ್ತು. ಕೆಲವು ಸುರಂಗಗಳಂತೂ 2ಕಿ.ಮೀ.ಗೂ ಹೆಚ್ಚು ಉದ್ದವಿತ್ತು. ಜೋರಾಗಿ ಮಳೆ ಸುರಿಯುತಿತ್ತು, ಸುರಂಗ ದಾಟಿ ಆಕಡೆ ಒಳ್ಳೆಯ ಬಿಸಿಲು!



ಸೇತುವೆಯ ಮೇಲೆ ರೈಲು ಹೋಗುತ್ತಿರುವಾಗ ಕೆಳಗಡೆ ಸುಮಾರು 150 ಅಡಿ ಆಳದಲ್ಲಿ ಕೆಂಪು ಹೊಳೆ ಹರಿಯುತ್ತಿತ್ತು.



 ಮುಂದೆ ಇದೇ ಹೊಳೆ ನೇತ್ರಾವತಿ ನದಿಯಾಗಿ ರೂಪುಗೊಳ್ಳುತ್ತದೆ. ಎಡಕುಮೇರಿ ಹತ್ತಿರ ಬಂದಂತೆಲ್ಲಾ ದೂರದ ಪರ್ವತಗಳು ಮಂಜಿನ ತೆರೆ ಮುಸುಕಿಕೊಂಡು ಸ್ವರ್ಗ ಸಮಾನ ದೃಶ್ಯಾವಳಿಯನ್ನು ನಮಗೆ ಪುಕ್ಕಟೆಯಾಗಿ ನೀಡುತಿದ್ದವು.



ಎಡಗಡೆ ಪರ್ವತಮಾಲೆಯ ಸೊಬಗಾದರೆ ಬಲಗಡೆ ದಟ್ಟವಾದ, ಕಡಿದಾದ ಕಾಡು. ಮಳೆಗಾಲದಲ್ಲಿ ಅಷ್ಟೆತ್ತರದಿಂದ ಧುಮುಕುವ ಜಲಪಾತಗಳು!









 ಯಾವುದನ್ನು ನೋಡುವುದು ಯಾವುದನ್ನು ಬಿಡುವುದು ಎಂಬ ಗೊಂದಲವಾಗುತ್ತದೆ. ಈ ಮಾರ್ಗದಲ್ಲಿ ಅತೀ ಸುಂದರ ತಾಣವೆಂದರೆ ಎಡಕುಮೇರಿ ಸ್ಟೇಷನ್ ನ ಅಕ್ಕಪಕ್ಕ. ಇಲ್ಲಿ ರೈಲು ನಿಲ್ಲುವುದಿಲ್ಲ.



ಆದರೆ ಕೆಲವೊಮ್ಮೆ ಸಿಗ್ನಲ್ ತೊಂದರೆಯಿಂದಾಗಿ ಸ್ವಲ್ಪ ಹೊತ್ತು ನಿಲ್ಲುವುದೂ ಇದೆ. ಈ ಜಾಗಗಳೆಲ್ಲಾ ನನಗೆ ಚಿರಪರಿಚಿತ, ಎರಡು ಬಾರಿ ಇಲ್ಲೆಲ್ಲಾ ಚಾರಣ ಮಾಡಿ ಅನುಭವವಿದೆ. ಇಲ್ಲಿ ಕಾಡಲ್ಲಿ ರಾತ್ರಿ ಕಳೆದದ್ದೂ ಒಂದು ರೋಮಾಂಚಕ ನೆನಪು. ನಾವು ಅಂದು ರಾತ್ರಿ ಕ್ಯಾಂಪ್ ಮಾಡಿದ ಜಾಗವನ್ನೂ ಕಸ್ತೂರಿಗೆ ತೋರಿಸಿದೆ.



ಇಲ್ಲಿನ ಅರಮನೆ ಬೆಟ್ಟ, ಅದರ ಎದುರುಗಡೆಯ ದೋಣಿಗಲ್ ಬೆಟ್ಟಗಳು ಚಾರಣಕ್ಕೆ ಉತ್ತಮ ತಾಣಗಳು. ವರ್ಷ ಪೂರ್ತಿ ಇಲ್ಲಿ ನೀರು ಇರುವುದರಿಂದ ಬಹಳ ಅನುಕೂಲವಾಗಿದೆ. ಆದರೆ ಇಲ್ಲಿ ಕಾಡಾನೆ ಗಳೂ ಸಾಕಷ್ಟಿವೆ. ಎಚ್ಚರದಿಂದಿರಬೇಕು.
ಎಡಕುಮೇರಿಯನ್ನು ಹಾದು ರೈಲು ಇನ್ನೂ ಹಲವಾರು ಸುರಂಗ-ಸೇತುವೆ ದಾಟಿ ದೋಣಿಗಲ್ ಸ್ಟೇಷನ್ ಕಳೆದ ಕೂಡಲೇ ಪಕ್ಕದಲ್ಲಿ ಒಂದು ಸುಂದರ ಜಲಪಾತ ಕಾಣುತ್ತದೆ. ಇದು ರೈಲ್ ನ ಎಡಭಾಗಕ್ಕಿದೆ. ಎಷ್ಟು ಸಮೀಪವೆಂದರೆ ಅದರ ನೀರು ಕೈಗೆ ಎಟಕುವಂತಿದೆ. ಮುಂದೆ ಸಕಲೇಶಪುರ. ಅಲ್ಲಿ ಒಂದು ಎಂಜಿನ್ ಕಳಚುತ್ತಾರೆ. ಮುಂದೆ ಬಯಲು ಸೀಮೆ.
ಹಾಸನ-ಅರಸೀಕೆರೆ- ತುಮಕೂರು ಮಾರ್ಗವಾಗಿ ಬಯಲು ಸೀಮೆಯ ಸೊಬಗನ್ನು ತೋರುತ್ತಾ ಯಶವಂತಪುರವನ್ನು 7.20ಕ್ಕೆ ತಲುಪಿದೆವು. ಅಲ್ಲಿಂದ ಮನೆಗೆ.
ಆರಾಮವಾದ ಪ್ರಯಾಣ. ಟಿಕೆಟ್ ಚಾರ್ಜ್ ಕೇವಲ 102 ರು. ಹಿರಿಯ ನಾಗರಿಕರಾದರೆ ಇನ್ನೂ ಕಡಿಮೆ. ನೀವೂ ಒಮ್ಮೆ ಅನುಭವಿಸಿ ನೋಡಿ.


Monday, 25 July 2011

Trekking at Aavani


 ಆವಣಿಯ ಕುರಿತಾದ ಒಂದು ಲೇಖನವನ್ನು ಹಿಂದೆ ಬರೆದಿದ್ದೆ. ಅದರ ಕೊನೆಯಲ್ಲಿ ಇನ್ನೊಂದು ಸಲ ಈ ಬೆಟ್ಟದಲ್ಲಿ ಒಂದು ರಾತ್ರಿ ಕಳೆಯಬೇಕು ಎಂದು ನಿಶ್ಚಯಿಸಿದ್ದೆವು. ಮನಸಲ್ಲಿ ಅದೇ ಗುಂಗು. ನಮ್ಮ ಚಾರಣ ತಂಡದೊಂದಿಗೆ ಅದರ ಬಗ್ಗೆ ಹೇಳಿದಾಗ ಎಲ್ಲರೂ ತಯಾರು ಎಂದರು. ತಂಡಕ್ಕೆ ಹೊಸಬರೂ ಸೇರಿಕೊಂಡರು. ಒಟ್ಟು 15 ಜನರು 3 ಕಾರಿನಲ್ಲಿ ಹೋಗುವುದೆಂದಾಯಿತು. ಮೊನ್ನೆ ಜೂನ್ 18,19 ಶನಿವಾರ-ರವಿವಾರದಂದು ಎಲ್ಲಾ ತಯಾರಿಗಳೊಂದಿಗೆ ಹೊರಟೇ ಬಿಟ್ಟೆವು. ಕಸ್ತೂರಿ, ರವಿ, ಕಿರಣ, ಶ್ರುತಿ ಮತ್ತು ನಾನು ಒಂದು ಕಾರಿನಲ್ಲಾದರೆ ವಿಶು, ಪಲ್ಲವಿ, ವೀಣಾ, ಆಚಾರ್ ಭಾವ ಮತ್ತು ಅಶ್ವಿನ್ ಇನ್ನೊಂದರಲ್ಲಿ. ಮುರಳಿ, ಯಮುನಾ, ನಾಗಪ್ಪಯ್ಯ, ನಿಶಾ ಹಾಗೂ ಅರವಿಂದ ಮತ್ತೊಂದು ಕಾರಲ್ಲಿ ಬಂದು ಕೆ.ಅರ್.ಪುರಂನಲ್ಲಿ ನಮ್ಮನ್ನು ಕೂಡಿಕೊಂಡರು. ಅಲ್ಲಿಂದ ಮುಂದೆ ನಮ್ಮ ಗಮ್ಯ ಕೈವಾರಕ್ಕೆ. ಕುಷಿಯಿಂದ ಮಾತಾಡುತ್ತಾ ಸಾಗುತಿದ್ದಂತೆ ಕೈವಾರಕ್ಕೆ ಬೆಳಗ್ಗೆ 10 ಘಂಟೆಗೆ ತಲುಪಿದೆವು.


ಮೊದಲಿಗೆ ಕೈವಾರ ತಾತಯ್ಯನವರ ಮಂದಿರ ನೋಡಿದೆವು. ಬಹಳ ಸುಂದರ ಪ್ರಶಾಂತ ಪರಿಸರ. ನಂತರ ಹತ್ತಿರವೇ ಇರುವ ಅಮರನಾರಾಯಣ ದೇವಾಲಯ ಮತ್ತು  ಭೀಮೇಶ್ವರ ದೇಗುಲಕ್ಕೆ ಹೋದೆವು. 

 ದರ್ಶನವಾದಮೇಲೆ ಯೋಗಿ ನಾರೇಯಣರ ಗುಹೆ ನೋಡಲು ಹೋದೆವು. ಹೊಲ ಬೆಟ್ಟಗಳ ಮಧ್ಯೆ ಇರುವ ಮಾರ್ಗದಲ್ಲಿ ನಡೆದೇ ಹೋದೆವು. ಅಕ್ಕ ಪಕ್ಕದ ಹೊಲಗಳಲ್ಲಿ ಟೊಮೆಟೋ ಮತ್ತು ಅವರೆಕಾಯಿ ಬೆಳೆದಿದ್ದರು. ನಾವೂ ಸ್ವಲ್ಪ ಕಿತ್ತು ತಿಂದೆವು.


ಗುಹೆ ಮತ್ತು ಇತರ ಮಂದಿರಗಳನ್ನು ನೋಡಿಕೊಂಡು ಕೈವಾರಕ್ಕೆ ಬಂದು ಪ್ರಸಾದ ಭೋಜನ ಮಾಡಿದೆವು. ಬಹಳ ಆದರದಿಂದ ನಮಗೆ ಊಟ ಬಡಿಸಿದ್ದರು. ಬಹಳ ಚೆನ್ನಾಗಿತ್ತು ಊಟ. ಅಲ್ಲಿಂದ ಮಧ್ಯಾಹ್ನ 2 ಘಂಟೆಗೆ ಆವಣಿಯತ್ತ ಪಯಣ. ಕೈವಾರದಿಂದ H  ಕ್ರಾಸ್ ಗೆ ಬಂದು ಅಲ್ಲಿಂದ ಕೋಲಾರ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಮುಳಬಾಗಿಲಿಗೆ 10 ಕಿ.ಮೀ ಮೊದಲೇ ಬಲಕ್ಕೆ ತಿರುಗಿ 12 ಕಿ.ಮೀ. ಹೋದರೆ ಆವಣಿ ತಲುಪುತ್ತೇವೆ. ರಸ್ತೆ ಚೆನ್ನಾಗಿದೆ. 


 ದೂರದಿದಲೇ ಆವಣಿ ಬೆಟ್ಟ ನಮ್ಮನ್ನು ಕೈ ಬೀಸಿ ಕರೆಯುತಿತ್ತು. ಬೆಟ್ಟದ ಬುಡಕ್ಕೆ ತಲಪುವಾಗ ಸಾಯಂಕಾಲ 4 ಘಂಟೆ. ಪಕ್ಕದಲ್ಲೇ ಇರುವ ಮನೆಯಯವರೊಡನೆ ವಿಜ್ನಾಪಿಸಿಕೊಂಡು ನಮ್ಮ ಮೂರೂ ಕಾರುಗಳನ್ನು ಅವರ ಸುಪರ್ದಿಯಲ್ಲಿ ಬಿಟ್ಟೆವು. ನೀವೇನೂ ಯೋಚನೆ ಮಾಡಬೇಡಿ ಕಾರನ್ನು ಜಾಗ್ರತೆಯಾಗಿ ನೋಡಿಕೊಳ್ಳುತ್ತೇವೆ ಎಂಬ ಆಶ್ವಾಸನೆ ದೊರಕಿತು. ಸಂತೋಷವಾಗಿ ಹೋಗಿಬನ್ನಿ ಎಂದು ಹಾರೈಸಿದರು.

ನಮ್ಮ ಸರಕು ಸರಂಜಾಮುಗಳನ್ನು ಹೊತ್ತುಕೊಂಡು ಬೆಟ್ಟ ಏರಲು ಆರಂಬಿಸಿದೆವು. ಎಲ್ಲರ ಕೈಯಲ್ಲೂ ನೀರಿನ ಬಾಟಲಿಗಳು. ಯಾಕೆಂದರೆ ಮೇಲೆ ಕುಡಿಯುವ ನೀರು ಸಿಗುವುದಿಲ್ಲ. ಅಲ್ಲಲ್ಲಿ ನಿಂತು ದಣಿವಾರಿಸುತ್ತಾ ಮೇಲೇರಿದೆವು.






ಅರವಿಂದ, ನಿಶಾ ಮತ್ತು  ಶ್ರುತಿಯರನ್ನು ಕಿಚಾಯಿಸುತ್ತಲೇ ಇದ್ದ. ನಮ್ಮನ್ನು ಹಿಂಬಾಲಿಸುತ್ತಾ ಒಂದು ನಾಯಿ ಬರುತ್ತಾ ಇತ್ತು. ಶ್ರುತಿ ಮತ್ತು ನಿಶಾ ಅದರೊಡನೆ ಗೆಳೆತನವನ್ನೂ ಮಾಡಿಬಿಟ್ಟಿದ್ದರು. ಎಷ್ಟು ಹೇಳಿದರೂ ಅದು ಹಿಂದಕ್ಕೆ ಹೋಗಲೇ ಇಲ್ಲ. ಸರಿ, ಬಂದರೆ ಬರುತ್ತದೆ, ಅದಕ್ಕೆ ಬೋರ್ ಆದಾಗ ವಾಪಸು ಹೋಗಬಹುದು ಎಂದಿದ್ದೆವು. ಇಲ್ಲ ಅದು ಇವತ್ತು ನಮ್ಮನ್ನು ಮೇಲಿನವರೆಗೆ ತಲುಪಿಸಿಯೇ ಸಿದ್ಧ ಎಂಬಂತಿತ್ತು. ಈ ರೀತಿ ನಾಯಿ ಮನುಷ್ಯರನ್ನು ಹಿಂಬಾಲಿಸುವುದು ಮಹಾಭಾರತ ಕಾಲದಲ್ಲೇ ಇತ್ತು. ಪಾಂಡವರ ಸ್ವರ್ಗಾರೋಹಣ ಕಾಲದಲ್ಲಿ ಅವರನ್ನು ನಾಯಿಯೊಂದು ಹಿಂಬಾಲಿಸಿತ್ತು ಎಂದು ತಿಳಿದಿದೆ.  ಅದೇ ಒಂದು ಚಟವಾಗಿ ಮುಂದೆ ಅನುವಂಶಿಕವಾಗಿ ನಾಯಿಗಳಿಗೆ ಬಂದಿರಬೇಕು!  ಈಗಾಗಲೇ ಅದಕ್ಕೆ ಜಿಮ್ಮಿ ಎಂಬ ನಾಮಕರಣವೂ ಆಗಿತ್ತು. ಬಾಲ ಅಲ್ಲಾಡಿಸುತ್ತಾ ನಮ್ಮ ಹಿಂದೆ ಮುಂದೆ ಅಡ್ಡಾಡುತಿತ್ತು. ಎರಡು ನೀರಿನ ಬಾಟಲಿಗಳನ್ನು ಅದರ ಕತ್ತಿಗೆ ನೇತು ಹಾಕಿದರೆ ನಮ್ಮ ಭಾರ ಸ್ವಲ್ಪ ಕಮ್ಮಿ ಆಗಬಹುದೇನೋ ಎಂಬ ಯೋಚನೆ ಬಂದಿತ್ತು.


ಬೆಟ್ಟದ ಒಂದು ಮಜಲನ್ನು ತಲುಪಿದೆವು. ಅಲ್ಲಿ ದೊಡ್ಡದೊಂದು ಬಂಡೆ ಮುಂದೆ ಚಾಚಿಕೊಂಡಿತ್ತು. ಅಲ್ಲಿ ಸ್ವಲ್ಪ ಕುಳಿತೆವು. ಎದುರುಗಡೆ ಒಂದರ ಮೇಲೆ ಒಂದು ಪೇರಿಸಿಟ್ಟ ಬಂಡೆಗಳು. ತುತ್ತ ತುದಿಯಲ್ಲ್ಲಿ ಚೌಕಾಕಾರದ ಒಂದು ಬಂಡೆ. ಇದನ್ನು ನಾವು ಸೀತಾ ದೇವಿಯ ಸಾಬೂನು! ಎಂದು ಕರೆದೆವು.


ಮುಂದೆ ಸ್ವಲ್ಪ ವಿಶಾಲ ಜಾಗ, ಅಲ್ಲೇ ವಾಲ್ಮೀಕಿ ಆಶ್ರಮವಿದೆ. ಲವ-ಕುಶರ ಜನ್ಮ ಇಲ್ಲೇ ಆಯಿತಂತೆ.' ವಾಲ್ಮೀಕಿ ಮೆಟರ್ನಿಟಿ ಹೋಂ ' ಎಂದೆ ನಾನು. ಪಕ್ಕದಲ್ಲೇ ಪಾಂಡವರು ಪ್ರತಿಷ್ಟಿಸಿದ ಪಂಚಲಿಂಗಗಳ ಗುಡಿ. ಒಳಗೆ ಹೋಗಿ ಅಲ್ಲಿ ಸ್ವಲ್ಪ ಸ್ವಚ್ಛ ಮಾಡಿ ಒಂದು ಬಾಟಲಿ ನೀರಿನಿಂದ ರುದ್ರಾಭಿಷೇಕ ಮಾಡಿದೆವು. ಇಲ್ಲಿ ಶಿವನಿಗೆ ನಮ್ಮಂತಹ ಯಾತ್ರಿಕರಿಂದಲೇ ಪೂಜೆ ಅಷ್ಟೇ.



ಮುಂದೆ ಒಂದು ಬಾಗಿಲುವಾಡವಿತ್ತು. ಅಲ್ಲಿ ತಂಪಾದ ಗಾಳಿ ಬೀಸುತಿತ್ತು. ಮುಂದೆ ಏಕಾಂತ ರಾಮೇಶ್ವರನ ಗುಡಿ. ಅಲ್ಲಿಂದ ಮುಂದೆ ಸ್ವಲ್ಪ ಏರಿದಾಗ ಲಕ್ಷ್ಮಣ ತೀರ್ಥ ಸಿಗುತ್ತದೆ. ಇದನ್ನು ಧನುಷ್ಕೋಟಿ  ಎನ್ನುತ್ತಾರೆ. ಪಕ್ಕದಲ್ಲೇ ದೊಡ್ಡ ಗುಂಡಗಾದ ಬಂಡೆ ಇದೆ. ಅಲ್ಲಿ ಕುಳಿತು ನಾವು ಗಂಟು ಬಿಚ್ಚಿದೆವು.




ಎಲ್ಲರೂ ಸೇರಿ ಉತ್ಸಾಹದಿಂದ ಭೇಲ್ ಪುರಿ ಮಾಡಿ ತಿಂದೆವು. ಪ್ರಥಮ ಬಾರಿಗೆ ಚಾರಣ ಬಂದವರಿಗೆ ಇದನ್ನು ಮಾಡುವ ಅವಕಾಶ ದೊರೆಯಿತು. ಬಹಳ ರುಚಿಕರವಾಗಿತ್ತು. ಜೊತೆಗೆ ಕುಡಿಯಲು ಫಾಂಟ ಸಹಾ ಇತ್ತು. ಆಯಾಸವೆಲ್ಲಾ ಮಾಯ!




ಮುಂದೆ ಹೋದಂತೆ ಒಂದು ದೊಡ್ಡ ಕೊಳ ಇದೆ, ನೀರು ಮಾತ್ರ ಪಾಚಿಕಟ್ಟಿಕೊಂಡು ಹಸಿರು ಕಾರ್ಪೆಟ್ ನಂತೆ ತೋರುತಿತ್ತು. ಮಳೆ ಬಂದು ನೀರು ತುಂಬಿದರೆ ಈಜು, ಡೈವ್ ಹೊಡೆಯಬಹುದಿತ್ತು. ಎಂದು ಈಜು ಬಾರದ, ಅರವಿಂದ ಸಲಹೆ ನೀಡಿದ. ಮುಂದುವರಿದಂತೆ ಏರು ಶುರುವಾಗುತ್ತದೆ. ಮೆಟ್ಟಿಲುಗಳನ್ನು ಮಾಡಿದ್ದಾರೆ.



ಅದರಲ್ಲಿ ಏರುತ್ತಾ ಅಂತೂ ನಮ್ಮ ಗಮ್ಯ ಸ್ಥಾನವಾದ ಸೀತಾ ಪಾರ್ವತಿ ದೇವಾಲಯವನ್ನು ತಲುಪಿದೆವು. ಎಲ್ಲರಿಗೂ ಬಹಳ ಸುಸ್ತಾಗಿದ್ದರೂ ಅಲ್ಲಿ ಭರ್ರನೆ ಬೀಸುವ ಗಾಳಿಯಿಂದಾಗಿ ಉಲ್ಲಾಸವಾಯಿತು.



ಮೊದಲು ಒಂದು ಚಹಾ ಬೇಕು ಎಂದು ನಾಗಪ್ಪಯ್ಯ ಭಾವನ ಬೇಡಿಕೆ. ಕೂಡಲೇ ಚಹಾ ಪ್ರವೀಣ ಮುರಳಿ ಕಾರ್ಯೋನ್ಮುಖನಾದ. ನಮ್ಮ ಗ್ಯಾಸ್ ಸ್ಟೋವ್ ಹೊರಬಂತು. ಆದರೆ ಅದನ್ನು ಉರಿಸಲು ಗಾಳಿ,ಬಿಡಲಿಲ್ಲ. ಎಲ್ಲಿಯಾದರೂ ಗಾಳಿಯಿಂದ ರಕ್ಷಣೆಯಿರುವ ಜಾಗವಿದೆಯೋ ಎಂದು ಅಶ್ವಿನ್ ಮತ್ತು ಆಚಾರ್ ಭಾವ ಹುಡುಕಾಡಿದರು. ಕೊನೆಗೆ ದೇವಾಲಯದ ಒಂದು ಪಕ್ಕದಲ್ಲಿ ನೀರು ತುಂಬಿಸಲು ಕಟ್ಟಿರುವ ಸಿಮೆಂಟ್ ಟ್ಯಾಂಕ್ ಕಂಡಿತು. ಅದರೊಳಗೆ ಗ್ಯಾಸ್ ಸ್ಟೋವ್ ಇರಿಸಿದರೆ ಏನೂ ತೊಂದರೆ ಬರಲಾರದು ಎಂದು, ಅದೇ ನಮ್ಮ ಇಂದಿನ ಅಡಿಗೆ ಮನೆ ಎಂದು ನಿಶ್ಚಯಿಸಿದೆವು.



ಸ್ವಲ್ಪಹೊತ್ತಲ್ಲಿ ಚಹಾ ತಯಾರಾಯಿತು. ಸಕ್ಕರೆ ಜಾಸ್ತಿ ಹಾಕಿದ್ದು, ಕಮ್ಮಿ ಹಾಕಿದ್ದು, ಸಕ್ಕರೆ ಇಲ್ಲದ್ದು ಎಂದು ವೆರೈಟಿ ಚಹಾ ಎಲ್ಲರೂ  ಕುಡಿದದ್ದಾಯಿತು. ಜೊತೆಗೆ ಶ್ರುತಿ, ಪಲ್ಲವಿಯಿಂದ ಬಿಸ್ಕತ್ತು ಹಂಚಿಕೆ.
ಅಷ್ಟರಲ್ಲೇ ರಾಮ ಬಂಟನಾದ ಕೋತಿಯೊಂದು ಕುತೂಹಲದಿಂದ ಬಂತು. ಕೂಡಲೇ ಜಿಮ್ಮಿ ಅದನ್ನು ದೂರ ಓಡಿಸಿತು. ನಾಯಿಯಿದ್ದದ್ದು ಸಾರ್ಥಕವಾಯಿತು. ಆ ಮೇಲೆ ಇನ್ನೂ 3-4 ಕೋತಿಗಳು ಬಂದವಾದರೂ ಜಿಮ್ಮಿ ಅವುಗಳನ್ನು ಹತ್ತಿರ ಬರಗೊಡಲಿಲ್ಲ. ದೇವಾಲಯದ ಎದುರುಗಡೆ ಸುಮಾರು 50/30 ಅಡಿಗಳಷ್ಟು ವಿಶಾಲ ಜಾಗ, ಅದಕ್ಕೆ ಸಿಮೆಂಟ್ ಹಾಕಿದ್ದಾರೆ. ಸುತ್ತಲೂ ಕಬ್ಬಿಣದ ಪೈಪ್ ನಿಂದ ಆವರಣ ಮಾಡಿದ್ದಾರೆ. ಅಲ್ಲಿಂದ ಕೆಳಗಡೆ ಸ್ವಲ್ಪ ಪ್ರಪಾತ. ಸುತ್ತಲಿನ ಹಳ್ಳಿಗಳು, ಹೊಲ ಗದ್ದೆಗಳು ದೂರದ ಬೆಟ್ಟಗಳೆಲ್ಲಾ ಸುಂದರವಾಗಿ ಕಾಣುತ್ತದೆ.



ಹಿಂದುಗಡೆ ಅಲ್ಲಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಜಾಗ. ನಾವು ಅಲ್ಲೆಲ್ಲ ಸುತ್ತಾಡಿದೆವು. ಅಲ್ಲಿ ಬೆಟ್ಟದ ಅಂಚಿನಲ್ಲಿ ದೊಡ್ಡ ಗೊಳಾಕೃತಿಯ ಹೆಬ್ಬಂಡೆ. ಅದಕ್ಕೆ ಉರುಳು ಬಂಡೆ ಎಂದು ಹೆಸರು. ವಿಶೇಷವೆಂದರೆ ಅದರ ಕೆಳಗಡೆ ಸುಮಾರು 2 ಅಡಿಗಳಷ್ಟು ಎತ್ತರದ ಸಂದಿಯಿದೆ. ಇದರಲ್ಲಿ ಅಂಗಾತ ಮಲಗಿಕೊಂಡು ನಿಧಾನವಾಗಿ ಉರುಳುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆ ಬರಬಹುದು. ಕಡಿಮೆಯೆಂದರೂ 20 ಉರುಳನ್ನು ಹಾಕಬೇಕಾಗುತ್ತದೆ. ಮನಸಲ್ಲಿ ಏನಾದರೂ ನೆನೆದು ಈ ರೀತಿ ಉರುಳುಸೇವೆ ಮಾಡಿದರೆ ಅದು ನೆರವೇರುತ್ತದಂತೆ. ಮೊದಲಿಗೆ ಅರವಿಂದ ಮತ್ತು ನನ್ನ ಸರದಿ. ಆಮೇಲೆ ನಮ್ಮ ಹೆಚ್ಚಿನವರು ಉರುಳುಸೇವೆ ಮಾಡಿದರು. ಕಿರಣನಿಗೆ ಒಂದು ಸಲ ಸಾಕಾಗಲಿಲ್ಲ. 3 ಸಲ ಉರುಳಿದಳು. ಬೇಡವೆಂದು ಹೇಳುತಿದ್ದ ಆಚಾರ್ ಭಾವ, ನಾಗಪ್ಪಯ್ಯ, ಯಮುನಾ ಮತ್ತು ರವಿ ಸಹಾ ಉರುಳಿದರು.  ಅಲ್ಲಿಗೂ ಬಂದಿದ್ದ ಕೋತಿಗಳು ನಾವೇನು ಮಾಡುತ್ತಿದ್ದೆವು ಎಂತ ಕುತೂಹಲದಿಂದ ನೋಡುತ್ತಿದ್ದವು. ಪಲ್ಲವಿ ವೀಡಿಯೊ ರೆಕಾರ್ಡ್ ಮಾಡುತಿದ್ದಳು. ಕತ್ತಲಾಗುತ್ತಾ ಬಂತು. ಸೂರ್ಯ ಮುಳುಗಿದ. ನಾವೂ ದೇವಾಲಯದತ್ತ ಹಿಂತಿರುಗಿದೆವು. ನಮ್ಮ ಸರಕುಗಳನ್ನು ಕೋತಿಗಳಿಂದ ರಕ್ಷಿಸಲು ವಿಶು ಮತ್ತು ಅಶ್ವಿನ್, ಜಿಮ್ಮಿಯ ಜೊತೆಯಲ್ಲಿ ಕಾವಲಿದ್ದರು.
ಇನ್ನು ರಾತ್ರಿಯ ಊಟವಾಗಬೇಕಲ್ಲಾ, ಅದರ ತಯಾರಿಗೆ ತೊಡಗಿದೆವು. ಇದರಲ್ಲಿ ನಮ್ಮ ಹೆಂಗಸರ ಪಾಲಿಲ್ಲ. ನಾವೇ ಎಲ್ಲಾ ಮಾಡುತ್ತೇವೆ, ನಮ್ಮ ಸಿಕ್ರೆಟ್ ರೆಸಿಪಿ ಇದೆ ಎಂದು ಅವರನ್ನು ದೂರವಿರಿಸಿದೆವು. ನಾನು, ಮುರಳಿ, ಅಶ್ವಿನ್ ಮತ್ತು ಅರವಿಂದ ಇದರ ಮುಖ್ಯ ಅಡಿಗೆಯವರು.



ಮೊದಲು ಬೀನ್ಸ್, ಟೊಮೆಟೋ, ಈರುಳ್ಳಿ ಧಾರಾಳ ಕೊಚ್ಚಿದೆವು. ಜೊತೆಗೆ ಮೆಣಸಿನಕಾಯಿ, ತೆಂಗಿನ ತುರಿ, ಗರಂ ಮಸಾಲ, ಅರಸಿನ ಪುಡಿ, ಪುಳಿಯೋಗರೆ ಪುಡಿ, ಬೆಲ್ಲ, ಉಪ್ಪು, ಸ್ವಲ್ಪ ಎಣ್ಣೆ ಮತ್ತು ಕಾಳು ಮೆಣಸು ಕುಟ್ಟಿ ಪುಡಿಮಾಡಿ ಪಾತ್ರೆಗೆ ನೀರು ಹಾಕಿ ಬೇಯಲು ಬಿಟ್ಟೆವು. ನಂತರ ಅದಕ್ಕೆ ಅಕ್ಕಿ ಹಾಕಿ ಬೇಯಿಸಿದೆವು. 15 ಜನರೂ ಮತ್ತು ಜಿಮ್ಮಿಗೆ ಬೇಕಾಗುವಷ್ಟು ಹುಗ್ಗಿ ಆಗಬೇಕಲ್ಲಾ. ಅದು ಬೇಯಲು ಸುಮಾರು ಹೊತ್ತು ಬೇಕಾಯಿತು.
ಅಷ್ಟರಲ್ಲಿ ಶ್ರುತಿಗೆ ಕ್ಯಾಂಪ್ ಫಯರ್ ಬೇಕೇ ಬೇಕು ಎಂಬ ಒತ್ತಾಸೆ. ಅಲ್ಲಿನ ಅಷ್ಟು ರಭಸದ ಗಾಳಿಗೆ ಹೇಗೆ ಬೆಂಕಿ ಹಚ್ಚುವುದು ಎಂಬ ಚಿಂತೆ ಎಲ್ಲರಿಗೂ. ನೋಡೋಣ ಎಲ್ಲಾದರೂ ಗಾಳಿ ಕಡಿಮೆಯಿರುವ ಜಾಗವಿದೆಯೋ ಎಂದು ನಾವೆಲ್ಲಾ ಟಾರ್ಚ್ ಹಿಡಿದು ಸರ್ವೆ ಮಾಡಿದೆವು. ಅದೃಷ್ಟಕ್ಕೆ ಬಂಡೆಯ ಹಿಂಭಾಗದಲ್ಲಿ ಆಯಕಟ್ಟಿನ ಒಂದು ಜಾಗ ಸಿಕ್ಕಿತು. ಅಲ್ಲಿ ಎಲ್ಲರಿಗೂ ಕುಳಿತುಕೊಳ್ಳಲು ಬಯಲು ರಂಗಮಂದಿರದಂತಿರುವ ಜಾಗ ಸಿಕ್ಕಿತು.



ಅಲ್ಲಿ ಒಣ ಟೊಂಗೆಗಳು ದೊರೆತವು. ಸುತ್ತಲೂ, ಹಿಂದೆ ಜಾತ್ರೆ ಸಮಯದಲ್ಲಿ ಒಡೆದ ತೆಂಗಿನಕಾಯಿಯ ಚಿಪ್ಪುಗಳ ಚೂರುಗಳು ಧಾರಾಳವಾಗಿ ಹರಡಿದ್ದವು. ಕಸ್ತೂರಿ, ವೀಣನ ನೇತೃತ್ವದಲ್ಲಿ ಶ್ರುತಿ, ನಿಶಾ ಎಲ್ಲರೂ ಸೇರಿ ಅವುಗಳನ್ನು ಓಟ್ಟು ಮಾಡಿ ತಂದರು. ಮೊದಲಿಗೆ ಬೆಂಕಿ ಹಚ್ಚಲು ಕಷ್ಟವಾಯಿತಾದರೂ ಆಮೇಲೆ ವಿಜಯಿಯಾದೆವು. ಸಣ್ಣ ಉರಿ ಕ್ರಮೇಣ ದೊಡ್ಡದಾಯಿತು. ಮುರಳಿಯೂ ಉತ್ಸಾಹದಿಂದ ಮಂತ್ರ ಹೇಳುತ್ತಾ ಹೋಮ ಮಾಡಿದ.



ಸುತ್ತಲೂ ಕತ್ತಲೆ, ಚಳಿಗಾಳಿ, ಬೆಟ್ಟದ ಮೇಲೆ ನಾವು ಮಾತ್ರ. ದೂರದಲ್ಲಿ  ಕೆಳಗಿನ ಊರಿನ ದೀಪಗಳ ಬೆಳಕು, ಆಗಸದಲ್ಲಿ ಮಿನುಗುವ ನಕ್ಷತ್ರಗಳು, ಆಗತಾನೆ ಮೂಡಿ ಬಂದ ಚಂದಿರ! ವಾಹ್ ಇದೇ ಮಜಾ! ನಾವು ಎಷ್ಟು ಹಣ ಕೊಟ್ಟರೂ ಸಿಟಿಯಲ್ಲಿ ಸಿಗದ ಆನಂದ ಇಲ್ಲಿ ನಮಗೆ ದೊರೆಯಿತು. ಅಷ್ಟರಲ್ಲಿ ಊಟ ರೆಡಿ ಎಂದು ಅಶ್ವಿನ್ ಎಲ್ಲರನ್ನೂ ಬರಹೇಳಿದ.



 ಉರಿಯುತಿದ್ದ ಬೆಂಕಿಯನ್ನು ನೀರು ಚಿಮುಕಿಸಿ ಆರಿಸಿದೆವು. ಎಲ್ಲರೂ ದೇವಾಲಯಕ್ಕೆ ಬಂದು ಕುಳಿತೆವು. ಎದುರುಗಡೆ ಒಂದು ವಿದ್ಯುತ್ ಕಂಭದಲ್ಲಿ ಒಂದು ಬಲ್ಬ್ ಜೋಕಾಲಿಯಾಡುತಿತ್ತು. ಗಾಳಿಗೆ ಒಮ್ಮೊಮ್ಮೆ ಉರಿದು ನಂದಿ ಹೋಗುತಿತ್ತು. ಈ ಕಣ್ಣ ಮುಚ್ಚಾಲೆ ನೋಡಿ-ನೋಡಿ ಸಾಕಾದ ಮುರಳಿ ಅದರ ಸ್ಟೇ ವೈರ್ ನ್ನು ಜೋರಾಗಿ ಅಲುಗಾಡಿಸಿದ, ತಗೋ, ಬಲ್ಬ್ ಉರಿಯಿತು! ಇದರಲ್ಲೆಲ್ಲಾ ಅವನಿಗೆ ಸಾಕಷ್ಟು ಅನುಭವವಿತ್ತು, ಹೇಗೆಂದರೆ ಊರಲ್ಲಿ ಅವರ ಮನೆ ಇರುವುದು ಹಳ್ಳಿಯಲ್ಲಿ, ಅಲ್ಲಿ ಕರೆಂಟ್ ಲೂಸ್ ಕನೆಕ್ಷನ್ ಆದಾಗ ಇದೆ ರೀತಿ ಮಾಡುತಿದ್ದರು. ಇಲಾಖೆಯವರು ಅಲ್ಲಿಗೆ ಬರುವುದು ಬಹಳ ತಡವಾಗಿ.  ಪೇಪರ್ ಪ್ಲೇಟಿನಲ್ಲಿ ಎಲ್ಲರಿಗೂ ಬಡಿಸಲಾಯಿತು. ಒಂದು ದೊಡ್ಡ ತಪ್ಪಲೆ ತುಂಬಾ ಹುಗ್ಗಿ ತುಂಬಿತ್ತು. ಎಲ್ಲರೂ ಹೊಟ್ಟೆ ತುಂಬಾ ಉಂಡರು. ಬಹಳ ರುಚಿಯಾಗಿದೆ ಎಂದು ಎಲ್ಲರೂ ಹೊಗಳಿದರು. ನಮ್ಮ ರೆಸಿಪಿಯನ್ನು ಹೆಂಗಸರೆಲ್ಲಾ ಕೇಳಿ ತಿಳಕೊಂಡರು. ಅಂದು ಜಿಮ್ಮಿಗೆ ಸಹಾ ಹೊಟ್ಟೆ ತುಂಬಾ ಊಟ ಸಿಕ್ಕಿತು. ಅದು ಸಹಾ ನೆಕ್ಕಿ ನೆಕ್ಕಿ ತಿಂದದ್ದು ನೋಡಿ ನಿಜಕ್ಕೂ ಊಟ ಚೆನ್ನಾಗಿಯೇ ಇತ್ತು ಎಂಬುದಕ್ಕೆ ಮೂಕ ಸಾಕ್ಷಿ! ಅಷ್ಟರಲ್ಲಿ ವಿದ್ಯುತ್ ಕೈ ಕೊಟ್ಟಿತೆಂದು ಕಾಣುತ್ತದೆ. ಲೈಟ್ ನಂದಿ ಹೋಯಿತು. ಇನ್ನೇನು? ನಮ್ಮ ಎಮರ್ ಜೆನ್ಸಿ ಲ್ಯಾಂಪ್ ಉರಿಸಿದೆವು. " ಇನ್ನು  ಎಲ್ಲೂ ಹೋಗಿಬಿಡಬೇಡ ಇಲ್ಲೇ ಇರು ಬೆಳಗ್ಗೆ ಅವಲಕ್ಕಿ ಇದೆ '' ಎಂದು ಜಿಮ್ಮಿಗೆ ಹೇಳಿದೆ. ಅದಕ್ಕೊಪ್ಪಿ ಅದು ಬೆಳಗಿನವರೆಗೆ  ನಮ್ಮ ಕಾಲ ಬುಡದಲ್ಲೇ ಮುದುಡಿಕೊಂಡಿತ್ತು. ಇನ್ನು ಮಲಗುವ ತಯಾರಿ, ಬೆಡ್ ಶೀಟ್, ಹೊದಿಕೆಗಳು ಹೊರ ಬಂದಿತು. ಸ್ವೆಟರ್, ಜಾಕೆಟ್ ಗಳನ್ನು ಧರಿಸಿಕೊಂಡೆವು. ಮಂಕಿ ಕ್ಯಾಪ್, ಸ್ಕಾರ್ಫ್ ಸಹಾ ಉಪಯೋಗಕ್ಕೆ ಬಂತು.


ಆದರೂ ಚಳಿ ಆಗುತಿತ್ತು. ನಾವೆಲ್ಲಾ ಓಟ್ಟು ಸೇರಿ ರಾತ್ರಿ ತುಂಬಾ ಹೊತ್ತು ಮಜವಾಗಿ ಹರಟುತಿದ್ದೆವು. ಬಿಸಿ ಬಿಸಿ ಚಹಾ ಬಂತು.
ಇಷ್ಟರಲ್ಲಿ ಮುರಳಿ ಮತ್ತು ಕೆಲವರು ಕೆಳಗಡೆ ಹೋಗಿ ಬಂದರು. ತಿಂಗಳ ಬೆಳಕು ಈಗ ಎಲ್ಲಾ ಕಡೆ ಹರಡಿ ಒಂಥರಾ ಸುಂದರ ರಮ್ಯ ವಾತಾವರಣ ಸೃಷ್ಟಿಸಿತ್ತು.



ಯಾವಾಗ ನಿದ್ದೆ ಹತ್ತಿತೋ ತಿಳಿಯದು. ಆಮೇಲೆ ಬೆಳಗ್ಗೆ 6 ಘಂಟೆಗೇ ಎಚ್ಚರವಾದದ್ದು. ಬೆಡ್ ಟೀ ರೆಡಿ ಆಗಿತ್ತು. ಬೆಳಗ್ಗೆ ಅಲ್ಲೇ ಹಿಂದುಗಡೆ ಇರುವ ಅಗ್ನಿ ತೀರ್ಥದಲ್ಲಿ ಮುಖಮಾರ್ಜನ ತೀರಿಸಿಕೊಂಡು ಬಂದೆವು. ಗಟ್ಟಿ ಅವಲಕ್ಕಿ ನೆನೆಸಿಹಾಕಿ ಅದಕ್ಕೆ ಪುಳಿಯೋಗರೆ ಪುಡಿ ಮಿಕ್ಸ್ ಮಾಡಿದೆವು, ಮತ್ತೊಮ್ಮೆ ಚಹಾ ಮಾಡಿದ್ದರು. ಎಲ್ಲರಿಗೂ ನಾಷ್ಟಾ ಆಯಿತು. ಜಿಮ್ಮಿಗೆ ಸಹಾ ಹೊಟ್ಟೆ ತುಂಬಾ ಅವಲಕ್ಕಿ ಪುಳಿಯೋಗರೆ ಸಿಕ್ಕಿತ್ತು.
ದೇವಸ್ಥಾನದ ಅರ್ಚಕರು ಬೆಳಗ್ಗೆ 8 ಘಂಟೆಗೇ ಬರುತ್ತೇನೆ ಎಂದಿದ್ದರು. ಆದರೆ ಅವರ ಸುಳಿವೇ ಇಲ್ಲ. ದೂರದಲ್ಲೆಲ್ಲಾದರೂ ಬರುತ್ತಿರುವುದು ಕಾಣಿಸುವುದೇನೋ ಎಂದು ಕೆಳಗೆ ನೋಡಿದರೂ ಅವರನ್ನು ಕಾಣಲಿಲ್ಲ. ಏನೂ ಮಾಡುವುದು? ಹೊರಗಿನಿಂದಲೇ ಪಾರ್ವತಿ ಅಮ್ಮನಿಗೆ ನಮಿಸಿದೆವು. ಅಲ್ಲೆಲ್ಲಾನೀರು ಚಿಮುಕಿಸಿ ರವಿ ಮತ್ತು ಕಿರಣ ಶುದ್ಧ  ಮಾಡಿದರು. ನಾವು  ಕೊಂಡುಹೊಗಿದ್ದ ಎಲ್ಲಾ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಹೊತ್ತುಕೊಂಡು,  ಅಲ್ಲಿಂದ ಹೊರಟು ಕೆಳಗಿಳಿದೆವು. ಬೇಗನೇ ಬೆಟ್ಟದ ಬುಡ ತಲುಪಿದೆವು. ಕಾರುಗಳು ಕ್ಷೇಮವಾಗಿದ್ದವು. ಮನೆಯವರಿಗೆ ಥ್ಯಾಂಕ್ಸ್ ಹೇಳಿ ಹೊರಗಡೆ ತಂದು ನಮ್ಮ ಲಗ್ಗೇಜ್ ಎಲ್ಲಾ ಅದರಲ್ಲಿ ಇರಿಸಿ, ಪಕ್ಕದಲ್ಲೇ ಇರುವ ರಾಮಲಿಂಗೇಶ್ವರ ದೇವಾಲಯ ನೋಡಲು ಹೋದೆವು. ಬಹಳ ಪುರಾತನ ದೇವಾಲಯ. ರಾಮ,ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಆಂಜನೇಯರು ಪ್ರತಿಷ್ಠಾಪಿಸಿದ ಶಿವಲಿಂಗಗಳಿವೆ. ಇದರಲ್ಲಿ ರಾಮಲಿಂಗೇಶ್ವರನಿಗೆ
ಮಾತ್ರ ಪೂಜೆ. ಉಳಿದವರೆಲ್ಲಾ ಪೂಜಾವಂಚಿತರು. ದುರಾದೃಷ್ಟವಶಾತ್ ಇಲ್ಲಿ ಫೋಟೋ ತೆಗೆಯಲು ಅವಕಾಶವಿಲ್ಲ, ಇದು ಕೇಂದ್ರ ಸರಕಾರಕ್ಕೊಳಪಟ್ಟ ಪ್ರಾಚ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ, ಬೇಕಾದರೆ ಬೆಂಗಳೂರಿನಿಂದಲೇ ಅನುಮತಿ ಪಡೆದಿರಬೇಕು ಎಂದು ಅಲ್ಲಿರುವ ಓರ್ವ ಮೇಲ್ವಿಚಾರಕ ನಮ್ಮನ್ನು ತಡೆದನು. ಅಲ್ಲ, ಫೋಟೋ ತೆಗೆದರೆ ದೇವಾಲಯ ಸವೆದು ಹೋಗುತ್ತದೇನೋ? ಅಷ್ಟು ಪ್ರಾಮುಖ್ಯ ಹೊಂದಿದ, ಇದೇ ಇಲಾಖೆಗೆ ಒಳಪಟ್ಟ ಬೇಲೂರು, ಹಳೆಬೀಡುಗಳಲ್ಲಿ ಈ ತೆರನಾದ ನಿರ್ಬಂಧವಿಲ್ಲ. ಇಲ್ಲಿ ಯಾಕೆ ಹೀಗೆ? ಎಂದು ನಿರಾಶೆಯಾಯಿತು. ಆದರೂ ನಾವೂ ಹೊರಗಿನ ಆವರಣದಿಂದ ದೇವಾಲಯದ ಒಂದೆರಡು ಫೋಟೋ ತೆಗೆದೇಬಿಟ್ಟೆವು.




ನಾವು ಅಲ್ಲಿಂದ ಹಿಂತಿರುಗುವಾಗ ಅದೇ ಮೇಲ್ವಿಚಾರಕ ನಮ್ಮನ್ನು ಮಾತಾಡಿಸಿ ನಾವು ರಾತ್ರಿ ಬೆಟ್ಟದ ಮೇಲೆ ಮಲಕೊಂಡಿರಾ? ಬೇಕಿದ್ದರೆ ನಾನೇ ಇಲ್ಲಿ ಎಲ್ಲಾದರೂ ಮಲಗುವ ಏರ್ಪಾಡು ಮಾಡುತಿದ್ದೆ ಎಂದು ತುಂಬಾ ನೊಂದುಕೊಂಡರು. ಪಾಪ ಅವರಿಗೇನು ಗೊತ್ತು, ನಾವು ರಾತ್ರಿ ಬೆಟ್ಟದ ಮೇಲೇ ರಾತ್ರಿ ಕಳೆಯಲು ತಯಾರಾಗಿ ಬಂದವರೆಂದು!
ಆಮೇಲೆ ನಾವು ಶೃಂಗೇರಿ ಶಾರದಾ ಪೀಠ ದೇವಾಲಯಕ್ಕೆ ಹೋದೆವು. ಬಹಳ ಸುಂದರವಾದ ದೇವಾಲಯ.ಅಲ್ಲಿನ ಅರ್ಚಕರಿಗೆ ನಾವು ಹಿಂದಿನ ದಿನ ಬಂದದ್ದು ತಿಳಿದಿತ್ತು. ಇಡೀ ಊರಿಗೇ ತಿಳಿದಿತ್ತು. ಅಷ್ಟು ಚಿಕ್ಕ ಊರು! ಅವರಿಗೆ ನಮ್ಮ ಹುಚ್ಚುತನ ಕಂಡು ಆಶ್ಚರ್ಯವಾಗಿತ್ತು. ಅವರು ಅಲ್ಲಿ ಪೂಜೆ ಕಾರ್ಯ ವಹಿಸಿಕೊಂಡು 3 ವರ್ಷಗಳೇ ಆಯಿತಂತೆ. ಈ ವರ್ಷಗಳಲ್ಲಿ ಯಾರೂ ಅಲ್ಲಿ ಮೇಲೆ ರಾತ್ರಿ ಕಳೆದದ್ದು ಅವರ ಅರಿವಿನಲ್ಲಿಲ್ಲ ಎಂದರು. ಇಲ್ಲಿಗೆ ಬರುವ ಯಾತ್ರಿಕರ ಸಂಖ್ಯೆ ಬಹಳ ವಿರಳ. ನೀವು ಬಂದುದು ತುಂಬಾ ಸಂತೋಷ ಎಂದರು. ಹೀಗೇ ಇಲ್ಲಿಗೆ ಇನ್ನೂ ಹೆಚ್ಚಿನ ಯಾತ್ರಿಗಳು ಬರಲಿ ಎಂದು ಹಾರೈಸಿದರು.
ಪ್ರಸಾದ ಪಡಕೊಂಡು ನಾವು ಆವಣಿಯಿಂದ ಹೊರಟೆವು. ದೂರ ದೂರದವರೆಗೂ ಆವಣಿ ಬೆಟ್ಟ ಕಾಣಿಸುತಿತ್ತು.
ಮುಂದೆ ನಾವು ಕುರುಡುಮಲೆ, ಕೈಲಾಸಗಿರಿ ನೋಡಿಕೊಂಡು ಕೋಲಾರದ ಕೋಟಿಲಿಂಗೇಶ್ವರ ನೋಡಿಕೊಂಡು ಬೆಂಗಳೂರಿಗೆ ಬಂದೆವು.
ಆವಣಿಯು ಕುರುಡುಮಲೆ ಹಾಗೂ ಬಂಗಾರ ತಿರುಪತಿಗೆ ಸಮೀಪದಲ್ಲಿದೆ. ನೀವೆಂದಾದರೂ ಇಲ್ಲಿಗೆ ಹೋದರೆ ಖಂಡಿತಾ ಆವಣಿಗೆ ಹೋಗಿರಿ. ನಿಮ್ಮನ್ನು ಆವಣಿ ನಿರಾಶೆಗೊಳಿಸುವುದಿಲ್ಲ.
ಫೋಟೋ ಕೃಪೆ - ವಿಶ್ವಾಸ್.